ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಬೇಕು’ ಎಂಬ ವಿಚಾರದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದರು.
“ನನ್ನಂಥವರು ಬಹಳ ಭರವಸೆಯಿಂದ ಕರ್ನಾಟಕಕ್ಕೆ ಬರುತ್ತೇವೆ. ಭಾರತ್ ಜೋಡೋ ಯಾತ್ರೆಯನ್ನು ನಾನು ಭಾರತದ ‘ದಕ್ಷಿಣಾಯಣ ಮೂಮೆಂಟ್’ ಎಂದು ಕರೆಯುತ್ತೇನೆ. ಕರ್ನಾಟಕ ಸಾಂಸ್ಕೃತಿಕವಾಗಿ ಬಹಳ ಸಂಪದ್ಭರಿತ ನಾಡು. ಗಿರೀಶ್ ಕಾರ್ನಾಡ್, ಅನಂತಮೂರ್ತಿ ಮುಂತಾದವರ ಬರಹಗಳನ್ನು ಓದಿ ಬೆಳೆದಿದ್ದೇನೆ. ಸಾರ್ವಜನಿಕ ಬದುಕಿಗೆ ಬರುತ್ತಿದ್ದಂತೆ ಕುವೆಂಪು ಅವರ ಕವಿತೆಗಳು ಪ್ರಭಾವಿಸಿವೆ” ಎಂದು ಅವರು ಹೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಕರ್ನಾಟಕದ ದಲಿತ ಸಾಹಿತ್ಯದ ಆಳವನ್ನು ಅರಿತಿದ್ದೇವೆ. ಬರಹಗಾರರಾದ ಗೆಳೆಯ ಡಿ.ಆರ್. ನಾಗರಾಜ್, ದೇವನೂರು ಮಹಾದೇವ ಇವರೆಲ್ಲ ಮಾರ್ಗದರ್ಶಕರು. ಇವರಿಂದ ಇಡೀ ದೇಶ ಕಲಿಯುವುದು ಬಹಳ ಇದೆ. ಇದು ದಕ್ಷಿಣದ ಯೋಚನೆಯೊಂದಿಗೆ ಉತ್ತರಕ್ಕೆ ಪ್ರಯಾಣ. ಇದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು, ಜನ ಚಳವಳಿ, ಸಂಘಟನೆಗಳು ಭಾಗವಹಿಸುವುದು ಬಹಳ ಮುಖ್ಯ. ಯಾರೆಲ್ಲ ಇನ್ನೂ ಸೇರಿಕೊಂಡಿಲ್ಲವೋ ತಕ್ಷಣ ಸೇರಿಕೊಳ್ಳಿ” ಎಂದು ಯೋಗೇಂದ್ರ ಯಾದವ್ ಕರೆ ನೀಡಿದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ರಾಹುಲ್ ಕುರಿತು ಸಾಲುಸಾಲು ಸುಳ್ಳುಸುದ್ದಿ ಹರಿಬಿಟ್ಟ ಬಿಜೆಪಿ
“ಕಾಂಗ್ರೆಸ್‌ನ ಅಭಿಯಾನವಾದ ‘ಭಾರತ್ ಜೋಡೋ’ ಪಾದಯಾತ್ರೆ ಇಂದಿನ ಅಗತ್ಯವಾಗಿದೆ. ಬಾಬಾ ಸಾಹೇಬರ ಸಂವಿಧಾನ ಅಪಾಯದಲ್ಲಿದೆ. ನಾಗರಿಕತೆಯ ಅಡಿಪಾಯದ ಮೇಲೆ ದಾಳಿ ನಡೆಯುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ನಾವೆಲ್ಲರೂ ಬೀದಿಯಲ್ಲಿ ನಿಂತು ನಮ್ಮ ಅಸ್ತಿತ್ವವನ್ನು ತೋರಿಸಬೇಕಿದೆ” ಎಂದು ಅವರು ಹೇಳಿದರು.
ಸೆಪ್ಟೆಂಬರ್ 30ರಂದು ಗುಂಡ್ಲುಪೇಟೆಯ ಮೂಲಕ ಕರ್ನಾಟಕ ಪ್ರವೇಶಿಸುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ‘ಭಾವೈಕ್ಯ ಕರ್ನಾಟಕ ಬ್ಯಾನರ್‌ನಡಿ’ ಎಲ್ಲ ಸಮಾನ ಮನಸ್ಕರು, ದೇಶಪ್ರೇಮಿಗಳು ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
“ನಮ್ಮ ಮನೆಗೆ ಬೆಂಕಿ ಬಿದ್ದಿದೆ. ನಮಗೆ ಕಾಣುತ್ತಿರುವುದು ಇಬ್ಬರಷ್ಟೇ. ಒಬ್ಬನ ಕೈಯಲ್ಲಿ ಪೆಟ್ರೋಲ್ ಬಾಟಲಿಯಿದೆ. ಮತ್ತೊಬ್ಬ ನೀರಿನ ಬಕೆಟ್ ಹಿಡಿದು ನಿಂತಿದ್ದಾನೆ. ನೀರಿನ ಬಕೆಟ್ ಯಾರೇ ಹಿಡಿದು ಬರಲಿ ಆತ ನಮಗೆ ಗೆಳೆಯನಂತೆ ಕಾಣುತ್ತಾನೆ. ದ್ವೇಷದ ರಾಜಕಾರಣ ತಿರಸ್ಕರಿಸಲು, ಸದುದ್ದೇಶದಿಂದ ಕೂಡಿದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಎಲ್ಲರೂ ಬೆಂಬಲ ನೀಡಬೇಕು” ಎಂದು ಅವರು ಹೇಳಿದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ‘ಅಮೂಲ್ಯ ಲಿಯೋನ್’ ರಾಹುಲ್ ಗಾಂಧಿಯನ್ನು ಭೇಟಿಯಾದರೆ?
“ಕೇವಲ ಎರಡೂವರೆ ವರ್ಷದಲ್ಲಿ ಅದಾನಿಯ ಸಂಪತ್ತು 66 ಸಾವಿರ ಕೋಟಿ ರೂ.ಗಳಿಂದ 12 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅದನ್ನು ಮರೆಮಾಚಲು ಬಿಜೆಪಿ ಮತ್ತು ಸಂಘಪರಿವಾರ ಹಿಂದೂ-ಮುಸ್ಲಿಂ ವಿಚಾರವನ್ನು ಮುನ್ನೆಲೆಗೆ ತರುತ್ತಿದೆ” ಎಂದು ಅವರು ಆರೋಪಿಸಿದರು.
“ಕರ್ನಾಟಕ ದ್ವೇಷ ರಾಜಕಾರಣದ ಪ್ರಯೋಗಶಾಲೆಯಾಗಿದೆ. ಇದುವರೆಗೆ ಕಂಡು ಕೇಳರಿಯದಂಥ ಭ್ರಷ್ಟಾಚಾರದಲ್ಲಿ ಕರ್ನಾಟಕ ಸರ್ಕಾರ ಮುಳುಗಿದೆ. ನಾವು ದುರಾಡಳಿತದ ಬಗ್ಗೆ ಪ್ರಶ್ನೆ ಮಾತನಾಡಿದರೆ, ಅವರು ಹಿಜಾಬ್ ವಿಷಯ ಮುನ್ನೆಲೆಗೆ ತರುತ್ತಾರೆ. ದೇಶದಲ್ಲಿ ಕಳೆದ 40 ವರ್ಷಗಳಲ್ಲೇ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ದೇಶವನ್ನು ಉಳಿಸಲು ಎಲ್ಲ ಸಂಘಟನೆಗಳು, ಜನಚಳವಳಿಗಳು, ಸಾಮಾಜಿಕ ಕಾರ್ಯಕರ್ತರು ಒಂದಾಗಬೇಕು” ಎಂದು ಅವರು ಸಲಹೆ ನೀಡಿದರು.
ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, “ಸಮಾಜದಲ್ಲಿ ಪಂಗಡೀಕರಣ ಮತ್ತು ವಿಂಗಡೀಕರಣ ಆಗುತ್ತಿರುವುದು ಬಹಳ ದೊಡ್ಡ ವಿದ್ಯಮಾನ. ಕರ್ನಾಟಕದ ಇತಿಹಾಸ ಸಾಮರಸ್ಯಕ್ಕೆ ಮಾದರಿಯಾಗಿತ್ತು. ಈಗ ಯಾರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿಲ್ಲ. ಮಾನವಹಕ್ಕು ಹೋರಾಟಗಾರರು, ಸಾಹಿತಿಗಳಿಗೆ ಅಪಾಯ ಬಂದೊದಗಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲ ಇದರ ವಿರುದ್ಧ ಒಂದಾಗಲು ಭಾರತ್ ಜೋಡೋಗೆ ಕೈಜೋಡಿಸಬೇಕಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಭಾರತ್ ಜೋಡೋ ಬ್ಯಾನರ್‌ನಲ್ಲಿ ಮಹಾತ್ಮ ಗಾಂಧಿ ಕೊಲೆ ಆರೋಪಿ ಸಾವರ್ಕರ್ ಚಿತ್ರ; ಸ್ಥಳೀಯ ನಾಯಕನ ಅಮಾನತು ಮಾಡಿದ ಕಾಂಗ್ರೆಸ್
“ಬಹುತ್ವ ಭಾರತ, ಒಕ್ಕೂಟ ಭಾರತ, ಸಮಾನತೆ ಮತ್ತು ಶಿಕ್ಷಣಕ್ಕೆ ಕುತ್ತು ಬರುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಭಾರತ್ ಜೋಡೋವನ್ನು ಬೆಂಬಲಿಸಬೇಕಾಗಿದೆ” ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ದೇಶದ ಬಗ್ಗೆ ಕಾಳಜಿ ಇರುವವರು, ಪ್ರಜಾಪ್ರಭುತ್ವ ಉಳಿಸಬೇಕೆಂದು ಬಯಸುವ ಎಲ್ಲರೂ ಸೇರಿ ಕರ್ನಾಟಕದಲ್ಲಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ವಿನಂತಿಸಿದರು. “ಭಾರತ್ ಜೋಡೋ ಬೆಂಬಲಿಸಿದ ಮಾತ್ರಕ್ಕೆ ನಾವು ಕಾಂಗ್ರೆಸ್ ಪರ ಎಂದಲ್ಲ. ಕಾಂಗ್ರೆಸ್‌ನ ನೀತಿಗಳನ್ನೂ ವಿರೋಧಿಸುತ್ತೇವೆ. ಸದ್ಯ ವಿರೋಧಿಸುವ, ಟೀಕಿಸುವ ಸ್ವಾತಂತ್ರ್ಯ ಉಳಿಸುವ ಅಗತ್ಯವಿದೆ” ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ, ಚಿಂತಕಿ ಬಿ.ಟಿ. ಲಲಿತಾ ನಾಯಕ್ ಉಪಸ್ಥಿತರಿದ್ದರು.


