ಇತ್ತೀಚೆಗಷ್ಟೇ ನಾಗರಪಂಚಮಿ ಮುಗಿಯಿತು. ಕೆಲವು ಕಡೆ ಹಲ್ಲುಕಿತ್ತ ನಾಗನಿಗೆ ಬಲವಂತವಾಗಿ ಹಾಲು ಕುಡಿಸಲಾಯಿತು. ಮತ್ತೆ ಕೆಲವೆಡೆ ಹುತ್ತಕ್ಕೆ ಹಾಲು ಎರೆಯಲಾಯಿತು. ಕರಾವಳಿಯಲ್ಲಂತೂ ನಾಗಬನಗಳಲ್ಲಿ ಜನಜಾತ್ರೆ. ಹಾಲುಕುಡಿದ ನಿಜ ನಾಗನ ಗತಿ ಏನಾಯಿತು ಎಂದು ನಾಗನೇ ಬಲ್ಲ! ಆದರೆ ಪುರೋಹಿತರು ಮಾತ್ರ ದಕ್ಷಿಣೆ, ಪನಿವಾರ, ಫೀಸು ಎಂದು ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಿದರು. ಒಂದೇ ದಿನ ಪೂಜೆಗಳನ್ನು ಮುಗಿಸಲಾಗದೇ ಮರುದಿನವೂ ಮುಂದುವರಿಯಿತು. ಆಯಿತು. ಇದನ್ನು ನಂಬಿಕೆ ಎಂದೇ ಕರೆಯೋಣ. ಈ ಒಂದು ದಿನದ ಪೂಜೆ ಮಾಡಿ, ನಂತರ ಆರಾಮವಾಗಿಬಹುದು ಎಂದುಕೊಂಡಿರಾ? ಇಲ್ಲ! ಹಲವಾರು ರೀತಿಯ ದೋಷಗಳಿಂದ ನಿಮ್ಮನ್ನು ಹೆದರಿಸುತ್ತಾರೆ. ಕೆಲವನ್ನು ಕಳೆದ ಸಂಚಿಕೆಯಲ್ಲಿ ನೋಡಿದ್ದೀರ. ಇನ್ನೂ ಕೆಲವನ್ನು ಈಗ ನೋಡೋಣ.
ನಂಬಿಕೆ ಎಂಬುದು ಖಾಸಗಿ ವಿಷಯ. ಆದರೆ, ಜನರಲ್ಲಿ ನಾಗನ ಕುರಿತು ಭಯಭಕ್ತಿ ಹುಟ್ಟಿಸಲು ಪ್ರಮುಖ ಮಾಧ್ಯಮಗಳಲ್ಲೇ ಎಂತಹ ಅಮೋಘ, ರಮ್ಯ ಕತೆಗಳನ್ನು ಕಟ್ಟಲಾಗಿದೆ ಎಂದು ನೋಡಿ!
“ನಮ್ಮ ಪೃಥ್ವಿಯನ್ನು ಮಹಾಶೇಷನೆಂಬ ಸರ್ಪವು ಧರಿಸಿಕೊಂಡಿರುತ್ತದೆ. ಸರ್ಪನೇ ಮಹಾವಿಷ್ಣುವಿಗೆ ಶಯ್ಯೆಯಾಗಿದ್ದಾನೆ. ಮಹಾವಿಷ್ಣುವು ಶ್ರೀ ರಾಮಚಂದ್ರನಾಗಿ ಅವತಾರವೆತ್ತಿದಾಗ, ಆತನ ಸಹೋದರ ಲಕ್ಷ್ಮಣನಾಗಿ, ಆತನನ್ನು ನೆರಳಿನಂತೆ ಹಿಂಬಾಲಿಸಿ, ಆತನಿಗೆ ಬೆಂಗಾವಲಾಗಿ ನಿಂತವನೂ ಅವನೇ. ಕೃಷ್ಣಾವತಾರದಲ್ಲಿ ಶ್ರೀ ಕೃಷ್ಣನು ಸೆರೆಮನೆಯಲ್ಲಿ ಜನ್ಮತಾಳಿ, ತಂದೆ ವಸುದೇವನಿಂದ ನಂದಗೋಕುಲಕ್ಕೆ ಒಯ್ಯಲ್ಪಡುತ್ತಿದ್ದಾಗ ಸುರಿದ ಮುಸಲ ಧಾರಾವರ್ಷದ ಒಂದು ಹನಿ ಜಲವೂ ಆ ಶಿಶುವಿಗೆ ತಗುಲದಂತೆ ತನ್ನ
ಹೆಡೆಯನ್ನು ಛತ್ರದೋಪಾದಿಯಲ್ಲಿ ಹಿಡಿದು ಉಪಕರಿಸಿದವನೂ ಆತನೇ. ಮಹಾವಿಷ್ಣುವಿಗೆ ಪ್ರಿಯನಾದ ಮಹಾಶೇಷ, ಮಹಾಮಹಿಮನಾದ ಪರಶಿವನಿಗೂ ಪ್ರೀತಿಪಾತ್ರನಾಗಿ ಕಂಠಾಭರಣನಾದ. ಸಮುದ್ರ ಮಥನದಲ್ಲಿ ಉದ್ಭವಿಸಿದ ಹಾಲಾಹಲವೆಂಬ ಭಯಂಕರ ವಿಷವನ್ನು ಪಾನಮಾಡಿ ಶಿವನು ವಿಷಕಂಠನೆನಿಸಿದಾಗ ಆ ಮಹೇಶನ ಕಂಠವನ್ನು ಸುತ್ತಿಕೊಂಡು ಭಯಂಕರವಾದ ಉರಿಯನ್ನು ತಣಿಸಿದ. ಪಾರ್ವತೀ ಪುತ್ರನಾದ ಮಹಾಗಣಪತಿಗೆ ಕಟಿ ಬಂಧವಾಗಿಯೂ ಗಣೇಶನಿಗೆ ಪ್ರಿಯನಾದ. ಪಾರ್ವತೀ ಪರಮೇಶ್ವರರ ಪ್ರಿಯಪುತ್ರ ದೇವ ಸೇನಾನಿ ಸುಬ್ರಹ್ಮಣ್ಯನೊಡನೆ ಸಮೀಕರಿಸಲ್ಪಟ್ಟು ಪೂಜೆಗೊಳ್ಳುತ್ತಲೂ ಬಂದಿದ್ದಾನೆ. ಸಮುದ್ರ ಮಥನಕ್ಕೆ ಕಡಗೋಲಾಗಿದ್ದ ಮಂದರಗಿರಿಗೂ ರಜ್ಜುವಾಗಿ ಮಣಿದವÀನು ತ್ರಿಪುರ ಮಥನ ಕಾಲಕ್ಕೆ ಶಿವನ ಮಹಾ ಧನುಸ್ಸಿಗೂ ಹೆದೆಯಾಗಿ ಸೆಟೆದುನಿಂತು, ಹಗ್ಗವಾಗಿ ದೇವತೆಗಳಿಗೆ ಉಪಕರಿಸಿದನೀತ. ಕುಂಡಲಿನೀ ಎಂಬ ಪ್ರಾಣಾಕಾರ ಜೀವಶಕ್ತಿಯ ದಿವ್ಯ ಸಂಕೇತವೂ ಆತನೇ. ಕೃಷಿಕರಿಗೆ ಆತ ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ಕರುಣಾಳು. ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ಈ ಲೋಕದ ರಜತಮಗಳನ್ನು ಹೀರಿ ವಿಷದ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡು ಭಕ್ತರಿಗೆ ರಕ್ಷಣೆ ನೀಡುವಾತ. ರೈತಾಪಿ ಜನರು ತಮ್ಮಲ್ಲಿರುವ ಧನಕನಕಗಳನ್ನು ಸಂರಕ್ಷಿಸಿಕೊಳ್ಳಲು ಭಧ್ರವಾದ ತಿಜೋರಿಗಳಿಲ್ಲದ ಕಾಲದಲ್ಲಿ ಅವುಗಳನ್ನು ಕುಡಿಕೆಗಳಲ್ಲಿ ತುಂಬಿಸಿ ಭೂಮಿಯಲ್ಲಿ ಹೂತಿಟ್ಟುದನ್ನು ರಕ್ಷಿಸುವ ನಿಧಿಸಂರಕ್ಷಕನೀತ.”
ಬ್ಯಾಂಕಿಂಗ್‍ನಲ್ಲೂ ನಾಗ ಪರಿಣಿತ. ಆತ ಪರಿಣಿತ ವೈದ್ಯ! ಇನ್ನೊಂದು ವಿಶೇಷ ಗಮನಿಸಿದಿರಾ? ಇಲ್ಲೆಲ್ಲೂ ನಾಗಿಣಿಯರ ಉಲ್ಲೇಖವಿಲ್ಲ. ಅವರೆಲ್ಲರೂ ಟಿವಿ ಧಾರಾವಾಹಿ, ಸಿನಿಮಾಗಳಲ್ಲಿ ಭಯಹುಟ್ಟಿಸುವ ಏಜೆಂಟರು ಮಾತ್ರ.
ನಗಬೇಡಿ! ಯಾವ ಸ್ಯಾಟಲೈಟಿನಲ್ಲೂ ಭೂಮಿಯನ್ನು ಆಧರಿಸಿದ ಮಹಾಶೇಷನ ಫೋಟೋ ಬಂದಿಲ್ಲದಿದ್ದರೆ ಏನಾಯಿತು? ಈ ನಾಗವಂಶದ ಹಿನ್ನೆಲೆಯೇನೆಂದು ಗೊತ್ತೆ! ಬಹಳ ಕುತೂಹಲಕಾರಿಯೂ, ರಂಜಕವೂ ಆಗಿರುವುದರಿಂದ ಪ್ರಸಿದ್ಧ ಮಾಧ್ಯಮಗಳಲ್ಲೇ ಬಂದ ಕೆಲವು ತುಣುಕುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
“ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ 52 ಮಂದಿ ಸರ್ಪಶ್ರೇಷ್ಠರೂ, ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪ ಇವು ಸರ್ಪಗಳ ಮುಖ್ಯ ಲಕ್ಷಣಗಳು. ನಂಬಿ ಪೂಜಿಸಿದವರಿಗೆ ಅವು ತಾರಕ ಶಕ್ತಿಗಳು – ನಂಬದೆ ಹಾನಿಯುಂಟು ಮಾಡಿದವರಿಗೆ ಮಾರಕ ಶಕ್ತಿಗಳಾಗಿ ಪರಿಣಮಿಸುತ್ತವೆ. ಅದಕ್ಕಾಗಿಯೇ ಹಾವಿನ ದ್ವೇಷ ಹನ್ನೆರಡು ವರುಷ ಎಂಬ ನಾಣ್ಣುಡಿ ಪ್ರಚಲಿತವಾಗಿದೆ.” ವಿಜ್ಞಾನಕ್ಕೂ ಗೊತ್ತಿಲ್ಲದ ಆವಿಷ್ಕಾರಗಳನ್ನು ಈ ಜೋಯಿಸರು ಮಾಡಿರುವುದು ಗೊತ್ತಾಯಿತೆ?
ನಾಗಗಳ ರತಿಕ್ರೀಡೆ ನೋಡಿದರೆ, ಅದು ನಿಮ್ಮನ್ನೇ ದಿಟ್ಟಿಸಿನೋಡಿದರೆ, ಸತ್ತ ಹಾವನ್ನು ನೋಡಿದರೆ ನಿಮಗೆ ಗ್ರಹಚಾರ ಕಾದಿದೆ. ಜೋಯಿಸರು ಏನು ಹೇಳುತ್ತಾರೆ ನೋಡಿ!
“ಕೇವಲ ಹುಲು ಮಾನವನು ಮೃತಪಟ್ಟಾಗ ಔಧ್ರ್ವದೈಹಿಕ ಕ್ರಿಯಾಕರ್ಮಗಳನ್ನು ನೆರವೇರಿಸುವಂತೆಯೇ ಸರ್ಪ ನಾಶವಾದಾಗಲೂ ಯೋಗ್ಯವಾಗಿ ದೋಷ ಪರಿಹಾರಾತ್ಮಕ ಕ್ರಿಯಾಕರ್ಮಗಳನ್ನು ಮಾಡುವುದು ಮಾನವನ ಕರ್ತವ್ಯವಾಗಿದೆ.”
ವಾಸ್ತವವಾಗಿ ಮೊತ್ತಮೊದಲು ನನಗೆ ಈ ನಾಗನ ಬಗ್ಗೆ ಗೊತ್ತಾದುದು ತೀರಾ ಬಾಲ್ಯದಲ್ಲಿ! ಒಂದು ದಿನ ನನ್ನ ತಂದೆಯವರು ಗದ್ದೆಯಿಂದ ಓಡಿಬಂದರು. ಅವರು ಆತಂಕಗೊಂಡಿದ್ದರು! ನಮಗಿದ್ದ ತೋಟದ ಬದಿಯಲ್ಲಿ ಭಾರೀ ಗಾತ್ರದ ಮುದಿ ಹಾವು ಸತ್ತುಬಿದ್ದಿದೆ ಎಂದು ಸಾರಿದವರೇ ಅದಕ್ಕೀಗ ಅಂತ್ಯಸಂಸ್ಕಾರ ಆಗಬೇಕೆಂದೂ ಖರ್ಚಿಗೆ ಏನು ಮಾಡುವುದೆಂದು ಚಿಂತಾಕ್ರಾಂತರಾದರು. ಇದು ನಡೆದು ನಾಲ್ಕು ದಶಕಗಳೇ ಕಳೆದಿವೆ. ವಿದ್ಯಾವಂತರಾದ ನನ್ನ ತಂದೆಯವರಲ್ಲೇ ಇಷ್ಟೊಂದು ಭಯಹುಟ್ಟಿಸಿದ ಈ ಸರ್ಪವು ಅವಿದ್ಯಾವಂತ ಹಳ್ಳಿಗರ ತಲೆಯಲ್ಲಿ ಶತಮಾನಗಳಿಂದ ಹೊಕ್ಕುಕುಳಿತು ಹುಟ್ಟಿಸಿರುವ ಭಯ ಹೇಗಿದ್ದೀತು ಎಂದು ಊಹಿಸಿ. ಈ ಸರ್ಪ ಸಂಸ್ಕಾರದ ಬಗ್ಗೆಯೇ ಮುಂದೆ ನೋಡೋಣ.
– ನಿಖಿಲ್ ಕೋಲ್ಪೆ


