144ನೇ ಸೆಕ್ಷನ್ ಪ್ರಕಾರ 5 ಜನ ಒಟ್ಟಿಗೆ ಕೂಡುವುದು ನ್ಯಾಯಬಾಹಿರ. ಇತ್ತೀಚೆಗೆ ಭಾರತದ ಅನೇಕ ರಾಜ್ಯಗಳಲ್ಲಿ ಈ ಸೆಕ್ಷನ್ ಅನ್ನು ಜಾರಿಗೊಳಿಸಲಾಯಿತು. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಭೆಗಳು ನಡೆದ ಕಡೆಗಳಲ್ಲೆಲ್ಲಾ 144ನೇ ಸೆಕ್ಷನ್ ವಿಧಿಸಲಾಯಿತು. ಚೆನ್ನೈನಲ್ಲಿ ಪ್ರತಿಭಟನಾ ಸಭೆ ತಡೆಗಟ್ಟುವುದಕ್ಕೆ 144ನೇ ಸೆಕ್ಷನ್ ಜಾರಿ ಮಾಡಿದಾಗ ಚಳವಳಿ ಸಂಘಟಕರು ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದರು. ಅಲ್ಲಿಯ ನ್ಯಾಯಾಧೀಶರಾದ ನ್ಯಾ. ವೈದ್ಯನಾಥನ್ ಮತ್ತು ನ್ಯಾ. ಪಿ.ಟಿ.ಆಶಾ ಅವರಿದ್ದ ನ್ಯಾಯಪೀಠ ನಡುರಾತ್ರಿಯಲ್ಲಿ ತೀರ್ಪಿತ್ತು, ‘ಸಾರ್ವಜನಿಕ ಭದ್ರತೆಯನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎಂಬುದು ನಿಜವಾದರೂ, ಸಾರ್ವಜನಿಕರು ಸರ್ಕಾರದ ಧೋರಣೆಯನ್ನು ಪ್ರತಿಭಟಿಸಿ ವಿರೋಧ ವ್ಯಕ್ತಪಡಿಸುವುದೂ ಅವರ ಹಕ್ಕು’ ಎಂದಿತು.
ಸರ್ಕಾರದ ವಿರುದ್ಧವಾಗಿ ಪ್ರತಿಪಕ್ಷಗಳ ಪ್ರತಿಭಟನೆ ಮಾಡುವುದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದರೆ ಶಾಂತಿ ಕದಡುವ ಕೆಲಸಕ್ಕೆ ಹೋರಾಟಗಾರರು ಕೈಹಾಕಬಾರದು ಎಂದು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿತು. ಅವರು ತೀರ್ಪನ್ನು ನೀಡುವಾಗ ಕೆಲವು ಪ್ರಮುಖ ವಿಚಾರಗಳ ಕುರಿತು ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ್ದಾರೆ.
ಸ್ವಾತಂತ್ರ್ಯ ಎಲ್ಲಾ ಜನರ ಹಕ್ಕು. ಸಿಎಎ ಮತ್ತು ಎನ್‍ಪಿಎ ವಿರುದ್ಧವಾಗಿ ಧ್ವನಿ ಎತ್ತುವವರ ವಾದದಲ್ಲಿ ಒಂದು ತರ್ಕ ಇದೆ. ಎನ್‍ಆರ್‍ಸಿ ಮತ್ತು ಸಿಎಎ ಎರಡಕ್ಕೂ ಸಂಬಂಧ ಇದೆ, ಅವನ್ನು ಪ್ರತ್ಯೇಕಿಸಲಾಗದು ಎಂದು ಗೃಹಮಂತ್ರಿಗಳು ಹೇಳಿದ್ದಾರೆ. ಆದ್ದರಿಂದ ಇವೆರಡರ ಹಿಂದೆ ಜನರನ್ನು ಮತೀಯವಾಗಿ ಒಡೆಯುವ ಭಯಾನಕ ಅಜೆಂಡಾವೊಂದಿದೆ ಎಂಬುದು ನಿರ್ವಿವಾದ. ಬಹುತ್ವ, ಪ್ರಜಾಪ್ರಭುತ್ವದ ಒಂದು virtue. ನಮ್ಮ ರಾಜ್ಯಾಂಗ ಜಾತ್ಯತೀತ ಭವಿಷ್ಯವನ್ನು ನಮ್ಮ ಜನತೆಗೆ ದಯಪಾಲಿಸಿದೆ. ಪಾರ್ಲಿಮೆಂಟ್, ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಭಾರತೀಯ ಜನಸಂಖ್ಯಾ ನೋಂದಣಿ ಕಾಯ್ದೆಗಳನ್ನು ಸಿದ್ಧಪಡಿಸಿದೆ ಎಂಬುದು ನಿಜ. ಸರ್ವೋಚ್ಚ ನ್ಯಾಯಾಲಯ ಈ ಕಾಯ್ದೆ ನ್ಯಾಯಯುತ ಅಥವಾ ನ್ಯಾಯಬಾಹಿರ ಎಂದು ತೀರ್ಪು ನೀಡಬಹುದು. ಆದರೆ ರಾಜ್ಯ ರೂಪಿಸುವ ಕಾನೂನು ಅಥವಾ ನ್ಯಾಯಾಲಯ ನೀಡುವ ತೀರ್ಪು ಜನತೆಯ ಹೋರಾಟದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಮೊದಲ ತತ್ವ ನಾಗರಿಕನಿಗಿರುವ ಪ್ರತಿಭಟಿಸುವ ಹಕ್ಕು. ಸರ್ಕಾರ ಮಾಡಿದ ಕೆಟ್ಟ ಕಾಯ್ದೆಯನ್ನು ಶಾಂತಿಯುತವಾಗಿ ಪ್ರತಿಭಟಿಸುವುದೇ ಪ್ರಜಾಪ್ರಭುತ್ವದ ಮೂಲಭೂತ ಸಿದ್ಧಾಂತ.
ಆಡಳಿತ ನಡೆಸುವವರು ಹಿಂಸೆಯನ್ನು ಯಾವುದೇ ರೂಪದಲ್ಲೂ ಆಚರಣೆಗೆ ತಂದರೂ, ಅದು ತಪ್ಪು. ಚಳವಳಿಗಾರರು ಹಿಂಸೆಯನ್ನು ಆಚರಣೆಗೆ ತಂದರೂ ತಪ್ಪು. ಈ ಬಗೆಯ ಹಿಂಸೆಯನ್ನು ಖಂಡಿಸಲೇಬೇಕು. ಸಿಎಎ ಕಾಯ್ದೆ ವಿರೋಧಿಸಿ ನಡೆದ ಅನೇಕ ಪ್ರತಿಭಟನೆಗಳ ಸಂದರ್ಭಗಳಲ್ಲಿ ಆಡಳಿತಗಾರರು ಈ ಬಗೆಯ ತಪ್ಪು ಮಾಡಿದ್ದಾರೆ. ಇತರೆ ಕೆಲವು ಸಂದರ್ಭಗಳಲ್ಲಿ ಹೋರಾಟಗಾರರು ಕೂಡಾ ಈ ತಪ್ಪು ಎಸಗಿದ್ದಾರೆ. ಇಬ್ಬರೂ ಹಿಂಸೆಗೆ ಎಡೆಮಾಡಿದ್ದಾರೆ.
ಅನೇಕ ರಾಜ್ಯಗಳಲ್ಲಿ 144ನೇ ಸೆಕ್ಷನ್ ಅನ್ನು ಜಾರಿಗೆ ತರಲಾಯಿತು. ಅದನ್ನು ಪ್ರತಿಭಟನಾಕಾರರ ಮೇಲೆ ಪ್ರಯೋಗಿಸಲಾಯಿತು. 144ನೇ ಸೆಕ್ಷನ್ ಚಳವಳಿಗಾರರನ್ನು ಸರಿದಾರಿಗೆ ತರುವ ಕಾನೂನೇ ಹೊರತು, ಅದು ಸೈನಿಕರ ಅಧಿಕಾರ ಚಲಾಯಿಸುವಂತಿಲ್ಲ. ಸಾರ್ವಜನಿಕರನ್ನು ಹತೋಟಿ ಮಾಡುವುದೇ ಬೇರೆ ವಿಚಾರ. ಸಾರ್ವಜನಿಕ ಹೋರಾಟವನ್ನು ಹತ್ತಿಕ್ಕುವುದೇ ಬೇರೆ ವಿಚಾರ. 144ನೇ ಸೆಕ್ಷನ್ ಇರುವುದು ಸಾರ್ವಜನಿಕರನ್ನು ಹತೋಟಿಯಲ್ಲಿಟ್ಟುಕೊಳ್ಳುವುದಕ್ಕೆ, ಮಿಲಿಟರಿ ಶಕ್ತಿ ಬಳಕೆಗಲ್ಲ; ನಿಜವಾದ ಅಪಾಯ ಕಾಣಿಸಿಕೊಂಡರೂ ಕನಿಷ್ಠ ಬಲಪ್ರಯೋಗ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರುವುದಕ್ಕೆ.
ಸರ್ಕಾರದ ಶಾಸನಕ್ಕೆ ವಿರೋಧ ವ್ಯಕ್ತಪಡಿಸುವವರಿಗೆ ಕೆಲವು ರಕ್ಷಣೆಗಳಿವೆ. 144ನೇ ಸೆಕ್ಷನ್ ಹಾಕಬೇಕಾದರೆ ಅದಕ್ಕೆ ತಕ್ಷಣದ ಬೆಳವಣಿಗೆಗಳೇ ಕಾರಣವಾಗಿರಬೇಕು. ಕೂಡಲೇ ಕ್ರಮಕೈಗೊಳ್ಳದಿದ್ದರೆ ಕೈಮೀರಿಹೋಗುವ ಘಟನೆಗಳು ನಡೆಯಬಹುದಾದ ಸೂಚನೆಗಳಿದ್ದಾಗ 144ನೇ ಸೆಕ್ಷನ್ ಜಾರಿಗೊಳಿಸಬಹುದು. ಹಾಗಿಲ್ಲದೆ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ 144ನೇ ಸೆಕ್ಷನ್ ಅನ್ನು ಅಕಾರಣವಾಗಿ ಜಾರಿಗೊಳಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ರಾಜ್ಯಾಂಗದಲ್ಲಿ ಖಾಸಗಿತನ ಮತ್ತು ಪ್ರಜೆಯ ಘನತೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಸನ್ನಿವೇಶ ಕೈಮೀರುವ ಸಂದರ್ಭದಲ್ಲಿ ಮಾತ್ರ ಪೊಲೀಸರು ಅದನ್ನು ಹತ್ತಿಕ್ಕಲು ಸೂಕ್ತ ಕ್ರಮಕೈಗೊಳ್ಳಬಹುದು. ಹಾಗೆಂದು ಪೊಲೀಸರಿಗೆ ಕಟ್ಟುಪಾಡಿಲ್ಲದ ಸ್ವಾತಂತ್ರ್ಯವಿದೆಯೆಂದು ಭಾವಿಸಬಾರದು. ಶಾಂತಿಯು ಪ್ರತಿಭಟನೆ ನಡೆಸುವುದು ಮತ್ತು ಸಾರ್ವಜನಿಕ ಸಭೆ ನಡೆಸುವುದು ರಾಜ್ಯಾಂಗ ನಮಗಿತ್ತಿರುವ ಅಧಿಕಾರ.
ಥೋರೊ ಅವರು ಪೌರರು ಸರ್ಕಾರದ ವಿರುದ್ಧ ಕಾನೂನು ಮುರಿಯುವ ಆಂದೋಲನವನ್ನು ನಡೆಸಿದ ಮೊದಲಿಗರು. ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ನಾಗರಿಕ ಕಾನೂನು ಉಲ್ಲಂಘನೆಯ ಚಳುವಳಿ ಕ್ರಿಮಿನಲ್ ರೂಪ ತಾಳಬಾರದೆಂದು ಪ್ರತಿಪಾದಿಸಿದರು. ಕಾನೂನು ಉಲ್ಲಂಘನೆ ಚಳವಳಿ ಶಾಂತಿಯುತವಾಗಿರಬೇಕು, ಅಹಿಂಸಕವಾಗಿರಬೇಕು ಎಂಬುದು ಅವರ ನಿಲುವು. ಪ್ರಜೆಯ ರಾಷ್ಟ್ರಭಕ್ತಿಯ ಧ್ಯೋತಕವೆಂದರೆ ದೇಶದ ರಾಜ್ಯಾಂಗದ ಆಶಯಗಳಿಗೆ ವಿರುದ್ಧವಾಗಿರುವ ಕಾನೂನುಗಳನ್ನು ಉಲ್ಲಂಘಿಸುವುದು. ಒತ್ತಾಯಪೂರ್ವಕವಾಗಿ ಜನತೆಯನ್ನು ಹಣ್ಣು ಮಾಡಲು ಪ್ರಯತ್ನಿಸುವ ಸರ್ಕಾರ ತಮ್ಮ ಬಗೆಗೆ ವಿರೋಧ ವ್ಯಕ್ತಪಡಿಸುವವರನ್ನು ಕ್ರಮೇಣ ಮುಗಿಸಿಯೇ ಬಿಡಬಹುದು. ತಾನು ಮಾಡಿದ ಕಾನೂನನ್ನು ಒತ್ತಾಯಪೂರ್ವಕವಾಗಿ ಒಪ್ಪಿಕೊಳ್ಳಲೇಬೇಕೆಂದು ಸರ್ಕಾರ ಪಟ್ಟು ಹಿಡಿದರೆ ಅದು ಸಂಘರ್ಷದಲ್ಲಿ ಪರ್ಯವಸನವಾಗಬಹುದು.
ಮಂಗಳೂರಿನಲ್ಲಿ ನಡೆದ ಪೊಲೀಸರ ದುರ್ವರ್ತನೆ ಅಕ್ಷಮ್ಯ. ಪೊಲೀಸರು ಗುಂಡು ಹಾರಿಸುವುದಕ್ಕೆ ಒಂದು ನಿಯಮ ಇದೆ. ಪರಿಸ್ಥಿತಿ ಕೈಮೀರಿಹೋಗುವ ಸಂದರ್ಭದಲ್ಲಿ ಪೊಲೀಸರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಾಗೆಂದು ಅವರು ಕೊಲೆಗಡುಕರಂತೆ ನಡೆದುಕೊಳ್ಳಬಾರದು. ಅಲ್ಲಿಯ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕೇಳಿದನಂತೆ, “ಇನ್ನೂ ಯಾರನ್ನೂ ಶೂಟ್ ಮಾಡಿ ಕೊಂದಿಲ್ಲವೇ?” ಎಂದು. ಇಂತಹ ಬರ್ಬರ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ಇದ್ದಾರೆ ಎನ್ನುವುದೇ ದುರಂತ!
ಪೊಲೀಸರು ಗುಂಡು ಹಾರಿಸುವುದು ಅನಿವಾರ್ಯವಾದ ಸಂದರ್ಭದಲ್ಲಿ ಅವರು ವ್ಯಕ್ತಿಯ ನಡುವಿನ ಕೆಳಭಾಗಕ್ಕೆ, ಅಂದರೆ ಕಾಲುಗಳಿಗೆ, ಮಾತ್ರ ಶೂಟ್ ಮಾಡಬೇಕು. ಮಂಗಳೂರಿನ ಗಲಭೆಯ ಸಂದರ್ಭದಲ್ಲಿ ಪೊಲೀಸರು ಎದೆಗೆ ಗುಂಡು ಹೊಡೆದಿದ್ದಾರೆ. ಇನ್ನೊಬ್ಬರ ಮುಖಕ್ಕೆ ಹೊಡೆಯಲು ಗುರಿಯಿಟ್ಟ ಗುಂಡು ತಲೆಯ ಮೇಲೆ ಹಾರಿಹೋಯಿತಂತೆ. ಇವೆಲ್ಲವೂ ಸ್ಪಷ್ಟವಾಗಿ ಆಡಳಿತ ನಡೆಸುತ್ತಿರುವವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ದ್ಯೋತಕವಾಗಿವೆ.
ಅಧಿಕಾರ ಅಪಬಳಕೆ ಮತ್ತು ಬಲಪ್ರಯೋಗದ ಮೂಲಕ ಜನರ ದನಿಯನ್ನು ಹತ್ತಿಕ್ಕಬಹುದು ಎಂಬ ಅಪಕ್ವ ಆಲೋಚನೆ ತುಂಬಿಕೊಂಡವರು ನಮ್ಮ ಆಡಳಿತಗಾರರಾಗಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯ…


