ಜಿಗ್ನೇಶ್ ಮೆವಾನಿ, ಹಿಂದುತ್ವದ ಪ್ರಯೋಗಶಾಲೆಯಂತಿರುವ ಗುಜರಾತ್‍ನ ರಾಜಕೀಯ ಅವಕಾಶದಲ್ಲಿ ಪರ್ಯಾಯ ಭರವಸೆಯಾಗಿ ರೂಪುಗೊಂಡವರು. ದಲಿತರ ದುಮ್ಮಾನಗಳನ್ನು ಹೊಸ ನುಡಿಗಟ್ಟಿನಲ್ಲಿ ಮಂಡಿಸುವ ಅವರು ಕೋಮುವಾದಿ ರಾಜಕಾರಣ ಮತ್ತು ಮೋದಿಯ ಸಾಮ್ರಾಜ್ಯಶಾಹಿ ಆರ್ಥಿಕ ನೀತಿಗಳನ್ನು ಪ್ರಖರವಾಗಿ ಖಂಡಿಸುತ್ತಾರೆ. ಸಂವಿಧಾನ ಉಳಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಜಿಗ್ನೇಶ್ ಜೊತೆ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತು ಡಾ.ಎ.ಎಸ್.ಪ್ರಭಾಕರ್ ನಡೆಸಿದ ಸಂವಾದದ ಒಂದು ತುಣುಕು ಇಲ್ಲಿದೆ.
ಪತ್ರಿಕೆ: ನೀವು ಕರ್ನಾಟಕದಲ್ಲಿ ರಾಜಕೀಯ ಪ್ರಚರ ಮಾಡಲು ತೊಡಗಿಸಿಕೊಂಡಿದ್ದೀರಿ. ಇದರ ಹಿಂದಿನ ಉದ್ದೇಶ, ಪ್ರೇರಣೆ ಏನು? ಹೆಚ್ಚಿನ ಮಹತ್ವ?
ಜಿಗ್ನೇಶ್: ಉದ್ದೇಶ ಸ್ಪಷ್ಟವಾಗಿ, ಸರಳವಾಗಿದೆ. ಸಂವಿಧಾನ ವಿರೋಧಿ ಶಕ್ತಿಯಾದ ಬಿಜೆಪಿಯನ್ನು ಸೋಲಿಸುವುದೇ ಮುಖ್ಯ ಉದ್ದೇಶ. ನನ್ನ ಪ್ರಯತ್ನ ಕರ್ನಾಟಕಕ್ಕೆ ಮಾತ್ರ ಸೀಮಿತವಾದುದಲ್ಲ; ಎಲ್ಲೆಲ್ಲಿ ಚುನಾವಣೆಗಳಿವೆಯೋ, ಎಲ್ಲೆಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಫ್ಯಾಸಿವಾದಿ ದುಷ್ಕøತ್ಯಗಳ ವಿರುದ್ಧ ಹೋರಾಟ ನಡೆಯುತ್ತದೆಯೋ ಅಲ್ಲೆಲ್ಲಾ ಹೋಗುತ್ತೇನೆ. ಬಿಜೆಪಿ ಒಂದು ಸಂಪೂರ್ಣ ಫ್ಯಾಸಿಸ್ಟ್ ಶಕ್ತಿ, ಆದ್ದರಿಂದ ಅದು ಇತಿಹಾಸದ ಕಸದತೊಟ್ಟಿ ಸೇರಬೇಕಿದೆ. ಈ ಕೆಲಸ ಎಷ್ಟು ಬೇಗ ಆಗುತ್ತದೋ ಅಷ್ಟು ಈ ದೇಶಕ್ಕೆ ಒಳ್ಳೆಯದು.
ನನಗೆ ಕರ್ನಾಟಕದ ಸಿವಿಲ್ ಸೊಸೈಟಿಯ ಜೊತೆ, ಸಾಮಾಜಿಕ ಕಾರ್ಯಕರ್ತರ ಜೊತೆ ಉತ್ತಮ ಒಡನಾಟವಿದೆ. ಮುಖ್ಯವಾಗಿ ಗೌರಿ ಲಂಕೇಶ್ ಅವರೊಂದಿಗೆ ಹಲವಾರು ಹೋರಾಟಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಹೀಗಾಗಿ
ಕರ್ನಾಟಕದ ನಾಗರಿಕ ಸಮಾಜದ ಭಾಗವಾಗಿದ್ದೇನೆ ಎಂದೇ ನನ್ನ ಭಾವನೆ.
ಪತ್ರಿಕೆ: ಗುಜರಾತ್‍ನ ರಾಜಕೀಯ ಪರಿಸ್ಥಿತಿಗೂ ಕರ್ನಾಟಕದ ರಾಜಕೀಯ ಪರಿಸ್ಥಿತಿಗೂ ಹೋಲಿಸಿ ನೋಡಿದರೆ ನಿಮಗೆ ಏನನ್ನಿಸುತ್ತದೆ?
ಜಿಗ್ನೇಶ್: ಗುಜರಾತನ್ನು ಒಂದು ಪ್ರಯೋಗಶಾಲೆಯ ರೀತಿಯಲ್ಲಿ ಬಳಸಲಾಗಿದೆ. ಅಲ್ಲಿ ಅತ್ಯಂತ ದಾರುಣವಾದ ಗಲಭೆಗಳನ್ನು, ಎನ್‍ಕೌಂಟರ್‍ಗಳನ್ನು ನಡೆಸಲಾಗಿದೆ.
ಕರ್ನಾಟಕದಲ್ಲಿ ನಾಗರಿಕ ಸಮಾಜ ಬಹಳ ಕ್ರಿಯಾಶೀಲವಾಗಿದೆ, ವೈಬ್ರೆಂಟ್ ಆಗಿದೆ. ಹೆಚ್ಚು ಒಳಗೊಳ್ಳುವಿಕೆಯ ಗುಣ ಹೊಂದಿದೆ, ತಳ ಸಮುದಾಯಗಳ ನಡುವೆ ದುಡಿಯುತ್ತಿರುವ ಅನೇಕ ಸಂಘಸಂಸ್ಥೆಗಳಿವೆ. ವಿಶಾಲ ದೃಷ್ಟಿಕೋನದ ಈ ವಾತಾವರಣದಲ್ಲಿ ಕೆಲಸ ಮಾಡಲು ಹೆಮ್ಮೆ ಅನಿಸುತ್ತದೆ.
ಪತ್ರಿಕೆ: ಗುಜರಾತ್‍ನ ಸಿವಿಲ್ ಸೊಸೈಟಿ ಸ್ಪಂದನೆ ಹೇಗಿರುತ್ತೆ?
ಜಿಗ್ನೇಶ್: ನಿರ್ದಿಷ್ಟವಾಗಿ ಜಾತಿ ಶೋಷಣೆಯ ವಿಚಾರದಲ್ಲಿ ಕರ್ನಾಟಕದ ನಾಗರಿಕ ಸಮಾಜ ಹೆಚ್ಚು ಸಂವೇದನಾಶೀಲವಾಗಿದೆ, ಅರಿವು ಹೆಚ್ಚು ವಿಸ್ತಾರವಾಗಿದೆ ಅನಿಸುತ್ತೆ. ಆದರೆ ಗುಜರಾತ್‍ನ ಊನಾ ಘಟನೆಯ ನಂತರದ ಚಳವಳಿಯಲ್ಲೂ ಕೂಡ ಬಹುತೇಕ ದಲಿತೇತರ ಕಾರ್ಯಕರ್ತರು ಜಾತಿ ದೌರ್ಜನ್ಯದ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಲಿಲ್ಲ. ಊನಾ ಚಳವಳಿ ಇಡೀ ದೇಶದ, ಪ್ರಪಂಚದ ಗಮನ ಸೆಳೆದರೂ ಕೂಡ ಆ ಚಳವಳಿಯಲ್ಲಿ ದಲಿತ ಸಮುದಾಯ ಮತ್ತು ದಲಿತ ಕಾರ್ಯಕರ್ತರು ಮಾತ್ರವೇ ತೊಡಗಿಸಿಕೊಂಡಿದ್ದರು. ಜಾತಿವಿನಾಶದ ಅಜೆಂಡಾದ ಮೇಲೆ ಅಥವ ದಲಿತರ ಸಬಲೀಕರಣದ ನಿಟ್ಟಿನಲ್ಲಿ ಇತರರು ತೊಡಗಿಸಿಕೊಂಡಿಲ್ಲ. ನಾಮಕಾವಸ್ತೆ ಭಾಗವಹಿಸುವಿಕೆ ಕೂಡ ಇಲ್ಲ ಎಂಬುದು ಅತ್ಯಂತ ನೋವಿನ ಸಂಗತಿ.

ಪತ್ರಿಕೆ: ನಿಮ್ಮ ಪ್ರಕಾರ ಕರ್ನಾಟಕದಲ್ಲಿ ಬಹಳ ಮುಖ್ಯವಾದ ಚುನಾವಣಾ ಇಷ್ಯೂಗಳು ಯಾವುವು?
ಜಿಗ್ನೇಶ್: ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ನಿರುದ್ಯೋಗ ಈ ಕಾಲಘಟ್ಟದ ಬಹಳ ಪ್ರಮುಖ ಸಮಸ್ಯೆ. ನರೇಂದ್ರ ಮೋದಿ ಯುವಜನತೆಗೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂತ ಭರವಸೆ ಕೊಟ್ಟಿದ್ದರು. ಇದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇನ್ನೊಂದು ಬಹುಮುಖ್ಯ ಅಂಶ ಕರ್ನಾಟಕದ ಸಂಸ್ಕøತಿಯನ್ನು ಉಳಿಸಿಕೊಳ್ಳುವುದು. ಬಸವಣ್ಣನವರ ಚಳವಳಿ, ನಾರಾಯಣ ಗುರು, ಸೂಫಿ ಸಂತರ ಚಳವಳಿಯ ಕಾಲದಿಂದಲೂ ಕರ್ನಾಟಕ ಸೌಹಾರ್ದ ಪರಂಪರೆಗೆ ಹೆಸರಾಗಿದೆ. ಬಿಜೆಪಿಯ ರಾಜಕೀಯವೇ ಸಮಾಜವನ್ನು ಮತ-ಧರ್ಮಗಳ ಆಧಾರದಲ್ಲಿ ಒಡೆದು ಅಧಿಕಾರ ಹಿಡಿಯುವುದು. ಕರ್ನಾಟಕದ ಸಾಂಸ್ಕøತಿಕ ಪರಂಪರೆಯನ್ನು, ಸಮಾಜದ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದರೆ ಈ ವಿಚ್ಛಿದ್ರ್ರಕಾರಿ ರಾಜಕೀಯ ಶಕ್ತಿಯನ್ನು ಸೋಲಿಸಬೇಕಿದೆ. ಅನ್ನ, ವಸತಿ, ಉದ್ಯೋಗಗಳಂತಹ ಮೂಲಭೂತ ಹಕ್ಕುಗಳನ್ನು ಸಾಧಿಸಲು ಹೋರಾಟ ಕಟ್ಟಬೇಕಿದೆ. ಹಾಗೆಯೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಾರ್ಮಿಕರು ಹಾಗೂ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳ ನಿವಾರಣೆಗಾಗಿ ವಿಶಾಲ ತಳಹದಿಯ ಚಳವಳಿಗಳಾಗಬೇಕು.
ಪತ್ರಿಕೆ: ಕರ್ನಾಟಕದಲ್ಲಿ ಬಿಎಸ್‍ಪಿ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಇದು ಬಿಜೆಪಿಯ ಗೇಮ್‍ಪ್ಲಾನ್ ಎಂದು ರಾಜಕೀಯ ವಲಯದಲ್ಲಿ ದಟ್ಟವಾದ ಅಭಿಪ್ರಾಯ ಕೇಳಿಬರುತ್ತಿದೆ. ನೀವು ಹೇಗೆ ನೋಡ್ತೀರಿ?
ಜಿಗ್ನೇಶ್: ನನ್ನದೂ ಅದೇ ಅಭಿಪ್ರಾಯ. ಒಂದೆರಡು ದಿನಗಳ ಹಿಂದೆ ಮೈಸೂರಿನ ಜೆಡಿಎಸ್ ಮುಖಂಡರೊಬ್ಬರು ‘ಸಿದ್ದರಾಮಯ್ಯನನ್ನು ಸೋಲಿಸಲಿಕ್ಕೆ ನಾವು ಬಿಜೆಪಿ ಜೊತೆ ಕೈಜೋಡಿಸ್ತೇವೆ’ ಅಂತ ಹೇಳಿದ್ದಾಗಿ ಸುದ್ದಿ ಪ್ರಕಟವಾಗಿದೆ. ಹೀಗಾದರೆ ಅದು ವಿನಾಶಕಾರಿಯಾದುದು. ಒಂದು ವೇಳೆ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ಜೆಡಿಎಸ್‍ಅನ್ನೇ ನುಂಗಿ ಹಾಕುತ್ತೆ.
ಪತ್ರಿಕೆ: ಗುಜರಾತ್‍ನಲ್ಲಿ ನಿಮ್ಮ ವಿರುದ್ಧ ಬಿಎಸ್‍ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತಲ್ಲಾ…
ಜಿಗ್ನೇಶ್: ಹೌದು, ಅದೊಂದು ದುರದೃಷ್ಟದ ಸಂಗತಿ. ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಯನ್ನು ವಾಪಸ್ ತೆಗೆದುಕೊಂಡಿತು. ಸಿಪಿಐ-ಎಂಎಲ್ ಪಕ್ಷ ಬೆಂಬಲಿಸಿತ್ತು. ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ನನ್ನ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದರು. ಕಾಂಗ್ರೆಸ್ ಪಕ್ಷ ಕೂಡ ಅಭ್ಯರ್ಥಿ ಹಾಕದೆ ನನಗೆ ಬೆಂಬಲ ಕೊಟ್ಟಿತ್ತು. ಅಂಬೇಡ್ಕರ್‍ವಾದಿ ಸಂಘಟನೆಗಳು, ಪ್ರಗತಿಪರರು, ಕಮ್ಯುನಿಸ್ಟರು, ಗಾಂಧಿವಾದಿಗಳು ನನ್ನ ಪರವಾಗಿ ಪ್ರಚಾರಕ್ಕೆ ಬಂದರು. ಆದರೆ ಬಿಎಸ್‍ಪಿ ನನ್ನ ವಿರುದ್ಧ ನಿಂತಿತು.
ಪತ್ರಿಕೆ: ಬಿಎಸ್ಪಿ ಯಾಕೆ ಹೀಗೆ ಮಾಡಿತು?
ಜಿಗ್ನೇಶ್: (ನಗು) ಕಾಲವೇ ಅದಕ್ಕೆ ಉತ್ತರ ಹೇಳುತ್ತೆ.
ಪತ್ರಿಕೆ: ಬಿಎಸ್‍ಪಿ ಗುಜರಾತ್‍ನಲ್ಲಿ ಹುರಿಗಟ್ಟುತ್ತಿದ್ದ ದಲಿತ ಚಳವಳಿಯ ವಿರುದ್ಧವಾಗಿ ನಿಂತಿತು ಎಂದರ್ಥವೇ?
ಜಿಗ್ನೇಶ್: ಈ ಬಗ್ಗೆ ನಾನು ಕಾಮೆಂಟ್ ಮಾಡೋಲ್ಲ. ಅವರು ಏನನ್ನು ಬೋಧಿಸುತ್ತಾರೋ ಅದನ್ನು ಅವರು ಪಾಲಿಸಲಿ ಎಂದಷ್ಟೇ ಹೇಳಬಹುದು. ಆದರೆ ಒಂದು ಮಾತನ್ನು ಹೇಳಲೇಬೇಕಿದೆ. ಉತ್ತರಪ್ರದೇಶದಲ್ಲಿ ಬಿಎಸ್‍ಪಿ ಮತ್ತು ಸಮಾಜವಾದಿ ಪಕ್ಷಗಳು ಜೊತೆಗೂಡಿ ಬಿಜೆಪಿಯನ್ನು ಎದುರಿಸುವುದಾದರೆ ನಾನು ಬಿಎಸ್‍ಪಿ ವೇದಿಕೆಗಳಿಗೆ ಹೋಗಿ ಅವರ ಪರವಾಗಿ ಪ್ರಚಾರ ಮಾಡಲು ಸಿದ್ಧ. ದೇಶದಲ್ಲಿ ಉತ್ತರಪ್ರದೇಶದ ರಾಜಕಾರಣಕ್ಕೆ ಬಹಳ ಮಹತ್ವ ಇದೆ, ಯಾಕೆಂದರೆ ಅಲ್ಲಿಂದ 80 ಎಂಪಿಗಳು ಆರಿಸಿ ಬರುತ್ತಾರೆ. ಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋಲುವ ಸಾಧ್ಯತೆಯಿದೆ. ಹೀಗಾದರೆ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ತಡೆಯಬಹುದು; ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಬಹುದು.
ಬಿಜೆಪಿಯನ್ನು ಸೋಲಿಸಿದಾಕ್ಷಣ ದೇಶದ ದಲಿತರ, ರೈತರ, ಕಾರ್ಮಿಕರ, ನಿರುದ್ಯೋಗಿಗಳ ಸಮಸ್ಯೆಗಳು ಗುಣಾತ್ಮಕವಾಗಿ ಪರಿಹಾರ ಆಗಿಬಿಡುವುದಿಲ್ಲ. ನಾವು ಪರ್ಯಾಯ ರಾಜಕಾರಣವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇದು ಜನ ಚಳವಳಿಗಳ ಮುಂದಿರುವ ಸುದೀರ್ಘ ಹೋರಾಟದ ಪ್ರಕ್ರಿಯೆ. ಆದರೆ ನಮ್ಮ ಸಂವಿಧಾನದ ಅಸ್ತಿತ್ವಕ್ಕೇ ಸಂಚಕಾರ ಬಂದೊದಗಿರುವ ಈ ಸನ್ನಿವೇಶದಲ್ಲಿ ದೇಶಕ್ಕೆ ತುರ್ತಾಗಿ ಒಂದು ತಾತ್ಕಾಲಿಕ ಪರಿಹಾರದ ಅಗತ್ಯವಿದೆ. ನಮ್ಮ ಸ್ವಾತಂತ್ರ್ಯ ಹಲವಾರು ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದ ಲಭಿಸಿದ್ದು. ಈ ಸಂವಿಧಾನ ವಿರೋಧಿ ಬಿಜೆಪಿಯಿಂದ ನಮ್ಮ ಸ್ವಾತಂತ್ರ್ಯ, ಸಂವಿಧಾನಗಳನ್ನು ರಕ್ಷಿಸಿಕೊಳ್ಳಲೇಬೇಕು.
ಪತ್ರಿಕೆ: ಕಾಂಗ್ರೆಸ್ ಪಕ್ಷದ ಜೊತೆಗೆ ನಿಮ್ಮ ಸಂಬಂಧ ಎಂಥಾದ್ದು?
ಜಿಗ್ನೇಶ್: ಹೇಳಿಕೊಳ್ಳುವಂಥಾ ಸಂಬಂಧ ಏನೂ ಇಲ್ಲ; ನನ್ನ ಕ್ಷೇತ್ರದಲ್ಲಿ ಅವರ ಅಭ್ಯರ್ಥಿಯನ್ನು ವಾಪಸ್ ತೆಗೆದುಕೊಂಡು ನನಗೆ ಬೆಂಬಲ ಘೋಷಿಸಿದರು. ಅದಕ್ಕೆ ಸ್ಪಷ್ಟ ಕಾರಣವೂ ಇತ್ತು. ಇಂಥಾ ಕ್ರಮದಿಂದಾಗಿ ಗುಜರಾತ್‍ನಾದ್ಯಂತ ದಲಿತರ ಮತಗಳು ಕಾಂಗ್ರೆಸ್‍ಗೆ ಬೀಳುತ್ತವೆ ಎಂಬ ಲೆಕ್ಕಾಚಾರವೂ ಇತ್ತು. ಗಮನಿಸಬೇಕಾದ ಸಂಗತಿಯೆಂದರೆ ನನ್ನ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದರು. ಅವರ ಕಾರ್ಯಕರ್ತರನ್ನು ಕ್ಯಾಂಪೇನ್‍ನಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಆದರೆ ನನ್ನನ್ನು ಅವರ ಪ್ರಚಾರಕ್ಕೆ ಬರಬೇಕೆಂದು ಒತ್ತಾಯಿಸಲಿಲ್ಲ. ಹೀಗೆ ನನಗೆ ಬೇಷರತ್ ಬೆಂಬಲ ಘೋಷಿಸಿದ್ದು ಮಾತ್ರ ವಿಶೇಷವಾಗಿತ್ತು.
ಪತ್ರಿಕೆ: ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆ ಬರುತ್ತಿದೆಯೆಂದು ನಿಮ್ಮ ಅಭಿಪ್ರಾಯವೇ?
ಜಿಗ್ನೇಶ್: ರಾಹುಲ್ ಗಾಂಧಿ ಬಗ್ಗೆ ಹೇಳೋದಾದರೆ ಸಾಕಷ್ಟು ಹೊಸತನ ಕಾಣುತ್ತೆ. ಪಕ್ಷದಲ್ಲಿ ಬದಲಾವಣೆ ತರಬೇಕೆಂದು ಅವರು ಪ್ರಯತ್ನ ಮಾಡುತ್ತಿದ್ದಾರೆ. ಬಹಳಷ್ಟು ಯುವಜನರನ್ನು, ಪ್ರತಿಭಾವಂತರನ್ನು ಮುಂದೆ ತರುವ ಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸುಧಾರಣೆ ಮಾಡುವಲ್ಲಿ ಅವರು ಎಷ್ಟು ಯಶಸ್ವಿಯಾಗುತ್ತಾರೆಂಬುದನ್ನು ಈಗಲೇ ಹೇಳಲಾಗದು. ಆದರೆ ಅವರಲ್ಲಿ ಎಲ್ಲರನ್ನೂ ಒಳಗೊಳ್ಳುವ ಗುಣ, ಹೊಸತನಗಳು ನಿಚ್ಚಳವಾಗಿ ಕಾಣುತ್ತಿವೆ.
ಪತ್ರಿಕೆ: ನೀವು ಎಂಎಲ್‍ಎಯಾಗಿ ಈ 5 ತಿಂಗಳ ಅನುಭವವನ್ನು ವಿವರಿಸಬಹುದೆ? ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸಗಳು ನಡೆಯುತ್ತಿವೆಯೆ?
ಜಿಗ್ನೇಶ್: ಚನ್ನಾಗಿಯೇ ನಡೆಯುತ್ತಿವೆ. ಆದರೆ ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನಾನು ಶಾಸಕನಾಗಿದ್ದರೂ ಕೂಡ ಮೂಲಭೂತವಾಗಿ ನಾನೊಬ್ಬ ಸಾಮಾಜಿಕ ಕಾರ್ಯಕರ್ತ. ಎಂಎಲ್‍ಎ ಎಂಬ ಸ್ಥಾನ ಕಾರ್ಯಕರ್ತನಾಗಿರುವ ನನ್ನ ಹೋರಾಟದ ಮೇಲೆ ಎಳ್ಳಷ್ಟೂ ನಕಾರಾತ್ಮಕ ಪರಿಣಾಮ ಬೀರಿಲ್ಲ; ವಾಸ್ತವದಲ್ಲಿ ನಾನು ಶಾಸಕನಾಗಿದ್ದರಿಂದಾಗಿ ನಮ್ಮ ಹೋರಾಟಗಳಿಗೆ ಇನ್ನಷ್ಟು ಕಸುವು ತುಂಬಿದಂತಾಗಿದೆ. ಇನ್ನಷ್ಟು ಹೆಚ್ಚು ಜನರನ್ನು ತಲುಪಲಿಕ್ಕೆ, ಸಂಘಟಿಸಲಿಕ್ಕೆ ಇದರಿಂದ ಸಹಾಯವಾಗಿದೆ.
ಪತ್ರಿಕೆ: ನೀವು ಸಾಮಾಜಿಕ ಕಾರ್ಯಕರ್ತರಾಗಿ ಇಡೀ ದೇಶ ಸುತ್ತುತ್ತಿರುವುದರಿಂದ ಶಾಸಕನಾಗಿ ನಿಮ್ಮ ಜವಾಬ್ದಾರಿ ಕಡೆಗಣಿಸಿದಂತಾಗುತ್ತಿಲ್ಲವೆ?
ಜಿಗ್ನೇಶ್: ಖಂಡಿತಾ ಇಲ್ಲ. ನಾನು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೇನೆ. ನನ್ನ ಗೈರುಹಾಜರಿಯಲ್ಲಿ ನಮ್ಮ ತಂಡ ಕ್ಷೇತ್ರದಲ್ಲಿ ನಿರಂತರ ಕ್ರಿಯಾಶೀಲವಾಗಿರುತ್ತದೆ. ಮೇ 17 ರಿಂದ 24ರವರೆಗೆ ‘ಲೋಕ್ ಸಂಪರ್ಕ್ ಯಾತ್ರಾ’ ನಡೆಸುತ್ತಿದ್ದೇವೆ. ಪ್ರತಿದಿನ 5 ಹಳ್ಳಿಗಳಂತೆ ಸುಮಾರು 40 ಹಳ್ಳಿಗಳಿಗೆ ಭೇಟಿ ನೀಡುತ್ತೇವೆ. ಇಂತಹ ಯಾತ್ರೆಗಳನ್ನು ಪ್ರತಿ 4 ತಿಂಗಳಿಗೊಮ್ಮೆ ಹಮ್ಮಿಕೊಳ್ಳಲಿದ್ದೇವೆ. ಜನರು ಶಾಸಕರನ್ನು ಹುಡುಕಿಕೊಂಡು ಅಲೆಯಬೇಕಾದ ಪರಿಸ್ಥಿತಿ ಬದಲಾಗಿ ಶಾಸಕರೇ ಜನರ ಬಳಿಗೆ ಹೋಗುವಂತಾಗಬೇಕೆಂಬುದು ನಮ್ಮ ಆಶಯ. ಅಲ್ಲಿನ ಸಮಸ್ಯೆಗಳನ್ನು ಅರಿಯಲು, ಪರಿಹರಿಸಲು ಇದರಿಂದ ಬಹಳ ಅನುಕೂಲವಾಗುತ್ತಿದೆ.
ಸದ್ಯದಲ್ಲೇ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಒಂದು ಸಮಾಲೋಚನಾ ಸಭೆ ನಡೆಸಲು ಉದ್ದೇಶಿಸಿದ್ದೇವೆ. ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಶಿಕ್ಷಣ ಮುಂತಾದ ವ್ಯವಸ್ಥೆಯನ್ನು ಉತ್ತಮಪಡಿಸಲು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲಿದ್ದೇವೆ. ಕಳೆದ ತಿಂಗಳು ವಡಗಾಂವ್‍ನಲ್ಲಿ ಫಿಲಂ ಫೆಸ್ಟಿವಲ್ ನಡೆಸಿದೆವು. ಸಾವಿರಾರು ಜನರು ಪಾಲ್ಗೊಂಡಿದ್ದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ಸ್ಥಳೀಯವಾಗಿ ತಯಾರಿಸಿದ ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಹಂಚಿಕೆ ಮಾಡಿದ್ದೇವೆ. ನ್ಯಾಪ್‍ಕಿನ್ ತಯಾರಿಸುವ ಘಟಕಗಳನ್ನು ಕ್ಷೇತ್ರದಲ್ಲಿ ಸ್ಥಾಪಿಸಲು ಯೋಜನೆ ರೂಪಿಸುತ್ತಿದ್ದೇವೆ.
ಪತ್ರಿಕೆ: ಸರ್ಕಾರದಿಂದ ನಿಮಗೆ ಸಹಕಾರ ಸಿಗುತ್ತಿದೆಯೆ?
ಜಿಗ್ನೇಶ್: ಸರ್ಕಾರದ ಜೊತೆಗೆ ನನ್ನ ಹೋರಾಟ ನಿರಂತರ ಇದ್ದದ್ದೇ. ಉದಾಹರಣೆಗೆ ಮೊನ್ನೆ ಏಪ್ರಿಲ್ 14ರಂದು ಒಂದು ಹೋರಾಟ ಕೈಗೆತ್ತಿಕೊಂಡೆವು. ಹಿಂದೆಯೇ ಮಂಜೂರಾಗಿದ್ದ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡಬೇಕೆಂಬ ಹಕ್ಕೊತ್ತಾಯದ ಮೇಲೆ ಹೆದ್ದಾರಿ ಬಂದ್ ಮಾಡಿದೆವು. ಸಾಕಷ್ಟು ಜಟಾಪಟಿಯ ನಂತರ ಸರ್ಕಾರ 250 ಎಕರೆ ಭೂಮಿಯನ್ನು ಹಂಚಿಕೆ ಮಾಡಲೇಬೇಕಾಯ್ತು. ಕಳೆದ 35 ವರ್ಷಗಳಿಂದ ಪೆಂಡಿಂಗ್ ಇದ್ದ ಸಮಸ್ಯೆ ಇದು. ಭೂಮಿಗಾಗಿ ಹೋರಾಟ ನಿರಂತರವಾಗಿ ನಡೆಯಲಿದೆ.
ಪತ್ರಿಕೆ: ದಲಿತರ ಏಳ್ಗೆಗಾಗಿ ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಮೋದಿಯವರ ಕೊಡುಗೆಯೇನು?
ಜಿಗ್ನೇಶ್: ಮೋದಿಯ ಕೊಡುಗೆ ಏನಿದ್ದರೂ ಅದಾನಿ, ಅಂಬಾನಿಗಳ ಏಳ್ಗೆಗಾಗಿ ಮಾತ್ರ. ಅವರ ಅಭಿವೃದ್ಧಿ ಮಾದರಿ ವಿನಾಶಕಾರಿಯಾದುದು. ಇಡೀ ದೇಶವನ್ನು ಹಾಳು ಮಾಡಿ ಕೆಲವು ಕಾರ್ಪೊರೇಟ್‍ಗಳನ್ನು ಉದ್ಧಾರ ಮಾಡುವಂತದ್ದು. ದಲಿತರು ಮೋದಿಯಿಂದ ಏನನ್ನೂ ನಿರೀಕ್ಷೆ ಮಾಡುವಂತಿಲ್ಲ. ಗೋಬೆಲ್ಸ್ ಪದಪುಂಜಗಳ ಅಬ್ಬರದ ಪ್ರಚಾರದಿಂದ ಜನರನ್ನು ಮರುಳು ಮಾಡಿದ್ದೇ ಅವರ ಸಾಧನೆ. ಸುಭಾಷ್ ಘಟಾಡೆ ಅವರು ಹೇಳಿದಂತೆ ‘ಮೋದಿಯ ಬಾಯಲ್ಲಿ ಅಂಬೇಡ್ಕರ್, ಹೃದಯದಲ್ಲಿ ಮನು ಇದ್ದಾರೆ.’
ಪತ್ರಿಕೆ: ದೇಶಾದ್ಯಂತ ಓಡಾಡುತ್ತಿದ್ದೀರಿ? ಜನರ, ಯುವಜನತೆಯ ಮೂಡ್ ಹೇಗಿದೆ?
ಜಿಗ್ನೇಶ್: ಜನರಲ್ಲಿ ಸಾಕಷ್ಟು ಅಸಮಾಧಾನ ಇದೆ. ತೀವ್ರ ಆರ್ಥಿಕ ಶೋಷಣೆಯಿಂದ ಜನ ಜರ್ಜರಿತರಾಗಿದ್ದಾರೆ. ಭವಿಷ್ಯದ ಬಗ್ಗೆ ಒಂದುರೀತಿಯ ಭೀತಿ ಆವರಿಸಿದೆ. ಸರ್ಕಾರದ ಬಗ್ಗೆ ಬಹಳ ಅತೃಪ್ತಿ, ಅಸಹನೆಗಳಿವೆ, ಗೊಂದಲಗಳಿವೆ. ಜನ ಹತಾಶರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬೃಹತ್ತಾದ ಕಾರ್ಮಿಕ ಚಳವಳಿ, ಯುವಜನರ ಚಳವಳಿಗಳು ಪುಟಿದೇಳಬೇಕಾಗಿತ್ತು. ಆದರೆ ಆ ಪ್ರಮಾಣದ ಚಳವಳಿಗಳು ಕಾಣುತ್ತಿಲ್ಲ.
ಪತ್ರಿಕೆ: ದಲಿತ ಚಳವಳಿಯ ವ್ಯಾಕರಣ (ಗ್ರಾಮರ್) ಬದಲಾಗಬೇಕು ಅಂತ ಹೇಳಿದ್ದೀರಿ. ಅದರ ಅರ್ಥವೇನು ವಿವರಿಸುತ್ತೀರಾ?
ಜಿಗ್ನೇಶ್: ಹೌದು, ನಾವು ಸದಾಕಾಲ ‘ಬ್ರಾಹ್ಮಣವಾದಕ್ಕೆ ಧಿಕ್ಕಾರ, ಮನುವಾದಕ್ಕೆ ಧಿಕ್ಕಾರ’ ಅನ್ನೋ ಘೋಷಣೆಗಳಿಗೆ ಮಾತ್ರ ಸೀಮಿತವಾದರಷ್ಟೇ ಸಾಲದು. ನಮ್ಮ ದುಸ್ಥಿತಿಯನ್ನು ಉತ್ತಮಪಡಿಸುವ ಇತರೆ ವಿಚಾರಗಳಿಗೂ ಆದ್ಯತೆ ಕೊಡಬೇಕು. ಉದಾಹರಣೆಗೆ ನನ್ನ ಕ್ಷೇತ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಅಲ್ಲಿ ಕನಿಷ್ಟ ಒಬ್ಬರಾದರೂ ಸ್ತ್ರೀರೋಗ ತಜ್ಞೆ ಇಲ್ಲ. ಮಕ್ಕಳ ವೈದ್ಯರ ಕೊರತೆ ತುಂಬಾ ಇದೆ. ಇಂತಹ ಸಮಸ್ಯೆಗಳ ವಿರುದ್ಧ ನಾವು ಹೋರಾಡಿ ಗೆದ್ದರೆ ಅದರಿಂದ ಯಾರಿಗೆ ಲಾಭ ಹೇಳಿ? ಸಾರ್ವಜನಿಕ ಆರೋಗ್ಯ ಸೇವೆ ಉತ್ತಮಗೊಂಡರೆ ಅದರ ಹೆಚ್ಚಿನ ಅನುಕೂಲ ಬಡವರು, ದಲಿತರಿಗೆ ತಾನೇ? ಬೆಲೆಯೇರಿಕೆ ಸಮಸ್ಯೆ ನೋಡಿ. ಇದರಿಂದ ಲಕ್ಷಾಂತರ ದಲಿತರು ಸೊರಗಿ ಸುಣ್ಣವಾಗುತ್ತಿದ್ದಾರೆ. ಒಂದೆರಡು ದಿನದಲ್ಲಿ ಕಾರ್ಮಿಕ ದಿನ ಬರುತ್ತಿದೆ. ಇಡೀ ಗುಜರಾತ್‍ನಲ್ಲಿ ಕಾರ್ಮಿಕ ದಿನ ಆಚರಣೆ ಮಾಡುವುದು ನಮ್ಮ ಸಂಘಟನೆ ಮಾತ್ರ. ಇದು ಏನನ್ನು ಸೂಚಿಸುತ್ತದೆ. ನಮಗೆ ಸಮಗ್ರ ದೃಷ್ಟಿಕೋನ ಇಲ್ಲ ಅಂತ ಅಲ್ಲವೆ? ಬಹುಪಾಲು ದಲಿತರು ಕಾರ್ಮಿಕರೇ ಅಲ್ಲವೇ? ದಲಿತರ ಏಳ್ಗೆಯೆಂದರೆ ಆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ನಾವು ದನಿಯೆತ್ತಬೇಕಲ್ಲವೆ? ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕಾದರೆ ಸಾರ್ವಜನಿಕ ಶಿಕ್ಷಣವನ್ನು ನಾವು ಸುಧಾರಿಸಬೇಕಲ್ಲವೆ? ಪರಿಸರದ ಸಮಸ್ಯೆ ಮುಂತಾದವು ನಮ್ಮದೇ ಸಮಸ್ಯೆ ಅಂತ ಯಾಕೆ ಅನಿಸುತ್ತಿಲ್ಲ? ಹೀಗೆ ನಮ್ಮ ದೃಷ್ಟಿಕೋನ ವಿಶಾಲಗೊಳ್ಳಬೇಕಿದೆ; ದಲಿತ ಚಳವಳಿಯ ಚೌಕಟ್ಟು ವಿಸ್ತಾರಗೊಳ್ಳಬೇಕಾದ್ದು ತುರ್ತಾಗಿ ಆಗಬೇಕಾದ ಕೆಲಸ.
ಪತ್ರಿಕೆ: ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚಿಸಲು ಅವಕಾಶ ಸಿಕ್ಕರೆ ಅವರಿಗೆ ಯಾವ ಪ್ರಶ್ನೆ ಕೇಳುತ್ತೀರಿ?
ಜಿಗ್ನೇಶ್: ‘ಜನರನ್ನು ಯಾಕೆ ಈ ರೀತಿ ನಂಬಿಸಿ ಯಾಮಾರಿಸ್ತಾ ಇದೀರಿ’ ಅಂತ ಖಂಡಿತಾ ಕೇಳ್ತೀನಿ.
ಪತ್ರಿಕೆ: ಭವಿಷ್ಯದ ರಾಜಕೀಯ ಪಾತ್ರದ ಬಗ್ಗೆ ನಿಮ್ಮ ಕಲ್ಪನೆಯೇನು?
ಜಿಗ್ನೇಶ್: ನಮ್ಮ ಪೀಳಿಗೆಯ ಯುವಜನರಲ್ಲಿ ಜಾಗೃತಿ ಮೂಡಿಸುವುದು, ನೈಜ ಸಮಸ್ಯೆಗಳ ವಿರುದ್ಧ ಹೋರಾಡುವ ಚೈತನ್ಯವನ್ನು ಬೆಳೆಸುವುದು.


