ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತೇವೆಂದು ಬಿಜೆಪಿಯ ಹಲವು ನಾಯಕರು ಹೇಳಿದ್ದರು, ಜೊತೆಗೆ ಅವರು ಈಗಲೂ ಅಂತಹದೇ ಕುತಂತ್ರಗಳ್ನು ಮುಂದುವರೆಸಿದ್ದಾರೆ. ಆದುದರಿಂದ ಯುವಜನತೆ ಕೋಮುವಾದಿಗಳಿಂದ ಸಂವಿಧಾನವನ್ನು ರಕ್ಷಿಸಿಕೊಳ್ಳುವ ನಾಯಕರಾಬೇಕಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನಾಯಕ, ಪತ್ರಕರ್ತ ಮನೋಜ್ ಆಜಾದ್ ಶನಿವಾರ ಕರೆ ನೀಡಿದ್ದಾರೆ. ಯುವಜನತೆ ಸಂವಿಧಾನ
ಬೆಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರೀಯ ಗ್ರಂಥಾಲಯ ಆವರಣದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮತ್ತು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಚಿಂತಕ ಶಿವಸುಂದರ್ ರಚಿಸಿರುವ ‘ಸಂವಿಧಾನ ಮತ್ತು ಸಂಘಿಗಳ ಸುಳ್ಳು ಅಭಿಯಾನ’ ಕೃತಿ ಓದುವ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಶಾಂತಿ-ಸೌಹಾರ್ಧತೆಯಿಂದ ಜೀವಿಸಲು ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿ ಬದುಕಲು, ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಂವಿಧಾನ ಅತ್ಯವಶ್ಯಕ. ಪ್ರತಿಯೊಂದು ಧರ್ಮವೂ ತಮ್ಮದೇ ಆದ ಧರ್ಮ ಗ್ರಂಥ ಹೊಂದಿದೆ. ಆದರೆ ಅದೆಲ್ಲವನ್ನೂ ಮೀರಿದ ಮತ್ತು ಎಲ್ಲ ಧರ್ಮದವರಿಗೂ ಅನ್ವಯಿಸುವ ಮಹಾಗ್ರಂಥವೇ ಸಂವಿಧಾನ. ಅದನ್ನು ಉಳಿಸಿ ರಕ್ಷಿಸುವುದು ಮತ್ತು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಅಂಬೇಡ್ಕರ್ ಅವರ ನಿಜವಾದ ಅನುಯಾಯಿಗಳು ನಾವೇ ಎಂದು ಹೇಳುತ್ತಿರುವ ಸಂಘಪರಿವಾರದವರು, ಜನರನ್ನು ನಂಬಿಸುವ ಸಲುವಾಗಿ ಹಲವಾರು ಸುಳ್ಳುಗಳನ್ನು ಹೇಳುತ್ತಾ, ಅರ್ಧ ಸತ್ಯಗಳನ್ನು ಹೇಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹಿಂದುತ್ವದ ಬಗ್ಗೆ ಅಂಬೇಡ್ಕರ್ ಅವರಿಗೆ ಇದ್ದ ನಿಜವಾದ ಅಭಿಪ್ರಾಯಗಳನ್ನು ಮರೆಮಾಚಲು ಸಂವಿಧಾನ ವಿರೋಧಿ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಯುವಜನತೆ ಅಧ್ಯಯನ, ಸಂಶೋಧನೆಗಳ ಮೂಲಕ ನಿಜ ಏನೆಂದರು ಅರ್ಥ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಶಿವಸುಂದರ್ ರಚಿಸಿರುವ ಕೃತಿ ನೆರವಾಗಲಿದೆ ಎಂದು ಮನೋಜ್ ಅಭಿಪ್ರಾಯಪಟ್ಟಿದ್ದಾರೆ.
ಕೆವಿಎಸ್ ಪದಾಧಿಕಾರಿ ಗುರುಬಸವ ಮಾತನಾಡಿ, ಸಂವಿಧಾನದ ಆಶಯವನ್ನು ಅರ್ಥ ಮಾಡಿಕೊಳ್ಳುವುದು ಇದೆಂದಿಗಿಂತಲು ಮಹತ್ವದ್ದಾಗಿದೆ. ನಮ್ಮ ಸಂವಿಧಾನ ಇತರೇ ದೇಶಗಳ ಸಂವಿಧಾನದಂತಲ್ಲ. ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರದ ಸಂದರ್ಭದಲ್ಲಿ ಹಾಗೂ ನಂತರದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಭಾರತದ ಇತಿಹಾಸವನ್ನು ಮತ್ತು ಅಂಬೇಡ್ಕರ್ ಜೀವನ ಚರಿತ್ರೆಯನ್ನು ಓದಿಕೊಳ್ಳಬೇಕು. ಇಲ್ಲವಾದರೆ ಸಂವಿಧಾನದ ಮಹತ್ವ ತಿಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಭಿಯಾನದಲ್ಲಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಸುಗುಣಾ, ನಾಗಪ್ಪ, ಗೌತಮ್, ನಾಗರಾಜ, ಅಭಿ, ಶ್ರೀನಿವಾಸ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರಾಜಸ್ಥಾನ | ಮದುವೆಯ ದಿನವೆ ಹಣದೊಂದಿಗೆ ನಾಪತ್ತೆಯಾದ ಸಾಮೂಹಿಕ ವಿವಾಹದ ಆಯೋಜಕರು!
ರಾಜಸ್ಥಾನ | ಮದುವೆಯ ದಿನವೆ ಹಣದೊಂದಿಗೆ ನಾಪತ್ತೆಯಾದ ಸಾಮೂಹಿಕ ವಿವಾಹದ ಆಯೋಜಕರು!

