ವಿದೇಶಗಳಲ್ಲಿ ಭಾರತೀಯರು ಬಚ್ಚಿಟ್ಟಿರುವ ಕಪ್ಪುಹಣದ ಬಗ್ಗೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಪದೇಪದೇ ಸುದ್ದಿಯಾಗುತ್ತಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಅಂಡ್ ಕಂಪನಿ ತಾವು ಅಧಿಕಾರಕ್ಕೆ ಬಂದರೆ ವಿದೇಶಗಳಲ್ಲಿರುವ ಕಪ್ಪುಹಣವನ್ನು ವಾಪಸ್ ಭಾರತಕ್ಕೆ ತರುವುದಾಗಿ ಬೊಗಳೆ ಬಿಟ್ಟಿದ್ದೇ ಬಿಟ್ಟಿದ್ದು.
ಆ ಬೊಗಳೆ ಮಾತುಗಳನ್ನು ಪಕ್ಕಕ್ಕಿಟ್ಟು ವಾಸ್ತವಾಂಶಗಳನ್ನು ಪರಿಶಿಲಿಸೋಣ.
ಆರ್ಥಿಕ ಸಹಕಾರ ಮತ್ತು ಅಬಿವೃದ್ಧಿಗಾಗಿ ಸಂಘಟನೆ (ಒಇಸಿಡಿ)ಯಲ್ಲಿ ಭಾರತವನ್ನೂ ಒಳಗೊಂಡು 34 ಸದಸ್ಯ ರಾಷ್ಟ್ರಗಳಿವೆ. ಒಇಸಿಡಿ ಸಂಸ್ಥೆಯಲ್ಲಿ ಒಪ್ಪಿತ ನಿಯಮಾವಳಿ ಪ್ರಕಾರ, ಈ ದೇಶಗಳ ನಡುವಿನ ಆರ್ಥಿಕ ವಹಿವಾಟು ಹಾಗೂ ತೆರಿಗೆ ಪಾವತಿಗೆ ಸಂಬಂಧಿಸಿದ ಮಾಹಿತಿಗಳನ್ನು ಕಾಲಕಾಲಕ್ಕೆ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.
2013-14ನೇ ಸಾಲಿನ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಇತ್ತೀಚೆಗೆ ಭಾರತ ಸರ್ಕಾರದ ಆರ್ಥಿಕ ಸಚಿವಾಲಯ ತಲುಪಿದೆ. ಆ ಮಾಹಿತಿ ಪ್ರಕಾರ ಕಳೆದ ಆರ್ಥಿಕ ವರ್ಷವೊಂದರಲ್ಲಿ 24,085 ತೆರಿಗೆ ವಂಚನೆ ಪ್ರಕರಣಗಳು ವಿವಿಧ ವಿದೇಶಿ ನೆಲಗಳಲ್ಲಿ ಪತ್ತೆಯಾಗಿವೆ.
10,372 ಪ್ರಕರಣಗಳು ನ್ಯೂಜಿಲ್ಯಾಂಡ್ ಒಂದರಲ್ಲೇ ಪತ್ತೆಯಾಗಿದೆ. ಉಳಿದಂತೆ ಸ್ಪೈನ್ – 4169, ಇಂಗ್ಲೆಂಡ್ – 3164, ಸ್ವೀಡನ್ – 2404, ಡೆನ್ಮಾರ್ಕ್ – 2145, ಫಿನ್‍ಲ್ಯಾಂಡ್ – 685, ಪೋರ್ಚುಗಲ್ – 625, ಜಪಾನ್ – 440 … ಪಟ್ಟಿ ಹೀಗೆ ಮುಂದುವರೆಯುತ್ತದೆ.

ಈಗ ನಮ್ಮ ಮುಂದೆ ಇರುವ ಪ್ರಶ್ನೆಯಿಷ್ಟೆ. ಬೂಸೀ ಬಸ್ಯಾ ಮೋದಿ ಈ ಮಾಹಿತಿಯನ್ನು ಆಧರಿಸಿ ಸೂಕ್ತ ತನಿಖೆ ನಡೆಸಿ ಬಡ ಭಾರತೀಯರ ಬೆವರಿನ ಫಲವನ್ನು ಬೊಕ್ಕಸ ಸೇರಿಸುವ ಕೆಲಸ ಮಾಡುತ್ತಾರೋ? ಅಥವಾ ಮಾಮೂಲಿಯಂತೆ ಕಳ್ಳರ ಕೂಟದ ಬಹುಪರಾಕಿನೊಂದಿಗೆ ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟವ್ನು ಟಿವಿ, ಪೇಪರ್‍ಗಳಲ್ಲಿ ಮುಂದುವರೆಸುತ್ತಾರೋ?
ವಿದೇಶಿ ಮುಸುಕಿನಲ್ಲಿ ಕಳ್ಳ ಹಣ
2010ರ ಏಪ್ರಿಲ್‍ನಿಂದ 2013ರ ಮಾರ್ಚ್‍ವರೆಗಿನ ಮೂರು ವರ್ಷಗಳಲ್ಲಿ 8,78,962 ಕೋಟಿ ವಿದೇಶಿ ಬಂಡವಾಳ ಹೂಡಿಕೆಯಾಗಿದೆಯೆಂದರೆ ಹೊರದೇಶಗಳಿಂದ ಎಷ್ಟೊಂದು ಭಾರೀ ಪ್ರಮಾಣದ ಬಂಡವಾಳ ಹರಿದು ಬರುತ್ತಿದೆ ಊಹಿಸಿಕೊಳ್ಳಿ.
ದೇಶದ ಅಭಿವೃದ್ಧಿಗಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸಬೇಕು ಎಂಬುದು ಈಗ ಚಲಾವಣೆಯಲ್ಲಿರುವ ಒಂದು ಪ್ರಮುಖ ಆರ್ಥಿಕ ನೀತಿ. ಆದ್ದರಿಂದ ಇಂಥಾ ಹಣವನ್ನು ಆಕರ್ಷಿಸುವುದೇ ತಮ್ಮ ಸಾಧನೆಯೆಂಬಂತೆ ಸರ್ಕಾರಗಳು ಕೊಚ್ಚಿಕೊಳ್ಳುತ್ತಿವೆ.
ಆದರೆ ವಾಸ್ತವ ಸ್ಥಿತಿ ಬೇರೆಯೇ ಇದ್ದು ವಿದೇಶಿ ಬಂಡವಾಳದ ಹೆಸರಿನಲ್ಲಿ ಘನಘೋರ ದಂಧೆಯೇ ನಡೆಯುತ್ತಿದೆ.
ಇತ್ತೀಚೆಗೆ ರಿಜರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಈ ಅವಧಿಯಲ್ಲಿ ಅಮೆರಿಕದಿಂದ ಬಂದ ಬಂಡವಾಳ 50,615 ಕೋಟಿಗಳು, ಅಂದರೆ ಒಟ್ಟು ವಿದೇಶಿ ಬಂಡವಾಳದ ಶೇಕಡ 6ರಷ್ಟು ಮಾತ್ರ. ಮಾರಿಷಸ್ ಎಂಬ ಪುಟ್ಟ ದ್ವೀಪ ರಾಷ್ಟ್ರದಿಂದ ಬಂದ ಹೂಡಿಕೆ ಬರೋಬ್ಬರಿ 3,33,979 ಕೋಟಿಗಳು! ಇದು ಈ ಅವಧಿಯ ಒಟ್ಟು ವಿದೇಶಿ ಬಂಡವಾಳದ ಶೇಕಡ 38ರಷ್ಟು. 2001ರಿಂದ 2011ರ ನಡುವಿನ ಒಂದು ದಶಕವನ್ನು ಗಣನೆಗೆ ತೆಗೆದುಕೊಂಡರೆ ಈ ಪ್ರಮಾಣ ಶೇ 41.8 ರಷ್ಟು!
ಹಾಲಿ ಮಾರಿಷಸ್, ಸಿಪ್ರಸ್, ಹಾಂಗ್‍ಕಾಂಗ್, ಸಿಂಗಾಪುರ, ಯುನೈಟೆಡ್ ಅರಬ್ ಎಮಿರೇಟ್ಸ್ ಮುಂತಾದ ಹತ್ತಾರು ದೇಶಗಳೊಂದಿಗೆ ಪರಸ್ಪರ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ನಾನಾ ತೆರಿಗೆ ರಿಯಾಯಿತಿ ಒಪ್ಪಂದಗಳು ಜಾರಿಯಲ್ಲಿವೆ. ಹೀಗಾಗಿ ಮಾರಿಷಸ್‍ನಿಂದ ಒಳಬರುವ ಬಂಡವಾಳಕ್ಕೆ ಭಾರತದಲ್ಲಿ ಹೆಚ್ಚುವರಿ ತೆರಿಗೆ ಕಟ್ಟಬೇಕಿಲ್ಲ. ಭಾರತದ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಹಾಗೂ ಅಕ್ರಮ ದಂಧೆಗಳಲ್ಲಿ ತೊಡಗಿರುವ ಉದ್ಯಮಿಗಳು ತಮ್ಮ ಕಪ್ಪುಹಣವನ್ನು ಮರುಹೂಡಿಕೆ ಮಾಡಲು ಇಂಥಾ ವಾಮ ಮಾರ್ಗವನ್ನು ಸಂಶೋಧಿಸಿದ್ದಾರೆ. ತೆರಿಗೆ ತಪ್ಪಿಸುವ ಉದ್ದೇಶದಿಂದ ಕೆಲ ವಿದೇಶಿ ಕಂಪನಿಗಳೂ ಕೂಡ ಮಾರಿಷಸ್ ಎಂಬ ಕಳ್ಳದಾರಿಯ ಮೂಲಕ ಭಾರತ ಪ್ರವೇಶಿಸುತ್ತಿದ್ದಾರೆ.
ಮಾರಿಷಸ್‍ನಂಥಾ ದೇಶಗಳಲ್ಲಿ ಒಂದು ಬೇನಾಮಿ ಕಂಪನಿ ನೋಂದಾಯಿಸುವುದು, ತಮ್ಮ ಬಳಿಯಿರುವ ಕಳ್ಳಹಣವನ್ನು ಆ ಕಂಪನಿಯಲ್ಲಿ ತೊಡಗಿಸುವುದು, ಅಲ್ಲಿಂದ ಆ ಹಣ ಮತ್ತೆ ಭಾರತಕ್ಕೆ ವಿದೇಶಿ ಬಂಡವಾಳವೆಂಬ ಹಣೆಪಟ್ಟಿಯೊಂದಿಗೆ ರಾಜಾರೋಷವಾಗಿ ವಾಪಸ್ ತಂದು ರಾಜಮರ್ಯಾದೆಯೊಂದಿಗೆ ಭಾರತದ ಷೇರು ಮಾರುಕಟ್ಟೆಯಲ್ಲೋ ಅಥವಾ ಪಾಲುದಾರಿಕೆ ವ್ಯವಹಾರಗಳಲ್ಲೋ ಹೂಡಿಕೆ ಮಾಡಿ ಮತ್ತೆ ಸೂಪರ್ ಲಾಭ ಪಡೆಯುವುದು. ಈ ಗೋಲ್‍ಮಾಲ್ ವ್ಯವಹಾರವನ್ನು ‘ರೌಂಡ್ ಟ್ರಿಪ್ಪಿಂಗ್’ ಎಂದು ಕರೆಯಲಾಗುತ್ತದೆ.
ರಿಜರ್ವ್ ಬ್ಯಾಂಕ್ ಇತ್ತೀಚೆಗೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಕಪ್ಪು ಹಣದ ಪ್ರಮಾಣ ದೇಶದ ಜಿಡಿಪಿಯ ಅರ್ಧದಷ್ಟಾಗಿದೆಯಂತೆ. ಹೀಗೆ ಕಪ್ಪುಹಣ ತೀರಾ ಹೆಚ್ಚಾಗಲು ಪ್ರಮುಖ ಕಾರಣ ಲೆಕ್ಕಕ್ಕೆ ಸಿಗದ ದಂಧೆಗಳು ವಿಪರೀತವಾಗಿರುವುದು. ಗಣಿಗಾರಿಕೆ, ರಿಯಲ್ ಎಸ್ಟೇಟ್, ಖಾಸಗಿ ಶಿಕ್ಷಣ ಸಂಸ್ಥೆಗಳ ಕ್ಯಾಪಿಟೇಷನ್, ಮೂಲ ಸೌಕರ್ಯ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಭಾರೀ ಕಾಮಗಾರಿಗಳ ಅವ್ಯವಹಾರ, ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಕಬಳಿಸುವ ದಂಧೆ ಮುಂತಾದೆಡೆಗಳಲ್ಲಿ ಭಾರೀ ಪ್ರಮಾಣದ ಕಪ್ಪುಹಣ ಶೇಖರಣೆಯಾಗುತ್ತಿರುವುದು ಸೂರ್ಯ ಸತ್ಯ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರೂ ಸದ್ಯಕ್ಕೆ ಕಾಣುತ್ತಿಲ್ಲ.


