ನೀವು ಗೂಗಲ್‍ನಲ್ಲಿ ಸಾಕಷ್ಟು ಹುಡುಕಿದರೂ ಈ ಸುದ್ದಿ ಎರಡು ಕಡೆ ಬಿಟ್ಟರೆ ಎಲ್ಲೂ ಕಾಣುವುದಿಲ್ಲ. ಅದರಲ್ಲೂ ಮಾಧ್ಯಮಗಳ ಕ್ಯಾಮೆರಾದ ಮುಂದೆ ನಡೆದ ಈ ವಿದ್ಯಮಾನದ ವಿಡಿಯೋದ ತುಣುಕೂ ಸಹಾ ಇಂಟರ್‍ನೆಟ್‍ನಲ್ಲಿ ಸುಲಭಕ್ಕೆ ಸಿಗುವುದಿಲ್ಲ. ಆದರೆ ಸಮಕಾಲೀನ ಸಂಧರ್ಭದ ಬಹುಮುಖ್ಯ ಹೇಳಿಕೆಯಾದ ಈ ಸುದ್ದಿ ಮತ್ತು ಅದರ ಕುರಿತ ವಿಶ್ಲೇಷಣೆಯನ್ನು ಮಾಡದಿದ್ದರೆ ಅದು ಪತ್ರಿಕಾಧರ್ಮಕ್ಕೇ ಅಪಚಾರ.

ಟಿವಿ 18 ಮತ್ತು ಡೆಕ್ಕನ್ ನ್ಯೂಸ್‍ಗಳಲ್ಲಿ ಬಂದಿರುವ ಈ ಸುದ್ದಿಯ ವಿವರ ಕೆಳಕಂಡಂತಿದೆ.
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆ, ಕನ್ನಡ ದೃಶ್ಯ ಮಾಧ್ಯಮಗಳ ಮೇಲೆ ಸಿಡಿಮಿಡಿಗೊಂಡ ಮಾಜಿ ಪ್ರಧಾನಿ, ಈ ರಾಜ್ಯದಲ್ಲಿ ಕನ್ನಡ ದೃಶ್ಯ ಮಾಧ್ಯಮಗಳು ಎಷ್ಟು ಉಪಕಾರ ಮಾಡುತ್ತಿವೆ, ಒಂದು ಪ್ರಾದೇಶಿಕ ಪಕ್ಷ ಉಳಿಯೋದಕ್ಕೆ ಎಷ್ಟು ಉಪಕಾರ ಮಾಡುತ್ತಿವೆ ನಿಮಗೆ ಧನ್ಯವಾದಗಳು. ನಾನು ಟಿವಿನೇ ನೋಡ್ಲಿಲ್ಲಾ ರೀ. ನಾನು ಭಾಷಣ ಮಾಡಿದ್ದನ್ನ ಬರೆಯಬೇಕು ಅಂತಾನೂ ಇಲ್ಲಾ ನೀವು ಬರೀರಿ ಇಲ್ಲಾ ಬಿಡಿ. ನನಗೆ 60 ವರ್ಷದ ರಾಜಕೀಯ ಜೀವನದಲ್ಲಿ ಇಷ್ಟು ಸಣ್ಣ ಮಟ್ಟಕ್ಕೆ ಟಿಬೇಟ್ ಮಾಡೋದನ್ನ ನಾನು ನೋಡಿಲ್ಲಾ ನಡೀರಿ ನಡೀರಿ. ಈ ದೇಶದ ಪ್ರಧಾನಿಯದು ಸಣ್ಣದು ಸಿಕ್ಕಲಿ ಅದು ಹೇಗೆ ಬರುತ್ತೆ? ನಾನು ಶೂದ್ರ ಅಷ್ಟೇನೇ, ಗೊತ್ತಿದೆ ನನಗೆ. ನಡೀರಿ ಎಂದು ಎದ್ದು ಮನೆಯೊಳಗೆ ಹೋದ ದೇವೇಗೌಡ. ಮಾಧ್ಯಮಗಳ ಮೇಲೆ ಬಾರೀ ಆಕ್ರೋಶಗೊಂಡ ದೇವೇಗೌಡ.
ಇದು ಸುದ್ದಿ. ಅವರ ಹೇಳಿಕೆಯನ್ನು ಸಮರ್ಥಿಸುವ ರೀತಿಯಲ್ಲಿ ಯಾವೊಂದು ಪತ್ರಿಕೆಯೂ ಇದನ್ನು ವರದಿ ಮಾಡಲಿಲ್ಲ. ಟಿವಿ 18 ಈ ಸುದ್ದಿಯನ್ನು ಹಾಕಿದ್ದರೂ, ಅದರೊಂದಿಗಿರುವ ದೇವೇಗೌಡರು ಮಾತಾಡುವ ವಿಡಿಯೋದಲ್ಲಿ ಈ ಭಾಗ ಇಲ್ಲ. ಆದರೆ, ಹಾಸನದಲ್ಲಿ ಗೌಡರು ಆಡಿದ ಈ ಮಾತನ್ನು ಅಲ್ಲಿನ ಎಲ್ಲಾ ವರದಿಗಾರರೂ ಕೇಳಿಸಿಕೊಂಡಿದ್ದಾರೆ, ರೆಕಾರ್ಡ್ ಸಹಾ ಮಾಡಿಕೊಂಡಿದ್ದಾರೆ.
ಇರಲಿ, ಆದರೆ ದೇವೇಗೌಡರು ಹೇಳಿರುವ ಈ ಮಾತು ತಪ್ಪೇ? ಮಾಧ್ಯಮಗಳ ಮೇಲೆ ಈ ರೀತಿಯ ಜಾತಿ ಆರೋಪ ಮಾಡುವುದು ಸರಿಯೇ? ಕರ್ನಾಟಕದ ವಿವಿಧ ಮಾಧ್ಯಮ ಸಂಸ್ಥೆಗಳ ಮೇಲೆ ಯಾರ ಹಿಡಿತ ಇದೆ ಎಂದು ಅರಿಯಲು, ಹವ್ಯಕ ಬ್ರಾಹ್ಮಣರ ಸಮ್ಮೇಳನದಲ್ಲಿ ವಿಶ್ವೇಶ್ವರಭಟ್ ಮಾಡಿದ, ವೈರಲ್ ಆದ ಆಡಿಯೋ ಕೇಳಿದರೆ ಗೊತ್ತಾಗುತ್ತದೆ. ಕರ್ನಾಟಕದ ಪತ್ರಿಕಾ ಮಾಧ್ಯಮವನ್ನು ತಮ್ಮ ಕೈಯ್ಯಾರೆ ಹಾಳು ಮಾಡಿದ, ಅದನ್ನು ಬಿಜೆಪಿ ವಿರೋಧಿಗಳ ವಿರುದ್ಧ ಮಾಬ್ ಹಿಸ್ಟೀರಿಯಾ ಮೂಡಿಸಲು ಯತ್ನಿಸಿದವರು ಅವರು. ಇಂದು ಕನ್ನಡದ ಯಾವುದೇ ಮಾಧ್ಯಮ ಸಂಸ್ಥೆಗೆ ಹೋದರೆ ಅಲ್ಲೆಲ್ಲಾ ಹವ್ಯಕ ಬ್ರಾಹ್ಮಣ ಹುಡುಗರೇ ಕಾಣುತ್ತಾರೆ, ಇವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂದು ಅವರು ವಿವರವಾಗಿ ಮಾತನಾಡುತ್ತಾರೆ. ಕೆಳಹಂತದಲ್ಲಿ ಮಾತ್ರವಲ್ಲದೇ, ಕರ್ನಾಟಕದ ಇಂದಿನ ರಾಜ್ಯಮಟ್ಟದ ಹೆಚ್ಚಿನ ಪತ್ರಿಕೆಗಳು ಮತ್ತು ಚಾನೆಲ್‍ಗಳ ಮುಖ್ಯಸ್ಥರು ಬ್ರಾಹ್ಮಣರಾಗಿದ್ದಾರೆ. ಅವರಲ್ಲೂ ಶೇ.90ರಷ್ಟು ಹವ್ಯಕ ಬ್ರಾಹ್ಮಣರಾಗಿದ್ದಾರೆ.
ಹವ್ಯಕ ಬ್ರಾಹ್ಮಣರೆಂದರೆ ಗೊತ್ತಿರದವರಿಗೆ – ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಪ್ರತಿನಿಧಿಸುವ ಜಾತಿ ಇದು. ಬ್ರಾಹ್ಮಣರಲ್ಲಿ ತೀರಾ ಇತ್ತೀಚಿನವರೆಗೂ ಕೃಷಿಯೇ ಪ್ರಧಾನ ಕಸುಬಾಗಿಸಿಕೊಂಡಿದ್ದ ಸಮುದಾಯವಿದು. ಇತ್ತೀಚೆಗೆ ಕಡಿಮೆಯಾಗುತ್ತಿದ್ದರೂ, ಈಗಲೂ ಕೃಷಿಯಲ್ಲಿ ತೊಡಗಿರುವವರ ಸಂಖ್ಯೆ ಗಣನೀಯವೇ ಆಗಿದೆ.
ಯಾವುದೋ ಸಾಂಧರ್ಭಿಕ ಅಥವಾ ಐತಿಹಾಸಿಕ ಕಾರಣಗಳಿಂದಾಗಿ ನಿರ್ದಿಷ್ಟ ಜಾತಿ ಮತ್ತು ಉಪಜಾತಿಗಳು ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅದನ್ನು ಆ ಜಾತಿಯದ್ದೇ ತಪ್ಪು ಎನ್ನಲಾಗುವುದಿಲ್ಲ. ಆದರೆ, ಅವರು ಅಲ್ಲಿದ್ದು ಏನು ಮಾಡುತ್ತಿದ್ದಾರೆ ಎಂಬುದು ಹೆಚ್ಚು ಮುಖ್ಯವಾದುದು. ನಿಸ್ಸಂದೇಹವಾಗಿ ಹೇಳಬಹುದಾದ ಒಂದು ಸಂಗತಿಯೆಂದರೆ, ಬಹುಪಾಲು ಮಾಧ್ಯಮಗಳು ಶೂದ್ರ ರಾಜಕಾರಣಿಗಳು, ಶೂದ್ರ ರಾಜಕಾರಣವನ್ನು ಹಣಿಯುತ್ತಿವೆ. ಬಿಜೆಪಿಯಲ್ಲಿ ಬೇರೆ ಬೇರೆ ಸಮುದಾಯಗಳಿಗೆ ಸೇರಿದವರು ಇದ್ದಾರಾದರೂ, ಅದು ವೈದಿಕ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಸಿದ್ಧಾಂತ ಮತ್ತು ರಾಜಕಾರಣ ಮಾಡುತ್ತಿರುವುದರಿಂದ, ಶೇ.90ರಷ್ಟು ಅದರ ಪರವಾಗಿ ನಿಲ್ಲುತ್ತಾರೆ. ದಲಿತ ಮುಖ್ಯಮಂತ್ರಿಯ ಪ್ರಶ್ನೆಯನ್ನು ಎತ್ತುವುದೂ ಸಹಾ ಶೂದ್ರರಾದ ಸಿದ್ದರಾಮಯ್ಯನವರನ್ನು ಹಣಿಯಲೇ ಆಗಿರುತ್ತದೆ.
ತೀರಾ ಇತ್ತೀಚೆಗಿನ ಒಂದು ಉದಾಹರಣೆ ನೀಡುವುದಾದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಮೇಲೆ ‘ಮೀಟೂ’ ಆರೋಪಗಳು ಬಂದವು. ಸರ್ವಾಜನಿಕವಾಗಿ ಚರ್ಚೆಯಾಗಿದ್ದಕ್ಕಿಂತ ಹೆಚ್ಚು ಮಾಹಿತಿ ಈ ಮಾಧ್ಯಮಗಳಲ್ಲಿರುವವರ ಕೈಯ್ಯಲ್ಲಿ ಇತ್ತು. ಅದನ್ನೊಂದು ಸುದ್ದಿಯೇ ಅಲ್ಲ ಎಂಬಂತೆ ಪಕ್ಕಕ್ಕೆ ತಳ್ಳಿದ್ದಷ್ಟೇ ಅಲ್ಲದೇ, ಆತನ ವಿರುದ್ಧ ವರದಿ ಮಾಡಬಾರದೆಂಬ ಸಂವಿಧಾನ ವಿರೋಧಿ ತೀರ್ಪು ಬಂದ ಮೇಲೆ ಅದನ್ನು ಪ್ರಶ್ನಿಸಲೂ ಹೋಗಲಿಲ್ಲ. ಸ್ವಲ್ಪ ಕಾಲದ ನಂತರ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ತೀರ್ಪನ್ನು ಪ್ರಶ್ನಿಸಿತು, ಇನ್ನೂ ಒಂದು ವಾರದ ನಂತರ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡಾಗಳು ಬರೆದವು.
ಒಂದು ವೇಳೆ ಸದರಿ ವ್ಯಕ್ತಿ ಬ್ರಾಹ್ಮಣನಾಗಿರದೇ ಇದ್ದಲ್ಲಿ ಏನಾಗುತ್ತಿತ್ತು? ಆ ವ್ಯಕ್ತಿಯನ್ನು ಚುನಾವಣಾ ಕಣದಿಂದ ನಿವೃತ್ತಗೊಳಿಸುವ ಮಟ್ಟಿಗೆ ಕೂಗಾಟ ನಡೆದಿರುತ್ತಿತ್ತು. ಇಂತಹ ಒಂದಲ್ಲಾ, ಎರಡಲ್ಲಾ, ನೂರಲ್ಲಾ ಸಾವಿರ ಉದಾಹರಣೆಗಳನ್ನು ನೋಡಬಹುದು.
ಈ ಪ್ರಮಾಣದ ಜಾತಿ ರಾಜಕಾರಣವನ್ನು ಮಾಧ್ಯಮಗಳಲ್ಲಿ ಕುಳಿತಿರುವವರು ಮಾಡುತ್ತಿದ್ದಾರೆ. ಬಹಳ ಕ್ಷುದ್ರವಾದ ನಡವಳಿಕೆಯನ್ನು ಇವರೆಲ್ಲರೂ ತೋರಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಬಹಳ ಅಪಾಯಕಾರಿ. ಈ ಕುರಿತು ಚರ್ಚೆ ನಡೆಯದಿದ್ದರೆ ಅದು ಇನ್ನೂ ಅಪಾಯಕಾರಿ. ನ್ಯಾಯಪಥ-ನಮ್ಮ ಗೌರಿ ಪತ್ರಿಕೆ ಮತ್ತು https://naanugauri.com ಈ ಚರ್ಚೆಯನ್ನು ಗಂಭೀರವಾಗಿ ಮತ್ತು ಆರೋಗ್ಯಕರವಾಗಿ ನಡೆಸಲು ತೀರ್ಮಾನಿಸಿದೆ.


