ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸರಸ್ವತಿ ಕಾಮತ್ ಮೇಲೆ ನಡೆಸಲಾದ ಹಲ್ಲೆ ಮತ್ತು ಅತ್ಯಾಚಾರ ಯತ್ನ ಪ್ರಕರಣದಲ್ಲಿ ಜಿ.ಪಂ ಸದಸ್ಯ, ಹಾಲಿ ಸುಳ್ಯ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿ 15 ಮಂದಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಸೋಮಶೇಖರ್‌ರವರು 15 ಮಂದಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 1.12 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

2014ರ ಲೋಕಸಭಾ ಚುನಾವಣೆಯ ಸಂದರ್ಭ ಅಂದಿನ ಜಿ.ಪಂ ಸದಸ್ಯೆಯಾಗಿದ್ದ ಸರಸ್ವತಿ ಕಾಮತ್ ಅವರು ನೆಲ್ಲೂರು ಕೆಮ್ರಾಜೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಆ ವೇಳೆ ಬಿಜೆಪಿಯ ಹರೀಶ್ ಕಂಜಿಪಿಲಿ ಮತ್ತು ಇತರರು ಅವರ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು ಮತ್ತು ಸೀರೆ ಎಳೆದಾಡಿ ಕಾಲಿನಿಂದ ಖಾಸಗಿ ಅಂಗಾಂಗಗಳಿಗೆ ಒದ್ದಿದ್ದರು ಎಂದು ಆರೋಪಿಸಲಾಗಿತ್ತು.

ಈ ಕುರಿತು ಹರೀಶ್ ಕಂಜಿಪಿಲಿ ಸೇರಿ ಹರೀಶ್ ಕಾಯಿಪಳ್ಳ, ಈಶ್ವರಪ್ಪ ಗೌಡ, ರವಿಚಂದ್ರ, ಸವಿನ್ ಕೆ.ಬಿ., ದಿವಾಕರ ನಾಯಕ್, ದಿನೇಶ್ ಚೆಮ್ನೂರು, ರಾಮಚಂದ್ರ ಹರ್ಲಡ್ಕ, ಷಣ್ಮುಖ, ಧನಂಜಯ, ಬಾಲಕೃಷ್ಣ ಕಂಜಿಪಿಲಿ, ಮನೋಹರ್, ದೀಪಕ್ ಎಲಿಮಲೆ, ಮನೋಜ್ ಎಂ.ಕೆ., ವಿಕಾಸ್ ಯಾನೆ ವಿಶ್ವನಾಥ ಎಂಬವರನ್ನೊಳಗೊಂಡ 15 ಮಂದಿಯ ತಂಡ ಗುಂಪು ಅವರ ಮೇಲೆ ಹಲ್ಲೆ ನಡೆಸಿ ಮತ್ತು ಅತ್ಯಾಚಾರಕ್ಕೆ ಯತ್ನಿಸಿದರು ಎಂದು ಸರಸ್ವತಿ ಕಾಮತ್ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಗಿನ ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕರಿ ರವಿ ಬಿ.ಎಸ್. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.


ಇದನ್ನೂ ಓದಿ: 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ; 7 ಮಂದಿಯ ಬಂಧನ

LEAVE A REPLY

Please enter your comment!
Please enter your name here