Homeಸಾಮಾಜಿಕಜೀ ಕನ್ನಡದ ಟಿಆರ್‌ಪಿ ಬಲೆಯಲ್ಲಿ ಸಿಕ್ಕಿಬಿತ್ತೇ ಹಳ್ಳಿ ಹಕ್ಕಿ?

ಜೀ ಕನ್ನಡದ ಟಿಆರ್‌ಪಿ ಬಲೆಯಲ್ಲಿ ಸಿಕ್ಕಿಬಿತ್ತೇ ಹಳ್ಳಿ ಹಕ್ಕಿ?

- Advertisement -
- Advertisement -

ಸರೋವರ್ ಬೆಂಕಿಕೆರೆ |

ಸೆಲೆಬ್ರಿಟಿಗಳಿಗೆ ಮೀಸಲಾದ ಬಿಗ್‌ಬಾಸ್ ಅನ್ನು ಹೊರತುಪಡಿಸಿದರೆ ಕನ್ನಡದ ಬಹುತೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಹಳ್ಳಿಗಾಡಿನ ಪ್ರತಿಭೆಗಳು ಜನಪ್ರಿಯರಾಗಿ ಕನ್ನಡಿಗರ ಮನೆಮಾತಾಗಿರುವುದು ನಿಜಕ್ಕೂ ವಿಶೇಷ ಮತ್ತು ಅಭಿನಂದನಾರ್ಹ. ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ 15ನೇ ಅವತರಣಿಕೆಯಲ್ಲಿ ಹಾವೇರಿ ಜಿಲ್ಲೆಯ ಕುರಿ ಕಾಯುವ ಯುವಕ ಹನುಮಂತು ಮನೆಮಾತಾಗಿದ್ದಾನೆ.

ಭಾರತದಂಥ ದೇಶದಲ್ಲಿ ಕೆಲವೇ ಕೆಲವು ಸಮುದಾಯಕ್ಕೆ ಸೀಮಿತವಾಗಿದ್ದ ಕಲೆಗಳನ್ನು ಶ್ರೇಷ್ಠವೆಂಬಂತೆ ಬಿಂಬಿಸಿದ್ದು ಅಲ್ಲದೆ ಅಂತಹ ಕಲೆಗಳಿಗೆ ವೇದಿಕೆಗಳ ಮೂಲಕ ಪ್ರಚಾರಗಳು ದೊರೆಯುತ್ತಾ ಬಂದಿದೆ. ಚಮ್ಮಾರಿಕೆ, ಕುಲುಮೆ, ಕುಂಬಾರಿಕೆ, ಬೇಟೆ ಇತ್ಯಾದಿ ತಳ ಸಮುದಾಯದ ಕಲೆಗಳ ಸ್ಪರ್ಧೆಯನ್ನು ಇವತ್ತಿನ ಟಿವಿ ಶೋಗಳಲ್ಲಿ ನಾವು ನೋಡಲು ಸಾಧ್ಯವಿಲ್ಲ. ಸಂಗೀತದ ವಿಚಾರಕ್ಕೆ ಬಂದರೆ ತಳಸಮುದಾಯದ ಕಲೆಗಳಾದ ಚರ್ಮದ ತಮಟೆ, ಉರ್ಮೆ, ಸೋಬಾನ, ಜೋಗತಿ ಜೋಗಪ್ಪರ ಹಾಡು, ಇದೇ ಹನುಮಂತನ ಲಂಬಾಣಿ ಸಮುದಾಯದ ಅತ್ತುಕೊಂಡು ಹಾಡುವ ಡಾವ್ಳೋ, ಮೇರಗಳು, ದೇವಸ್ಥಾನದ ಹೊರಗೇ ನಿಂತು ಒಂದಿಡೀ ದಿನ ಹಾಡುವ ಅಸಾದಿಗಳ ಹಾಡು…. ಇವೆಲ್ಲವಕ್ಕೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧೆ ನಡೆಸುವುದು ಹಾಗಿರಲಿ ಕಲ್ಪನೆ ಮಾಡಿಕೊಳ್ಳುವುದೂ ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿಯೂ ಯಾವುದೇ ಸಾಂಪ್ರದಾಯಿಕ ತರಬೇತಿ ಪಡೆಯದ, ಹಳ್ಳಿಗಾಡು ಬಡ ಕುರಿಗಾಯಿ ಕುಟುಂಬದ ಹನುಮಂತು ಇಂದು ಸರಿಗಮಪ-15 ರಲ್ಲಿ ಫೈನಲ್‌ಗೆ ಆಯ್ಕೆ ಆದದ್ದು ನಿಜಕ್ಕೂ ದೊಡ್ಡ ಸಾಧನೆಯೇ ಎನ್ನಬಹುದು.

ಆದರೆ ಟಿವಿ ನಿರೂಪಕರು-ಚಾನೆಲ್‌ಗಳ ಜನರ ಮುಗ್ಧತೆಗಳನ್ನು ಬಂಡವಾಳವಾಗಿಸಿಕೊಂಡು ತಮ್ಮ ಟಿಆರ್‌ಪಿ ದಾಹವನ್ನು ತೀರಿಸಿಕೊಳ್ಳುವುದರಲ್ಲಿ ವಿಕೃತವಾಗಿ ಪಳಗಿದ್ದಾರೆ. ಹಳ್ಳಿ ಹೈದಾ ಪ್ಯಾಟೇಗ್ ಬಂದ ಖ್ಯಾತಿಯ ರಾಜೇಶ್ ಅನ್ನುವ ಸಿದ್ಧಿ ಜನಾಂಗದ ಕಾಡು ಹುಡುಗನ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಇದೇ ಟಿವಿ ಸಿನೆಮಾ ರಂಗದವರು ಅವನನ್ನು ಆತ್ಮಹತ್ಯೆ ಎಂಬ ಕೂಪಕ್ಕೆ ತಳ್ಳಿ ಕೊಲೆ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.

ಇತ್ತೀಚೆಗೆ ಪ್ರಸಾರವಾದ ಸರಿಗಮಪ ಸೆಮಿಫೈನಲ್‌ನ ಸಂಚಿಕೆಯಲ್ಲಿ ಹನುಮಂತು ಹಾಡಿದ ನಂತರ ನಿರೂಪಕಿ ಬಂದು ತುಂಬಾ ಚೆನ್ನಾಗಿ ಹಾಡಿದೆ ಮತ್ತೊಮ್ಮೆ ನಮಗಾಗಿ ಹಾಡು ಎನ್ನುತ್ತಾಳೆ. ಅವನು ಹಾಡು ಶುರು ಮಾಡಿದ ಸ್ವಲ್ಪ ಹೊತ್ತಿಗೆ ಹನುಮಂತನ ತಾಯಿ ವೇದಿಕೆ ಮೇಲೆ ಬರುತ್ತಾರೆ. ಆತನಿಗೆ ಆಶ್ಚರ್ಯವಾಗಿ ಹಾಡು ನಿಲ್ಲಿಸುತ್ತಾನೆ. ಈಗ ನಿರೂಪಕಿ ತಾಯಿಗೆ ಸಂಬಂಧಿಸಿದ ಹಾಡು ಹಾಡುತ್ತಿದ್ದೀಯ ಅದನ್ನು ನಿನ್ನ ತಾಯಿಯ ಮುಖವನ್ನು ನೋಡುತ್ತಾ ಹಾಡು ಎನ್ನುತ್ತಾಳೆ. ಹನುಮಂತು ತಾಯಿಯ ಮುಖ ನೋಡುತ್ತಾ ಹಾಡಲು ಶುರು ಮಾಡಿದಾಗ, ಪಾಪ ಆ ತಾಯಿಗೆ ಏನು ನಡೀತಿದೆ ಎನ್ನುವುದು ತಿಳಿಯದೆ ಮಗನ ಕಡೆ ನೋಡದೆ ಪ್ರೇಕ್ಷಕರ ಕಡೆ ನೋಡುತ್ತಾ ನಿಲ್ಲುತ್ತಾಳೆ. ಕ್ಯಾಮೆರಾ ತಾಯಿಯ ಕಣ್ಣಿಗೆ ಫೋಕಸ್ ಆಗುತ್ತದೆ. ಆಕೆ ಅಷ್ಟೇನು ಭಾವುಕಳಾಗದಂತೆ ಇದ್ದದ್ದು ಗಮನಿಸಿದಳೇನೋ ನಿರೂಪಕಿ, ತಾಯಿಗೆ ಮತ್ತೆ ಪ್ರಶ್ನೆ ಮಾಡುತ್ತಾಳೆ, ಮಗನ ನೆನಪು ಆಗುತ್ತಿತ್ತಾ? ನೆನಪಾದಾಗ ಏನು ಮಾಡುತ್ತಿದ್ರಿ? ಎಂದು.

ತಾಯಿ ಭಾವುಕರಾಗದೆ ಉತ್ತರ ನೀಡಿದ್ದು ನಿರೂಪಕಿಗೆ ಸಮಾಧಾನವಾಗಲಿಲ್ಲ ಅನಿಸುತ್ತೆ. ಆ ಹೊತ್ತಿಗೆ ವೇದಿಕೆಗೆ ಬಂದಿದ್ದ ಹನುಮಂತನ ತಂದೆಗೂ ಇದೇ ರೀತಿಯ ಬಗೆಬಗೆಯ ಪ್ರಶ್ನೆ. ಮತ್ತು ಎಲ್ಲರಿಗೂ ಹನುಮಂತನ ತಂದೆಗಾಗಿ ’ಅಪ್ಪ ಐ ಲವ್ಯೂ ಅಪ್ಪ ಹಾಡು ಹೇಳುವಂತೆ ಕೇಳುತ್ತಾಳೆ. ಒಟ್ಟಾರೆಯಲ್ಲಿ ಏನೆಲ್ಲಾ ಮಾಡಿ ಅಲ್ಲಿ ಭಾವನಾತ್ಮಕ ವಾತಾವರಣ ಸೃಷ್ಟಿ ಮಾಡಬಹುದೋ ಅದನ್ನು ಮಾಡುವ ಪ್ರಯತ್ನ ಮಾಡುತ್ತಿದ್ದಳು. ಹಾಡು ಮುಗಿಯುವ ಹೊತ್ತಿಗೆ ತನ್ನ ತಂದೆಯನ್ನು ನೆನೆದು ತೀರ್ಪುಗಾರ ರಾಜೇಶ್ ಕೃಷ್ಣನ್ ಅವರನ್ನು ಒಳಗೊಂಡಂತೆ ಒಂದಷ್ಟು ಜನ ಅಳುವವರನ್ನು ಕ್ಯಾಮರಾ ಕಣ್ಣಿಗೆ ಕಾಣಿಸುವುದರಲ್ಲಿ ಸಫಲರಾಗುತ್ತಾರೆ. ಈ ಹೊತ್ತಿಗೆ ಅಲ್ಲೇನು ನಡೆಯುತ್ತಿದೆ ಎನ್ನುವ ಅರಿವು ಇಲ್ಲದ ರೀತಿಯಲ್ಲಿ ಹನುಮಂತನ ಕುಟುಂಬ ವೇದಿಕೆ ಮೇಲೆ ಸುಮ್ಮನೆ ನಿಂತಿದ್ದರು.

ಈ ಕಾರ್ಯಕ್ರಮ ನೋಡುತ್ತಿದ್ದ ಸೂಕ್ಷ್ಮ ವೀಕ್ಷಕರಿಗೆ ಇದೆಲ್ಲವೂ ಟಿಆರ್‌ಪಿ ಗೇಮ್ ಎನ್ನುವುದು ಅರ್ಥವಾಗುತ್ತಿತ್ತು. ಸೆಮಿ ಫೈನಲ್ ಪ್ರಸಾರ ಆಗುವ ಮೊದಲೇ ದಿನಪತ್ರಿಕೆಗಳಲ್ಲಿ ಸೆಮಿಫೈನಲ್ ಕಾರ್ಯಕ್ರಮದಲ್ಲಿ ಭಾವನಾತ್ಮಕ ಸನ್ನಿವೇಶಗಳು ಇರಲಿವೆ ಎಂದು ಸುದ್ಧಿ ಮಾಡಿಸಿದ್ದನ್ನು ಗಮನಿಸಿದರೆ ರಿಯಾಲಿಟಿ ಶೋಗಳಲ್ಲಿ ನಡೆಯುವ ಭಾವನಾತ್ಮಕ ಸನ್ನಿವೇಶಗಳು ಟಿಆರ್‌ಪಿಗಾಗಿ ಜನರನ್ನು ಹಿಡಿದಿಡಲು ಮಾಡುವ ಪೂರ್ವನಿಯೋಜಿತ ಪ್ಲಾನ್‌ಗಳು ಎಂಬ ಅನುಮಾನ ಹುಟ್ಟುತ್ತದೆ. ಹಲವು ಬಾರಿ ನೂರಕ್ಕೆ ನೂರು ಅಂಕ ಪಡೆದಿರುವ ಹನುಮಂತನಿಗಿಂತ ಇತರರು ಚೆನ್ನಾಗಿ ಹಾಡುತ್ತಾರೆ ಎಂದು ವಾದಿಸುವವರೂ ಇದ್ದಾರೆ. ಕಾರ್ಯಕ್ರಮದ ಕೊನೆಯವರೆಗೂ ಜನರನ್ನು ಹಿಡಿದಿಡಲು ಮುಗ್ಧತೆಯನ್ನು ಅತಿಯಾಗಿ ವೈಭವೀಕರಿಸುವ ಅಥವಾ ತಮಾಷೆ ಮಾಡುವುದನ್ನು ನಡೆಸಿಕೊಂಡೇ ಅವರನ್ನು ಫೈನಲ್‌ವರೆಗೂ ತರುತ್ತಾರೆ ಎನ್ನುವ ಆಪಾದನೆ ಸಹ ಹೊಸದೇನಲ್ಲ.

ಇದೆಲ್ಲದರ ನಡುವೆಯೂ ಹೆಚ್ಚು ಹೆಗಡೆ, ಹೊಳ್ಳ, ರಾವ್, ಶರ್ಮ, ಭಟ್‌ಗಳೇ ತುಂಬಿರುವ ಇಂತಹ ಸಂಗೀತ ವೇದಿಕೆಗಳ ನಡುವೆ ಯಾವುದೋ ಮೂಲೆಯ ಹಳ್ಳಿಯೊಂದರ ಪ್ರತಿಭೆಗೆ ಅವಕಾಶ ಸಿಗುತ್ತಿದೆ ಅನ್ನುವುದು ನಿಜವೇ ಆದರೂ, ಇದು ಟಿವಿ ಚಾನಲ್ ಅವರ ಆಟ ಮತ್ತು ಅವರದ್ದೇ ಮೈದಾನ ಅನ್ನುವುದು ವಾಸ್ತವ. ಇಂತಹ ಯಾವುದೇ ವೈಭವೀಕರಣ ಮಾಡದೇ ಭಾವಾವೇಶಕ್ಕೆ ಒಳಗಾಗದೇ ವಸ್ತುನಿಷ್ಠವಾಗಿ ನಡೆದುಕೊಳ್ಳುತ್ತಿದ್ದವರು ಹಂಸಲೇಖ ಅವರು. ಆದರೆ ಟೀವಿ ಚಾನೆಲ್‌ಗಳ ಟಿಆರ್‌ಪಿ ದಾಹದಿಂದ ಸೃಷ್ಟಿಗೊಳ್ಳುವ ಅನಿವಾರ್ಯ ಸಂದರ್ಭಗಳ ಮುಂದೆ ಅವರು ಕೂಡಾ ಸೋತು ರಾಜಿಯಾಗುವ ಮರ್ಜಿಗೆ ಸಿಲುಕಿದರಾ ಎನ್ನುವ ಪ್ರಶ್ನೆ ನಿಜಕ್ಕೂ ಅವರ ದೇಸಿ ಸಂಗೀತ ಪ್ರೀತಿಯನ್ನು ಅಪಾರವಾಗಿ ಅಭಿಮಾನಿಸುತ್ತಿದ್ದ ಸೂಕ್ಷ್ಮಸಂವೇದನೆಯ ಅಭಿಮಾನಿಗಳನ್ನು ಕಾಡುತ್ತಿದೆ.

ಹಳ್ಳಿಗಾಡಿನ ಯುವತಿ ಯುವಕರು ತಮ್ಮದೇ ಆದ ಜೀವನಶೈಲಿಯಲ್ಲಿ ಬದುಕುತ್ತಿರುತ್ತಾರೆ. ಅವರಿಗೆ ಅವರದ್ದೇ ಸಂಸ್ಕೃತಿ ಇರುತ್ತೆ. ಜೀವಪ್ರೀತಿಯೇ ಆ ಸಂಸ್ಕೃತಿಯ ಜೀವಾಳ. ಮುಗ್ಧತೆ ಅಲ್ಲಿ ಸಲೀಸಾಗಿ ಕಾಣಸಿಗುವ ಗುಣಲಕ್ಷಣ. ‘ಪ್ರತಿಭೆಗೆ ಅವಕಾಶ’ ಎಂಬ ಹೆಸರಲ್ಲಿ ಅವರನ್ನು ಸರಕಾಗಿಸಿಕೊಳ್ಳುವುದು ನಿಜಕ್ಕೂ ಕ್ರೂರ ಜಗತ್ತಿನ ಹೇಯ ಕೃತ್ಯ. ಹನುಮಂತಣ್ಣ ಮೊದಲ ಬಾರಿ ಶರೀಫಜ್ಜನ ಹಾಡು ಹಾಡಿ ಈ ರಿಯಾಲಿಟಿ ಶೋಗೆ ಆಯ್ಕೆಯಾದಾಗಲೇ ನ್ಯಾಯಪಥ ಪತ್ರಿಕೆ ಎಚ್ಚರಿಕೆಯ ಬರಹ ಪ್ರಕಟಿಸಿತ್ತು. ಅವನ ಪ್ರತಿಭೆ ಬೆಳಗಲಿ, ಆದರೆ ಮುಗ್ಧತೆ ಸರಕಾಗದಿರಲಿ ಎಂದು ಆಶಿಸಿತ್ತು. ಇದೀಗ ಹನುಮಂತುಗಿಂತ ಚೆನ್ನಾದ ಹಾಡುಗಾರಿಕೆ ಇದ್ದವರನ್ನೂ ಹಿಮ್ಮೆಟ್ಟಿಸಿ ಆತನಿಗೆ ಫೈನಲ್‌ನಲ್ಲಿ ಜಾಗ ಕೊಟ್ಟಿರೋದನ್ನು ನೋಡಿದರೆ ನಿಜಕ್ಕೂ ಅದು ಅವನ ಪ್ರತಿಭೆಗೆ ಸಂದ ಗೌರವಕ್ಕಿಂತ ಹೆಚ್ಚಾಗಿ ಅವನನ್ನು ಫೈನಲ್‌ಗೆ ಟಿಆರ್‌ಪಿ ಸರಕಾಗಿ ಬಳಸಿಕೊಳ್ಳುವ ಟೀವಿಯವರ ಹುನ್ನಾರವಾಗಿ ಕಾಣಿಸುತ್ತೆ.

ಎಷ್ಟೇ ಆಗಲಿ ಅದು ಸಂಗೀತ ಸ್ಪರ್ಧೆ. ಅಲ್ಲಿ ಸಂಗೀತವೇ ಮುಖ್ಯವಾಗಬೇಕೆ ವಿನಃ ಬೇರೆಯ ಕಾರಣಗಳಲ್ಲ. ಹನುಮಂತನ ಆಯ್ಕೆಯಲ್ಲಿ ಈ ಬೇರೆ ಕಾರಣಗಳೇ ಎದ್ದು ಕಾಣುತ್ತಿರೋದು ವಿಪರ್ಯಾಸ. ಒಂದೊಮ್ಮೆ ಅಂತಹ ಯಾವ ಲೆಕ್ಕಾಚಾರಗಳೂ ಇಲ್ಲದೆ ತನ್ನ ಹಾಡಿನ ಪ್ರತಿಭೆಯಿಂದಲೇ ಹನುಮಂತು ಈ ಸ್ಥಾನಕ್ಕೇರಿದ್ದರೆ ಪತ್ರಿಕೆ ಆತನಿಗೆ ನಿಜವಾಗಲೂ ಶುಭ ಹಾರೈಸುತ್ತದೆ. ಯಾಕೆಂದರೆ, ಕೆಲ ಪ್ರಬಲ ಸಮುದಾಯಗಳಿಗಷ್ಟೇ ಸೀಮಿತವಾಗಿದ್ದ ಇಂಥಾ Sophisticated ಕಲೆಗಳ ಚಾರಿತ್ರಿಕ trait ಅನ್ನು ಮೀರಿ ಆತ ಬೆಳೆದಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಆದಾಗ್ಯೂ ಈ ಫ್ಯಾಂಟಸಿ ಟೀವಿ ಜಗತ್ತಿನ ವ್ಯಾಮೋಹಗಳ ಒಳಗೆ, ನಿಭಾಯಿಸಲಾಗದ ‘ಯಶಸ್ಸಿನ’ ಉಸುಕುನೆಲದೊಳಗೆ ಇಂಥಾ ಪ್ರತಿಭೆಗಳು ಹೂತು ಹೋಗದಿರಲಿ ಎಂಬುದಷ್ಟೇ ನಮ್ಮ ಕಾಳಜಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...