ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ರಾಜ್ಯಪಾಲರನ್ನು ತನ್ನ ಬಡ್ತಿ ಕುರಿತು ಚರ್ಚಿಸಲು ಭೇಟಿಯಾದಾಗ ಅವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಈ ಬಗ್ಗೆ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೊದಲು ರಾಜಭವನ ಪೊಲೀಸ್ ಔಟ್‌ಪೋಸ್ಟ್‌ಗೆ ದೂರು ನೀಡಿದ್ದಳು ಎಂದು ಮೂಲಗಳು ತಿಳಿಸಿವೆ. ದೂರನ್ನು ಸ್ವೀಕರಿಸಿದ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ವಿಭಾಗದ ಉಪ ಆಯುಕ್ತೆ ಇಂದಿರಾ ಮುಖರ್ಜಿ, ನಾವು ದೂರು ಸ್ವೀಕರಿಸಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ. ಕಾನೂನು ತಜ್ಞರೊಂದಿಗೆ ಈ ವಿಷಯದ ಬಗ್ಗೆ ಸಮಾಲೋಚಿಸುತ್ತಿದ್ದೇವೆ. ಮಹಿಳೆಯ ಆರೋಪದ ಪ್ರಕಾರ, ರಾಜಭವನದಲ್ಲಿ ಆಕೆಗೆ ಕಿರುಕುಳ ನೀಡಲಾಗಿದೆ ಎಂದು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪದ ಬೆನ್ನಲ್ಲಿ ಬಂಗಾಳದ ರಾಜ್ಯಪಾಲ ಆನಂದ ಬೋಸ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಸತ್ಯಕ್ಕೆ ಜಯ ಸಿಗುತ್ತದೆ. ಈ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ. ಯಾರಾದರೂ ನನ್ನನ್ನು ನಿಂದಿಸುವ ಮೂಲಕ ಚುನಾವಣಾ ಲಾಭಗಳನ್ನು ಪಡೆಯಲು ಬಯಸಿದರೆ, ದೇವರು ಅವರನ್ನು ಆಶೀರ್ವದಿಸಲಿ. ಆದರೆ ಭ್ರಷ್ಟಾಚಾರ ಮತ್ತು ಬಂಗಾಳದಲ್ಲಿನ ಹಿಂಸಾಚಾರದ ವಿರುದ್ಧ ನನ್ನ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯಪಾಲರ ನಿವಾಸದ ಮೂಲಗಳ ಪ್ರಕಾರ, ಮಹಿಳಾ ಉದ್ಯೋಗಿ, ರಾಜಭವನದ ಉದ್ಯೋಗಿಯೂ ಆಗಿರುವ ತನ್ನ ಗೆಳೆಯನ ಸಹಾಯದಿಂದ ಜನರು ಭಾರತದ ಚುನಾವಣಾ ಆಯೋಗಕ್ಕೆ ಕಳುಹಿಸುತ್ತಿದ್ದ ದೂರುಗಳನ್ನು ತಡೆಯುತ್ತಿದ್ದರು. ಈ ಬಗ್ಗೆ ಮಹಿಳೆಗೆ ತರಾಟೆಗೆ ತೆಗೆದುಕೊಂಡಾಗ ಅವರು ಹೊರಗೆ ಹೋಗಿ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಾರೆ ಎಂದು ಹೇಳಿದೆ.
ಸಾಂವಿಧಾನಿಕ ತಜ್ಞರ ಪ್ರಕಾರ, ರಾಜ್ಯಪಾಲರು ಅಧಿಕಾರದಲ್ಲಿರುವಾಗ ಸಂವಿಧಾನದ 361ನೇ ವಿಧಿಯ ಅಡಿಯಲ್ಲಿ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳಿಂದ ವಿನಾಯಿತಿ ಪಡೆಯುತ್ತಾರೆ. ಈ ಘಟನೆಯು ಪ.ಬಂಗಾಳದಲ್ಲಿ ರಾಜಕೀಯ ಸಂಚಲನವನ್ನು ಉಂಟುಮಾಡಿದೆ.
ಆರೋಪಗಳನ್ನು ಹೊರಿಸಿದ ಮಹಿಳೆಯನ್ನು ಬೋಸ್ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಟಿಎಂಸಿಯ ಹಿರಿಯ ನಾಯಕರು ಇಂದು ಸಂಜೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ತಿಳಿಸಿದ್ದಾರೆ. ಗವರ್ನರ್ ಲೈಂಗಿಕ ಕಿರುಕುಳದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ನಾವು ಯಾವ ರೀತಿಯ ರಾಜ್ಯದಲ್ಲಿ ಇದ್ದೇವೆ ಎಂದು ರಾಜ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಹೇಳಿದ್ದಾರೆ.
ಬಂಗಾಳ ಗವರ್ನರ್ ಸಿವಿ ಆನಂದ ಬೋಸ್ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಎಷ್ಟು ಭಯಾನಕವಾಗಿದೆ. ರಾಜ್ಯಪಾಲರನ್ನು ಭೇಟಿಗೆ ಹೋದಾಗ ತನಗೆ ಕಿರುಕುಳ ನೀಡಲಾಯಿತು ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ ಎಂದು ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಸ್ ಹೇಳಿದ್ದಾರೆ .
ಈ ಕುರಿತು ಬಿಜೆಪಿ ಪ್ರತಿಕ್ರಿಯಿಸಿದ್ದು, ಇದು ಟಿಎಂಸಿಯ ಪಿತೂರಿಯೇ ಅಥವಾ ಇದರಲ್ಲಿ ಸತ್ಯಾಂಶವಿದೆಯೇ ಎಂಬುದನ್ನು ನೋಡಬೇಕು. ಎಸ್‌ಎಸ್‌ಸಿ ಹಗರಣದ ಹಿನ್ನೆಲೆ ಟಿಎಂಸಿ ರಾಜಕೀಯವಾಗಿ ಮೂಲೆಗುಂಪಾಗಿದೆ ಮತ್ತು ಉಸಿರಾಟಕ್ಕಾಗಿ ಈಗ ಜಾಗವನ್ನು ಹುಡುಕುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ಇದು ಟಿಎಂಸಿಯ ಪಿತೂರಿಯೇ ಅಥವಾ ಅದರಲ್ಲಿ ಏನಾದರೂ ಸತ್ಯವಿದೆಯೇ ಎಂದು ನೋಡಬೇಕಾಗಿದೆ. ಇದು ಪಿತೂರಿ ಎಂದಾದರೆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು, ನಿಜವೆಂದು ಕಂಡುಬಂದರೆ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
“Truth shall triumph. I refuse to be cowed down by engineered narratives. If anybody wants some election benefits by maligning me, God Bless them. But they cannot stop my fight against corruption and violence in Bengal.”
— Raj Bhavan Kolkata (@BengalGovernor) May 2, 2024
ಇದನ್ನು ಓದಿ: ನಿರೀಕ್ಷಣಾ ಜಾಮೀನು ಕೋರಿ ಹೆಚ್.ಡಿ ರೇವಣ್ಣ ಅರ್ಜಿ: ಎಸ್‌ಐಟಿಗೆ ಕೋರ್ಟ್ ನೋಟಿಸ್


