ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿರುವ ಭಾರತೀಯ ಕುಸ್ತಿ ಒಕ್ಕೂಟವು, ಮುಂದಿನ ತಿಂಗಳ ಆರಂಭದಲ್ಲಿ ದೆಹಲಿಯ ಕನ್ನಾಟ್ ಪ್ರದೇಶಕ್ಕೆ ತನ್ನ ಕಚೇರಿಯನ್ನು ಸ್ಥಳಾಂತರಿಸುವುದಾಗಿ ತಿಳಿಸಿದೆ.
ಕುಸ್ತಿ ಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪಿ, ರಾಷ್ಟ್ರೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ 21, ಅಶೋಕ ರಸ್ತೆಯಲ್ಲಿರುವ ಮನೆಯಿಂದಲೇ ಕಚೇರಿ ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿಯಾದ ಬಳಿಕ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ.
ಬ್ರಿಜ್ ಭೂಷಣ್ ಸಿಂಗ್ ಮನೆಯಿಂದಲೇ ಕಚೇರಿ ಕಾರ್ಯನಿರ್ವಹಿಸುತ್ತಿದೆ ಎಂಬುವುದನ್ನು ಕುಸ್ತಿ ಒಕ್ಕೂಟದ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಬ್ರಿಜ್ ಭೂಷಣ್ ಸಿಂಗ್ ಮನೆಯಿಂದಲೇ ಕುಸ್ತಿ ಒಕ್ಕೂಟದ ಕಚೇರಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಶನಿವಾರ (ಜ.25) ವರದಿ ಮಾಡಿತ್ತು. ಆ ಬಳಿಕ ಅದು ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು.
ರಾಷ್ಟ್ರೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷರಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ದ, ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಅರೋಪವಿದೆ. 2023ರಲ್ಲಿ ದೇಶದ ಪ್ರಮುಖ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ದ ಬೀದಿಗಳಿದು ಪ್ರತಿಭಟಿಸಿದ್ದರು.
ಹಲವಾರು ಮಹಿಳಾ ಕುಸ್ತಿಪಟುಗಳ ದೂರುಗಳ ಆಧಾರದ ಮೇಲೆ ಸಿಂಗ್ ವಿರುದ್ಧ ಆರೋಪಗಳನ್ನು ರೂಪಿಸಲು ದೆಹಲಿ ನ್ಯಾಯಾಲಯವು ಮೇ 10, 2024 ರಂದು ಆದೇಶಿಸಿದೆ. ಡಿಸೆಂಬರ್ 2023ರಲ್ಲಿ ಕುಸ್ತಿ ಫೆಡರೇಶನ್ ಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ.
ಪ್ರಸ್ತುತ ಒಕ್ಕೂಟದ ಮುಖ್ಯಸ್ಥರಾಗಿರುವ ಸಂಜಯ್ ಸಿಂಗ್, ಹರಿ ನಗರದಲ್ಲಿ ಕಚೇರಿ ನಿರ್ವಹಿಸುತ್ತಿದ್ದು, ಫೆಬ್ರವರಿ 2ರ ಬಸಂತ್ ಪಂಚಮಿಯಂದು ಕನ್ನಾಟ್ ಪ್ರದೇಶಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಗಂಭೀರ ಆರೋಪಗಳನ್ನು ಹೊತ್ತು ಹುದ್ದೆಯಿಂದ ಕೆಳಗಿಳಿದ ಬಳಿಕವೂ ಬ್ರಿಜ್ ಭೂಷಣ್ ಸಿಂಗ್ ಕುಸ್ತಿ ಒಕ್ಕೂಟದ ಮೇಲೆ ತನ್ನ ಹಿಡಿತ ಸಾಧಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ” “ನಾನು ಬಹಳ ಸಮಯದಿಂದ ಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಕುಸ್ತಿಪಟುಗಳು ಮತ್ತು ಈ ಕ್ರೀಡೆಗೆ ಸಂಬಂಧಿಸಿದ ಜನರು 21, ಅಶೋಕ ರಸ್ತೆಗೆ ಬರುತ್ತಿದ್ದಾರೆ. ಕ್ರೀಡಾಪಟುಗಳನ್ನು ಭೇಟಿ ಮಾಡಲು ನನಗೆ ಯಾವುದೇ ನಿರ್ಬಂಧವಿಲ್ಲ” ಎಂದಿದ್ದಾರೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಹಿಂದೆಯಿದ್ದ ಹಲವರಿಗೆ ‘ಪದ್ಮ ಪ್ರಶಸ್ತಿ’


