ಕೊರೋನಾ ಎರಡನೇ ಅಲೆ ಇಡೀ ದೇಶಕ್ಕೆ ದೊಡ್ಡ ಪೆಟ್ಟು ನೀಡಿತ್ತು. ಕೋವಿಡ್‌ನಿಂದಾಗಿ ಸಾಕಷ್ಟು ಸಾವು-ನೋವುಗಳು ಉಂಟಾದವು. ಲಕ್ಷಾಂತರ ಜನರು ಕೆಲಸ ಕಳೆದುಕೊಂಡು, ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಯಿತು. ಈ ಸಂಕಷ್ಟದ ಕಾಲದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ, ಕೌಟುಂಬಿಕ ದೌರ್ಜನ್ಯಗಳ ಪ್ರಮಾಣ ಹೆಚ್ಚಾದವು. ಮಹಿಳೆಯರು ಮಾನಸಿಕ ಒತ್ತಡವನ್ನು ಅನುಭವಿಸಿದರು.
ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದ ಒತ್ತಡಗಳು
ಅಸಂಘಟಿತ ಮತ್ತು ಅನೌಪಚಾರಿಕ ವಲಯಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ಕೋವಿಡ್ ಗಂಭೀರ ಪರಿಣಾಮ ಉಂಟುಮಾಡಿತು. ಅಸಂಘಟಿತ ವಲಯದಲ್ಲಿ ಮನೆಕೆಲಸ, ಕಟ್ಟಡ ನಿರ್ಮಾಣ ಸೇರಿದಂತೆ ಗಾರ್ಮೆಂರ್ಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿಕೊಂಡರೆ ಅನೌಪಚಾರಿಕ ವಲಯದಲ್ಲಿ ಹೋಟೆಲ್‌ಗಳು, ಮಾಲ್‌ಗಳಲ್ಲಿ ಕೆಲಸ ಮಾಡುವವರು, ರಸ್ತೆ ಬದಿಯಲ್ಲಿ ಹೂ ಕಟ್ಟಿ ಮಾರುವವರು, ಸಂತೆಗಳಲ್ಲಿ ದೇವಸ್ಥಾನದ ಆವರಣದಲ್ಲಿ ಬೀದಿಯಲ್ಲಿ ಬಾಚಣಿಗೆ ಮತ್ತಿತ್ತರ ಆಟಿಕೆ ವಸ್ತುಗಳನ್ನು ಮಾರಿ ಜೀವನ ಮಾಡುತ್ತಿದ್ದ ಮಹಿಳೆಯರು ಸಮಸ್ಯೆಗೆ ಸಿಲುಕಿದರು. ಇವರಿಗೆ ಯಾವುದೇ ತರಹದ ಉದ್ಯೋಗದ ಭದ್ರತೆ ಇಲ್ಲದೆ ಈ ಸಮಯದಲ್ಲಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು. ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಅವರ ಸಂಬಳದ ಅರ್ಧದಷ್ಟಾದರೂ ಸಿಕ್ಕಿದ್ದರೆ, ಈ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಂತಹವರಿಗೆ ಯಾವುದೇ ಸಂಬಳದ ಸೌಲಭ್ಯವೂ ದೊರೆಯಲಿಲ್ಲ. ಇವರನ್ನೆ ಆಧರಿಸಿ ಬದುಕುತ್ತಿರುವ ಕುಟುಂಬ ಬಡತನ ಹಸಿವು ಅನಾರೋಗ್ಯದಿಂದ ತತ್ತರಿಸುವಂತಾಯಿತು. ಅದೆಷ್ಟೋ ಅತಿಥಿ ಉಪನ್ಯಾಸಕರುಗಳು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರು.
ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ ಮತ್ತು ಅತ್ಯಾಚಾರಗಳು
ಕೊರೋನಾ ಕಾರಣದಿಂದಾಗಿ ಶಾಲಾ-ಕಾಲೇಜುಗಳು ಮುಚ್ಚಿದ್ದವು. ಇದರಿಂದಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಯಿತು. ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾದವು. ಕೊರೋನ ಸೋಂಕಿನಿಂದ ಹೆಚ್ಚು ಸಾವುಗಳಾಗುತ್ತಿದ್ದ ಸಂದರ್ಭದಲ್ಲಿ ಮನೆಯ ಹಿರಿಯರು, ಆದಷ್ಟೂ ಬೇಗ ತಮ್ಮ ಜವಾಬ್ದಾರಿಗಳನ್ನು ಕಳೆದುಕೊಳ್ಳುವ ಬರದಲ್ಲಿ ಕುಟುಂಬಸ್ಥರು ಹೆಣ್ಣು ಮಕ್ಕಳನ್ನು ಚಿಕ್ಕ ವಯಸ್ಸಿಗೆ ಮದುವೆ ಮಾಡುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ನಡೆದ ಬಾಲ್ಯ ವಿವಾಹದ ದಾಖಲೆಯನ್ನು ಈ ವರ್ಷ ದುಪ್ಪಟ್ಟಾಗಿದೆ. ಕಳೆದ ಒಂದು ವರ್ಷದಲ್ಲಿ ಮಂಡ್ಯ ಜಿಲ್ಲೆಯಲ್ಲಿ 245 ಬಾಲ್ಯ ವಿವಾಹದ ಪ್ರಕರಣಗಳು ದಾಖಲಾಗಿವೆ! ಇನ್ನೂ ರಾಜ್ಯಾದ್ಯಂತ ಮತ್ತು ಇಡೀ ದೇಶದಲ್ಲಿ ಎಷ್ಟು ಬಾಲ್ಯವಿವಾಹದ ಪ್ರಕರಣಗಳು ದಾಖಲಾಗಿರಬಹುದು ಎಂದು ಅಂದಾಜು ಮಾಡಬಹುದು!
ಕೊರೋನ ಸಂಕಷ್ಟದ ಕಾಲದಲ್ಲಿ ಮಹಿಳೆಯರು ಕುಟುಂಬ ಮತ್ತು ಮಕ್ಕಳು ಎಲ್ಲವನ್ನೂ ಜೋಪಾನ ಮಾಡುವುದರ ಜೊತೆಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ಮನುಷ್ಯಕುಲವನ್ನು ತಲೆ ತಗ್ಗಿಸುವಂತೆ ಮಾಡಿವೆ. ಇಡೀ ದೇಶದ ಜನರು ಕೊರೋನಾದಿಂದಾಗಿ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವ ಪರಿಸ್ಥಿತಿಯಲ್ಲಿಯೂ ನಿಲ್ಲದ ಮನುಷ್ಯನ ಕ್ರೌರ್ಯ, ಹಲವು ಪ್ರಕರಣಗಳಿಗೆ ಸಾಕ್ಷಿಯಾಗಿದೆ.
ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ನಡೆದ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ, ಅವರ ಕೈಗಳನ್ನು ಕಟ್ಟಿ ಬಾವಿಗೆ ಹಾಕಿ ಕೊಲೆ ಮಾಡಿರುವ ಘಟನೆ ಇತ್ತೀಚೆಗಷ್ಟೆ ನಡೆದಿದೆ. ರಾಜಸ್ಥಾನದ ಅಪ್ರಾಪ್ತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಬಿಹಾರದ ಭಾಗಲ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಗಂಡನಿಗೆ ಕೊರೋನ ಚಿಕಿತ್ಸೆ ಕೊಡಿಸುವ ಸಲುವಾಗಿ ದಾಖಲಿಸಿದ್ದ ಸಂದರ್ಭದಲ್ಲಿ ಚಿಕಿತ್ಸೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕೇಳಿದಾಗ ಆಸ್ಪತ್ರೆಯ ಅಲ್ಲಿನ ಸಿಬ್ಬಂದಿ ಆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಹಾವೇರಿ ಮೂಲದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಉತ್ತರ ಪ್ರದೇಶದ ಮಹರಾಜ್ ಗಂಜ್‌ನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಗಳು, ಕಲಬುರ್ಗಿಯಲ್ಲಿನ ಜೆಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸಂಭವಿಸಿದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ 25 ವರ್ಷದ ಮಹಿಳೆಯ ಮೇಲೆ ಅಲ್ಲಿನ ಖಾಸಗಿ ಅಂಬುಲೆನ್ಸ್ ಚಾಲಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಮಧ್ಯ ಪ್ರದೇಶದ ಮುದ್ವಾರಿ ಗ್ರಾಮದಲ್ಲಿ ಅಪ್ರಾಪ್ತೆಯಾದ ಸ್ವಂತ ಮಗಳನ್ನೆ ತಂದೆಯೇ ಅತ್ಯಾಚಾರ ಮಾಡಿರುವುದು ಮನುಷ್ಯ ಜಾತಿ ತಲೆ ತಗ್ಗಿಸುವಂತಹ ಘಟನೆ.
ಕೊರೋನ ಎರಡನೇ ಅಲೆ ದೊಡ್ಡ ಪೆಟ್ಟನ್ನು ನೀಡಿದ್ದರೂ ಜನ ತಮ್ಮ ಸಣ್ಣತನ ಕ್ರೌರ್ಯ ಹಾಗೂ ವಿಕೃತಿಗಳನ್ನು ನಿಲ್ಲಿಸದಿರುವುದು ಮಾನವನ ವರ್ತನೆಯೂ ಮೃಗಗಳನ್ನು ಮೀರಿದ್ದಾಗಿದೆ. ಇದೆಲ್ಲದರ ಜೊತೆಗೆ ಹೆಚ್ಚುತ್ತಿರುವ ದೇಶದಾದ್ಯಂತ ಮರ್ಯಾದೆಗೇಡು ಹತ್ಯೆಗಳ ಪ್ರಕರಣಗಳು ಹೆಚ್ಚುತ್ತಿವೆ. ಗ್ರಾಮೀಣ ಭಾಗದಲ್ಲಿಯೇ ಜಾತಿ ಕಾರಣಕ್ಕಾಗಿ ಇಂತಹ ಕೊಲೆಗಳು ಹೆಚ್ಚುತ್ತಿರುವುದು ಶೋಚನೀಯವಾಗಿದೆ.
ಮರ್ಯಾದಾಗೇಡು ಹತ್ಯೆ ಪ್ರಕರಣಗಳು
ಕರ್ನಾಟಕದಲ್ಲಿ ಕಳೆದ ಜೂನ್ ತಿಂಗಳಲ್ಲಿ ಮೂರು ಮರ್ಯಾದಾಗೇಡು ಹತ್ಯೆ ಪ್ರಕರಣಗಳು ದಾಖಲಾಗಿವೆ. ವಿಜಯಪುರ ಚಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನಲ್ಲಿ ಪ್ರೀತಿಸುತ್ತಿದ್ದ ಪ್ರೇಮಿಗಳನ್ನು ಯುವತಿಯ ತಂದೆ ಸೇರಿದಂತೆ ಹಲವರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮೈಸೂರಿನ ಪಿರಿಯಾಪಟ್ಟಣದಲ್ಲಿ ಮಗಳು ಅನ್ಯಜಾತಿಯವನನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣಕ್ಕೆ ತಂದೆಯೇ ಕೊಲೆ ಮಾಡಿದರೆ, ಕೊಪ್ಪಳ ಜಿಲ್ಲೆಯ ಬರಗೂರಿನಲ್ಲಿ ದಲಿತ ಯುವಕ ಶವವಾಗಿ ಕೈಸೇರಿದ. ಇಂತಹ ಹತ್ಯೆಗಳಲ್ಲಿ ಹೆಚ್ಚಾಗಿ ಬಲಿಯಾಗುವವರು ಹೆಣ್ಣುಮಕ್ಕಳೆ ಆಗಿರುತ್ತಾರೆ. ಕೆಲವೊಮ್ಮೆ ಪುರುಷರು ಮತ್ತು ಸಲಿಂಗಿಗಳು ಬಲಿಯಾಗುತ್ತಾರೆ. ಹತ್ಯೆಗಳ ಹಿಂದಿರುವ ಉದ್ದೇಶ ಒಂದೇ ಆಗಿದೆ. ಇಂತಹ ಭೀಕರ ಹತ್ಯೆಗಳಿಗೆ ಮರ್ಯಾದೆ ಎಂಬ ನಾಮಫಲಕವನ್ನು ತೊಡಿಸುವುದು ವಿಪರ್ಯಾಸ. ಇಡೀ ಸಮಾಜದ ಮರ್ಯಾದೆ ಅಡಗಿರುವುದು ಬರಿ ಹೆಣ್ಣು ಮಕ್ಕಳ ಸುತ್ತ. ಒಟ್ಟಾರೆಯಾಗಿ ಹೆಣ್ಣೆಂಬುವವಳಿಗೆ ಎಲ್ಲಾ ವಿಚಾರಗಳಲ್ಲಯೂ ಚೌಕಟ್ಟನ್ನು ಹಾಕಿ ನಿಯಂತ್ರಣ ಮಾಡಲು ಈ ಸಮಾಜ ಕಾಲದಿಂದಲೂ ನಿರತವಾಗಿದೆ. ಆಕೆಯ ಉಡುಗೆ-ತೊಡುಗೆ, ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ ಎಲ್ಲವನ್ನೂ ಹೆಚ್ಚಾಗಿ ಹೆಣ್ಣಿನ ಮೇಲೆ ಹೇರುತ್ತಾ ಅವಳನ್ನು ಇವೆಲ್ಲವುಗಳ ವಾರಸುದಾರಳಾನ್ನಾಗಿ ಮಾಡಿ ಬಂಧಿಸುತ್ತಲೇ ಬಂದಿದೆ.
ಈ ಎಲ್ಲಾ ಚೌಕಟ್ಟನ್ನು ಮೀರಿ ಹೆಣ್ಣು ತನ್ನನ್ನು ತಾನು ಎಲ್ಲರಂತೆ ಸಮಾನಳು ಎಂದು ತೊರಿಸಿ ಕೊಡುತ್ತಾ ಸಮಾನ ಬದುಕು ಕಟ್ಟಿಕೊಳ್ಳಲು ಹೊರಟಾಗ ಈ ಮೇಲಿನ ಅಂಶಗಳಾದ ಬಾಲ್ಯವಿವಾಹ, ಅತ್ಯಾಚಾರ, ದೌರ್ಜನ್ಯ, ಲೈಂಗಿಕ ಕಿರುಕುಳ, ಮರ್ಯಾದೆಗೇಡು ಹತ್ಯೆಗಳಂತಹ ಅಸ್ತ್ರಗಳಿಂದ ಅವಳನ್ನು ಬಗ್ಗುಬಡಿಯುತ್ತಾರೆ ಇಲ್ಲವೆ ಕೊಂದುಹಾಕುತ್ತಾರೆ, ಈ ಸಮಾಜದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರು ಹೇಳಿರುವ ಸಂವಿಧಾನ ಬದ್ದವಾದ ಹಕ್ಕುಗಳಾಗಲಿ, ಸ್ವಾತಂತ್ರ‍್ಯವಾಗಲಿ ಮಹಿಳೆಯರ ಪಾಲಿಗೆ ಕೈಗೆಟುಕದ ನಕ್ಷತ್ರವಾಗಿದೆ. ಇದಕ್ಕೆ ತಕ್ಕಂತೆ ಆಳುವ ಸರ್ಕಾರಗಳು ಅಪರಾಧಿಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತು ಜಾತಿ ಧರ್ಮದ ವೈರಸ್‌ಅನ್ನು ಸಮಾಜದ ತುಂಬಾ ಹರಡುತ್ತಿರುವಾಗ ಆಳುತ್ತಿರುವ ಪ್ರಭುತ್ವದ ಅಜೆಂಡಾಗಳಿಗೆ ತಕ್ಕಂತೆ ಪ್ರಜೆಗಳ ನಡವಳಿಕೆ ಜಾತಿಯ ಕ್ರೌರ್ಯ ಎಲ್ಲೆ ಮೀರುತ್ತಿದೆ.
ಕೊರೋನಾದಂತಹ ವೈರಸ್‌ನಿಂದ ಬದುಕಿ ಬಂದರೂ ಮನುಷ್ಯನ ಕ್ರೂರ ತನದಿಂದ ನಲುಗಿ ಹೋಗುತ್ತಿರುವ ಅದೆಷ್ಟೋ ಹೆಣ್ಣು ಮಕ್ಕಳ ಸಾವುಗಳು ಇಡೀ ಸಮಾಜವನ್ನೆ ನಾವು ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂಬ ಪ್ರಶ್ನೆಗಳಿಗೆ ಧ್ವನಿಯಾಗುತ್ತಿವೆ. ಉತ್ತರ ಕೊಡುವಲ್ಲಿ ಸಮಾಜ ಮತ್ತು ವ್ಯವಸ್ಥೆ ಎರಡೂ ಸೋತಿದೆ ಎಂಬುದಂತೂ ವಾಸ್ತವ.
ಸರ್ಕಾರಕ್ಕೆ ಕೊರೋನಾದ ಮೊದಲನೆಯ ಅಲೆಯ ಬಗ್ಗೆ ಯಾವುದೇ ಅಂದಾಜಿರಲಿಲ್ಲ ಅಂತ ಭಾವಿಸೋಣ. ಆದ್ದರಿಂದ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಎರಡನೇ ಅಲೆಯ ಬಗ್ಗೆ ನಿಕರವಾದ ಮಾಹಿತಿಗಳನ್ನು ತಜ್ಞರು ನೀಡಿದ್ದರೂ ಬೇಜವಾಬ್ದಾರಿತನದಿಂದ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದೆ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಬೇಕಾಯಿತು. ಎರಡನೆ ಅಲೆ ಖಚಿತತೆ ಇದ್ದಾಗ್ಯೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ತರಭೇತಿ ನೀಡಿ ನೇಮಕಾತಿ ಮಾಡಿಕೊಂಡು ಕೆಲಸಕ್ಕೆ ಸಜ್ಜುಗೊಳಿಸೋ ಗೋಜಿಗೆ ಹೋಗದೆ ಮೊದಲೆ ಇದ್ದ ಕಾರ್ಯಕರ್ತೆಯರ ಮೇಲೆ ಹೆಚ್ಚಿನ ಹೊರೆಯನ್ನು ಸರ್ಕಾರ ಹಾಕಿತ್ತು, ಇದರಿಂದ ಹಿಂದಿಗಿಂತಲೂ ಕೆಲಸದ ಒತ್ತಡಗಳೂ ಹೆಚ್ಚಾದವು, ಆಶಾ ಕಾರ್ಯಕರ್ತೆಯರು, ದಾದಿಯರು ಡಿ ದರ್ಜೆ ನೌಕರರಾಗಿ ಕೆಲಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ತಮ್ಮ ಆರೋಗ್ಯ ಕುಟುಂಬದವರ ನಿರ್ವಹಣೆ ಜೊತೆಗೆ ಕೆಲಸದ ಒತ್ತಡ ಹೆಚ್ಚಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ದಣಿದರು.
ಆಫೀಸ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ವರ್ಕ್ ಫ್ರಮ್ ಹೋಂ ಅಂತ ಆದಾಗ ಬೆಳಿಗ್ಗೆ ಮನೆ ಕೆಲಸ ಮುಗಿಸಿ ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಮನೆಯಲ್ಲಿಯೆ ಕುಳಿತು ಮನೆ ಮಕ್ಕಳು ವಯಸ್ಸಾದ ಹಿರಿಯ ನಾಗರೀಕರನ್ನು ಸಂಭಾಳಿಸಿಕೊಂಡು ಕೆಲಸ ಮಾಡುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚಿನ ಒತ್ತಡವನ್ನು ತಂದಿತ್ತು. ಶಾಲೆ ಕಾಲೇಜುಗಳಿಗೆ ಆನ್‌ಲೈನ್ ತರಗತಿಗಳನ್ನು ಮಾಡಲು ನಿರ್ಧರಿಸಿದಾಗ ಅದರ ಅನುಭವವಿಲ್ಲದ ಅದೆಷ್ಟೋ ಮಂದಿ ಶಿಕ್ಷಕರು ಅದಕ್ಕೆ ತಕ್ಕಂತೆ ಕಲಿಕೆ ಮತ್ತು ಸರಿಯಾದ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳುಲು ಮಾನಸಿಕ ಒತ್ತಡವನ್ನು ಅನುಭವಿಸಿದರು. ಅಂಗನವಾಡಿ ಕೇಂದ್ರಗಳು ಮುಚ್ಚಿದ್ದರಿಂದ ಮೊದಲೆ ಅಪೌಷ್ಟಿಕತೆಯಿಂದ ನರಳುತ್ತಿದ್ದ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಮಕ್ಕಳಿಗೆ ಚೂರುಪಾರು ಸಿಗುತ್ತಿದ್ದ ಪೌಷ್ಟಿಕಾಂಶದ ಆಹಾರವು ಇಲ್ಲವಾಯಿತು.
ಕೋವಿಡ್ ಸಂಧರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಮಾನಸಿಕವಾಗಿ ದೈಹಿಕವಾಗಿ ಒತ್ತಡ ಜಾಸ್ತಿಯಾಗಿ ಭಯ ಆತಂಕಗಳಿಂದಲೂ ಅದೆಷ್ಟೋ ಸಾವುಗಳು ಸಂಭವಿಸಿದವು. ಇನ್ನೂ ಕೊರೋನ ಲಸಿಕೆಯ ವಿಚಾರಕ್ಕೆ ಬಂದರೆ ಲಸಿಕೆ ಪ್ರಾರಂಭವಾದ ಹಂತದಲ್ಲಿ ಮೊದಲು ಹೊರಗೆ ಹೋಗಿ ದುಡಿದು ಬರುವ ಗಂಡಸರಿಗೆ ಹೆಚ್ಚಿನ ಪ್ರಾಧಾನ್ಯತೆ ಇತ್ತು ಜೊತೆಗೆ ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸುತ್ತಿರುವ, ಹೆಚ್ಚಾಗಿ ಹೊರಗೆ ಓಡಾಡುವ ಗಂಡಸರು ಲಸಿಕೆ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾದರು ಇದಾವುದರ ಸೌಲಭ್ಯಗಳು ಇಲ್ಲದ ಹಳ್ಳಿಗಾಡಿನ ಗ್ರಾಮಗಳಲ್ಲಿನ ಹೆಣ್ಣು ಮಕ್ಕಳಿಗೆ ಲಸಿಕೆ ದೊರಕಿದ್ದು ಕೆಡಿಮೆ, ಕುಟುಂಬದಲ್ಲಿಯೂ ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿರುವುದು ಲಸಿಕೆ ಹಾಕಿಸಿಕೊಳ್ಳುವ ಪ್ರಮಾಣದಲ್ಲಿ ಉಂಟಾದ ವ್ಯತ್ಯಾಸದ ಅಂಕಿ ಅಂಶಗಳಲ್ಲಿ ಹೆಚ್ಚು ಪುರುಷರದ್ದು ಮತ್ತು ಕಡಿಮೆ ಮಹಿಳೆಯರದ್ದು ಕಂಡು ಬರುತ್ತದೆ. ಜೊತೆಗೆ ಕೊರೋನ ಸಂಕಷ್ಟದ ಕಾಲದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿ ಸಂಘ ಸಂಸ್ಥೆಗಳಿಗೆ ಮರು ಪಾವತಿ ಮಾಡಲು ಸಾಧ್ಯವಾಗದೆ ಮಕ್ಕಳ ಹಸಿದ ಹೊಟ್ಟೆಯನ್ನು ತುಂಬಿಸಲಾಗದೆ ಆರೋಗ್ಯದ ಕಡೆ ಗಮನ ಕೊಡಲಾಗದೆ ಪರದಾಡುವ ಸ್ಥಿತಿಯಲ್ಲಿ ಕುಡಿತಕ್ಕೆ ದಾಸರಾಗಿರುವ ಗಂಡಸರಿಂದಲೂ ಮನೆಯಲ್ಲಿ ದೈಹಿಕವಾಗಿ ಮಾನಸಿಕವಾಗಿ ಕಿರುಕುಳಗಳು ಹೆಚ್ಚಾಗುತ್ತಿವೆ.
ಈ ಎಲ್ಲಾ ಪರಿಣಾಮಗಳು ಮಹಿಳೆಯರನ್ನು ಇನ್ನೂ ಹೆಚ್ಚು ಹೆಚ್ಚು ಬಲಿಪಶುಗಳನ್ನಾಗಿ ಮಾಡುತ್ತವೆ. ಕೊರೋನ ಎಂಬ ವೈರಸ್ನಿಂದ ಮುಕ್ತಿ ಸಿಕ್ಕಿದ್ದರು ಮಹಿಳೆಯರಿಗೆ ಈ ಮೇಲಿನ ಎಲ್ಲಾ ಸಮಸ್ಯೆಗಳು ಸರ್ವಕಾಲಕ್ಕೂ ಸಮನಾಗಿ ಹಿಂಸೆಯ ರೂಪಗಳು ಭಿನ್ನವಾಗಿ ಮುಂದೆವರೆಯತ್ತಿವೆ. ಈ ಎಲ್ಲಾ ನೋವು ಹಿಂಸೆಗಳ ಸುಳಿಯಲ್ಲಿಯೆ ಮಹಿಳೆಯರ ಬದುಕು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಅರ್ಥಕ್ಕೆ ಸಿಗದ ಪುಟಗಳ ಹಾಗೆ ಸಾಗಿ ಹೋಗುತ್ತಿದೆ.
- ಪೂರ್ಣಿಮಾ ಮಂಡ್ಯ

(ಕಳೆದ ಹತ್ತು ವರ್ಷಗಳಿಂದ ಮಹಿಳೆಯರ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಮುನ್ನಡೆ ಸಂಘಟನೆಯ ಮುಂಚೂಣಿ ಸಂಘಟಕರಲ್ಲಿ ಒಬ್ಬರು.)
ಇದನ್ನೂ ಓದಿ: ಕೊರೊನಾ ಲಾಕ್‌ಡೌನ್; ಹೆಚ್ಚುತ್ತಿರುವ ಬಡತನ ಮತ್ತು ಬಾಲ್ಯವಿವಾಹದ ರಣನರ್ತನ


