ಕೇರಳದಲ್ಲಿ ಭರ್ಜರಿ ಜಯ ಸಾಧಿಸಿದ ಎಲ್‌ಡಿಎಫ್ ಮೈತ್ರಿ ಕೂಟದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸಂಪುಟವನ್ನು 11 ಹೊಸ ಮುಖಗಳೊಂದಿಗೆ ಪರಿಷ್ಕರಿಸಿದ್ದಾರೆ. ವಿಜಯನ್ ಬಿಟ್ಟರೆ ಎಲ್ಲರೂ ಹೊಸಬರೇ. ಆದರೆ ಕೋವಿಡ್ ನಿರ್ವಹಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಶೈಲಜಾ ಟೀಚರ್ ಅವರನ್ನೂ ಕೈಬಿಟ್ಟಿದ್ದು ಈಗ ಟೀಕೆಗೆ ಕಾರಣವಾಗಿದೆ.
‘ಇದು ಪಾರ್ಟಿಯ ನಿರ್ಧಾರ’ ಎಂದು ಹೇಳುವ ಗುಂಪುಗಳು, ‘ಅವರಿಗೆ ಚೀಫ್ ವಿಪ್ ಸ್ಥಾನ ನೀಡಲಾಗಿದೆ. ಹೊಸಬರಿಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನುತ್ತಿದ್ದರೆ, ಇದನ್ನು ವಿರೋಧಿಸುವವರು, ಇದು ಎಲ್ಲ ಪಕ್ಷಗಳಂತೆ ಸಿಪಿಎಂನಲ್ಲಿ ಅಂತರ್ಗತವಾಗಿರುವ ಪುರುಷಾಧಿಪತ್ಯದ ಲಕ್ಷಣ. ಎಲ್ಲ ಬದಲು ಮಾಡುವುದಿದ್ದರೆ ಪಿಣರಾಯಿ ವಿಜಯನ್ ಅವರನ್ನೂ ಬದಲಿಸಬೇಕಿತ್ತು’ ಎಂದು ಕೆಲವರು ಹೇಳಿದರೆ, ಇನ್ನೂ ಹಲವರು ಶೈಲಜಾ ಟೀಚರ್ ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗಿತ್ತು ಎನ್ನುತ್ತಿದ್ದಾರೆ.
ಈ ಕುರಿತು ಎನ್‌ಡಿಟಿವಿ ಜೊತೆ ಮಾತನಾಡಿ ಕೆ.ಕೆ ಶೈಲಜಾರವರು “ಇದು ನಮ್ಮ ಪಕ್ಷದ ನೀತಿ ನಿರ್ಧಾರ. ಆದ್ದರಿಂದ ಆ ನಿರ್ಧಾರದ ಪ್ರಕಾರ, ನಾನು ಸಹ ತ್ಯಜಿಸಲು ನಿರ್ಧರಿಸಿದ್ದೇನೆ. ಇದರಿಂದ ನನಗ್ಯಾವ ಬೇಸರವಿಲ್ಲ. ಹೊಸಬರಿಗೆ ಅವಕಾಶ ನೀಡುತ್ತಿದ್ದೇವೆ” ಎಂದಿದ್ದಾರೆ.
ಲೇಖಕರಾದ ಕೆ.ಪಿ. ಸುರೇಶ್, ಪೀರ್ ಭಾಷಾ, ಆದಿತ್ಯ ಭಾರದ್ವಾಜ್ ಮುಂತಾದವರು ಸಿಪಿಎಂ ನಡೆಯನ್ನು ಟೀಕಿಸಿದ್ದರೆ, ಮುರಳಿ ಕೃಷ್ಣ ಮುಂತಾದವರು, ಅದು ಪಕ್ಷದ ಆಂತರಿಕ ತೀರ್ಮಾನ ಎಂದು ಸಮರ್ಥಿಸಿಕೊಂಡಿದ್ದಾರೆ.
‘ಎಲ್ಲವನ್ನೂ ಬದಲು ಮಾಡುವುದಿದ್ದರೆ ಮುಖ್ಯಮಂತ್ರಿಯನ್ನೂ ಬದಲಿಸಬೇಕಿತ್ತು’ ಎಂದು ಕೆ.ಪಿ ಸುರೇಶ್ ಫೇಸ್‌ಬುಕ್‌ನಲ್ಲಿ ಬರೆದಿದ್ದು ಈ ಕುರಿತಾಗಿ ಅವರ ವಾಲ್‌ನಲ್ಲಿ ಜೋರಾದ ಚರ್ಚೆ ನಡೆದಿದೆ.
ಪತ್ರಕರ್ತ ಆದಿತ್ಯ ಭಾರದ್ವಾಜ್ ಕೂಡ ಶೈಲಜಾರನ್ನು ಕೈ ಬಿಟ್ಟ ಕ್ರಮವನ್ನು ವಿರೋಧಿಸುತ್ತ, ಎಲ್ಲ ಪಕ್ಷಗಳಲ್ಲೂ ಇರುವ ಇಂತಹ ಸ್ವಹಿತಾಸಕ್ತಿ ನಿಲುವುಗಳನ್ನು ನಾವು ವಿರೋಧಿಸಬೇಕು. ಕೇವಲ ಮೋದಿ-ಶಾಗಳನ್ನಷ್ಟೇ ಅಲ್ಲ, ಸ್ಟಾಲಿನ್, ಮಮತಾ ಮತ್ತು ಪಿಣರಾಯಿ ಅಂತಹ ಎಲ್ಲರ ಏಕಸ್ವಾಮ್ಯವನ್ನು ವಿರೋಧಿಸಬೇಕು’ ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ.
“ಕೇರಳದಲ್ಲಿ ಪಕ್ಷರಾಜಕಾರಣ, ವ್ಯಕ್ತಿ ರಾಜಕಾರಣವಲ್ಲ. #ಕೇರಳ_ರಾಜಕೀಯ_ಮಾದರಿ” ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಎಡಪಂಥಿಯ ಹಿನ್ನೆಲೆಯ ಚಳುವಳಿಗಳಿಂದಲೇ ಬಂದ ಬರಹಗಾರ ಬಿ. ಪೀರ್‌ಬಾಷಾ, ‘ಶೈಲಜಾ ಟೀಚರ್ ಮುಖ್ಯಮಂತ್ರಿಯಾಗಿದ್ದರೆ ಈ ಸ್ಥಾನಕ್ಕೂ ಒಬ್ಬ ಹೊಸಬರು ಬಂದಂತಾಗುತ್ತಿತ್ತು. ಅವರಿಗೂ ರಾಜ್ಯ ಪರ್ಯಾಯ/ ಹೊಸ ತಲೆಮಾರಿನ ನಾಯಕತ್ವ ಬೆಳೆಸಲು ಅವಕಾಶ ನೀಡಿದಂತಾಗುತ್ತಿತ್ತು. ಪಿಣರಾಯ್ ವಿಜಯನ್ ಅವರು ರಾಜ್ಯ ಸರಕಾರದ ಪ್ರಧಾನ ಉಸ್ತುವಾರಿ/ ಮಾರ್ಗದರ್ಶಕರಾಗಿದ್ದು ರಾಷ್ಟ್ರೀ ಯ ಮಟ್ಟದಲ್ಲಿ ಅಥವಾ ದಕ್ಷಿಣ ಭಾರತ ಮಟ್ಟಕ್ಕಾದರೂ ಅಧಿಕಾರ ರಾಜಕಾರಣದ ನೆಲೆಯಲ್ಲಿ ಪಕ್ಷವನ್ನು ಸಂಘಟಿಸಲು ಜವಾಬ್ದಾರಿ ವಹಿಸಿಕೊಂಡಿದ್ದರೆ ನಿರಾಶೆ ಕವಿಯುತ್ತಿರುವ ರಾಷ್ಟ್ರೀಯ ಸಂದರ್ಭದಲ್ಲಿ ಹೊಸ ಸಾಧ್ಯತೆಯೊಂದು ತೆರೆದುಕೊಳ್ಳುವ ಅವಕಾಶವಿತ್ತು’ ಎಂದಿದ್ದಾರೆ.
ಮುಂದುವರಿದು “ಜನ ಎಂದರೆ ಪಕ್ಷದ ಸದಸ್ಯರು ಮಾತ್ರ ಎಂದೇ ಪರಿಗಣಿಸಿದಲ್ಲಿ ‘ಜನತಾ ಪ್ರಜಾಪ್ರಭುತ್ವ’ ವೆಂಬುದು ದ್ವೀಪ ಅಥವಾ ನಡುಗಡ್ಡೆ ಮಾತ್ರವಷ್ಟೆ.
ಪಿಣರಾಯರ ಮರು ಆಯ್ಕೆ, ಶೈಲಜಾರನ್ನು ಬಿಟ್ಟಿದ್ದಕ್ಕೆ ಅವರದೇ ಆದ ಕಾರಣ ವಿಶ್ಲೇಷಣೆಗಳಿರಬಹುದು. ಆದರೆ “ಬೇರೆಯವರ ಉಸಾಬರಿಯೇ ಬೇಡ, ಪ್ರತಿಕ್ರಿಯಿಸುವವರ ಅನಗತ್ಯ ಆಸಕ್ತಿ, ಧಾವಂತ, ಇವುಗಳನ್ನು ನಾವು ಲೆಕ್ಕಕ್ಕೇ ತಗಳ್ಳಲ್ಲ, ಒಟ್ಟಿನಲ್ಲಿ “ಇವರ್ಯಾರು ಹೇಳೋಕೆ” ಎಂಬ ದನಿ ಇವರ ಬರೆಹದಲ್ಲಿದೆ. ಇದು ದಾರ್ಷ್ಟ್ಯದ ಮಾತಾಯಿತು.
ವ್ಯಕ್ತಿಯೊಬ್ಬರ ನಿಲುವಾಗಿದ್ದರೆ “ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ನಿಮ್ಮಿಷ್ಟ” ಎನ್ನಬಹುದಿತ್ತು. ಆದರೆ ಜನ ಚಳುವಳಿಯ ನಾಯಕತ್ವ ಹೀಗೆ ಮಾತಾಡುವುದನ್ನು ಕಠಿಣ ಶಬ್ದಗಳಿಂದಲೇ ಇದಿರುಗೊಳ್ಳುವುದು ಅನಿವಾರ್ಯವೇನೋ. ಇಂತಹ ಸಂದರ್ಭ ಮುಂದುವರಿಯದಿರಲಿ.
ಬೇಸರದಿಂದ ಇಷ್ಟನ್ನು ಬರೆಯುತ್ತಿದ್ದೇನೆ, ವಿಷಾದಗಳೊಂದಿಗೆ… ಎಂದು ಪೀರ್‌ಭಾಷಾ ಅಭಿಪ್ರಾಯಪಟ್ಟಿದ್ದಾರೆ.
ಆದಿತ್ಯ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಮುರುಳಿ ಕೃಷ್ಣ ಅವರು, ‘ಎಲ್ಲ ಹೊಸಬರಿಗೂ ಅವಕಾಶ ನೀಡಿದ್ದರಿಂದ ಶೈಲಜಾ ಅವರನ್ನು ಸಹಜವಾಗಿ ಕೈ ಬಿಡಲಾಗಿದೆ. ಆದರೆ ಅವರಿಗೆ ಚೀಫ್ ವಿಪ್ ಸ್ಥಾನ ನೀಡಲಾಗಿದೆ’ ಎಂದಿದ್ದಾರೆ.
“ಶೈಲಜಾ ಟೀಚರ್ ರಾಷ್ಟ್ರ ರಾಜಕಾರಣಕ್ಕೆ ಬರಲಿ. ನಮಗೆಲ್ಲರಿಗೆ ಪ್ರಯೋಜನವಾಗಲಿ” ಎಂದು ವೈದ್ಯರಾದ ಸಂದೀಪ ಸಮತಡ್ಕ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಕೇರಳವಲ್ಲದೇ ದೇಶದ ಎಲ್ಲ ರಾಜ್ಯಗಳ ಜನರೂ ಶೈಲಜಾ ಅವರು ಆರೋಗ್ಯ ಸಚಿವರಾಗಿ ಮಾಡಿದ ಕೆಲಸವನ್ನು ಮೆಚ್ಚಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಅದನ್ನು ಮೆಚ್ಚಿದೆ. ಅವರು ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿ ಮುಂದುವರೆಯಬೇಕಿತ್ತು ಅಥವಾ ಅವರೇ ಸಿಎಂ ಆಗಬೇಕಿತ್ತು ಎಂಬ ಸಮರ್ಥನೆಗಳು ಕೇಳಿ ಬರುತ್ತಿವೆ.
ವಿಚಿತ್ರವೆಂದರೆ, ಕೆಲವು ಬಿಜೆಪಿ ಬೆಂಬಲಿಗರು ಈ ವಿಷಯವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಶೈಲಜಾ ಟೀಚರ್ ಪರ ಪೋಸ್ಟ್‌ಗಳನ್ನು ಹಾಕುತ್ತಿರುವುದು.
ಇದನ್ನೂ ಓದಿ: ಪಿಣರಾಯಿ 2.0 – ಸಿಪಿಐ(ಎಂ)ನಿಂದ ಹೊಸ ಮುಖಗಳಿಗೆ ಮಂತ್ರಿ ಸ್ಥಾನ; ಕೆ.ಕೆ. ಶೈಲಜಾ ಔಟ್!



ಸೈಲಜ ಟೀಚರನ್ನು ಕೈ ಬಿಟ್ಟಿರೋದು ತುಂಬಾನೆ ಬೇಸರದ ವಿಷಯ ಪಕ್ಷದಲ್ಲಿ ನಾನು ೨೦ವರ್ಷ ದುಡಿದಿದ್ದೇನೆ. ಪಕ್ಷದ ತೀರ್ಮಾನವೇ ಅಂತಿಮ.
ಟೀಚರ್ ರವರ ಮತ್ತಷ್ಟು ಗಟ್ಟಿಯಾಗಿ ಕೆಲಸ ಮಾಡುವುದನ್ನ ಪಕ್ಷ ಬೇಕೊ ಬೇಡವೋ ಮತ್ತೊಮ್ಮೆ ಚೆರ್ಚಿಸಿದರೆ ಒಳಿತು ಎಂದು ನನ್ನ ಅಭಿಪ್ರಾಯ.