ದಲಿತ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೆ, ಅವರನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಥಳಿಸಿ ಅವರೊಂದಿಗೆ ಮೃಗೀಯವಾಗಿ ವರ್ತಿಸಿರುವ ಘಟನೆ ರಾಜ್ಯದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯು ಹಲವು ತಿಂಗಳ ಹಿಂದೆ ನಡೆದಿದೆ ಎಂದು ವರದಿಯಾಗಿದ್ದು, ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸುವ ಮತ್ತು ಲೈಂಗಿಕ ಕಿರುಕುಳ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯು ಮೊದಲಿಗೆ ಥಳಿತ ಮತ್ತು ಲೈಂಗಿಕ ಕಿರುಕುಳ ಎಂದು ನಂಬಲಾಗಿತ್ತು. ಆದರೆ ಶಹಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಪೊಲೀಸರು ಈ ಬಗ್ಗೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಕೂಡಾ ನಡೆದಿದೆ ಎಂದು ತಿಳಿದುಬಂದಿದೆ. ಮಹಿಳೆ ಇನ್ನೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಬಾಲಕಿ ಮೇಲೆ ಅತ್ಯಾಚಾರ- ದೂರು ದಾಖಲಿಸಲು ನಿರಾಕರಿಸಿದ ಪೊಲೀಸ್ ಠಾಣೆಗಳು
ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ದಲಿತ ಮಹಿಳೆಯನ್ನು ನಾಲ್ವರು ದುಷ್ಕರ್ಮಿಗಳು ಅಪಹರಿಸಿ, ಅವರನ್ನು ಶಹಾಪುರದ ಜಮೀನಿಗೆ ಕಾರಿನಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಮಾತನಾಡಿ, “ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿರುವ ಕುರಿತು ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಶಹಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಮಹಿಳೆ ಯಾರೂ ಎಂದು ಪತ್ತೆಯಾಗಿಲ್ಲ. ಪತ್ತೆಯಾದರೆ ಅವರ ಕಡೆಯಿಂದ ದೂರು ಪಡೆಯಲಾಗುವುದು. ಇಲ್ಲದಿದ್ದರೂ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು. ತನಿಖೆ ನಡೆಸಲು ಮೂರು ತಂಡಗಳನ್ನು ರಚೆನೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಯಾದಗಿರಿ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ವೇದಮೂರ್ತಿ ಅವರ ಹೇಳಿಕೆ#NaanuGauri #DalitLivesMatter pic.twitter.com/BwclkiNU8O
— Naanu Gauri (@naanugauri) September 13, 2021
ದುಷ್ಕರ್ಮಿಗಳು, ಮಹಿಳೆಯನ್ನು ವಿವಸ್ತ್ರಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಕಬ್ಬಿನ ಜಲ್ಲೆಯಿಂದ ಹಲ್ಲೆ ನಡೆಸುತ್ತಾ, ಅವರ ಅಂಗಾಗಳನ್ನು ಮುಟ್ಟುತ್ತಾ ಮೃಗೀಯವಾಗಿ ವರ್ತಿಸುತ್ತಿದ್ದರೆ, ಸಂತ್ರಸ್ತೆ ಮಹಿಳೆಯು ತನ್ನನ್ನು ಸುಮ್ಮನೆ ಬಿಡುವಂತೆ ಕಾಲಿಗೆ ಬಿದ್ದು ಅಂಗಲಾಚುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಭೀಕರ ಅತ್ಯಾಚಾರಕ್ಕೆ ತುತ್ತಾಗಿದ್ದ ಮಹಿಳೆ ಸಾವು: ಆರೋಪಿ ಬಂಧನ
ಘಟನೆಯ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ನಡೆದ ಘಟನೆ ನಾಚಿಕೆಗೇಡಿನದ್ದು ಎಂದು ಹೇಳಿದ್ದಾರೆ. “ಇದು ಯುವ ಪೀಳಿಗೆಯಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವುದರ ಸಂಕೇತವಾಗಿದೆ. ಮಾತ್ರವಲ್ಲ, ‘ಯಾವುದರಿಂದಲೂ ತಪ್ಪಿಸಿಕೊಳ್ಳಬಹುದು’ ಎಂಬ ವರ್ತನೆ ಕೂಡ ರಾಜ್ಯದಲ್ಲಿ ಕುಸಿಯುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ನೆನಪಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
The incident in Yadagir district is shameful.
It is not only a grim reminder on the eroding moral values among the younger generations, but also their “can get away with anything” attitude is also a reminder that the collapsing law & order situation in state.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 13, 2021
ಘಟನೆಯನ್ನು ವಿರೋಧಿಸಿ ಮತ್ತು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೋಮವಾರ(ಇಂದು) ಸಂಜೆ 4.30ಕ್ಕೆ ಬೆಂಗಳೂರಿನ ಮೈಸೂರು ವೃತ್ತದಲ್ಲಿ ‘ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ’ಯಿಂದ ಪ್ರತಿಭಟನೆ ನಡೆಯಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಂತಕಿ ಕೆ. ನೀಲಾ ಅವರು, “ಯಾದಗಿರಿ ಜಿಲ್ಲೆಯಲ್ಲಿ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಪ್ರಕರಣವು ಬೆಚ್ಚಿ ಬೀಳಿಸುವಂತಹದ್ದು. ಅಪರಾಧಿ ಸಮಾಜ ನಿರ್ಮಾಣದಲ್ಲಿ ಅಧಿಕಾರಸ್ಥರ, ಪಟ್ಟಭದ್ರರ ಹೇಯ ಪಾತ್ರವನ್ನು ಖಂಡಿಸಲೇಬೇಕಿದೆ. ನಾಗರೀಕ ಮನಸುಗಳು ಎಚ್ಚೆತ್ತುಕೊಳ್ಳದಿದ್ದರೆ ಕ್ರೌರ್ಯದ ಕೃತ್ಯಗಳು ಹೆಚ್ಚುತ್ತಲೇ ಹೋಗುವವು.. ಯಾದಗಿರಿ ಜಿಲ್ಲೆಯ ಆಡಳಿತ ಯಂತ್ರ ಏನು ಮಾಡುತ್ತಿದೆ? ಚುನಾಯಿತ ಮಂದಿ ಎಲ್ಲಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣ: ಸುಳ್ಯ ಬಿಜೆಪಿ ಅಧ್ಯಕ್ಷ ಸೇರಿ 15 ಮಂದಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್


