Homeಮುಖಪುಟ‘ಜೈ ಭೀಮ್‌’ ಚಿತ್ರಕ್ಕೆ ಸ್ಪೂರ್ತಿಯಾದ ವಕೀಲ ‘ಚಂದ್ರು’ ಯಾರು?

‘ಜೈ ಭೀಮ್‌’ ಚಿತ್ರಕ್ಕೆ ಸ್ಪೂರ್ತಿಯಾದ ವಕೀಲ ‘ಚಂದ್ರು’ ಯಾರು?

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾದ ನಂತರ ಚಂದ್ರುರವರು ಕೇವಲ 6 ವರ್ಷಗಳಲ್ಲಿ ವಿಲೇವಾರಿ ಮಾಡಿರುವ ಪ್ರಕರಣದ ಸಂಖ್ಯೆ ಬರೋಬ್ಬರಿ 96 ಸಾವಿರ!

- Advertisement -
- Advertisement -

‘ಇರುಳ’ ಆದಿವಾಸಿ ಬುಡಕಟ್ಟು ಸಮುದಾಯದ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಕಾನೂನಾತ್ಮಕವಾಗಿ ನಡೆದ ಹೋರಾಟದ ಎಳೆಯನ್ನು ಇಟ್ಟುಕೊಂಡು ಟಿ. ಜೆ. ಜ್ಞಾನವೇಳ್‌ ನಿರ್ದೇಶಿಸಿದ, ತಮಿಳಿನ ಸೂಪರ್‌ ಸ್ಟಾರ್‌ ಸೂರಿಯಾ ಅವರು ಪ್ರಧಾನ ಪಾತ್ರದಲ್ಲಿರುವ ‘ಜೈಭೀಮ್‌’ ಚಿತ್ರದ ಬಗ್ಗೆ ಇದೀಗ ಎಲ್ಲಾ ಕಡೆಯಲ್ಲಿ ಚರ್ಚೆಯಾಗುತ್ತಿದೆ. ಮದ್ರಾಸ್‌ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ. ಚಂದ್ರು ಅವರು ತಾನು ವಕೀಲನಾಗಿದ್ದಗ ನಡೆಸಿದ ‘ಒಂದು’ ಹೋರಾಟದ ನೈಜ ಕತೆಯಾಗಿದೆ ಇದು.

ಇಡೀ ಆಡಳಿತ ಯಂತ್ರವನ್ನು ಎದುರು ಹಾಕಿ ಧ್ವನಿಯಿಲ್ಲದ ಸಮುದಾಯದ ಬೆನ್ನಿಗೆ ನಿಲ್ಲುವುದು, ಅವರಿಗೆ ನ್ಯಾಯ ಕೊಡಿಸುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದಲ್ಲದೆ, ಆದಿವಾಸಿ ಜನರಿಗೆ ಈ ವ್ಯವಸ್ಥೆ ನೀಡುವ ಕಿರುಕುಳ, ಅವರ ಸಂಕಷ್ಟವನ್ನೂ ಈ ಚಿತ್ರದಲ್ಲಿ ಮನಸಿಗೆ ಇಳಿಯುವಂತೆ ಮತ್ತು ಶೋಷಕರಿಗೆ ಇರಿಯುವಂತೆ ಕಟ್ಟಿಕೊಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಧ್ಯದಕ್ಕೆ ‘ಜೈಭೀಮ್‌’ ಬಗ್ಗೆಗಿನ ಚರ್ಚೆ ಮುಗಿಯುವಂತೆ ಕಾಣುತ್ತಿಲ್ಲ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ಕಪಾಳ ಮೋಕ್ಷ: ’ಜೈ ಭೀಮ್’ ದೃಶ್ಯಕ್ಕೆ ದ್ರಾವಿಡ ಭಾಷಿಗರ ಮೆಚ್ಚುಗೆ

ಚಿತ್ರದ ಪ್ರಧಾನ ಪಾತ್ರವೆಂದು ನಾವು ಒಪ್ಪಿಕೊಳ್ಳಬಹುದಾದರೆ ವಕೀಲ ಚಂದ್ರು ಅವರ ಪಾತ್ರ. ಇದನ್ನು ತಮಿಳಿನ ಸೂಪರ್‌ ಸ್ಟಾರ್‌ ಸೂರಿಯಾ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಚಿತ್ರದ ವಕೀಲ ‘ಚಂದ್ರು’ ಯಾರು?

ಜೈಭೀಮ್ ಚಿತ್ರದ ವಕೀಲ ಚಂದ್ರು, ಮದ್ರಾಸ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಅವರಾಗಿದ್ದಾರೆ. ಈ ಚಿತ್ರ ಜಸ್ಟೀಸ್ ಕೆ. ಚಂದ್ರು ಅವರ ಬಯೋಪಿಕ್ ಅಲ್ಲದಿದ್ದರೂ, 1995 ರಲ್ಲಿ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಇರುಳ ಬುಡಕಟ್ಟು ಜನಾಂಗದವರ ಮೇಲೆ ನಡೆದ ಕಸ್ಟೋಡಿಯಲ್ ಟಾರ್ಚರ್‌ ಮತ್ತು ಅವರ ಪರವಾಗಿ ಮಾನವ ಹಕ್ಕುಗಳ ವಕೀಲ ಚಂದ್ರು ಅವರು ನಡೆಸಿದ ಕಾನೂನು ಹೋರಾಟದ ನೈಜ ಜೀವನದ ನಿದರ್ಶನಗಳಾಗಿವೆ.

ಮಾರ್ಚ್ 1951 ರಲ್ಲಿ ಶ್ರೀರಂಗಂನಲ್ಲಿ ಜನಿಸಿದ ನ್ಯಾಯಮೂರ್ತಿ ಚಂದ್ರು 16 ನೇ ವಯಸ್ಸಿನಿಂದಲೂ ಹೋರಾಟ ರಂಗದಲ್ಲಿದ್ದಾರೆ. ತಮಿಳುನಾಡಿನಲ್ಲಿ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಾದ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ಕಟ್ಟಿ ಬೆಳೆಸಿದವರಲ್ಲಿ ಅವರು ಒಬ್ಬರು. ಹಲವಾರು ಹೋರಾಟಗಳಿಗೆ ನೇತೃತ್ವ ನೀಡಿದವರು. ವಕೀಲರಾಗಿ ಮಾನವ ಹಕ್ಕುಗಳಿಗಾಗಿ ನಿರಂತರ ಹೋರಾಡಿದವರಾಗಿದ್ದು, ನಂತರ ನ್ಯಾಯಾಧೀಶರಾಗಿಯೂ ತಮ್ಮ ಅನನ್ಯ ಸೇವೆಯನ್ನು ಸಲ್ಲಿಸಿದ್ದಾರೆ.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾದ ನಂತರ ಅವರು ವಿಲೇವಾರಿ ಮಾಡಿರುವ ಪ್ರಕರಣದ ಸಂಖ್ಯೆ ಬರೋಬ್ಬರಿ 96 ಸಾವಿರ!. ಇದನ್ನು ಅವರು ತಮ್ಮ ಸೇವೆಯ ಕೇವಲ 6 ವರ್ಷಗಳಲ್ಲಿ ಮಾಡಿದ್ದರು. ಸಾಮಾನ್ಯವಾಗಿ ನ್ಯಾಯಮೂರ್ತಿಗಳು ಇದರ 50% ದಷ್ಟೂ ಮುಟ್ಟುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ

ಕೇವಲ ದೊಡ್ಡ ಸಂಖ್ಯೆ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಲ್ಲದೆ, ಹಲವು ಮಹತ್ವದ ತೀರ್ಪುಗಳನ್ನು ತನ್ನ ಕಾಲಾವಧಿಯಲ್ಲಿ ನೀಡಿದ್ದರು. “ಮಹಿಳೆಯರು ದೇವಸ್ಥಾನಗಳಲ್ಲಿ ಅರ್ಚಕರಾಗಬಹುದು. ಜಾತಿ ಭೇದವಿಲ್ಲದೆ, ಎಲ್ಲರಿಗೂ ಸಾಮಾನ್ಯವಾದ ಸ್ಮಶಾನ ಇರಬೇಕು. ನಾಟಕಗಳನ್ನು ಪ್ರದರ್ಶಿಸಲು, ಪೊಲೀಸ್ ಅನುಮತಿ ಅಗತ್ಯವಿಲ್ಲ. ಮಧ್ಯಾಹ್ನದ ಬಿಸಿಯೂಟದ ಕೆಲಸಗಳಲ್ಲಿ ಸಮುದಾಯ ಆಧಾರಿತ ಮೀಸಲಾತಿ ನೀಡಬೇಕು” ಎಂಬಂತಹ ಹಲವು ತೀರ್ಪುಗಳನ್ನು ಅವರು ನೀಡಿದ್ದರು.

ವಕೀಲರಾಗಿದ್ದಾಗ ಚಂದ್ರು ಅವರು ಮಹಿಳೆಯರ ಪರವಾಗಿ, ವಿಶೇಷವಾಗಿ ಸಣ್ಣ ಪಟ್ಟಣಗಳು, ಕಡಿಮೆ ಆರ್ಥಿಕ ಹಿನ್ನೆಲೆ ಮತ್ತು ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಒಂದು ರೂಪಾಯಿ ಶುಲ್ಕವಿಲ್ಲದೆ ಅನೇಕ ಪ್ರಕರಣಗಳನ್ನು ಕೈಗಿತ್ತಿಕೊಂಡು ಹೋರಾಟ ನಡೆಸಿದ್ದರು.

ಸರಳತೆಗೆ ಹೆಸರುವಾಸಿಯಾಗಿದ್ದ ಅವರು ಸಾಮಾನ್ಯವಾಗಿ ನ್ಯಾಯಾಧೀಶರಿಗೆ ಸಿಗುತ್ತಿದ್ದ ಸೌಕರ್ಯಗಳಿಂದ ದೂರವಿರುತ್ತಿದ್ದರು ಹಾಗೂ ಆಡಂಬರ ಮತ್ತು ವೈಭವವನ್ನು ಇಷ್ಟಪಡುತ್ತಿರಲಿಲ್ಲ. ನ್ಯಾಯಮೂರ್ತಿಯಾಗಿದ್ದಾಗ ತನ್ನ ಆಗಮನವನ್ನು ಘೋಷಿಸಲು ಕೆಂಪು ಟೋಪಿಯ, ಬೆಳ್ಳಿಯ ಗದೆಯನ್ನು ಹೊಂದಿರುವ “ದಾವಳಿ” ಇರಬೇಕಿಲ್ಲ, ಇದು ಅಧಿಕಾರಶಾಹಿಯ ಸಂಕೇತ ಎಂಬುವುದು ಅವರ ನಿಲುವಾಗಿತ್ತು. ಜೊತೆಗೆ ತನ್ನ ಪಕ್ಕದಲ್ಲಿ ಬಂದೂಕು ಹಿಡಿದ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ)ಯನ್ನು ಇರಿಸುತ್ತಿರಲಿಲ್ಲ. ಅವರ ಮನೆಯಲ್ಲಿ ಅಧಿಕೃತ ಸೇವಕರು ಇರಲಿಲ್ಲ. ನ್ಯಾಯಾಲಯದಲ್ಲಿ ವಕೀಲರು ಅವರನ್ನು “ಮೈ ಲಾರ್ಡ್” ಎಂದು ಕರೆಯುವುದನ್ನು ಅವರು ಒಪ್ಪಿಕೊಳ್ಳುತ್ತಿರಲಿಲ್ಲ.

ಇದನ್ನೂ ಓದಿ: ‘ಜೈ ಭೀಮ್‌’ ನಂತಹ ಮತ್ತಷ್ಟು ಚಿತ್ರಗಳು ಬರಲಿ: ಚಿತ್ರತಂಡಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘನೆ

ತನ್ನ ನಿವೃತ್ತಿಯ ದಿನ ಅವರು ತಮ್ಮ ಸರ್ಕಾರಿ ಕಾರನ್ನು ಸರ್ಕಾರಕ್ಕೆ ಒಪ್ಪಿಸಿದ್ದರು ಮತ್ತು ಅಂದು ಮನೆಗೆ ರೈಲಿನ ಮೂಲಕ ಹಿಂದಿರುಗಿದ್ದರು ಎಂದು ವರದಿಗಳು ಹೇಳುತ್ತವೆ. ಅವರು ನಿವೃತ್ತಿಯ ಭರ್ಜರಿ ವಿದಾಯವನ್ನು ಒಪ್ಪಿಕೊಂಡಿರಲಿಲ್ಲ. ಸೇವೆಗೆ ಸೇರುವಾಗ ಮತ್ತು ಸೇವೆಯಿಂದ ನಿವೃತ್ತಿಯಾದಾಗ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದರು.

ಅವರ ಕಚೇರಿಯ ಕೊಠಡಿಯ ಪ್ರವೇಶದ್ವಾರದಲ್ಲಿ ಇದ್ದ ಸೂಚನಾಫಲಕದಲ್ಲಿ

“ಇಲ್ಲಿ ಯಾರೂ ದೇವರಲ್ಲ – ಆದ್ದರಿಂದ ಹೂವುಗಳು ಬೇಕಿಲ್ಲ
ಇಲ್ಲಿ ಯಾರೂ ಹಸಿದಿಲ್ಲ – ಆದ್ದರಿಂದ ಹಣ್ಣುಗಳ ಅಗತ್ಯವಿಲ್ಲ
ಇಲ್ಲಿ ಯಾರೂ ಚಳಿಯಿಂದ ನಡುಗುತ್ತಿಲ್ಲ- ಆದ್ದರಿಂದ ಶಾಲುಗಳ ಅಗತ್ಯವಿಲ್ಲ
ನಮಗೆ ಶುಭ ಹಾರೈಕೆಗಳು ಮಾತ್ರ ಬೇಕಾಗಿದೆ” ಎಂದು ಬರೆಸಿದ್ದರು.

ಜೈ ಭೀಮ್‌ ಚಿತ್ರಕ್ಕೂ ಮುಂಚೆ ಅವರ ಬಗ್ಗೆ ಸಾಕ್ಷ್ಯಚಿತ್ರ ಮಾಡುವುದಾಗಿ ಹೇಳಿದಾಗ ಈ ಬಗ್ಗೆ ಅವರು ನಿರಾಕರಿಸಿದ್ದರು. ತನ್ನನ್ನು ಶ್ಲಾಘಿಸಲು ಮಾಡುವ ಸಾಕ್ಷ್ಯಚಿತ್ರದ ಬಗ್ಗೆ ಅವರಿಗೆ ಒಪ್ಪಿಗೆಯಿರಲಿಲ್ಲ. ಸಾಕ್ಷಿಚಿತ್ರ ನಿರ್ಮಿಸಿ ನನ್ನನ್ನು ಹೊಗಳುವುದರ ಬದಲು ಇರುಳ ಬುಡಕಟ್ಟು ಜನಾಂಗದಂತಹ ಸಮುದಾಯದ ಬಗ್ಗೆ ಚಲನಚಿತ್ರವನ್ನು ನಿರ್ಮಿಸಿ ಎಂಬುವುದ ಅವರ ಅಭಿಪ್ರಾಯವಾಗಿತ್ತು. ಇದು ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕಾರಣವಾಗಿ, ಅವರಿಗೆ ಸಹಾಯ ಮಾಡುತ್ತದೆ ಎಂಬುವುದು ಅವರ ನಿಲುವಾಗಿತ್ತು.

“ನ್ಯಾಯಮೂರ್ತಿ ಚಂದ್ರು ಅವರು ಅನೇಕ ವಿಷಯಗಳ ಬಗ್ಗೆ ಹೋರಾಡಿದ್ದರು. ಅವುಗಳಲ್ಲಿ ಒಂದನ್ನಾದರೂ ಚಿತ್ರಿಸಲು ಸಾಧ್ಯವಾಗುವ ಅವಕಾಶವನ್ನು ನಾನು ಪಡೆದುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಚಿತ್ರದಲ್ಲಿ ಜಸ್ಟಿಸ್ ಚಂದ್ರು ಪಾತ್ರವನ್ನು ಮಾಡಲು ಸಾಧ್ಯವಾಗಿದ್ದು ವೈಯಕ್ತಿಕವಾಗಿ ನನಗೆ ದೊಡ್ಡ ಮನ್ನಣೆ.” ಎಂದು ಚಿತ್ರದ ನಿರ್ಮಾಪಕ ಮತ್ತು ನಟ ಸೂರಿಯಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -