ಮುಂಬೈ: 2006ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಎಲ್ಲ ಆರೋಪಿಗಳ ಖುಲಾಸೆ ಕುರಿತು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಇದು ನ್ಯಾಯದ ಘೋರ ವೈಫಲ್ಯವಾಗಿದೆ. ತನಿಖೆ ಮತ್ತು ಪ್ರಾಸಿಕ್ಯೂಷನ್‌ನ “ಉದ್ದೇಶಪೂರ್ವಕ ಕಳಪೆ”ಯ ಪ್ರತಿಫಲ ಎಂದು ಅವರು ಕರೆದಿದ್ದಾರೆ.
“ಈ ತೀರ್ಪು ಅತ್ಯಂತ ನಿರಾಶಾದಾಯಕವಾಗಿದೆ. ಈ ಸ್ಫೋಟದಲ್ಲಿ ಆರು ಮಂದಿ ನಮಾಜಿಗಳನ್ನು ಹತ್ಯೆ ಮಾಡಲಾಗಿದ್ದು, ಸುಮಾರು 100 ಜನರು ಗಾಯಗೊಂಡಿದ್ದಾರೆ. ಈ ಸಂತ್ರಸ್ತರನ್ನು ಅವರ ಧರ್ಮದ ಕಾರಣಕ್ಕಾಗಿ ಗುರಿಯಾಗಿಸಲಾಗಿತ್ತು,” ಎಂದು ಓವೈಸಿ ಎಕ್ಸ್‌ನಲ್ಲಿ ಅಭಿಪ್ರಾಯಿಸಿದ್ದಾರೆ. 17 ವರ್ಷಗಳ ತನಿಖೆಯು ಪುರಾವೆಗಳ ಕೊರತೆಯಿಂದಾಗಿ ಆರೋಪಿಗಳ ಖುಲಾಸೆಯಲ್ಲಿ ಹೇಗೆ ಕೊನೆಗೊಂಡಿತು ಎಂದು ಅವರು ಪ್ರಶ್ನಿಸಿದ್ದಾರೆ.
7/11 ಮುಂಬೈ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಮುಸ್ಲಿಂ ಆರೋಪಿಗಳನ್ನು ದೋಷಮುಕ್ತಿಗೊಳಿಸಿದಾಗ ಈ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮೇಲ್ಮನವಿಯನ್ನು ಸಲ್ಲಿಸಿದ್ದವು. ಅದೇ ತುರ್ತನ್ನು ಈ ಮಾಲೆಗಾಂವ್ ಪ್ರಕರಣದ ತೀರ್ಪನ್ನು ಪ್ರಶ್ನಿಸಿ ಈ ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳು ಮೇಲ್ಮನವಿಯನ್ನು ಸಲ್ಲಿಸುತ್ತವೆಯೇ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.
“ಮುಂಬೈ ರೈಲು ಸ್ಫೋಟದ ಖುಲಾಸೆಗಳಲ್ಲಿ ತಕ್ಷಣ ತಡೆ ನೀಡಲು ಒತ್ತಾಯಿಸಿದಂತೆ ಮೋದಿ ಮತ್ತು ಫಡ್ನವೀಸ್ ಸರ್ಕಾರಗಳು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತವೆಯೇ? ಮಹಾರಾಷ್ಟ್ರದ ‘ಜಾತ್ಯತೀತ’ ರಾಜಕೀಯ ಪಕ್ಷಗಳು ಈ ಸ್ಫೋಟದ ಕುರಿತು ಜವಾಬ್ದಾರಿ ಯಾರೆಂದು ಪ್ರಶ್ನಿಸುತ್ತವೆಯೇ? ಆ 6 ಜನರನ್ನು ಕೊಂದವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಕರಣದ ಸುತ್ತ ಇದ್ದ ಹಿಂದಿನ ವಿವಾದಗಳನ್ನು ಸಹ ಓವೈಸಿ ನೆನಪಿಸಿಕೊಂಡಿದ್ದಾರೆ. “ನೆನಪಿರಲಿ, 2016ರಲ್ಲಿ ಆಗಿನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯನ್ ಅವರು ಎನ್‌ಐಎ ತಂಡವು ತಮಗೆ ಆರೋಪಿಗಳ ವಿರುದ್ಧ ‘ಮೃದು ಧೋರಣೆ’ ತೋರಿಸಲು ಹೇಳಿತ್ತು ಎಂದು ಹೇಳಿದ್ದರು. 2017ರಲ್ಲಿ ಎನ್‌ಐಎ ಸಾಧ್ವಿ ಪ್ರಜ್ಞಾ ಅವರನ್ನು ಖುಲಾಸೆಗೊಳಿಸಲು ಪ್ರಯತ್ನಿಸಿತ್ತು, ಇದೇ ಸಾಧ್ವಿ 2019ರಲ್ಲಿ ಬಿಜೆಪಿ ಸಂಸದೆಯಾದರು” ಎಂದು ಅವರು ಹೇಳಿದ್ದಾರೆ.
ಮಾಜಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ತನಿಖೆಯ ಪಾತ್ರವನ್ನು ಸಹ ಅವರು ಸ್ಮರಿಸಿದ್ದಾರೆ. “ಕರ್ಕರೆ ಅವರು ಮಾಲೆಗಾಂವ್‌ನಲ್ಲಿನ ಸಂಚನ್ನು ಭೇದಿಸಿದ್ದರು ಮತ್ತು 26/11ರ ದಾಳಿಯ ಸಮಯದಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಂದ ದುರಂತವಾಗಿ ಹತ್ಯೆಯಾದರು” ಎಂದು ಅವರು ಹೇಳಿದ್ದಾರೆ. “ಬಿಜೆಪಿ ಸಂಸದೆ (ಸಾಧ್ವಿ ಪ್ರಜ್ಞಾ) ತಾವು ಅವರಿಗೆ ಶಾಪ ಹಾಕಿದ್ದಾಗಿ ಮತ್ತು ಅವರ ಸಾವು ತಮ್ಮ ಶಾಪದ ಪರಿಣಾಮ ಎಂದು ಹೇಳಿದ್ದರು” ಎಂದು ಓವೈಸಿ ನೆನಸಿಪಿಸಿದ್ದಾರೆ.
ಈ ಸ್ಫೋಟದ ಹೊಣೆಗಾರಿಕೆಯ ಕುರಿತು ಕಳವಳ ವ್ಯಕ್ತಪಡಿಸಿದ ಓವೈಸಿ, “ಎನ್‌ಐಎ ಮತ್ತು ಎಟಿಎಸ್ ಅಧಿಕಾರಿಗಳನ್ನು ಅವರ ದೋಷಪೂರಿತ ತನಿಖೆಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ? ನಮಗೆಲ್ಲಾ ಉತ್ತರ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಇದು ‘ಭಯೋತ್ಪಾದನೆಯ ವಿರುದ್ಧ ಕಠಿಣ’ ಎಂದು ಹೇಳಿಕೊಳ್ಳುವ ಮೋದಿ ಸರ್ಕಾರ” ಎಂದು ವ್ಯಂಗ್ಯವಾಡಿದ್ದಾರೆ.
“ಈ ಬಿಜೆಪಿ ಸರ್ಕಾರ ಭಯೋತ್ಪಾದನೆಯ ಆರೋಪಿಯನ್ನು ಸಂಸದೆಯನ್ನಾಗಿ ಮಾಡಿದೆ ಎಂಬುದನ್ನು ಜಗತ್ತು ನೆನಪಿಟ್ಟುಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಗುರುವಾರ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದೆ.
“ಸ್ಫೋಟವು ನ್ಯಾಯಾಲಯದಿಂದ ಸಾಬೀತಾಗಿದೆ. ನಾವು ಈ ಖುಲಾಸೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ನಾವು ಸ್ವತಂತ್ರವಾಗಿ ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಮಾಲೆಗಾಂವ್ ಸ್ಫೋಟದ ಸಂತ್ರಸ್ತರ ಕುಟುಂಬಗಳ ಪರ ವಕೀಲ ಅಡ್ವೊಕೇಟ್ ಶಾಹಿದ್ ನದೀಮ್ ಎಎನ್‌ಐಗೆ ತಿಳಿಸಿದ್ದಾರೆ.
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಠಾಕೂರ್ ಸೇರಿದಂತೆ ಎಲ್ಲಾ 7 ಆರೋಪಿಗಳ ಖುಲಾಸೆ


