ಮಹತ್ವದ ಬೆಳವಣಿಗೆಯಲ್ಲಿ ಝಿಂಬಾಬ್ವೆ ರಾಷ್ಟ್ರದಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಇದು ಎರಡು ದಶಕಗಳ ಬಹು ನಿರೀಕ್ಷಿತ ನಿರ್ಧಾರವಾಗಿತ್ತು.
1960ರ ದಶಕದ ಸ್ವಾತಂತ್ರ್ಯ ಸಮರದ ಸಮಯದಲ್ಲಿ ಸ್ವತಃ ಮರಣದಂಡನೆಗೆ ಗುರಿಯಾಗಿ, ಬಳಿಕ ಅದರಿಂದ ಪಾರಾಗಿದ್ದ ಅಧ್ಯಕ್ಷ ಎಮರ್ಸನ್ ನಂಗಾಗ್ವ ಅವರು ಸಂಸತ್ತಿನಲ್ಲಿ ಮಂಡಿಸಿದ ಮಸೂದೆ ಅಂಗೀಕಾರಗೊಂಡಿದೆ. ಈ ಮೂಲಕ ಮರಣದಂಡನೆ ಶಿಕ್ಷೆ ರದ್ದಾಗಿದೆ.
ಪ್ರಸ್ತುತ ಝಿಂಬಾಬ್ವೆಯಲ್ಲಿ ಸುಮಾರು 60 ಕೈದಿಗಳು ಮರಣದಂಡನೆ ಶಿಕ್ಷೆ ಘೋಷಣೆಯಾದವರಿದ್ದಾರೆ. ಹೊಸ ಕಾನೂನಿನ ಪ್ರಕಾರ ಅವರ ಶಿಕ್ಷೆ ಜೀವಾವಧಿಗೆ ಪರಿವರ್ತನೆಯಾಗುವ ಸಾಧ್ಯತೆ ಇದೆ.
ಝಿಂಬಾಬ್ವೆಯಲ್ಲಿ 2005ರಲ್ಲಿ ಕೊನೆಯದಾಗಿ ವ್ಯಕ್ತಿಯೊಬ್ಬರನ್ನು ಗಲ್ಲಿಗೇರಿಸಲಾಗಿತ್ತು. ಆ ಬಳಿಕ ಈ ರೀತಿಯ ಶಿಕ್ಷೆ ಜಾರಿಯಾಗಿಲ್ಲ. ವರದಿಗಳ ಪ್ರಕಾರ, ಮರಣದಂಡನೆ ಶಿಕ್ಷೆ ವಿಧಿಸುವ ಕೆಲಸ ಮಾಡಲು ಆ ದೇಶದಲ್ಲಿ ಯಾರೂ ಮುಂದೆ ಬರುತ್ತಿಲ್ಲವಂತೆ.
ಝಿಂಬಾಬ್ವೆ ದೇಶ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸ್ವಾಗತಿಸಿದ್ದು, “ಇದು ಈ ಪ್ರದೇಶದಲ್ಲಿ ನಿರ್ಮೂಲನವಾದಿ ಚಳವಳಿಗೆ ಭರವಸೆಯ ದಾರಿ ದೀಪವಾಗಿದೆ” ಎಂದಿದೆ.
ಇತರ ಆಫ್ರಿಕನ್ ದೇಶಗಳಾದ ಕೀನ್ಯಾ, ಲೈಬೀರಿಯಾ ಮತ್ತು ಘಾನಾ ಕೂಡ ಮರಣದಂಡನೆಯನ್ನು ರದ್ದುಗೊಳಿಸುವತ್ತ ಇತ್ತೀಚೆಗೆ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿವೆ. ಆದರೆ, ಮರಣದಂಡನೆ ಇನ್ನೂ ರದ್ದಾಗಿಲ್ಲ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ.
2017ರಿಂದ ಝಿಂಬ್ವಾಬೆಯ ಅಧ್ಯಕ್ಷರಾಗಿರುವ ಎಮರ್ಸನ್ ನಂಗಾಗ್ವ ಅವರು, 1960ರ ದಶಕದಲ್ಲಿ ಬಿಳಿಯ ಅಲ್ಪಸಂಖ್ಯಾತರ ಆಳ್ವಿಕೆಯಿಂದ ದೇಶವನ್ನು ಸ್ವಾತಂತ್ರ್ಯಗೊಳಿಸಿದ ಹೋರಾಟದ ವೇಳೆ ರೈಲು ಸ್ಪೋಟಿಸಿದ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು. ಬಳಿಕ ಅದು 10 ವರ್ಷಗಳ ಜೈಲು ಶಿಕ್ಷೆಗೆ ಪರಿವರ್ತನೆಗೊಂಡ ಪರಿಣಾಮ ಎಮರ್ಸನ್ ಬದುಕುಳಿದರು. ಆಗಿನಿಂದ ಮರಣದಂಡನೆಯ ವಿರುದ್ದ ಅವರು ಕಠಿಣ ನಿಲುವು ಹೊಂದಿದ್ದಾರೆ. ಅದು ಈಗ ಮರಣದಂಡನೆಯ ಸಂಪೂರ್ಣ ರದ್ದತಿಗೆ ಕಾರಣವಾಗಿದೆ.
ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಾರ, ವಿಶ್ವದ ಮುಕ್ಕಾಲು ಭಾಗದಷ್ಟು ದೇಶಗಳು ಮರಣದಂಡನೆಯನ್ನು ಶಿಕ್ಷೆಯಾಗಿ ಬಳಸುತ್ತವೆ. ಜಾಗತಿಕವಾಗಿ 113 ದೇಶಗಳಲ್ಲಿ 24 ಆಫ್ರಿಕನ್ ದೇಶಗಳು ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿವೆ ಎಂದು ಅದು ಹೇಳುತ್ತದೆ.
ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ವರದಿ 2023ರಲ್ಲಿ ಜಾಗತಿಕವಾಗಿ 1,153 ತಿಳಿದಿರುವ ಮರಣದಂಡನೆಗಳನ್ನು ದಾಖಲಿಸಿದೆ. ಇದು ಹಿಂದಿನ ವರ್ಷದ 883ಕ್ಕಿಂತ ಹೆಚ್ಚಾಗಿದೆ. ಆದರೂ ಮರಣದಂಡನೆಗಳನ್ನು ಜಾರಿಗೊಳಿಸಿದ ದೇಶಗಳ ಸಂಖ್ಯೆ 20ರಿಂದ 16ಕ್ಕೆ ಇಳಿದಿವೆ. ಉತ್ತರ ಕೊರಿಯಾ, ವಿಯೆಟ್ನಾಂ ಮತ್ತು ಚೀನಾ ಅತಿ ಹೆಚ್ಚು ಮರಣದಂಡನೆ ವಿಧಿಸುವ ರಾಷ್ಟ್ರಗಳು. ಆದರೆ, ಇವುಗಳು ಗೌಪ್ಯತೆಯ ಕಾರಣಕ್ಕೆ ಅಂಕಿ ಅಂಶಗಳನ್ನು ನೀಡುತ್ತಿಲ್ಲ ಎಂದು ಆಮ್ನೆಸ್ಟಿ ಹೇಳಿದೆ.
2023ರಲ್ಲಿ ಅಮ್ನೆಸ್ಟಿ ದಾಖಲಿಸಿದ ಒಟ್ಟು ಮರಣದಂಡನೆಗಳಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾದ ಪಾಲು ಸುಮಾರು ಶೇಖಡ 90ರಷ್ಟಿದೆ, ನಂತರದ ಸ್ಥಾನಗಳಲ್ಲಿ ಸೊಮಾಲಿಯಾ ಮತ್ತು ಯುಎಸ್ ಇದೆ.
ಇದನ್ನೂ ಓದಿ : ಸಿಂಗಾಪುರ ಕೆಫೆಯಲ್ಲಿ ಕ್ಯಾಷಿಯರ್ ಕುರಿತು ಜನಾಂಗೀಯ ಟೀಕೆ; ಭಾರತೀಯ ಮೂಲದ ವ್ಯಕ್ತಿಗೆ ಜೈಲು ಶಿಕ್ಷೆ


