ರಸ್ತೆ ಹೆಸರುಗಳಿಂದ ಜಾತಿ ಸೂಚಕಗಳನ್ನು ತೆಗೆದು ಹಾಕಿದಂತೆಯೇ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಹೆಸರುಗಳನ್ನು ತೆಗೆದು ಹಾಕಬಹುದೇ? ಎಂದು ಮದ್ರಾಸ್ ಹೈಕೋರ್ಟ್ ಗುರುವಾರ (ಫೆ.20) ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದಕ್ಷಿಣ ‘ಭಾರತ ಸೆಂಗುಂತ ಮಹಾಜನ ಸಂಘ’ದ ಚುನಾವಣೆಗೆ ಸಂಬಂಧಿಸಿದ ಅರ್ಜಿ ಸೇರಿದಂತೆ ಅರ್ಜಿಗಳ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಡಿ. ಭರತ ಚಕ್ರವರ್ತಿ ಅವರು ಅಡ್ವೊಕೇಟ್ ಜನರಲ್ (ಎಜಿ) ಪಿ.ಎಸ್ ರಾಮನ್ ಅವರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ.
“ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ನಡುವೆ ನಡೆಯುವ ಜಾತಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಏಕಸದಸ್ಯ ಆಯೋಗವನ್ನು ರಚಿಸಿ ವರದಿ ತರಿಸಿಕೊಂಡಿದೆ. ಈಗ ಶಾಲೆಗಳಂತಹ ಶಿಕ್ಷಣ ಸಂಸ್ಥೆಗಳ ಹೆಸರುಗಳಲ್ಲಿನ ಜಾತಿ ಸೂಚಕಗಳ ಬಗ್ಗೆ ಏನು ಹೇಳುತ್ತೀರಿ?” ಎಂದು ಎಜಿಗೆ ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎಜಿ “ಶಿಕ್ಷಣ ಸಂಸ್ಥೆಗಳಲ್ಲಿ ದಾನಿಗಳ ಹೆಸರು ಇರುತ್ತದೆ. ಅದು ಅವರ ಜಾತಿಯೊಂದಿಗೆ ಹೊಂದಿಕೊಂಡಿರುತ್ತದೆ. ಸಂಪೂರ್ಣ ಹೆಸರು ಬರೆಯವಾಗ ಜಾತಿ ಕೂಡ ಬರುತ್ತದೆ” ಎಂದು ತಿಳಿಸಿದ್ದಾರೆ.
ನ್ಯಾಯಮೂರ್ತಿ ಪ್ರತಿಕ್ರಿಯಿಸಿ “ರಸ್ತೆ ಹೆಸರುಗಳಲ್ಲಿನ ಜಾತಿ ಸೂಚಕವನ್ನು ತೆಗೆದು ಬರೀ ಹೆಸರು ಹಾಕುತ್ತಿದ್ದೀರಲ್ಲವೇ? ಈಗ ರಸ್ತೆಗಳಲ್ಲಿ ಪ್ರಮುಖ ವ್ಯಕ್ತಿಗಳ ಮೊದಲ ಹೆಸರು ಮಾತ್ರ ಇದೆಯಲ್ಲವೇ? ಎಂದಿದ್ದಾರೆ.
ಪರಿಸ್ಥಿತಿ ಬದಲಾಗಿದ್ದರೂ, ಕೆಲವು ರೀತಿಯ ಕಲ್ಯಾಣ ಶಾಲೆಗಳು ಇನ್ನೂ ನಿರ್ದಿಷ್ಟ ಜಾತಿಗಳ ಹೆಸರನ್ನು ಹೊಂದಿವೆ ಎಂದ ನ್ಯಾಯಮೂರ್ತಿ, ಶಿಕ್ಷಣ ಸಂಸ್ಥೆಗಳ ಹೆಸರುಗಳಿಂದ ಜಾತಿ ಸೂಚಕವನ್ನು ತೆಗೆದುಹಾಕಬಹುದೇ ಎಂದು ಕೇಳಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸುವ ಅಫಿಡವಿಟ್‌ನಲ್ಲಿ ನಿರ್ದಿಷ್ಟ ಜಾತಿಯ ಹೆಸರನ್ನು ಹೊಂದಿರುವ ಮತ್ತು ಆ ಸಮುದಾಯದ ಸದಸ್ಯರು ಮಾತ್ರ ಸೇರಲು ಅವಕಾಶ ನೀಡುವ ಬೈಲಾಗಳನ್ನು ಹೊಂದಿರುವ ಸಮಾಜಗಳ ಕುರಿತು ಸರ್ಕಾರದ ನಿಲುವನ್ನು ತಿಳಿಸುವಂತೆ ನ್ಯಾಯಮೂರ್ತಿ ಎಜಿಗೆ ಸೂಚಿಸಿದ್ದಾರೆ.
ಜಾತಿರಹಿತ ಸಮಾಜವನ್ನು ಸೃಷ್ಟಿಸಲು, ದೀನದಲಿತರನ್ನು ಮೇಲೆತ್ತಲು, ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮೀಸಲಾತಿ ಒದಗಿಸುವ ಸಾಂವಿಧಾನಿಕ ಗುರಿಯನ್ನು ಸಾಧಿಸಲು ಮಾತ್ರ ಜಾತಿ ಹೆಸರುಗಳನ್ನು ಬಳಸಬೇಕು ಎಂದು ನ್ಯಾಯಮೂರ್ತಿ ಭರತ ಚಕ್ರವರ್ತಿ ಹೇಳಿದ್ದಾರೆ.
‘ಈ ವ್ಯವಸ್ಥೆಯಿಂದ ನೀವು ನಲುಗಿ ಹೋಗಿದ್ದೀರಿ’ : ದಲಿತ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ


