ಸಂಸದರು, ಶಾಸಕರ ವಿರುದ್ಧದ ತನಿಖೆ ವಿಳಂಬ: ತನಿಖಾ ಏಜೆನ್ಸಿಗಳಿಗೆ ಸುಪ್ರೀಂಕೋರ್ಟ್ ಛೀಮಾರಿ
PC: Mumbai Mirror

ಸಂಸದರು ಮತ್ತು ಶಾಸಕರ ವಿರುದ್ಧದ ತನಿಖೆಯಲ್ಲಿ ವಿಳಂಬವಾಗಿದೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಏಜೆನ್ಸಿಗಳಿಗೆ ಬುಧವಾರ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳು 10-15 ವರ್ಷಗಳಿಂದ ಬಾಕಿ ಉಳಿದಿವೆ. ಇವುಗಳ ಕುರಿತು ಚಾರ್ಜ್‌ಶೀಟ್‌ಗಳನ್ನು ಏಕೆ ಸಲ್ಲಿಸಿಲ್ಲ ಎಂಬುದನ್ನು ಎಜೆನ್ಸಿಗಳು ವಿವರಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಕೇಳಿದ್ದಾರೆ.

ಜಾರಿ ನಿರ್ದೇಶನಾಲಯವು ಕೇವಲ ಆಸ್ತಿಗಳನ್ನು ಮಾತ್ರ ಪಟ್ಟಿ ಮಾಡಿದೆ. ಅದು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಟೀಕಿಸಿದೆ.

“ಪ್ರಕರಣಗಳನ್ನು ಈ ರೀತಿ ಸ್ಥಗಿತಗೊಳಿಸಬೇಡಿ. ಚಾರ್ಜ್ ಶೀಟ್ ಸಲ್ಲಿಸಿ. ಜನರಿಗೆ ನ್ಯಾಯ ಒದಗಿಸಲು ತ್ವರಿತ ವಿಚಾರಣೆ ಅಗತ್ಯ” ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ರಮಣ ಆದೇಶಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರು ಎನ್‌ಡಿಎ ಪರೀಕ್ಷೆ ಬರೆಯಬಹುದು: ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು

“ನಾವು ಈ ತನಿಖಾ ಏಜೆನ್ಸಿಗಳ ವಿರುದ್ಧ ಏನನ್ನೂ ಹೇಳಲು ಬಯಸುವುದಿಲ್ಲ ಏಕೆಂದರೆ ನಾವು ಅವರನ್ನು ನಿರುತ್ಸಾಹಗೊಳಿಸಲು ಬಯಸುವುದಿಲ್ಲ. ಆದರೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಇದನ್ನು ಮಾತಾಡುವಂತೆ ಮಾಡುತ್ತಿದೆ” ಎಂದು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಸಹಾಯ ಮಾಡುತ್ತಿರುವ ವಿಜಯ್ ಹನ್ಸಾರಿಯಾ, ಒಂದು ಪ್ರಕರಣವು 2030 ರಲ್ಲಿ ಮುಗಿಯುವ ನಿರೀಕ್ಷೆಯಿದೆ ಎಂದು ಹೇಳಿ ಟೀಕಿಸಿದ್ದಾರೆ.

ತನಿಖೆ ವಿಳಂಬಕ್ಕೆ ಏಜೆನ್ಸಿಗಳು ಯಾವುದೇ ಕಾರಣ ನೀಡಿಲ್ಲ ಎಂದು ನ್ಯಾಯಮೂರ್ತಿ ರಮಣ, ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರತಿಕ್ರಿಯಿಸಿದ್ದಾರೆ.

“ನಮ್ಮಂತೆಯೇ ತನಿಖಾ ಏಜೆನ್ಸಿಗಳು ಕೂಡ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಕೇಸ್‌ಗಳು ದೊಡ್ಡದಿರಲಿ, ಸಣ್ಣದಿರಲಿ ಜನ ಸಿಬಿಐ ತನಿಖೆ ಮಾಡಲಿ ಎಂದು ಬಯಸುತ್ತಾರೆ. ಅವರಿಗೂ ನ್ಯಾಯಾಲಯಗಳಂತೆ ಹೊರೆ ಹೆಚ್ಚಾಗುತ್ತದೆ. ಆದರೂ ಕೂಡ ಕೆಲವು ಸಂದರ್ಭಗಳಲ್ಲಿ ಏಜೆನ್ಸಿಗಳು ವಿಶೇಷ ವಿಧಾನಗಳ ಮೂಲಕ ಹೋಗಬೇಕು ಮತ್ತು ಸಂಪನ್ಮೂಲಗಳ ಅಗತ್ಯವಿದೆ” ಎಂದಿದ್ದಾರೆ.

“ಆದರೆ, ನ್ಯಾಯಾಲಯಗಳು ಸಾಂಕ್ರಾಮಿಕ ರೋಗದಿಂದ ಬಾಗಿಲು ಹಾಕಿವೆ. ಆದರೆ ತನಿಖಾ ಸಂಸ್ಥೆಗಳಿಗೆ ಅಂತಹ ನಿಬಂಧನೆಗಳಿಲ್ಲ. ಅವರು ಏಕೆ ಅತ್ಯುತ್ತಮ ಪ್ರಯತ್ನ ಮಾಡುತ್ತಿಲ್ಲ..?” ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆಗಳು ‘ಗಂಭೀರ’: ಸುಪ್ರೀಂಕೋರ್ಟ್‌‌

LEAVE A REPLY

Please enter your comment!
Please enter your name here