Homeಮುಖಪುಟಬಂದ ಪುಟ್ಟಾ... ಹೋದ ಪುಟ್ಟಾ...

ಬಂದ ಪುಟ್ಟಾ… ಹೋದ ಪುಟ್ಟಾ…

- Advertisement -
- Advertisement -

ಬೆಲ್ಲದ ಕಟ್ಟೆಯ ಕಟ್ಟಿ
ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ
ವಿಷ ಹೋದಿತೇನಯ್ಯಾ?

ದಾಸರ ಈ ನುಡಿಮುತ್ತುಗಳು ಪ್ರಸ್ತುತ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಿವೆ. ಜಾತ್ಯತೀತ, ಧರ್ಮಾತೀತ ಪರಂಪರೆಯ ಹಿನ್ನೆಲೆಯುಳ್ಳ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಅಪ್ಪಟ ಚುನಾವಣಾ ಪ್ರಚಾರದ ಭಾಷಣ. ಮಕ್ಕಳನ್ನು ಮುಂದಿಟ್ಟುಕೊಂಡು ತಿಳಿವಳಿಕೆ ಮೂಡಿಸಬೇಕಿತ್ತು. ಮುಂದಿನ ಗುರಿ, ಉದ್ದೇಶಗಳ ಕುರಿತು ಅರಿವು ಹೇಳಬೇಕಿತ್ತು. ಮಕ್ಕಳ ಸಮಯಪ್ರಜ್ಞೆ, ಪ್ರಶ್ನಿಸುವ ಮನೋಭಾವದ ಕುರಿತು ಗಮನಸೆಳೆಯಬೇಕಿತ್ತು. ಮಕ್ಕಳ ಮನಸ್ಸಿನಲ್ಲಿ ಸುಂದರ ಕನಸು ಬಿತ್ತಬೇಕಿತ್ತು. ಇದ್ಯಾವುದನ್ನು ಮಾಡದ ಪ್ರಧಾನಿ ಮಕ್ಕಳ ಮನದೊಳಗೆ ದ್ವೇಷದ ಕಿಡಿ ಹೊತ್ತಿಸಿಹೋದರು. ಮುಂದೆ ಇದೇ ಕಿಡಿಗಳು ತನ್ನನ್ನೇ ಆಹುತಿ ತೆಗೆದುಕೊಳ್ಳಬಹುದು ಎಂಬುದನ್ನು ಮರೆತರು.

ಮೋದಿಯವರು 370 ಕಲಂ ರದ್ದುಮಾಡಿ ಜಮ್ಮು-ಕಾಶ್ಮೀರದ ವಿಶೇಷ ಮಾನ್ಯತೆ ತೆಗೆದುಹಾಕಿದ್ದು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆಯ ಕುರಿತು ಹೇಳಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಠದ ನೂರಾರು ವರ್ಷಗಳ ಇತಿಹಾಸದಲ್ಲಿ ಬಂದುಹೋದ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಕೂಡ ಇಂತಹ ಕೊಳಕು ಭಾಷಣ ಮಾಡಿರಲಿಲ್ಲ ಎಂಬುದು ಹಿರಿಯರು ಅನುಭವದ ಮಾತು.

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಭೇಟಿ ಯಾವುದೇ ಫಲವನ್ನು ಕೊಡಲು ವಿಫಲವಾಗಿದೆ. ಪ್ರಧಾನಿ ಬಂದುಹೋಗಿದ್ದಕ್ಕೆ ಖರ್ಚಾಯಿತೇ ವಿನಃ ಜನರಿಗೇನೂ ಪ್ರಯೋಜನವಾಗಲಿಲ್ಲ. ರೈತ ಸಮಾವೇಶದಲ್ಲಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ನಾಲ್ಕನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಯೋಜನೆಗಳನ್ನು ಪ್ರಕಟಿಸುವ ಗೋಜಿಗೇ ಹೋಗಲಿಲ್ಲ. ತುಮಕೂರು ಫುಡ್‍ಪಾರ್ಕ್, ಎಚ್.ಎ.ಎಲ್ ಅಭಿವೃದ್ಧಿ, ಡಾ.ಶಿವಕುಮಾರ ಸ್ವಾಮಿಗಳಿಗೆ ಭಾರತರತ್ನ ಪ್ರಕಟಿಸುವ ಪ್ರಸ್ತಾಪ ಮಾಡಬಹುದೆಂಬ ಜನರ ನಿರೀಕ್ಷೆಗೆ ಹುಸಿಯಾಗಿದೆ. ಚುನಾವಣೆ ಸಮಯದಲ್ಲಿ ತುಮಕೂರು ಜಿಲ್ಲೆಗೆ ನೀಡಿದ್ದ ಭರವಸೆಗಳ ಬಗ್ಗೆಯೂ ಚಕಾರ ಎತ್ತಲಿಲ್ಲ. ತೆಂಗು, ಅಡಿಕೆ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ, ತೆಂಗು ಪಾರ್ಕ್ ನಿರ್ಮಾಣದ ಬಗ್ಗೆ ಮೋದಿ ಮೌನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ತುಮಕೂರು ಹಲವು ಹಬ್‍ಗಳನ್ನು ಹೊಂದಿದೆ. ಕಾರಿಡಾರ್‍ಗಳು ಇವೆ. ಕೈಗಾರಿಕೆಗಳು ಸಾಕಷ್ಟಿವೆ. ಇವುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳೇನು ಎಂಬುದನ್ನು ಭಾಷಣದಲ್ಲಿ ಪ್ರಸ್ತಾಪಿಸಲಿಲ್ಲ. ತುಮಕೂರು ನಗರವನ್ನು ಸ್ಮಾರ್ಟ್‍ಸಿಟಿಯಡಿ ಆಯ್ಕೆ ಮಾಡಿದೆಯಾದರೂ, ಅದು ಅಭಿವೃದ್ದಿಯಾಗಿಲ್ಲ. ಇನ್ನು ದೇಶದಲ್ಲಿರುವ ಸ್ಮಾರ್ಟ್ ಸಿಟಿಗಳು ಯಾವ ಹಂತದಲ್ಲಿವೆ? ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬ ಬಗ್ಗೆ ಚಕಾರವೆತ್ತಲಿಲ್ಲ. ಪ್ರವಾಹ ಪರಿಹಾರ, ರೈತರ ಆತ್ಮಹತ್ಯೆ, 2020ಕ್ಕೆ ರೈತರ ಆದಾಯ ಡಬಲ್, ಜಿಎಸ್‍ಟಿ ರಾಜ್ಯದ ಪಾಲಿನ ಹಣ ಬಿಡುಗಡೆ – ಹೀಗೆ ಯಾವುದೇ ವಿಷಯ ಮಾತನಾಡುವ ಗೊಡವೆಗೆ ಹೋಗಲಿಲ್ಲ ಪ್ರಧಾನಿ.

ಕರ್ನಾಟಕ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮೂರು ತಿಂಗಳಿಗೊಮ್ಮೆ ಸರ್ಕಾರಿ ನೌಕರರ ವೇತನ ಪಾವತಿಸುವುದು ಇದನ್ನು ಪುಷ್ಟೀಕರಿಸುತ್ತದೆ. ಹೀಗಾಗಿಯೇ ಮುಖ್ಯಮತ್ರಿ ಬಿ.ಎಸ್.ಯಡಿಯೂರಪ್ಪನವರು ರೈತರ ಸಮಾವೇಶದ ಬಹಿರಂಗ ಸಭೆಯಲ್ಲೇ ನೇರವಾಗಿ ಕೇಳಿದರು. ರಾಜ್ಯ ಹಿಂದೆಂದೂ ಕಂಡರಿಯದ ಪ್ರವಾಹದಿಂದ ತತ್ತರಿಸಿದೆ. ನೂರಾರು ಗ್ರಾಮಗಳು ಮುಳುಗಡೆಯಾಗಿವೆ. ಮೂರು ಲಕ್ಷ ಮನೆಗಳು ಕುಸಿದುಬಿದ್ದಿವೆ. ಸಂತ್ರಸ್ತರು ಮನೆಗಳಿಲ್ಲದೆ ತೊಂದರೆಗೊಳಗಾಗಿದ್ದಾರೆ. ರಸ್ತೆಗಳು, ಸೇತುವೆಗಳು ನಾಶವಾಗಿವೆ. ಇದರಿಂದ 30 ಸಾವಿರ ಕೋಟಿ ನಷ್ಟವಾಗಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಧಾನಿಗೆ ನಾಲ್ಕು ಬಾರಿ ಮನವಿ ಮಾಡಿದರೂ ಕೇವಲ 1200 ಕೋಟಿ ಬಿಡುಗಡೆ ಮಾಡಿದ್ದು ಬಿಟ್ಟರೆ ಉಳಿದ ಹಣ ಬಂದಿಲ್ಲ ಎಂದು ಗೋಗರೆದರು. ಮುಖ್ಯಮಂತ್ರಿಗಳು ಮನವಿಪೂರ್ವಕ ಒತ್ತಾಯ ಮಾಡಿದರೂ ಪ್ರಧಾನಿ ಪರಿಹಾರದ ಹಣ ಬಿಡುಗಡೆ ಮಾಡುವ ಕುರಿತು ತುಟಿಬಿಚ್ಚಲಿಲ್ಲ.

ಒಂದು ರಾಜ್ಯದ ಮುಖ್ಯಮಂತ್ರಿ, ಅದೂ ತನ್ನದೇ ಪಕ್ಷದ ಮುಖ್ಯಮಂತ್ರಿಯೊಬ್ಬರು ಮನವಿ ಮಾಡಿದರೂ ಪ್ರಧಾನಿ ಹಣ ಬಿಡುಗಡೆಗೆ ಮೌನ ವಹಿಸಿದರು. ಕರ್ನಾಟಕದ ಮುಖ್ಯಮಂತ್ರಿ ಮತ್ತು ರಾಜ್ಯದ ಜನತೆಗೆ ಪ್ರಧಾನಿ ಅವಮಾನ ಮಾಡಿದರು. ಪ್ರಧಾನಿಯ ನಡವಳಿಕೆಗೆ ವಿರೋಧ ಪಕ್ಷಗಳು ಕಿಡಿಕಾರಿದವು. ಪ್ರಧಾನಿ ಬಂದ ಪುಟ್ಟ, ಹೋದ ಪುಟ್ಟ ಅನ್ನುವಂತೆ ಮಾಡಿದರು. ಪ್ರಧಾನಿಯ ಕರ್ನಾಟಕ ಭೇಟಿಯ ಉದ್ದೇಶ ಕೇವಲ ರೈತರ ಖಾತೆಗಳಿಗೆ 2000 ರೂಪಾಯಿ ಭಿಕ್ಷೆ ಹಾಕುವುದು ಬಿಟ್ಟರೆ ಬೇರೇನೂ ಆಗಿರಲಿಲ್ಲ.

ರೈತರ ಸಮಾವೇಶದಲ್ಲಿ ದಕ್ಷಿಣ ಭಾರತದ ಪ್ರಮುಖ ಬೆಳೆಗಳನ್ನು ಪ್ರಸ್ತಾಪಿಸಿದರು. ಸಮಾವೇಶದಲ್ಲಿ ಸೇರಿದ್ದ ರೈತರಿಗೆ ಅದರ ಅವಶ್ಯಕತೆ ಇರಲಿಲ್ಲ. ದಕ್ಷಿಣದ ರಾಜ್ಯಗಳಿಂದಲೇ ನವಭಾರತದ ಕನಸು ಸಾಕಾರಗೊಳ್ಳಲು ಸಾಧ್ಯ. ದಕ್ಷಿಣ ಭಾರತ ಹೊಸ ಸಂಶೋಧನೆಗೆ ಶಕ್ತಿ ತುಂಬಲಿವೆ ಎಂಬ ಮಾತುಗಳನ್ನಾಡಿದರು. ನವಭಾರತದಲ್ಲಿ ದಕ್ಷಿಣ ರಾಜ್ಯಗಳನ್ನು ಕೇಂದ್ರ ಸರ್ಕಾರ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ನಾವೆಲ್ಲರೂ ನೋಡುತ್ತಿದ್ದೇವೆ ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಕುರಿತು ಬಿಜೆಪಿ ಹಾಕಿರುವ ಪೋಸ್ಟ್ ಸುಳ್ಳು

0
"ಕಾಂಗ್ರೆಸ್ ಪ್ರಾಣಾಳಿಕೆಯಾ ಅಥವಾ ಮುಸ್ಲಿಂ ಲೀಗ್ ಪ್ರಣಾಳಿಕೆಯಾ?" "ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಜಾರಿ, ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ, ಮುಸ್ಲಿಮರಿಗೆ ವಿಶೇಷ ಮೀಸಲಾತಿ, ವೈಯಕ್ತಿಕ ಕಾನೂನುಗಳನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯ, ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರಾಗಿ ನೇಮಿಸಬೇಕು,...