ಜನಸಾಮಾನ್ಯರು ನ್ಯಾಯಕ್ಕಾಗಿ ನ್ಯಾಯಾಧೀಶರ ಮೊರೆ ಹೋಗುವುದು ಸಹಜ. ಆದರೆ ನ್ಯಾಯಾಧೀಶರೇ ಅಪರಾಧಿ ಸ್ಥಾನದಲ್ಲಿ ನಿಂತರೆ…? ಬಿಹಾರದ ಖಗಾರಿಯಾ ಜಿಲ್ಲಾ ಸತ್ರ ನ್ಯಾಯಾಧೀಶ ಸುಭಾಷ್ ಚಂದ್ರ ಚೌರಾಸಿಯಾ ಅಂಥದೊಂದು ಘನಕಾರ್ಯದಲ್ಲಿ ಸಿಕ್ಕಿಬಿದ್ದಿದ್ದಾರೆ. ಕಾನೂನು ಪದವೀಧರೆಯಾಗಿರುವ ತನ್ನ 24 ವರ್ಷದ ಮಗಳು ಯಶಸ್ವಿನಿಯನ್ನು ಗೃಹಬಂಧನದಲ್ಲಿರಿಸಿ, ಹಿಂಸಿಸುವ ಮೂಲಕ. ಆ ಮಗಳು ಮಾಡಿದ ಅಪರಾಧವಾದರೂ ಏನು? ತನ್ನ ಇಚ್ಚೆಗೆ ವಿರುದ್ಧವಾಗಿ ಪ್ರೀತಿಸಿದವÀನನ್ನು ಮದುವೆಯಾಗಲು ಹೊರಟಿದ್ದು. ಆಕೆ ಸ್ವತಃ ನ್ಯಾಯಾಧೀಶಳಾಗಲು ಬಯಸಿ ಸಂಬಂಧಿತ ಪರೀಕ್ಷೆ ಕೂಡ ಬರೆದಿದ್ದಳು. ಆಕೆ ಪ್ರೇಮಿಸಿದ್ದು ಸುಪ್ರಿಂ ಕೋರ್ಟಿನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಸಿದ್ಧಾರ್ಥ್ ಬನ್ಸಲ್ ಎಂಬ ದೆಹಲಿಯ ಯುವ ವಕೀಲನನ್ನು.
ಈ ಮಹಾನುಭಾವ ನ್ಯಾಯಾಧೀಶ ತನ್ನ ಮಗಳು ಐಎಎಸ್ ಅಧಿಕಾರಿ ಅಥವ ನ್ಯಾಯಾಧೀಶ ಹುದ್ದೆಯಲ್ಲಿರುವ ವ್ಯಕ್ತಿಯನ್ನಷ್ಟೇ ಮದುವೆಯಾಗಬೇಕೆಂದು ಹಟ ಹಿಡಿದು ಈ ಘನ ಕಾರ್ಯ ಮಾಡಿದ್ದಾರಂತೆ. ಈ ನ್ಯಾಯಾಧೀಶರ ಮನವೊಲಿಸಲು ಪ್ರಯತ್ನಿಸಿ ವಿಫಲನಾದ ಆ ಪ್ರಿಯಕರ ಬೇರೆ ವಿಧಿಯಿಲ್ಲದೆ ಪಟ್ನಾ ಉಚ್ಚ ನ್ಯಾಯಾಲಯದ ಮೊರೆ ಹೋದ. ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಯಶಸ್ವಿನಿಯನ್ನು ಕರೆತಂದು ತನ್ನ ಮುಂದೆ ನಿಲ್ಲಿಸುವಂತೆ ಆದೇಶ ಹೊರಡಿಸಿದೆ. ಪರಿಣಾಮವಾಗಿ ಎಸ್ಪಿ ನೇತೃತ್ವದಲ್ಲಿ ಒಂದು ಟೀಂ ರಚಿಸಿ ಯಶಸ್ವಿನಿಯನ್ನು ಸುರಕ್ಷಿತವಾಗಿ ಕರೆ ತರುವಂತೆ ನಿರ್ದೇಶನ ನೀಡಿದೆ.
ನ್ಯಾಯಾಧೀಶರೊಬ್ಬರು ತಮ್ಮ ಮಗಳನ್ನು ಗೃಹ ಬಂಧನದಲ್ಲಿಟ್ಟಿದ್ದು ಇದೇ ಮೊದಲೇನಲ್ಲ. 2013 ರಲ್ಲಿ ರಾಜಸ್ಥಾನದ ರಾಠೋಡ್ ಎಂಬ ಜಿಲ್ಲಾ ನ್ಯಾಯಾಧೀಶರೊಬ್ಬರು ಇದನ್ನೇ ಮಾಡಿದ್ದರು. ಆದರೂ ಇಂತಹ ಘಟನೆಗಳು ಮುಂದುವರಿಯುತ್ತಲೇ ಇರುವುದಕ್ಕೆ ಇಂಥವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಇರುವುದೇ ಕಾರಣ.
ಇಲ್ಲಿ ಎರಡು ಪ್ರಮುಖ ಅಂಶಗಳನ್ನು ನಾವು ಗಮನಿಸಬೇಕು. ಒಬ್ಬ ತಂದೆಯಾಗಿ ಈ ನ್ಯಾಯಾಧೀಶ ಅದೇ ಪಿತೃಪ್ರಧಾನ ಕಟ್ಟುಪಾಡುಗಳಿಗೆ ಅಡಿಯಾಳಾಗಿರುವುದು ಒಂದು ಅಂಶವಾದರೆ, ಇಂತಹ ಮೌಲ್ಯಗಳನ್ನು ಹೊಂದಿರುವ ಇವರು ನ್ಯಾಯ ಪ್ರದಾನ ಮಾಡುವ ತಮ್ಮ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ಸಂವಿಧಾನ ಮತ್ತು ಕಾನೂನುಗಳಿಗೆ ನಿಷ್ಠರಾಗಿರುತ್ತಾರೆ ಎಂಬುದು ಇನ್ನೊಂದು ಅಂಶ. ಈ ಎರಡನೇ ಅಂಶ ಹೆಚ್ಚು ಅಪಾಯಕಾರಿ. ಏಕೆಂದರೆ ತನ್ನ ಎದುರು ಬರುವ ವ್ಯಾಜ್ಯಗಳನ್ನು ತೀರ್ಮಾನಿಸುವಾಗ ಪ್ರತಿಯೊಬ್ಬ ನ್ಯಾಯಾಧೀಶ ತನ್ನ ವೈಯಕ್ತಿಕ ಜ್ಞಾನ ಹಾಗೂ ಅನುಭವವಗಳ ಆಧಾರದಲ್ಲೇ ತೀರ್ಪು ಕೊಡುತ್ತಾರೆ. ಜಾತಿ ಹಾಗೂ ಅಂತಸ್ತುಗಳ ವ್ಯಸನದಲ್ಲಿರುವ ಇಂತಹ ಕುಂಠಿತ ಮನಸ್ಸಿನ ನ್ಯಾಯಾಧೀಶರಿಂದ ಮೊದಲೇ ಹದಗೆಟ್ಟಿರುವ ದೇಶದ ನ್ಯಾಯ ವ್ಯವಸ್ಥೆ ಇನ್ನೂ ಹೆಚ್ಚಿನ ಅಪಾಯವನ್ನು ಎದುರಿಸುವ ಸಾದ್ಯತೆಗಳಿವೆ.
ಕಾನೂನು ಪದವೀಧರೆಯಾದ ಮಗಳನ್ನೇ ಗೃಹ ಬಂಧನದಲ್ಲಿರಿಸುವ ಈ ವ್ಯಕ್ತಿ, ತಾನು ನ್ಯಾಯಾಧೀಶನಾಗಿರುವುದರಿಂದ ಏನು ಬೇಕಾದರೂ ಮಾಡಬಹುದು ಎಂಬ ದಾಷ್ಟ್ರ್ಯ ಪ್ರದರ್ಶಿಸಿದ್ದಾರೆ. ಇಂಥವರಿಂದ ‘ನ್ಯಾಯ ಪಡೆದ’ ಸಹಸ್ರಾರು ಬಡಪಾಯಿಗಳ ಪರಿಸ್ಥಿತಿಯನ್ನು ಯಾರಾದರೂ ಊಹಿಸಬಹುದು. ಇಲ್ಲಿ ಇನ್ನೂ ದಾರುಣವಾದ ಸಂಗತಿಯೆಂದರೆ, ಪ್ರಿಯಕರ ಸಿದ್ಧಾರ್ಥ್ ಬನ್ಸಲ್ ತನ್ನ ದೂರನ್ನು ಹೇಳಿಕೊಂಡು ಮಹಿಳಾ ಆಯೋಗದಿಂದ ಹಿಡಿದು ಪೊಲೀಸ್ ಠಾಣೆಗಳು ಹಾಗೂ ಓಉಔಗಳ ಬಳಿ ಅಲೆದಾಡಿದರೂ ಪರಿಹಾರ ಸಿಗುವುದಿರಲಿ, ನ್ಯಾಯದ ಭರವಸೆಯೂ ಸಿಗಲಿಲ್ಲವೆಂಬುದು. ಒಬ್ಬ ಸುಶಿಕ್ಷಿತ, ಸುಪ್ರಿಂಕೋರ್ಟ್ ವಕೀಲನ ಪಾಡೇ ಹೀಗಾದರೆ ಈ ನಮ್ಮ ದೇಶದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಗತಿಯೇನು ಎಂಬುದಕ್ಕೆ ಈ ಪ್ರಕರಣ ಕನ್ನಡಿ ಹಿಡಿದಿದೆ. ಇಂತಹ ಅದೆಷ್ಟು ಪ್ರಕರಣಗಳು ಬೆಳಕಿಗೆ ಬಾರದೆ ಕತ್ತಲೆಯಲ್ಲಿ ಮುಚ್ಚಿ ಹೋಗುತ್ತವೆಯೋ ಗೊತ್ತಿಲ್ಲ. ಸಮಾನತೆ ಎಂಬುದು ಮಹಿಳೆಯರ ಪಾಲಿಗೆ ಕೇವಲ ಮರೀಚಿಕೆಯೇ?
– ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು


