Homeಮುಖಪುಟತಾಳಿ, ರಾಖಿಗಳ ನಡುವೆ ಕಳೆದುಹೋಗುತ್ತವೆ ಹೆಣ್ಣಿನ ಘನತೆ ಮತ್ತು ಹಕ್ಕುಗಳು!

ತಾಳಿ, ರಾಖಿಗಳ ನಡುವೆ ಕಳೆದುಹೋಗುತ್ತವೆ ಹೆಣ್ಣಿನ ಘನತೆ ಮತ್ತು ಹಕ್ಕುಗಳು!

ಗುಜರಾತಿನಲ್ಲಿ ನೀರು ಕೇಳಿದ್ದಳೆಂದು ಶಾಸಕನೊಬ್ಬ ಮಹಿಳೆಯ ಮೇಲೆ ಅಮಾನವೀಯ ಥಳಿಸುವ ವಿಡಿಯೊ ವೈರಲ್ ಆಗಿತ್ತು. ಆದರೆ ಈಗ ಅದೇ ಮಹಿಳೆ ಆತನ ಕೈಗೆ ರಾಖೀ ಕಟ್ಟಿ ರಾಜೀ ಮಾಡಿಕೊಳ್ಳುವಂತೆ ಮಾಡಲಾಗಿದೆ. ಅಂದರೆ ಥಳಿಸಿದವೇ ರಕ್ಷಕನೆಂದು ಬಿಂಬಿಸುವ ಪರಿ ಏನನ್ನು ಸೂಚಿಸುತ್ತದೆ?

- Advertisement -
- Advertisement -

| ಮಲ್ಲಿಗೆ ಸಿರಿಮನೆ |

ಮಹಿಳೆಯರ ಮೇಲೆ ಅಥವಾ ಇನ್ನಿತರ ಶೋಷಿತರ ಮೇಲೆ ನಡೆಯುವ ದೌರ್ಜನ್ಯದ ಘಟನೆಗಳನ್ನು ಅನ್ಯಾಯದ ವಿರುದ್ಧದ ಹೋರಾಟದ ರೂಪ ಪಡೆಯದಂತೆ ತಡೆಯುವ ವಿಧಾನವನ್ನು ನಮ್ಮ ಶ್ರೇಣೀಕೃತ ಸಮಾಜ ವ್ಯವಸ್ಥೆ ಗಟ್ಟಿಯಾಗಿ ರೂಪಿಸಿಕೊಂಡಿದೆ. ತನ್ನ ಸ್ಥಾಪಿತ ಸಿದ್ಧ ಮಾದರಿಯೊಳಗೇ ಆ ದೌರ್ಜನ್ಯವನ್ನೂ ಅದಕ್ಕೆ ಬಲಿಯಾದವರನ್ನೂ ಸೆಳೆದುಕೊಂಡು, ಅರಗಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿದೆ.

ಹೆಣ್ಣುಮಕ್ಕಳ ಮೇಲೆ ಯಾರಾದರೊಬ್ಬ ದುಷ್ಟ ಅತ್ಯಾಚಾರ ಎಸಗಿದರೆ, ಆತನ ಕೃತ್ಯವನ್ನು ಬಯಲಿಗೆಳೆದು ಶಿಕ್ಷಿಸುವ ಬದಲು, ಶೀಲ, ಮಾನ, ಮರ್ಯಾದೆಗಳ ಹೆಸರಿನಲ್ಲಿ ಆ ಹೆಣ್ಣುಮಗಳಿಗೆ ಆತನ ಕೈಯ್ಯಲ್ಲೇ ತಾಳಿ ಕಟ್ಟಿಸಲಾಗುತ್ತದೆ. ಆತನೋ, ತಾನೇನೋ ದೊಡ್ಡ ತ್ಯಾಗ ಮಾಡಿ ಆಕೆಗೆ ‘ಬಾಳು’ ಕೊಡುತ್ತಿದ್ದೇನೆಂಬ ಅಹಂನಲ್ಲಿ ತಾಳಿಕಟ್ಟುತ್ತಾನೆ. ಅಸಹನೀಯವಾದ ಕ್ರೌರ್ಯಕ್ಕೆ ತುತ್ತಾಗಿದ್ದು ಮಾತ್ರವಲ್ಲದೆ ಹೆಣ್ಣುಮಕ್ಕಳು ಜೀವನಪಯರ್ಂತ ಅದರ ನೆನಪು ಮತ್ತು ನೆರಳಿನಲ್ಲೇ ಕೊರಗುತ್ತಾ ಬದುಕು ಸವೆಸಬೇಕಾಗುತ್ತದೆ. ಆದರೆ, ಸಂಪ್ರದಾಯನಿಷ್ಠ ಮನಸ್ಥಿತಿ, ಕಟ್ಟುಪಾಡುಗಳ ಕಬಂಧ ಬಾಹುಗಳು ಎಷ್ಟು ಬಲವಾಗಿವೆಯೆಂದರೆ ಇದನ್ನು ವಿರೋಧಿಸುವ ಮಾನಸಿಕ ಸ್ಥೈರ್ಯವೂ ಮಹಿಳಾ ಸಮುದಾಯಕ್ಕೆ ದಕ್ಕುವುದು ಕಷ್ಟಸಾಧ್ಯ!

ಅತ್ಯಾಚಾರದ ಪ್ರಕರಣ ಅಲ್ಲದಿದ್ದರೂ, ಇಂತಹದ್ದೇ ಕಟ್ಟುಪಾಡಿನ ಕಪಿಮುಷ್ಠಿಯೊಳಕ್ಕೆ ಮಹಿಳಾ ಹಕ್ಕುಗಳನ್ನು ಸೆಳೆದುಕೊಳ್ಳುವಂತಹ ಘಟನೆಯೊಂದು ಗುಜರಾತ್‍ನಿಂದ ವರದಿಯಾಗಿದೆ. ಗುಜರಾತ್‍ನ ಅಹಮದಾಬಾದ್‍ನ ನರೋಡಾ ವಿಧಾನಸಭಾ ಕ್ಷೇತ್ರದ ಶಾಸಕ ಬಲರಾಮ್ ತವಾನಿ ಮತ್ತು ಆತನ ಸಹೋದರ ಅಲ್ಲಿನ ಕಾರ್ಪೊರೇಟರ್ ಕಿಶೋರ್ ತವಾನಿ ಇಬ್ಬರೂ ಸೇರಿ, ಸ್ಥಳೀಯ ಎನ್‍ಸಿಪಿ ನಾಯಕಿ ನೀತು ತೇಜ್ವಾನಿ ಮೇಲೆ ಸಾರ್ವಜನಿಕವಾಗಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ; ಅಮಾನುಷವಾಗಿ ನೆಲಕ್ಕೆ ತಳ್ಳಿ ಒದ್ದು ಹಾಕಿ ಸ್ಟಿಕ್‍ಗಳಿಂದ ಥಳಿಸಿದ್ದಾರೆ; ಇದರ ಮೇಲೆ ಗಂಭೀರವಾದ ಕಾನೂನು ಕ್ರಮ ನಡೆಯಬೇಕಿತ್ತು; ಅದರ ಬದಲು ಪತ್ರಿಕಾ ಗೋಷ್ಠಿಯಲ್ಲಿ ನೀತು ತೇಜ್ವಾನಿ ಕೈಯ್ಯಲ್ಲಿ ಬಲರಾಮ್ ತವಾನಿಗೆ ‘ರಾಖಿ ಕಟ್ಟಿಸುವ’ ಮೂಲಕ ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ!! ಆ ಮೂಲಕ, ಆಕ್ರಮಣ ನಡೆಸಿದವನ ಕೈಗೇ ದಾಳಿಗೆ ತುತ್ತಾದವಳನ್ನು ‘ರಕ್ಷಿಸುವ ಜವಾಬ್ದಾರಿ’ ನೀಡಲಾಗಿದೆ!?

ನಡೆದದ್ದಿಷ್ಟು

ನರೋಡದ ಎನ್‍ಸಿಪಿ ನಾಯಕಿ ನೀತು ಅವರ ಮನೆಯ ಹತ್ತಿರ ಒಂದಷ್ಟು ಹೆಣ್ಣುಮಕ್ಕಳು ನೀರಿನ ಸಮಸ್ಯೆ ಹೇಳಿಕೊಂಡು ಬಂದಿದ್ದಾರೆ. ಹಲವು ದಿನಗಳಿಂದ ತಮ್ಮ ಮನೆಗಳಿಗೆ ನೀರಿನ ಸಂಪರ್ಕ ಕಡಿತಗೊಂಡಿದ್ದು, ನೀರಿನ ತೊಂದರೆ ತೀವ್ರವಾಗಿದೆಯೆಂದೂ, ಆ ಪ್ರದೇಶದ ಮಹಿಳಾ ನಾಯಕಿಯಾದ ನೀತು ಈ ಬಗ್ಗೆ ಏನಾದರೂ ಮಾಡಿ ಸಮಸ್ಯೆ ಪರಿಹರಿಸಬೇಕೆಂದೂ ಕೇಳಿದ್ದಾರೆ. ಅದಕ್ಕೆ ಸ್ಪಂದಿಸಿದ ನೀತು ತೆಜ್ವಾನಿಯವರು, ಸ್ಥಳೀಯ ಕಾರ್ಪೊರೇಟರ್ ಕಿಶೋರ್ ತವಾನಿಯನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಲು ಈ ಹೆಣ್ಣುಮಕ್ಕಳನ್ನೂ ಕರೆದುಕೊಂಡು ಹೋಗಿದ್ದಾರೆ.

ನಿತು ತೇಜ್ವಾನಿ, ಚಿತ್ರ ಕೃಪೆ: ಎ.ಎನ್.ಐ

ಆದರೆ, ಸ್ಥಳೀಯ ಜನಪ್ರತಿನಿಧಿಯಾದ ಕಿಶೋರ್ ತವಾನಿ (ನರೋಡಾದ ಎಂಎಲ್‍ಎ ಬಲರಾಮ್ ತವಾನಿಯ ಸಹೋದರ), ಹೆಣ್ಣುಮಕ್ಕಳ ಮಾತನ್ನೂ ಪೂರ್ತಿ ಕೇಳದೆಯೇ ನೀತು ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅತ್ಯಂತ ಅವಾಚ್ಯವಾಗಿ ನಿಂದಿಸುತ್ತಾ ಅಮಾನುಷವಾಗಿ ನೀತು, ಆಕೆಯ ಪತಿ ಮತ್ತು ಜೊತೆಗೆ ಬಂದಿದ್ದ ಮಹಿಳೆಯರ ಮೇಲೆ ದೈಹಿಕ ಹಲ್ಲೆ ನಡೆಸಿದ ಕಿಶೋರ್ ಮೇಲೆ ಇವರುಗಳು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

ಇದರಿಂದ ಆಕ್ರೋಶಗೊಂಡ ನೀತು ತೇಜ್ವಾನಿ ಮತ್ತು ಸಂಗಡಿಗರು, ಕಾರ್ಪೊರೇಟರ್‍ನ ಸಹೋದರನೇ ಆದ ಎಂಎಲ್‍ಎಯನ್ನು ಭೇಟಿಯಾಗಿ ನ್ಯಾಯ ಕೇಳಲಿಕ್ಕೆಂದು ಭಾನುವಾರ ಬೆಳಿಗ್ಗೆ ಸ್ಥಳೀಯ ಬಿಜೆಪಿ ಕಛೇರಿಗೆ ಹೋಗಿದ್ದಾರೆ. ಎಂಎಲ್‍ಎ ಇಲ್ಲದ್ದರಿಂದ ಕಾಯುತ್ತಿದ್ದಾಗ, ಕಛೇರಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಉದ್ಧಟ ನಡವಳಿಕೆಯಿಂದ ರೋಸಿ ಹೋಗಿ, ಕಿಶೋರ್ ವಿರುದ್ಧ ನೀತು ಮತ್ತು ಇತರ ಮಹಿಳೆಯರು ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಎಂಎಲ್‍ಎ ಬಲರಾಮ್ ಮತ್ತು ಆತನ ಸಂಗಡಿಗರು ಏಕಾಏಕಿ ನೀತು ಅವರ ಮುಖಕ್ಕೆ ಹೊಡೆದು ಅವರನ್ನು ನೆಲಕ್ಕೆ ಕೆಡವಿದ್ದಲ್ಲದೆ ಕಾಲಿನಿಂದ ಪದೇ ಪದೇ ಬಲವಾಗಿ ಒದ್ದಿದ್ದಾರೆ. ನಂತರ ಹಾಕಿ ಸ್ಟಿಕ್‍ಗಳನ್ನು ತರಿಸಿಕೊಂಡು ಕಾಲುಗಳನ್ನು ಥಳಿಸಿದ್ದಾರೆ. ಇವೆಲ್ಲವನ್ನೂ ನೀತು ಅವರ ಪತಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಯಾವಾಗ ನೀತು ಅವರನ್ನು ಸ್ಟಿಕ್‍ಗಳಿಂದ ಥಳಿಸಲಾರಂಭಿಸಿದರೋ ಅವರನ್ನು ಬಿಡಿಸಿಕೊಳ್ಳಲೆಂದು ಮುನ್ನುಗ್ಗಿದ ಆಕೆಯ ಪತಿಯನ್ನು ಕೂಡಾ ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ. ಈ ಬಗ್ಗೆ ನೀತು ಪೊಲೀಸ್ ಠಾಣೆಯಲ್ಲಿ ಎಂಎಲ್‍ಎ ಬಲರಾಮ್ ತವಾಣಿ ವಿರುದ್ಧ ದೂರು ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ, ಪತ್ರಿಕಾ ಗೋಷ್ಠಿ ನಡೆಸಿದ ಶಾಸಕ ತವಾನಿ, ಮೊದಲಿಗೆ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾನೆ, ಆದರೆ ನಂತರ ಇದು ಉದ್ವಿಗ್ನ ಮನಸ್ಥಿತಿಯಲ್ಲಿ ಆದ ಘಟನೆ, ಅದಕ್ಕಾಗಿ ಕ್ಷಮೆ ಕೋರುವುದಾಗಿಯೂ ಹೇಳಿದ್ದಾನೆ. ಅಂದರೆ, ತಾನು ಆಕ್ರಮಣ ನಡೆಸಿದ್ದು ನಿಜವೆಂದು ಮಾಧ್ಯಮಗಳ ಮುಂದೆಯೇ ಒಪ್ಪಿಕೊಂಡಿದ್ದಾನೆ. ಅಷ್ಟಾದರೂ ಗುಜರಾತಿನ ಕಾನೂನು ಪರಿಪಾಲಕರು ಕಣ್ಣು ಮುಚ್ಚಿಕೊಂಡು ಸುಮ್ಮನೆ ಕೂತಿದ್ದಾರೆ. ರಾಜ್ಯ ಬಿಜೆಪಿ ಮುಖಂಡರು ತಮ್ಮ ಪಕ್ಷದ ಶಾಸಕನ ಕೃತ್ಯವನ್ನು ಖಂಡಿಸುವ ಅನಿವಾರ್ಯತೆ ಬಂದಿದೆ. ಈ ಹಂತದಲ್ಲಿ ಆಘಾತಕಾರಿ ರೀತಿಯಲ್ಲಿ ತಕ್ಷಣದಲ್ಲೇ ಒಂದು ಸಾರ್ವಜನಿಕ ಸಭೆಯನ್ನು ಏರ್ಪಡಿಸಿದ ಶಾಸಕ, ಆ ಸಭೆಯಲ್ಲಿ ತನ್ನಿಂದ ಹಲ್ಲೆಗೊಳಗಾಗ ನೀತು ತವಾನಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ ಮತ್ತು ಆಕೆ ತನ್ನ ಸಹೋದರಿಯಿದ್ದಂತೆ, ಆಕೆಯ ರಕ್ಷಣೆ ತನ್ನ ಹೊಣೆಯೆಂದು ಭಾಷಣ ಕೊಡುತ್ತಾನೆ!!!

ರಾಖೀ ಕಟ್ಟುತ್ತಿರುವ ದೃಶ್ಯ

ಅದೇ ರೀತಿ, ಅದೇ ದಿನ ಡೆಹ್ರಾಡೂನ್‍ನ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ವಿಚಾರದಲ್ಲೂ ಸಾರಾಸಗಟು ಕಾನೂನು ಉಲ್ಲಂಘನೆ ನಡೆದಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಮೇಲ್ಜಾತಿ ಗಂಡಸೊಬ್ಬನಿಂದ ಅತ್ಯಾಚಾರಕ್ಕೊಳಗಾಗಿದ್ದ, ಡೆಹ್ರಾಡೂನ್‍ನ ತೆಹರಿ ಜಿಲ್ಲೆಯ 9 ವರ್ಷದ ದಲಿತ ಬಾಲಕಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಆರೋಪಿಯೂ ಇದ್ದ ಅದೇ ಪೊಲೀಸ್ ಜೀಪಿನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.

ಹೀಗೆ ಅಪ್ರಾಪ್ತ ಸಂತ್ರಸ್ತೆಯರನ್ನು ಆರೋಪಿಯ ಕೈಯಳತೆಗೆ ನಿಲುವುಕುವಂತೆ ಸಿಲುಕಿಸಬಾರದೆಂಬ ಸ್ಪಷ್ಟವಾದ ನಿರ್ದೇಶನಗಳನ್ನು ಮಕ್ಕಳ ರಕ್ಷಣೆಗಿರುವ ಪೊಕ್ಸೋ ಕಾಯ್ದೆ ನೀಡಿದೆಯಾದರೂ, ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ, ಪೊಲೀಸರೇ ಹೀಗೆ ನಡೆದುಕೊಳ್ಳುತ್ತಾರೆ. ಜೀಪಿನಲ್ಲಿ ಏನು ನಡೆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸುವ ಹೊತ್ತಿಗೆ ತಮ್ಮ ಮಗಳು ಮಾನಸಿಕವಾಗಿ ಅತ್ಯಂತ ಕ್ಷೋಭೆಗೊಳಗಾಗಿದ್ದಳು, ಅದರಿಂದ ಆಕೆಗೆ ಸರಿಯಾಗಿ ಹೇಳಿಕೆ ದಾಖಲಿಸಲೂ ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆಯ ಪೋಷಕರು ನೊಂದು ನುಡಿದಿದ್ದಾರೆ.

ಇದೆಲ್ಲವೂ, ಕಾನೂನಿನ ನೆರಳಿನಲ್ಲೇ ನಡೆದು ಮುಗಿದು ಹೋಗುತ್ತದೆ!? ದಾಳಿ ಮಾಡಿದವರು ನೊಂದವರ ರಕ್ಷಕರಾಗಿ ಪ್ರೊಮೋಷನ್ ದೊರಕಿಸಿಕೊಳ್ಳುವ ಈ ವ್ಯವಸ್ಥೆಯಲ್ಲಿ ಕಾನೂನುಗಳಿಗೆ ಅರ್ಥವಾದರೂ ಏನಿದೆ?
ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯದ ಬದಲು, ತಮ್ಮನ್ನು ತುಳಿದವರಿಂದಲೇ ‘ತಾಳಿ ಭಾಗ್ಯ’ಗಳು, ‘ರಾಖಿ ಭಾಗ್ಯ’ಗಳು ದೊರಕಿಸಲ್ಪಡುವ ಈ ವ್ಯವಸ್ಥೆಗೆ ಒಂದು ಧಿಕ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...