ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಮೇಲೆ ತುಮಕೂರು ಸಹಜ ಸ್ಥಿತಿಗೆ ಮರಳಿದೆ. ಸ್ಥಬ್ದವಾಗಿದ್ದ ಜನರು ನಿಟ್ಟುಸಿರು ಬಿಟ್ಟರು. ದೊಡ್ಡದೊಂದು ಸಂಕಷ್ಟದಿಂದ ಬಿಡುಗಡೆಯಾದವರಂತೆ ಜನ ಚಲನೆಗೊಂಡರು. ಬಿಕೋ ಎನ್ನುತ್ತಿದ್ದ ರಸ್ತೆಗಳ ಜನರಿಂದ ತುಂಬಿದವು. ಲೋಕದ ವ್ಯವಹಾರಗಳು ಸಂಚಲನಗೊಂಡವು. ಎಲ್ಲದಕ್ಕೂ ಜೀವ ಬಂದಂತೆ ಭಾಸವಾಯಿತು. ಪ್ರಧಾನಿಯೊಬ್ಬರು ಬಂದು ಹೋಗಿದ್ದು ಬಂದ್ ನಂತೆ ಇತ್ತು. ಹಿಂದಿನ ಹಲವು ಮಂದಿ ಪ್ರಧಾನಿಗಳು ಬಂದುಹೋಗಿದ್ದಾರೆ. ಎಂದೂ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ ಎಂದು ಹಿರಿಯರು ಮಾತನಾಡಿಕೊಂಡರು.
ಮಠದಲ್ಲಿ ಪ್ರಧಾನಿ ಮೋದಿ ವಿಭೂತಿ ತೀಡಿದ್ದರು. ಕೊರಳಿಗೆ ರುದ್ರಾಕ್ಷಿ ಸರಗಳನ್ನು ಹಾಕಿಕೊಂಡಿದ್ದರು. ಭುಜದ ಮೇಲೆ ಕೇಸರಿಶಾಲು ಹೊದ್ದಿದ್ದರು. ಮಕ್ಕಳ ಮುಂದೆ ಹೇಳಬೇಕಾದ್ದನ್ನೇ ಹೇಳದೆ ಬೇರೊಂದು ವಿಷಯವನ್ನು ಹೇಳಿದರು. ಅಲ್ಲಿಂದ ರೈತ ಸಮಾವೇಶಕ್ಕೆ ಬಂದರು. ಹಸಿರು ಶಾಲು ಹೊದಿಸಲಾಯಿತು. ಶಾಲನ್ನು ಹೆಗಲ ಮೇಲೆ ಹೊದ್ದುಕೊಂಡೇ 40 ನಿಮಿಷಗಳು ಭಾಷಣ ಮಾಡಿದರು. ರೈತರಿಗೆ ಡಾ.ಸ್ವಾಮಿನಾಥನ್ ಶಿಫಾರಸ್ಸು ಅನ್ವಯ ರೈತರು ಮಾಡಿದ ವೆಚ್ಚದ ಒಂದೂವರೆಪಟ್ಟು ಹಣವನ್ನು ಕೊಡುತ್ತೇನೆ ಎಂಬ ಒಂದೇ ಒಂದು ಮಾತು ಕೂಡ ಬರಲಿಲ್ಲ ಎಂದು ರೈತ ಮುಖಂಡರು ದೂರಿದರು.
HAL, ಫುಡ್ ಪಾರ್ಕ್ ಕುರಿತು ಪ್ರಧಾನ ಮಾತನಾಡಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿರುವ ಬಗ್ಗೆ ತುಮಕೂರಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರವಾಹ ಪರಿಸ್ಥಿತಿಯಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದ್ದು ಅದರ ಬಗ್ಗೆ ಪ್ರಧಾನಿ ಪ್ರಸ್ತಾಪಿಸಬಹುದು ಎಂಬ ಜನರ ನಿರೀಕ್ಷೆಯೂ ಈಡೇರಿಲ್ಲ. ಕೇವಲ ದಕ್ಷಿಣ ಭಾರತದಲ್ಲಿ ಬೆಳೆಯುವ ಬೆಳೆಗಳನ್ನು ರೈತರಿಗೆ ತಿಳಿಸಲು ಬಂದಿದ್ದರೆ ಎಂದು ತುಮಕೂರಿನ ಜನ ಪ್ರಶ್ನಿಸುತ್ತಿದ್ದಾರೆ.
ಜನರಿಗೆ ಒಂದೇ ಒಂದು ಭರವಸೆಯ ಮಾತುಗಳನ್ನು ಹೇಳಲಿಲ್ಲ. ಮಠಕ್ಕೆ ಬಂದರು. ರಾಜಕೀಯ ಮಾತನಾಡಿದರು. ರೈತರ ಸಮಾವೇಶಕ್ಕೆ ಬಂದರು. ಕೃಷಿ ಸನ್ಮಾನ್ ನೀದಿಯ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಿದರು. ರೈತರ ಆತ್ಮಹತ್ಯೆ, ಸಾಲಮನ್ನಾ ಮೊದಲಾದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ಕೊಡಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡಲು ಬೇಕಾದ ಸಲಕರಣೆ ಕೊಡುವುದಾಗಿ ಹೇಳಿದರು. ತೆಂಗು, ರಬ್ಬರ್, ಅರಿಶಿಣ, ಗುಲಾಬಿ, ದಾಳಿಂಬೆ, ಕಾಫಿ ಹೀಗೆ ಹಲವು ಬೆಳೆಗಳ ಪ್ರಸ್ತಾಪ ಮಾಡಿದರು. ಅವುಗಳಿಗೆ ವೈಜ್ಞಾನಿಕ ಬೆಲೆ ನೀಡುವ ಬಗ್ಗೆ ಹೇಳಲೇ ಇಲ್ಲ. ಇದು ಕೂಡ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಕೃಷಿ ಸನ್ಮಾನ್ ನಿಧಿ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಹಲವು ರೈತರ ಮೊಬೈಲ್ ಗಳಿಗೆ ಮೆಸೇಜ್ ಬಂದಿದ್ದು 2 ಸಾವಿರ ರೂಪಾಯಿ ಬಂದಿದೆ ಎಂದು ಕೆಲವರು ಪೋನ್ ಮಾಡಿ ಹೇಳಿದರು. ಈಗ ಹಣ ಬಂದಿರುವುದು ಮೊದಲ ಬಾರಿ ಎಂದು ನಾಗವಲ್ಲಿಯಿಂದ ರೈತರೊಬ್ಬರು ನಾನುಗೌರಿ.ಕಾಮ್ ಗೆ ದೂರವಾಣಿಯಲ್ಲಿ ತಿಳಿಸಿದರು.


