ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಸ್ವಲ್ಪವಾದರೂ ಎಕನಾಮಿಕ್ಸ್ ಗೊತ್ತಿದ್ದವರಾರೂ ಒಪ್ಪಲಾರರು ಎಂಬುದಷ್ಟೇ ಊರ್ಜಿತ್ ಪಟೇಲ್ ರಾಜೀನಾಮೆಯನ್ನು ಅರ್ಥ ಮಾಡಿಕೊಳ್ಳಬಹುದಾದ ರೀತಿಯಾಗಿದೆ. ಏಕೆಂದರೆ, ಈ ಉರ್ಜಿತ್ ಪಟೇಲ್ ಸ್ವತಃ ಮೋದಿ ಮತ್ತು ಅರುಣ್ ಜೇಟ್ಲಿಯವರ ಆಯ್ಕೆಯಾಗಿದ್ದರು. ಮೋದಿಯವರ ಅತ್ಯಾಪ್ತ ಬಿಸಿನೆಸೋದ್ಯಮಿ ಅಂಬಾನಿಯ ರಿಲೆಯನ್ಸ್ ಗುಂಪಿಗೂ ಸಮೀಪವಾಗಿದ್ದರು. ಅಷ್ಟೇ ಏಕೆ, ನರೇಂದ್ರ ಮೋದಿಯವರ ಅತ್ಯಂತ ವಿಧ್ವಂಸಕಾರೀ ತೀರ್ಮಾನವೆಂದು ಬಗೆಯಲಾದ ನೋಟು ರದ್ದತಿ ನಡೆದಾಗಲೂ ಅವರೇ ರಿಸರ್ವ್ ಬ್ಯಾಂಕ್ ಗವರ್ನರ್. ನೋಟು ರದ್ದತಿಯಂತಹ ಅಪ್ರಯೋಜಕ, ಆದರೆ ನಷ್ಟಕಾರೀ ಕ್ರಮಕ್ಕೆ ಹಿಂದಿನ ಗವರ್ನರ್ ರಘುರಾಮ್ ರಾಜನ್‌ರ ಸಮ್ಮತಿಯಿರಲಿಲ್ಲವೆಂಬುದು ಸರ್ವವಿದಿತ. ಇದೀಗ ಊರ್ಜಿತ್ ಪಟೇಲ್ ಸಹಾ ರಾಜೀನಾಮೆ ನೀಡಿರುವಾಗ ಅವರ ಪಾತ್ರವಾದರೂ ಇತ್ತೇ ಇಲ್ಲವೇ ಎಂಬ ಸತ್ಯ ಹೊರ ಬೀಳಬಹುದೆಂಬ ಆಶಾಭಾವನೆ ಇದೆ.
ಈ ರಾಜೀನಾಮೆ ಸಂಭವಿಸಬಹುದೆಂಬ ಸುದ್ದಿ ಈಗಾಗಲೇ ದೆಹಲಿಯ ವಲಯದಲ್ಲಿ ಹಳೆಯದು. ಆರ್‌ಬಿಐನ ಡೆಪ್ಯುಟಿ ಗವರ್ನರ್ ವಿರಾಳ್ ಆಚಾರ್ಯ ಮಾಡಿದ ಭಾಷಣವೊಂದರಲ್ಲಿ ಹೀಗೆ ಹೇಳಿದ್ದರು ‘ಸ್ವಾಯತ್ತ ಸಂಸ್ಥೆಯಾಗಿರುವ ಆರ್‌ಬಿಐನ ನಿರ್ಣಯಗಳನ್ನು ಗೌರವಿಸದ ಸರ್ಕಾರವು ಆರ್ಥಿಕ ಅರಾಜಕತೆಯನ್ನು ಎದುರು ನೋಡುವುದರಲ್ಲಿ ಸಂಶಯವೇ ಇಲ್ಲ’. ಈ ಹೇಳಿಕೆಗೆ ಊರ್ಜಿತ್ ಪಟೇಲರ ಸಮ್ಮತಿಯಿತ್ತೆಂಬುದು ಸ್ಪಷ್ಟವಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಆರ್‌ಬಿಐನಲ್ಲಿ ಇರಲೇಬೇಕಾದ ಮೀಸಲು ನಿಧಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿತ್ತು. 3.75 ಲಕ್ಷ ಕೋಟಿಗಳ ಹಣವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಬೇಕೆಂಬುದನ್ನು ಆರ್‌ಬಿಐ ಒಪ್ಪಿರಲಿಲ್ಲ. ಆಗ, ಅತ್ಯಂತ ವಿರಳವಾಗಿ ಬಳಸಬಹುದಾದ, ಸರ್ಕಾರದ ನೇರ ಕಾರ್ಯಾಚರಣೆಗೆ ಅವಕಾಶ ನೀಡುವ ನಿಯಮವನ್ನು ಬಳಸಿಕೊಂಡು ಹಣಕ್ಕೆ ಕೈ ಹಾಕಲು ಸರ್ಕಾರವು ಮುಂದಾಗಿತ್ತು. ಆಗಲೇ ಊರ್ಜಿತ್ ರಾಜೀನಾಮೆ ನೀಡಲು ಬಯಸಿದ್ದರು ಎನ್ನಲಾಗಿದೆ.
ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವ ಊರ್ಜಿತ್ ಪಟೇಲ್ ರಿಸರ್ವ್ ಬ್ಯಾಂಕ್ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆಯೇ ಹೊರತು, ಸರ್ಕಾರಕ್ಕೆ ನೆಪ ಮಾತ್ರಕ್ಕೂ ಕೃತಜ್ಞತೆ ಹೇಳಿಲ್ಲ. ಆದರೆ, ಹಣಕಾಸು ಮಂತ್ರಿ ಅರುಣ್ ಜೇಟ್ಲಿ ತಾವೇ ಪ್ರತಿಕ್ರಿಯಿಸಿ, ಪಟೇಲರಿಗೆ ಶುಭ ಹಾರೈಸಿದ್ದಾರೆ.
ಆರ್ಥಿಕ ಅಪಘಾತಗಳನ್ನು ಮಾತ್ರ ಮಾಡಿಕೊಂಡಿರುವ ಈ ಸರ್ಕಾರವು ಕಡೆಯ ಆರು ತಿಂಗಳಲ್ಲಿ ಏನಾದರೂ ಒಂದಷ್ಟನ್ನು ಸಾಧಿಸಿ ತೋರಿಸಬೇಕಾದ ಅನಿವಾರ್ಯತೆ ಇದ್ದುದರಿಂದ ರಿಸರ್ವ್ ಬ್ಯಾಂಕ್‌ನ ಹಣಕ್ಕೆ ಕೈ ಹಾಕಿತ್ತು ಎನ್ನಲಾಗಿದೆ. ನರೇಂದ್ರ ಮೋದಿ ಸರ್ಕಾರಕ್ಕೆ ಆಗಿರುವ ದೊಡ್ಡ ಮುಖಭಂಗಗಳಲ್ಲಿ ಇದೂ ಒಂದಾಗಿದೆ.


