ನ್ಯಾಯಾಧೀಶ ಮತ್ತು ವಕೀಲನ ನಡುವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಸೋಮವಾರ (ಜುಲೈ 28) ಅಸಾಧಾರಣ ಸಂದರ್ಭಕ್ಕೆ ಸಾಕ್ಷಿಯಾಯಿತು. ತನ್ನ ವಿರುದ್ದದ ವಕೀಲನ ಆರೋಪಗಳ ಕುರಿತು ಸ್ವತಃ ವಿಚಾರಣೆ ನಡೆಸಿದ ನ್ಯಾಯಾಧೀಶ, ವಕೀಲನ ವಿರುದ್ದ ಕಿಡಿಕಾರಿದರು.
ನ್ಯಾಯಮೂರ್ತಿ ಜಿ.ಆರ್ ಸ್ವಾಮಿನಾಥನ್ ಅವರು ಹಿರಿಯ ವಕೀಲ ಎಸ್. ವಂಚಿನಾಥನ್ ವಿರುದ್ದ ವಾಗ್ದಾಳಿ ನಡೆಸಿದ್ದು, ತನ್ನ ವಿರುದ್ದ ಜಾತಿ ಮತ್ತು ಕೋಮು ಪಕ್ಷಪಾತದ ಆರೋಪ ಮಾಡಿರುವ ವಂಚಿನಾಥನ್ ವಿರುದ್ದ ವಿಚಾರಣೆ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ವಕೀಲ ವಂಚಿನಾಥನ್ ಅವರನ್ನು “ನೀವೊಬ್ಬರು ಕಾಮಿಡಿ ಪೀಸ್” ಎಂದು ಜರೆದರು.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ನ್ಯಾಯಾಲಯದಲ್ಲಿ ಜಾತಿ ಪೂರ್ವಾಗ್ರಹ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ವಕೀಲ ವಂಚಿನಾಥನ್ ಅವರನ್ನು ನ್ಯಾಯಾಲಯಕ್ಕೆ ಕರೆಸಲಾಗಿತ್ತು. ತನ್ನ ವಿರುದ್ದ ಹೇಳಿಕೆ ನೀಡಿರುವ ವಂಚಿನಾಥನ್ ವಿರುದ್ದ ನ್ಯಾಯಮೂರ್ತಿ ಸ್ವಾಮಿನಾಥನ್ ‘ನ್ಯಾಯಾಂಗ ನಿಂದನೆ’ಯ ಆರೋಪ ಹೊರಿಸಿದ್ದಾರೆ ಎಂದು ವರದಿಯಾಗಿದೆ.
‘ಪೀಪಲ್ಸ್ ರೈಟ್ಸ್ ಪ್ರೊಟೆಕ್ಷನ್ ಸೆಂಟರ್’ ಸಂಸ್ಥೆಯ ರಾಜ್ಯ ಸಂಯೋಜಕ ಎಂಬ ಹೆಸರಿನಲ್ಲಿ ಜೂನ್ 14ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಾಧೀಶರಿಗೆ ಪತ್ರ ಬರೆದಿದ್ದ ವಕೀಲ ವಂಚಿನಾಥನ್ ನ್ಯಾಯಮೂರ್ತಿ ಸ್ವಾಮಿನಾಥನ್ ವಿರುದ್ಧ ಸೈದ್ಧಾಂತಿಕ ಪಕ್ಷಪಾತ, ನ್ಯಾಯಾಂಗ ನೇಮಕಾತಿಗಳಲ್ಲಿ ಜಾತಿ ಪಕ್ಷಪಾತ ಮತ್ತು ಕೋಮು ಒಲವು ಸೇರಿದಂತೆ 15 ಗಂಭೀರ ಆರೋಪಗಳನ್ನು ಮಾಡಿದ್ದರು. ಇತರ ವಿಷಯಗಳ ಜೊತೆಗೆ, ವಿವಾದಾತ್ಮಕ ಲಾವಣ್ಯ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯಾಧೀಶರ ಪಾತ್ರ ಮತ್ತು ದ್ರಾವಿಡ ಮಾದರಿ ಆಡಳಿತದ ವಿರುದ್ಧ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ್ದರು ಎಂದು ವರದಿಗಳು ಹೇಳಿವೆ.
ಪತ್ರ ಬರೆಯುವುದರ ಜೊತೆಗೆ ನ್ಯಾಯಮೂರ್ತಿ ಸ್ವಾಮಿನಾಥನ್ ವಿರುದ್ದ ವಂಚಿನಾಥನ್ ಅವರು ಯೂಟ್ಯೂಬ್ ಚಾನೆಲ್‌ಗಳಲ್ಲಿ ಸಂದರ್ಶನಗಳನ್ನು ನೀಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದರು. ಸಂದರ್ಶನವೊಂದರಲ್ಲಿ, ಒಬ್ಬ ದಲಿತ ಹಿರಿಯ ವಕೀಲರನ್ನು ಗುರಿಯಾಗಿಸಲಾಗಿದೆ. ಆದರೆ, ಬ್ರಾಹ್ಮಣ ವಕೀಲರಿಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಸ್ವಾಮಿನಾಥನ್ ವಿರುದ್ದ ವಕೀಲ ವಂಚಿನಾಥನ್ ಆರೋಪ ಮಾಡಿದ್ದರು.
ಇದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ವಕೀಲ ವಂಚಿನಾಥನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಅದರಂತೆ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಜುಲೈ 24ರಂದು ವಂಚಿನಾಥನ್ ಹಾಜರಾಗಿದ್ದರು. ಅಲ್ಲಿ, ಸ್ವತಃ ನ್ಯಾಯಮೂರ್ತಿ ಸ್ವಾಮಿನಾಥನ್ ಮತ್ತು ಕೆ. ರಾಜಶೇಖರ್ ಅವರ ಪೀಠ ವಂಚಿನಾಥನ್ ಅವರ ವಿಚಾರಣೆ ನಡೆಸಿದೆ. ಆದರೆ, ನ್ಯಾಯಾಲಯದ ಪ್ರಶ್ನೆಗೆ ಮೌಖಿಕವಾಗಿ ಉತ್ತರಿಸಲು ವಂಚಿನಾಥನ್ ನಿರಾಕರಿಸಿದ್ದರು. ಲಿಖಿತ ಉತ್ತರ ನೀಡುವುದಾಗಿ ಹೇಳಿದ್ದರು. ಹಾಗಾಗಿ, ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಲಾಗಿತ್ತು.
ಜುಲೈ 28ರಂದು, ಅಂದರೆ ಸೋಮವಾರ ವಿಚಾರಣೆ ವೇಳೆ, ನ್ಯಾಯಮೂರ್ತಿ ಸ್ವಾಮಿಥಾನ್ ವಕೀಲ ವಂಚಿನಾಥನ್ ವಿರುದ್ದ ಕಿಡಿಕಾರಿದ್ದಾರೆ. “ನಿಮ್ಮನೆಲ್ಲ ಕ್ರಾಂತಿಕಾರಿಗಳು ಎಂದವರು ಯಾರು? ನೀವೊಬ್ಬರು ಕಾಮಿಡಿ ಪೀಸ್” ಎಂದು ವಕೀಲನ ವಿರುದ್ದ ಹೇಳಿಕೆ ನೀಡಿದ್ದಾರೆ.
“ವಂಚಿನಾಥನ್ ಅವರೇ, ನನ್ನ ತೀರ್ಪುಗಳನ್ನು ಟೀಕಿಸುವ ನಿಮ್ಮ ಹಕ್ಕನ್ನು ನಾನು 100 ಶೇಕಡ ಗೌರವಿಸುತ್ತೇನೆ. ಆದರೆ, ನೀವು ಜಾತಿ ಪಕ್ಷಪಾತವನ್ನು ಆರೋಪಿಸಿದಾಗ ವಿಷಯ ವಿಭಿನ್ನ ತಿರುವು ಪಡೆಯುತ್ತವೆ” ಎಂದಿದ್ದಾರೆ.
ಬಾರ್ & ಬೆಂಚ್ ಪ್ರಕಾರ, “ಕಳೆದ ನಾಲ್ಕು ವರ್ಷಗಳಿಂದ ನೀವು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದೀರಿ. ಆದರೆ, ನಾನು ನಿಮ್ಮ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆಂದರೆ, ಕಾರ್ಯ ವಿಧಾನದ ನಿಯಮಗಳ ಬಗ್ಗೆ ನಮಗೆ ಗೊತ್ತಿದೆ. ಆದರೆ, ನಾವು ಮೂರ್ಖರಲ್ಲ. ನಾವು ಈ ಪ್ರಕರಣವನ್ನು ಮುಖ್ಯ ನ್ಯಾಯಾಧೀಶರು ಅಥವಾ ಸೂಕ್ತ ಪೀಠದ ಮುಂದೆ ಇಡುತ್ತೇವೆ. ಇಡೀ ವ್ಯವಸ್ಥೆಯೇ ನಮ್ಮ ವಿರುದ್ಧ ಇದೆ ಎಂದು ಗೊತ್ತಿದೆ. ಆದರೆ, ನಾವು ಭಯಪಡುವುದಿಲ್ಲ, ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ನ್ಯಾಯಾಂಗದ ಸ್ವಾತಂತ್ರ್ಯ ಸರ್ವೋಚ್ಚವಾಗಿದೆ” ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಹೇಳಿದ್ದಾರೆ.
ಇದೇ ವೇಳೆ, ವಂಚಿನಾಥನ್ ಅವರು ಸುಪ್ರೀಂ ಕೋರ್ಟ್‌ಗೆ ಕಳುಹಿಸಿರುವ ಗೌಪ್ಯ ಪತ್ರಕ್ಕೂ, ಅವರ ವಿರುದ್ದದ ವಿಚಾರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಸೋಮವಾರ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಯ ಪೀಠಕ್ಕೆ ಪ್ರಸ್ತಾಪಿಸಲಾಗಿದೆ. ಏಕೆಂದರೆ, ಇದು ನ್ಯಾಯಮೂರ್ತಿ ಸ್ವಾಮಿನಾಥನ್ ಅವರಿಗೆ ಸಂಬಂಧಪಡುವುದರಿಂದ, ಸ್ವತಃ ಅವರೇ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ತೀರ್ಮಾನಿಸಲಾಗಿದೆ. ಹಾಗಾಗಿ, ಮುಖ್ಯ ನ್ಯಾಯಮೂರ್ತಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುವುದರ ಮೇಲೆ ಪ್ರಕರಣದ ಬೆಳವಣಿಗೆ ನಡೆಯಲಿದೆ.
ಛತ್ತೀಸ್‌ಗಢ| ಕ್ರಿಶ್ಚಿಯನ್ ಸಮುದಾಯದಲ್ಲಿ ಆತಂಕ ಮೂಡಿಸಿದ ಸನ್ಯಾಸಿನಿಯರ ಬಂಧನ


