Homeಸಾಮಾಜಿಕನ್ಯಾಯಾಲಯಕ್ಕೆ ಜಾತಿವಾದಿಗಳ ‘ಅತಿರೇಕದ ದೌರ್ಜನ್ಯ’ ಕಾಣಲಿಲ್ಲವೇಕೆ?

ನ್ಯಾಯಾಲಯಕ್ಕೆ ಜಾತಿವಾದಿಗಳ ‘ಅತಿರೇಕದ ದೌರ್ಜನ್ಯ’ ಕಾಣಲಿಲ್ಲವೇಕೆ?

- Advertisement -
- Advertisement -

ಗುಜರಾತಿನ ಊನಾದಲ್ಲಿ ಗೋಭಯೋತ್ಪಾದಕರು ದಲಿತರನ್ನು ಹೀನಾಯವಾಗಿ ಕಬ್ಬಿಣದ ರಾಡುಗಳಿಂದ ಥಳಿಸಿ ವಿಡಿಯೋ ಮಾಡಿ ಬಹಿರಂಗವಾಗಿ ಪ್ರಚಾರ ಮಾಡಿದರು. ತುಮಕೂರಿನ ಗುಬ್ಬಿಯ ಅಭಿಷೇಕ್ ಎಂಬ ದಲಿತ ಹುಡುಗನನ್ನು ವಿವಸ್ತ್ರಗೊಳಿಸಿ ಥಳಿಸಿ ಆ ವಿಡಿಯೋವನ್ನು ಪ್ರಚಾರ ಮಾಡಲಾಯಿತು. ತಮಿಳುನಾಡಿನಲ್ಲಿ ವಾಚ್ ಕಟ್ಟಿದ್ದಕ್ಕೆ ದಲಿತನ ಕೈ ಕಡಿಯಲಾಯಿತು. ಪುಣೆಯಲ್ಲಿ ಅಂಬೇಡ್ಕರ್ ರಿಂಗ್ ಟೋನ್ ಹಾಕಿಕೊಂಡದ್ದಕ್ಕೆ ದಲಿತ ಯುವಕನನ್ನು ಅಪಹರಣಗೈದು ಕೊಲೆ ಮಾಡಲಾಯಿತು. ರಾಜಸ್ತಾನದಲ್ಲಿ ಅಂತರ್ಜಾತಿ ವಿವಾಹವಾದದ್ದಕ್ಕೆ ದಂಪತಿಗಳನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಯಿತು. ಮೊನ್ನೆ ತಾನೇ ಉತ್ತರಪ್ರದೇಶದಲ್ಲಿ ಕುದುರೆ ಸವಾರಿ ಮಾಡಿದ್ದಕ್ಕಾಗಿ ತಲೆ ಜಜ್ಜಿ ದಲಿತ ಯುವಕನನ್ನು ಕೊಲ್ಲಲಾಗಿದೆ. ಈ ಘಟನೆಗಳಾವುವೂ ಪ್ರಾಚೀನ ಭಾರತದಲ್ಲಿ ನಡೆದದ್ದಲ್ಲ. 21 ನೇ ಶತಮಾನದ ಭಾರತದಲ್ಲಿ. ಹೀಗೆ ಅದೆಷ್ಟು ಅಮಾನವೀಯ, ಕ್ರೂರ, ಕರುಳುಹಿಂಡುವ ದೌರ್ಜನ್ಯಗಳು ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿವೆ.

ಗುಜರಾತ್ ಊನಾದಲ್ಲಿ ದಲಿತರಿಗೆ ಸಾರ್ವಜನಿಕವಾಗಿ ರಾಡ್ ಗಳಿಂದ ಥಳಿಸುತ್ತಿರುವ ಸೋ ಕಾಲ್ಡ್ ಗೋ ರಕ್ಷಕರ ಆರ್ಭಟ

ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಎಸ್.ಸಿ ಮತ್ತು ಎಸ್.ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 (ಅಟ್ರಾಸಿಟಿ ತಡೆ ಕಾಯ್ದೆ) ಮತ್ತು ತಿದ್ದುಪಡಿ 2015 ಇದನ್ನು ದಲಿತರು ‘ಅತಿರೇಕದ ದುರ್ಬಳಕೆ’ ಮಾಡಿಕೊಳ್ಳುತ್ತಿದ್ದಾರೆ ಎಂದು ತೀರ್ಪು ನೀಡುತ್ತದೆ. ದುರ್ಬಲ ಜನಾಂಗದವರ ಬೆನ್ನೆಲುಬಾಗಿ ನಿಲ್ಲಬೇಕಾದ ನ್ಯಾಯಾಲಯ ಇಂತಹ ತೀರ್ಪು ನೀಡಿರುವುದು ಕಳವಳ ಉಂಟುಮಾಡಿದೆ.

ಇದರ ಪರಿಣಾಮವಾಗಿ ದಲಿತರು ನಡೆಸಿದ ಭಾರತ್ ಬಂದ್ ಪ್ರತಿಭಟನೆ ವೇಳೆ ಗೋಲಿಬಾರ್‍ನಿಂದಾಗಿ 9 ದಲಿತರು ಪ್ರಾಣ ಕಳೆದುಕೊಂಡಿದ್ದಾರೆ. ಆಶ್ಚರ್ಯವೆಂದರೆ, 9 ದಲಿತರನ್ನು ಕೊಂದಿರುವ ಸರ್ಕಾರಗಳೆಲ್ಲವೂ ಬಿಜೆಪಿ ನೇತೃತ್ವದಲ್ಲಿವೆ. ಆದರೆ ಕೇಂದ್ರ ಸರ್ಕಾರ ನಾವು ದಲಿತರ ರಕ್ಷಣೆಗೆ ಬದ್ಧ ಎನ್ನುತ್ತಿದೆ. ಮತ್ತೊಂದು ಕಡೆ ಸುಪ್ರೀಂಕೋರ್ಟ್ `ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ’ ಎಂದು ಕೇಂದ್ರ ಸರ್ಕಾರದ ದ್ವಂದ್ವ ನಿಲುವನ್ನು ಪ್ರಶ್ನಿಸಿದೆ. ಇದು ಕೇಂದ್ರದ ದಲಿತ ವಿರೋಧಿ ನಿಲುವನ್ನು ಜಗಜ್ಜಾಹೀರು ಮಾಡಿದೆ. ಹೀಗಿರುವಾಗ ದಲಿತರು ಇಷ್ಟು ಆಕ್ರೋಷಭರಿತರಾಗಲು ಕಾರಣಗಳನ್ನು ಹುಡುಕುವುದು ಕಷ್ಟವೇ?

ಈ ತೀರ್ಪಿನ ಪ್ರಕಾರ ಸದರಿ ಕಾಯ್ದೆಯನ್ನು ದಲಿತರು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇನ್ನು ಮುಂದೆ ಈ ಕಾಯ್ದೆ ಅಡಿ ನೌಕರ ಅಥವಾ ಯಾರನ್ನೇ ಬಂಧಿಸುವ ಮೊದಲು ಡಿವೈಎಸ್‍ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳು 7 ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸಿ ಒಪ್ಪಿಗೆ ನೀಡುವುದು ಕಡ್ಡಾಯ. ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ. ಒಂದು ವೇಳೆ ಬಂಧನ ಅನಿವಾರ್ಯವಾದರೆ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಹೀಗೆ ತನ್ನ 89 ಪುಟಗಳ ತೀರ್ಪಿನಲ್ಲಿ ಕಾಯ್ದೆ ಜಾರಿ ಮಾಡಲು ನ್ಯಾಯಾಧೀಶರಾದ ಆದರ್ಶ ಗೋಯಲ್ ಮತ್ತು ಉದಯ್ ಲಲಿತ್ ಅವರ ಪೀಠ ಷರತ್ತುಗಳನ್ನು ಸೂಚಿಸಿದೆ. ಜೊತೆಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನೂ ತೀರ್ಪಿನಲ್ಲಿ ನಮೂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಅಟ್ರಾಸಿಟಿ ತಡೆ ಕಾಯ್ದೆಯ ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು ಹಾಗೂ ನಿರೀಕ್ಷಣಾ ಜಾಮೀನಿನ ದಾರಿ ಕಠಿಣ. ಆದರೆ ಈ ತೀರ್ಪಿನ ಪ್ರಕಾರ ಇವೆರಡೂ ಕಾಗದದ ಮೇಲಿನ ಅಕ್ಷರಗಳಾಗಿ ಉಳಿಯುವ ಎಲ್ಲಾ ಸಾಧ್ಯತೆಗಳಿವೆ. ಇಂದು ಈ ಷರತ್ತುಗಳು ಕೇವಲ ಜಾತಿನಿಂದನೆ ಪ್ರಕರಣಗಳಿಗೆ ಸೀಮಿತ ಎಂದು ಹೇಳಿದರೂ ಇದೇ ತೀರ್ಪಿನ ಆಧಾರದಲ್ಲಿ ಮುಂದೆ ಇಡೀ ಕಾಯ್ದೆಯನ್ನೇ ಮತ್ತಷ್ಟು ದುರ್ಬಲಗೊಳಿಸಬಹುದಾಗಿದೆ.

ಇಲ್ಲೀವರೆಗೆ ಈ ಕಾಯ್ದೆಯಿಂದ ದಲಿತರಿಗೆ ನ್ಯಾಯ ದೊರಕಿದೆಯೇ ಎಂದು ಪ್ರಶ್ನಿಸಿದರೆ ಉತ್ತರ ನಿರಾಶದಾಯಕವಾಗಿದೆ. ಏಕೆಂದರೆ ಇಲ್ಲಿಯವರೆಗೆ ಈ ಕಾಯ್ದೆಯಿಂದ ಗಮನಾರ್ಹ ನ್ಯಾಯ ದಲಿತರಿಗೆ ಸಿಕ್ಕಿಲ್ಲ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕೆಲವು ಪ್ರಕರಣಗಳ ಹಣೆ ಬರಹ ನೋಡಿದರೆ ಇದು ನಮಗೆ ಸ್ಪಷ್ಟವಾಗುತ್ತದೆ. ಆಂದ್ರ ಪ್ರದೇಶದಲ್ಲಿ ಐವರು ದಲಿತರನ್ನು ಕೊಂದುಹಾಕಿದ ಕಾರಂಚೇಡು ಪ್ರಕರಣದಲ್ಲಿ ಸೆಷನ್ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ ಹೈ ಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು. ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಚುಂಡೂರು ಪ್ರಕರಣದಲ್ಲಿ 8 ದಲಿತರನ್ನು ಕಡಿದು ಕೊಲ್ಲಲಾಗಿತ್ತು. ಸೆಷನ್ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ ಮತ್ತದೇ ಹೈ ಕೋರ್ಟ್, ಸುಪ್ರೀಂ ಕೋರ್ಟುಗಳು ಆರೋಪಿಗಳನ್ನು ಖುಲಾಸೆಗೊಳಿಸಿದವು. ಬತಾನಿ ತೋಲ ಮತ್ತು ಲಕ್ಷ್ಮಣಪುರ ಬಾಥೆ ಸೇರಿದಂತೆ ಬಿಹಾರದ 6 ಪ್ರಕರಣಗಳಲ್ಲೂ ಇದೇ ಕಥೆ. ಅವೆಲ್ಲವೂ ಸುಪ್ರೀಂ ಕೋರ್ಟಿನಲ್ಲಿ ಧೂಳು ಹಿಡಿಯುತ್ತಿವೆ. ನಮ್ಮದೇ ರಾಜ್ಯದ ಕಂಬಾಲಪಲ್ಲಿ ಮತ್ತು ನಾಗಲಾಪಲ್ಲಿ ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಟ್ಟವರು ಬಹಿರಂಗವಾಗಿ ನಮಗೆ ರಕ್ಷಣೆ ಕೊಡಿ ಸತ್ಯ ಹೇಳುತ್ತೇವೆ ಎಂದರು. ನ್ಯಾಯಾಲಯಕ್ಕೆ ಈ ಕೂಗು ಕೇಳಲೇ ಇಲ್ಲ. ಈಗ ಸಾಕ್ಷಿ ಹೇಳಲು ಆ ಜೀವವೂ ಇಲ್ಲ. ಅವೆರಡೂ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿವೆ. ಹೀಗೆ ದಲಿತರ ಮೇಲಿನ ಹತ್ಯಾಕಾಂಡ, ದೌರ್ಜನ್ಯಗಳ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. ಆದರೆ ಇದುವರೆವಿಗೂ ಅವರೆಲ್ಲರನ್ನು ಕೊಂದವರಾರು ಎಂಬುದಕ್ಕೆ ಈ ದೇಶದ ತನಿಖಾ ಮತ್ತು ನ್ಯಾಯಾಂಗ ವ್ಯವಸ್ಥೆ ಇದುವರೆಗೂ ಉತ್ತರ ಕೊಟ್ಟೇ ಇಲ್ಲ.

ಹಸಿವು ನೀಗಿಸಿಕೊಳ್ಳಲು ಪ್ರಸಾದ ಪಡೆಯಲೆಂದು ದೇವಸ್ಥಾನ ಪ್ರವೇಶಿಸಿದ ದಲಿತ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಹರಿಯಾಣದಲ್ಲಿ ಮಾರಣಾಂತಿಕವಾಗಿ ಥಳಿಸಲಾಗಿತ್ತು

ದಲಿತರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕಳೆದ ಹತ್ತು ವರ್ಷಗಳಲ್ಲಿ ಅದರ ಪ್ರಮಾಣ ಶೇ. 66 ಕ್ಕೆ ಏರಿದೆ. 2006 ರಲ್ಲಿ ದಾಖಲಾದ ದೌರ್ಜನ್ಯಗಳು 27,070. 2016 ರಲ್ಲಿ ದಾಖಲಾದ ಪ್ರಕರಣಗಳು 47,338. ಅಂದರೆ ಪ್ರತಿ 15 ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆ. 2016 ರಲ್ಲಿ ದಲಿತ ಮಹಿಳೆಯರ ಮೇಲಿನ ಹಲ್ಲೆ 3172. ಮಾರಣಾಂತಿಕ ಹಲ್ಲೆ 1071. ಅಪಹರಣ ಮತ್ತು ಕಿರುಕುಳ 855. ಕೊಲೆ 786. ಅತ್ಯಾಚಾರ 2541. ಗಲಭೆ 1725. ಆದರೆ ಶಿಕ್ಷೆ ನೀಡಿರುವ ಪ್ರಮಾಣ ಗುಜರಾತಿನಲ್ಲಿ ಶೇ.3, ಕರ್ನಾಟಕದಲ್ಲಿ ಶೇ.3.46, ಒರಿಸ್ಸಾದಲ್ಲಿ ಶೇ.3.45, ಆಂದ್ರಪ್ರದೇಶದಲ್ಲಿ ಶೇ.6, ರಾಜಸ್ಥಾನದಲ್ಲಿ ಶೇ.7, ಮಹಾರಾಷ್ಟ್ರದಲ್ಲಿ ಶೇ.7. ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿ ಗಮನಾರ್ಹ ಶಿಕ್ಷೆಗಳಾಗಿರುವ ಕಾರಣ ಇಡೀ ದೇಶದಲ್ಲಿ ಕೇವಲ ಶೇ.28. ಇನ್ನು ವಿಚಾರಣೆ ನಡೆಯುತ್ತಾ ಬಾಕಿ ಇರುವ ಪ್ರಕರಣಗಳು ಶೇ. 89. ಇದು ದಲಿತರಿಗೆ ನ್ಯಾಯಾಂಗ ನೀಡಿರುವ ನ್ಯಾಯ. ಅಟ್ರಾಸಿಟಿ ತಡೆ ಕಾಯ್ದೆ ಇಲ್ಲದಿದ್ದರೆ ಈ ಕನಿಷ್ಠ ನ್ಯಾಯವೂ ದಲಿತರಿಗೆ ಸಿಗುತ್ತಿರಲಿಲ್ಲ. ಇದಕ್ಕೆ 1989 ಕ್ಕೂ ಹಿಂದಿನ ಬೆಲ್ಚಿ, ಪಿಪ್ರ, ಕಿಲ್ವೇನ್ಮಣಿ, ಕೆಸ್ತಾರ ಮುಂತಾದ ನರಮೇಧಗಳೇ ಸಾಕ್ಷಿ.

ತುಂಡು ಭೂಮಿಗೆ ಸರ್ಕಾರದಿಂದ ಪಟ್ಟಾ ಪಡೆದುಕೊಂಡಿದ್ದಕ್ಕಾಗಿ ಮಧ್ಯಪ್ರದೇಶದ ಮಹಿಳೆಯನ್ನು ಅರೆಬೆತ್ತಲೆ ಮಾಡಿ ಥಳಿಸಿ, ಬಲವಂತವಾಗಿ ಮೂತ್ರ ಕೂಡಿಸಲಾಗಿತ್ತು

ಪರಿಸ್ಥಿತಿ ಹೀಗಿರುವಾಗ ನ್ಯಾಯಾಲಯ ಕಾಯ್ದೆಯನ್ನು ಚುರುಕುಗೊಳಿಸಲು ಶಿಫಾರಸ್ಸು ಮಾಡಬೇಕೋ ಅಥವಾ ಕಾಯ್ದೆ ಜಾರಿಯಾಗಲು ಷರತ್ತುಗಳನ್ನು ವಿಧಿಸಬೇಕೋ? ಅಟ್ರಾಸಿಟಿ ತಡೆ ಕಾಯ್ದೆ ಹೇಳುವಂತೆ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ ರಚನೆಯಾಗಿಲ್ಲ. ಸಾಕ್ಷಿಗಳಿಗೆ ರಕ್ಷಣೆ ಕೊಡುವ ಕೆಲಸವಾಗಿಲ್ಲ. ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಡುವವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಸ್ಪøಶ್ಯತೆ ಜೀವಂತವಾಗಿರುವುದಕ್ಕೆ ಸರ್ಕಾರಗಳಿಗೆ ಛೀಮಾರಿ ಹಾಕಿಲ್ಲ. ಪರಿಶಿಷ್ಟರಿಗೆ ರಕ್ಷಣೆ ದೊರಕುತ್ತಿದೆಯೇ ಎಂಬುದನ್ನು ಖಾತ್ರಿಗೊಳಿಸಿಕೊಂಡಿಲ್ಲ. ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳು ಕೌಂಟರ್ ಪ್ರಕರಣ ದಾಖಲಿಸುವುದಕ್ಕೆ ಯಾವುದೇ ಪರಿಶೀಲನೆಗಳಿಲ್ಲ. ಆದರೆ ದುರ್ಬಲರ ಮೇಲೆಸಗುವ ಅನ್ಯಾಯಗಳಿಗೆ ‘ಅತಿರೇಕದ ದುರ್ಬಳಕೆ’ ಎಂಬ ಹಣೆಪಟ್ಟಿ ಕಟ್ಟಿ ಷರತ್ತು ವಿಧಿಸುವುದು ಅತಿ ಸುಲಭದ ಕೆಲಸವಲ್ಲವೇ? ನಮ್ಮ ನ್ಯಾಯಾಲಯಗಳಿಗೆ ದಲಿತರನ್ನು ಸುಟ್ಟು, ಕೊಚ್ಚಿ ಕೊಲ್ಲುವುದು, ಮಹಿಳೆ ಎದೆ ಸೀಳುವುದು, ಶವಕ್ಕೂ ಅತ್ಯಾಚಾರವೆಸಗುವುದು ಯಾವತ್ತೂ ‘ಅತಿರೇಕದ ದೌರ್ಜನ್ಯ’ ಎನಿಸಲೇ ಇಲ್ಲ. ಅದಕ್ಕೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲೇ ಇಲ್ಲ.

ಶಾಲೆಯಲ್ಲಿ ಅಡುಗೆ ಮಾಡುವ ಸರ್ಕಾರಿ ಕೆಲವನ್ನು ಮೇಲ್ಜಾತಿಗಳ ಒತ್ತಾಯ ಮಾಡಿದರೂ ತ್ಯಜಿಸದಿದ್ದುದಕ್ಕೆ ಆಕೆಯನ್ನು ಮತ್ತು ಅವಳ ಎಳೆಯ ಮಗನನ್ನು ಗುಜರಾತ್ ನಲ್ಲಿ ಅಮಾನುಷವಾಗಿ ಥಳಿಸಿದ್ದರು
ಉತ್ತರಪ್ರದೇಶದಲ್ಲಿ ತಾವು ಕೊಟ್ಟ ದೂರನ್ನು ಸ್ವೀಕರಿಸುವಂತೆ ಮಾಡಲು ಇಡೀ ದಲಿತ ಕುಟುಂಬ (ಇಬ್ಬರು ಮಹಿಳೆಯರು ಒಳಗೊಂಡಂತೆ) ಪೊಲೀ ಸ್ ಠಾಣೆಯ ಮುಂದೆ ಬೆತ್ತಲಾಗಿ ಪ್ರತಿಭಟಿಸಬೇಕಾಗಿ ಬಂದಿತ್ತು

ಎಲ್ಲಾ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವವರು ಇರುತ್ತಾರೆ. ಹಾಗೆಂದು ಕಾನೂನನ್ನೇ ದುರ್ಬಲಗೊಳಿಸುವುದು ಎಷ್ಟು ಸರಿ? ಕಣ್ಣಿಗೆ ಗಾಯವಾದರೆ ತಲೆಯನ್ನೇ ತೆಗೆಯಬೇಕೆ? ಜಾತಿವಾದಿಗಳಿಗೆ 7 ದಿನಗಳಲ್ಲ, ಒಂದು ಕ್ಷಣ ಸಿಕ್ಕರೂ ಸಾಕು ಬೆದರಿಕೆ ಒಡ್ಡಿ ದಲಿತರ ಬಾಯಿ ಮುಚ್ಚಿಸುತ್ತಾರೆ. ಹೀಗಿರುವಾಗ ಸಂವಿಧಾನದ ಕಲಂ 46 ದಲಿತರಿಗೆ ಎಲ್ಲಾ ರೀತಿಯ ದೌರ್ಜನ್ಯಗಳಿಂದ ರಕ್ಷಣೆ ನೀಡಬೇಕೆಂದು ಹೇಳುತ್ತದೆಯೇ ಹೊರತು ಇರುವ ಕಾನೂನನ್ನು ದುರ್ಬಲಗೊಳಿಸಲೆಂದಲ್ಲ. ಆ ಕಾರಣಕ್ಕಾಗಿಯೇ 1989 ರಲ್ಲಿ ಈ ಕಾಯ್ದೆಯನ್ನು ರಚಿಸಲಾಗಿತ್ತು. ಆದರೆ ಇಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದಲಿತರನ್ನು ಶೋಷಿಸಲು ಸವರ್ಣಿಯರಿಗೆ ಮತ್ತಷ್ಟು ಧೈರ್ಯ ಕೊಡುತ್ತದೆ. ದಲಿತೇತರರ ಫ್ಯೂಡಲ್ ಮನಸ್ಥಿತಿ ವಿರುದ್ಧ ದಲಿತರಿಗಿರುವ ಚಿಕ್ಕದೊಂದು ರಕ್ಷಣೆಯನ್ನೇ ಮೊಟಕುಗೊಳಿಸಿದಂತಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರೆ ಇಂತಹ ದುರ್ಘಟನೆ ಜರುಗುತ್ತಿರಲಿಲ್ಲ. 9 ಜೀವಗಳು ನೆಲಕ್ಕೊರಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಸ್ವತಃ ಅಟಾರ್ನಿ ಜನರಲ್ ಅವರಿಂದಲೇ ವಿಶೇಷ ಮುತುವರ್ಜಿ ವಹಿಸಿ ಕಾಯ್ದೆಯನ್ನು ಉಳಿಸಬೇಕಿದೆ. ದುರ್ಬಲರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಉಳಿಸಬೇಕಿದೆ. ಆದರೆ ಜನರ ಮುಂದೆ ಒಂದು ಮಾತು, ಕೋರ್ಟ್ ಮುಂದೆ ಇನ್ನೊಂದು ಮಾತನ್ನಾಡುವ ಕೇಂದ್ರ ಸರ್ಕಾರ ಈ ಕೆಲಸವನ್ನು ಮಾಡಬಲ್ಲದೆ?

ವಿಕಾಸ್ ಆರ್ ಮೌರ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...