Homeಅಂಕಣಗಳುವಿಶ್ವ ಪುಸ್ತಕ ದಿನ ವಿಶೇಷ; ಪುಸ್ತಕಗಳು ಅಳಿವಿನಂಚಿನಲ್ಲಿವೆಯೇ?

ವಿಶ್ವ ಪುಸ್ತಕ ದಿನ ವಿಶೇಷ; ಪುಸ್ತಕಗಳು ಅಳಿವಿನಂಚಿನಲ್ಲಿವೆಯೇ?

- Advertisement -
- Advertisement -

ಪುಸ್ತಕ ಮನುಕುಲದ ಮಹೋನ್ನತ ಆವಿಷ್ಕಾರಗಳಲ್ಲಿ ಒಂದು. ತಂತ್ರಜ್ಞಾನದಲ್ಲಿ ಆಗುವ ಬದಲಾವಣೆಗಳು ಹಲವು ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಹಾಗೂ ಪಲ್ಲಟಗಳಿಗೆ ಕಾರಣವಾಗುತ್ತವೆ. ಅದು ಒಳ್ಳೆಯ ದೆಸೆಗೆ ಕಾರಣವಾಗಬಹುದು ಅಥವಾ ಕೆಡುಕಿಗೂ. ಪುಸ್ತಕದ ಆವಿಷ್ಕಾರ (ಲಿಪಿ, ಕಾಗದ, ಮುದ್ರಣ, ರಟ್ಟುಕಟ್ಟುವ – ಇವುಗಳಲ್ಲಿ ಆದ ಬೆಳವಣಿಗೆ) ಮತ್ತು ಪುಸ್ತಕಗಳನ್ನು ತ್ವರಿತ ರೂಪದಲ್ಲಿ ಸಿದ್ಧಪಡಿಸಬಹುದಾದ ತಂತ್ರಜ್ಞಾನದ ಅಭಿವೃದ್ಧಿ ಹಲವು ಬಾರಿ ಮನುಕುಲದ ಒಳಿತಿಗೆ ಸಹಕರಿಸಿದ್ದರೆ ಅದು ಕೆಲವೊಮ್ಮೆ ಮನುಕುಲಕ್ಕೆ ಸವಾಲಾಗಿಯೂ ಪರಿಣಮಿಸಿದೆ. ಯಜಮಾನ್ಯಗಳನ್ನು ಪ್ರಶ್ನಿಸಲು, ಹೊಸ ತಿಳಿವಳಿಕೆಯನ್ನು ದಾಖಲಿಸಲು, ಅದನ್ನು ಪಸರಿಸಲು, ತಿಳಿವಳಿಕೆಯನ್ನು ಮನನ ಮಾಡಿ ವಿಮರ್ಶಿಸಲು, ಪ್ರತಿರೋಧಕ್ಕೆ, ಪ್ರಚಾರ-ಪ್ರೊಪಾಗಾಂಡಕ್ಕೆ, ಮನರಂಜನೆಗೆ ಹೀಗೆ ಪುಸ್ತಕ ನಿಭಾಯಿಸಿರುವ ಪಾತ್ರಗಳ ವಿಶೇಷತೆಯ ಕಾರಣಕ್ಕೂ ಪುಸ್ತಕಗಳ ಉಳಿವಿನ ಮತ್ತು ಅವಸಾನದ ಬಗ್ಗೆ ಚರ್ಚೆಗಳು ಆಗಾಗ ಮೂಡುವುದು ಸಹಜ.

ಸಿಡಿ-ಡಿವಿಡಿ ತಂತ್ರಜ್ಞಾನ ಮೊದಲುಗೊಂಡ ಕೆಲವೇ ವರ್ಷಗಳಲ್ಲಿ ಕಣ್ಮರೆಯಾಯಿತು. ಆದರೆ ಪುಸ್ತಕದ ಪುರಾಣ ನೂರಾರು ವರ್ಷಗಳಷ್ಟು ಹಳೆಯದ್ದು ಮತ್ತು ಒಂದು ಪಕ್ಷದಲ್ಲಿ ಅಥವಾ ಕೆಲವು ಪ್ರಕರಣಗಳಲ್ಲಿ ಪೇಪರ್ ಬಳಕೆಯಿಂದ ಪುಸ್ತಕ ಉತ್ಪಾದಿಸದೇ ಹೋದರೂ, ಅವುಗಳ ಜಾಗದಲ್ಲಿ ಇ-ಬುಕ್‌ಗಳು ಬಂದರೂ, ಪುಟ ವಿನ್ಯಾಸ, ಪುಟ ತಿರುಗಿಸುವ ಬಗೆ, ಮಾರ್ಜಿನ್‌ಗಳಲ್ಲಿ ಬರೆದುಕೊಳ್ಳುವ ಮತ್ತು ಸಾಲುಗಳ ಕೆಳಗೆ ಗೆರೆ ಎಳೆದು ಮಾರ್ಕ್ ಮಾಡಿಕೊಳ್ಳುವ ಸೌಲಭ್ಯಗಳನ್ನು ಇ-ಬುಕ್‌ಗಳು ಕೂಡ ಅನುಕರಿಸುತ್ತಿದ್ದು, ಪುಸ್ತಕದ ಸ್ವರೂಪವಂತೂ ಖಂಡಿತಾ ಮುಂದುವರೆಯಲಿದೆ. ಇ-ಪುಸ್ತಕ ಬಂದು ಹತ್ತಾರು ವರ್ಷಗಳು ಕಳೆದಿದ್ದರೂ, ಮುದ್ರಿತ ಪುಸ್ತಕಗಳ ಜಾಗವನ್ನು ಅವುಗಳು ತುಂಬಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಸಂಗತಿ. ಬಹುಶಃ ಮಾತಿನ-ಆಡಿಯೋ ಅಥವಾ ವಿಡಿಯೋ ಚಿತ್ರೀಕರಿಸುವ ಮೂಲಕವೇ ಮುಂದೊಂದು ದಿನ ಜನ ತಮ್ಮ ಕಾದಂಬರಿಯನ್ನೋ-ತಮ್ಮ ಸಂಶೋಧನೆಯನ್ನೋ ದಾಖಲಿಸುವ ದಿನ ಬರಬಹುದಾದರೂ, ಮುದ್ರಿತ ಪುಸ್ತಕ ರೂಪಕ್ಕೂ ಇನ್ನೂ ನೂರಾರು ವರ್ಷಗಳ ಆಯುಷ್ಯ ಇರುವುದು ಕೂಡ ದಟ್ಟವಾಗಿ ಗೋಚರಿಸುತ್ತದೆ. ಸದ್ಯಕ್ಕಂತೂ ಆ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗುವಂತಹ ಪರಿಸ್ಥಿತಿ ನಮ್ಮ ಮುಂದಿದೆ.

ಯಜಮಾನ್ಯವನ್ನು ಮುರಿಯಲು ದೊಡ್ಡಮಟ್ಟದಲ್ಲಿ ಸಹಕರಿಸಿವೆ ಪುಸ್ತಕಗಳು

ಅಕ್ಷರ-ಲಿಪಿ-ಬರವಣಿಗೆಯ ಬೆಳವಣಿಗೆ ಮತ್ತು ಇವುಗಳಲ್ಲಿ ಆದ ಸುಧಾರಣೆ, ಕೆಲವರದ್ದೇ ಸ್ವತ್ತಾಗಿದ್ದ ವಿದ್ಯೆ ಮತ್ತು ವಿದ್ವತ್ತನ್ನು ಜನಸಾಮಾನ್ಯರ ಬಳಿಗೆ ತರಲು ಸಾಕಷ್ಟು ಸಹಕರಿಸಿರುವುದು ಈಗಾಗಲೇ ಹಲವು ಬಾರಿ ದಾಖಲಾಗಿದೆ. ಈ ದೇಶದ ಮೊಟ್ಟಮೊದಲ ಲಿಪಿ ಮತ್ತು ಲಿಪಿಕಾರ, ಅಶೋಕನ ಕಾಲದ ವಿದ್ಯಮಾನ ಎಂದು ದಾಖಲಿಸುವ ಇತಿಹಾಸಕಾರ ಪ್ರೊ. ಷ ಶೆಟ್ಟರ್ ಅವರು ’ಕೆಲವರ ಸ್ವತ್ತಾಗಿದ್ದ ವಿದ್ಯೆಯನ್ನು ಮುಕ್ತಗೊಳಿಸಿ ಅದನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಬೌದ್ಧರ ಪಾತ್ರ ಬಹುದೊಡ್ಡದು’ ಎಂದು ದಾಖಲಿಸುತ್ತಾರೆ.

ಕಲ್ಲಿನ ಮೇಲೆ ಕೆತ್ತಲ್ಪಡುತ್ತಿದ್ದ ಬರವಣಿಗೆ ಕಾಲಾನಂತರ ತಾಳೆಗರಿಯ ಮೇಲೆಯೂ ಮೂಡುವಂತಾಯಿತು. ನಂತರ ಪೇಪರ್ ಮತ್ತು ಮುದ್ರಣದ ಆವಿಷ್ಕಾರ ಹಾಗು ಬೆಳವಣಿಗೆಯೊಂದಿಗೆ, ಪುಸ್ತಕವೂ ಜನ್ಮತಳೆದು ಹೊಸ ತಿಳಿವು ಹುಟ್ಟುವ ಬಗೆಯಿಂದ ಹಿಡಿದು, ಜ್ಞಾನದ ನಿಯಂತ್ರಣದಲ್ಲಿಯೂ ಹಲವಾರು ಸಕಾರಾತ್ಮಕ ಬದಲಾವಣೆಗಳಾದವು. ಅಂದರೆ ವಿದ್ಯೆ, ತಿಳಿವಳಿಕೆ ಮತ್ತು ಜ್ಞಾನವೆಂದು ಯಾವುದನ್ನು ಪ್ರತಿಪಾದಿಸಲಾಗುತ್ತಿತ್ತೋ, ಯಾವುದನ್ನು ಕೆಲವರ ಹಿಡಿತದಲ್ಲಿ ಮಾತ್ರ ಇಟ್ಟುಕೊಳ್ಳಲಾಗಿತ್ತೋ, ಅದನ್ನು ಒಂದು ಮಟ್ಟಕ್ಕೆ ಪ್ರಶ್ನೆ ಮಾಡಲಾಯತು, ಅದನ್ನು ಡೆಮಾಕ್ರಟೈಸ್ ಮಾಡಲು ಸಾಧ್ಯವಾಯಿತು. ಆ ವಿದ್ಯೆ ಮತ್ತು ಜ್ಞಾನದ ಸುತ್ತ ಇದ್ದ ’ದಿವ್ಯತೆ’/’ಪೂಜ್ಯತೆ’ಯನ್ನು ಇದು ಪ್ರಶ್ನಿಸಿ, ಹೊಡೆದುಹಾಕಿತು.

ಇದೇ ಸಮಯದಲ್ಲಿ ಬಾಲ್ಯದ ಒಂದು ನೆನಪು ಮರುಕಳಿಸುತ್ತಿದೆ. ಆಗ ಹಳ್ಳಿಗಳಿಗೆ ಒಂದು ಸಮಯದಲ್ಲಿ ತಂಡವೊಂದು ಬರುತ್ತಿತ್ತು. ಕುಲುಮೆಯ ಸಹಾಯದಿಂದ ತಾಮ್ರ, ಹಿತ್ತಾಳೆ ಇತ್ಯಾದಿ ಲೋಹಗಳನ್ನು ಕಾಯಿಸಿ, ಹಸಿಮಣ್ಣಿನಲ್ಲಿ ಯಾವ ದೇವರ ಆಕಾರ ಬೇಕೋ ಅದನ್ನು ಮೂಡಿಸಿ, ಆ ಕಾಯಿಸಿದ ಲೋಹದ ದ್ರಾವಣವನ್ನು ಸುರಿದು ಅಚ್ಚು ಹಾಕುವುದು. ಈ ವಿದ್ಯಮಾನ ಕೂಡ ದೇವರ ವಿಗ್ರಹ-ದೇವಸ್ಥಾನದ ಗರ್ಭಗೃಹದ ಸುತ್ತ ಇದ್ದ ಮಡಿವಂತಿಕೆಯನ್ನು ನಿವಾರಿಸಿ, ನಂಬಿಕೆಯನ್ನು ಒಂದು ಮಟ್ಟಕ್ಕೆ ಪ್ರಜಾಸತ್ತಾತ್ಮಕಗೊಳಿಸುವಲ್ಲಿ ಸಫಲವಾಗಿತ್ತು ಎಂದೆನಿಸುತ್ತದೆ. ನಿರ್ದಿಷ್ಟ ಸ್ಥಳ ಮಹಿಮೆಯಂತಹ ನಂಬಿಕೆಗಳನ್ನು ಅದರಿಂದ ನಿವಾರಿಸಲಾಯಿತೇ ಎಂಬ ಪ್ರಶ್ನೆ ಉದ್ಭವಿಸುತ್ತಾದರೂ, ಈ ಉತ್ಪಾದನಾ ತಂತ್ರಜ್ಞಾನದಿಂದ ಒಂದು ಮಟ್ಟಕ್ಕೆ ’ನಂಬಿಕೆ-ಭಕ್ತಿಯ’ ಯಜಮಾನಿಕೆಯನ್ನು ಪ್ರಶ್ನಿಸಲು ಸಾಧ್ಯವಾಗಿತ್ತು.

ಇದು ಪುಸ್ತಕಗಳ ಮಾಸ್ ಉತ್ಪಾದನೆಗೂ ಅನ್ವಯಿಸುತ್ತದೆ. ಮೊದಲು ಮೊಳೆ ಜೋಡಿಸುವುದರಿಂದ ಹಿಡಿದು ಇಂದಿನ ಡಿಜಿಟಲ್ ತಂತ್ರಜ್ಞಾನದ ತ್ವರಿತ ಮುದ್ರಣದವರೆಗೂ, ಪುಸ್ತಕಗಳ ಉತ್ಪಾದನೆ, ನಕಲು ಮಾಡಿ ಹೆಚ್ಚೆಚ್ಚು ಪ್ರತಿಗಳನ್ನು ವೇಗವಾಗಿ ಮುದ್ರಣ ಮಾಡುವ ವಿಧಾನ 20ನೇ ಶತಮಾನದಿಂದೀಚೆಗೆ ಸರಳವಾಗಿದೆ. ಇದು ಕೋಟ್ಯಂತರ ಜನರನ್ನು ಶಿಕ್ಷಣಕ್ಕೆ ತೆರೆದುಕೊಳ್ಳಲು, ಹೊಸ ಜ್ಞಾನಶಾಖೆಗೆ ಪರಿಚಯಿಸಿಕೊಳ್ಳಲು, ಹೆಚ್ಚಿನ ಸಂಶೋಧನೆ ಮಾಡಲು ನೆರವಾಗಿದೆ. ಹಳೆಯ ಜ್ಞಾನಶಾಖೆಗಳನ್ನು ಪ್ರಶ್ನಿಸಿ ಹೊಸ ವೈಚಾರಿಕ ತಿಳಿವಳಿಕೆಯನ್ನು ಕಟ್ಟಿಕೊಳ್ಳಲು ಇದು ಸಹಕರಿಸಿದೆ. ಟಿವಿ, ಇಂಟರ್‌ನೆಟ್ ಮುಂತಾದ ಮಾಧ್ಯಮಗಳು ತೆರೆದುಕೊಂಡ ಮೇಲೆ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂಬ ಕೂಗು ಆಗಾಗ ಕೇಳಿಬಂದರೂ, ಪ್ರಕಟಣೆಯ ಸಂಖ್ಯೆ, ಗುಣಮಟ್ಟದ ವಿಷಯದಲ್ಲಿ ಅದು ಬೆಳೆಯುತ್ತಲೇ ಇದೆ.

ಜರ್ಮನಿಯಲ್ಲಿ ನಾಜಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಮೊದಲು ಅದು ದಾಳಿ ಮಾಡಿದ್ದು ಪುಸ್ತಕಗಳ ಮೇಲೆಯೇ. ಹಿಟ್ಲರ್‌ನ ಸರ್ವಾಧಿಕಾರವನ್ನು ಪ್ರಶ್ನಿಸುತ್ತಿದ್ದ ಲೇಖಕರ ಪುಸ್ತಕಗಳನ್ನು ಸಾರ್ವಜನಿಕವಾಗಿ ಸುಡಲಾಯಿತು. ಇದು ಸಿಂಬಾಲಿಕ್ ಕ್ರಿಯೆ ಅನ್ನಿಸಿದರೂ, ಅದುಪು॒ಸ್ತಕಗಳು ಮೂಡಿಸುತ್ತಿದ್ದ ವಿವೇಕದ ಮೇಲಿನ ದಾಳಿಯಾಗಿತ್ತು. ಗ್ರಂಥಾಲಯಗಳನ್ನು, ಗ್ರಂಥಗಳನ್ನು ಸುಡುವ ಮತ್ತು ಅದರ ಮೂಲಕ ಒಂದು ಸಂಸ್ಕೃತಿಯನ್ನೇ ನಾಶಮಾಡಬಹುದೆಂದು ಪ್ರಯತ್ನಪಟ್ಟ ಎಷ್ಟೋ ಘಟನೆಗಳು ವಿಶ್ವದ ಇತಿಹಾಸದಲ್ಲಿ ನಡೆದುಹೋಗಿವೆ. ಚೈನಾದ ಮಹಾಗೋಡೆಯನ್ನು ಕಟ್ಟಲು ಆದೇಶ ಕೊಟ್ಟ ರಾಜ ಶಿ ಹುವಾಂಗ್ ಟಿ, ತನ್ನ ಅವಧಿಗೂ ಮುಂಚೆ ಬರೆಯಲಾಗಿದ್ದ ಎಲ್ಲ ಪುಸ್ತಕಗಳನ್ನು ಸುಡಲು ಆದೇಶ ನೀಡಿದ್ದ ಎಂದು ಒಂದು ಪ್ರಬಂಧದಲ್ಲಿ ಲೇಖಕ ಲೂಯಿಸ ಬೋರ್ಹೆಸ್ ಚರ್ಚಿಸುತ್ತಾರೆ. ಇಂತಹವೆಲ್ಲವನ್ನೂ ಮೀರಿ ಪುಸ್ತಕ ಆಯಾ ದೇಶದ-ಕಾಲದ ಸಂಸ್ಕೃತಿಯನ್ನು ಮತ್ತು ವಿವರಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು, ಉಳಿಸಿಕೊಂಡು ತಾನೂ ಉಳಿದುಕೊಂಡೇ ಬಂದಿದೆ.

ಎಷ್ಟೋ ದಮನಿತರ ವಿಮೋಚನೆಯ ಅಸ್ತ್ರವಾಗಿ ಪುಸ್ತಕ ಬಳಕೆಯಾಗಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರು ಬರೆದ ಪುಸ್ತಕಗಳು ಇಂದು ಭಾರತದ ಎಷ್ಟೋ ಸಮುದಾಯಗಳಿಗೆ ಬಿಡುಗಡೆಯ ಸಂಕೇತ ಮತ್ತು ಅಸ್ತ್ರ ಕೂಡ. ಇದೇ ಕಾರಣಕ್ಕಾಗಿಯೇ, ಅಂಬೇಡ್ಕರ್ ಬರಹ ಭಾಷಣಗಳ ಸಂಪುಟಗಳ ಪ್ರಕಟಣೆಯ ರಾಜಕಾರಣವೇ ಒಂದು ದೊಡ್ಡ ಪುಸ್ತಕವಾಗಬಹುದು. ’ಹಿಂದೂ ಧರ್ಮದ ಒಗಟುಗಳು’ಅನ್ನು ಒಳಗೊಂಡಿದ್ದ, ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳ ಸಂಪುಟ ನಾಲ್ಕು ಪ್ರಕಟವಾದಾಗ ಅದರ ನೂರಾರು ಪ್ರತಿಗಳನ್ನು ಸುಡಲು ಈ ದೇಶದ ಹಿಂದುತ್ವವಾದಿಗಳು ಮುಂದಾಗಿದ್ದರು! ಸುಟ್ಟರು ಕೂಡ. ಇವೆಲ್ಲದರ ಹೊರತಾಗಿಯೂ ಅಂಬೇಡ್ಕರ್ ಬರಹಗಳು ಇಂದಿಗೂ ಬಹಳ ಬೇಡಿಕೆಯಿರುವ ಪುಸ್ತಕಗಳಾಗಿ ಉಳಿದಿವೆ. ಸ್ವತಃ ಅಂಬೇಡ್ಕರ್ ಅವರೇ ಪುಸ್ತಕಗಳ ದೊಡ್ಡ ಅಭಿಮಾನಿಯಾಗಿದ್ದವರು. ಸುಮಾರು 50 ಸಾವಿರ ಪುಸ್ತಕಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದರು ಎನ್ನಲಾಗುತ್ತದೆ. ತಾವು ಬರೆದ ಪುಸ್ತಕಗಳಿಂದ ಬರುತ್ತಿದ್ದ ಬಹುತೇಕ ರಾಯಲ್ಟಿ ದುಡ್ಡನ್ನು ಪುಸ್ತಕಗಳ ಮೇಲೆ ವ್ಯಯಿಸುತ್ತಿದ್ದರಂತೆ. ತಮ್ಮ ಪುಸ್ತಕಗಳ ಬಗ್ಗೆ ಬಹಳ ಪೊಸೆಸಿವ್ ಆಗಿದ್ದ ಬಾಬಾಸಾಹೇಬರು ಅವುಗಳನ್ನು ಬಹಳ ಜತನದಿಂದ ಕಾಪಾಡಿಕೊಳ್ಳುತ್ತಿದ್ದ ಬಗೆಯನ್ನೂ ಹಲವರು ದಾಖಲಿಸಿದ್ದಾರೆ.

PC : Amazon.com

ಇನ್ನು ಕೆಲವು ಪುಸ್ತಕಗಳು ಇತಿಹಾಸವನ್ನು ಸೃಷ್ಟಿಸುವುದಕ್ಕೆ – ಇತಿಹಾಸವನ್ನು ಬದಲಿಸುವುದಕ್ಕೆ ಕೂಡ ಕಾರಣವಾಗಿವೆ. ಮಾರ್ಕ್ಸ್ ಮತ್ತು ಎಂಗೆಲ್ಸ್ ಬರೆದ ’ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’, ಲೆನಿನ್ ಮತ್ತು ಮಾವೋ ಮೇಲೆ ಬೀರಿದ ಪರಿಣಾಮ, ಅದು ರಷ್ಯಾ ಮತ್ತು ಚೈನಾ ದೇಶಗಳಲ್ಲಿ ಉಂಟುಮಾಡಿದ ಕ್ರಾಂತಿ ಕೂಡ ಪರಿಣಾಮಕಾರಿಯಾಗಿ ದಾಖಲಾಗಿದೆ. ಎಷ್ಟೋ ವೈಜ್ಞಾನಿಕ, ವೈದ್ಯಕೀಯ ಪುಸ್ತಕಗಳು ಮನುಕುಲದ ದಿಕ್ಕನ್ನೇ ಬದಲಿಸಿವೆ. ಎಷ್ಟೋ ಸಾಹಿತ್ಯಿಕ ಪುಸ್ತಕಗಳು ಕೂಡ ಮನುಷ್ಯರ ಮೇಲೆ ವ್ಯಕ್ತಿಗತವಾಗಿ, ಸಾಮುದಾಯಿಕವಾಗಿ ಪರಿಣಾಮ ಬೀರಿರುವುದುಂಟು.

ಇನ್ನು ಭಾರತದಂತಹ ಸಂದರ್ಭಕ್ಕೆ ಸಾಹಿತ್ಯದ ಮೇಲೆ ’ಪುಸ್ತಕ’ ತಂತ್ರಜ್ಞಾನ ಬೀರಿರುವ ಪ್ರಭಾವ ಕೂಡ ಬೃಹತ್ತಾದದ್ದು. ಇಲ್ಲಿ ಪ್ರಾಚೀನ ಸಾಹಿತ್ಯ ಸಾಮಾನ್ಯವಾಗಿ ಆಡುಮಾತಿನ ಸಂಸ್ಕೃತಿಯಾಗಿದ್ದ, ಮಹಾಕಾವ್ಯಗಳ ಕಂಠಪಾಠದ ಮೇಲೆ ಅವಲಂಬಿತವಾಗಿತ್ತು. ಹೆಚ್ಚು ಧಾರ್ಮಿಕ ನಂಬಿಕೆಗಳಿಗಷ್ಟೇ ಸೀಮಿತವಾಗಿದ್ದ ಈ ಸಾಹಿತ್ಯ ಕೆಲವರದ್ದೇ ಸ್ವತ್ತಾಗಿತ್ತು. ಅವುಗಳನ್ನು ಮುರಿದು ಕಾದಂಬರಿ ಶೈಲಿಯಂತಹ ಹೊಸ ಪ್ರಕಾರಗಳು ಮೂಡಲು ಸಾಧ್ಯವಾಗಿದ್ದು ಪಶ್ಚಿಮದ ದೇಶಗಳ ಸಾಹಿತ್ಯದ ಪ್ರಭಾವದ ಜೊತೆಗೆ ಪುಸ್ತಕ ತಂತ್ರಜ್ಞಾನದ ಬೆಳವಣಿಗೆಯೂ ತನ್ನ ಕೊಡುಗೆ ನೀಡಿದೆ. ದೊಡ್ಡ ಮಟ್ಟದಲ್ಲಿ ಜನರಿಗೆ ಶಿಕ್ಷಣ ನೀಡುವುದಕ್ಕೆ ಪುಸ್ತಕಗಳು ನೀಡಿರುವ ಕೊಡುಗೆ ಅಸಾಮಾನ್ಯವಾದದ್ದು. ಯಾರಾದರೂ ಸೂಕ್ಷ್ಮ ಅಧ್ಯಯನವನ್ನು ಕೈಗೊಂಡರೆ ಪುಸ್ತಕ ತಂತ್ರಜ್ಞಾನದ ಬೆಳವಣಿಗೆ ಸಾಹಿತ್ಯ ಪ್ರಕಾರಗಳಲ್ಲಿ ಹೇಗೆ ಬದಲಾವಣೆ ತಂದಿತು, ಅದು ಹೇಗೆ ಸಾಹಿತ್ಯ ಚಳವಳಿಗಳನ್ನು ಹುಟ್ಟು ಹಾಕಿತು ಎಂಬುದನ್ನು ಕೂಡ ರಿಲೇಟ್ ಮಾಡಲು ಸಾಧ್ಯವಾದೀತು! ಕೆಲವೊಂದು ಆವಿಷ್ಕಾರಗಳು ಮನುಕುಲದಲ್ಲಿ ತಮ್ಮ ಆಳವಾದ ಬೇರನ್ನು ಬಿಡುತ್ತವೆ. ಚಕ್ರ, ಬೈಸಿಕಲ್, ಬುಕ್ಕು ಇವೆಲ್ಲವನ್ನೂ ಬಹುಶಃ ಆ ಪಟ್ಟಿಗೆ ಸೇರಿಸಬಹದು. ಇವು ಸುಲಭವಾಗಿ ಕಣ್ಮರೆಯಾಗುವಂತವಲ್ಲ ಅಥವಾ ಅವುಗಳನ್ನು ಮತ್ತೆ ಬೇರ್‍ಯಾವುದೋ ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ. ಇವುಗಳ ಆಕಾರ, ರೂಪ ಮತ್ತು ಬಗೆ ಸ್ವಲ್ಪ ಬದಲಾದರೂ ದೀರ್ಘ ಕಾಲದವರೆಗೆ ಇವು ಮನುಕುಲದ ಕೈಹಿಡಿಯುತ್ತವೆ ಮತ್ತು ಮುನ್ನಡೆಸುತ್ತವೆ ಕೂಡ!

ಏಪ್ರಿಲ್ 23 ವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನ. ಯುನೆಸ್ಕೋ ಮೊದಲು ಮಾಡಿದ ಈ ದಿನವನ್ನು ಓದುವುದನ್ನು, ಪ್ರಕಟಿಸುವುದನ್ನು ಉತ್ತೇಜಿಸಲು ಮತ್ತು ಕಾಪಿರೈಟ್ ಬಗ್ಗೆ ಅರಿವು ಮೂಡಿಸುವುದಕ್ಕೆ ಪ್ರತಿ ವರ್ಷ ಆಚರಿಸಲಾಗುತ್ತದೆ.

PC : Metro

ಕರ್ನಾಟಕದಲ್ಲಿ ಕೂಡ ಪುಸ್ತಕಗಳು ಚಿಂತನೆಗಳ ಮತ್ತು ವಿಚಾರಕ್ರಾಂತಿಗೆ ತಮ್ಮ ದೊಡ್ಡ ಕೊಡುಗೆಯನ್ನೇ ನೀಡಿವೆ. ಹಲವಾರು ಪ್ರಕಾಶನ ಮಂದಿರಗಳು ಇದಕ್ಕೆ ತಮ್ಮ ಶ್ರಮವನ್ನು ಅರ್ಪಿಸಿವೆ. ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಕೂಡ ಇದಕ್ಕೆ ದೊಡ್ಡ ಕೊಡುಗೆಯನ್ನು ನೀಡಿವೆ. ಸಾಂಸ್ಥಿಕವಾಗಿ ಹಲವು ಪುಸ್ತಕದ ಅಂಗಡಿಗಳು, ವ್ಯಕ್ತಿಗತವಾಗಿ ಹಲವರು ಪುಸ್ತಕ ಪ್ರಸಾರಕ್ಕೆ-ಪ್ರಚಾರಕ್ಕೆ ತೊಡಗಿಸಿಕೊಂಡಿದ್ದಾರೆ. ಹೆಚ್ಚು ಹೆಚ್ಚು ಓದುವ ಮೂಲಕ ಇವೆಲ್ಲವನ್ನೂ ನಾವೂ ಸಂಭ್ರಮಿಸಬಹುದಲ್ಲವೇ?


ಇದನ್ನೂ ಓದಿ: ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...