Homeಅಂತರಾಷ್ಟ್ರೀಯಪೆರುವಿನ ರಾಜಕೀಯ ಅಸ್ಥಿರತೆ

ಪೆರುವಿನ ರಾಜಕೀಯ ಅಸ್ಥಿರತೆ

- Advertisement -
- Advertisement -

ಡಿಸೆಂಬರ್ 7, 2022ರಿಂದಲೂ ಚಿಲಿ ದೇಶದ ಮಾಜಿ ಅಧ್ಯಕ್ಷ ಪೆದ್ರೊ ಕಾಸ್ಟಿಲ್ಲೋ ಅವರ ಪದಚ್ಯುತಿ ಮತ್ತು ಆಂತರಿಕ ಸ್ವ-ದಂಗೆಯ ಯತ್ನದ ಕಾರಣದಿಂದಾಗಿ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಕ್ಯಾಸ್ಟಿಲ್ಲೋ ಅವರ ಬಂಧನದ ನಂತರ ಪ್ರತಿಭಟನೆಗಳು ಸ್ಫೋಟಗೊಂಡವು. ಪೆರುವಿನ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಟನೆಗಳು ಇದ್ದಕ್ಕಿದ್ದಂತೆ ಭುಗಿಲೆದ್ದವು. ಪ್ರತಿಭಟನಕಾರರು ಕ್ಯಾಸ್ಟಿಲ್ಲೋ ಅವರನ್ನು ಅಧ್ಯಕ್ಷರನ್ನಾಗಿ ಮರುಸ್ಥಾಪಿಸಲು ಕರೆ ನೀಡಿದ್ದಾರೆ. ಇದನ್ನು ಬರೆಯುವ ತನಕ ಸುಮಾರು 50ರಷ್ಟು ಮಂದಿ ಪೊಲೀಸರ ಜೊತೆಗಿನ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ. ಕ್ಯಾಸ್ಟಿಲ್ಲೋ ಅವರಿಗೆ ಮೆಕ್ಸಿಕೋ, ಕೊಲಂಬಿಯಾ, ಅರ್ಜೆಂಟೀನಾ ಮತ್ತು ಬೊಲಿವಿಯಾ ದೇಶಗಳಿಂದಲೂ ಬೆಂಬಲ ದೊರೆತಿದೆ.

ಕ್ಯಾಸ್ಟಿಲ್ಲೋ ಅವರ ಉತ್ತರಾಧಿಕಾರಿಯಾಗಿ ಸ್ವತಃ ಅವರ ಉಪಾಧ್ಯಕ್ಷರಾಗಿದ್ದ ಡೀನಾ ಬೊಲುವರ್ತೆ (ಸ್ಪಾನಿಷ್ ಉಚ್ಛಾರಣೆ ಬೊಲುಅರ್ತೆ) ಅಧಿಕಾರಕ್ಕೆ ಬಂದಿದ್ದಾರೆ. ಬೊಲುವರ್ತೆ ಅವರು ಕ್ಯಾಸ್ಟಿಲ್ಲೋ ಅವರಿಂದ ದೂರ ನಿಂತಿದ್ದು, ಆಕೆ ಒಬ್ಬ ಅಧಿಕಾರದ ಅಪಹರಣಗಾರ್ತಿ ಎಂದು ಕ್ಯಾಸ್ಟಿಲ್ಲೋ ಆರೋಪಿಸಿದ್ದಾರೆ. ಇತ್ತ ಕಡೆ ಬೊಲುವರ್ತೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಕ್ಯಾಸ್ಟಿಲ್ಲೋ ಅವರ ಪದಚ್ಯುತಿಯ ಒಂದು ವಾರದ ಒಳಗಾಗಿ ಬೊಲುವರ್ತೆ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಿದರು.

ಇತ್ತೀಚೆಗೆ ಪ್ರತಿಭಟನೆಗಳು ಪೆರುವಿನ ರಾಜಧಾನಿ ಲಿಮಾಕ್ಕೂ ಹಬ್ಬಿವೆ. ಲಿಮಾದಲ್ಲಿ ಸಾವಿರಾರು ಜನರು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆಯು ರಾಜಧಾನಿ ತಲಪಿದ ಬೆನ್ನಲ್ಲೇ ಬೊಲುವರ್ತೆ ಅವರ ಸಂಪುಟದ ಹಲವಾರು ಸಹೋದ್ಯೋಗಿಗಳು ಒಬ್ಬೊಬ್ಬರಾಗಿ ರಾಜೀನಾಮೆ ನೀಡಲು ಆರಂಭಿಸಿದ್ದಾರೆ. ಬೊಲುವರ್ತೆ ಮತ್ತೊಮ್ಮೆ 30 ದಿನಗಳ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇದು ಪ್ರತಿಭಟನೆಯನ್ನು ದಮನಿಸಲು ಸೇನಾಪಡೆಗಳಿಗೆ ಅವಕಾಶ ಮಾಡಿಕೊಡುತ್ತದೆ.

ಪೆದ್ರೊ ಕಾಸ್ಟಿಲ್ಲೋ

ಬೊಲುವರ್ತೆ ಈ ವರ್ಷದಲ್ಲೇ ಅವಧಿಪೂರ್ವ ಚುನಾವಣೆಗೆ ಕರೆ ನೀಡಿದ್ದರೂ, ಎರಡು ರಂಗಗಳಲ್ಲಿ ವಿರೋಧ ಎದುರಿಸುತ್ತಿದ್ದಾರೆ. ಚುನಾವಣೆಗಳಲ್ಲಿ ಮೋಸ ನಡೆಯಲಿದೆ ಎಂದು ಕ್ಯಾಸ್ಟಿಲ್ಲೋ ಬೆಂಬಲಿಗರು ಆರೋಪಿಸಿದ್ದು, ಅವರ ಅಧ್ಯಕ್ಷ ಸ್ಥಾನದ ಮರುಸ್ಥಾಪನೆಗೆ ಆಗ್ರಹಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಶೀಘ್ರ ಚುನಾವಣೆಯು ಮತಗಳನ್ನು ಎಡಪಂಥೀಯರತ್ತ ತಿರುಗಿಸಬಹುದು ಎಂಬ ಭಯದಿಂದ ಪೆರುವಿನ ಕಾಂಗ್ರೆಸ್‌ನ (ಸಂಸತ್ತು) ಬಲಪಂಥೀಯ ಸದಸ್ಯರೂ ಅದನ್ನು ವಿರೋಧಿಸುತ್ತಿದ್ದಾರೆ. ಹಿಂದಿನಿಂದಲೂ ಪೆರುವಿನಲ್ಲಿ ಅಧ್ಯಕ್ಷ ಸ್ಥಾನ ಬಹಳ ಅಸ್ಥಿರ ಹುದ್ದೆಯಾಗಿದೆ. ಸ್ವತಃ ಬೊಲುವರ್ತೆ ಅವರು ಐದು ವರ್ಷಗಳಲ್ಲಿ ಆರನೇ ಅಧ್ಯಕ್ಷೆ.

ಪ್ರಭುತ್ವ ಹಿಂಸಾಚಾರ

ಪ್ರತಿಭಟನೆಗಳಿಗೆ ಪ್ರಭುತ್ವದ ಪ್ರತಿಕ್ರಿಯೆಯು ತೀರಾ ಹಿಂಸಾತ್ಮಕವಾಗಿತ್ತು. ಡಿಸೆಂಬರ್ 15, 2022ರಂದು ಅಯಾಚುಕೊ ಎಂಬಲ್ಲಿ ಸಶಸ್ತ್ರ ಪಡೆಗಳು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ಪರಿಣಾಮವಾಗಿ 10 ಮಂದಿ ಸತ್ತು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಜನವರಿ 9ರಂದು ಜೂಲಿಯಾಕ ಎಂಬಲ್ಲಿ ಪೊಲೀಸರು ಮತ್ತೆ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ಪರಿಣಾಮವಾಗಿ 18 ಮಂದಿ ಬಲಿಯಾಗಿ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಎರಡೂ ಘಟನೆಗಳು ಅತ್ಯಂತ ಹೀನವೆಂದು ಅಂತಾರಾಷ್ಟ್ರೀಯ ವೀಕ್ಷಕರು ಬಣ್ಣಿಸಿದ್ದಾರೆ. ಈ ಘಟನೆಗಳು ಸ್ಥಳೀಯ ಮಾಧ್ಯಮಗಳ ವರದಿಗಳಿಂದಾಗಿ ಮಾತ್ರವೇ ಬೆಳಕಿಗೆ ಬಂದವು.

ಪೆದ್ರೊ ಕ್ಯಾಸ್ಟಿಲ್ಲೋ ಯಾರು?

ಪೆದ್ರೊ ಕ್ಯಾಸ್ಟಿಲ್ಲೋ ಅವರದ್ದು ದುಡಿಯುವ ವರ್ಗದಿಂದ ಮೇಲೆದ್ದು ಬಂದು ರಾಷ್ಟ್ರೀಯ ನಾಯಕನ ಸ್ಥಾನಕ್ಕೆ ಏರಿದ ವ್ಯಕ್ತಿಯೊಬ್ಬರ ಅಪರೂಪದ ಕತೆ. ಅವರು ಪೆರು ದೇಶದ ಕಡುಬಡತನದ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ಕೃಷಿ ಕೂಲಿಯಾಗಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಪಡೆದವರು. ಕ್ರಮೇಣ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾದರು. ಅವರು ಶಿಕ್ಷಕರ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಶಿಕ್ಷಕರಾಗಿ ಮತ್ತು ಸಂಘದ ಸಕ್ರಿಯ ಸದಸ್ಯರಾಗಿ ಅವರು ಸಾಮಾಜಿಕ ಸಂಗತಿಗಳಲ್ಲಿ ತೊಡಗಿಸಿಕೊಳ್ಳುತ್ತಾ ರಾಜಕೀಯ ರಂಗವನ್ನು ಪ್ರವೇಶಿಸಿದರು. ಬಡ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ತಾನು ಅನುಭವಿಸಿ, ಹತ್ತಿರದಿಂದ ನೋಡಿದ್ದು, ಅದನ್ನು ಬದಲಿಸಲು ಬಯಸಿದ್ದೇನೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಅತಂತ್ರ ಫಲಿತಾಂಶ: ಮಲೇಷ್ಯಾದಲ್ಲಿ ಹೊಸ ಮೈತ್ರಿಯ ಅಸ್ಥಿರ ಸರ್ಕಾರ!

2017ರಲ್ಲಿ ಪೆರುವಿನಲ್ಲಿ ಶಿಕ್ಷಕರ ಪ್ರಮುಖ ಮುಷ್ಕರ ನಡೆದಿತ್ತು. ಆ ಹೊತ್ತಿಗೆ ಸಂಘಟನೆಯ ನಾಯಕರಾಗಿದ್ದ ಕ್ಯಾಸ್ಟಿಲ್ಲೋ ಒಬ್ಬ ರಾಜಕೀಯ ನಾಯಕರಾಗಿ ಮೂಡಿಬಂದರು. 2021ರಲ್ಲಿ ಹಲವು ರಾಜಕೀಯ ಸ್ಥಾನಕ್ಕೆ ಬೆಂಬಲದೊಂದಿಗೆ ಅವರು ಅಧ್ಯಕ್ಷೀಯ ಪದಕ್ಕೆ ಸ್ಪರ್ಧಿಸಿದರು. ಅವರನ್ನು ನಿಜವಾದ ಬದಲಾವಣೆಗಾಗಿ ಶ್ರಮಿಸಬಲ್ಲ, ರಾಜಕೀಯಕ್ಕೆ ಹೊರತಾದ ವ್ಯಕ್ತಿ ಎಂಬಂತೆ ಕಾಣಲಾಗಿತ್ತು. ಚುನಾವಣೆಯಲ್ಲಿ ಅವರು ಕೀಕೋ ಫುಜಿಮೊರಿ ಅವರನ್ನು ಸೋಲಿಸಿದರು. ಈ ಕೀಕೊ ಫುಜಿಮೊರಿ- ಪೆರುವಿನ ಹಿಂದಿನ ಸರ್ವಾಧಿಕಾರಿ ಆಲ್ಬರ್ಟೋ ಫುಜಿಮೊರಿಯ ಮಗಳು.

ಕ್ಯಾಸ್ಟಿಲ್ಲೋ ಅವರು ಫುಜಿಮೊರಿ ಕುಟುಂಬದ ಕಟು ಟೀಕಾಕಾರರಾಗಿದ್ದರು. ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಅವರು- ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಸರಕಾರಿ ವೆಚ್ಚವನ್ನು ಹೆಚ್ಚಿಸುವ, ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡುವ ಮತ್ತು ಸರ್ವಾಧಿಕಾರಿ ಫುಜಿಮೊರಿಯ ಕಾಲದಲ್ಲಿ ರೂಪಿಸಲಾದ ಪೆರುವಿನ ಸಂವಿಧಾನವನ್ನು ಬದಲಿಸುವ ಭರವಸೆಯನ್ನು ನೀಡಿದ್ದರು.

1990ರ ದಶಕದಲ್ಲಿ ಫುಜಿಮೊರಿ ತನ್ನದೇ ಸರಕಾರವನ್ನು ದಂಗೆಯಲ್ಲಿ ಬುಡಮೇಲು ಮಾಡಿದ ನಂತರ ಪೆರುವಿನಲ್ಲಿ ಆತನದೇ ಸರ್ವಾಧಿಕಾರವಿತ್ತು. ಆತನ ರಾಜೀನಾಮೆಯ ನಂತರ ಸರಕಾರವು ಪೆರುವಿನಲ್ಲಿ ತೀರಾ ಮಾರುಕಟ್ಟೆ ಪರವಾದ ಸಂವಿಧಾನವನ್ನು ರೂಪಿಸಿ ಅನುಷ್ಠಾನಗೊಳಿಸಿತ್ತು. ಫುಜಿಮೊರಿಯನ್ನು ಆತನ ಸರಕಾರದ ಅನೇಕ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಬಂಧಿಸಲಾಗಿದೆ. ಆದರೆ, ಆತನ ಮಕ್ಕಳು ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಮಗಳು ಕೀಕೋ ಫುಜಿಮೊರಿ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ.

ಕ್ಯಾಸ್ಟಿಲ್ಲೋ ವಿರೋಧಿ ಕ್ರಮ

ಕ್ಯಾಸ್ಟಿಲ್ಲೋ ಅಧ್ಯಕ್ಷರಾದ ತಕ್ಷಣವೇ ವಿರೋಧ ಎದುರಿಸಿದರು. ಕಾಂಗ್ರೆಸ್‌ನಲ್ಲಿ (ಸಂಸತ್) ಬಹುಮತ ಪಡೆದ ಒಂದೇ ಒಂದು ಪಕ್ಷವೂ ಇರಲಿಲ್ಲ. ಆದರೆ, ಹೆಚ್ಚಿನ ಸ್ಥಾನಗಳು ಬಲಪಂಥೀಯರ ಪಾಲಾಗಿದ್ದವು. ಫುಜಿಮೊರಿಯ ಬೆಂಬಲಿಗರು ಕ್ಯಾಸ್ಟಿಲ್ಲೋ ಪದಚ್ಯುತಿಗೆ ಪ್ರಯತ್ನ ಆರಂಭಿಸಿದ್ದರು.

ಕ್ಯಾಸ್ಟಿಲ್ಲೋ ಕೋವಿಡ್ ಪಿಡುಗು ಆರಂಭವಾಗುವುದಕ್ಕೆ ಸ್ವಲ್ಪವೇ ಮೊದಲು ಅಧಿಕಾರಕ್ಕೆ ಬಂದಿದ್ದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಕ್ಯಾಸ್ಟಿಲ್ಲೋ ಅವರು ರಾಜಕೀಯವಾಗಿ ಅಸಹಾಯಕರಾಗಿದ್ದರು. 2021ರ ಕೊನೆಯ ಭಾಗದಲ್ಲಿ, ಅವರು ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳುಗಳಲ್ಲಿ ಫುಜಿಮೊರಿ ಬೆಂಬಲಿಗರು ಅವರನ್ನು ಪದಚ್ಯುತಗೊಳಿಸಲು ಯತ್ನಿಸಿದ್ದರು. ಪೆರುವಿನ ಸಂವಿಧಾನವು ಪದಚ್ಯುತಿಯನ್ನು ತೀರಾ ಸರಳವಾಗಿಸಿದೆ. ಪದಚ್ಯುತಿಗೆ ಒಂದು ಆಧಾರ ಎಂದರೆ, ’ನೈತಿಕ ಅನರ್ಹತೆ’. ನೈತಿಕ ಅರ್ಹತೆಯನ್ನು ತೀರಾ ಕೆಟ್ಟದಾಗಿ ವ್ಯಾಖ್ಯಾನಿಸಲಾಗಿದ್ದು, ಮಾನಸಿಕವಾಗಿ ಅಸ್ಥಿರವಾಗಿರುವುದರಿಂದ ಹಿಡಿದು, ಕೆಟ್ಟ ನೈತಿಕ ಗುಣಸ್ವಭಾವದ ತನಕ ಯಾವುದನ್ನು ಬೇಕಾದರೂ ನೈತಿಕ ಅನರ್ಹತೆ ಎಂದು ಕರೆಯಬಹುದು. ಪದಚ್ಯುತಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಕ್ಯಾಸ್ಟಿಲ್ಲೋ ವಿರೋಧಿಗಳು, ದೊಡ್ಡ ಉದ್ಯಮಗಳ ಜೊತೆಗೆ ಸೇರಿಕೊಂಡು ಕ್ಯಾಸ್ಟಿಲ್ಲೋ ಸರಕಾರದ ವಿರುದ್ಧ ಮುಷ್ಕರಗಳು ಮತ್ತು ಪ್ರತಿಭಟನೆಗಳನ್ನು ಆಯೋಜಿಸಿದರು. ಅವರ ಅಧೀನದಲ್ಲಿದ್ದ ಮಾಧ್ಯಮಗಳು ಅವರನ್ನು ಭ್ರಷ್ಟ ಕಮ್ಯುನಿಸ್ಟ್ ನಾಯಕ ಎಂದು ಬಿಂಬಿಸಿದವು. ಆದರೂ ಪದಚ್ಯುತಿ ಪ್ರಯತ್ನ ವಿಫಲವಾಯಿತು. 2022ರ ಫೆಬ್ರವರಿ ತಿಂಗಳಲ್ಲಿ ಅದೇ ರಾಜಕಾರಣಿಗಳು ಮತ್ತೆ ಪದಚ್ಯುತಿಯ ಪ್ರಯತ್ನ ನಡೆಸಿ ವಿಫಲರಾದರು.

ಪದಚ್ಯುತಿಯ ವಿಚಾರಣೆ ನಡೆಯುತ್ತಿದ್ದಂತೆಯೇ ಕ್ಯಾಸ್ಟಿಲ್ಲೋ ವಿರುದ್ಧ ಭಾರಿ ಪ್ರಮಾಣದ ಜನಾಂಗೀಯವಾದಿ ಅಪಪ್ರಚಾರ ನಡೆಸಲಾಯಿತು. ಅವರನ್ನು ಪಕ್ಷಪಾತಿ ಮತ್ತು ಭ್ರಷ್ಟ ಎಂದು ಬಿಂಬಿಸಲಾಯಿತು. ತನ್ನನ್ನು ತಟಸ್ಥ ಎಂದು ಬಿಂಬಿಸಲು ಅವರು ಎಡಪಂಥೀಯ ’ಫ್ರೀ ಪೆರು’ ಪಾರ್ಟಿಯನ್ನು ಬಿಟ್ಟು ಸ್ವತಂತ್ರವಾಗಿ ನಾಯಕತ್ವ ವಹಿಸಲು ನಿರ್ಧರಿಸಿದರು. ಇದು ಅವರನ್ನು ರಾಜಕೀಯವಾಗಿ ಒಬ್ಬಂಟಿ ಮಾಡಿ, ಡಿಸೆಂಬರ್‌ನಲ್ಲಿ ನಡೆದ ಇನ್ನೊಂದು ಪದಚ್ಯುತಿ ಯತ್ನದ ವೇಳೆ ದುರ್ಬಲರನ್ನಾಗಿ ಮಾಡಿತು. ಮೂರನೇ ಪದಚ್ಯುತಿಯ ವೇಳೆ ಅವರು ಕಾಂಗ್ರೆಸ್‌ಅನ್ನು ವಿಸರ್ಜಿಸಲು ಯತ್ನಿಸಿದರಾದರೂ, ಅದು ಪೆರುವಿನ ಆಧ್ಯಕ್ಷತೆಯಿಂದ ಅವರ ಪತನಕ್ಕೆ ಕಾರಣವಾಯಿತು.

ಪತನಕ್ಕೆ ಕಾರಣ

ಪೆರುವಿನ ರಾಜಕಾರಣಕ್ಕೆ ಆಮೂಲಾಗ್ರ ಬದಲಾವಣೆ ತರುವ ಭರವಸೆ ನೀಡಿದ್ದ ಕ್ಯಾಸ್ಟಿಲ್ಲೋ ರಾಜಕಾರಣಕ್ಕೆ ಹೊರಗಿನವರು. ಅವರು ಫುಜಿಮೊರಿಯ ಬಲಪಂಥೀಯ ಸಂವಿಧಾನವನ್ನು ಕಿತ್ತುಹಾಕುವ ಭರವಸೆ ನೀಡಿದ್ದರು. ಅದರೆ, ಹೊರಗಿನವರಾಗಿ ಅವರ ಸ್ಥಾನಮಾನ ಅವರನ್ನು ದುರ್ಬಲರನ್ನಾಗಿ ಮಾಡಿತು. ಅದಲ್ಲದೇ ಪೆರುವಿನ ಸಂವಿಧಾನವು ಪದಚ್ಯುತಿಯನ್ನು ತೀರಾ ಸುಲಭಗೊಳಿಸುವ ಮೂಲಕ, ಅಧ್ಯಕ್ಷತೆಯನ್ನು ತೀರಾ ದುರ್ಬಲ ಹುದ್ದೆಯನ್ನಾಗಿ ಮಾಡಿದೆ. ಹೊರಗಿನವರಾಗಿ ಕ್ಯಾಸ್ಟಿಲ್ಲೋ ಕಾಂಗ್ರೆಸ್ಸಿನ ಒಳಗೆ ತನ್ನ ವಿರುದ್ಧ ಹಗೆತನವಿರುವ ಪ್ರತಿಷ್ಠಿತ ವರ್ಗದ ಜೊತೆಗೆ ಕೆಲಸ ಮಾಡಬೇಕಾಯಿತು. ಪೆರುವಿನ ಕಾಂಗ್ರೆಸ್ಸಿನ ಬಹುತೇಕ ಬಲಪಂಥೀಯ ಸದಸ್ಯರು ಮೊದಲಿನಿಂದಲೂ ಅವರ ವಿರುದ್ಧ ಕೆಲಸ ಮಾಡುವ ಶಪಥ ಮಾಡಿದ್ದರು. ಬಲಪಂಥೀಯ ಸದಸ್ಯರ ಬೆಂಬಲ ಗಳಿಸಿಕೊಳ್ಳುವ ಧಾವಂತದಲ್ಲಿ ಕ್ಯಾಸ್ಟಿಲ್ಲೋ ಎಡಪಂಥದ ಸದಸ್ಯರನ್ನೂ ದೂರಮಾಡಿದಂತಾಯಿತು. ಕಾಂಗ್ರಸ್ಸಿನಲ್ಲಿ ವಾದವಿವಾದಗಳು ಭುಗಿಲೇಳುತ್ತಿರುವಾಗ ಅವರ ವಿರುದ್ಧ ಹೀನವಾದ ಜನಾಂಗೀಯವಾದಿ ಅಪಪ್ರಚಾರವನ್ನು ನಡೆಸಲಾಯಿತು. ಈ ಅಪಪ್ರಚಾರ ಅಭಿಯಾನದ ಕೇಂದ್ರವು ಅವರ ಬಡತನದ ಮತ್ತು ಮೂಲನಿವಾಸಿ ಹಿನ್ನೆಲೆಯಾಗಿತ್ತು.

ಕ್ಯಾಸ್ಟಿಲ್ಲೋಗೆ ಬೆಂಬಲ

ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಇತರ ಲ್ಯಾಟಿನ್ ಅಮೆರಿಕನ್ ದೇಶಗಳ ಬೆಂಬಲ ಕ್ಯಾಸ್ಟಿಲ್ಲೋಗೆ ಬಲ ತುಂಬಿವೆ. ಪ್ರತಿಭಟನೆಗಳಿಗೆ ಸರಕಾರದ ಪ್ರತಿಕ್ರಿಯೆ ತೀರಾ ಹಿಂಸಾತ್ಮಕವಾಗಿತ್ತು. ಪೆರುವಿನ ಸಶಸ್ತ್ರ ಪಡೆಗಳು ಅತ್ಯಂತ ಕ್ರೂರವಾಗಿದ್ದು, ಪ್ರತಿಭಟನಕಾರರು ಮಾತ್ರವಲ್ಲದೇ, ಕೆಲವು ಸಲ ಪತ್ರಕರ್ತರನ್ನೂ ದಮನಿಸಿವೆ. ಇದು ಪ್ರತಿಭಟನೆಯ ಕಾವನ್ನು ಹೆಚ್ಚಿಸಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...