Homeಅಂಕಣಗಳು“ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

“ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

- Advertisement -
- Advertisement -

ಒಬ್ಬ ನಿಷ್ಕಪಟ ಅಲೆಮಾರಿಯೊಬ್ಬ ಯಾವ ಸೋಗಿಲ್ಲದ ಗೆಳೆಯನಾಗಿ ಬಂದು ಆಪ್ತತೆಯಿಂದ ಇದ್ದರೆ, ಆತ್ಮೀಯತೆಯನ್ನು ತೋರಿದರೆ, ಆತ ನಮ್ಮೊಡನಿರುವ ಅಲ್ಪ ಕಾಲ ಬದುಕು ಆತ್ಮತೃಪ್ತಿ ಹೊಂದುವುದೆಂದರೆ? ಹೌದಲ್ಲಾ, ಅವನ ಪುಟ್ಟ ಪುಟ್ಟ ಕತೆಗಳು, ಕವನಗಳು ಅದೆಷ್ಟು ಗಾಢ ನೋಟಗಳನ್ನು ಹೊಂದಿರುತ್ತವೆ.

ಖಲೀಲನ ಬರಹಗಳೇ ಹಾಗೆ. ನಮಗೆ ತಿಳಿಯದೇ ಎಲ್ಲೋ ಇರುವ ನಮ್ಮವನೊಬ್ಬ ಮೆಲ್ಲನೆ ನುಸುಳಿ ಬಂದು, “ಹಲೋ, ನಾನಿಲ್ಲಿದ್ದೀನಿ” ಎಂದು ಕೈ ಬೀಸುವಂತೆ.

ವಾಂಡರರ್ ಎಂಬ ತಲೆಬರಹದ ಖಲೀಲನ ಅಲೆಮಾರಿಯಲ್ಲೂ ಹಾಗೇ.

ರಸ್ತೆಗಳು ಸಂಧಿಸುವಲ್ಲಿ ನಾ ಸಂಧಿಸಿದೆ ಅವನ.

ನಿಲುವಂಗಿ ಇಲ್ಲದ, ಜತೆಗಾರನು ಜತೆಗಿಲ್ಲದ, ಆದರೆ ನೋವಿನ ಮುಸುಕನು ಮುಖದ ಮೇಲೆಯೇ ಹೊದ್ದಾತನ.

ವಂದಿಸಿಕೊಂಡೆವು ಒಬ್ಬರಿಗೊಬ್ಬರು. “ನನ್ನಯ ಅತಿಥಿ ನೀನಾಗು, ಬಾ ನನ್ನಯ ಮನೆಗೆಂದು”- ನಾ ಅವನೊಡ ನುಡಿದೆ.

ಹಾ, ಅವ ಬಂದ.

ತಲೆಬಾಗಿಲಿನಲ್ಲಿ ಎದುರಿಗೆ ಬಂದರು ನನ್ನಯ ಹೆಂಡತಿ-ಮಕ್ಕಳು, ಅವರನು ಕಂಡು ನಸುನಕ್ಕನಾತನು, ಅವರೂ ಹಿಗ್ಗುತ ಮನ್ನಿಸಿದಾತನ ಬರುವಿಕೆಯನ್ನು.

ಉಂಬುವ ಎಡೆಯಲಿ ಕುಳಿತೆವು ಎಲ್ಲಾ, ಸಂತಸ ಪಡುತ ಆತನ ಮೌನವ, ಮತ್ತಾತನೊಳಿರುವ ಗುಪ್ತವಹನವ.

ಇರುಳಿನ ಊಟವ ಮುಗಿಸಿದ ನಂತರ ಸೇರಿದೆವೆಲ್ಲಾ ಬೆಂಕಿಯ ಸುತ್ತಲೂ. ಅರಿಯಲು ಕೇಳಿದೆ ನಾನವನ, ಅವನಲೆದಾಟದ ಪರಿ ಕುರಿತು.

ಅಂದಿನ ಇರುಳೂ, ಮುಂದಿನ ದಿನವೂ ಹೇಳಿದನವನು ಬಹು ಕಥೆಗಳನು. ಇಲ್ಲಿ ಮಂಡಿಸುವೆ ಅವನಾ ದಿನಗಳ ಕಾಠಿಣ್ಯಗಳ, ಸಾಗಿದ ಮಾರ್ಗದ ಧೂಳಿನ ಕಥೆಗಳ, ಅವುಗಳ ಒಡನೆ ಆತನಿಗಿದ್ದ ಸಹನೆ ಮತ್ತು ಮರುಕಗಳ.

ಮೂರು ದಿನಗಳ ನಂತರ ಅತಿಥಿಯು ಬಿಟ್ಟು ಹೊರಟರೂ ನಮ್ಮನ್ನು, ಅನಿಸಲೇ ಇಲ್ಲ ಅವ ತೊರೆದಿಹನೆಂದು. ಬದಲನಿಸುತಲಿತ್ತು, ಇಲ್ಲೇ ಹೊರಗೆ ತೋಟದಲಿರುವನು, ಇನ್ನೂ ಒಳಗೆ ಮರಳಿಲ್ಲ ನಮ್ಮೊಡನಿರುವ ಆ ಒಬ್ಬಾತನು.

ಅಲೆಮಾರಿಯಲ್ಲಿ ಖಲೀಲ್ ಗಿಬ್ರಾನ್ ತನ್ನ ಬರಹಗಳ ಮೂಲಕ ಬೂದಿಮುಚ್ಚಿರುವ ನಮ್ಮ ಭಾವದ ಸೆಲೆಯ ಕೆಂಡವನ್ನು ಉರುಬಿ ಜ್ವಲಿಸುವಂತೆ ಮಾಡುತ್ತಾನೆ. ಅವನು ಹೇಳುವ ಕತೆಗಳಲ್ಲಿ ಸೋಗಲಾಡಿತನದ ಸಮಾಜದ ಸಿದ್ಧ ಮಾದರಿಗಳನ್ನು ಪ್ರತಿಭಟಿಸುವುದೂ ಕೂಡಾ ಉಂಟು.

ಅದೊಂದು ದಿನ ಸೌಂದರ್ಯ ಮತ್ತು ಕುರೂಪಗಳೆರಡೂ ಸಂಧಿಸಿದವು ಒಂದು ಸಾಗರ ದಂಡೆಯಲಿ. ಒಬ್ಬರಿಗೊಬ್ಬರು ನುಡಿಯಾಡಿಕೊಂಡರು, “ನಡೆ ಮೀಯುವ ಆ ಸಾಗರದಲಿ.” ಎಂದು.

ಕಳಚಿ ಉಡುಪುಗಳ ನೀರಲಿ ಅವರು ಈಜಿದರು. ಸಮಯ ಸರಿಯಲು ದಡಕೆ ಬಂದಿತು ಕುರೂಪವು ಮೊದಲು. ಅಲ್ಲಿಂದ ಹೊರಟಿತು ಸೌಂದರ್ಯದ ಉಡುಪನ್ನು ತಾನುಟ್ಟು.

ಸೌಂದರ್ಯವೂ ಸಾಗರದಿಂದ ಹೊರಗೆ ಬಂದಿತು. ಕಾಣದಾಯಿತು ತಾ ಬಿಚ್ಚಿಟ್ಟಿದ್ದ ಉಡುಪು. ಅದಕೋ ಬಲು ಸಂಕೋಚ ಬೆತ್ತಲಾಗಿ ತಾನಿರಲು. ಕುರೂಪದ ಉಡುಪನೇ ತೊಟ್ಟಿತು, ಬೇರೆದಾರಿಯನು ಕಾಣದೇ. ಅದರಲೇ ನಡೆಯಿತು, ಹಿಡಿದದರ ದಾರಿ.

ಅಂದಿನಿಂದಲಿ ಸ್ತ್ರೀ-ಪುರುಷರೆಲ್ಲಾ ಒಂದಕೆ ಮತ್ತೊಂದನು ತಪ್ಪಾಗಿ ತಿಳಿಯುವರು.

ಆದರೂ ಸೌಂದರ್ಯದ ಮುಖ ನೋಡಿದ ಹಲವರು, ಅರಿವರು ಅದು ತೊಟ್ಟಿಹ ಉಡುಪು ಅದಕೆ ಹೊಂದುತ್ತಿಲ್ಲೆಂದು. ಅಂತೆಯೇ ಕುರೂಪದ ಮುಖ ಕಂಡವರ ಕಣ್ಣುಗಳಿಂದ, ಅದು ತಾ ತೊಟ್ಟಿಹ ಉಡುಗೆಯಿಂದ ತನ್ನನು ತಾ ಮರೆಮಾಚಲಾರದು.

ಲೋಕದ ಕಣ್ಣಿಗೆ ಕಾಣುವ ಮಂದಿಯ ಬಗೆಯನ್ನು ಪ್ರಶ್ನಿಸುವುದಿರಲಿ, ಸೌಂದರ್ಯವನ್ನೂ ಸಿದ್ಧ ಮಾದರಿಯ ಸೂತ್ರದಲ್ಲಿ ಕಟ್ಟಿಕೊಂಡಿರುವಂತ ಮಂದಿಯು ತಮ್ಮಲ್ಲೊಮ್ಮೆ ನೋಡಿಕೊಳ್ಳುವರೇ?

ಅವುಗಳು ಕತೆಗಳಲ್ಲ, ಸಾಮತಿಗಳು ಅಥವಾ ದೃಷ್ಟಾಂತಗಳು. ವಿಷಯಗಳನ್ನು ಸ್ಪಷ್ಟಪಡಿಸಲು, ಅರಿವಿನ ಹೂರಣವನ್ನು ಹೊರಗೆಡವಲು ಕಥನ ವಿಧಾನವನ್ನು ಅನುಸರಿಸುವುದು ಅವರ ಮಾರ್ಗ. ಯೇಸುವೂ ತನ್ನ ಬೋಧನೆಗಳಲ್ಲಿ ಹಾಗೆ ಮಾಡುತ್ತಿದ್ದ. ರಾಮಕೃಷ್ಣ ಪರಮಹಂಸರೂ ತಮ್ಮ ದೃಷ್ಟಾಂತದ ಕತೆಗಳಲ್ಲಿ ಸೂಕ್ಷ್ಮ ಒಳನೋಟವನ್ನು ಹೊಂದಿರುತ್ತಿದ್ದರು.

ಖಲೀಲನ ಇನ್ನೊಂದು ಕತೆ ನೋಡಿ.

ಬಾನಾಡಿಯೊಂದು ಮತ್ತು ಹದ್ದೊಂದು ಸಂಧಿಸಿದವು ಎತ್ತರದ ಬೆಟ್ಟದ ಮೇಲಿನ ಬಂಡೆಯೊಂದರ ಮೇಲೆ. ಬಾನಾಡಿ, “ಸುಪ್ರಭಾತವು ನಿಮಗೆ ಸ್ವಾಮಿ.” ಎಂದು ಹೇಳಲು ಹದ್ದು ಅದನ್ನು ಕಡೆಗಣಿಸುತ್ತಾ ನೀರಸವಾಗಿ ನುಡಿಯಿತು, “ಸುಪ್ರಭಾತ.”

ಬಾನಾಡಿ ಮತ್ತೂ ಹೇಳಿತು, “ಸ್ವಾಮೀ, ತಮ್ಮೆಲ್ಲಾ ಕಾರ್ಯ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿರಬೇಕೆಂದು ನಾನು ಭಾವಿಸುತ್ತೇನೆ.”

“ಹೇಯ್,” ಹದ್ದು ಹೇಳಿತು, “ನನ್ನೆಲ್ಲಾ ಸಮಾಚಾರಗಳೂ ಚೆನ್ನಾಗೇ ಇವೆ. ಆದರೆ ನಿನಗಿದು ತಿಳಿಯದೇ ನಾವು ಪಕ್ಷಿಗಳ ರಾಜನೆಂದು ಮತ್ತು ನಾವಾಗಿಯೇ ನಿನ್ನನ್ನು ಮಾತನಾಡಿಸದ ಹೊರತು ನೀನು ನಮ್ಮನ್ನುದ್ದೇಶಿಸಿ ಮಾತಾಡಬಾರದೆಂದು?”

ಬಾನಾಡಿ ಹೇಳಿತು, “ನಾವೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರೆಂದು ನಾನು ಬಗೆದೆ.”

ಹದ್ದು ಅವನನ್ನು ತಿರಸ್ಕಾರದಿಂದ ಕಡೆಗಣಿಸಿ ಹೇಳಿತು, “ಯಾರವರು ಹೇಳಿದ್ದು ನೀನು ಮತ್ತು ನಾನು ಒಂದೇ ಕುಟುಂಬವೆಂದು.”
ಆಗ ಬಾನಾಡಿ ಹೇಳಿತು, “ನಿಮಗೆ ಈ ಒಂದು ವಿಷಯವನ್ನು ಚಿತ್ತಕ್ಕೆ ತರಲಿಚ್ಚಿಸುತ್ತೇನೆ. ನೀವೇರುವ ಎತ್ತರಕ್ಕೆಯೇ ನಾನೂ ಹಾರಬಲ್ಲೆ. ನಾನು ಹಾಡಿ ಈ ಭೂಮಿಯ ಇತರ ಜೀವಿಗಳಿಗೆ ಮುದಕೊಡಬಲ್ಲೆ. ಮತ್ತೆ ನೀವು ಆನಂದವನ್ನೋ ಅಥವಾ ಮುದವನ್ನೊ ಕೊಡಲಾರಿರಿ.”

ಆಗ ಕೋಪಗೊಂಡ ಹದ್ದು ಹೇಳಿತು. “ಆನಂದ ಮತ್ತು ಮುದ! ಎಲಾ ದುರಹಂಕಾರದ ಕ್ಷುದ್ರ ಜಂತುವೇ! ಒಮ್ಮೆಗೇ ನನ್ನ ಕೊಕ್ಕಿನಿಂದ ನಿನ್ನ ಒತ್ತಿ ನಾಶ ಮಾಡಿಬಿಡಬಲ್ಲೆ. ನೀನು ನನ್ನ ಪಾದದಷ್ಟೂ ಅಳತೆಗಿಲ್ಲ.”

ಬಾನಾಡಿಯಾಗ ಹಾರಿ ಹದ್ದಿನ ಬೆನ್ನ ಮೇಲೆರಗಿ ಅವನ ಪುಕ್ಕಗಳನ್ನು ಕೀಳಲಾರಂಭಿಸಿತು. ಹದ್ದಿಗೆ ರೇಗಿತು. ಸರ್ರನೆ ಮೇಲಕ್ಕೆ ಹಾರಿ ಆ ಕ್ಷುದ್ರ ಪಕ್ಷಿಯನ್ನು ನಿವಾರಿಸಿಕೊಳ್ಳಲು ಸಾಧ್ಯವೇನೋ ಎಂದು ನೋಡಿತು. ಆದರೆ ತನ್ನ ಕಾರ್ಯದಲ್ಲಿ ವಿಫಲವಾಯಿತು. ಕೊನೆಗೆ ಶಪಿಸುತ್ತಾ ತನ್ನ ಕೆಟ್ಟ ಕಾಲವನ್ನು ಬೆನ್ನಿಗಂಟಿದ್ದ ಆ ಪಕ್ಷಿಯೊಂದಿಗೆ ಎಂದೂ ಇಲ್ಲದಷ್ಟು ಆ ಎತ್ತರದ ಬೆಟ್ಟದ ಬಂಡೆಗಲ್ಲುಗಳಿಗೆ ಬೆನ್ನನ್ನು ತಗುಲಿಸಿಕೊಳ್ಳುತ್ತಿತ್ತು.

ಈಗ ಅಲ್ಲಿಗೊಂದು ಸಣ್ಣ ಆಮೆಯೊಂದು ಬಂದು ತಾನು ಕಾಣುತ್ತಿರುವ ಆ ದೃಶ್ಯಕ್ಕೆ ನಗಲಾರಂಭಿಸಿತು. ಅದೆಷ್ಟು ಹೊರಳಾಡಿಕೊಂಡು ಅದು ನಕ್ಕಿತೆಂದರೆ, ಇನ್ನೇನು ತನ್ನ ಬೆನ್ನ ಮೇಲೆಯೇ ಹೊರಳಿಬಿಡುತ್ತಿತ್ತು.

ಆ ಆಮೆಯನ್ನು ಉಪೇಕ್ಷೆಯಿಂದ ನೋಡುತ್ತಾ ಹದ್ದು ಹೇಳಿತು, “ಹೇ, ಭೂಮಿಯ ಮೇಲೆಯೇ ಬೇರೆಲ್ಲೂ ಕಾಣದಂತಹ ನಿಧಾನ ಗತಿಯಲ್ಲಿ ತೆವಳುವ ಜಂತುವೇ, ನೀನು ನಗುತ್ತಿರುವುದಾದರೂ ಏತಕ್ಕೆ?”

ಆ ಆಮೆ ಹೇಳಿತು, “ನೀನೊಂದು ಕುದುರೆಯಾಗಿ ಬದಲಾಗಿರುವುದನ್ನೇಕೆ ನೋಡುತ್ತಿರುವೆನೋ. ಅದೂ ಪುಟ್ಟ ಪಕ್ಷಿಯೊಂದು ನಿನ್ನ ಮೇಲೆ ಸವಾರಿ ಮಾಡುತ್ತಿದೆ. ಆದರೆ ನೋಡು, ಸಣ್ಣ ಪಕ್ಷಿಯೇ ಉತ್ತಮ ಪಕ್ಷಿ.

ಹದ್ದು ಆಮೆಗೆ ಹೇಳಿತು, “ನಿನ್ನ ಕೆಲಸ ನೀನು ನೋಡಿಕೋ ಹೋಗು. ಈ ಬಾನಾಡಿ ಸೋದರ ಮತ್ತು ಇದು ನಮ್ಮ ನಮ್ಮ ನಡುವಿನ ಕುಟುಂಬದ ವಿಷಯ.”

ಸಮಾಜದಲ್ಲಿ ಮುಖವಾಡಗಳು ಮತ್ತು ಹುಸಿಪ್ರತಿಷ್ಟೆಗಳ ಆರ್ಭಟಗಳ ನಡುವೆ ನಾವು ಹುಚ್ಚರಾಗಿಬಿಡುತ್ತೇವೆ ಎಂದುಕೊಂಡರೆ, ಓಶೋ ಹೇಳುತ್ತಾನೆ, ಹುಚ್ಚರೇ ನಿಜವಾದ ಪ್ರಾಮಾಣಿಕ ಒಳದನಿಯುಳ್ಳವರು ಎಂದು. ಓಶೋ ಖಲೀಲನ ಬಹುದೊಡ್ಡ ಅಭಿಮಾನಿ. ಖಲೀಲನೂ ಒಬ್ಬ ಹುಚ್ಚ. ಅವನ ಹುಚ್ಚ ಎನ್ನುವ ಪುಸ್ತಕದಲ್ಲಿ ಹೀಗೆ ತೆರೆದುಕೊಳ್ಳುತ್ತಾನೆ.

ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?

ಅದು ನಡೆದಿದ್ದು ಹೀಗೆ:

ಅದೊಂದು ದಿನ, ಅದೆಷ್ಟೋ ದೇವರುಗಳು ಹುಟ್ಟುವ ಮುನ್ನ,

ಗಾಢನಿದ್ರೆಯಿಂದ ನಾ ಎಚ್ಚರಗೊಂಡೆ, ನನ್ನೆಲ್ಲಾ ಮುಖವಾಡಗಳೂ ಕಳುವಾಗಿರುವುದನ್ನು ಕಂಡುಕೊಂಡೆ.

ಏಳು ಜನುಮಗಳಲ್ಲಿ ನಾ ರಚಿಸಿ ತೊಟ್ಟಿದ್ದ ಆ ಏಳು ಮುಖವಾಡಗಳು!

ಮುಖವಾಡವಿಲ್ಲದೆಯೇ ಓಡಿದೆನು ಜನಭರಿತ ಬೀದಿಗಳಲರಚಿದೆನು, “ಕಳ್ಳರು, ಕಳ್ಳರು, ದರಿದ್ರದ ಕಳ್ಳರು!”

ಸ್ತ್ರೀ-ಪುರುಷರು ನಕ್ಕರು ನನ್ನ ನೋಡಿ. ಮನೆಯೊಳಗೆ ಓಡಿದರು ಕೆಲವರು ನನ್ನ ಭಯದಿಂದಲೇ ಕೂಡಿ.

ನಾ ತಲುಪಿದೆನಾಗ ಸಂತೆಮಾಳವನು, ಮನೆ ಮೇಲೆ ನಿಂತು ಕೂಗಿದನೊಬ್ಬ ಯುವಕನು, “ಅವನೊಬ್ಬ ಹುಚ್ಚ.”

ಹಾಗೆ ಕೂಗಿದವನ ದೃಷ್ಟಿಸಲೆಂದು ತಲೆಯೆತ್ತಿ ನೋಡಿದೆನು.

ಮೊದಲಬಾರಿಗೆ ನನ್ನದೇ ಆದ ನನ್ನ ನಗ್ನ ಮುಖವನ್ನು ಸೂರ್ಯ ಚುಂಬಿಸಿದನು.

ಪ್ರೇಮದೊಳು ನನ್ನಾತ್ಮ ರವಿಗಾಗಿ ಜ್ವಲಿಸಿತು.

ನನ್ನ ಮುಖವಾಡಗಳು ಇನ್ನು ಎನಗೆ ಬೇಡವಾಯಿತು.

ಪರವಶದಲಿ ಇರುವಂತೆ ನಾ ಕೂಗಿ ಹೇಳಿದೆ,

“ನನ್ನ ಮುಖವಾಡಗಳ ಕದ್ದೊಯ್ದ ಕಳ್ಳರು ಭಾಗ್ಯವಂತರು, ಭಾಗ್ಯವಂತರು.”

ಈ ರೀತಿಯಲ್ಲಿ ನಾ ಹುಚ್ಚನಾದೆ.

ಹಾಗೆ ಅರಿತುಕೊಳ್ಳುವುದರಲ್ಲಿ ನಾ ಕಂಡುಕೊಂಡೆ

ಏಕಾಂತತೆಯ ಮುಕ್ತತೆಯನ್ನೂ ಮತ್ತದರ ಸುರಕ್ಷಿತತೆಯನ್ನು,

ನಮ್ಮೊಳಗಿನ ಯಾವುದಕ್ಕಾದರೂ ಅಡಿಯಾಳಾಗಿರುವುದನ್ನು ಅರಿತುಕೊಂಡವರಾಗಿರುವುದಕ್ಕೆ.

ಏನಾದರಾಗಲಿ, ನನ್ನ ಸುರಕ್ಷಿತತೆಯ ಬಗ್ಗೆ ಅತಿಜಂಭ ನನಗೆ ಬೇಡವಾಗಿರಲಿ,

ಬಂಧಿಖಾನೆಯೊಳಗಿರುವ ಕಳ್ಳನೂ ಇನ್ನೊಬ್ಬ ಕಳ್ಳನಿಗಿಂತ ಸುರಕ್ಷಿತನು.

ಕೆಲವೊಮ್ಮೆ ಖಲೀಲನಂತವರು ಹೇಳುವ ಕತೆಗಳನ್ನು ವಿವರಿಸಲು ಹೋದರೆ, ಅವನ್ನು ಸಂಕುಚಿತಗೊಳಿಸಿಬಿಡುವ ಎಡವಟ್ಟು ಮಾಡಿಕೊಂಡುಬಿಡುತ್ತೇವೆ ಎನಿಸುತ್ತದೆ. ಬಹಳ ಸರಳವಾದ ಕತೆ ಅದೇನೇನನ್ನೋ ಹೇಳುತ್ತದೆ. ಓದುವವರಿಗೇ ಬಿಟ್ಟುಬಿಡಬೇಕು.

ಸೂರ್ಯೋದಯದ ಸಮಯದಲ್ಲಿ ನರಿಯೊಂದು ತನ್ನ ನೆರಳನ್ನು ನೋಡಿಕೊಂಡು ಹೇಳಿತು, “ನಾನಿವತ್ತು ನನ್ನ ಊಟಕ್ಕೆ ಒಂಟೆಯನ್ನು ತಿನ್ನುವೆ” ಎಂದು.

ಹಾಗೆಂದು ಬೆಳಗ್ಗೆ ಪೂರ್ತಿ ಒಂಟೆಗಳನ್ನು ಹುಡುಕುತ್ತಾ ಹೊರಟಿತು.

ಆದರೆ ಮಧ್ಯಾಹ್ನ ಮತ್ತೆ ತನ್ನ ನೆರಳನ್ನು ನೋಡಿಕೊಂಡು ಹೇಳಿತು, “ಒಂದು ಇಲಿಯಷ್ಟೇ ಸಾಕು” ಎಂದು.

ಅವರವರ ಸಿದ್ಧಾಂತಗಳು, ಧರ್ಮಗಳು, ನಂಬಿಕೆ ಶ್ರದ್ಧೆಗಳು ಶ್ರೇಷ್ಟವೆಂದು ಕಣ್ಣೆದುರು ನಡೆಯುತ್ತಿರುವ ಸಂಘರ್ಷಗಳನ್ನು ಕಂಡಾಗ ಖಲೀಲ ಮೆಲ್ಲನೆ ಈ ಕತೆಯನ್ನು ಕಿವಿಯಲ್ಲಿ ಉಸುರಿದಂತಾಗಿ ನಗು ಬಂದುಬಿಡುತ್ತದೆ.

ಒಂದು ದಿನ ಜಾಣ ನಾಯೊಂದು ಸಾಗಿ ಹೋಗುವಾಗ ಬೆಕ್ಕುಗಳ ಗುಂಪೊದನ್ನು ಕಂಡಿತು. ನಾಯಿಯು ಅವುಗಳ ಹತ್ತಿರ ಹೋದಾಗಲೂ ಅವುಗಳು ಇದರತ್ತ ಗಮನ ಹರಿಸದೇ ಮೈಮರೆತಿವುದನ್ನು ಕಂಡು ಅಲ್ಲೇ ನಿಂತಿತು.

ಆಗ ಅವುಗಳ ನಡುವಿಂದ ಒಂದು ದೊಡ್ಡ ಹಾಗೂ ಗಂಭೀರವಾದ ಬೆಕ್ಕೊಂದು ಎದ್ದು ನಿಂತು ತನ್ನ ಸುತ್ತಲಿರುವ ಇತರ ಬೆಕ್ಕುಗಳನ್ನು ನೋಡಿ ಹೇಳಿತು.

“ಸಹೋದರರೇ, ಪ್ರಾರ್ಥಿಸಿ, ಮತ್ತೆ ಮತ್ತೆ ಪ್ರಾರ್ಥಿಸಿ, ಹಾಗೆ ನೀವು ಮತ್ತೆ ಮತ್ತೆ ಪ್ರಾರ್ಥಿಸಲು, ಅನುಮಾನವೇ ಬೇಡ, ಖಂಡಿತವಾಗಿ ಆಗ ಇಲಿಗಳ ಮಳೆಯೇ ಸುರಿಯುವುದು.”

ನಾಯಿಯು ಇದನ್ನು ಕೇಳಿದಾಗ ಮನಸ್ಸಿನಲ್ಲಿಯೇ ನಕ್ಕು, “ಓ ಮೂಢ ಮತ್ತು ಅಂಧ ಬೆಕ್ಕುಗಳೇ ಶಾಸ್ತ್ರಗಳಲ್ಲಿ ಬರೆದಿರುವುದು ತಿಳಿದಿಲ್ಲವೇನು? ಹಾಗೂ ನನಗೂ, ನನಗಿಂತ ಮೊದಲೂ ನನ್ನ ಪರಮಪಿತನಿಗೂ ತಿಳಿದಿಲ್ಲವೇನು? ವಿಶ್ವಾಸ ಮತ್ತು ಶ್ರದ್ಧೆಯಿಂದ ಪ್ರಾರ್ಥಿಸಿದ್ದೇ ಆದರೆ ಸುರಿಯುವುದು ಇಲಿಗಳ ಮಳೆಯಲ್ಲ. ಬದಲಿಗೆ ಮೂಳೆಗಳ ಮಳೆಯೆಂಬುದನ್ನು” ಎಂದುಕೊಳ್ಳುತ್ತಾ ಹೊರಟು ಹೋಯಿತು.

ಖಲೀಲನೇ ಹಾಗೆ. ಅವನೂ ಮತ್ತು ಅವನ ಬರಹಗಳೂ ಸರಳವೇ ಆದರೂ, ಒಂದು ಸರಳಗಣ್ಣಿನ ಸಾಮರ್ಥ್ಯವಿರದಿದ್ದರೆ ಅವನು ಹೇಳುವುದಕ್ಕೆ ಕಿವಿಗಳು ಕಿವುಡಾಗಿಬಿಡುತ್ತವೆ.


ಇದನ್ನು ಓದಿ: ಮನೋಜ್ ಸಿನ್ಹಾ ಜಮ್ಮು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...