ಮೃಗಾಲಯಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳಿಗೆ, ಅದರಲ್ಲೂ ವಿಶೇಷವಾಗಿ ಹುಲಿಗಳಿಗೆ ಗೋಮಾಂಸ ನೀಡಬಾರದೆಂದು ಅಸ್ಸಾಂನ ಬಿಜೆಪಿ ನಾಯಕ ಸತ್ಯರಂಜನ್ ಬೋರಾ ಪ್ರತಿಭಟಿಸುತ್ತಿದ್ದಾರೆ.
ಸೋಮವಾರ, ಗುವಾಹಟಿ ಮೃಗಾಲಯದ ಮುಖ್ಯ ದ್ವಾರದಲ್ಲಿ, ಹುಲಿಗಳಿಗೆ ಗೋಮಾಂಸವನ್ನು ಸಾಗಿಸುವ ವಾಹನಗಳನ್ನು ಸತ್ಯರಂಜನ್ ಬೋರಾ ನೇತೃತ್ವದ ಪ್ರತಿಭಟನಾಕಾರರ ಸಣ್ಣ ಗುಂಪೊಂದು ಗೋಮಾಂಸ ವಿರೋಧಿ ಕಾರ್ಯಕರ್ತರು ಎಂದು ಹೇಳಿಕೊಂಡು ತಡೆದಿದ್ದರು. ಆದರೆ, ಮೃಗಾಲಯದ ಅಧಿಕಾರಿಗಳು ಪೊಲೀಸರ ಸಹಾಯದಿಂದ ಅವರನ್ನು ಚದುರಿಸುವಲ್ಲಿ ಯಶಸ್ವಿಯಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗೋಹತ್ಯೆಯನ್ನು ನಿಷೇಧಿಸುವಂತೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ್ದಾರೆ.

ಇದನ್ನೂ ಓದಿ: ಅದು ಗೋಮಾಂಸವಲ್ಲ ಎಂದು ಬೇಡಿಕೊಂಡೆ, ಆದರೂ ಹೊಡೆದರು: ಲುಕ್ಮನ್ ಖಾನ್
“ಹಿಂದೂ ಸಮಾಜದಲ್ಲಿ ನಾವು ಹಸುವಿನ ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತೇವೆ. ಆದರೆ ಮೃಗಾಲಯದಲ್ಲಿನ ಮಾಂಸಾಹಾರಿ ಪ್ರಾಣಿಗಳಿಗೆ ಪ್ರಧಾನ ಆಹಾರ ಗೋಮಾಂಸವಾಗಿದ್ದು ಸರ್ಕಾರವೇ ಪೂರೈಸುತ್ತಿದೆ. ನಮ್ಮ ಆಕ್ಷೇಪವೆಂದರೆ, ಗೋಮಾಂಸವನ್ನೇ ಏಕೆ ನೀಡಬೇಕು? ಬೇರೆ ಮಾಂಸ ಏಕಿಲ್ಲ?” ಎಂದು ಸತ್ಯರಂಜನ್ ಬೋರಾ ಸುದ್ದಿಗಾರರನ್ನು ಪ್ರಶ್ನಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: Fact Check: ಭಾರತದ ಮ್ಯಾಗಿ ನೂಡಲ್ಸ್ ನಲ್ಲಿ ಗೋಮಾಂಸವಿದೆಯೆ?
ಇದಕ್ಕೆ ಪರಿಹಾರ ನೀಡಿದ ಬಿಜೆಪಿ ಕಾರ್ಯಕರ್ತರು, “ಮೃಗಾಲಯದಲ್ಲಿರುವ ಸಾಂಬಾರ್ ಜಿಂಕೆಗಳನ್ನು ಮಾಂಸಾಹಾರಿ ಪ್ರಾಣಿಗಳಿಗೆ ಆಹಾರಕ್ಕಾಗಿ ಬಳಸಿದರೆ ಮೃಗಾಲಯವು ಸ್ವಯಂಪೂರ್ಣತೆಯನ್ನು ಸಾಧಿಸಬಹುದು” ಎಂದು ಹೇಳಿದರು.
“ಮಾಂಸವನ್ನು ಸಾಗಿಸುವ ವಾಹನಗಳನ್ನು ದುಷ್ಕರ್ಮಿಗಳು ತಡೆದಿದ್ದರು. ಅವರನ್ನು ಚದುರಿಸಲು ನಾವು ಪೊಲೀಸರನ್ನು ಕರೆಸಿದ್ದೇವೆ. ಮಾಂಸಾಹಾರಿ ಪ್ರಾಣಿಗಳಿಗೆ ಆಹಾರವನ್ನು ಕೇಂದ್ರ ಮೃಗಾಲಯ ಪ್ರಾಧಿಕಾರವು ಶಿಫಾರಸು ಮಾಡಿದೆ. ಕಾನೂನಿನ ಪ್ರಕಾರ ನಾವು ಮೃಗಾಲಯದ ಪ್ರಾಣಿಗಳ ಮಾಂಸವನ್ನು ಮಾಂಸಾಹಾರಿ ಪ್ರಾಣಿಗಳಿಗೆ ನೀಡಲು ಸಾಧ್ಯವಿಲ್ಲ. ಅಲ್ಲದೆ, ಸಾಂಬಾರ್ ಜಿಂಕೆ ಕಾಡು ಪ್ರಾಣಿಯಾಗಿದ್ದು, ನಾವು ಕಾಡು ಪ್ರಾಣಿಗಳನ್ನು ಕೊಲ್ಲಲು ಸಾಧ್ಯವಿಲ್ಲ” ಎಂದು ಮೃಗಾಲಯದ ವ್ಯಾಪ್ತಿಗೆ ಒಳಪಡುವ ವಿಭಾಗೀಯ ಅರಣ್ಯ ಅಧಿಕಾರಿ ತೇಜಸ್ ಮಾರಿಸ್ವಾಮಿ ಹೇಳಿದರು.
ಇದನ್ನೂ ಓದಿ: ಮತ್ತೆ ಶುರುವಾಯಿತು ಗೋಹತ್ಯೆ ನಿಷೇಧ ಕಾನೂನು ಚರ್ಚೆ: ಗೋಹತ್ಯೆ ಅಪರಾಧವೆಂದ ಸಚಿವ ಸುಧಾಕರ್
ಸಾಂಬಾರ್ ಜಿಂಕೆಗಳನ್ನು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಪಟ್ಟಿಗೆ ಸೇರಿಸಿದ್ದು, 1972 ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಅನುಸೂಚಿ -3ರ ಅಡಿಯಲ್ಲಿ ಅವುಗಳನ್ನು ರಕ್ಷಿಸಲಾಗಿದೆ.
ಇದರ ಕುರಿತು ಅಸ್ಸಾಂ ಅರಣ್ಯ ಸಚಿವ ಪರಿಮಲ್ ಸುಕ್ಲಾಬೈದ್ಯ ಮಾತನಾಡಿ, “ಪ್ರಾಣಿಗಳಿಗೆ ಗೋಮಾಂಸವನ್ನು ನೀಡಲಾಗುತ್ತಿದೆ. ಏಕೆಂದರೆ ಅದು ಅವುಗಳ ಪೋಷಣೆಗೆ ಅಗತ್ಯವಾಗಿದೆ. ಕೆಲವು ರಾಜ್ಯಗಳು ಎಮ್ಮೆ ಮಾಂಸವನ್ನು ಮಾಂಸಾಹಾರಿ ಪ್ರಾಣಿಗಳ ಆಹಾರಕ್ಕಾಗಿ ಆರಿಸಿಕೊಂಡವು. ಆದರೆ ಅಸ್ಸಾಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಮ್ಮೆಗಳು ಇಲ್ಲದಿರುವುದರಿಂದ, ಕೇಂದ್ರದ ಮಾರ್ಗಸೂಚಿಯ ಪ್ರಕಾರ ಗೋಮಾಂಸವನ್ನು ನೀಡಲಾಗುತ್ತಿದೆ” ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರ ಈ ವರ್ತನೆಯು ಸಾಮಾಜಿಕ ಮಾಧ್ಯಮಗಳಲ್ಲಿ ಅಪಹಾಸ್ಯಕ್ಕೊಳಗಾಗಿದ್ದು, ಫೇಸ್‌ಬುಕ್ ಬಳಕೆದಾರರೊಬ್ಬರು, “ಹೌದು, ಇನ್ನುಮುಂದೆ ಆಡಳಿತವು ಮೃಗಾಲಯದಲ್ಲಿನ ಪ್ರಾಣಿಗಳಿಗೆ ಇಡ್ಲಿ-ಸಾಂಬಾರ್-ಮಸಾಲೆವಡೆ ನೀಡಲಿ” ಎಂದು ಬರೆದುಕೊಂಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ಬಿಜೆಪಿಗರ ಈ ಹೇಳಿಕೆಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದು, “ಇನ್ನು ಮುಂದೆ ಸಾತ್ವಿಕ ಹುಲಿಗಳಿಗೆ ಹಸುವಿನ ಸಗಣಿ ಮತ್ತು ಗೋಮೂತ್ರ ನೀಡಿ, ಹುಲಿಗಳಿಗೆ ಏಕಾದಶಿ ವ್ರತ ಮಾಡಿಸಿ, ಪಾರ್ಲೇಜಿ ಬಿಸ್ಕೆಟ್ ಕೊಡಿ” ಎನ್ನುವ ತರಾವರಿ ಕಮೆಂಟ್‌ಗಳನ್ನು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.
ಇದನ್ನೂ ಓದಿ: ಸುತ್ತಿಗೆಯಿಂದ ಕ್ರೂರವಾಗಿ ಥಳಿಸಿದ ಗೋರಕ್ಷಕರು: ಕೈಕಟ್ಟಿ ನೋಡುತ್ತಿದ್ದ ಪೊಲೀಸರು..


