ಮಾರ್ಚ್ 20ರಂದು ‘ಅಂತಾರಾಷ್ಟ್ರೀಯ ಹ್ಯಾಪಿನೆಸ್ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಇದರ ಕೆಲವೇ ದಿನಗಳ ಮೊದಲು ವಿಶ್ವ ಸಂಸ್ಥೆಯು ತನ್ನ 10ನೇ ವರ್ಷದ ‘ವಿಶ್ವ ಹ್ಯಾಪಿನೆಸ್ಸ್ ವರದಿ’ಯನ್ನು ಬಿಡುಗಡೆ ಮಾಡಿದೆ. 146 ದೇಶಗಳ ಈ ಪಟ್ಟಿಯಲ್ಲಿ ಭಾರತವು 136ನೇ ಸ್ಥಾನವನ್ನು ಪಡೆದಿದೆ. ಪಟ್ಟಿಯಲ್ಲಿ ಕೊನೆಯ ದೇಶವಾಗಿ ಅಪಘಾನಿಸ್ತಾನ 146 ಸ್ಥಾನ ಪಡೆದಿದ್ದು, ವಿಶ್ವದ ಅತೃಪ್ತ ದೇಶವಾಗಿ ಹೊಮ್ಮಿದೆ. ಉಳಿದಂತೆ ಭಾರತದ ನೆರೆಯ ದೇಶಗಳಾದ ಚೀನಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್ ಮತ್ತು ಶ್ರೀಲಂಕಾ ದೇಶಗಳು ಪಟ್ಟಿಯಲ್ಲಿ ಭಾರತಕ್ಕಿಂತ ಮೇಲೆ ಇವೆ.
ಫಿನ್‌ಲ್ಯಾಂಡ್ ದೇಶವು ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಸತತ ಐದನೇ ವರ್ಷವೂ ಹೆಸರಿಸಲ್ಪಟ್ಟಿದೆ. ಈ ಪಟ್ಟಿಯಲ್ಲಿ ಡೆನ್ಮಾರ್ಕ್ ಎರಡನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಐಸ್‌ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ ಇವೆ.
ಇದನ್ನೂ ಓದಿ: ಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1
ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ದೇಶಗಳ ಜಾಗತಿಕ ಸಂತೋಷದ ಶ್ರೇಯಾಂಕವನ್ನು ಹೊಂದಿರುವ ‘ವರ್ಲ್ಡ್ ಹ್ಯಾಪಿನೆಸ್ ವರದಿ’ಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್‌ವರ್ಕ್‌ನಿಂದ ಪ್ರತಿ ವರ್ಷ ಬಿಡುಗಡೆಯಾಗುತ್ತದೆ.
“ದೇಶವೊಂದರ ಸರ್ಕಾರಗಳು ತಮ್ಮ ಜನರ ಮೇಲೆ ಹೇಗೆ ಕಾಳಜಿ ವಹಿಸುತ್ತವೆ ಎಂಬುದರ ಮೇಲೆ ದೇಶಗಳು ರ್‍ಯಾಂಕಿಂಗ್ ಪಡೆಯುತ್ತದೆ. ನಿರ್ದಿಷ್ಟ ದೇಶದ ಜನರ ಸಂತೃಪ್ತಿಯ ಜೀವನ ಆ ದೇಶದ ಉನ್ನತ ರೇಟಿಂಗ್‌ಗಳಿಗೆ ಕಾರಣವಾಗುತ್ತದೆ” ಎಂದು ಆಲ್ಟೊ ವಿಶ್ವವಿದ್ಯಾಲಯದ ತಜ್ಞ ಫ್ರಾಂಕ್ ಮಾರ್ಟೆಲಾ ಹೇಳುತ್ತಾರೆ.
ಸಂಖ್ಯಾಶಾಸ್ತ್ರಜ್ಞರು ಗ್ಯಾಲಪ್ ವಲ್ಡ್ ಪೋಲ್ ಮತ್ತು ತಲವಾರು GDP, ಜೀವಿತಾವಧಿ, ಆರೋಗ್ಯಕರ ಜೀವಿತಾವಧಿ, ಭ್ರಷ್ಟಾಚಾರದ ಗ್ರಹಿಕೆಗಳು, ಉದಾರತೆ, ಜೀವನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ, ಆರೋಗ್ಯಕರ ಜೀವಿತಾವಧಿ, ಸಾಮಾಜಿಕ ಬೆಂಬಲ ಅಂಶಗಳ ಡೇಟಾದ ಮೇಲೆ ಶ್ರೇಯಾಂಕವನ್ನು ಆಧರಿಸಿ ಈ ವರದಿಯನ್ನು ತಯಾರಿಸುತ್ತಾರೆ.
ಜಗತ್ತು ಕೊರೊನಾದ ಮೂರನೇ ವರ್ಷಕ್ಕೆ ಪ್ರವೇಶಿಸುತ್ತಿರುವ ಈ ಸಮಯದಲ್ಲಿ, ವರದಿಯು 2022ರಲ್ಲಿ ಮೂರು ಕ್ಷೇತ್ರಗಳನ್ನು ಕೇಂದ್ರೀಕರಿಸಿದೆ: ಹಿಂತಿರುಗಿ ನೋಡುವುದು; ಕೋವಿಡ್-19 ರ ಸಂದರ್ಭದಲ್ಲಿ ಜನರು ಮತ್ತು ದೇಶಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನೋಡುವುದು; ಮತ್ತು ಭವಿಷ್ಯದಲ್ಲಿ ಯೋಗಕ್ಷೇಮದ ವಿಜ್ಞಾನವು ಹೇಗೆ ವಿಕಸನಗೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಎದುರು ನೋಡುವುದು.
ಈ ವರ್ಷದ ವರದಿಯು ಗ್ಯಾಲಪ್ ವರ್ಲ್ಡ್ ಪೋಲ್‌ನಲ್ಲಿ ಮೇಲ್ವಿಚಾರಣೆ ಮಾಡಲಾದ ಈ ಎಲ್ಲಾ ಮೂರು ಕಾರ್ಯಗಳಲ್ಲಿ ವಿಶ್ವಾದ್ಯಂತ ಗಮನಾರ್ಹ ಬೆಳವಣಿಗೆಯನ್ನು ಕಂಡುಕೊಂಡಿದೆ. “2021 ರಲ್ಲಿ ಅಪರಿಚಿತರಿಗೆ ಸಹಾಯ ಮಾಡುವುದು, ಸ್ವಯಂ ಸೇವೆ ಮತ್ತು ದೇಣಿಗೆಗಳು ಪ್ರಪಂಚದ ಪ್ರತಿಯೊಂದು ಭಾಗದಲ್ಲಿ ತೀವ್ರವಾಗಿ ಹೆಚ್ಚಿವೆ” ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವರ್ಲ್ಡ್ ಹ್ಯಾಪಿನೆಸ್ ಸಂಪಾದಕ ಜಾನ್ ಹೆಲ್ಲಿವೆಲ್ ಹೇಳಿದ್ದಾರೆ.
ಈ ವರ್ಷದ ರ್‍ಯಾಂಕಿಂಗ್‌ನಲ್ಲಿ ಭಾರತದ ನಂತರದ ಸ್ಥಾನ ಪಡೆದ ಕೊನೆಯ ಹತ್ತು ದೇಶಗಳಲ್ಲಿ ಎಂಟು ದೇಶಗಳು ಆಫ್ರಿಕಾ ಖಂಡದ ದೇಶಗಳಾಗಿವೆ. ಉಳಿದ ಎರಡು ದೇಶಗಳಲ್ಲಿ ಒಂದು ಮಧ್ಯಪ್ರಾಚ್ಯ ದೇಶವಾದ ಲೆಬನಾನ್ ಆಗಿದ್ದು, ಅಲ್ಲಿ ಕಳೆದ ವರ್ಷ ನಾಗರಿಕ ದಂಗೆ ನಡೆದಿತ್ತು. ಮತ್ತೊಂದು ದೇಶ ಅಪಘಾನಿಸ್ತಾನವಾಗಿದ್ದು, ಕಳೆದ ವರ್ಷ ಅಲ್ಲಿನ ಆಡಳಿತವನ್ನು ತಾಲಿಬಾನ್ ಸಂಘಟನೆಯು ವಹಿಸಿಕೊಂಡಿತ್ತು.

ಈ ವರ್ಷದ ಪಟ್ಟಿಯಲ್ಲಿ ಭಾರತ ಮತ್ತು ನಮ್ಮ ನೆರೆಯ ದೇಶಗಳ ರ್‍ಯಾಂಕಿಂಗ್ ಹೀಗಿದೆ.

ವಿಶ್ವಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಈ ಪಟ್ಟಿಯನ್ನು ನೀಡುತ್ತಿದೆ. 2015ರ 158 ದೇಶಗಳ ಹ್ಯಾಪಿನೆಸ್ ರಿಪೋರ್ಟ್‌ನಲ್ಲಿ ಭಾರತವು 117ನೇ ಸ್ಥಾನಗಳಲ್ಲಿ ಇತ್ತು. 2018ರ ಹೊತ್ತಿಗೆ ಭಾರತದ ರ್‍ಯಾಂಕಿಂಗ್ 133ಕ್ಕೆ ಇಳಿದಿದ್ದು, ಈ ವೇಳೆ ವಿಶ್ವಸಂಸ್ಥೆಯು 156 ದೇಶಗಳನ್ನು ಪಟ್ಟಿ ಮಾಡಿತ್ತು. ಕೊರೊನಾ ನಂತರದ ಭಾರತದ ರ್‍ಯಾಂಕಿಂಗ್ ಮತ್ತಷ್ಟು ಇಳಿದಿದ್ದು, 146 ದೇಶಗಳ ಪಟ್ಟಿಯಲ್ಲಿ 136ನೇ ರ್‍ಯಾಂಕ್ ಪಡೆದಿದೆ.
ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-5


