ಸುದ್ದಿಯೇನೇ ಮನೋಲ್ಲಾಸಿನಿ? ಬೈ ಐ. ವಿ ಗೌಲ್
ಈಗೇನು ಸುದ್ದಿ – ಜೆಎನ್‌ಯೂನಲ್ಲಿ ಹರಿದ ರಕ್ತದ ಸುದ್ದಿ
ಕೆಲವು ವರ್ಷಗಳ ಹಿಂದ ಈಗ ರಾಜ್ಯ ಸಚಿವಸಂಪುಟದಲ್ಲಿ ಇರುವ ಸಚಿವರೊಬ್ಬರು ಅಂದಿನ ಉಚ್ಚಶಿಕ್ಷಣ ಮಂತ್ರಿಗಳಲ್ಲಿ ಒಂದು ಮನವಿ ಮಾಡಿದ್ದರು. ಅದೇನು ಅಂದರ ಅವರ ತಾಲೂಕಿನೊಳಗ ಐಐಟಿ ಸ್ಥಾಪಿಸುವುದು. ಸಚಿವರು ನೋಡೋಣ ಅಂದರು. ಅದೇ ಕಾರ್ಯಕ್ರಮದೊಳಗ ಇದ್ದ ಒಬ್ಬ ಲೇಖಕರು ಶಾಸಕರನ್ನು ಬಾಜೂ ಕರದು. ಐಐಟಿ ಕೇಳಬೇಡಿ. ನಮ್ಮದು ಅತೀ ಹಿಂದುಳಿದ ತಾಲೂಕು. ಅವರು ನಿಕ್ಕೀ ಕೊಡೋದಿಲ್ಲ. ದೊಡ್ಡ ದೊಡ್ಡ ಶಹರಗಳಿಗೆ ಮಾತ್ರ ಕೊಡತಾರ. ನಿಮಗ ನಿಜವಾಗಿಯೂ ನಿಮ್ಮ ತಾಲೂಕಿನ ಬಡವರ ಬಗ್ಗೆ ಕಾಳಜಿ ಇದ್ದರ ಹೋಬಳಿಗೊಂದು ಐಟಿಐ ಕೇಳ್ರಿ ಅಂತ ಸಲಹೆ ಕೊಟ್ಟರು.
ಆಗ ಆ ಶಾಸಕರು ಐಐಟಿಗೂ, ಐಟಿಐಗೂ ಭಾಳ ವ್ಯತ್ಯಾಸ ಇರ್ತದಾ ಸಾರ್ ಅಂತ ಕೇಳಿದರು.
ಅವರಿಗೆ ಇದ್ದ ಸಂದೇಹ ಈಗಲೂ ಅನೇಕರ ಮನಸ್ಸಿನೊಳಗ ಮುಂದುವರದದ. ಜವಾಹರ ಲಾಲ ನೆಹರು ವಿಶ್ವವಿದ್ಯಾಲಯ ಹಾಗೂ ಇತರ ಕಾಲೇಜುಗಳ ನಡುವೆ ವ್ಯತ್ಯಾಸ ಗೊತ್ತಿರದವರು ಈ ದೇಶದಾಗ ಅನೇಕರಿದ್ದಾರ. ಅವರೊಳಗ ಕೆಲವರಿಗೆ ಅಧಿಕಾರ ಸಿಕ್ಕದ. ಅವರು ಮಂತ್ರಿ, ತಂತ್ರಿ, ಇನ್ನೇನೋ ಆಗಿ ಹೋಗ್ಯಾರ.
ʻʻಹೆಂಗೆಂಗೋ ಇದ್ದವರು ಹಿಂಗ ಹಿಂಗ ಆಗಿ ಬಿಟ್ಟಾರ
ಹಿಂಗ ಹಿಂಗ ಇದ್ದವರು ಹೆಂಗೆಂಗೋ ಆಗಿ ಬಿಟ್ಟಾರʼʼ
ಅಂತ ಹೇಳಿದ ನಮ್ಮ ದಖ್ಖನಿ ಕವಿ ನಜೀರ ಹೇಳ್ಯಾನಲ್ಲಾ ಹಂಗ.
ಈಗ ಇವರ ಷಾಗಿರ್ದಗಳು ಒಂದೊಂದಾಗಿ ವಿಶ್ವವಿದ್ಯಾಲಯದೊಳಗ ಹುಡುಕಿ ಹುಡುಕಿ ಹುಡುಗ ಹುಡುಗಿಯರನ್ನ ಹಿಡಕೊಂಡು ಹೊಡೀಲಿಕ್ಕೆ ಹತ್ಯಾರ. ಮೊದಲಿಗೆ ಮುಸ್ಲಿಂ ಹುಡುಗರು ಓದೋ ಸಂಸ್ಥೆ ಅಂತ ತಿಳಕೊಂಡು ಜಾಮಿಯಾ ಮತ್ತು ಅಲಿಘರ್‌ಗೆ ಪೊಲೀಸರನ್ನ ಕಳಿಸಿದರು.
ಅವರನ್ನ ಕೆಲವೇ ಕೆಲವು ಹುಡುಗಿಯರು ಹಿಡದು ನಿಲ್ಲಿಸಿದ್ದು ನೋಡಿ, ಇದು ಪೊಲೀಸರ ಕೈಯಲ್ಲಿ ಆಗಲಾರದ ಮಾತು ಅಂತ ಹೇಳಿ ತಾವೇ ಲಾಠಿ ಹಿಡಕೊಂಡು ಹೊಡಿಲಿಕ್ಕೆ ಹೋದರು. ಮೈಯೊಳಗ ಪಾವು ಲೀಟರ್ ರಕ್ತ ಇರೋ ಐಷೆ ಘೋಷ್ ಅನ್ನೋ ಹುಡುಗಿ ತಲಿ ಒಡದು ಅರ್ಧ ರಕ್ತ ಹರಿಸಿದರು.

ಆದರ ಇದು ಯಾವುದೂ ಹೊಸಾದಲ್ಲ. ಇದು ಅಲೆಕ್ಸಾಂಡರ್ ದಿ ಗ್ರೇಟ್ ಅವರ ಟೈಂನಿಂದ ಶುರು ಆಗೇದ. ಓದಿನ, ಜ್ಞಾನದ, ತಿಳಿವಳಿಕೆ, ಮಾಹಿತಿಯ ಕೇಂದ್ರಗಳನ್ನು ಹಾಳು ಮಾಡೋದು ಆಳುವವರ ಹಳೇ ಚಾಳಿ.
ಐದು ಸಾವಿರ ವರ್ಷ ಹಿಂದೆ ಅಲೆಕ್ಸಾಂಡ್ರಿಯಾದಲ್ಲಿ ಇದ್ದ ಬೃಹತ್ ಗ್ರಂಥಾಲಯಕ್ಕ ಗ್ರೀಕ್ ಸೈನಿಕರು ಬೆಂಕಿ ಹಾಕಿದರು. ಅಲೆಕ್ಸಾಂಡರ್ ಅವರು ತಮ್ಮ ಸೈನ್ಯದ ದೋಣಿಗಳಿಗೆ ಬೆಂಕಿ ಹಾಕಲು ಹೋಗಿ ಆ ಲೈಬ್ರರಿ ಉರಿದು ಬಿತ್ತು ಅಂತ ಸಮಜಾಯಿಷಿ ಕೊಡೋರೂ ಇದ್ದಾರ. ತೀರ ಲೈಬ್ರರಿಗೂ ದೋಣಿಗೂ ವ್ಯತ್ಯಾಸ ಗೊತ್ತಿರಲಾರದವರು ಎಂಥಾ ನಾಯಕರು ಇರಬೇಕು. ಲೈಬ್ರರಿ ಅಂದರ ನೆಲದ ಮ್ಯಾಲೆ ಇರತಾವು. ದೋಣಿ ನೀರಾಗ ಇರತಾವು. ಇನ್ನ ಗ್ರಂಥಾಲಯ ಅಂದರ ಪುಸ್ತಕದ ಮನೆ. ಇದರಾಗ ಪುಸ್ತಕ ಇರತಾವು ದೋಣಿ ಅಂದರ ಸಂಚಾರ ಸಾಧನ. ಅದರಾಗ ಹುಟ್ಟು, ಚೀಲ, ಹಗ್ಗ, ತೋಪು, ಇತ್ಯಾದಿ ಇರತಾವು. ಇದನ್ನೂ ಯಾರರ ಅಲೆಕ್ಸಾಂಡರಿಗೆ ಹೇಳಿ ಕೊಡಬೇಕಾಗಿತ್ತ?
ಭಾರತದ ವಿವಿಗಳ ಮೇಲೆ ಪ್ರಾಚೀನ ಕಾಲದಾಗ, ಮಧ್ಯಯುಗದಾಗನೂ ದಾಳಿ ನಡದದ,
ಆಧುನಿಕ ಕಾಲದಾಗ ನೈಜಿರಿಯಾದಾಗ ಗುಜಬಾ ಹಾಗೂ ಒಬಾಫೇಮಿ ವಿವಿಗಳ ಮ್ಯಾಲೆ ದಾಳಿ ನಡದಿತ್ತು.
ಸಿರಿಯಾದಾಗ ಅಲೆಪ್ಪೋ ವಿವಿ ಮ್ಯಾಲೆ ಬಾಂಬ್ ದಾಳಿ ಆಗಿತ್ತು.
ಇಸ್ರೇಲಿನ ಹಿಬ್ರು ವಿವಿ ಮೇಲೆ ಬಾಂಬ್ ದಾಳಿ ನಡೀತು.
ಪಾಕಿಸ್ತಾನದ ಬಚ್ಚಾಖಾನ್ ವಿವಿ ಹಾಗೂ ಅಂತರರಾಷ್ಟ್ರೀಯ ಇಸ್ಲಾಮಿಕ್ ಮೇಲೆ ನಡೀತು.
ಢಾಕಾ ವಿವಿ ಮೇಲೆ,
ಮೆಕ್ಸಿಕೊದ ಮಾಂಟೆರಿ ತಾಂತ್ರಿಕ ವಿವಿ ಮೇಲೆ,
ಇರಾಕಿನ ಮುಸ್ತಾನ ಸಿರಿಯಾ ವಿವಿ ಮೇಲೆ,
ಅಮೆರಿಕದ ಕ್ಯಾಲಿಫೋರ್ನಿಯಾ ವಿವಿ ಸೇರಿದಂತೆ 37 ವಿವಿ ಹಾಗೂ ಕಾಲೇಜುಗಳ ಮ್ಯಾಲೆ ದಾಳಿ ನಡದದ.
ಹಂಗಾರ ಇವು ಯಾಕ ನಡೀತಾವ?
ಯಾಕಂದರ ವಿಚಾರವನ್ನ ವಿಚಾರದಿಂದ ವಿರೋಧ ಮಾಡಲಿಕ್ಕಾಗಲಾರದವರು ಹೊಡದು- ಬಡದು ಮಾಡಲಿಕ್ಕೆ ಬರತಾರ. ಕೈಲೆ ಆಗಲಾರದವರು ಮೈ ಪರಚಿಕೊಂಡಾ ಅಂತಾರಲ್ಲ. ಹಂಗ ಇವರು ಬ್ಯಾರೆದವರ ಮೈಪರಚಲಿಕ್ಕೆ ಬರತಾರ. ಯಾರಿಗೆ ವೈಚಾರಿಕತೆ ಕಂಡರ ಆಗಂಗಿಲ್ಲೋ, ಯಾರು ಕೇವಲ ಅಂಧಾನುಕರಣೆಯೊಳಗ ವಿಶ್ವಾಸ ಇಟ್ಟಿರತಾರೋ, ಯಾರು ಪ್ರಶ್ನೆ ಕೇಳೋದನ್ನ ಮರತುಬಿಟ್ಟಿರತಾರೋ, ಯಾರು ವಿಚಾರವಂತಿಕೆಯನ್ನ ಗೂಟಕ್ಕ ಹಾಕಿ ಕಟ್ಟಿ ಮನಿಯಿಂದಾ ಹೊರಗ ಬೀಳತಾರೋ, ಅವರಿಗೆ ಮಾಹಿತಿ, ಜ್ಞಾನ, ವಿವೇಕ, ತಿಳವಳಿಕೆ ಅನ್ನೋದು ಎಲ್ಲಾ ಅಲರ್ಜಿ ಆಗಿಹೋಗಿರತದ. ಇಷ್ಟು ದಿವಸ ರಾಜಕೀಯರಹಿತವಾಗಿ ಇರಬಲ್ಲವರನ್ನು ಸುಮ್ಮನೇ ಬಿಟ್ಟು ಬಿಡತಾ ಇದ್ದರು ಆದರ ಈಗ ಅದುನೂ ಉಳದಿಲ್ಲ. ನೀವು ನಮ್ಮ ಸಂಗಡ ಇಲ್ಲದಿದ್ದರೆ ನಮ್ಮ ವಿರುದ್ಧ ಇದ್ದಂತ ಅಂದ ಜಾರ್ಜ ಬುಷ್ ಅವರ ನೀತಿ ಎಲ್ಲಾ ಕಡೆ ಪಸರಿಸಿಬಿಟ್ಟದ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೇಳೀದ ಮಾತೊಂದು ನೆನಪ ಆಗತದ. ಪುಸ್ತಕವನ್ನು ಪುಸ್ತಕವೇ ಸರಿಗಟ್ಟಬಲ್ಲದು. ಅದನ್ನು ಬೇರೆ ರೀತಿಯಿಂದ ವಿರೋಧಿಸಬಾರದು ಅಂತ. ಈ ಮಾತು ಅವರ ಹಿಂಬಾಲಕರಿಗಿಂತ ಇತರರಿಗೇ ಹೆಚ್ಚು ನೆನಪ ಐತಿ ಅಂತ ಅನಸತೈತಿ.
ಹಂಗಾರ ಇವರು ತಿಳಕೊಂಡಿರೋದರ ಏನು?
ಸರ್ವಕಾಲಕ್ಕೂ ನಾವೇ ಅಧಿಕಾರಕ್ಕ ಬರೋರು
ನಮಗ ರಾಜಕೀಯ ಅಧಿಕಾರ ಸಿಕ್ಕು ಬಿಟ್ಟರ ಸಾಕು ಎಲ್ಲಾ ರೀತಿ ಅಧಿಕಾರ ಸಿಕ್ಕಂಗ
ನಮಗ ಅಧಿಕಾರ ಬಂದಾಗ ನಾವು ಏನು ಬೇಕಾದ್ದು ಮಾಡಬಹುದು. ಯಾರೂ ಏನೂ ಕೇಳಂಗಿಲ್ಲ
ಯಾರು ಕಂಕಿಂ ಅಂತಾರೋ ಅವರನ್ನ ನಾವು ಉಸಿರು ಎತ್ತಲಾರದಂಗ ಮಾಡಿ ಬಿಡತೇವಿ
ಈ ರೀತಿ ವಿಚಾರ ಮಾಡೋರು ಒಂದು ಮಾತು ನೆನಪು ಇಟ್ಟುಕೊಳ್ಳಬೇಕು.
ಅಧಿಕಾರ ಶಾಶ್ವತ ಅಲ್ಲ. ಅದನ್ನ ಯಾರೂ ಯಾರಿಗೂ ಬರದು ಕೊಟ್ಟಿಲ್ಲ.
ಈಗ ಸೋತವರು ನಾಳೆ ಗೆಲ್ಲಬಹುದು. ಈ ದೇಶದಾಗ ಯರ‍್ಯಾರು ಸೋತಾರ ಅನ್ನೋದನ್ನ ನೆನಪಿಸಿಕೊಂಡರ ಗಾಬರಿ ಆಗತದ.
ಹಂಗೇನರ ಆಗಿ ಇವರು ಸೋತು ಅವರು ಬಂದರ.
ಈಗ ಇವರು ಮಾಡಿದ್ದನ್ನ ನಾಳೆ ಅವರು ಮಾಡಬಹುದು.
ಹಂಗ ಮಾಡಿದಾಗ ಇವರು ಸುಮ್ಮನೇ ಇರಬೇಕಾಗತದ.
ಯಾಕಂದರ ತಮಗ ಅಧಿಕಾರ ಬಂದಾಗ ಇವರು ಹಿಂಗೆಲ್ಲಾ ಮಾಡಿ ಮೇಲ್ಪಂಕ್ತಿ ಹಾಕಿ ಕೊಟ್ಟಿರತಾರ. ಬ್ಯಾರೆದವರು ಅನುಕರಿಸಲಿ ಅಂತ ಹೇಳಿ.
ಆವಾಗ ಇಬ್ಬರೂ ಮಾತಾಡಂಗಿಲ್ಲ. ಆದರ ಇಬ್ಬರ ಕ್ರೌರ್ಯಕ್ಕ ಬಲಿ ಆಗೋರು ಮಾತ್ರ , ಬಡವರು, ಹೊಟ್ಟಿಗೆ ಇರಲಾರದವರು, ಅಧಿಕಾರದ ಚೌಕಟ್ಟಿನಿಂದ ದೂರ ಇರೋರು, ಭಿಕ್ಷಾ ಬೇಡೋರು, ರೋಡಿನ್ಯಾಗ ನಿಂಬಿಹಣ್ಣು ಮಾರೋರು, ಇತ್ಯಾದಿ
ಹಿಟ್ಲರ್‌ನ ಆಳ್ವಿಕೆಯಲ್ಲಿ ನಾಜಿಗಳು ಒಂದು ಹಬ್ಬ ಆಚರಿಸತಾರ. ಅದೇನಪಾ ಅಂದರ ಕ್ರಿಸ್ಟಲ್ ನೈಟ್ ಅಥವಾ ಗಾಜಿನ ರಾತ್ರಿ. ಆಳುವ ಪಕ್ಷದ ಸೈನಿಕರು ಊರಾಗಿನ ಎಲ್ಲಾ ಗಾಜುಗಳನ್ನ ಒಡದು, ಅದರ ಮ್ಯಾಲೆ ಯಹೂದಿಗಳನ್ನ ಬರಿಗಾಲಿನಿಂದ ನಡಸತಾರ. ಸಣ್ಣಸಣ್ಣ ಹುಡುಗರು, ಮುದುಕರು, ಹೆಣ್ಣುಮಕ್ಕಳು ಹಿಂಗ ನಡೆಯುವಾಗ, ಅವರ ಕಾಲಾಗ ರಕ್ತ ಬಂದು ಅವರು ನೋವಿನಿಂದ ಚೀರಿದಾಗ, ನಾಜಿಗಳು ಸಾಲಾಗಿ ನಿಂತು ಮಜಾ ನೋಡತಾರ.

ಅಧಿಕಾರಸ್ಥರು ತಮ್ಮ ಅಫಸರ್‌ಶಾಹಿ ಆಡಳಿತದಿಂದ ಈ ಥರದ ಪೂರ್ವ ನಿಯೋಜಿತ ಪಾಪಕೃತ್ಯಗಳನ್ನು ಮಾಡೋದು ವಿಶ್ವವ್ಯಾಪಿ. ಆದರ ಅದು ಎರಡು ಅಲುಗಿನ ಕತ್ತಿ.
ಭಾರತದ ರಾಜಕೀಯ ಅರ್ಥಮಾಡಿಕೊಳ್ಳಬೇಕು ಅನ್ನೋವವರು ಉಲ್ಟಾ ತರ್ಕದಿಂದ ವಿಚಾರ ಮಾಡಬೇಕು ಅಂತ ವಿಚಾರವಾದಿ ಕಾನ್ಶಿರಾಂ ಹೇಳತ್ತಿದ್ದರಂತ. ಜೆಎನ್‌ಯು ಘಟನೆಯನ್ನೂ ಉಲ್ಟಾ ವಿಚಾರ ಮಾಡಿದರ ನಮ್ಮ ಮುಂದ ಕಾಣುವುದು ಇದು. ಬಹಳ ಜನ ಈಗ ಆಗಿರೋದು ಸರಿ ಅಂತ ವಾದಿಸುತ್ತಾ ಇದ್ದಾರ. ಇಂಥವರಿಗೆ
ಒಂದು ಪ್ರಶ್ನೆ. ಎನ್‌ಡಿಎ ಜಾಗದಲ್ಲಿ ಯುಪಿಎ ಇತ್ತು ಅನಕೋರಿ. ಜೆಎನ್‌ಯು ಜಾಗದಾಗ ಬನಾರಸ್ ಹಿಂದೂ ವಿವಿನೋ, ಸಂಸ್ಕೃತ- ಯೋಗ ವಿವಿನೋ ಇತ್ತು ಅಂತ ತಿಳಕೋರಿ, ಪೊಲೀಸರೋ ಅಥವಾ ಈಗಿನಂತೆ ಮುಖ ಮುಚ್ಚಿಕೊಂಡ ದುಷ್ಕರ್ಮಿಗಳು ಎಡಪಂಥೀಯ ಹುಡುಗರ ಬದಲಿಗೆ ಬಲಪಂಥೀಯ ಹುಡುಗರನ್ನ ಹೊಡದಿದ್ದರಂದರ ನಿಮ್ಮ ಪ್ರತಿಕ್ರಿಯೆ ಏನಿರುತ್ತಿತ್ತು? ಈ ದೇಶದಾಗ ಹಿಂಗಾಗಿದ್ದು, ಹಂಗಾಗಲಿಕ್ಕೂ ಸಾಧ್ಯ ಅದ ಹೌದಲ್ಲೋ?
ಎರಡೂ ತಪ್ಪು ಅಂತ ನಿಮಗ ಅನ್ನಿಸಿದರ ಮಾತ್ರ ನೀವು ಮನುಷ್ಯರು.
ಇಂದಿನ ನಮ್ಮ ಸಂಕಟ ವ್ಯಕ್ತಪಡಿಸೋ ಹಬೀಬ್ ಜಾಲಿಬ್ ಅವರ ಒಂದು ಕವನ ಹಿಂಗದ
ʻʻನಿನಗಿಂತ ಮೊದಲು ಈ ಸಿಂಹಾಸನದ ಮ್ಯಾಲೆ ಒಬ್ಬವ ಕೂತಿದ್ದನಲ್ಲಾ
ಅವನಿಗೂ ನಿನ್ನಂಗನ, ತಾನ ದೇವರು ಅನ್ನೋದು ಖಾತ್ರಿ ಆಗಿತ್ತು.
ಜನರಿಗೆ ಸೆಡ್ಡು ಹೊಡದು ನಿಲ್ಲೋರು ಯಾರರ ಇದ್ದರ ತೋರಸರೆಲ್ಲಾ
ತಮ್ಮ ತಮ್ಮ ಮ್ಯಾಲೆ ಭಾಳ ಅಭಿಮಾನ ಇರೋರು ಎಲ್ಲಾದರೋ ಏನೋ
ಈ ಮಣ್ಣಿನ ಕೆಳಗ ಮಲಗಿದವರು ಯರ‍್ಯಾರು ಗೊತ್ತೈತೇನು?
ಅದರಾಗ ಕೆಲವರು ಬೆಂಕಿ, ಇನ್ನ ಕೆಲವರು ಮಂಜು,
ಮತ್ತ ಕೆಲವರು ಚಂದ್ರಕಾಂತಿ ಅನ್ನಿಸಿಕೊಂಡವರು
ಈಗೇನು ನಮ್ಮೂರಿನ ಗಲ್ಲಿಯೊಳಗ ಒಬ್ಬೊಬ್ಬರ ಅಡ್ಯಾಡತಾರಲ್ಲಾ
ಒಂದು ಕಾಲದಾಗ ಅವರ ಧಿಮಾಕು ಮುಗಿಲಿಗೂ ಮ್ಯಾಲ ಇತ್ತೇನಪಾ
ಮನಿ ಬಿಟ್ಟು ಇರೋದು ನಮಗೇನು ಹೊಸಾದು ಅಲ್ಲೇ ಅಲ್ಲಪಾ ಜಾಲಿಬ್,
ನಾವು ಯಾವಾಗಲೂ ದೇಶದ ಚಿಂತಿ ಮಾಡೇವಿ ಹೊರತು
ಜೈಲಿನ ವಿಚಾರನ ಬಂದಿಲ್ಲೇನಪಾ
ನಿನಗಿಂತ ಮೊದಲು ಈ ಸಿಂಹಾಸನದ ಮ್ಯಾಲೆ ಒಬ್ಬವ ಕೂತಿದ್ದನಲ್ಲಾ
ಅವನಿಗೂ ನಿನ್ನಂಗನ, ತಾನ ದೇವರು ಅನ್ನೋದು ಖಾತ್ರಿ ಆಗಿತ್ತು.”


