ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರ ಯಾವ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸುವ ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಬುಧವಾರ ಆಗ್ರಹಿಸಿದೆ.
ಮಂಗಳವಾರ ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣದ ಅಪರಾಧಿಗಳನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದ್ದರ ಕುರಿತು ಗುಜರಾತ್ ಸರ್ಕಾರವನ್ನು ಪ್ರಶ್ನಿಸಿತ್ತು. ಇಂತಹ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಅಪರಾಧದ ಗಂಭೀರತೆಯನ್ನು ಪರಿಗಣಿಸಬೇಕಿತ್ತು ಎಂದು ಗುಜರಾತ್ ಸರ್ಕಾರವನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಪಕ್ಷ ಗುಜರಾತ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್, ”ಇದು ಸಾಮಾನ್ಯ ಅಪರಾಧ ಕೃತ್ಯವಲ್ಲ. ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಮಗುವನ್ನು ಕೊಲ್ಲಲಾಗಿತ್ತು. ಆಕೆಯನ್ನು ಎಂಥ ಸಂಕಷ್ಟಕ್ಕೆ ದೂಡಲಾಗಿತ್ತು ಎಂಬ ಕಲ್ಪನೆ ನಿಮಗಿದೆಯೇ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: 11 ಅಪರಾಧಿಗಳ ಬಿಡುಗಡೆ; ಗುಜರಾತ್ ಸರ್ಕಾರಕ್ಕೆ ಸುಪ್ರೀಂ ತರಾಟೆ
”ಆದಾಗ್ಯೂ, ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಕಡತಗಳ ಮೇಲೆ ತಮಗೆ ವಿಶೇಷ ಅಧಿಕಾರ ಇದೆ ಎಂಬುದಾಗಿ ಕೇಂದ್ರ ಹಾಗೂ ಗುಜರಾತ್ ಸರ್ಕಾರಗಳು ಹೇಳುತ್ತಿವೆ” ಎಂದು ಟೀಕಿಸಿದರು.
”ಅದು ಎಂಥ ವಿಶೇಷ ಅಧಿಕಾರ? ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವೆ?” ಎಂದು ಪ್ರಶ್ನಿಸಿದ ಅವರು, ”ಇದು ಮಹಿಳೆಯೊಬ್ಬಳ ಹಕ್ಕಿಗೆ ಸಂಬಂಧಿಸಿದ್ದು” ಎಂದು ವಾಗ್ಧಾಳಿ ನಡೆಸಿದರು.
ಈ ಬಗ್ಗೆ ಸುಪ್ರಿಯಾ ಶ್ರೀನೇತ್ ಅವರು ಮಾತನಾಡಿರುವ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ”ಬಿಲ್ಕಿಸ್ ಬಾನೋ ಅಪರಾಧಿಗಳನ್ನು ಏಕೆ ಕೈಬಿಡಲಾಯಿತು ಎಂಬುದಕ್ಕೆ ಮೋದಿ ಸರ್ಕಾರ ಉತ್ತರಿಸಬೇಕಾಗಿದೆ? ಇಂದು ಈ ದೇಶದ ಪ್ರತಿಯೊಬ್ಬ ಮಹಿಳೆಯೂ ಕೇಳುತ್ತಾಳೆ ಮೋದಿ ಸರ್ಕಾರ ಇಂತಹವರನ್ನು ಏಕೆ ಉಳಿಸುತ್ತಿದೆ?” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದೆ.
मोदी सरकार को यह जवाब देना होगा कि बिलकिस बानो के दोषियों को क्यों छोड़ा गया?
आज इस देश की हर महिला पूछती है कि ऐसे लोगों को मोदी सरकार क्यों बचा रही है?
: @SupriyaShrinate जी pic.twitter.com/gUn96iIvbp
— Congress (@INCIndia) April 19, 2023
ಮಂಗಳವಾರ ಸುಪ್ರೀಂ ಕೋರ್ಟ್ ಕೂಡ ಈ ವಿಚಾರವಾಗಿ ಗುಜರಾತ್ ಸರ್ಕಾರವನ್ನು ತರಾಟೆ ತೆಗೆದುಕೊಂಡಿತ್ತು. ”ನೀವು ಈ ಪ್ರಕರಣವನ್ನು ಸಾಮಾನ್ಯವಾದ ಸೆಕ್ಷನ್ 302 [ಕೊಲೆ] ಪ್ರಕರಣದಂತೆ ನೋಡಬೇಡಿ. ಸೇಬನ್ನು ಕಿತ್ತಳೆ ಹಣ್ಣುಗಳೊಂದಿಗೆ ಹೋಲಿಸಿದಂತೆ ಹತ್ಯಾಕಾಂಡವನ್ನು ಒಂದೇ ಕೊಲೆಯೊಂದಿಗೆ ಹೋಲಿಸಲಾಗುವುದಿಲ್ಲ. ಅಪರಾಧಗಳು ಸಾಮಾನ್ಯವಾಗಿ ಸಮಾಜ ಮತ್ತು ಸಮುದಾಯದ ವಿರುದ್ಧ ನಡೆಯುತ್ತವೆ. ಅಸಮಾನರನ್ನು ಸಮಾನವಾಗಿ ಪರಿಗಣಿಸಲಾಗುವುದಿಲ್ಲ” ಎಂದು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಿಳಿಹೇಳಿದೆ.


