ಕಲಬುರಗಿಯ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ಇರುವ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಗದ್ದಲ ಉಂಟಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ.
ಇಂದು ಯಡಿಯೂರಪ್ಪನವರು ವಿಮಾನ ನಿಲ್ದಾಣ ಉದ್ಘಾಟನೆ ಮಾಡಲು ಬಂದಾಗ ವಿಮಾನ ನಿಲ್ದಾಣದ ಒಳಗೆಯೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ಪರ ಘೋಷಣೆ ಕೂಗಿ ಅಚ್ಚರಿ ಮೂಡಿಸಿದ್ದಾರೆ. ಇದರಿಂದ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಪ್ರತಿ ಘೋಷಣೆ ಕೂಗುವ ಮೂಲಕ ಗದ್ದಲ ಉಂಟುಮಾಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಗುಂಪುಗಳನ್ನು ನಿಯಂತ್ರಿಸಿದ್ದಾರೆ. ಕೆಲ ಕಾಲ ಉಂಟಾಗಿದ್ದ ಉದ್ವಿಗ್ನತೆ ಶಮಯಗೊಂಡಿದೆ.
ಕಲಬುರಗಿಗೆ ವಿಮಾನ ನಿಲ್ದಾಣ ತರುವಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನ ಬಹಳಷ್ಟಿದೆ. ಅವರಿಲ್ಲದಿದ್ದರೆ ಇಲ್ಲಿ ವಿಮಾನ ನಿಲ್ದಾಣ ಸಾಧ್ಯವೇ ಇರಲಿಲ್ಲ. ಅವರು ಕಟ್ಟಿದ ವಿಮಾನ ನಿಲ್ದಾಣವನ್ನು ಯಡಿಯೂರಪ್ಪನವರು ಉದ್ಘಾಟಿಸಿತ್ತಿರುವುದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಕಾರ್ಯಕರ್ತರು ಆ ರೀತಿ ಘೋಷಣೆ ಕೂಗಿದ್ದಾರೆ ಎನ್ನಲಾಗುತ್ತಿದೆ.


