Homeನ್ಯಾಯ ಪಥ`ಪೊಲೀಸ್ ಕವಿ' ಡಾ. ಡಿ.ಸಿ.ರಾಜಪ್ಪನವರ ಸಂದರ್ಶನ: ಖಾಕಿ ಕುಲುಮೆಯಲಿ ಅರಳಿದ ಕಾವ್ಯ ಕುಸುಮ

`ಪೊಲೀಸ್ ಕವಿ’ ಡಾ. ಡಿ.ಸಿ.ರಾಜಪ್ಪನವರ ಸಂದರ್ಶನ: ಖಾಕಿ ಕುಲುಮೆಯಲಿ ಅರಳಿದ ಕಾವ್ಯ ಕುಸುಮ

- Advertisement -
- Advertisement -

ಕಾವ್ಯ ಮತ್ತು ಕಾನೂನು ಪಾಲನೆ, ಇವೆರೆಡೂ ಪೋಷಾಕು-ಪರಿಭಾಷೆಯಿಂದ ಶುರುವಾಗಿ ಸಂವೇದನೆವರೆಗೆ ಪರಸ್ಪರ ವಿರುದ್ಧ ದಿಕ್ಕಿಗೆ ಹೋಗಿನಿಲ್ಲುವ ಧ್ರುವಗಳು. ಕ್ರೌರ್ಯದ ಬೆನ್ನುಹತ್ತಿಹೋಗುವ ಪೊಲೀಸರ ಎದೆಯಲ್ಲಿ ಕಾಠಿಣ್ಯತೆಗೆ ಜಾಗವಿರುತ್ತೇ ವಿನಾಃ ಅಲ್ಲಿ ಸಾಹಿತ್ಯ ಕೃಷಿಗೆ ಹಸನಾದ ಪಸೆ ಇರುವುದಿಲ್ಲ. ಇದು ವಾಡಿಕೆ. ಇದು ನಂಬಿಕೆ. ಇದು ಪ್ರತೀತಿ. ಆದರಿದು ಪೂರ್ವಗ್ರಹವೇ? ಹಾಲಿ ಬೆಳಗಾವಿ ಮಹಾನಗರ ಪೊಲೀಸ್ ಕಮೀಷನರ್ ಆಗಿರುವ ಡಾ. ಡಿ.ಸಿ.ರಾಜಪ್ಪನವರ ವೃತ್ತಿ-ಪ್ರವೃತ್ತಿಗಳನ್ನು ಒಟ್ಟೊಟ್ಟಿಗೆ ತೂಗಿ ನೋಡಿದಾಗ ನಮ್ಮ ಈ ನಂಬಿಕೆ, ವಾಡಿಕೆ, ಪ್ರತೀತಿಗಳು ಹೀಗೆ ಪ್ರಶ್ನೆಯ ಕವಲಿಗೆ ಬಂದು ನಿಲ್ಲುತ್ತವೆ. ಅವರೊಬ್ಬ ಕವಿ, ಈಗಾಗಲೇ ನಾಲ್ಕಾರು ಕವನ ಸಂಕಲನಗಳನ್ನು ಹೊರತಂದಿದ್ದಾರೆ ಎಂಬುದು ಒಂದುಕಡೆಗಾದರೆ, ಪೊಲೀಸ್ ಇಲಾಖೆಯೊಳಗೆ ಇರುವ ತನ್ನಂತಹ ಕವಿಮನಸ್ಸಿನ ಹಿರಿ-ಕಿರಿ ಸಿಬ್ಬಂದಿಗಳನ್ನು ಗುರುತಿಸಿ, ಅವರನ್ನು ಒಂದುಕಡೆ ಕಲೆಹಾಕಿ ಪೊಲೀಸ್ ಸಾಹಿತ್ಯ ವೇದಿಕೆಯ ಮೂಲಕ ಪೊಲೀಸ್ ಕವಿಗೋಷ್ಠಿಗಳನ್ನು ನಡೆಸುತ್ತಾ, ಪೊಲೀಸರೇ ಬರೆದ ಕವನ ಸಂಕಲನಗಳನ್ನು ಹೊರತರುತ್ತಾ ವಿಸ್ಮಯಕ್ಕೆ ಕಾರಣರಾಗುತ್ತಾರೆ. ಅದರ ಜೊತೆಗೇ ಎಂ.ಎಂ.ಕಲಬುರ್ಗಿಯವರ ಹತ್ಯೆ ಪ್ರಕರಣ, ಕೋಮುದಳ್ಳುರಿಗೆ ಆಹಾರವಾಗಿದ್ದ ತೀರ್ಥಹಳ್ಳಿಯ ನಂದಿತಾ ಆತ್ಮಹತ್ಯೆಯಂತಹ ನಾಜೂಕು ಪ್ರಕರಣಗಳನ್ನೂ ನಿಭಾಯಿಸಿ ಇಲಾಖೆಯೊಳಗೆ eminent ಅಧಿಕಾರಿ ಎಂತಲೂ ಹೆಸರು ಮಾಡುತ್ತಾರೆ. ಎಂದೋ ಓದಿದ, ಯಾವತ್ತೋ ಬರೆದ ಕವನ ಕುಸುಮಗಳನ್ನು ತಮ್ಮ ನಾಲಿಗೆ ತುದಿಯಲ್ಲೇ ಇರಿಸಿಕೊಂಡು ಸಂದರ್ಭಕ್ಕೆ ತಕ್ಕಂತೆ ಜನರ ನಡುವೆ ವಾಚಿಸಿ, ಉಪದೇಶಿಸಿ ಹತ್ತಿರವಾಗುತ್ತಲೇ ಸಮಸ್ಯೆಗಳನ್ನು ತಿಳಿಗೊಳಿಸಿಬಿಡುವ ಇವರು, ಪೊಲೀಸುತನದ ಬಗ್ಗೆ ನಮಗಿರುವ ಹಲವು ಸಲ್ಲದ ಗ್ರಹಿಕೆಗಳನ್ನು ಹುಸಿಗೊಳಿಸುತ್ತಾ ಸಾಗುತ್ತಾರೆ. ಡಿ.ಸಿ.ರಾಜಪ್ಪನವರನ್ನು ಪತ್ರಿಕೆಯ ಗಿರೀಶ್ ತಾಳಿಕಟ್ಟೆ ಇಲ್ಲಿ ಮಾತಿಗೆಳೆದಿದ್ದಾರೆ….

ಪತ್ರಿಕೆ: ಬಹುಶಃ ನಿಮಗೆ ಅತಿಹೆಚ್ಚು ಮುಖಾಮುಖಿಯಾದ ಪ್ರಶ್ನೆ ಇದು ಎನಿಸುತ್ತೆ. ನಮ್ಮ ಮಾತುಕತೆಯೂ ಅದರಿಂದಲೇ ಶುರುವಾಗಿಬಿಡಲಿ ಸಾರ್. ಒತ್ತಡ ಮತ್ತು ಅಪರಾಧ ಜಗತ್ತಿನ ಜೊತೆಯೇ ಹೆಚ್ಚು ಸೆಣೆಸಬೇಕಾದ ಒಬ್ಬ ಪೊಲೀಸ್ ಅಧಿಕಾರಿಯಾಗಿ ನಿಮ್ಮಲ್ಲಿ ಈ ಮಟ್ಟದ ಸಾಹಿತ್ಯಾಸಕ್ತಿ ಜತನ ಮಾಡಿಕೊಳ್ಳಲು ಹೇಗೆ ಸಾಧ್ಯವಾಯ್ತು?

ಡಿ.ಸಿ.ರಾಜಪ್ಪ: ಕಾವ್ಯ, ಶೂನ್ಯದಿಂದ ಸೃಷ್ಟಿಯಾಗಲ್ಲ. ಈ ಮಾತನ್ನ ನೀವು ಒಪ್ತೀರಾ ತಾನೆ? ಓದು ಮತ್ತು ಜೀವನಾನುಭವಗಳೇ ಕಾವ್ಯಸೃಷ್ಟಿಯ ಧಾತು. ನೀವು ಹೇಳಿದಂತೆ ಒತ್ತಡದ ಕಾರಣಕ್ಕೆ ಓದಲು ಬೇರೆಯವರಿಗಿಂತ ನನ್ನ ವೃತ್ತಿಗೆ ಕಡಿಮೆ ಸಮಯ ಸಿಗಬಹುದು. ಆದ್ರೆ ಜೀವನಾನುಭವದ ವಿಚಾರದಲ್ಲಿ ನನ್ನ ವೃತ್ತಿಯಷ್ಟು ಸಂಪದ್ಭರಿತವಾದ ವೃತ್ತಿ ಮತ್ತ್ಯಾವುದೂ ಇಲ್ಲ. ಜನರ ಜೊತೆ ಅತಿಹೆಚ್ಚು ಒಡನಾಟ ಸಾಧ್ಯವಿರೋದು ಪೊಲೀಸರಿಗೆ ಮಾತ್ರ. ಎಲ್ಲಾ ಬಗೆಯ ಜನ ನಮ್ಮ ಬಳಿ ಬರುತ್ತಾರೆ. ಅಂದರೆ ಎಲ್ಲಾ ಬಗೆಯ ಜೀವನಾನುಭವಗಳು ನಮ್ಮ ಮುಂದೆ ತಮ್ಮನ್ನು ತೆರೆದಿಟ್ಟುಕೊಳ್ಳುತ್ತವೆ. ಆ ಅನುಭವಗಳನ್ನು ಮನುಷ್ಯ ಸಹಜ ಸಂವೇದನೆಯಿಂದ ತಡಕಾಡಿದರೆ ಸಾಕು ನನ್ನೊಳಗೆ ಕಾವ್ಯ ಮೊಳಕೆಯೊಡೆಯುತ್ತದೆ. ನೋಡಿ, ಚಿಕ್ಕಮಂಗ್ಳೂರಲ್ಲಿ ಬಾಬಾಬುಡನ್‌ಗಿರಿ ಗಲಾಟೆಯ ಬಂದೋಬಸ್ತ್ ಡ್ಯೂಟಿಗೆ ಹೋದಾಗ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡ್ತಲೇ ಧರ್ಮದ ನೆಪದಲ್ಲಿ ಮನುಷ್ಯರು ನಡೆಸೋ ಸಣ್ಣತನಗಳನ್ನ ಅರ್ಥ ಮಾಡ್ಕೊಂಡೆ, `ದತ್ತ ಮತ್ತು ಭಕ್ತ’ ಕಾವ್ಯ ಹುಟ್ಟಿತು. ಮತ್ತೊಮ್ಮೆ ಗುಲ್ಬರ್ಗಾದಲ್ಲಿ ನಡೆದ ಆಕ್ಸಿಡೆಂಟ್ ಒಂದ್ರಲ್ಲಿ ಮಗುವಿಗೆ ಎದೆ ಹೂಡಿದ್ದ ತಾಯಿ, ಮೊಲೆ ಹೀರುತ್ತಿದ್ದ ಮಗು ಇಬ್ಬರೂ ಅದೇ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ್ರು. ಕರುಳು ಹಿಂಡೋ ಸನ್ನಿವೇಶ. ಮಗುವನ್ನು ತಾಯಿಯಿಂದ ಬೇರ್ಪಡಿಸೊ ಕೆಲಸವನ್ನು ನಾನೇ ಮಾಡಬೇಕಾಯ್ತು. ವೃತ್ತಿ, ಮಾಡ್ಲೇಬೇಕಲ್ಲವಾ. ಮಗುವಿನ ಶವವನ್ನು ಹಿಡಿದು ಕೀಳುತ್ತಿದ್ದಂತೆಯೇ ಆ ತಾಯಿಯ ಎದೆಯಲ್ಲಿ ಮಡುಗಟ್ಟಿದ್ದ ಅಮೃತ ನನ್ನ ಮುಖದ ಮೇಲೆ ಫೌಂಟೇನಿನಿಂದ ಚಿಮ್ಮಿದ ನೀರಿನಂತೆ ಸಿಡಿಯಿತು. ಅಲ್ಲಿ, ಆಗ ನಾನು ಪೊಲೀಸು. ಅದರಾಚೆಗೆ ನಾನೂ ಒಬ್ಬ ಮನುಷ್ಯನಲ್ಲವೇ. ಆ ಘಟನೆ ನನ್ನ ಒಳಗನ್ನು ಕದಡಿತು. ಆಗ `ಸಾವು ಮತ್ತು ಸಂಭ್ರಮ’ ಕವನ ಹುಟ್ಟಿತು. ಹೀಗೆ, ನನ್ನ ವೃತ್ತಿಯೇ ನನ್ನ ಕಾವ್ಯ ರಚನೆಗೆ ಪೂರಕವಾಗಿದೆ ಅನ್ಸುತ್ತೆ.

ಪತ್ರಿಕೆ: ಅಂದ್ರೆ ನಿಮ್ಮ ವೃತ್ತಿಯೇ ನಿಮ್ಮ ಕಾವ್ಯ ರಚನೆಯ ಸಂಪನ್ಮೂಲ ಅಂತ ಹೇಳ್ತೀರಿ. ಸರಿ, ಆದ್ರೆ ಆ ಅನುಭವಗಳನ್ನು ಕಾವ್ಯದ ರೂಪದಲ್ಲೇ ಅಭಿವ್ಯಕ್ತಿಸಬೇಕು ಅಂದ್ರೆ ನಮ್ಮ ಆಳದಲ್ಲೇ ಸಾಹಿತ್ಯ ಸಂವೇದನೆ ಇರಬೇಕಾಗುತ್ತೆ. ನಿಮ್ಮಲ್ಲಿ ಈ ಸಾಹಿತ್ಯದ ಅಭಿರುಚಿ ಹೇಗೆ ಶುರುವಾಯ್ತು?


ಡಿ.ಸಿ.ರಾಜಪ್ಪ:
ಈ ವಿಚಾರದಲ್ಲಿ ಕುವೆಂಪು ನನಗೆ ಮೂಲ ಪ್ರೇರಕರು. ಚಿಕ್ಕವಯಸ್ಸಿಂದಲೂ ನಾನು ಕಥೆ, ಕಾದಂಬರಿ, ಕವನಗಳ ಓದುಗ. ನನಗೆ ಮೊದಲ ಬಾರಿಗೆ ಕವನ ಬರೆಯುವ ಸವಾಲೆಸೆದೆದ್ದು ಕುವೆಂಪು ಅವರ ‘ಕರಿಸಿದ್ದ’ ಕಥನ-ಕವನ! ಅದ್ರಲ್ಲಿ ಅವರು `ಕುಪ್ಪಳ್ಳಿ’ ಎಂದಷ್ಟೇ ಹೇಳಿ ತನ್ನ ಊರಿನ ಪರಿಚಯ ಸಮಾಪ್ತಿ ಮಾಡಬಹುದಿತ್ತು. ಆದರೆ “ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ, ಒಂಬತ್ತು ಮೈಲಿಗಳ ದೂರದಲಿ, ನಮ್ಮೂರು ಕುಪ್ಪಳಿ. ಊರಲ್ಲ ನಮ್ಮ ಮನೆ. ನಮ್ಮ ಕಡೆ ಊರೆಂದರೊಂದೆ ಮನೆ. ಪಡುವೆಟ್ಟುಗಳ ನಾಡು…..” ಎಂದೆಲ್ಲ ವರ್ಣಿಸಿ ತಮ್ಮ ಊರಿನ ಸೊಬಗು ಹೆಚ್ಚಿಸುತ್ತಾರೆ. ಅದನ್ನು ಓದಿ, ಯಾಕೆ ನನ್ನ ಊರನ್ನೂ ನಾನು ಹೀಗೆ ಹೆಮ್ಮೆಯಿಂದ ವರ್ಣಿಸಬಾರದು ಅನ್ನಿಸ್ತು. ನನ್ನದು ಚಿತ್ರದುರ್ಗದ ಪುಟ್ಟ ಹಳ್ಳಿ, ಹಿರೇಎಮ್ಮಿಗನೂರು ಅಂತ. ನನ್ನ ಊರನ್ನು ನಾನೆ ಹೀಗೆ ವರ್ಣಿಸಿಕೊಂಡೆ `ಹಿ’ರಿಮೆಯನ್ನು ಗಳಿಸಿದ ಈ ಊರು, ಹರಿಹ/ `ರೇ’ ಎಂಬ ಪವಿತ್ರನಾಮದ ಬೀಡು/ `ಎ’ಲ್ಲಾ ಜನರಿಗೂ ಅನ್ನಛತ್ರದ ನೆಲೆವೀಡು, ಅ/ `ಮ್ಮಿ’ ಎಂದು ಉಲ್ಲಾಸದಿಂದ ಕರೆಯುವ ಜನಗಳ ನಾಡು/ `ಗ’ಂಗೆಯ ಕೊರತೆಯಿಲ್ಲದ ಪವಿತ್ರ ಬಾವಿಯ ಪನ್ನೀರು, ನುಚ್ಚು/ `ನೂ’ರಾಗಿ ಗೂಡಿನಂತೆ ಒಡನಾಟವುಳ್ಳ ಈ ಊ/ ‘ರು’. ಅದುವೇ ಹಿರೇಎಮ್ಮಿಗನೂರು. ಪ್ರತಿ ಸಾಲಿನ ಮೊದಲ ಅಕ್ಷರವನ್ನು ಆಯ್ದು ಕೂಡಿಸಿದರೆ ನನ್ನ ಊರಿನ ಹೆಸರು ಸಿಗುತ್ತೆ. ತುಂಬಾ ದಿನಗಳ ಕೆಳಗೆ, ಓದುವ ಹುಡುಗನಾಗಿದ್ದಾಗ ಮಾಡಿದ್ದ ಒಂದು ಪ್ರಯತ್ನ ಇದು. ಅಲ್ಲಿಂದ ಶುರುವಾದ ಸಾಹಿತ್ಯದ ಓದು, ನನ್ನದೇ ವ್ಯಾಪ್ತಿಯ ಕವನ ರಚನೆ ಬೆಳೆಯುತ್ತಾ ಬಂತು. ಕಾಲೇಜು ಸೇರಿದ ಮೇಲೆ ಅದು ಇನ್ನೂ ಜಾಸ್ತಿ ಆಯ್ತು.

ಪತ್ರಿಕೆ: ಪೊಲೀಸ್ ವೃತ್ತಿ ನಿಮಗೆ ಇವತ್ತು ಒಂದು ಗೌರವಯುತ ಬದುಕನ್ನು ರೂಪಿಸಿಕೊಟ್ಟಿದೆ. ಈ ಗೌರವಯುತ ಬದುಕು ರೂಪುಗೊಳ್ಳುವಲ್ಲಿ ನಿಮ್ಮ ಸಾಹಿತ್ಯಾಸಕ್ತಿಯ ಪಾತ್ರವೂ ಇದೆ ಎಂದು ಅನಿಸುತ್ತದೆಯೇ?

ಡಿ.ಸಿ.ರಾಜಪ್ಪ: ಹೌದು, ನೀವು ಹೇಳಿದ್ದು ನಿಜ. ಪೊಲೀಸ್ ಇಲಾಖೆ ನನಗೆ ಘನತೆಯ ಬದುಕನ್ನು ರೂಪಿಸಿದೆ. ಆದ್ರೆ ಸಾಹಿತ್ಯದ ಒಲವು ನನ್ನನ್ನು ಆ ಬದುಕಿಗೆ ಅಣಿಗೊಳಿಸಿ, ಒಬ್ಬ ಮನುಷ್ಯನನ್ನಾಗಿ ರೂಪಿಸಿದೆ. ಸರಿ-ತಪ್ಪುಗಳ ತಿಳಿವಳಿಕೆ ಬೆಳೆಸಿದೆ. ಬೇಸರ ಅನ್ನಿಸುತ್ತೆ, ಆದ್ರೂ ಇದು ವಾಸ್ತವ. ನಮ್ಮ ಸುತ್ತಲಿನ ಎಷ್ಟೋ ಜನ ಮನುಷ್ಯರ ಆಕಾರದಲ್ಲಿದ್ದ್ರು ಮನುಷ್ಯತ್ವ ಮರೆತಿದ್ದಾರೆ. ಬದುಕು ಹೆಚ್ಚೆಚ್ಚು ಅಸಹನೀಯಗೊಳ್ಳುತ್ತಿರುವುದು ಇಂತವರಿಂದಲೇ. ಸಾಹಿತ್ಯ ನಮ್ಮಲ್ಲಿ ಮನುಷ್ಯ ಸಂವೇದನೆ ಬೆಳೆಸುತ್ತೆ. ನನ್ನ ಮೊದಲ ಕವನ ‘ಮಾರಿ’. ಅದು ನನ್ನೊಳಗೆ ಮೊಳೆತದ್ದು, ನಮ್ಮ ಊರಿನಲ್ಲಿ ನಡೆಯುತ್ತಿದ್ದ ಒಂದು ಮೌಢ್ಯದ ವಿರುದ್ಧ ಸೆಟೆದು ನಿಂತ ಬಂಡಾಯ ಪ್ರಜ್ಞೆಯಿಂದ. ಮಾರಿ ಹಬ್ಬದಂದು ನಡೆಸಲಾಗುತ್ತಿದ್ದ ಪ್ರಾಣಿಬಲಿ, ಕೇವಲ ಪ್ರಾಣಿಬಲಿಯಾಗಿ ಕಾಣದೆ ದುರ್ಬಲ ಸಮುದಾಯಗಳು ಆ ನೆಪದಲ್ಲಿ ತಮ್ಮ ಆರ್ಥಿಕ ಚೈತನ್ಯವನ್ನೇ ಅಡವಿಟ್ಟು ಮತ್ತಷ್ಟು ದುರ್ಬಲರಾಗುವಂತೆ ಹೆಣೆದ ಹುನ್ನಾರವಾಗಿ ಕಾಣಿಸಿತು. ಪ್ರತಿಭಟಿಸಿದೆ. ಈ ದುಬಾರಿ ಹಬ್ಬದಿಂದಲೇ ಮತ್ತಷ್ಟು ಬಡವರಾಗುತ್ತಿದ್ದ ತಳಸಮುದಾಯದವರನ್ನು ಎಚ್ಚರಿಸಲು ಓಡಾಡಿದೆ. ಕಾನೂನಿನ ಅರಿವು ಮೂಡಿಸಿದೆ. ಆ ವರ್ಷ ನನ್ನ ಪ್ರಯತ್ನ ಯಶಸ್ಸಾಗದಿದ್ದರು ಮುಂದಿನ ವರ್ಷದ ಹೊತ್ತಿಗೆ ಶೋಷಿತ ಸಮುದಾಯಗಳು ಪ್ರಾಣಿಬಲಿಯಿಂದ ಹಿಂದೆ ಸರಿಯುವಂತೆ ಅವರಲ್ಲಿ ಆಲೋಚನೆ ಬಿತ್ತಿದೆ. ಆ ಹಾದಿಯಲ್ಲಿ ಹುಟ್ಟಿದ್ದು `ಮಾರಿ’ ಕವನ. ಮೂವತ್ತು ವರ್ಷವಾಯ್ತು, ಇವತ್ತಿಗೂ ನನ್ನೂರಿನಲ್ಲಿ ಪ್ರಾಣಿಬಲಿ ನಡೆಯುತ್ತಿಲ್ಲ. ನನ್ನಲ್ಲಿ ಇಂಥಾ ಜಾಗೃತಿ ಮೂಡಿದ್ದು ಸಾಹಿತ್ಯದಿಂದ.

ಅಂದಿನ ಗೃಹಮಂತ್ರಿ ರಾಮಲಿಂಗಾ ರೆಡ್ಡಿಯವರಿಂದ ಸಮವಸ್ತ್ರದೊಳಗೊಂದು ಸುತ್ತು ನಾಲ್ಕನೇ ಸಂಪುಟದ ಬಿಡುಗಡೆ

ಪತ್ರಿಕೆ: ಸಾಹಿತ್ಯದಿಂದ ಸಂವೇದನೆ ಬೆಳೆಯುತ್ತೆ ಅನ್ನೋದೇನೊ ನಿಜ ಸಾರ್. ಸಂವೇದನೆ ಹೆಚ್ಚಾದಂತೆಲ್ಲ ಮನುಷ್ಯ ಕಠೋರತೆಯನ್ನು ಕಳೆದುಕೊಂಡು ಮೆದುವಾಗುತ್ತಾನೆ ಎಂಬ ಮಾತೂ ಇದೆ. ಮೂಲತಃ ಕಾಠಿಣ್ಯವನ್ನೇ ಬೇಡುವ ಪೊಲೀಸ್ ವೃತ್ತಿಗೆ ಈ ನಿಮ್ಮ ಸಂವೇದನೆಯ softness ಅಡ್ಡಿಯಾಗಲಿಲ್ಲವೇ?

ಡಿ.ಸಿ.ರಾಜಪ್ಪ: ಕಬ್ಬಿಣ ಎಷ್ಟು ಗಟ್ಟಿಯಾಗಿರುತ್ತೊ, ಸುತ್ತಿಗೆ ಏಟೂ ಅಷ್ಟೇ ಬಿರುಸಾಗಿ ಬೀಳಬೇಕಾಗುತ್ತೆ. ಇಲ್ಲಿ ಕಾಠಿಣ್ಯ ಅಥವಾ ಬಿರುಸುತನವನ್ನು ಕೇವಲ ಸುತ್ತಿಗೆಗೆ ಮಾತ್ರ ಆರೋಪಿಸುವುದು ಎಷ್ಟು ಸರಿ? ನಮ್ಮ ಸಮಾಜ ಎಷ್ಟು ಭೀಕರವಾಗುತ್ತಾ ಸಾಗುತ್ತೋ, ಅದನ್ನು ನಿಭಾಯಿಸಬೇಕಾದ ಪೊಲೀಸರೂ ಅಷ್ಟೇ ಕಠೋರವಾಗುವುದು ಅನಿವಾರ್ಯವಾಗುತ್ತೆ. ಆದ್ರೆ, ಈ `ಸಮಾಜ’ ಅನ್ನೋದು `ಪೊಲೀಸ’ರು ಕಾಣಿಸಿಕೊಂಡಂತೆ ಒಂದು ಚೌಕಟ್ಟು, ಒಂದು ಯೂನಿಫಾರ್ಮ್, ಒಂದು ಪ್ರತ್ಯೇಕಿತ ಸಮುದಾಯವಾಗಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಸಮಾಜದ ಭೀಕರತೆಯನ್ನು ತುಲನಾತ್ಮಕವಾಗಿ ಕಾಣಲಾಗದೆ, ಪೊಲೀಸರ ಕಠೋರತೆ ಮಾತ್ರ ಜನರಲ್ಲಿ ದಾಖಲಾಗುತ್ತಾ ಬಂದಿದೆ. ಹೀಗೆ ಒಂದು ಸಮಾಜವೇ ಭೀಕರಗೊಂಡಾಗ ಕೇವಲ ಪೊಲೀಸರು ಮಾತ್ರವಲ್ಲ, ಒಬ್ಬ ತಂದೆಯೂ ಅಥವಾ ಒಬ್ಬ ತಾಯಿಯೂ ಕಠಿಣಗೊಳ್ಳಬೇಕಾಗುತ್ತೆ, ತನ್ನ ಮಕ್ಕಳಿಗಾಗಿ, ತನ್ನ ಕುಟುಂಬದ ಕ್ಷೇಮಕ್ಕಾಗಿ. (ಇಲ್ಲಿ ಕಠಿಣ ಅಂದ್ರೆ ದುಷ್ಟತನ ಅಂದ್ಕೋಬೇಡಿ). ಆದರೂ ಆ ತಂದೆ, ತಾಯಿ ಮಕ್ಕಳನ್ನು ಪ್ರೀತಿಸುವುದಿಲ್ಲವೇ? ಮಕ್ಕಳೆಡೆಗೆ ಮಮಕಾರ ಇದೆ ಎಂದ ಮಾತ್ರಕ್ಕೆ ಆ ತಂದೆ/ತಾಯಿ ಭೀಕರ ಸಮಾಜದ ಬಲಿಪಶುವಾಗುವಷ್ಟು ದುರ್ಬಲರೆಂದು ಭಾವಿಸಲಾದೀತೆ? ನನಗೆ ಮಾತ್ರವಲ್ಲ, ಪರಿಸ್ಥಿತಿಗೆ ತಕ್ಕಂತೆ ಕಠಿಣಗೊಳ್ಳುವ, ಅವಶ್ಯಕತೆಗೆ ತಕ್ಕಂತೆ ಮೆದುವಾಗುವ ಪಾಠವನ್ನು ಈ ನಮ್ಮ ಪ್ರಕೃತಿ ಪ್ರತಿ ಜೀವಜಗತ್ತಿಗೂ ಕಲಿಸಿದೆ.

ನೋಡಿ, ಕಾವ್ಯ (ಸಾಹಿತ್ಯ) ಅನ್ನೋದು ಉಷೆಯೇ ಹೊರತು ನಿಷೆಯಲ್ಲ. ದಿಕ್ಕನ್ನು ತೋರುವುದು ಮಾತ್ರವಲ್ಲ, ನಮ್ಮ ದಾರಿಗೆ ಬೆಳಕನ್ನೂ ಚೆಲ್ಲುತ್ತೆ ಅದು. ಹಾಗೆ ಬೆಳಕು ತುಂಬಿದ ದಾರಿಯಲ್ಲಿ ಆತ್ಮವಿಶ್ವಾಸ ಮತ್ತು ಸದೃಢವಾಗಿ ಹೆಜ್ಜೆ ಇರಿಸುತ್ತೇವೆಯೆ ವಿನಾ, ಅಂಜಿಕೆ-ಅಳುಕಿನಿಂದ ನಡೆಯುವುದಿಲ್ಲ. ಸಾಹಿತ್ಯದ ಸೆಳೆತ ನನ್ನ ಕರ್ತವ್ಯ ದಕ್ಷತೆಯನ್ನು ಹೆಚ್ಚಿಸಿದೆ. ಯಾವತ್ತೂ ಅಡ್ಡಿಯಾಗಿಲ್ಲ. ಯಾಕೆಂದರೆ ನನಗೆ ನನ್ನ ಕರ್ತವ್ಯ ಸಮಯ, ಕವಿಸಮಯದ ಬಗ್ಗೆ ಸ್ಪಷ್ಟ ತಿಳಿವಳಿಕೆ ಇದೆ.

ಒಮ್ಮೆ ಒಬ್ಬ ಮುದುಕ ನನ್ನನ್ನು ನೋಡೋಕೆ ಅಂತ ಕಚೇರಿಗೆ ಬಂದ. ಅದೇವೇಳೆಗೆ ಯಾವುದೋ ತಪ್ಪು ಮಾಡಿದ್ದ ವ್ಯಕ್ತಿಗೆ ನಾನು ಜೋರಾಗಿ ಗದರುತ್ತ, ಇನ್ಮುಂದೆ ಹೀಗೆ ಮಾಡಬೇಡ ಅಂತ ತಾಕೀತು ಮಾಡುತ್ತಿದ್ದೆ. ಪಾಪಾ, ಆ ಮುದುಕ ನನ್ನ ರೇಗಾಟ ಕಂಡು ಗಾಬರಿಯಾದ. ನಾನು ಆ ಮುದುಕನತ್ತ ತಿರುಗಿ ನೋಡುತ್ತಿದ್ದಂತೆಯೇ ಕೈ ಮುಗಿದು ದೈನೇಸಿಯಾಗಿ “ಸ್ವಾಮಿ, ಏನೊ ಸಮಸ್ಯೆಗಳು ಇರ್ತಾವೆ, ನಿಮ್ಮತ್ರ ನ್ಯಾಯ ಸಿಗಬೌದು ಅಂತ ಇಲ್ಲಿಗೆ ಬರ್ತೀವಿ. ನಮ್ಮ ಪಾಲಿಗೆ ನೀವುಗುಳೇ ದೇವರುಗಳು. ನೀವು ಕುಂತಿರೋ ಈ ಜಾಗ ದೇವುಸ್ಥಾನ ಇದ್ದಂಗೆ. ಅದುಕ್ಕೆ ನೋಡಿ, ನನ್ನ ಚಪ್ಲಿಯನ್ನೂ ಹೊರಗೆ ಬಿಟ್ಟು ಬಂದಿದೀನಿ. ಆದ್ರೆ ನೀವು ನಮ್ಮಗಳ ಪಾಲಿಗೆ ದೆವ್ವಗಳು ಆಗ್ಬೇಡಿ ಸ್ವಾಮಿ” ಅಂತ ಬೇಡಿಕೊಳ್ಳಲು ಶುರು ಮಾಡಿದ. ಅವನು ಹಳ್ಳಿ ಮುದುಕ. ಆದರೂ ಬಹುದೊಡ್ಡ ಮಾತು ಹೇಳಿದ್ದ. ಅವತ್ತೇ ನನಗೆ ಅರ್ಥವಾಯ್ತು. ಪೊಲೀಸ್ ವೃತ್ತಿ ಅಂದ್ರೆ, ಬರೀ ಕಾಠಿಣ್ಯತೆ ಮಾತ್ರ ಅಲ್ಲ, ಯಾಕಂದ್ರೆ ನಮ್ಮ ಜನಕ್ಕೆ ನಾವು ಕೇವಲ ಪೊಲೀಸರಷ್ಟೇ ಅಲ್ಲ ಅಂತ! ಸಾಹಿತ್ಯ ಕೂಡಾ ಆ ಮುದುಕನಂತೆ ನಮ್ಮಲ್ಲಿ ಕರ್ತವ್ಯ ಪ್ರಜ್ಞೆ ಬೆಳೆಸುತ್ತದೆಯೇ ವಿನಾಃ ಅಡ್ಡಿಪಡಿಸುವುದಿಲ್ಲ.

ಪತ್ರಿಕೆ: ನಿಮಗೆ ಸಾಹಿತ್ಯಾಸಕ್ತಿ ಇದೆ, ಕವನ ರಚಿಸುತ್ತೀರಿ, ಕವನ ಸಂಕಲನಗಳನ್ನೂ ಹೊರತಂದಿದ್ದೀರಿ. ಸರಿ. ಆದ್ರೆ ಇಲಾಖೆಯ ಇನ್ನುಳಿದವರಲ್ಲೂ ಇರುವ ಸಾಹಿತ್ಯಾಸಕ್ತಿ ಪ್ರೋತ್ಸಾಹಿಸಲು ಪೊಲೀಸ್ ಕವನ ಮಾಲಿಕೆ, ಪೊಲೀಸ್ ಕಾವ್ಯಗೋಷ್ಠಿ ಆಯೋಜಿಸುವ ಸಾಹಸಕ್ಕೂ ಕೈಹಾಕಿದ್ದೀರಿ. ಇದಕ್ಕೇನಾದರು ನಿರ್ದಿಷ್ಟ ಉದ್ದೇಶವಿದೆಯೇ?


ಡಿ.ಸಿ.ರಾಜಪ್ಪ:
ಸಂಘ ಸಂಸ್ಥೆಗಳು ಪೊಲೀಸ್ ಅಧಿಕಾರಿ ಎನ್ನುವ ಕಾರಣಕ್ಕೆ ನನ್ನನ್ನು ವಿವಿಧ ಕವಿಗೋಷ್ಠಿಗಳಿಗೆ ಆಹ್ವಾನಿಸುತ್ತಿದ್ದರು, ಕವನ ವಾಚನಕ್ಕೆ ವೇದಿಕೆ ಕಲ್ಪಿಸಿಕೊಡುತ್ತಿದ್ದರು. ಒಮ್ಮೆ ಅಂತದ್ದೇ ಒಂದು ಕವಿಗೋಷ್ಠಿಯಲ್ಲಿ ನಾನು ಕವನ ವಾಚನ ಮಾಡಿ ವೇದಿಕೆ ಇಳಿದಾಗ, ಸಮವಸ್ತ್ರದಲ್ಲಿದ್ದ ಕಾನ್‌ಸ್ಟೇಬಲ್ ಒಬ್ಬ ನನ್ನ ಬಳಿ ಓಡಿ ಬಂದು, ಒಂದು ಚೀಟಿ ಕೊಟ್ಟ. ಬಿಡಿಸಿ ಓದಿದೆ. ಅದೊಂದು ಅದ್ಭುತ ಕವನ. ಅವನೇ ಬರೆದದ್ದು. ಆಗಷ್ಟೇ ನಾನು ಓದಿ ಬಂದ ಕವನಕ್ಕಿಂತ ಅದು ಚೆನ್ನಾಗಿತ್ತು. ಆದರೆ ಒಬ್ಬ ಕಾನ್‌ಸ್ಟೇಬಲ್‌ಗೆ ಯಾರು ತಾನೇ ವೇದಿಕೆ ಕಲ್ಪಿಸಿಕೊಡಬೇಕು. ಅವತ್ತೇ ನಾನು ನಿರ್ಧರಿಸಿದೆ. ನಮ್ಮ ಇಲಾಖೆಯಲ್ಲೇ ಇರುವ ಇಂಥಾ ಕವಿಮನಸ್ಸುಗಳನ್ನು ಹುಡುಕಿ, ಅವರಲ್ಲಿ ಕಾವ್ಯದ ಸೆಲೆ ಬತ್ತುವ ಮೊದಲೇ, ನೀರು ಹಾಕಿ ಪ್ರೋತ್ಸಾಹಿಸಬೇಕೆಂದು. ಅದರ ಪ್ರಯತ್ನವಾಗಿ ಶಿವಮೊಗ್ಗದಲ್ಲಿ ಮೊದಲ ಬಾರಿ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಿದೆ. ಇಲಾಖೆಯಿಂದ, ಮಾಧ್ಯಮಗಳಿಂದ, ಸಾರ್ವಜನಿಕರಿಂದ ಅದ್ಭುತ ಬೆಂಬಲ ಸಿಕ್ಕಿತು. ಮೆಚ್ಚುಗೆಗಳೂ ಕೇಳಿ ಬಂದವು. ಆನಂತರ ಒಟ್ಟು ನಾಲ್ಕು ರಾಜ್ಯಮಟ್ಟದ ಪೊಲೀಸ್ ಕವಿಗೋಷ್ಠಿ ಆಯೋಜಿಸಿದ್ದೇನೆ. ಪೊಲೀಸ್ ಸಿಬ್ಬಂದಿಗಳೇ ಬರೆದ ಕವನಗಳನ್ನು ಪೋಣಿಸಿ `ಸಮವಸ್ತ್ರದೊಳಗೊಂದು ಸುತ್ತು’ ಸಂಕಲನ ತಂದೆ. ಈಗಾಗಲೇ ಅದರ ನಾಲ್ಕು ಸಂಪುಟಗಳು ಪ್ರಕಟಗೊಂಡಿವೆ.
ಸಾಹಿತ್ಯವು ಪೊಲೀಸ್ ಮನಸ್ಸನ್ನು ಹೆಚ್ಚೆಚ್ಚು ಜನಸ್ನೇಹಿಯನ್ನಾಗಿಸಿ, ಒತ್ತಡಗಳಿಂದ ಮುಕ್ತಿಗೊಳಿಸುತ್ತೆ ಎಂಬುದಕ್ಕೆ ನನ್ನ ಬದುಕೇ ಒಂದು ಪ್ರಯೋಗ. ನಮ್ಮ ಸಿಬ್ಬಂದಿಗಳಲ್ಲಿ ಸೃಜನಶೀಲ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಾಯಿತೆಂದರೆ ಇಲಾಖೆ ಜನಮುಖಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದೇ ನನ್ನ ಪ್ರಯತ್ನದ ಉದ್ದೇಶ.

ಪತ್ರಿಕೆ: ನಿಮ್ಮ ನಿವೃತ್ತಿಯ ನಂತರ ಇಲಾಖೆಯಲ್ಲಿ ಇಂಥಾ ಪ್ರಯತ್ನ ನಿಂತುಹೋದರೆ ನಿಮ್ಮ ಉದ್ದೇಶ ಈಡೇರದೆ ಪ್ರಯತ್ನವೆಲ್ಲ ವ್ಯರ್ಥವಾಗುತ್ತದಲ್ಲಾ?

ಡಿ.ಸಿ.ರಾಜಪ್ಪ: ನೋಡಿ, ಪೊಲೀಸ್ ಇಲಾಖೆಯಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡವನಲ್ಲಿ ನಾನೇ ಮೊದಲಿಗನಲ್ಲ, ನಾನೇ ಕೊನೆಯವನೂ ಅಲ್ಲ. ಈ ಹಿಂದೆ ರಾಮಾನುಜಂ, ವಿಜಯ ಸಾಸನೂರ್ ತರದವರು ಇದ್ದರು. ಈಗ ನಾನಿದ್ದೇನೆ. ಮುಂದಕ್ಕೆ ನನ್ನಂತವರು ಬಂದೇ ಬರುತ್ತಾರೆ. ದಾರಿಯನ್ನು ಪೂರ್ಣವಾಗಿ ನಿರ್ಮಿಸುತ್ತೇವೊ ಇಲ್ಲವೋ ಗೊತ್ತಿಲ್ಲ, ಆದರೆ ದಿಕ್ಕನ್ನು ತೋರುವ ಪ್ರಯತ್ನವನ್ನಾದರು ನಾವು ಮಾಡಲೇಬೇಕಲ್ಲ. ಕಡೇಪಕ್ಷ ಆ ಕೆಲಸವಾದರೆ, ಮುಂದೆ ಯಾರೊ ಒಬ್ಬರು ಆ ದಿಕ್ಕಿನಲ್ಲಿ ದಾರಿ ನಿರ್ಮಿಸುತ್ತಾರೆ.
ಹಾಗಂತ ನಾನು ಕೈಕಟ್ಟಿ ಕೂರುವುದಿಲ್ಲ. ನಿವೃತ್ತಿ ನಂತರವೂ ನನ್ನ ವ್ಯಾಪ್ತಿಯಲ್ಲಿ ಪ್ರಯತ್ನ ಮುಂದುವರೆಸುತ್ತೇನೆ. ಪೊಲೀಸ್ ಸಿಬ್ಬಂದಿಗಳ ಸೃಜನಶೀಲತೆಗೆ ವೇದಿಕೆ ಕಲ್ಪಿಸಿಕೊಡುವಂತಹ ಒಂದು ನಿಯತಕಾಲಿಕ ಪತ್ರಿಕೆಯನ್ನು ಶುರು ಮಾಡಬೇಕೆನ್ನುವ ಆಲೋಚನೆ ನನ್ನಲ್ಲಿದೆ. ಆ ಮೂಲಕ ನನ್ನ ಪ್ರಯತ್ನ ಮುಂದುವರೆಸುತ್ತೇನೆ.

ಪತ್ರಿಕೆ: ಕೊನೆಯದಾಗಿ ಒಂದು ಪ್ರಶ್ನೆ. ನಿಮ್ಮನ್ನು ನೀವು ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೀರೋ ಅಥವಾ ಕವಿಯಾಗಿ ಗುರುತಿಸಿಕೊಳ್ಳಲು ಹೆಚ್ಚು ಹಂಬಲಿಸುತ್ತೀರೊ?

ಡಿ.ಸಿ.ರಾಜಪ್ಪ: (ಸಣ್ಣ ನಗು) ನಿಮ್ಮ ಪ್ರಶ್ನೆ ಹೇಗಿದೆಯೆಂದರೆ ಎದೆಬಡಿತ ಹೆಚ್ಚು ಇಷ್ಟವೋ, ನಾಡಿಮಿಡಿತ ಹೆಚ್ಚು ಇಷ್ಟವೋ? ಎಂದು ಕೇಳಿದಂತಿದೆ. ಇವೆರೆಡೂ ಜೀವಂತಿಕೆಯ ಸಂಕೇತಗಳೇ. ಒಂದು ಇರದಿದ್ದರೆ ಮತ್ತೊಂದಿಲ್ಲ. ನನ್ನ ಪಾಲಿಗೆ ನನ್ನ ಪೊಲೀಸ್ ಕಸುಬುದಾರಿಕೆ ಮತ್ತು ಕಾವ್ಯಕೃಷಿ ಎರಡೂ ಎದೆಬಡಿತ, ನಾಡಿಮಿಡಿತ ಇದ್ದಂತೆ. ಕರ್ತವ್ಯ ಕಾಠಿಣ್ಯವನ್ನು ಕಲಿಸಿದೆ, ಕಾವ್ಯ ಮೃದುತ್ವವನ್ನು ಬೋಧಿಸಿದೆ. ಈ ಎರಡು ಸಮಮಿಶ್ರಣದಿಂದ ನಾನು ನಾನಾಗಿದ್ದೇನೆ. ಹೇಳಲೇಬೇಕು ಎನ್ನುವುದಾದರೆ, ಪೊಲೀಸ್ ಅಧಿಕಾರಿಯನ್ನು ಕವಿಯಿಂದ ಪ್ರತ್ಯೇಕಿಸದೆ `ಪೊಲೀಸ್ ಕವಿ’ಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ.

ಪತ್ರಿಕೆ: ನಿಮ್ಮ ಯೋಜನೆ ಮತ್ತು ಉದ್ದೇಶಗಳೆಲ್ಲ ಯಶಸ್ಸಾಗಲಿ, ಧನ್ಯವಾದಗಳು ಸಾರ್
ಡಿ.ಸಿ.ರಾಜಪ್ಪ: ತಮಗೂ ಧನ್ಯವಾದಗಳು.

ಸಂದರ್ಶನ: ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...