ರಾಜ್ಯಪಾಲರು ಮಸೂದೆಗಳಿಗೆ ಅತ್ತ ಒಪ್ಪಿಗೆ ನೀಡದೆ, ಇತ್ತ ಅವುಗಳನ್ನು ಹಿಂದಿರುಗಿಸದೆ ತಮ್ಮಲ್ಲೇ ಉಳಿಸಿಕೊಂಡರೆ ಚುನಾಯಿತ ಸರ್ಕಾರ ಅವರ ‘ಇಚ್ಛೆ ಮತ್ತು ಕಲ್ಪನೆಗೆ’ ಒಳಪಡುವಂತಾಗುವುದಿಲ್ಲವೆ? ಎಂದು ಸುಪ್ರೀಂ ಕೋರ್ಟ್ ಬುಧವಾರ (ಆ.20) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಶಾಸಕಾಂಗ ಅಂಗೀಕರಿಸಿದ ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ನ ಏಪ್ರಿಲ್ 8ರ ತೀರ್ಪಿನ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಾಲಯಕ್ಕೆ ಮಾಡಿದ ಉಲ್ಲೇಖದ ಕುರಿತು ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ.ಎಸ್ ನರಸಿಂಹ ಮತ್ತು ಎ.ಎಸ್ ಚಂದೂರ್ಕರ್ ಅವರ ಪೀಠವು ವಾದಗಳನ್ನು ಆಲಿಸುತ್ತಿದೆ.
ರಾಷ್ಟ್ರಪತಿಯ ಉಲ್ಲೇಖದ ಕುರಿತು ಜುಲೈ 22ರಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಬುಧವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸಂವಿಧಾನದ 200ನೇ ವಿಧಿಯ ಪ್ರಕಾರ ಮಸೂದೆಗಳಿಗೆ ಒಪ್ಪಿಗೆ ನೀಡುವ ವಿಷಯದಲ್ಲಿ ರಾಜ್ಯಪಾಲರಿಗೆ ನಾಲ್ಕು ಆಯ್ಕೆಗಳಿವೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಮಸೂದೆಗಳಿಗೆ ಒಪ್ಪಿಗೆ ನೀಡುವುದು, ಒಪ್ಪಿಗೆಯನ್ನು ತಡೆಹಿಡಿಯುವುದು, ರಾಷ್ಟ್ರಪತಿಯ ಪರಿಗಣನೆಗೆ ಮಸೂದೆಯನ್ನು ಕಾಯ್ದಿರಿಸುವುದು ಅಥವಾ ಮಸೂದೆಯನ್ನು ವಿಧಾನಸಭೆಗೆ ಹಿಂತಿರುಗಿಸುವುದು ಈ ನಾಲ್ಕು ಆಯ್ಕೆಗಳು ಎಂದು ತುಷಾರ್ ಮೆಹ್ತಾ ಪೀಠದ ಮುಂದೆ ವಿವರಿಸಿದ್ದಾರೆ.
ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿಯುತ್ತಿರುವುದಾಗಿ ತಿಳಿಸಿದರೆ, ಮಸೂದೆ ಅಲ್ಲಿಗೆ ‘ಸತ್ತುಹೋಯಿತು’ ಎಂದರ್ಥ. ಒಪ್ಪಿಗೆಯನ್ನು ತಡೆಹಿಡಿಯಲಾಗಿದ್ದರೆ, ರಾಜ್ಯಪಾಲರು ಮಸೂದೆಯನ್ನು ಮರುಪರಿಶೀಲನೆಗಾಗಿ ವಿಧಾನಸಭೆಗೆ ಹಿಂತಿರುಗಿಸಬೇಕಾಗಿಲ್ಲ ಎಂದು ಮೆಹ್ತಾ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗವಾಯಿ, “ನಿಮ್ಮ ಪ್ರಕಾರ, ತಡೆಹಿಡಿಯುವುದು ಎಂದರೆ ಮಸೂದೆ ಅಂಗೀಕಾರವಾಗುತ್ತದೆ ಎಂದರ್ಥವೇ?” ಎಂದು ಕೇಳಿದ್ದಾರೆ. “ಮರುಪರಿಶೀಲನೆಗಾಗಿ ವಿಧಾನಸಭೆಗೆ ಹಿಂತಿರುಗಿಸದಿದ್ದರೆ ಅವರು ಅದನ್ನು ದೀರ್ಘ ಅವಧಿಯವರೆಗೆ ತಡೆ ಹಿಡಿಯಬಹುದು” ಎಂದಿದ್ದಾರೆ.
ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್, “ಸಂವಿಧಾನವೇ ರಾಜ್ಯಪಾಲರಿಗೆ ಆ ವಿವೇಚನೆಯನ್ನು ನೀಡಿದೆ” ಎಂದಿದ್ದಾರೆ.
“ಹಾಗಾದರೆ ರಾಜ್ಯಪಾಲರಿಗೆ ಸಂಪೂರ್ಣ ಅಧಿಕಾರ ನೀಡದಂತೆ ಆಗುವುದಿಲ್ಲವೇ? ಎಂದು ಮರು ಪ್ರಶ್ನೆ ಹಾಕಿದ ಮುಖ್ಯ ನ್ಯಾಯಾಧೀಶರು, “ಬಹುಮತದಿಂದ ಆಯ್ಕೆಯಾದ ಸರ್ಕಾರ ರಾಜ್ಯಪಾಲರ ಇಚ್ಛೆ ಮತ್ತು ಕಲ್ಪನೆಗೆ ಒಳಪಡುವಂತಾಗುವುದಿಲ್ಲವೆ? ಎಂದು ಕೇಳಿದ್ದಾರೆ.
ರಾಜ್ಯಪಾಲರು ಯಾವುದೇ ಸಂದರ್ಭದಲ್ಲಿ ಮಸೂದೆಯ ಕುರಿತು ತಮ್ಮ ನಿರ್ಧಾರವನ್ನು ‘ಘೋಷಿಸಬೇಕು’ ಅಥವಾ ತಿಳಿಸಬೇಕು. ಕಾರಣವನ್ನು ನೀಡದೆ ಒಪ್ಪಿಗೆಯನ್ನು ತಡೆಹಿಡಿಯಬಾರದು ಎಂದ ಹೇಳಿದ ಪೀಠ. ಇಲ್ಲಿ ‘ತಡೆಹಿಡಿಯುವಿಕೆ’ ಪ್ರಮುಖ ಅಂಶವಾಗಿದೆ. ಅದು ತಾತ್ಕಾಲಿಕವೇ, ಶಾಶ್ವತವೇ ಎಂದು ನೋಡಬೇಕು ಎಂದಿದೆ.
ರಾಜ್ಯಪಾಲರು ಒಪ್ಪಿಗೆಯನ್ನು ಯಾವಾಗ ತಡೆಹಿಡಿಯುತ್ತಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಾಲಿಸಿಟರ್ ಜನರಲ್, ಮಸೂದೆಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಅಪೇಕ್ಷಣೀಯವಲ್ಲದ ನಿಬಂಧನೆಗಳನ್ನು ಹೊಂದಿರುವಾಗ ತಡೆಹಿಡಿಯಲಾಗುತ್ತದೆ ಎಂದಿದ್ದಾರೆ.
ತಡೆಹಿಡಿಯುವ ಅಧಿಕಾರವನ್ನು ವಿರಳವಾಗಿ ಬಳಸಬೇಕು ಮತ್ತು ಮೊದಲ ಹಂತದಲ್ಲಿ ಮಾತ್ರ ಬಳಸಬೇಕು ಏಕೆಂದರೆ ಅದು ಮಸೂದೆಯ ಮರಣಕ್ಕೆ ಕಾರಣವಾಗುತ್ತದೆ ಎಂದು ತುಷಾರ್ ಮೆಹ್ತಾ ವಿವರಿಸಿದ್ಧಾರೆ.
ಮುಂದುವರಿದು, “ರಾಜ್ಯಪಾಲರು ಕೇವಲ ಒಬ್ಬರು ಪೋಸ್ಟ್‌ಮ್ಯಾನ್ ಅಲ್ಲ. ಅವರು ರಾಷ್ಟ್ರಪತಿಗಳಿಂದ ನೇಮಕಗೊಂಡ ಭಾರತ ಒಕ್ಕೂಟವನ್ನು ಪ್ರತಿನಿಧಿಸುತ್ತಾರೆ. ರಾಷ್ಟ್ರಪತಿಯನ್ನು ಇಡೀ ರಾಷ್ಟ್ರವು ಸಂಪೂರ್ಣ ಚುನಾವಣೆಯ ಮೂಲಕ ಆಯ್ಕೆ ಮಾಡುತ್ತದೆ. ಅದು ಪ್ರಜಾಪ್ರಭುತ್ವದ ಅಭಿವ್ಯಕ್ತಿಯ ಒಂದು ಮಾರ್ಗವಾಗಿದೆ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿದಾಗಲೂ, ‘ರಾಜಕೀಯ ಪ್ರಕ್ರಿಯೆಯು’ ಅವರ ಬಾಗಿಲನ್ನು ತಟ್ಟಬಹುದು ಮತ್ತು ಅವರು ಮಸೂದೆಯನ್ನು ಮರುಪರಿಶೀಲನೆಗಾಗಿ ವಾಪಸ್ ಕಳುಹಿಸಬಹುದು” ಎಂದು ನ್ಯಾಯಾಲಯ ತಿಳಿಸಿದೆ.
“ನಾನು ಮಸೂದೆಯನ್ನು ತಡೆ ಹಿಡಿದಿದ್ದೇನೆ. ಇಲ್ಲಿಗೆ ಈ ವಿಷಯ ಮುಗಿಯಿತು” ಮೊದಲನೇ ಬಾರಿಗೆ ರಾಜ್ಯಪಾಲರು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಹೇಳಿದ್ದಾರೆ.
ಗುರುವಾರವೂ ಈ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.
ರಾಜ್ಯಪಾಲ ಆರ್.ಎನ್. ರವಿ ಅವರು ಮೂರು ವರ್ಷಗಳಿಗೂ ಹೆಚ್ಚು ಕಾಲ ಹಲವಾರು ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳದೆ, ನಂತರ ಅವುಗಳನ್ನು ತಿರಸ್ಕರಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.
ರಾಜ್ಯಪಾಲರು ಮಸೂದೆಗಳನ್ನು ಸಮಂಜಸವಾದ ಸಮಯದೊಳಗೆ ನಿರ್ಧರಿಸಬೇಕು. ಸಂವಿಧಾನದ ವಿಧಿ 200ರ ಅಡಿಯಲ್ಲಿ ಅನಿರ್ದಿಷ್ಟವಾಗಿ ವಿಳಂಬ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಅದೇ ರೀತಿ, ರಾಷ್ಟ್ರಪತಿಗಳು ಸಂವಿಧಾನದ ವಿಧಿ 201ರ ಅಡಿಯಲ್ಲಿ ಮೂರು ತಿಂಗಳೊಳಗೆ ಮಸೂದೆಗಳ ಕುರಿತು ನಿರ್ಧರಿಸಬೇಕು. ಅದಕ್ಕಿಂತ ಹೆಚ್ಚಿನ ವಿಳಂಬವನ್ನು ವಿವರಿಸಬೇಕು. ರಾಜ್ಯ ಸರ್ಕಾರಕ್ಕೆ ತಿಳಿಸಬೇಕು ಎಂದಿತ್ತು.
ಆದೇಶ ನೀಡುವ ವೇಳೆ ದೀರ್ಘಾವಧಿಯ ನಿಷ್ಕ್ರಿಯತೆಯ ಪ್ರಕರಣಗಳಲ್ಲಿ ‘ಪರಿಗಣಿತ ಒಪ್ಪಿಗೆ’ ಎಂಬ ಪರಿಕಲ್ಪನೆಯನ್ನು ಸುಪ್ರೀಂ ಕೋರ್ಟ್ ಪರಿಚಯಿಸಿತ್ತು. ಬಾಕಿ ಇದ್ದ ಮಸೂದೆಗಳು ಅನುಮೋದನೆಗೊಂಡಿವೆ ಎಂದಿತ್ತು.
ಮೇ ತಿಂಗಳಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 8ರ ತೀರ್ಪಿಗೆ ಸಂಬಂಧಿಸಿದಂತೆ ಸಂವಿಧಾನದ 143(1) ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯಕ್ಕೆ ಕೆಲವು ಉಲ್ಲೇಖಗಳನ್ನು ಮಾಡಿದ್ದರು.
143(1) ನೇ ವಿಧಿಯು ರಾಷ್ಟ್ರಪತಿಗಳು ಕಾನೂನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ನ್ಯಾಯಾಲಯದ ಅಭಿಪ್ರಾಯ ಮತ್ತು ಸಲಹೆಯನ್ನು ಕೇಳಲು ಅವಕಾಶ ನೀಡುತ್ತದೆ.
ಮತಗಳ್ಳತನ: ರಾಹುಲ್ ಗಾಂಧಿ ಆರೋಪಗಳ ಕುರಿತು ತನಿಖೆಗೆ ಎಸ್ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಪಿಐಎಲ್


