ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರ್ಕಾರ ಇದೀಗ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು (ವಿಐಎಸ್ಎಲ್) ಮುಚ್ಚಲು ಆದೇಶ ನೀಡಿದೆ. ಈ ಆದೇಶವನ್ನು ಹಿಂಪಡೆಯುವಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಿಗೆ ಬರೆದಿರುವ ಪತ್ರದ ಪ್ರತಿಯೊಂದಿಗೆ ಟ್ವೀಟ್ ಮಾಡಿರುವ ಅವರು, “ಭದ್ರಾವತಿಯಲ್ಲಿರುವ ವಿಐಎಸ್ಎಲ್ ಮುಚ್ಚುವ ಆದೇಶವನ್ನು ಹಿಂಪಡೆಯಬೇಕು. ಇದು ಕರ್ನಾಟಕದ ಹೆಮ್ಮೆ. 1996 ರಲ್ಲಿ ನಾನು ಪ್ರಧಾನ ಮಂತ್ರಿಯಾಗಿದ್ದಾಗ VISL ಅನ್ನು SAIL ನೊಂದಿಗೆ ವಿಲೀನಗೊಳಿಸಿದ್ದೇನೆ. ಸಾರ್ವಜನಿಕ ವಲಯದ ನವರತ್ನಗಳ ಕಲ್ಪನೆಯನ್ನೂ ನಾನು ಪರಿಚಯಿಸಿದ್ದೇನೆ. ಹೊಸ ಆಲೋಚನೆಗಳೊಂದಿಗೆ ಸಾರ್ವಜನಿಕ ವಲಯದ ಘಟಕಗಳನ್ನು ಉಳಿಸಬಹುದು” ಎಂದು ಟ್ವೀಟ್ ಮಾಡಿದ್ದಾರೆ.
Requested Prime Minister @narendramodi to withdraw the closure order of VISL in Bhadravati. It is the pride of Karnataka. As PM in 1996 I had merged VISL with SAIL. I had also introduced the idea of public sector Navaratnas. Public sector units can be saved with innovative ideas. pic.twitter.com/kaY0j2YAT5
— H D Devegowda (@H_D_Devegowda) January 22, 2023
ಜ.22ರಂದು ದೇವೆಗೌಡರು, ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ “ಸಾವಿರಾರು ಕುಟುಂಬಗಳ ಬದುಕಿಗೆ ಆಧಾರವಾಗಿರುವ, ತನ್ನದೇಯಾದ ಇತಿಹಾಸ ಹೊಂದಿರುವ ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಮುಚ್ಚುವ ಬದಲು ಪುನಶ್ಚೇತನಗೊಳಿಸಲು ಉಕ್ಕು ಸಚಿವಾಲಯ ಹಾಗೂ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳಿಗೆ ನಿರ್ದೇಶನ ನೀಡಿ” ಎಂದು ಒತ್ತಾಯಿಸಿದ್ದಾರೆ.
“ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ಅದನ್ನು ದೂರದೃಷ್ಟಿಯುಳ್ಳ ಇಂಜಿನಿಯರ್ ಮತ್ತು ಭಾರತರತ್ನ ಎಂ ವಿಶ್ವೇಶ್ವರಯ್ಯ ಅವರು 1918ರಲ್ಲಿ ಸ್ಥಾಪಿಸಿದ್ದರು. ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇದನ್ನು ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ತಂದು ₹650 ಕೋಟಿ ವೆಚ್ಚದಲ್ಲಿ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಯೋಜಿಸಲಾಗಿತ್ತು. ಆದರೆ, ಅದು ಸಾಕಾರಗೊಳ್ಳಲಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸದೆ ಅವಮಾನಿಸಿದ ಬಿಜೆಪಿ: ಜೆಡಿಎಸ್ ಆಕ್ರೋಶ
“2016ರಲ್ಲಿ ನೀತಿ ಆಯೋಗವು ಹೂಡಿಕೆ ಹಿಂತೆಗೆತಕ್ಕೆ ಶಿಫಾರಸು ಮಾಡಿದರೂ ಫಲಕಾರಿಯಾಗಲಿಲ್ಲ. ನಂತರ ಖಾಸಗೀಕರಣಕ್ಕೆ ಶಿಫಾರಸು ಮಾಡಿತ್ತಾದರೂ ಯಾವುದೇ ಖಾಸಗಿ ಹೂಡಿಕೆದಾರರು ಕಾರ್ಖಾನೆ ಕೊಳ್ಳಲು ಒಲವು ತೋರಲಿಲ್ಲ. ಹಾಗಾಗಿ ಕಾರ್ಖಾನೆ ಸಂಕಷ್ಟಕ್ಕೆ ಸಿಲುಕಿದೆ. ಸುಮಾರು 20,000 ಕುಟುಂಬಗಳ ಬದುಕು ಕಾರ್ಖಾನೆಯನ್ನೇ ಅವಲಂಬಿಸಿರುವುದರಿಂದ ಅದನ್ನು ಮುಚ್ಚುವ ನಿರ್ಧಾರ ಸರಿಯಲ್ಲ. ಕಾರ್ಮಿಕರ ಜೀವನ ಅತಂತ್ರವಾಗುವುದರಿಂದ ಈ ನಿರ್ಧಾರವನ್ನು ಕೈಬಿಡಬೇಕು” ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
“ಅತ್ಯುತ್ತಮ ಗುಣಮಟ್ಟದ ಉಕ್ಕು ತಯಾರಿಸುವ ಸಾಮರ್ಥ್ಯವನ್ನು ವಿಐಎಸ್‌ಎಲ್ ಹೊಂದಿದ್ದು, ಹಿಂದೆ ಅಣುಶಕ್ತಿ ಕೇಂದ್ರಗಳು, ರೈಲ್ವೆ ಇಲಾಖೆ, ಆಟೋಮೊಬೈಲ್ ಕ್ಷೇತ್ರಕ್ಕೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಒದಗಿಸಿದೆ. ಈಗ ಆತ್ಮನಿರ್ಭರ ಭಾರತ ಯೋಜನೆ ಭಾಗವಾಗಿ ರಕ್ಷಣಾ ಕ್ಷೇತ್ರ, ಪರಮಾಣು ವಲಯ, ಆಟೋಮೊಬೈಲ್ ಹಾಗೂ ರೈಲ್ವೆ ಉಪಕರಣಗಳಿಗೆ ಪೂರಕ ಉತ್ಪನ್ನಗಳನ್ನು ಪೂರೈಕೆ ಮಾಡಲು ಸಹಾಕಾರಿಯಾಗಲಿದೆ. ಹೀಗಾಗಿ ಭದ್ರಾವತಿಯ ಉಕ್ಕಿನ ಕಾರ್ಖಾನೆಯನ್ನು ಮುಚ್ಚುವ ಪ್ರಸ್ತಾವ ಕೈ ಬಿಡಬೇಕು, ಬದಲಿಗೆ ಅದನ್ನು ಪುನಶ್ಚೇತನಗೊಳಿಸಲು ಮುಂದಾಗಬೇಕು” ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮಾಜಿ ಪ್ರಧಾನಿ ವಿವರಿಸಿದ್ದಾರೆ.


