Homeರಾಜಕೀಯಹಾಸನ: ಇಲ್ಲಿ ಜೆಡಿಎಸ್ ಭದ್ರ

ಹಾಸನ: ಇಲ್ಲಿ ಜೆಡಿಎಸ್ ಭದ್ರ

- Advertisement -
  • ಆಕಾಶ್ ಕೆರೆಕಟ್ಟೆ |
- Advertisement -

ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಹಾಸನದಲ್ಲಿ ಕಾವು ಹೆಚ್ಚುತ್ತಿವೆ. ಏಳು ಕ್ಷೇತ್ರಗಳ ಪೈಕಿ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ನೇರ ಎದುರಾಳಿಗಳಾಗಿರುವುದು ನಾಲ್ಕು ಕ್ಷೇತ್ರಗಳಲ್ಲಿ. ಇನ್ನು ಮೂರು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ತೀವ್ರ ಪೈಪೋಟಿ ಕೊಡುವ ಮಟ್ಟಿಗೆ ತನ್ನ ಪಡೆಯನ್ನು ಸಿದ್ಧಪಡಿಸಿಕೊಂಡಿದೆ.

ರೇವಣ್ಣ

ಮಾಜಿ ಪ್ರಧಾನಿ ದೇವೇಗೌಡರು ಆರು ಬಾರಿ ಪ್ರತಿನಿಧಿಸಿದ್ದ ಹೊಳೆನರಸೀಪುರ ಕ್ಷೇತ್ರ ಇಬ್ಬರು ಪ್ರಬಲ ಎದುರಾಳಿಗಳ ಕಾರಣದಿಂದ ರಾಜ್ಯದ ಗಮನ ಸೆಳೆದಿದೆ. ದೇವೇಗೌಡರ ಮಗ ಹಾಗೂ ಮಾಜಿ ಮಂತ್ರಿ ಎಚ್.ಡಿ.ರೇವಣ್ಣ, ಕಾಂಗ್ರೆಸ್‍ನ ಬಿ.ಪಿ.ಮಂಜೇಗೌಡರ ವಿರುದ್ಧ ಸೆಣೆಸುತ್ತಿದ್ದಾರೆ. ಕ್ಷೇತ್ರಕ್ಕೆ ಹೊಸಮುಖವಾದ ಮಂಜೇಗೌಡ ಪಕ್ಷದ ಹಿರಿಯ ನೇತಾರರ ಬೆಂಬಲದಿಂದ ಪ್ರಬಲ ಪೈಪೋಟಿ ಕೊಡುತ್ತಿದ್ದಾರೆ. ಅವರ ಸ್ಪರ್ಧೆಗೆ ಮಹತ್ವ ಸಿಕ್ಕಿದ್ದೇ ರೇವಣ್ಣನ ಪ್ರತಿಕ್ರಿಯೆಗಳಿಂದ. ಸಾರಿಗೆ ಇಲಾಖೆಯ ನೌಕರನಾಗಿದ್ದ ಮಂಜೇಗೌಡ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣಾ ಕಣ ಪ್ರವೇಶಿಸುವ ಮೊದಲೇ, ರೇವಣ್ಣ ಆತನ ವಿರುದ್ಧ ಟೀಕೆಗೆ ಇಳಿದರು. ಆತನ ರಾಜೀನಾಮೆಯನ್ನು ಸರಕಾರ ಒಪ್ಪಬಾರದು ಎಂದು ಒತ್ತಾಯಿಸಿದರು. ಕೊನೆಗೆ ಸರಕಾರ ರಾಜೀನಾಮೆ ಒಪ್ಪಿದ ಮೇಲೆ, ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಹಾಗಾಗಿ, ಮಂಜೇಗೌಡ ಅಂಕಣ ಪ್ರವೇಶಿಸುವ ಮೊದಲೇ ರೇವಣ್ಣ ಆತನಿಗೆ ‘ಪ್ರಬಲ ಪ್ರತಿಸ್ಪರ್ಧಿ’ ಎಂಬ ಪಟ್ಟ ದಯಪಾಲಿಸಿದ್ದರು.

ಮಂಜೇಗೌಡ

ಪ್ರಚಾರದ ವೇಳೆ ಅಲ್ಲಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಮುಖಾಮುಖಿಯಾಗುತ್ತಿದ್ದಾರೆ. ಬಿರುಸಿನ ಮಾತುಕತೆ, ಕೈ ಮಿಲಾಯಿಸುವ ಮಟ್ಟಕ್ಕೆ ಘಟನೆಗಳು ನಡೆದಿವೆ. ರೇವಣ್ಣನ ಮಡದಿ ಭವಾನಿ, ಮಕ್ಕಳು ಪ್ರಜ್ವಲ್ ಹಾಗೂ ಸೂರಜ್ ಕ್ಷೇತ್ರದಲ್ಲಿ ಬಿಡುವಿಲ್ಲದೆ ಓಡಾಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಜ್ವಲ್ ಅಪ್ಪನ ಕ್ಷೇತ್ರ ಅಷ್ಟೇ ಅಲ್ಲದೆ ಬೇರೆಡೆಯೂ ಪ್ರಚಾರ ಮಾಡಿದ್ದರು. ಆದರೆ ಈಗ ಅವರು ತಮ್ಮ ಶ್ರಮವನ್ನು ಸಂಪೂರ್ಣವಾಗಿ ಅಪ್ಪನ ಕ್ಷೇತ್ರಕ್ಕೆ ಸೀಮಿತಗೊಳಿಸಿದಂತೆ ಕಾಣುತ್ತಿದೆ. ಅತ್ತ ಕಾಂಗ್ರೆಸ್ ಪಾಳಯದಲ್ಲಿ ಪಕ್ಷದ ಬೆಂಬಲದ ಜೊತೆಗೆ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿ ಗಮನಾರ್ಹ ಮತ ಗಳಿಸಿದ್ದ ಮಾಜಿ ಮಂತ್ರಿ ಜಿ.ಪುಟ್ಟಸ್ವಾಮಿಗೌಡರ ಸೊಸೆ ಅನುಪಮ ಮಹೇಶ್ ಅವರ ಬೆಂಬಲ ಕೂಡ ಮಂಜೇಗೌಡರಿಗಿದೆ. ಆದರೂ ರೇವಣ್ಣನ ಪ್ರಾಬಲ್ಯಕ್ಕೇ ಮತದಾರರು ಜೈ ಎನ್ನುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಲೆಕ್ಕಕ್ಕೂ ಇಲ್ಲ, ಆಟಕ್ಕೂ ಇಲ್ಲ.

ಎ ಮಂಜು

ಜಿಲ್ಲಾ ಮಂತ್ರಿ ಎ.ಮಂಜು (ಕಾಂಗ್ರೆಸ್) ಪ್ರತಿನಿಧಿಸುವ ಅರಕಲಗೂಡು ಕ್ಷೇತ್ರದಲ್ಲಿ ಎರಡು ಬಾರಿ ಸೋಲು ಅನುಭವಿಸಿದ್ದ ಎ.ಟಿ.ರಾಮಸ್ವಾಮಿ (ಜೆಡಿಎಸ್) ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ‘ಒಳ್ಳೆಯ ಮನುಷ್ಯ’ ಎಂಬ ಮೆಚ್ಚುಗೆಯ ಮಾತುಗಳಿಗೆ ಪಾತ್ರರಾಗಿರುವ ರಾಮಸ್ವಾಮಿ ಎದುರಾಳಿಯ ತಂತ್ರಗಳಿಗೆ ಸೆಡ್ಡು ಹೊಡೆಯುತ್ತಾರಾ ಎನ್ನುವುದೇ ಪ್ರಶ್ನೆ. ಇವರಿಬ್ಬರ ಜೊತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಯೋಗಾರಮೇಶ್ ಕೂಡಾ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂವತ್ತೆರಡು ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು. ಅವರು ಅಂದಿನಂತೆ ಈ ಬಾರಿಯೂ ಪ್ರಬಲ ಪೈಪೋಟಿ ನೀಡಿ ಸಾಂಪ್ರದಾಯಿಕ ಜೆಡಿಎಸ್ ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ.

ಎಚ್.ಎಸ್. ಪ್ರಕಾಶ್

ಹಾಸನದಲ್ಲಿ ಮೂವರು ಗಂಭೀರ ಅಭ್ಯರ್ಥಿಗಳಿದ್ದಾರೆ. ಜೆಡಿಎಸ್‍ನ ಎಚ್.ಎಸ್.ಪ್ರಕಾಶ್ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಂದ ಪೈಪೋಟಿ ಎದುರಿಸುತ್ತಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಮಹೇಶ್ ಮತ್ತು ಬಿಜೆಪಿಯ ಪ್ರೀತಂ ಗೌಡ ಅವರ ಪ್ರಬಲ ಪೈಪೋಟಿಯಿಂದ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ. ಬಿಜೆಪಿ ಅಭ್ಯರ್ಥಿ ಗೆಲುವಿನ ಹಂತಕ್ಕೆ ತಲುಪುತ್ತಾರೋ ಇಲ್ಲವೋ, ಆದರೆ ಗಮನಾರ್ಹ ಮತಗಳನ್ನಂತೂ ಪಡೆಯುತ್ತಾರೆ ಎನ್ನುವುದು ಸದ್ಯದ ಲೆಕ್ಕಾಚಾರ. ಅವರ ಮತಗಳಿಕೆ ಫಲಿತಾಂಶ ನಿರ್ಧರಿಸಲಿದೆ. ಕಾಂಗ್ರೆಸ್ ತನ್ನ ರಾಜ್ಯಮಟ್ಟದ ತಂತ್ರಗಾರಿಕೆಯ ಕಾರಣಕ್ಕೆ ಮುಸ್ಲಿಂ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ಸಾಧ್ಯತೆ ಇದೆ. ಆದರೆ ದೇವೇಗೌಡರು ಮತದಾನದ ಹಿಂದಿನ ಎರಡು ದಿನಗಳ ಕಾಲ ಒಂದು ಸುತ್ತು ಬಂದು ಬದಲಾವಣೆ ಮಾಡುವ ಸಾಮಥ್ರ್ಯ ಉಳ್ಳವರು. ಎಲ್ಲಾ ಅಭ್ಯರ್ಥಿಗಳು ಆ ಎರಡು ದಿನಗಳಿಗಾಗಿ ಕಾಯುತ್ತಿದ್ದಾರೆ. ಹಿಂದಿನಂತೆ ದೇವೇಗೌಡರು ಪ್ರಭಾವ ಬೀರುವಲ್ಲಿ ಯಶಸ್ವಿಯಾದರೆ ಜೆಡಿಎಸ್ ಮತ್ತೆ ಬಾವುಟ ಹಾರಿಸುವಲ್ಲಿ ಸಂಶಯವಿಲ್ಲ.

ಎ.ಟಿ.ರಾಮಸ್ವಾಮಿ

ಶ್ರವಣಬೆಳಗೊಳ ಮತ್ತು ಅರಸೀಕೆರೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ಇದ್ದಂತಿಲ್ಲ. ಅರಸೀಕೆರೆಯಲ್ಲಿ ಕುಡಿವ ನೀರು ಪೂರೈಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮ ಮಾಡಿ ಖ್ಯಾತಿ ಹೊಂದಿರುವ ಕೆ.ಎಂ.ಶಿವಲಿಂಗೇಗೌಡರ ಎದುರು ಕಾಂಗ್ರೆಸ್ ಅಭ್ಯರ್ಥಿ ಶಶಿಧರ್ ದುರ್ಬಲರಾಗಿ ಕಾಣುತ್ತಾರೆ. ಶ್ರವಣಬೆಳಗೊಳದಲ್ಲಿ ಕಾಂಗ್ರೆಸ್‍ನ ಸಿ.ಎಸ್.ಪುಟ್ಟೇಗೌಡರು ಕಳೆದ ಬಾರಿಯಂತೆಯೇ ಸೋಲು ಅನುಭವಿಸಬಹುದು. ಜೆಡಿಎಸ್‍ನ ಸಿ.ಎನ್.ಬಾಲಕೃಷ್ಣ ಗೆಲ್ಲುವ ಸಾಧ್ಯತೆಗಳಿವೆ.

ಸಕಲೇಶಪುರದಲ್ಲಿ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಚುನಾವಣೆ ಘೋಷಣೆಗೆ ಮೊದಲೇ ಅಲೆ ಎಬ್ಬಿಸಿದ್ದರು. ಹೇರಳವಾಗಿ ಹಣ ಖರ್ಚು ಮಾಡಿ ಪಾರ್ಟಿ ಮಾಡಿದ್ದರು. ಅವರ ಕ್ರಿಮಿನಲ್ ಹಿನ್ನೆಲೆ ಹೊರತಾಗಿಯೂ ಈ ಮೀಸಲು ಕ್ಷೇತ್ರದ ಮೇಲ್ವರ್ಗಗಳು ಅವರನ್ನು ಬೆಂಬಲಿಸುತ್ತಿವೆ. ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅವರು ‘ಸ್ಪೃಶ್ಯ’ ಸಮುದಾಯಕ್ಕೆ ಸೇರಿದವರು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಸ್ಪೃಶ್ಯರು ಅವರನ್ನು ಬೆಂಬಲಿಸುವುದು ಅಷ್ಟಕಷ್ಟೆ. ಕಾಂಗ್ರೆಸ್ ಕೊನೆಕ್ಷಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯನವರನ್ನು ಕಣಕ್ಕೆ ತಂದರು. ಅವರು ಬಂದಿದ್ದು ತಡವಾಯ್ತು, ಹಾಗಾಗಿ ಕ್ಷೇತ್ರವನ್ನು ಪರಿಚಯ ಮಾಡಿಕೊಳ್ಳುವುದರಲ್ಲಿಯೇ ಅವರಿಗೆ ಸಾಕಷ್ಟು ಸಮಯ ಬೇಕಾಗಿದೆ. ಈ ಎಲ್ಲಾ ಕಾರಣಗಳಿಗೆ ಮತದಾರ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿಯವರನ್ನು ಬೆಂಬಲಿಸುವ ಸಾಧ್ಯತೆ ಇದೆ. ಹೇಗೂ ದೇವೇಗೌಡರ ಕಾರಣಕ್ಕೆ ಮೇಲ್ವರ್ಗದ ಮತಗಳಲ್ಲಿ ದೊಡ್ಡ ಮೊತ್ತ ಅವರ ಪಾಲಾಗಬಹುದು.

ಜೆಡಿಎಸ್ ಪಕ್ಷ ಬಿಎಸ್‍ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೂ, ಹಾಸನದ ಮಟ್ಟಿಗೆ ಅದರ ಪರಿಣಾಮ ನಗಣ್ಯ. ಮೇಲಾಗಿ ಈ ಜಿಲ್ಲೆಯಲ್ಲಿ ಬಿಎಸ್‍ಪಿ ಪ್ರತಿನಿಧಿಸುವ ದಲಿತರು ದಬ್ಬಾಳಿಕೆ ಅನುಭವಿಸುತ್ತಿರುವುದೇ ಜೆಡಿಎಸ್ ಜೊತೆ ಪ್ರಬಲವಾಗಿ ಗುರುತಿಸಿಕೊಂಡಿರುವ ಸಮುದಾಯದಿಂದ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...