Homeಅಂಕಣಗಳುಪ್ರಧಾನ ಚೌಕಿದಾರರ ಕುರಿತೂ ಎಚ್ಚರವಿರಲಿ!

ಪ್ರಧಾನ ಚೌಕಿದಾರರ ಕುರಿತೂ ಎಚ್ಚರವಿರಲಿ!

- Advertisement -
- Advertisement -

ನಿಖಿಲ್ ಕೊಲ್ಫೆ |

ಕಳೆದ ಎರಡು ಸಂಚಿಕೆಗಳಲ್ಲಿ ಸರ್ವಾಧಿಕಾರದ ಮುಖ್ಯ ಗುಣಲಕ್ಷಣಗಳು, ಇನ್ನಷ್ಟು ಗುಣಲಕ್ಷಣಗಳನ್ನು ಮೇಲುಮೇಲಿಗೆ ನೋಡಿದೆವು. ಈ ಸಂಚಿಕೆಯಲ್ಲಿ ಅದರ ಮತ್ತಷ್ಟು ಗುಣಲಕ್ಷಣಗಳನ್ನು ನೋಡೋಣ.
ಸಾಮಾನ್ಯವಾಗಿ ಎಲ್ಲಾ ಸರ್ವಾಧಿಕಾರಿಗಳು, ಧರ್ಮದ ನೆಲೆಯಲ್ಲಿ (ಲಿಬಿಯಾ, ಸುಡಾನ್ ಮುಂತಾದ ಮುಸ್ಲಿಂ ರಾಷ್ಟ್ರಗಳು), ಭಾಷೆಯ ನೆಲೆಯಲ್ಲಿ (ಸ್ಪೇನ್‍ನಲ್ಲಿ ಸ್ಪಾನಿಷ್- ಬಾಸ್ಕ್), ಜನಾಂಗದ ನೆಲೆಯಲ್ಲಿ (ಜರ್ಮನಿಯ ಜನಾಂಗೀಯ ರಾಷ್ಟ್ರೀಯವಾದ, ದಕ್ಷಿಣ ಆಫ್ರಿಕಾದಲ್ಲಿದ್ದ ಅಪಾರ್ಥೀಡ್ ವರ್ಣಭೇದ ನೀತಿ), ಬುಡಕಟ್ಟುಗಳ ನೆಲೆಯಲ್ಲಿ (ಹೆಚ್ಚಿನ ಆಫ್ರಿಕನ್ ದೇಶಗಳು), ಸುಳ್ಳು ತತ್ವಗಳ ನೆಲೆಯಲ್ಲಿ (ಕಾಂಬೋಡಿಯಾ ಇತ್ಯಾದಿ) ರಾಷ್ಟ್ರೀಯತೆಯ ನೆಲೆಯಲ್ಲಿ (ಇಟಲಿ, ಅಜೆರ್ಂಟೀನಾ, ಮ್ಯಾನ್ಮಾರ್, ಫಿಲಿಪೈನ್ಸ್ ಇತ್ಯಾದಿ) ತಮ್ಮ ಬಲವನ್ನು ಪಡೆದುಕೊಂಡಿದ್ದರು, ಪಡೆದುಕೊಂದಿದ್ದಾರೆ. ನೆರೆಯ ರಾಷ್ಟ್ರಗಳನ್ನು, ಬೇರೆ, ಭಾಷೆ, ಬುಡಕಟ್ಟು, ಜನಾಂಗಗಳ ಜನರನ್ನು ಶತ್ರುಗಳಂತೆ ಬಿಂಬಿಸಿ, ಆಂತರಿಕ ಒಗ್ಗಟ್ಟನ್ನು ಪ್ರತಿಪಾದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಸರ್ವಾಧಿಕಾರಿಗಳ ಪ್ರಮುಖ ಕಾರ್ಯತಂತ್ರ.
ಭಾರತದಲ್ಲಿ ಸರ್ವಾಧಿಕಾರಿ ಆಡಳಿತ ಎಂದಾದರೂ ಬಂದರೆ, ಅದು ಧರ್ಮ, ಜಾತಿ ಮತ್ತು ಹುಸಿ ರಾಷ್ಟ್ರೀಯತೆ ಮತ್ತು ಪೊಳ್ಳು ದೇಶಪ್ರೇಮದ ಹೆಸರಲ್ಲಿ ಬರಲಿದೆ. ಅದುದರಿಂದಲೇ ಇಲ್ಲಿ ಸದ್ಯಕ್ಕೆ ನಡೆಯುತ್ತಿರುವ ವಿದ್ಯಮಾನಗಳು ಭಯ ಹುಟ್ಟಿಸುತ್ತಿರುವುದು! ಹಿಂದೂತ್ವದ ಹೆಸರಿನಲ್ಲಿ ಮುಸ್ಲಿಂ, ಕ್ರೈಸ್ತ ಸಮುದಾಯಗಳ ದೇಶಪ್ರೇಮವನ್ನು ಶಂಕಿಸುವಂತೆ ಮಾಡಿ, ಅವುಗಳ ವಿರುದ್ಧ ಅಸಹನೆಯನ್ನು ಮೂಡಿಸುವ ಪ್ರಯತ್ನಗಳನ್ನು- ಆರ್ಯನ್ ಶ್ರೇಷ್ಟತೆಯ ಹೆಸರಿನಲ್ಲಿ ಯಹೂದಿಗಳ ವಿರುದ್ಧ ಜರ್ಮನಿಯ ಸಾಮಾನ್ಯ ಪ್ರಜೆಗಳನ್ನು ಎತ್ತಿಕಟ್ಟಿದ ಹಿಟ್ಲರನ ನಾಜಿತಂತ್ರಗಳ ಕಡೆಗೆ ಇಟ್ಟ ಹೆಜ್ಜೆ ಎಂದು ಊಹಿಸಿದರೆ ತಪ್ಪಿಲ್ಲ. ಗೋಮಾಂಸ, ಸಾಗಿಸುತ್ತಿದ್ದರು, ಮನೆಯ ಫ್ರಿಜ್ಜಿನಲ್ಲಿ ಗೋಮಾಂಸ ಇಟ್ಟಿದ್ದಾರೆ ಎಂಬ ಸಂಶಯ ಇತ್ಯಾದಿ ಕ್ಷುಲ್ಲಕ ಕಾರಣಗಳಿಗಾಗಿ ನಡೆದ ದಾಳಿಗಳನ್ನು ಈ ನಿಟ್ಟಿನಲ್ಲಿ ನೋಡಬೇಕು.
‘ಹಿಂದೂ ಒಂದು’ ಎನ್ನುವ ಘೋಷಣೆಯ ಬೆನ್ನಲ್ಲೇ, ಕುದುರೆ ಮೇಲೆ ಕುಳಿತರು, ಬೂಟುಧರಿಸಿದರು, ಬಾವಿಯ ನೀರು ತೆಗೆದರು ಇತ್ಯಾದಿ ನೆಪಗಳನ್ನು ಮುಂದಿಟ್ಟು ಸವರ್ಣೀಯರು ದಲಿತರನ್ನು ಥಳಿಸಿದ ಬೆತ್ತಲೆಗೊಳಿಸಿದ, ಕೊಂದ ಘಟನೆಗಳಿಗೆ ಬೇರೇನು ವಿವರಣೆ ಕೊಡೋಣ!? ಜರ್ಮನಿಯಲ್ಲಿಯೂ ಅಲೆಮಾರಿ ಜಿಪ್ಸಿಗಳನ್ನು ನಿಷ್ಪ್ರಯೋಜಕ ಕೀಳು ಜನಾಂಗ ಎಂದು ಕಂಡಕಂಡಲ್ಲಿ ತಂಡೋಪತಂಡವಾಗಿ ಕೊಲ್ಲಲಾಗಿತ್ತು.
ನಾಜಿ ಜರ್ಮನಿಯು ನೆರೆಯ ಪೋಲೆಂಡ್ ನಮ್ಮದು, ಆಸ್ಟ್ರಿಯಾ ನಮ್ಮದು ಎಂದು ಹೇಳುತ್ತಲೇ, ಜರ್ಮನ್ ಜನರಲ್ಲಿ ದ್ವೇಷ ಹುಟ್ಟಿಸಿ ಅವುಗಳ ಮತ್ತು ಫ್ರಾನ್ಸ್, ಸ್ಕ್ಯಾಂಡಿನೇವಿಯನ್ ದೇಶಗಳ ಸಹಿತ ನೆರೆಹೊರೆಯ ದೇಶಗಳ ಮೇಲೆ ದಂಡೆತ್ತಿಹೋಗಿತ್ತು. ನಮ್ಮಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್ ಒಳಗೊಂಡಂತಹ ಅಖಂಡ ಭಾರತದ ಸಂಘ ಪರಿವಾರದ ಕಲ್ಪನೆಗೂ ಇದಕ್ಕೂ ಏನಾದರೂ ಸಾಮ್ಯ ಕಾಣುತ್ತಿದೆಯೆ!?
ಅಲ್ಲಿ ಮಾಡಿದಂತೆಯೇ ಇಲ್ಲಿಯೂ ಬುದ್ಧಿಜೀವಿಗಳ ಕೊಲೆಗಳು, ಅವರ ಮೇಲೆ ದಾಳಿಗಳು ನಡೆಯುತ್ತಿವೆ! ವಿರೋಧಿಸಿದವರಿಗೆ ದೇಶದ್ರೋಹಿ ಪಟ್ಟಕಟ್ಟಿ ಪಾಕಿಸ್ತಾನಕ್ಕೆ ಕಳಿಸುವ ಮಾತಾಗುತ್ತಿರುವುದು ಬರೇ ಕಾಕತಾಳೀಯವೇ? ಅಥವಾ ಯೋಜಿತ ಸಂಚಿನ ಭಾಗವೆ? ಇವೆಲ್ಲವನ್ನೂ ಮುಂದೆ ನೋಡೋಣ.
ಸರ್ವಾಧಿಕಾರದ ಇನ್ನೊಂದು ಲಕ್ಷಣವೆಂದರೆ ಏಕಪಕ್ಷೀಯ ನಿರ್ಧಾರ. ಒಬ್ಬ ವ್ಯಕ್ತಿ ಅಥವಾ ಒಂದು ಜಂಟಾ ಅಥವಾ ಗುಂಪಿನದ್ದೇ ಕಾರುಬಾರು. ಅವರ ನಿರ್ಧಾರಗಳನ್ನು ವಿರೋಧಿಸುವ ಧೈರ್ಯ ಮಾಡಿದವರು ಮೂಲೆಗುಂಪು. ಗಡಿಪಾರು, ಮರಣದಂಡನೆ ಇತ್ಯಾದಿಗಳು ಕ್ರೂರ ಸರ್ವಾಧಿಕಾರಗಳಲ್ಲಿ ಕಟ್ಟಿಟ್ಟ ಬುತ್ತಿ. ನಮ್ಮ ದೇಶದಲ್ಲೇ ನಡೆಯುತ್ತಿರುವ ವ್ಯಕ್ತಿಪೂಜೆಯನ್ನು ನೋಡಿದರೆ, ಇದು ಪ್ರಜಾಪ್ರಭಯತ್ವವು ಪರೋಕ್ಷ ಸರ್ವಾಧಿಕಾರದತ್ತ ಹೊರಳುವ ಲಕ್ಷಣದಂತೆ ಕಾಣುತ್ತಿದೆ. ಬಿಜೆಪಿಯಲ್ಲಿಯೇ ಆಡ್ವಾಣಿ, ಯಶವಂತ ಸಿನ್ಹಾ ಅವರಂತಹ ಹಿರಿಯ ನಾಯಕರನ್ನು ಹೇಗೆ ಮೂಲೆಗುಂಪು ಮಾಡಲಾಯಿತು ಎಂಬುದನ್ನು ನಾವು ಗಮನಿಸಬಹುದು.
ಇನ್ನೊಂದು ಲಕ್ಷಣವೆಂದರೆ, ಮಾನವ ಮತ್ತು ವೈಯಕ್ತಿಕ ಹಕ್ಕುಗಳ ದಮನ. ಪ್ರಜೆಯ ಅಧಿಕಾರಗಳನ್ನು ಮೊಟಕುಗೊಳಿಸುವುದು, ಅವರ ಚಲನವಲನಗಳ ಮೇಲೆ ಗುಪ್ತವಾಗಿ ಕಣ್ಣಿಡುವುದು, ಕಿರುಕುಳ ನೀಡುವುದು. ಇಂತಹ ಹಲವಾರು ಉದಾಹರಣೆಗಳನ್ನು ಓದುಗರು ಗಮನಿಸಿರಬಹುದು. ‘ನಗರ ನಕ್ಸಲ್’ ಪಿಳ್ಳೆ ನೆಪದ ಮೇಲೆ ಬುದ್ಧಿಜೀವಿಗಳ ಬಂಧನ, ಸಂಘಟಿತ ಅಪರಾಧಗಳ ಕಾಯ್ದೆಗಳ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಇತ್ಯಾದಿ ಮತ್ತಿನ್ನೇನು? ‘ಅಧಾರ್’ ಬಗ್ಗೆ ವ್ಯಕ್ತವಾಗಿರುವ ಅತಂಕಗಳ ಹಿಂದೆ ಇದೇ ಕಾರಣವಿದೆ. ಹತ್ತು ತನಿಖಾ ಸಂಸ್ಥೆಗಳಿಗೆ ನಾಗರಿಕರ ಇ-ಮೇಲ್ ಸಹಿತ ಸಾಮಾಜಿಕ ಜಾಲತಾಣಗಳ ಮಾಹಿತಿ ಪಡೆಯುವ ಅಧಿಕಾರ ನೀಡಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬಹುದೆ?
ಸರ್ವಾಧಿಕಾರಗಳಲ್ಲಿ ಮಾತ್ರ ಇದು ಅತಿರೇಕಕ್ಕೆ ಹೋಗುತ್ತದೆ. ವಿರೋಧಿಗಳು ಮತ್ತು ಸರಕಾರದ ವಿರುದ್ಧ ಇರುವ ನಾಗರಿಕರನ್ನು ಗುರುತಿಸಿ, ಗುಪ್ತಚರ್ಯೆ ನಡೆಸಿ, ದಮನಿಸಲು ಜರ್ಮನಿಯಲ್ಲಿ ಅತ್ಯಂತ ಕ್ರೂರ ಗುಪ್ತ ರಾಜಕೀಯ ಪೊಲೀಸ್ ಪಡೆಯಾಗಿದ್ದ ‘ಗೆಸ್ಟಾಪೋ’ವನ್ನು ಸ್ಥಾಪಿಸಲಾಗಿತ್ತು. ಈ ಹೆಸರು ಕೇಳಿದರೆ ನಾಗರಿಕರು ಮಾತ್ರವಲ್ಲ, ಸಾಮಾನ್ಯ ಪೊಲೀಸರೂ ಗಡಗಡ ನಡುಗುತ್ತಿದ್ದರು. ಲಕ್ಷಾಂತರ ಜರ್ಮನರನ್ನು ಮತ್ತು ಆಕ್ರಮಿತ ದೇಶಗಳ ಪ್ರಜೆಗಳನ್ನು ಚಿತ್ರಹಿಂಸೆ ಮಾಡಿ ಕೊಂದ ಕುಖ್ಯಾತಿ ಈ ‘ಗೆಸ್ಟಾಪೋ’ ರಾಕ್ಷಸರಿಗಿದೆ. ಹಿಟ್ಲರ್ ಬಾಲಬಡುಕ ಹೈನ್ರಿಚ್ ಮ್ಯುಲ್ಲರ್ ಇದರ ಮುಖ್ಯಸ್ಥನಾಗಿದ್ದ.
ಸರ್ವಾಧಿಕಾರಕ್ಕೆ ಮಾನವ ಹಕ್ಕುಗಳ ಮೇಲೆ ಎಳ್ಳಷ್ಟು ಕಾಳಜಿ ಇರುವುದಿಲ್ಲ! ಮ್ಯಾನ್ಮಾರ್ ಉದಾಹರಣೆ ತೆಗೆದುಕೊಂಡರೆ 2008ರಲ್ಲಿ ದೇಶವು ಭಾರೀ ಚಂಡಮಾರುತಕ್ಕೆ ತುತ್ತಾಗಿ ಜನರು ಅನ್ನ, ನೀರು, ಆಶ್ರಯವಿಲ್ಲದೇ ಸಾಯುತ್ತಿದ್ದಾಗ ಅಲ್ಲಿನ ಸರ್ವಾಧಿಕಾರವು ಬರಲಿದ್ದ ಅಣಕು ಚುನಾವಣೆಯಲ್ಲಿ ಜನರು ತನ್ನನ್ನು ಗೆಲ್ಲಿಸುವ ತನಕ ಹರಿದುಬಂದ ವಿದೇಶಿ ನೆರವನ್ನು ಹಂಚದೇ ತಡೆಹಿಡಿದಿತ್ತು. ಭಾರತ ಸರಕಾರ ಸುನಾಮಿ ಮತ್ತು ಕೇರಳ ದುರಂತ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರಗಳು ಕೊಡಮಾಡಿದ ನೆರವನ್ನೂ ಧಾಷ್ರ್ಯದಿಂದ ನಿರಾಕರಿಸಿರುವುದು ಓದುಗರಿಗೆ ನೆನಪಿರಬಹುದು.
ಮತ್ತೊಂದು ಲಕ್ಷಣವೆಂದರೆ ಸಮಾನಾಂತರ ವ್ಯವಸ್ಥೆ. ಸಾಮಾನ್ಯ ಸೇನಾಪಡೆಗಳಿಗೆ ಸಮಾನಂತರವಾಗಿ ‘ವಾಫೆನ್ ಎಸ್‍ಎಸ್’ ಎಂಬ ಪಡೆಗಳನ್ನು ಸ್ಥಾಪಿಸಲಾಗಿತ್ತು. ಎಸ್‍ಎಸ್ ಎಂದರೆ ‘ಶುಡ್ಝ್ ಸ್ಟ್ರಾಫೆಲ್’ ಎಂಬುದರ ಸಂಕ್ಷಿಪ್ತ. ಅದು ಅಡಳಿತ ಪಕ್ಷದ ಘಟಕ! ಅದರ ಸೇನಾ ವಿಭಾಗವೇ ವಾಫೆನ್ ಎಸ್‍ಎಸ್. ಇದರಲ್ಲಿ ಇದ್ದದ್ದು ಹಿಟ್ಲರನ ಕುರುಡು ಭಕ್ತರು! ‘ವರ್‍ಮ್ಯಾಷ್’ ಎಂದು ಕರೆಯಲ್ಪಡುತ್ತಿದ್ದ ಸಾಮಾನ್ಯ ಸೇನೆಯ ಹಿರಿಯ ಅಧಿಕಾರಿ ಕೂಡಾ ಈ ಎಸ್‍ಎಸ್‍ನ ಕಿರಿಯ ಅಧಿಕಾರಿಗೂ ಹೆದರಬೇಕಾಗಿತ್ತು! ಹೈನ್ರಿಚ್ ಹಿಮ್ಲರ್ ಎಂಬ ಬುದ್ಧಿವಂತ ಕ್ರೂರಿ ಇದರ ಮುಖ್ಯಸ್ಥನಾಗಿದ್ದ.
ಮಾಧ್ಯಮಗಳ ನಿಯಂತ್ರಣ ಸರ್ವಾಧಿಕಾರದ ಇನ್ನೊಂದು ಲಕ್ಷಣ. ನಾಜಿ ಜರ್ಮನಿಯಲ್ಲಿ ಎಲ್ಲಾ ಸರಕಾರಿ ವಿರೋಧಿ ಪತ್ರಿಕೆಗಳನ್ನು ನಿಷೇಧಿಸಿ, ಮುಟ್ಟುಗೋಲು ಹಾಕಲಾಗಿತ್ತು. ಪತ್ರಕರ್ತರನ್ನು ಜೈಲಿಗೆ ತಳ್ಳಲಾಗಿತ್ತು. ನಾಜಿ ಪಕ್ಷವೇ ಸರಕಾರದ ತುತ್ತೂರಿ ಊದುವ, ವಿರೋಧಿಗಳು ಮತ್ತು ಯಹೂದಿ, ಕಮ್ಯುನಿಸ್ಟರ ಮೇಲೆ ವಿಷಕಾರುವ ಮುಖವಾಣಿಗಳನ್ನು ನಡೆಸುತ್ತಿತ್ತು. ರೇಡಿಯೋದಲ್ಲಿ ಹಿಟ್ಲರನ ಗುಣಗಾನ ಮಾಡಿ ಅತನನ್ನು ಸರ್ವಗುಣಸಂಪನ್ನ ವಿಶ್ವನಾಯಕನಂತೆ ಬಿಂಬಿಸಲಾಗಿತ್ತು. ಸಾಹಿತ್ಯ, ಸಿನಿಮಾ, ಸಂಗೀತ, ನಾಟಕ, ನೃತ್ಯ ಇತ್ಯಾದಿ ಎಲ್ಲಾ ಕ್ಷೇತ್ರಗಳನ್ನು ನಾಜಿ ಪಕ್ಷವೇ ನಿಯಂತ್ರಿಸುತ್ತಿತ್ತು. ನಮ್ಮಲ್ಲಿನ ಮಾಧ್ಯಮಗಳ ಗುಲಾಮಿ ಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಬಗ್ಗೆ ಎಲ್ಲರಿಗೂ ಗೊತ್ತಿದೆ. ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ನಂತ ಚಲನಚಿತ್ರ ಚಿತ್ರರಂಗಕ್ಕೂ ಈ ರೋಗ ವ್ಯಾಪಿಸುತ್ತಿರುವುದರ ಲಕ್ಷಣವಾಗಿದೆ. ಈ ಕುರಿತು ವಿವರವಾಗಿ ಮುಂದೆ ನೋಡೋಣ.
ಸರ್ವಾಧಿಕಾರದ ಅರಂಭಿಕ ಲಕ್ಷಣಗಳಲ್ಲಿ ಒಂದೆಂದರೆ, ಪಕ್ಷದ ಕಾರ್ಯಕರ್ತರ ಗೂಂಡಾ ಪೊಲೀಸ್‍ಗಿರಿ. ಜರ್ಮನಿಯಲ್ಲಿ ಮೊದಲೇ ಉಲ್ಲೇಖಿಸಿದಂತಹ ಎಸ್‍ಎಸ್ ಪಡೆಗಳನ್ನು ಸ್ಥಾಪಿಸಲಾಗಿತ್ತು. ಇದನ್ನು ಮೊದಲು ಸ್ಥಾಪಿಸಿದ್ದು 1925ರಲ್ಲಿ- ಪಕ್ಷದ ಸಭೆಗಳಿಗೆ ಸೆಕ್ಯೂರಿಟಿ ಗಾರ್ಡುಗಳಾಗಿ! ವೃತ್ತಿಪರ ಗೂಂಡಾಗಳು, ನಿರುದ್ಯೋಗಿ ಕುರುಡು ಭಕ್ತರು ದೇಶ ಪ್ರೇಮದ ಹೆಸರಿನಲ್ಲಿ, ಜನಾಂಗೀಯ ಶ್ರೇಷ್ಟತೆಯ ಹೆಸರಿನಲ್ಲಿ ವಿರೋಧಿಗಳ ಸದ್ದಡಗಿಸುತ್ತಿದ್ದರು. ಇದೇ ಮುಂದೆ ಸರಕಾರಿ ಗೂಂಡಾಪಡೆಯಾಯಿತು.
ಜೊತೆಗೆ ಯೂತ್ ಲೀಗ್, ವಿಮೆನ್ಸ್ ಲೀಗ್ ಇತ್ಯಾದಿ ಬೇರೆ ಬೇರೆ ಹೆಸರುಗಳಲ್ಲಿ ಹಲವು ಸಂಘಟನೆಗಳನ್ನು ರಚಿಸಲಾಯಿತು. ಉದ್ದೇಶ ಮಾತ್ರ ಒಂದೇ! ನಮ್ಮಲ್ಲಿ ಈ ಬೆಳವಣಿಗೆಯನ್ನು ಸ್ಪಷ್ಟವಾಗಿ ಕಾಣಬಹುದು! ಅನೇಕ ಸಂಘಟನೆಗಳು- ಉದ್ದೇಶ ಮಾತ್ರ ಒಂದೇ! ಅವರಿಗಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿದರೆ, ಇಲ್ಲಿಯೂ ಬರೇ ‘ದಂಡ’ ಸಾಕಾಗದೆಂದು ಸರಕಾರಿ ಆಶ್ರಯದಲ್ಲಿ ರಾಜಾರೋಷವಾಗಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇವೆಲ್ಲವೂ ಏನನ್ನು ಸೂಚಿಸುತ್ತವೆ?! ಈ ಕುರಿತು ಕೂಡಾ ಮುಂದೆ ವಿವರವಾಗಿ ನೋಡೋಣ.
ಇನ್ನೊಂದು ವಿಷಯವೆಂದರೆ, ಸರ್ವಾಧಿಕಾರಿಗಳು ಯಾವತ್ತೂ ತಮ್ಮನ್ನು ಹಾಗೆಂದು ಕರೆದುಕೊಂಡಿಲ್ಲ. ದೇವರ ಪ್ರತಿನಿಧಿ, ಧರ್ಮರಕ್ಷಕ, ದೇಶರಕ್ಷಕ, ಅಧ್ಯಕ್ಷ, ಹಿಟ್ಲರನಂತೆ ಪರಮೋಚ್ಛ ನಾಯಕ (ಫ್ಯುರರ್) ಇತ್ಯಾದಿ ಕರೆದುಕೊಂಡಿದ್ದಾರೆ. ಅದುದರಿಂದ ನಾವು ವಿಶ್ವಗುರುಗಳು, ಪ್ರಧಾನ ಸೇವಕರು, ಚೌಕಿದಾರರ ಕುರಿತೂ ಎಚ್ಚರದಿಂದ ಇರಬೇಕಾದ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...