Homeಮುಖಪುಟಡಾಕ್ಟರ್ಸ್ ಸ್ಟ್ರೈಕ್ ‘ಜನಸಾಮಾನ್ಯರ ಅವೈಜ್ಞಾನಿಕ’ ನಡವಳಿಕೆ ಮತ್ತು ವೈದ್ಯಲೋಕದ ದ್ವಂದ್ವ

ಡಾಕ್ಟರ್ಸ್ ಸ್ಟ್ರೈಕ್ ‘ಜನಸಾಮಾನ್ಯರ ಅವೈಜ್ಞಾನಿಕ’ ನಡವಳಿಕೆ ಮತ್ತು ವೈದ್ಯಲೋಕದ ದ್ವಂದ್ವ

- Advertisement -
- Advertisement -

| ಡಾ.ವಾಸು ಎಚ್.ವಿ |

ವೈದ್ಯ ಸಮುದಾಯ ಒಂದು ರೀತಿಯ ‘ವಿಕ್ಟಿಮ್‍ಹುಡ್’ನಿಂದ ನರಳುತ್ತಿದೆ. ತಮಗೆ ಎಲ್ಲಿಲ್ಲದ ಅನ್ಯಾಯ ಆಗುತ್ತಿದೆ. ತಮ್ಮಿಂದ ಚಿಕಿತ್ಸೆ ಪಡೆದ ರೋಗಿಗಳೂ ತಮ್ಮ ಸಹಾಯಕ್ಕೆ ಬರುವುದಿಲ್ಲ. ಇದೊಂದು ಕೃತಘ್ನ ಸಮಾಜ. ಇನ್ನು ಮುಂದೆ ನಾವೂ, ನಮ್ಮ ಕುಟುಂಬಕ್ಕೆ, ವ್ಯಕ್ತಿಗತ ಸಂತೋಷಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂಬ ಹಳಹಳ ಹೆಚ್ಚಾಗುತ್ತಿದೆ. ಎಲ್ಲರೂ ತಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಭಾವನೆ ಹಲವರಲ್ಲಿದೆ. ಇದೊಂದು ಥರಾ ಪ್ರಿವಿಲೆಜ್ಡ್ ಬ್ರಾಹ್ಮಣ ಸಮುದಾಯ ವಿಕ್ಟಿಮ್‍ಹುಡ್‍ನಲ್ಲಿ ಇರುವ ರೀತಿಯದ್ದು.

ಪಶ್ಚಿಮ ಬಂಗಾಳದ ಎನ್‍ಆರ್‍ಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಘಟನೆಯಿಂದಷ್ಟೇ ದೇಶಾದ್ಯಂತ ವೈದ್ಯರು ಮುಷ್ಕರ ನಡೆಸಲು ನಿರ್ಧರಿಸಿದರೇ? ಅಥವಾ ಮಮತಾ ಬ್ಯಾನರ್ಜಿಯವರು ತೋರಿದ ಅಹಂಕಾರದ ವರ್ತನೆಯಿಂದ ಪರಿಸ್ಥಿತಿ ಹದಗೆಟ್ಟಿತೇ? ಇದಕ್ಕೆ ರಾಜಕೀಯ ಆಯಾಮವಿದ್ದು, ಮಮತಾ ಬ್ಯಾನರ್ಜಿಯ ವಿರುದ್ಧ ಬಿಜೆಪಿ ವೈದ್ಯರನ್ನು ಎತ್ತಿ ಕಟ್ಟುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅದಕ್ಕೆ ‘ಸಾಕ್ಷಿ’ ಒದಗಿಸಲೆಂಬಂತೆ, ಭಾರತೀಯ ವೈದ್ಯಕೀಯ ಸಂಘದ ಕ್ರಿಯಾ ಸಮಿತಿಯ ಅಧ್ಯಕ್ಷ ಡಾ.ಮಾರ್ತಾಂಡ ಪಿಳ್ಳೈ ಆರೆಸ್ಸೆಸ್ ಪದಾಧಿಕಾರಿಯೆಂತಲೂ, ಅವರು ಇತ್ತೀಚೆಗೆ ನಡೆದ ಶಬರಿಮಲೆ ‘ಹೋರಾಟ’ದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರೆಂತಲೂ ಕೆಲವು ವಾಟ್ಸಾಪ್ ಸಂದೇಶಗಳು ಓಡಾಡುತ್ತಿವೆ. ಅದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಡಿಜಿಪಿ ಸೆನ್‍ಕುಮಾರ್ ಜೊತೆ ಪಿಳ್ಳೈ ಸಹಾ ಇದ್ದರು ಎಂತಲೂ ಆ ಫಾರ್ವರ್ಡ್ ಸಂದೇಶಗಳು ಹೇಳುತ್ತವೆ.

ಹಾಗಾದರೆ, ಈ ಸಾರಿ ನಡೆದ ವೈದ್ಯರ ಮುಷ್ಕರವು ಸಂಪೂರ್ಣವಾಗಿ ರಾಜಕೀಯ ಪ್ರೇರಿತವೇ? ಮೊದಲನೆಯದಾಗಿ ಡಾ.ಮಾರ್ತಾಂಡ ಪಿಳ್ಳೈ ಅವರ ಕುರಿತ ಮೇಲಿನ ಸುದ್ದಿಯೇ ನಿಜವಲ್ಲ. ಬಿಜೆಪಿ ಮತ್ತು ಆರೆಸ್ಸೆಸ್‍ನ ಐಟಿ ಸೆಲ್‍ಗಳು ಸಾಮಾನ್ಯವಾಗಿ ಹರಿಯಬಿಡುವ ಸುಳ್ಳುಗಳ ರೀತಿಯಲ್ಲೇ ‘ಪರಿಣಿತ ಸುಳ್ಳು ಸೃಷ್ಟಿಗಾರರು’ ಹುಟ್ಟಿಸಿದ ಸುದ್ದಿ ಅದು. ಆದರೆ, ದೇಶದಲ್ಲಿ ವೈದ್ಯರುಗಳಲ್ಲಿ ಹೆಚ್ಚಿನವರು ‘ಬಿಜೆಪಿ ಮನಸ್ಥಿತಿ’ ಹೊಂದಿದ್ದು, ಬಹುತೇಕರು ಬಿಜೆಪಿಗೆ ಮತ ಹಾಕಿರುವ ಸಾಧ್ಯತೆಯೂ ಇದೆ. ಮಮತಾ ಬ್ಯಾನರ್ಜಿಯಂತಹ ವ್ಯಕ್ತಿಯು ತೋರುವ ಅನಾದರ ಅವರನ್ನು ರೊಚ್ಚಿಗೆಬ್ಬಿಸಿರಲಿಕ್ಕೂ ಸಾಕು. ಈ ಪ್ರಕರಣವನ್ನು ಬಿಜೆಪಿಯು ಸಾಧ್ಯವಾದಷ್ಟು ರಾಜಕೀಯವಾಗಿ ಬಳಸಿಕೊಂಡಿದೆ ಮತ್ತು ತನ್ನ ಸಾಮಾಜಿಕ ನೆಲೆಯ ಭಾಗವಾಗಿರುವ ಈ ವರ್ಗದ ಹಿತಾಸಕ್ತಿಯನ್ನು ಕಾಯುವುದರ ಕುರಿತು ಅದು ಕ್ರಿಯಾಶೀಲವಾಗಿರುತ್ತದೆ ಎಂದು ಹೇಳಬಹುದು.

ಆದರೆ, ವೈದ್ಯರು ಈ ರೀತಿ ದೇಶವ್ಯಾಪಿ ಪ್ರತಿಭಟನೆ ಮಾಡುವುದಕ್ಕೆ ದೀರ್ಘಕಾಲಿಕವಾದ ಮತ್ತು ಆಳವಾದ ಕಾರಣಗಳಿವೆ. ಈಗ ಆಗಿರುವ ಮುಷ್ಕರ ಏನೇನೂ ಅಲ್ಲ; ಇದು ಇನ್ನೂ ದೊಡ್ಡದಾಗಿ ಸಿಡಿಯಲು ಕಾದಿದೆ. ಆ ಆಳವಾದ ಕಾರಣವನ್ನು ರಾಜಕೀಯ ಹುನ್ನಾರದ ಕಾರಣ ಹೇಳಿ ಮರೆಮಾಚಬಾರದು. ವೈದ್ಯರು ಮತ್ತು ರೋಗಿಗಳಿಬ್ಬರೂ ಈ ವಿಚಾರದಲ್ಲಿ ಬಲಿಪಶುಗಳೇ. ಜೊತೆಗೆ, ವೈದ್ಯರುಗಳ ಧೋರಣೆಯಲ್ಲಿನ ದ್ವಂದ್ವವು ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವೆಲ್ಲಾ ಸಂಗತಿಗಳ ಕಡೆಗೆ ನೋಡೋಣ.

ಈ ವರ್ಷದ ಮೊದಲ ಆರು ತಿಂಗಳಲ್ಲಿ ಪ.ಬಂಗಾಳದಲ್ಲಿ 100ಕ್ಕೂ ಹೆಚ್ಚು ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ವರದಿಯಾಗಿದೆಯೆಂದು ಇಂಡಿಯನ್ ಎಕ್ಸ್‍ಪ್ರೆಸ್‍ನ ವರದಿ ಹೇಳುತ್ತದೆ. ಇದಲ್ಲದೇ ಲ್ಯಾನ್ಸೆಟ್ ಎಂಬ ವೈದ್ಯಕೀಯ ಜರ್ನಲ್ ಪ್ರಕಾರ 75% ವೈದ್ಯರು ಒಂದಲ್ಲಾ ಒಂದು ಬಗೆಯ (ದೈಹಿಕ ಅಥವಾ ಮೌಖಿಕ) ದಾಳಿಯನ್ನು ಎದುರಿಸಿರುತ್ತಾರೆ. ಇದನ್ನು ನಾವು ಈ ದೇಶದಲ್ಲಿ ವಿವಿಧ ಶೋಷಿತ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳ ಪ್ರಮಾಣಕ್ಕೆ ಹೋಲಿಸಿ, ಇದು ಅಂತಹ ದೊಡ್ಡ ಸಂಖ್ಯೆಯಲ್ಲ ಎಂದು ಹೇಳಲಾಗದು. ಇತರ ದೌರ್ಜನ್ಯಗಳ ಕುರಿತು ವೈದ್ಯರುಗಳ ಸಂವೇದನಾಹೀನತೆ ಏನೇ ಇರಲಿ, ಎರಡು ಕಾರಣಗಳಿಂದಾಗಿ ಈ ಹೋಲಿಕೆ ಮಾಡಬಾರದು. ಒಂದು, ಯಾವುದೇ ಸಮುದಾಯ ತಾನು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟಾಗ ಇನ್ನೊಂದು ಸಮುದಾಯದ ಉದಾಹರಣೆ ಕೊಟ್ಟು ಅದನ್ನು ಹತ್ತಿಕ್ಕಬಾರದು. ಎರಡು, ವೈದ್ಯರು ಪ್ರತಿನಿತ್ಯ ರೋಗಿಗಳ ದೈಹಿಕ, ಮಾನಸಿಕ ಸ್ಥಿತಿಯನ್ನು ಸರಿ ಮಾಡುವ ಕಾಯಕದಲ್ಲಿರುವವರು. ಅವರು ಭಯದಲ್ಲಿ ಕಾರ್ಯನಿರ್ವಹಿಸುವಂತೆ ಇರಬಾರದು.

ಹಾಗಾಗಿ ವೈದ್ಯರುಗಳ ಮೇಲೆ ನಡೆಯುವ ದೌರ್ಜನ್ಯ ಅತ್ಯಂತ ಖಂಡನೀಯವಷ್ಟೇ ಅಲ್ಲ; ಅದು ಅಂತಿಮವಾಗಿ ರೋಗಿಗಳಿಗೇ ಮಾರಕ. ಸಮಾಜದ ಆರೋಗ್ಯದ ದೃಷ್ಟಿಯಿಂದ ಇದನ್ನು ಖಂಡಿಸುವಲ್ಲಿ ಎಲ್ಲರೂ ವೈದ್ಯರ ಜೊತೆ ಕೈ ಜೋಡಿಸಬೇಕು. ವೈದ್ಯರಿಂದ ತಪ್ಪಾಗಿದೆಯೇ ಇಲ್ಲವೇ ಎಂಬುದನ್ನು ಆಸ್ಪತ್ರೆಯೊಂದರಲ್ಲಿ ರೋಗಿಗೆ ಸಂಬಂಧಪಟ್ಟವರು ತಾವೇ ನಿರ್ಧರಿಸಿ, ಅದಕ್ಕೆ ಶಿಕ್ಷೆಯನ್ನೂ ಸ್ಥಳದಲ್ಲೇ ಜಾರಿ ಮಾಡುವುದಾದರೆ ಅದೂ ಸಹಾ ಮಾಬ್ ಲಿಂಚಿಂಗ್‍ನಂತಹುದೇ ಮನಸ್ಥಿತಿ. ತಪ್ಪು ಸರಿಯನ್ನು ತಮಗಿಷ್ಟ ಬಂದ ಹಾಗೆ ಗುಂಪೊಂದು ತೀರ್ಮಾನ ಮಾಡಲಾಗದು, ಮಾಡಬಾರದು. ಈ ವಿಚಾರದಲ್ಲಿ ಬೇಷರತ್ತಾದ ಬೆಂಬಲವನ್ನು ವೈದ್ಯ ಸಮುದಾಯಕ್ಕೆ ಎಲ್ಲರೂ ನೀಡಬೇಕು.
ಸಮಸ್ಯೆ ಇರುವುದು ಏನೆಂದರೆ, ಸದರಿ ‘ವೈದ್ಯರ ಮೇಲಿನ ದಾಳಿ’ಯನ್ನು ತಡೆಗಟ್ಟಲು ವೈದ್ಯರು ಕೇಳುತ್ತಿರುವುದು, ‘ಕಠಿಣ ಕಾನೂನು ಮತ್ತು ಭದ್ರತೆಯನ್ನು’. ಖಂಡಿತವಾಗಿ ಇಂತಹ ದಾಳಿಯನ್ನು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಕಠಿಣ ಕಾನೂನು ಬೇಕು ಮತ್ತು ಭದ್ರತೆಯನ್ನೂ ಹೆಚ್ಚಿಸಬೇಕು. ಆದರೆ, ಇದು ದಾಳಿಯನ್ನು ಕಡಿಮೆ ಮಾಡುತ್ತದಾ? ಯೂಟ್ಯೂಬರ್ ಧ್ರುವ್ ರಾಠಿ ತನ್ನ ವಿಡಿಯೋದಲ್ಲಿ ಹೇಳಿರುವಂತೆ, ಆಸ್ಟ್ರೇಲಿಯಾದಲ್ಲಿ ಇಂತಹ ಕಾನೂನು ಬಂದ ಮೇಲೆ ದಾಳಿಗಳ ಸಂಖ್ಯೆ ಹೆಚ್ಚಾಗಿದೆ! ಏಕೆಂದರೆ, ಆವೇಶದಲ್ಲಿ ಯುಕ್ತಾಯುಕ್ತ ವಿವೇಚನೆ ಇಲ್ಲದೇ ಮಾಡುತ್ತಿರುವ ದಾಳಿಯನ್ನು ಕಾನೂನು ತಡೆಯುವುದು ಅಸಾಧ್ಯ. ಕರ್ನಾಟಕದಲ್ಲೇ ‘2009ರ ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿ ಮೇಲಿನ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕಾಯ್ದೆ’ ಅಸ್ತಿತ್ವದಲ್ಲಿದೆ. ಈ ಕಾಯ್ದೆಯನ್ನು ಪ್ರಚುರಪಡಿಸುವ ಬೋರ್ಡುಗಳು ಬಹುತೇಕ ಆಸ್ಪತ್ರೆಗಳಲ್ಲಿವೆ. ಅದರ ನಂತರ ವೈದ್ಯರುಗಳ ಮೇಲೆ ದಾಳಿಗಳು ಹೆಚ್ಚಾದವೋ, ಕಡಿಮೆಯಾದವೋ?

ಅಂತಹ ಆವೇಶ ಉಂಟಾದಾಗಲೂ, ತಮ್ಮ ಪ್ರೀತಿಪಾತ್ರರಾದ ಸಾವಿಗೆ ಎದುರಿಗಿರುವ ವೈದ್ಯರು ಕಾರಣರಲ್ಲ ಎಂದು ರೋಗಿಗಳ ಕಡೆಯವರು ಏಕೆ ಭಾವಿಸುತ್ತಿಲ್ಲ? ಇದನ್ನು ವೈದ್ಯರು ವ್ಯಕ್ತಿಗತವಾಗಿಯಾಗಲೀ, ಸಾಮೂಹಿಕವಾಗಲೀ ಯೋಚಿಸುತ್ತಲೇ ಇಲ್ಲ. 75 ವರ್ಷದ ವೃದ್ಧ ರೋಗಿ ಸತ್ತಾಗ, ಕೊಲ್ಕೊತ್ತಾದ ಮೆಡಿಕಲ್ ಕಾಲೇಜಿನ ಯುವವೈದ್ಯರ ಮೇಲೆ ದಾಳಿ ಮಾಡಲಾಗಿದೆ ಎಂದು ಪದೇ ಪದೇ ಎಲ್ಲಾ ಕಡೆಯೂ ಹೇಳುತ್ತಿರುವ ವೈದ್ಯ ವಕ್ತಾರರ ಸಂವೇದನಾಶೂನ್ಯತೆಯೇ ಅದಕ್ಕೆ ಸಾಕ್ಷಿಯಾಗಿದೆ. ವೃದ್ಧ ರೋಗಿ ಸಾಯುವುದು ಸಾಮಾನ್ಯ; ಬಾಳಿ ಬದುಕಬೇಕಾದ, ಅದರಲ್ಲೂ ಸಮಾಜದಲ್ಲಿ ಗಣ್ಯಮಾನ್ಯರಾಗಿ ಮೆರೆಯಬೇಕಾದ ಯುವ ವೈದ್ಯರ ಮೇಲೆ ದಾಳಿ ಮಾಡುವುದು ಸರಿಯಲ್ಲ ಎನ್ನುವುದು ಅದರ ಹಿಂದಿನ ಧೋರಣೆ.

ವೈದ್ಯ ಕುಲದಿಂದ ಇಂತಹ ಧೋರಣೆ ಹಲವು ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಅದೊಂದು ರೀತಿಯ ಯಾಜಮಾನ್ಯದ, ಬ್ರಾಹ್ಮಣೀಯ ಧೋರಣೆಯೇ ಆಗಿದೆ. ಹಾಗಾಗಿಯೇ ಮೂರು ಮುಖ್ಯ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ. ಗೋರಖ್‍ಪುರದ ಸರ್ಕಾರೀ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಚಿಕ್ಕಮಕ್ಕಳ ಸರಣಿ ಸಾವು ಸಂಭವಿಸಿದಾಗ, ಸರ್ಕಾರವು ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಇದರ ಬಗ್ಗೆ ಎಚ್ಚರಿಸಿದ್ದ, ತನ್ನ ವ್ಯಕ್ತಿಗತ ಪ್ರಯತ್ನದಿಂದ ಮಕ್ಕಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಡಾ.ಕಫೀಲ್ ಖಾನ್‍ರ ಮೇಲೆ ಯೋಗಿ ಆದಿತ್ಯನಾಥ್ ಸರ್ಕಾರದ ವ್ಯವಸ್ಥಿತ ದಾಳಿ ನಡೆಯಿತು. ಆಗ ವೈದ್ಯಕುಲ ಏಕೆ ಅವರ ಪರವಾಗಿ ದನಿಯೆತ್ತಲಿಲ್ಲ? ಮುಂಬೈನ ಆಸ್ಪತ್ರೆಯಲ್ಲಿ ಭಿಲ್ ಸಮುದಾಯದ ಮೊದಲ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡರು. (ಈ ಭಿಲ್ ಸಮುದಾಯ ಬ್ರಿಟಿಷರ ವಿರುದ್ಧ ವೀರೋಚಿತ ಸಂಗ್ರಾಮ ನಡೆಸಿದ ಆದಿವಾಸಿ ಸಮುದಾಯಗಳಲ್ಲೊಂದು) ಆಗ ಆಕೆಯ ಪರವಾಗಿ ವ್ಯಾಪಕವಾಗಿ ವೈದ್ಯ ಸಮುದಾಯ ಪ್ರಶ್ನೆ ಮಾಡಲಿಲ್ಲವೇಕೆ? ಮೂರನೆಯದಾಗಿ, ಬಿಜೆಪಿಯ ಸಂಸದ ಅನಂತಕುಮಾರ್ ಹೆಗಡೆ ತನ್ನದೇ ಕ್ಷೇತ್ರ ವ್ಯಾಪ್ತಿಯಲ್ಲಿ ವೈದ್ಯರೊಬ್ಬರನ್ನು ಓಡಾಡಿಸಿಕೊಂಡು ಹೊಡೆದದ್ದು ವಿಡಿಯೋ ಸಹಾ ಎಲ್ಲೆಡೆ ಹರಿದಾಡಿದಾಗಲೂ ವೈದ್ಯರು ಏಕೆ ಪ್ರಶ್ನೆ ಮಾಡಲಿಲ್ಲ?

ವೈದ್ಯರಲ್ಲಿ ಹೆಚ್ಚಿನವರು ಮೇಲ್ಜಾತಿಯವರಿರಬಹುದಾದರೂ, ಎಲ್ಲಾ ಸಮುದಾಯಗಳಿಗೆ ಸೇರಿದವರು ಇರುವುದೂ ವಾಸ್ತವ. ಆದರೆ, ಇಡೀ ವೈದ್ಯ ಸಮುದಾಯವು ತಾನು ಮಿಕ್ಕ ‘ನರಮನುಷ್ಯ’ರಿಗಿಂತ ಮೇಲಿನದ್ದು ಎಂದುಕೊಳ್ಳುವುದಂತೂ ನಿಜ. ಹಾಗಾಗಿ ‘ನರಮನುಷ್ಯರಿಗಿಂತ ಮೇಲಿರುವ’ ಅಧಿಕಾರಸ್ಥರು, ಬಲಾಢ್ಯ ಪಕ್ಷಗಳ ಜನ, ಬಲಾಢ್ಯ ಜಾತಿ-ಧರ್ಮಗಳ ಜನರ ಪರವಾಗಿ ಮಾತ್ರ ಅದು ನಿಲ್ಲುತ್ತದಾ? ಕೊಳೆ ಬಟ್ಟೆ ಹಾಕಿಕೊಂಡು ಬರುವ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಸಮಾನ ಹಕ್ಕುಗಳಿಲ್ಲ ಎಂದು ಭಾವಿಸುತ್ತದಾ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ.

ವೈದ್ಯರ ಕುರಿತು ರೋಗಿಗಳಿಗೆ ವಿಪರೀತ ನಿರೀಕ್ಷೆಗಳಿರುವುದೊಂದು ದೊಡ್ಡ ಸಮಸ್ಯೆ. ವೈದ್ಯರೂ ಮನುಷ್ಯರೇ. ಒಂದು ವಿಶಿಷ್ಟ ವೃತ್ತಿಯಲ್ಲಿರಬಹುದಾದರೂ, ಅವರು ಅತಿಮಾನುಷರೇನೂ ಅಲ್ಲ. ಇದನ್ನು ರೋಗಿಗಳಿಗೆ ಅರ್ಥ ಮಾಡಿಸಬೇಕೆನ್ನುವುದು ಎಷ್ಟು ನಿಜವೋ, ವೈದ್ಯರುಗಳಿಗೂ ಅರ್ಥ ಪಡಿಸಬೇಕು. ತಾವು ದೇವಲೋಕದಿಂದ ಇಳಿದುಬಂದಿರುವ ರೀತಿ ನಡೆದುಕೊಳ್ಳದೇ, ಗ್ರಾಹಕರ ಜೊತೆಗೆ ವ್ಯಾಪಾರಿಗಳು ನಡೆದುಕೊಳ್ಳುವಷ್ಟು ವಿನಯದಿಂದಾದರೂ ಇರಬೇಕಲ್ಲವೇ? ವಿನಾಯಿತಿ ಕೇಳಬೇಕಾದರೆ ನಮ್ಮದೂ ಒಂದು ವ್ಯಾಪಾರ ಅಷ್ಟೇ ಎಂದು ಹೇಳುವ ವೈದ್ಯರುಗಳು, ಮಿಕ್ಕಂತೆ ಬೇರಾವ ವ್ಯಾಪಾರಿಗೂ ಇಲ್ಲದ ಗೌರವವನ್ನಂತೂ ಬಯಸುತ್ತಾರೆ. ಹಾಗಿದ್ದ ಮೇಲೆ ಅಷ್ಟೇ ಪ್ರಮಾಣದ ಜವಾಬ್ದಾರಿಯನ್ನೂ ತೋರಬೇಕಾಗುತ್ತದೆ.

ವೈದ್ಯರುಗಳು ಹಲವು ಬಗೆಯ ಒತ್ತಡಗಳನ್ನು ಅನುಭವಿಸುತ್ತಾರೆ. ಕೆಲಸದ ಒತ್ತಡ, ಕುಟುಂಬಕ್ಕೆ ಸಮಯ ಕೊಡಲಾಗದ ಒತ್ತಡ, ಕ್ಲಿಷ್ಟಕರ ಸನ್ನಿವೇಶಗಳನ್ನು ಬಗೆಹರಿಸಬೇಕಾದ ಒತ್ತಡ ಇತ್ಯಾದಿ ಇತ್ಯಾದಿ. ಹಾಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯ ವೈದ್ಯರು ತಯಾರಾಗಬೇಕು ಎಂಬ ಮಾತಿದೆ. ಆದರೆ, ಈಗಿರುವ ವೈದ್ಯರು ಇನ್ನೂ ಹೆಚ್ಚಿನ ವೈದ್ಯರು ತಯಾರಾಗುವುದರ ಬಗ್ಗೆ ಸದಭಿಪ್ರಾಯ ಹೊಂದಿಲ್ಲ. ಇದು ತಮಗೇ ಹೆಚ್ಚಿನ ಗ್ರಾಹಕರು ಸಿಗಲಿ ಎಂಬ ವ್ಯಾಪಾರಿ ಬುದ್ಧಿಯಲ್ಲದೇ ಬೇರೇನೂ ಅಲ್ಲ.

ಇದರ ಜೊತೆಗೆ ಬ್ರಾಂಡ್ ಬಿಲ್ಡಿಂಗ್ ದಿನೇ ದಿನೇ ಹೆಚ್ಚಾಗುತ್ತಿದೆ. ನಂಬರ್ 1 ಡಾಕ್ಟರ್, ನಂಬರ್ 2 ಡಾಕ್ಟರ್ ಭ್ರಮೆಯನ್ನು ಬಿತ್ತುವಲ್ಲಿ ವೈದ್ಯಕೀಯ ವ್ಯವಸ್ಥೆಯ ಪಾತ್ರ ಬಹಳ ಇದೆ. ಇದೆಷ್ಟು ಅರ್ಥಹೀನ ಎಂದು ಹೇಳುವ ಬದಲು, ತಾವೂ ಟಾಪ್‍ಟೆನ್‍ನಲ್ಲಿ ಒಬ್ಬರಾಗಬೇಕೆಂಬ ತಹತಹವು ಇಂತಹ ಧೋರಣೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ.

ಇಂತಹ ಗಂಭೀರ ಪ್ರಶ್ನೆಗಳನ್ನು ಹಾಕಿಕೊಳ್ಳದ ವೈದ್ಯ ಸಮುದಾಯ ಒಂದು ರೀತಿಯ ‘ವಿಕ್ಟಿಮ್‍ಹುಡ್’ನಿಂದ ನರಳುತ್ತಿದೆ. ತಮಗೆ ಎಲ್ಲಿಲ್ಲದ ಅನ್ಯಾಯ ಆಗುತ್ತಿದೆ. ತಮ್ಮಿಂದ ಚಿಕಿತ್ಸೆ ಪಡೆದ ರೋಗಿಗಳೂ ತಮ್ಮ ಸಹಾಯಕ್ಕೆ ಬರುವುದಿಲ್ಲ. ಇದೊಂದು ಕೃತಘ್ನ ಸಮಾಜ. ಇನ್ನು ಮುಂದೆ ನಾವೂ, ನಮ್ಮ ಕುಟುಂಬಕ್ಕೆ, ವ್ಯಕ್ತಿಗತ ಸಂತೋಷಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂಬ ಹಳಹಳ ಹೆಚ್ಚಾಗುತ್ತಿದೆ. ಎಲ್ಲರೂ ತಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಭಾವನೆ ಹಲವರಲ್ಲಿದೆ. ಇದೊಂದು ಥರಾ ಪ್ರಿವಿಲೆಜ್ಡ್ ಬ್ರಾಹ್ಮಣ ಸಮುದಾಯ ವಿಕ್ಟಿಮ್‍ಹುಡ್‍ನಲ್ಲಿ ಇರುವ ರೀತಿಯದ್ದು. ಅವರ ‘ಗಾಯದ ಮೇಲೆ ಬರೆ’ ಇಟ್ಟಂತೆ ರೋಗಿಗಳ ಸಂಬಂಧಿಕರಿಂದ ದಾಳಿಗಳು ನಡೆಯುತ್ತವೆ. ಆಗ ಅವರಿಗೆ ವಿಪರೀತ ಸಿಟ್ಟು ಮತ್ತು ನೋವು ಉಂಟಾಗಿ, ಆಕ್ರೋಶವಾಗಿ ಹೊರಬೀಳುತ್ತದೆ. ಮೊನ್ನೆ ನಡೆದದ್ದು ಅದೇ.

ಈಗ ಆಗಬೇಕಿರುವುದು ಇಷ್ಟೇ. ಮೊಟ್ಟಮೊದಲಿಗೆ ಮಾಬ್ ಲಿಂಚಿಂಗ್ ಮಾದರಿಯ ವೈದ್ಯರ ಮೇಲಿನ ದಾಳಿಯನ್ನು ಎಲ್ಲರೂ ಖಂಡಿಸಬೇಕು. ವೈದ್ಯ ಸಮುದಾಯದ ಜೊತೆಗೆ ನಿಲ್ಲಬೇಕು. ಆ ನಂತರ ವೈದ್ಯರಿಗೆ ಮೇಲಿನ ಪ್ರಶ್ನೆಗಳನ್ನೂ ಕೇಳಬೇಕು. ಸಮುದಾಯವು ಗಂಭೀರವಾದ ಆತ್ಮಾವಲೋಕನಕ್ಕೆ ಇಳಿಯಬೇಕು. ಇದು ಕೇವಲ ವೈದ್ಯವೃತ್ತಿಯ ವಾಣಿಜ್ಯೀಕರಣ ಮಾತ್ರವಲ್ಲದೇ, ವೈದ್ಯಕೀಯ ಶಿಕ್ಷಣದ ವಾಣಿಜ್ಯೀಕರಣವನ್ನೂ ಪ್ರಶ್ನಿಸುವ ಮಟ್ಟಕ್ಕೆ ಒಟ್ಟಾರೆ ಚರ್ಚೆಯನ್ನು ಒಯ್ಯಬೇಕು. ಅದಿಲ್ಲದೇ ಹೋದರೆ, ವ್ಯಕ್ತಿಗತವಾಗಿ ವೈದ್ಯರನ್ನು ಗುರಿ ಮಾಡುತ್ತಾ ಹೋಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಸಮಾಜದ ಮುಂದಿರುವ ಕರ್ತವ್ಯ.

ಅದೇ ರೀತಿ ವೈದ್ಯರೂ ಸಹಾ ಈ ವಿಕ್ಟಿಮ್‍ಹುಡ್‍ನಿಂದ ಹೊರಬರಬೇಕು. ದಾಳಿಗಳು ನಡೆಯುತ್ತಿರುವುದು ವೈದ್ಯರ ಮೇಲೆ ಮಾತ್ರ ಅಲ್ಲ (ಅದು ವೈದ್ಯರ ಮೇಲೆ ದಾಳಿ ಮಾಡಬಹುದೆಂಬುದಕ್ಕೆ ಸಮರ್ಥನೆಯಲ್ಲ). ಪತ್ರಕರ್ತ ರಿಷಿಕೇಷ್ ಬಹದೂರ್ ದೇಸಾಯಿಯವರು ಹೇಳಿರುವ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ‘ಪಶ್ಚಿಮ ಬಂಗಾಳದಲ್ಲಿ ವೈದ್ಯನನ್ನು ಥಳಿಸಿದ್ದಕ್ಕೆ ದೇಶಾದ್ಯಂತ ಮುಷ್ಕರ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಬಾಯಲ್ಲಿ ಮೂತ್ರ ಮಾಡಿಸಿಕೊಂಡ ಪತ್ರಕರ್ತ ಬಾಯಿ ತೊಳೆದುಕೊಂಡು ವಾಪಸ್ ಕೆಲಸಕ್ಕೆ ಹಾಜರಾಗಿದ್ದಾನೆ. ದೇಶಾದ್ಯಂತ ಅವನ ವೃತ್ತಿ ಬಾಂಧವರು ವೈದ್ಯರ ಮುಷ್ಕರದ ಸುದ್ದಿ ಮಾಡುತ್ತಾ ಓಡಾಡುತ್ತಿದ್ದಾರೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...