ರಿಪೋರ್ಟರ್ಸ್ ವಿತೌಟ್ ಬಾರ್ಡರ್ ಸಂಸ್ಥೆ ಪ್ರಕಟಿಸಿರುವ 2022ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತವು 150ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಭಾರತ 142ನೇ ಸ್ಥಾನ ಪಡೆದಿತ್ತು. ಆ ಮೂಲಕ ದೇಶದಲ್ಲಿ ಪತ್ರಕರ್ತರು ಅತಿ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.
ವರದಿಯ ಪ್ರಕಾರ ನಾರ್ವೆ, ಡೆನ್ಮಾರ್ಕ್, ಸ್ವೀಡನ್ ಉತ್ತಮ ಪತ್ರಿಕಾ ಸ್ವಾತಂತ್ರ್ಯ ಹೊಂದಿರುವ ಮೊದಲ ಮೂರು ರಾಷ್ಟ್ರಗಳಾಗಿವೆ. ಉತ್ತರ ಕೊರಿಯಾ (180), ಎರಿಟ್ರಿಯಾ (179), ಇರಾನ್ (178) ಕಡೆಯ ಮೂರು ಸ್ಥಾನ ಪಡೆದು ಕೆಟ್ಟ ಸ್ಥಿತಿಗೆ ಉದಾಹರಣೆಗಳಾಗಿವೆ.
ಭಾರತದಲ್ಲಿ ಪತ್ರಕರ್ತರ ಶೋಚನೀಯ ಸ್ಥಿತಿ
ಈ ವರ್ಷದ ಫೆಬ್ರವರಿಯಲ್ಲಿ ರೈಟ್ಸ್ ಅಂಡ್ ರಿಸ್ಕ್ ಅನಾಲಿಸಿಸ್ ಗ್ರೂಪ್ (ಆರ್‌ಆರ್‌ಎಜಿ) ಬಿಡುಗಡೆ ಮಾಡಿದ ಇಂಡಿಯಾ ಪ್ರೆಸ್ ಫ್ರೀಡಂ ವರದಿಯ ಪ್ರಕಾರ, 2021ರಲ್ಲಿ ಭಾರತದಲ್ಲಿ ಕನಿಷ್ಠ ಆರು ಪತ್ರಕರ್ತರನ್ನು ಒಂದೇ ವರ್ಷದಲ್ಲಿ ಕೊಲೆಗೈಯಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ತಲಾ ಇಬ್ಬರು ಪತ್ರಕರ್ತರು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರು ಪತ್ರಕರ್ತರು ಕೊಲೆಯಾಗಿದ್ದಾರೆ. ಅಲ್ಲದೆ 108 ಪತ್ರಕರ್ತರನ್ನು, ಒಟ್ಟು 13 ಮಾಧ್ಯಮ ಸಂಸ್ಥೆಗಳನ್ನು ಟಾರ್ಗೆಟ್ ಮಾಡಲಾಗಿದೆ.
ಒಟ್ಟು 121 ಭಾರಿ ಪತ್ರಕರ್ತರ ಮೇಲೆ ದಾಳಿಗಳಾಗಿದ್ದು, ಅವುಗಳಲ್ಲಿ ಕನಿಷ್ಠ 34 ಪ್ರಕರಣಗಳು ರಾಜಕೀಯ ಪಕ್ಷಗಳು, ಪಕ್ಷಗಳ ಕಾರ್ಯಕರ್ತರು ಮತ್ತು ಮಾಫಿಯಾಗಳಿಂದ ನಡೆದಿವೆ. ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಟಾರ್ಗೆಟ್ (25) ಮಾಡಲಾಗಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ (23) ರಾಜ್ಯವಿದೆ.
2021ರಲ್ಲಿ 44 ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಅನೇಕ ಎಫ್‌ಐಆರ್‌ಗಳು ಆಗಿವೆ ಎಂಬುದನ್ನು ವರದಿ ತಿಳಿಸಿದೆ. 9 ಎಫ್‌ಐಆರ್‌ಗಳನ್ನು ದಾಖಲಿಸುವ ಮೂಲಕ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಜಮ್ಮು- ಕಾಶ್ಮೀರ ಮತ್ತು ದೆಹಲಿ ಎರಡನೇ ಸ್ಥಾನದಲ್ಲಿವೆ.
ಇದನ್ನೂ ಓದಿ; ಇಂದು ಪತ್ರಿಕಾ ಸ್ವಾತಂತ್ರ್ಯ ದಿನ: ಪತ್ರಕರ್ತರ ನೋವಿನ ಕಥನ
ಸರ್ಕಾರವನ್ನು ಕಟುವಾಗಿ ಟೀಕಿಸಿ ವರದಿ ಮಾಡುತ್ತಿರುವ ನ್ಯೂಸ್‌ಲಾಂಡ್ರಿ, ದೈನಿಕ್ ಭಾಸ್ಕರ್, ಭಾರತ್ ಸಮಾಚಾರ್, ನ್ಯೂಸ್‌ಕ್ಲಿಕ್‌ನಂತಹ ಮಾಧ್ಯಮ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳು ರೈಡ್ ಮಾಡಿವೆ.


