ಕಡಿಮೆ ಬಂಡವಾಳ ಹೂಡಿ, ಅಲ್ಪ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಲು ಇಚ್ಛಿಸುವ ವಿದೇಶಿ ಮೂಲದ ಬಂಡವಾಳದಾರರಿಗೆ ಭಾರತಕ್ಕಿಂತ ಉತ್ತಮವಾದ ಸ್ವರ್ಗ ಬಹುಶಃ ಯಾವುದೂ ಇರಲು ಸಾಧ್ಯವಿಲ್ಲವೇನೋ! ನಮ್ಮ ಮೇಕ್ ಇನ್ ಇಂಡಿಯಾ ಎಂಬ ಪರಿಕಲ್ಪನೆ ಒತ್ತಿ ಒತ್ತಿ ಹೇಳುತ್ತಿರುವುದು ಸಹ ಇದನ್ನೇ. ನಮ್ಮದೇ ನೆಲ-ಜಲ ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ನಮ್ಮವರ ಬೆವರನ್ನು ಲಾಭವಾಗಿ ಪರಿವರ್ತಿಸುವ ಈ ಹೂಡಿಕೆದಾರರನ್ನು ಯಾವ ಸರ್ಕಾರ, ಯಾವ ಕಾನೂನು ಸಹ ಏನೂ ಮಾಡಲಾಗದು. ಇನ್ನೂ ವಿದೇಶಿ ಕಂಪೆನಿಗಳಲ್ಲಿ ದುಡಿಯುವ ಕಾರ್ಮಿಕರ ಯೋಗಕ್ಷೇಮದ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿಯಾಗಲಿ, ಕಾಳಜಿಯಾಗಲಿ ಕಿಂಚಿತ್ತೂ ಇರಲು ಸಾಧ್ಯವೇ ಇಲ್ಲ ಎಂಬ ವಿಚಾರವನ್ನು ಇತ್ತೀಚಿನ ವಿಸ್ಟ್ರಾನ್ ಗಲಾಟೆ ಮತ್ತು ಅದರ ಸುತ್ತಲಿನ ಕೆಲವು ಪ್ರಸಂಗಗಳು ಮತ್ತೊಮ್ಮೆ ಸಾಬೀತುಪಡಿಸಿವೆ.
ಅದು ಡಿಸೆಂಬರ್ 12. ಕೋಲಾರದಲ್ಲಿರುವ ವಿಸ್ಟ್ರಾನ್ ಎಂಬ ಐಫೋನ್ ತಯಾರಕ ಖಾಸಗಿ ಕಂಪೆನಿಯ ಉದ್ಯೋಗಿಗಳು ತಮ್ಮನ್ನು ದಿನಕ್ಕೆ 12 ಗಂಟೆ ದುಡಿಸಿಕೊಂಡ ಕಂಪೆನಿ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು. ನೋಡನೋಡುತ್ತಿದ್ದಂತೆ ಪ್ರತಿಭಟನೆ ಗಲಭೆಗೆ ತಿರುಗಿತ್ತು. ತಾಳ್ಮೆ ಕಳೆದುಕೊಂಡ ಕಾರ್ಮಿಕರು ಕಂಪೆನಿಯ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದರು. ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಸುದ್ದಿ ದೇಶದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲಾರಂಭಿಸಿತ್ತು.
ಕೂಡಲೇ ಎಚ್ಚೆತ್ತ ಸಿಎಂ ಯಡಿಯೂರಪ್ಪ, ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ಅನೇಕರು ಈ ಘಟನೆಯ ಬಗ್ಗೆ ಮಾತನಾಡಲು ಆರಂಭಿಸಿದ್ದರು. ಕಾರ್ಮಿಕರು ಹಾಗೂ ಎಸ್‌ಎಫ್‌ಐ ಸಂಘಟನೆಯೇ ಈ ಎಲ್ಲಾ ಸಮಸ್ಯೆ ಮತ್ತು ಗಲಾಟೆಗೆ ಕಾರಣ ಎಂದು ಹೇಳಿ, ಈಗಾಗಲೇ ಸಂಬಳ ಇಲ್ಲದೆ ನೊಂದಿದ್ದ ಶ್ರಮಿಕ ವರ್ಗದ ಮೇಲೆ ಗೂಬೆ ಕೂರಿಸಲು ವೇದಿಕೆ ಸಜ್ಜು ಮಾಡಿದ್ದರು. ನೂರಾರು ಕಾರ್ಮಿಕರನ್ನೂ ಬಂಧಿಸಲಾಗಿತ್ತು. ಆದರೆ, ಅದೃಷ್ಟವಶಾತ್ ಸ್ವತಃ ಅಮೆರಿಕ ಮೂಲದ ಆಪೆಲ್ ಕಂಪೆನಿ ಕಾರ್ಮಿಕರ ಕ್ಷಮೆ ಕೇಳುವುದರೊಂದಿಗೆ ಈ ಘಟನೆಯಲ್ಲಿ ಕಾರ್ಮಿಕರದ್ದಷ್ಟೇ ತಪ್ಪಿಲ್ಲ ಎಂಬುದು ಸಾಬೀತಾಗಿದೆ.
ಹಾಗಾದರೆ ಏನಿದು ವಿಸ್ಟ್ರಾನ್ ಕಂಪೆನಿ ಗಲಭೆ ಪ್ರಕರಣ. ಈ ಗಲಭೆಗೆ ಕಾರಣವೇನು? ಇಲ್ಲಿ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳೇನು? ಇಷ್ಟಕ್ಕೂ ನಮ್ಮದೇ ರಾಜಕಾರಣಿಗಳು ನಮ್ಮದೇ ಶ್ರಮಿಕ ವರ್ಗವನ್ನು ಹಣಿಯಲು ಕಾರಣವೇನು? ಈ ಕಂಪೆನಿಯಲ್ಲಿ ಕಾರ್ಮಿಕ ನೀತಿಗಳ ಕಥೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ವಿಸ್ಟ್ರಾನ್ ಕಂಪೆನಿ
ಮೊಬೈಲ್ ಹ್ಯಾಂಡ್‌ಸೆಟ್ ಲೋಕದ ಪ್ರತಿಷ್ಠಿತ ಬ್ರ್ಯಾಂಡ್ ಆಪಲ್ ಕಂಪೆನಿಗೆ ಬಿಡಿಭಾಗಗಳನ್ನು ತಯಾರಿಸಿ ನೀಡುವ ತೈವಾನ್ ಮೂಲದ ಕಂಪೆನಿಯೇ ಈ ವಿಸ್ಟ್ರಾನ್. ಭಾರತದಲ್ಲಿ ಆಪಲ್ ಮೊಬೈಲ್ ಫೋನ್‌ಗಳಿಗೆ ಬಿಡಿಭಾಗಗಳನ್ನು ತಯಾರಿಸುವ ಏಕೈಕ ಘಟಕ ಇರುವುದು ಕರ್ನಾಟಕದಲ್ಲಿಯೇ.
ವಿಸ್ಟ್ರಾನ್ ಕಾರ್ಪ್‌ನ ಫೋನ್ ಉತ್ಪಾದನಾ ಘಟಕಕ್ಕೆ ಕರ್ನಾಟಕ ಸರ್ಕಾರ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 43 ಎಕರೆ ಜಮೀನನ್ನು ಮಂಜೂರು ಮಾಡಿದೆ. 29,000 ಕೋಟಿ ರೂ ಹೂಡಿಕೆ ಮಾಡುತ್ತಿರುವುದಾಗಿ ಹಾಗು ಸುಮಾರು 15 ಸಾವಿರ ಜನರಿಗೆ ಉದ್ಯೋಗ ಕೊಡುವುದಾಗಿ ಆರಂಭದಲ್ಲಿ ಘೋಷಿಸಿತ್ತು. ಆದರೆ ಕಂಪನಿಯ ಖಾಯಂ ಉದ್ಯೋಗಗಳನ್ನು ಬೇರೆ ರಾಜ್ಯದವರಿಗೆ ನೀಡಿ, ನಾಲ್ಕನೇ ದರ್ಜೆಯ ಕೆಲಸಗಳನ್ನು ಮಾತ್ರ ಕನ್ನಡಿಗರಿಗೆ ನೀಡುತ್ತಿದೆ ಎಂಬ ಆರೋಪ ಕಾರ್ಮಿಕರದು.
ಕಂಪೆನಿಯಲ್ಲಿ ಕೆಲಸ ಮಾಡುವವರ ಪೈಕಿ ಶೇ.10ರಷ್ಟು ಜನರಿಗೆ ಮಾತ್ರ ಖಾಯಂ ಕೆಲಸ ನೀಡಲಾಗಿದೆ. ಅದೂ ಸಹ ತಮಿಳುನಾಡು, ಮಧ್ಯಪ್ರದೇಶ, ಬಿಹಾರ, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಯುವಕರ ಪಾಲಾಗಿದೆ. ಇನ್ನೂ ಉಳಿದ ಶೇ.90ರಷ್ಟು ಗುತ್ತಿಗೆ ಆಧಾರದ ಕೆಲಸ ಮಾತ್ರ ಸ್ಥಳೀಯರಿಗೆ. ಈ ಕಂಪೆನಿಗೆ ಸುಮಾರು 10 ಸಾವಿರ ಗುತ್ತಿಗೆ ಕಾರ್ಮಿಕರನ್ನು ಪೂರೈಸುವ ಕೆಲಸವನ್ನು 5 ವಿವಿಧ ಖಾಸಗಿ ಕಂಪೆನಿಗಳು ನಿರ್ವಹಿಸುತ್ತಿವೆ.
ಇದನ್ನೂ ಓದಿ: ವಿಸ್ಟ್ರಾನ್ ದುರ್ಘಟನೆಗೆ ಕಂಪನಿಯೆ ಕಾರಣ: AICCTU ಸತ್ಯಶೋಧನಾ ವರದಿ
ಕಳೆದ 10 ತಿಂಗಳಿನಿಂದ ಕೊರೊನಾ ಇಡೀ ವಿಶ್ವವನ್ನೇ ಅಲುಗಾಡಿಸಿದೆ. ಹೀಗಾಗಿ ಶಾಲಾ ಕಾಲೇಜುಗಳು ಬಂದ್ ಆಗಿವೆ. ಅತ್ತ ದುಡಿಮೆಯೂ ಇಲ್ಲದೆ, ಖರ್ಚೂ ಹೆಚ್ಚಾಗಿ ಒದ್ದಾಡುತ್ತಿರುವ ಬಡ ಮತ್ತು ಹಿಂದುಳಿದ ವರ್ಗದ ಯುವಜನರೇ ಈ ಗುತ್ತಿಗೆದಾರ ಕಂಪೆನಿಗಳ ಟಾರ್ಗೆಟ್. 20-22 ವರ್ಷದ ಯುವಕರಿಗೆ ಮಾಸಿಕ 22 ಸಾವಿರ ಸಂಬಳ ನೀಡುವುದಾಗಿ ಆಸೆ ತೋರಿಸಿದ್ದ ಗುತ್ತಿಗೆದಾರರು, ಎಲ್ಲರಿಂದಲೂ ದಿನಕ್ಕೆ ಕನಿಷ್ಟ 12 ಗಂಟೆಗಳ ಕಾಲ ದುಡಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಅಮಾನವೀಯ ಪರಿಸರದಲ್ಲಿ ದುಡಿದಿದ್ದ ಕಾರ್ಮಿಕರಿಗೆ ಕಂಪೆನಿ ಮತ್ತು ಗುತ್ತಿಗೆದಾರರು 8 ಸಾವಿರಕ್ಕಿಂತ ಹೆಚ್ಚು ವೇತನ ನೀಡಿಲ್ಲ. ಇನ್ನೂ ಅನೇಕರಿಗೆ ಕಳೆದ ನಾಲ್ಕು ತಿಂಗಳಿನಿಂದ ನಯಾಪೈಸೆಯನ್ನೂ ವೇತನವಾಗಿ ಪಾವತಿ ಮಾಡಿಲ್ಲ. ವಿಸ್ಟ್ರಾನ್ ಗಲಭೆಗೆ ಇದೇ ನೇರ ಕಾರಣ ಎನ್ನಲಾಗುತ್ತಿದೆ.
ಕಾರ್ಮಿಕ ನೀತಿಗೆ ಬೆಲೆ ಇಲ್ಲ, ಮಹಿಳೆಯರಿಗೂ ಶೋಷಣೆ ತಪ್ಪಿಲ್ಲ
1947ರ ಕೈಗಾರಿಕಾ ವಿವಾದಗಳ ಕಾಯ್ದೆಯ ಅನುಸಾರ 100ಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಇರುವ ಯಾವುದೇ ಕೈಗಾರಿಕೋದ್ಯಮವು ಕಾರ್ಮಿಕ ಮತ್ತು ಮಾಲಿಕರ ಪ್ರತಿನಿಧಿಗಳನ್ನೊಳಗೊಂಡ ಕ್ರಿಯಾ ಸಮಿತಿಯೊಂದನ್ನು ರಚಿಸುವುದು ಕಡ್ಡಾಯವಾಗಿದೆ. ಆದರೆ ಈ ವಿಸ್ಟ್ರಾನ್ ಕಾರ್ಖಾನೆಯಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸಲಾಗಿಲ್ಲ. 10 ಸಾವಿರಕ್ಕಿಂತ ಅಧಿಕ ಉದ್ಯೋಗಿಗಳಿರುವ ಕಂಪೆನಿಯಲ್ಲಿ ಕಾರ್ಮಿಕ ಸಂಘಟನೆ ಅಸ್ತಿತ್ವದಲ್ಲಿ ಇಲ್ಲ ಎಂಬುದೇ ಆಶ್ಚರ್ಯ.
ದೇಶದ ಕಾರ್ಮಿಕ ನೀತಿಯ ಅನ್ವಯ ಕಾರ್ಮಿಕರಿಂದ 8 ಗಂಟೆಗಿಂತ ಅಧಿಕ ದುಡಿಸುವಂತಿಲ್ಲ. ಅದಕ್ಕಿಂತ ಹೆಚ್ಚು ದುಡಿಸಿದರೆ ನಿಯಮದ ಅನ್ವಯ ಮೂಲ ವೇತನದ ಜೊತೆಗೆ ಹೆಚ್ಚುವರಿ ಕೆಲಸದ ವೇತನವನ್ನೂ ಪಾವತಿ ಮಾಡಬೇಕು. ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳುವುದಾದರೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಆದರೆ, ವಿಸ್ಟ್ರಾನ್ ಕಂಪೆನಿಯಲ್ಲಿ ಮೂಲವೇತನಕ್ಕೆ ತಲೆಬುಡ ಇಲ್ಲದಂತಾಗಿದೆ. ರಾತ್ರಿ ಪಾಳಿಯಲ್ಲಿ ಮಹಿಳೆಯರಿಂದ ನಿಯಮಗಳನ್ನು ಮೀರಿ ದುಡಿಸಿಕೊಳ್ಳಲಾಗುತ್ತಿದೆ.

ಇನ್ನೂ ಮಹಿಳೆಯರಿಗೆ ಕನಿಷ್ಟ ಪ್ರಥಮ ಚಿಕಿತ್ಸೆ, ಉತ್ತಮ ಶೌಚಾಲಯದ ವ್ಯವಸ್ಥೆ ಸಹ ನೀಡದೆ ಸತತ 12 ಗಂಟೆಗಳ ಕಾಲ ಬಿಡುವಿಲ್ಲದೆ ಕೆಲಸ ಮಾಡಿಸಲಾಗಿದೆ ಎಂಬ ಗಂಭೀರ ಆರೋಪವೂ ವಿಸ್ಟ್ರಾನ್ ಕಂಪೆನಿ ಮೇಲಿದೆ. ಇದಲ್ಲದೆ, ಈ ಕಂಪೆನಿ ಗುತ್ತಿಗೆ ಕಾರ್ಮಿಕರನ್ನು ಹಿಂಬಾಗಿಲಿನಿಂದ ನೇಮಕ ಮಾಡಿ, ಗುತ್ತಿಗೆ ಕಾರ್ಮಿಕ ಕಾಯ್ದೆಗಳನ್ನೂ ಉಲ್ಲಂಘನೆ ಮಾಡಿದೆ. ಆದರೆ, ಈ ಎಲ್ಲಾ ವಿಚಾರಗಳೂ ಗೊತ್ತಿದ್ದೂ ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಇಲಾಖೆ ನಮ್ಮ ಕಾರ್ಮಿಕ ಪರ ನಿಂತಿಲ್ಲವೇಕೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಸೋಗಲಾಡಿ ಮುಖಂಡರು
ಗುತ್ತಿಗೆ ಆಧಾರದಲ್ಲಿ ವಿಸ್ಟ್ರಾನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವವರು ಎಲ್ಲರೂ ಸ್ಥಳೀಯ ಬಡ ಮತ್ತು ಹಿಂದುಳಿದ ವರ್ಗದ ಜನ. ಕೊರೊನಾ ಸಂದರ್ಭದಲ್ಲಿ ಸಂಬಳ ಇಲ್ಲದ ಕಾರಣ ಈ ಜನ ಸಾಮಾನ್ಯವಾಗಿ ಸಂಕಷ್ಟಕ್ಕೆ ನೂಕಲ್ಪಟ್ಟಿದ್ದರು. ಅಸಲಿಗೆ ಇಂತಹ ಜನರ ಸಮಸ್ಯೆಯನ್ನು ಆಲಿಸಬೇಕಿದ್ದ ಸರ್ಕಾರ ಮತ್ತು ಜನ ನಾಯಕರು ಈ ಸಂದರ್ಭದಲ್ಲಿ ದೀರ್ಘ ನಿದ್ರೆಗೆ ಜಾರಿದ್ದರು.
ಆದರೆ, ಅಸಹಾಯಕ ಸ್ಥಿತಿಯಲ್ಲಿ ನೊಂದ ಕಾರ್ಮಿಕರು ತಮ್ಮ ನ್ಯಾಯಬದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಂತೆ, ಗಲಭೆ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ನಾಯಕರು ಈ ಗಲಭೆಗೆ ಕಾರ್ಮಿಕರೇ ಕಾರಣ ಎಂದು ಷರಾ ಬರೆದುಬಿಟ್ಟಿದ್ದರು. ಅಲ್ಲದೆ, 160ಕ್ಕೂ ಹೆಚ್ಚು ಕಾರ್ಮಿಕರನ್ನು ಬಂಧಿಸಿದ್ದರು. ಆದರೆ ಆಪಲ್ ಕಂಪೆನಿ ತನ್ನ ತಪ್ಪನ್ನು ಒಪ್ಪಿಕೊಂಡು ನೇರ ಕಾರ್ಮಿಕರ ಕ್ಷಮೆ ಕೇಳಿದ ಪರಿಣಾಮ ಪ್ರಕರಣ ತಣ್ಣಗಾಗಿದೆ. ಇಲ್ಲದಿದ್ದರೆ ಕಾರ್ಮಿಕರ ಪರಿಸ್ಥಿತಿಯನ್ನೂ ಊಹಿಸುವುದೂ ಕಷ್ಟವಿತ್ತೆನ್ನಿ.
ಇನ್ನಾದರೂ ಸಿಗುತ್ತಾ ನ್ಯಾಯ?
ವಿಸ್ಟ್ರಾನ್ ಗಲಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಇದರಿಂದ ಆಪಲ್ ಕಂಪೆನಿಗೂ ಇರಿಸು ಮುರಿಸು ಉಂಟಾಗಿರುವುದು ಸುಳ್ಳಲ್ಲ. ಇದು ಆ ಕಂಪೆನಿಯ ಉತ್ಪನ್ನಗಳ ಮಾರಾಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕೂಡಲೇ ಎಚ್ಚೆತ್ತ ಆಪಲ್ ಕಂಪೆನಿ ಕಾರ್ಮಿಕರ ಕ್ಷಮೆ ಕೇಳುವ ಮೂಲಕ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿತ್ತು. ಅಲ್ಲದೆ, ವಿಸ್ಟ್ರಾನ್ ಕಂಪೆನಿಯ ಜೊತೆಗಿನ ಗುತ್ತಿಗೆಯನ್ನು ಮುಗಿಸುವ ಮಾತುಗಳನ್ನಾಡಿದೆ.
ಇದನ್ನೂ ಓದಿ: ವಿಸ್ಟ್ರಾನ್ ಬಿಕ್ಕಟ್ಟು – ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ಕಂಪೆನಿ; ಉಪಾಧ್ಯಕ್ಷನ ವಜಾ!
ಪ್ರತಿಭಟನೆಯಲ್ಲಿ ತೊಡಗಿದ್ದ 160ಕ್ಕೂ ಅಧಿಕ ಕಾರ್ಮಿಕರನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗಿದೆ. ಈ ನಡುವೆ ವಿಸ್ಟ್ರಾನ್ ಕಂಪೆನಿಯ ಗುತ್ತಿಗೆಯನ್ನು ಮರು ಪರಿಶೀಲಿಸುವುದಾಗಿ ಆಪೆಲ್ ಕಂಪೆನಿ ಹೇಳಿರುವುದು ಇಲ್ಲಿನ ಕಾರ್ಮಿಕ ಭವಿಷ್ಯದ ಮೇಲೆ ತೂಗುಗತ್ತಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಇನ್ನಾದರೂ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಕಾರ್ಮಿಕರಿಗೆ ಖಾಯಂ ಉದ್ಯೋಗ ಭದ್ರತೆಯ ಜೊತೆಗೆ ಸಂಬಳವೂ ಸಿಗುವಂತೆ ಮಾಡಬೇಕಿದೆ.
ಆಪೆಲ್ ಫೋನ್‌ಗಳನ್ನು ಉತ್ಪಾದಿಸುವ ಸಂಸ್ಥೆಗಳಿಂದ ಕಾರ್ಮಿಕರ ಕಿರುಕುಳ ಇದೇ ಮೊದಲಲ್ಲ!
ಆಪೆಲ್ ಕಂಪೆನಿಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಾರುಕಟ್ಟೆ ಮತ್ತು ಬೇಡಿಕೆ ಇದೆ. ಅಲ್ಲದೆ, ವಿಶ್ವದ ಅನೇಕ ದೇಶಗಳಲ್ಲಿ ಬಿಡಿಭಾಗಗಳನ್ನು ಉತ್ಪಾದಿಸುವ ಗುತ್ತಿಗೆಯನ್ನು ನಾನಾ ಕಂಪೆನಿಗಳಿಗೆ ನೀಡಿದೆ. ಹೀಗೆ ಚೀನಾದಲ್ಲಿ ಫಾಕ್ಸ್‌ಕಾನ್ನ್ ಕಂಪೆನಿಗೆ ಈ ಗುತ್ತಿಗೆಯನ್ನು ನೀಡಲಾಗಿದೆ.
ಚೀನಾದ ಈ ಕಂಪೆನಿಯಲ್ಲೂ ಕಾರ್ಮಿಕರನ್ನು ಮಿತಿಮೀರಿ ದುಡಿಸಿರುವ ವರದಿಗಳಿವೆ. ದಿನಕ್ಕೆ ಕನಿಷ್ಟ 12 ಗಂಟೆಗೂ ಅಧಿಕ ಕಾಲ ದುಡಿಸಲಾಗಿದೆ. ಕೆಲಸದ ಒತ್ತಡ ಮತ್ತು ಹತಾಶೆಯಿಂದಾಗಿ 2010-11ರಲ್ಲಿ ಈ ಕಂಪೆನಿಯ ಅನೇಕ ಉದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಕಂಪೆನಿಯ ಮಹಡಿಯಿಂದಲೂ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಅನೇಕ ಪ್ರಕರಣಗಳು ವರದಿಯಾಗಿದ್ದವು. ಇವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದವು.
ಪರಿಣಾಮ ಚೀನಾದ ಲೇಬರ್ ವಾಚ್ ಈ ಕಂಪೆನಿಗೆ ಭೇಟಿ ನೀಡಿ ಇಲ್ಲಿ ಉದ್ಯೋಗಿಗಳಿಗೆ ಕಿರುಕುಳ ನೀಡುತ್ತಿರುವುದನ್ನು ಖಚಿತಪಡಿಸಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಚೀನಾ ಸರ್ಕಾರ ಕೊನೆಗೂ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡಿತ್ತು.
ಇದೀಗ ಇದೇ ರೀತಿಯ ಪ್ರಕರಣ ಭಾರತದಲ್ಲೂ ಸಹ ನಡೆಯುತ್ತಿರುವುದು ಕಾಕತಾಳೀಯವೇನಲ್ಲ.
ಕಾರ್ಮಿಕರಿಗೆ ಅಂತಾರಾಷ್ಟ್ರೀಯ ಸಂಘಟನೆ ಅಗತ್ಯವಿದೆ!
ಬೆಂಗಳೂರು ಗಾರ್ಮೆಂಟ್ ಕಂಪೆನಿಗಳ ದೊಡ್ಡ ಕಣಜ. ರಾಜ್ಯ ರಾಜಧಾನಿಯ ಬಹುಪಾಲು ಜನರಿಗೆ ಉದ್ಯೋಗದ ಮೂಲ ಈ ಗಾರ್ಮೆಂಟ್‌ಗಳು. ಇಲ್ಲಿ ತಯಾರಾಗುವ ವಿವಿಧ ಬಟ್ಟೆಗಳು ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಅಮೆರಿಕ ಮತ್ತು ಯೂರೋಪ್‌ಗಳಿಗೆ ರಫ್ತಾಗುತ್ತದೆ. ಇಲ್ಲಿನ ಗಾರ್ಮೆಂಟ್ ಕಂಪೆನಿಗಳು ಮಾರಾಟಗಾರರಾದರೆ ಅದನ್ನು ಕೊಳ್ಳುವುದು ಅಂತಾರಾಷ್ಟ್ರೀಯ ಬ್ರ್ಯಾಂಡ್ ಕಂಪೆನಿಗಳು. ಇದನ್ನು ಕಾರ್ಟಲ್ ಚೈನ್ ಸಿಸ್ಟಮ್ ಎನ್ನಲಾಗುತ್ತದೆ.
ಆರಂಭದಲ್ಲಿ ಗಾರ್ಮೆಂಟ್ ಕಾರ್ಮಿಕರು ಸಹ ಇಂತಹ ನಾನಾ ಸಮಸ್ಯೆಗಳನ್ನು ಎದುರಿಸಿದ್ದಾರೆ. ಹೋರಾಟಕ್ಕೆ ಮುಂದಾದ ಪ್ರಸಂಗಗಳೂ ಸಾಕಷ್ಟಿವೆ. ಆದರೆ, ಇದೀಗ ಗಾರ್ಮೆಂಟ್ ಉದ್ಯೋಗಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತರನ್ನಾಗಿಸಲಾಗಿದೆ. ಸ್ಥಳೀಯ ಕಂಪೆನಿಗಳು ಇಲ್ಲಿನ ಕಾರ್ಮಿಕರಿಗೆ ಏನೇ ಕಿರುಕುಳ ನೀಡಿದರೂ, ಆ ವಿಚಾರವನ್ನು ಈ ಗಾರ್ಮೆಂಟ್ ಕಂಪೆನಿಗಳಿಂದ ಉತ್ಪನ್ನಗಳನ್ನು ಖರೀದಿಸುವ ಅಂತಾರಾಷ್ಟ್ರೀಯ ಬ್ರ್ಯಾಂಟ್‌ಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗುತ್ತಿದೆ.
ದೇಶದ ಕಾರ್ಮಿಕ ವಲಯ ಹೀಗೆ ಅಂತಾರಾಷ್ಟ್ರೀಯವಾಗಿ ಸಂಘಟಿತವಾಗದ ಹೊರತು ಈ ಸಮಸ್ಯೆಗೆ ಪರಿಹಾರ ಇಲ್ಲ ಎನ್ನುತ್ತಾರೆ ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ಕಾರ್ಮಿಕ ಸಂಘಟನೆಯ ಜಯರಾಮ್.


