ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯೊಬ್ಬಳ ಮೇಲೆ 6 ಜನರ ತಂಡ ಸಾಮೂಹಿಕವಾಗಿ ಅತ್ಯಾಚಾರ ನಡೆಸುತ್ತಿರುವ ದೃಶ್ಯ ಹರಿದಾಡುತ್ತಿದೆ. ನಾಲ್ಕು ಜನ ಪುರುಷರು ಮತ್ತು ಇಬ್ಬರು ಮಹಿಳೆ ಯುವತಿಯನ್ನು ಹಿಂಸಿಸುತ್ತಿರುವ, ಗುಪ್ತಾಂಗಕ್ಕೆ ಗಾಜಿನ ಬಾಟಲಿಯನ್ನು ತುರುಕುತ್ತಿರುವ ಹೇಯ ಅಮಾನವೀಯ ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿದೆ. ವಿಡಿಯೋ ವ್ಯಾಪಕವಾಗಿ ಪೂರ್ವ ಭಾರತ ಪ್ರದೇಶದಲ್ಲಿ ಜನರಿಂದ ಜನರಿಗೆ ತಲುಪಿದ್ದು ದೇಶಾದ್ಯಂತ ಖಂಡನೆಗೆ ಒಳಗಾಗಿತ್ತು.‌ ಬೆಂಗಳೂರು ಪೊಲೀಸರು ಅಸ್ಸಾಂ ಪೊಲೀಸರ ಸಹಕಾರದೊಂದಿಗೆ ನಾಲ್ವರು ಆರೋಪಿಗಳನ್ನು ಮೇ 27, 2021 ಗುರುವಾರ ಅವಲಹಳ್ಳಿಯಲ್ಲಿಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಮ್ಮದ್ ಬಾಬಾ ಶೇಖ್, ರಿದಯ್ ಬಾಬು, ಸಾಗರ್, ಅಖಿಲ್ ಎಂದು ಗುರುತಿಸಲಾಗಿದೆ. ಐಪಿಸಿ ಸೆಕ್ಷನ್ 375, 376 (ಅತ್ಯಾಚಾರ), 352(ಅಪರಾಧಿಕ ದಾಳಿ), ದೌರ್ಜನ್ಯ ಮುಂತಾದ ಗಂಭೀರ ಪ್ರಕರಣಗಳಡಿಯಲ್ಲಿ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳ ಬಂಧನಕ್ಕಾಗಿ ವ್ಯಾಪಕ ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆಯು ಮುಂದುವರೆದಿದ್ದು ಅತ್ಯಾಚಾರ ಸಂತ್ರಸ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳು ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರಾಗಿದ್ದಾರೆ ಎಂದು ನಂಬಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಕೆಲಸದ ಆಮಿಷವೊಡ್ಡಿ ಆರೋಪಿಗಳು ಭಾರತಕ್ಕೆ ಕರೆದುಕೊಂಡು ಬಂದಿರುವ ಸಾಧ್ಯತೆಯಿದ್ದು ತನಿಖೆಯ ನಂತರವಷ್ಟೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ.

ಮೇ 28 ರ ಮುಂಜಾನೆಯ ಶೂಟೌಟ್

ಇಂದು ಮೇ 28, ಶುಕ್ರವಾರ ಮುಂಜಾನೆ ಎಸಿಪಿ ಸಖ್ರಿ ಮತ್ತು ರಾಮಮೂರ್ತಿ ನಗರ ಇನ್ಸ್ ಪೆಕ್ಟರ್ ಮೆಲ್ವಿನ್ ಆರೋಪಿಗಳನ್ನು ಸ್ಥಳ ಮಹಜರಿಗಾಗಿ ಕಾರೇಗೌಡ ಲೇಔಟ್, ಮತ್ತು ಕೆ. ಚನ್ನಸಂದ್ರ ಪ್ರದೇಶದ ಆರೋಪಿಗಳು ವಾಸವಿದ್ದರು ಎನ್ನಲಾದ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಕಲ್ಲುತೂರಿ ತಪ್ಪಿಸಿಕೊಳ್ಳಲು ಪ್ರಯತ್ನಸಿದ್ದು ತಮ್ಮ ರಕ್ಷಣೆಗೆ ಮತ್ತು ಆರೋಪಿಗಳನ್ನು ತಡೆಯಲು ಪೊಲೀಸ್ ಇನ್ಸ್ ಪೆಕ್ಟರ್ ಮೆಲ್ವಿನ್ ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಬಂಧಿತ ಆರೋಪಿಗಳು ಪೊಲೀಸರ ಮೇಲೆ ಕಲ್ಲು ಎಸೆದ ಪರಿಣಾಮ ಎಸಿಪಿ ಸಖ್ರಿ ಮತ್ತು ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಪೊಲೀಸರ ಗುಂಡು ಹಾರಿಸಿದ ಪರಿಣಾಮ ಆರೋಪಿ ರಿದೋಯ್ ಬಾಬು (25) ಬಲಗಾಲಿಗೆ ಮತ್ತು ಸಾಗರ್ (23) ಬಲಗಾಲಿಗೆ ಗಾಯವಾಗಿದೆ. ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಅರೋಪಿಗಳಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ ಘಟನೆಯು ಮೇ 28ರ ಶುಕ್ರವಾರ ಮುಂಜಾನೆ 6:30 ಗಂಟೆಗೆ ನಡೆದಿದೆ.

ಅತ್ಯಾಚಾರ ಮತ್ತು ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ

ಮೇ 26 2021 ರ ಗುರುವಾರ ಅಸ್ಸಾಮ್ ಮತ್ತು ಪಶ್ಚಿಮ ಬಂಗಾಳದಲ್ಲಿ 6 ಜನರು ಯುವತಿಯೊಬ್ಬಳ ಮೇಲೆ ಗುಂಪು ದೌರ್ಜನ್ಯ ನಡೆಸುತ್ತಿರುವ ಮತ್ತು ಯುವತಿಯ ಮರ್ಮಾಂಗಕ್ಕೆ ಗಾಜಿನ ಬಾಟಲಿಯಿಂದ ಘಾಸಿಗೊಳಿಸುತ್ತಿರುವ ಬರ್ಬರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ವ್ಯಾಪಕವಾಗಿ ಹರಿದಾಡುತ್ತಿರು ಹೀನಾಯ ಕೃತ್ಯದ ದೃಶ್ಯದ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಅಸ್ಸಾಂ ಪೊಲೀಸರು ಪ್ರಕರಣದ ತನಿಖೆಗೆ ಮುಂದಾದರು. ಘಟನೆಯ ದೃಶ್ಯದಲ್ಲಿ ಕಂಡುಬರುವ ಆರೋಪಿಗಳನ್ನು ಪತ್ತೆ ಹಚ್ಚಿದವರಿಗೆ ಬಹುಮಾನವನ್ನು ಕೊಡುವುದಾಗಿ ಆರೋಪಿಗಳ ಚಿತ್ರದ ಸ್ಕ್ರೀನ್ ಶಾಟ್ ಒಂದನ್ನು ಟ್ಟಿಟ್ಟರ್ ಮೂಲಕ ಹರಿಬಿಟ್ಟಿದ್ದಾರೆ. ನಂತರ ಅಸ್ಸಾಮ್ ಪೊಲೀಸರು ಕೊಲ್ಕತ್ತ ಪೊಲೀಸರನ್ನು ಘಟನೆಯ ಕುರಿತು ಸಂಪರ್ಕಿಸಲು ಮುಂದಾದರು. ಅಸ್ಸಾಂ ಮತ್ತು ಕೊಲ್ಕತ್ತ ಪೊಲೀಸರ ಜಂಟಿ ಸಹಯೋಗದಲ್ಲಿ ವಿಡಿಯೋ ಹಂಚಿಕೆಯಾದ ದೂರವಾಣಿ ಸಂಖ್ಯೆಯ ಮೂಲವನ್ನು ಪತ್ತೆಹಚ್ಚಲಾಗಿದ್ದು ಬೆಂಗಳೂರಿನ ಮೂಲದ ದೂರವಾಣಿ ಸಂಖ್ಯೆಯ ಮೂಲಕ ವಿಡಿಯೋ ಹಂಚಿಕೆಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ. ತನಿಖೆಯ ಬೆನ್ನಲ್ಲೇ ಕೊಲ್ಕತ್ತಾ ಪೊಲೀಸರು ಬೆಂಗಳೂರು ಪೊಲೀಸ್ ಗೆ ಮಾಹಿತಿಯನ್ನು ರವಾನಿಸಿದ್ದಾರೆ. ಪ್ರಾಥಮಿಕ ತನಿಖೆಯ ಬಳಿಕ ಘಟನೆ 6 ದಿನಗಳ ಹಿಂದೆ ರಾಮಮೂರ್ತಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯ NRI ಕಾಲೋನಿಯಲ್ಲಿ ನಡೆದಿರುವುದು ತಿಳಿದು ಬಂದಿದೆ. ತನಿಖೆಯ ಮಾಹಿತಿ ಆಧಾರದಲ್ಲಿ ಆರೋಪಿಗಳ ಶೋಧಕ್ಕೆ ಮುಂದಾದ ಪೊಲೀಸರು ಅವಲಹಳ್ಳಿಯ ಮನೆಯೊಂದರಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಂಗ್ಲಾದೇಶ ಹಿನ್ನಲೆ ಮತ್ತು ಅಕ್ರಮ ಮಾನವ ಸಾಗಾಟದ ಶಂಕೆ

ಬಂಧಿತ ಆರೋಪಿಗಳು ಮತ್ತು ಇಬ್ಬರು ಮಹಿಳೆಯರು ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ಶಂಕಿಸಲಾಗಿದೆ. ಈ ಕುರಿತು ಬಾಂಗ್ಲಾದೇಶ ಪೊಲೀಸ್ ಇಲಾಖೆಯು ವಿಡಿಯೋದಲ್ಲಿರುವ ಆರೋಪಿಗಳು ಮತ್ತು ಸಂತ್ರಸ್ತೆ ಬಾಂಗ್ಲಾದೇಶ ಪ್ರಜೆಗಳೆಂದು ಅಧಿಕೃತವಾಗಿ ಧೃಢೀಕರಿಸಿದೆ. ಢಾಕಾ ಮೆಟ್ರೊಪಾಲಿಟಿನ್ ಪ್ರದೇಶ ವ್ಯಾಪ್ತಿಯ ತೇಜಗಾನ್ ವಲಯದ ಡಿಸಿಪಿ ಸಹಿದುಲ್ಲಾ ಈ ಕುರಿತು ಮಾಹಿತಿ ನೀಡಿ ವಿಡಿಯೋದಲ್ಲಿರುವ ಯುವತಿ ಢಕಾ ನಗರದ ಮೊಗ್ ಬಜಾರ್ ಪ್ರದೇಶದ ನಿವಾಸಿ. ಆಕೆ 6 ತಿಂಗಳ ಹಿಂದೆ ಸೌದಿ ಅರೇಬಿಯಾಕ್ಕೆ ತೆರಳಲು ದಾಖಲೆಗಳನ್ನು ಸಿದ್ಧ ಪಡಿಸಿಕೊಂಡಿದ್ದಳು. ಆದರೆ 3 ತಿಂಗಳಿನಿಂದ ಯುವತಿ ನಾಪತ್ತೆಯಾಗಿದ್ದಾಳೆ. ಯುವತಿಯು ಭಾರತಕ್ಕೆ ಅಕ್ರಮವಾಗಿ ತೆರಳಿರಬಹುದು ಎಂದು ಶಂಕಿಸಲಾಗಿತ್ತು ಎಂದು ತೇಜಗಾನ್ ಡಿಸಿಪಿ ಸಹಿದುಲ್ಲಾ ಹೇಳಿದ್ದಾರೆ.

ಬಾಂಗ್ಲಾದೇಶ ಪೊಲೀಸರ ಪ್ರಕಾರ ವಿಡಿಯೋದಲ್ಲಿರುವ ಒಬ್ಬ ಆರೋಪಿ ವ್ಯಕ್ತಿಯ ಭಾವಚಿತ್ರ ಅದೇ ವ್ಯಕ್ತಿಯ ಫೇಸ್ ಬುಕ್ ಪ್ರೊಫೈಲ್ ನೊಂದಿಗೆ ತಾಳೆಯಾಗಿದೆ. ಆರೋಪಿ ವ್ಯಕ್ತಿಯನ್ನು ಬಾಂಗ್ಲಾದೇಶದ ಢಾಕಾ ನಗರದ ಮೊಗಬಝಾರ್ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ. ಆರೋಪಿಯು ಆ ಪ್ರದೇಶದಲ್ಲಿ ಟಿಕ್ ಟಾಕ್ ಅಥವಾ ಹ್ರಿದೋಯ್ ಬಾಬು ಎಂದು ಪರಿಚಿತನಾಗಿದ್ದಾನೆ. ಆರೋಪಿಯ ತಾಯಿಗೆ ವಿಡಿಯೋ ತೋರಿಸಲಾಗಿದ್ದು ರಿಫ್ತೋಲ್ ಇಸ್ಲಾಂ ಹ್ರಿದೋಯ್ ಬಾಬು ತನ್ನ ಮಗ ಎಂದು ಅವರು ಗುರುತಿಸಿದ್ದಾರೆ. ಆರೋಪಿಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತನಿಖೆ ನಂತರ ತಿಳಿಸುವುದಾಗಿ ಮತ್ತು ಬೆಂಗಳೂರು ಪೊಲೀಸರ ಜೊತೆ ಸತತ ಸಂಪರ್ಕದಲ್ಲಿದ್ದು ತನಿಖೆಗೆ ಸಹಕರಿಸುತ್ತಿರುವುದಾಗಿ ಬಾಂಗ್ಲಾದೇಶ ಪೊಲೀಸ್ ಇಲಾಖೆ ತಿಳಿಸಿದೆ.

ಈಶಾನ್ಯ ಭಾರತ ರಾಜ್ಯಗಳ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಅತ್ಯಾಚಾರದ ವಿಡಿಯೋ ದೃಶ್ಯ

ಮೇ 27, 2021 ಗುರುವಾರಕ್ಕೂ ಮೊದಲು ಅತ್ಯಾಚಾರ ವಿಡಿಯೋ ಒಂದು ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈಶಾನ್ಯ ಭಾರತದ ಜನರು ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಜೊತೆಗೆ ಮೇ 23 ರಂದು ರಾಜಸ್ಥಾನದ ಜೋಧ್ ಪುರದಲ್ಲಿ ನಾಗಾ ಮಹಿಳೆಯ ಆತ್ಮಹತ್ಯೆಯ ಘಟನೆಯ ಜೊತೆ ವಿಡಿಯೋ ತಳಕು ಹಾಕಿಕೊಂಡು‌ ಜನರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಯಾಗಿತ್ತು.

ಕೇಂದ್ರ ಮಂತ್ರಿ ಕಿರಣ್ ರಿಜು, ಐಪಿಸ್ ಅಧಿಕಾರಿ ರೊಬಿನ್ ಹಿಬು, ಮೇಘಾಲಯ‌ದ ಶಾಸಕ ಆಂಪರೀನ್ ಲಿಂಗ್ಡೋ ಅಸ್ಸಾಂ ಪೊಲೀಸರು ಸೇರಿದಂತೆ ಅನೇಕ ಗಣ್ಯರು ವೈರಲ್ ಆಗಿರುವ ಅತ್ಯಾಚಾರ ವಿಡಿಯೋ ಮತ್ತು ಜೋಧ್ ಪುರದಲ್ಲಿ ಆತ್ಮಹತ್ಯೆಗೆ ಒಳಗಾದ ನಾಗಾ ಯುವತಿಗೆ ಯಾವುದೇ ಸಂಬಂಧವಿಲ್ಲ‌ ಎಂದು ಟ್ವಿಟ್ಟರ್ ಮೂಲಕ ಗುರುವಾರ ಅಂದರೆ ಮೇ 27, 2021 ರಂದು ಗೊಂದಲಕ್ಕೆ ತೆರೆ ಎಳೆದಿದ್ದರು.

ಪ್ರಕರಣದ ಸುತ್ತ ಅಕ್ರಮ ಮಾನವ ಸಾಗಣೆ ಮತ್ತು ವೇಶ್ಯಾವಾಟಿಕೆ ದಂಧೆಯ ಶಂಕೆ

ಬೆಂಗಳೂರು ಪೊಲೀಸ್, ಅಸ್ಸಾಂ ಪೋಲಿಸ್ ಮತ್ತು ಬಾಂಗ್ಲಾದೇಶ ಪೋಲಿಸ್ ಇಲಾಖೆಯ ತನಿಖೆಯ ಪ್ರಕಾರ ಆರೋಪಿಗಳು ಮತ್ತು ಸಂತ್ರಸ್ತೆ ಬಾಂಗ್ಲಾದೇಶದ ಪ್ರಜೆಗಳು ಎಂಬುದು ಬಹುತೇಕ ಧೃಡಪಡುತ್ತಿದೆ. ಪ್ರಕರಣದ ತನಿಖೆ ವೇಳೆ ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶ ಪ್ರಜೆಗಳಾಗಿದ್ದು ಬೆಂಗಳೂರಿನಲ್ಲಿ ವೇಶ್ಯವಾಟಿಕೆ ದಂಧೆಯಲ್ಲಿ ತೊಡಗಿರುವ ಕುರಿತು ಬೆಂಗಳೂರು ಪೊಲೀಸರಿಗೆ ಹಲವು ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗುತ್ತಿದೆ. ಸಾಮೂಹಿಕ ಅತ್ಯಾಚಾರ ವಿಡಿಯೋದಲ್ಲಿರುವ ಸಂತ್ರಸ್ತ ಯುವತಿಯನ್ನು ಆರೋಪಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಭಾರತಕ್ಕೆ ಕರೆತಂದಿದ್ದಾರೆ. ಇದುವರೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಂಧಿತ ಆರೋಪಿಗಳು ಯುವತಿಯನ್ನು ವೇಶ್ಯಾವಾಟಿಕೆ ದಂಧೆಗೆ ತೊಡಗಿಸಲು ಬಲವಂತಾಗಿ ಯತ್ನಿಸಿದ್ದಾರೆ. ಯುವತಿ ಆರೋಪಿಗಳ ಸುಪರ್ದಿಯಿಂದ ತಪ್ಪಿಸಿಕೊಂಡು ಕಾಣೆಯಾದ ಸಂದರ್ಭದಲ್ಲಿ ಆರೋಪಿಗಳು ಯುವತಿಯನ್ನು ಪತ್ತೆಹಚ್ಚಿ ತಮ್ಮ ದ್ವೇಷಕ್ಕೆ ಹೀನಾಯವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿ, ದೃಶ್ಯವನ್ನು ವಿಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸಿಗೆ ಸಂಬಂಧಿಸಿದ ಜಗಳದ ಆಯಾಮವೂ ಇರಬಹುದು ಎಂದು ಅನುಮಾನಿಸಲಾಗಿದೆ. ಘಟನೆಯ ಕಾರಣಗಳು ಮತ್ತು ಹಿನ್ನೆಲೆ ಸಂಪೂರ್ಣ ತನಿಖೆಯ ನಂತರವಷ್ಟೆ ಹೊರಬೀಳಲಿದೆ. ಲಭ್ಯವಿರುವ ಮಾಹಿತಿಗಳು ಅಸ್ಪಷ್ಟವಾಗಿದ್ದು ಆರಂಭದ ಹಂತದಲ್ಲಿ ಯಾವೊಂದು ಆಯಾಮವನ್ನು ತೀರ್ಮಾನಿಸಲು ಸಾಧ್ಯವಾಗಿಲ್ಲ.

ನಾಪತ್ತೆಯಾದ ಸಂತ್ರಸ್ತೆ

ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾಗಿರುವ ವಿಡಿಯೋದಲ್ಲಿರುವ ಯುವತಿ ಬೆಂಗಳೂರು ನಗರವನ್ನು ತೊರೆದು ಅಜ್ಞಾತ ಪ್ರದೇಶಕ್ಕೆ ತೆರಳಿರುವ ಸಾಧ್ಯತೆಯಿದೆ. ಬೆಂಗಳೂರು ಪೊಲೀಸರ ವಿಶೇಷ ತಂಡವೊಂದು ಸಂತ್ರಸ್ತೆಯ ಪತ್ತೆಗಾಗಿ ನೆರೆಯ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನ್ ಕಮಲ್ ಪಂಥ್ ಟ್ವಿಟ್ಟರ್ ಮೂಲಕ ಹೇಳಿರುವಂತೆ ಯುವತಿ ನೆರೆಯ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾಳೆ. ಪ್ರಕರಣವನ್ನು ಸಂಪೂರ್ಣವಾಗಿ ಭೇಧಿಸಿ ಉಳಿದ ಆರೋಪಿಗಳನ್ನು ಬಂಧಿಸಲು ನೆರವಾಗುವಂತೆ ಯುವತಿಯನ್ನು ಹುಡುಕಿ ಕರೆತರಲು ಬೆಂಗಳೂರು ಪೊಲೀಸರ ತಂಡ ನೆರೆಯ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ನೆರೆಯ ರಾಜ್ಯಗಳ ಪೊಲೀಸ್ ಇಲಾಖೆಗೂ ಯುವತಿಯ ಮಾಹಿತಿ ನೀಡಲಾಗಿದ್ದು ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಮನುಷ್ಯನ ಕ್ರೌರ್ಯಕ್ಕೆ ಎಲ್ಲೆಯಿಲ್ಲ. ಅತ್ಯಾಚಾರದಂತಹ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿರುವುದು ಮನುಷ್ಯತ್ವ ಅಧಃಪತನಕ್ಕೆ ಇಳಿದಿರುವದರ ಸಾಕ್ಷಿ. ಕೆಲವೇ ಕೆಲವು ಘಟನೆಗಳು ಮಾತ್ರ ವರದಿಯಾಗುತ್ತವೆ. ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತವೆ . ಅದೆಷ್ಟೊ ಅತ್ಯಾಚಾರದಂತಹ ಅಮಾನವೀಯ ಮನುಷ್ಯನ ಕ್ರೌರ್ಯದ ಸಂಕೇತಗಳು ಬೆಳಕಿಗೆ ಬಾರದೇ ಸಂತ್ರಸ್ತರು ಸದಾ ಕಾಲ ನೋವು ತಿನ್ನುತ್ತಾರೆ. ಹೇಯ ಕೃತ್ಯವೆಸಗುವವರು ರಾಜಾರೋಷದಿಂದ ನಮ್ಮ‌ನಡುವೆಯೇ ಓಡಾಡುತ್ತಿರುತ್ತಾರೆ. ಬೆಂಗಳೂರಿನ ಸಾಮೂಹಿಕ ಅತ್ಯಾಚಾರ ಘಟನೆಯೂ ಇನ್ನೊಂದು ನಿರ್ಭಯ ಆಗದಿರಲಿ. ಸಂತ್ರಸ್ತೆಗೆ ನ್ಯಾಯ ಸಿಗಲಿ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿ ಇನ್ನಷ್ಟು ಜನರು ಹೇಯ ಕ್ರೌರ್ಯಕ್ಕೆ ಮುಂದಾಗದಂತೆ ತಡೆಯುವಂತಾಗಲಿ..


ಇದನ್ನೂ ಓದಿ: ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ ಆರೋಪ: ಸ್ವಯಂಘೋಷಿತ ದೇವಮಾನವನ ಬಂಧನ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜೇಶ್ ಹೆಬ್ಬಾರ್
+ posts

LEAVE A REPLY

Please enter your comment!
Please enter your name here