| ಮುತ್ತುರಾಜು |
ಈಗಾಗಲೇ ಮಂಡ್ಯ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಿಂದ ಯಥೇಚ್ಛವಾಗಿ ಬೆಂಗಳೂರಿಗೆ ನೀರನ್ನು ಕೊಡಲಾಗುತ್ತಿದೆ. ಅದು ಹಣ್ಣು, ತರಕಾರಿ, ಹಾಲು, ಸೊಪ್ಪು, ಹೂವು ಮತ್ತು ಇನ್ನಿತರ ದಿನಬಳಕೆಯ ವಸ್ತುಗಳನ್ನು ಆ ಜಿಲ್ಲೆಗಳಲ್ಲಿ ಉತ್ಪಾದಿಸಿ ಬೆಂಗಳೂರಿಗೆ ಮಾರುವ ಮೂಲಕ ಅವರ ತಮ್ಮ ಜಿಲ್ಲೆಗಳ ಅಂತರ್ಜಲವನ್ನು ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಮೈಸೂರು, ಕೊಡಗು, ಮಂಡ್ಯದ ಕಾವೇರಿ ನೀರು ಬೆಂಗಳೂರನ್ನು ರಕ್ಷಿಸುತ್ತಿದೆ. ಸಾಲದು ಎಂಬುದಕ್ಕೆ ಕರಾವಳಿಯ ದ.ಕ ಜಿಲ್ಲೆಯಿಂದ ಎತ್ತಿನಹೊಳೆಯಿಂದ ನೀರು ಎತ್ತಲು ಯೋಜಿಸಲಾಗಿದೆ. ನಮ್ಮ ಬೆಂಗಳೂರಿನ ತೀರದ ದಾಹಕ್ಕೆ ಈಗ ಮಲೆನಾಡಿನ ಲಿಂಗನಮಕ್ಕಿಯ ಮೇಲೆಯೂ ಆಳುವವರಿಗೆ ಕಣ್ಣು ಬಿದ್ದಿದೆ. ಇದಕ್ಕೆ ಕೊನೆಯೇ ಇಲ್ಲವೇ?
ಹೌದು ಬೆಂಗಳೂರಿನವರಿಗೆ ಕುಡಿಯಲು ನೀರು ಬೇಕು. ಈಗ ಏಕೆ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಕೇಳಿಕೊಳ್ಳಲು ಯಾರು ಸಿದ್ಧರಿಲ್ಲ. ವಿಚಿತ್ರವೆಂದರೆ ಒಣ ಬಯಲು ಸೀಮೆ ಪ್ರದೇಶಗಳಲ್ಲೇ ಹೆಚ್ಚು ಮಳೆ ಬೀಳುವ ಜಿಲ್ಲೆಯೆಂದರೆ ಬೆಂಗಳೂರು. ಆದರೆ ಹೀಗೆ ಬಿದ್ದ ಮಳೆ ಹಾಗೆ ಹರಿದು ಹೋಗುತ್ತಿದ್ದರೂ ಬೆಂಗಳೂರಿಗರು ಕಣ್ಣು ಮುಚ್ಚಿ ಕುಳಿತಿರುತ್ತಾರೆ. ನಂತರ ನಮಗೆ ನೀರು ಬೇಕೆಂದು ದಬ್ಬಾಳಿಕೆ ಮಾಡುತ್ತಾರೆ. ಹೌದು ಇದು ದಬ್ಬಾಳಿಕೆಯೇ ಹೊರತು ಮತ್ತೇನಲ್ಲ. ಮಲೆನಾಡಿನ ಲಿಂಗನಮಕ್ಕಿಯಿಂದ ಬಲವಂತವಾಗಿ ನೀರು ತರಲು 12 ಸಾವಿರ ಕೋಟಿ ರೂಗಳನ್ನು ಖರ್ಚು ಮಾಡಲು ರಾಜ್ಯ ಸರ್ಕಾರ ಸಿದ್ಧವಾಗಿ ನಿಂತಿದೆ. ಡಿಪಿಆರ್ ಸಿದ್ದಪಡಿಸುವಂತೆ ಡಿಸಿಎಂ ಪರಮೇಶ್ವರ್ ನಿನ್ನೆ ಅಧಿಕಾರಿಗಳಿಗೆ ಸೂಚನೆ ಸಹ ನೀಡಿದ್ದಾರೆ.
ಈಗ ನಾವು ಸಮಸ್ಯೆಯ ಆಳ ಮತ್ತು ಪರಿಹಾರಕ್ಕೆ ಹೋಗೋಣ.
ಬೆಂಗಳೂರಿಗೆ ಬಂದು ಹೋಗುವವರು ಸೇರಿ ಇಲ್ಲಿ ದಿನವೊಂದಕ್ಕೆ ಒಂದೂವರೆ ಕೋಟಿ ಜನ ಇರುತ್ತಾರೆಂದು ಅಂದಾಜಿಸಲಾಗಿದೆ. ಅಂದರೆ ಉದ್ಯೋಗಕ್ಕಾಗಿ ಇಲ್ಲಿಗೆ ಬಂದು ಹೋಗುವವರು ಮತ್ತು ಇಲ್ಲಿಯೇ ನೆಲೆಸಿರುವವರೇ ಹೆಚ್ಚು. ಹಾಗಾಗಿ ಈ ಉದ್ಯೋಗ ಸೃಷ್ಟಿಯ ವಿಕೇಂದ್ರಿಕರಣದ ಪ್ರಶ್ನೆಯನ್ನು ಸರ್ಕಾರ ತನ್ನ ಆದ್ಯತೆಯನ್ನಾಗಿ ಮಾಡಿಕೊಂಡಾಗ ಮಾತ್ರ ಬೆಂಗಳೂರಿಗೆ ನೀರಿನ ಸಮಸ್ಯೆ ಮಾತ್ರವಲ್ಲ, ಟ್ರಾಫಿಕ್, ಮಾಲಿನ್ಯ, ಅಪಘಾತ ಸೇರಿದಂತೆ ಇನ್ನು ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ.
ಎಲ್ಲಾ ಉದ್ಯೋಗಗಳನ್ನು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸುವುದನ್ನು, ಬೆಂಗಳೂರು ಕೇಂದ್ರೀತ ಅಭಿವೃದ್ದಿ ಮಾದರಿಯನ್ನು ಕೈಬಿಟ್ಟು ವಿಕೇಂದ್ರಿಕೃತ ಮತ್ತು ಗ್ರಾಮೀಣ ಆಧಾರಿತ ಅಭಿವೃದ್ದಿಗೆ ಮುಂದಾಗಬೇಕು. ಅತ್ಯುತ್ತಮ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಕಲಬುರಗಿ, ಧಾರವಾಡ, ಬೆಳಗಾಂ, ಗದಗ ರೀತಿಯ ಜಿಲ್ಲೆಗಳಲ್ಲಿ ಸ್ಥಾಪಿಸಬೇಕು. ಜನ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಪರಿಪಾಟಲು ಪಡುವುದು ತಪ್ಪಬೇಕು. ಕೃಷಿಯನ್ನು ನಿಜವಾಗಿಯೂ ಲಾಭದಾಯಕವಾಗಿಸಲು ಸರ್ಕಾರ ತನ್ನೆಲ್ಲಾ ಶಕ್ತಿ-ಸಂಪನ್ಮೂಲಗಳನ್ನು ವಿನಿಯೋಗಿಸಬೇಕು. ಆಗ ನಿಧಾನವಾಗಿ ವಲಸೆ ಕಡಿಮೆಯಾಗುತ್ತದೆ ಮಾತ್ರವಲ್ಲ, ಬೆಂಗಳೂರಿನಿಂದ ಜನ ತಮ್ಮ ಸ್ವಂತ ಊರುಗಳಿಗೆ ವಾಪಸ್ ಹೋಗುವಂತೆ ಆಗಬೇಕು.
ಎರಡನೆಯದಾಗಿ ತಕ್ಷಣದ ಪರಿಹಾರಕ್ಕೆ ಬರುವುದಾದರೆ ನಾವು ಬೆಂಗಳೂರಿನ ಜನ ಎಷ್ಟೆಲ್ಲಾ ನೀರು ವ್ಯರ್ಥ ಮಾಡುತ್ತಿದ್ದೇವೆ ಎಂಬುದನ್ನು ಅರಿತು ಮಿತಬಳಕೆಗೆ ಮುಂದಾಗಬೇಕು. ಬೆಂಗಳೂರಿನ ಪ್ರತಿ ಮನೆಯು ಮಳೆನೀರು ಕೊಯ್ಲು ಪದ್ದತಿ ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಬೋರ್‍ವೆಲ್‍ಗಳಿಗೆ ಅದರಿಂದ ಮರುಪೂರಣ ವ್ಯವಸ್ಥೆ ಮಾಡಬೇಕು. ಇದು ಎಷ್ಟು ದೊಡ್ಡ ಕೆಲಸವೆಂದರೆ ಇದರಿಂದ ನೀರಿನ ಪರಾವಲಂಬನೆ ಬಹುಮಟ್ಟಿಗೆ ತಪ್ಪಿಸಬಹುದು.
ಜೊತೆಗೆ ಸರ್ಕಾರ ಕೆರೆ ಒತ್ತುವರಿ ಮಾಡಿಕೊಂಡಿರುವವರನ್ನು ಮುಲಾಜು ನೋಡದೆ ಬಿಡಿಸಿ ಕೆರೆಗಳ ಸಮಗ್ರ ಪುನಶ್ಚೇತನಕ್ಕೆ ಮುಂದಾಗಬೇಕು. ರಾಜ್ಯದ ಎಲ್ಲಾ ಕೆರೆಗಳ ಹೂಳೆತ್ತಿಸಿ ನೀರು ಸಂಗ್ರಹಕ್ಕೆ ಮುಂದಾಗಬೇಕು. ಯಮುನಾ ಬಯಲು ಪ್ರದೇಶದಲ್ಲಿ ನೈಸರ್ಗಿಕ ನೀರು ಸಂಗ್ರಹಾಲಯಕ್ಕೆ ದೆಹಲಿ ಸರ್ಕಾರ ಮುಂದಾಗಿದೆ. ಇಂತಹ ಯೋಜನೆಗಳನ್ನು ಅಧ್ಯಯನ ಮಾಡಿ ಜಾರಿಗೊಳಿಸಬೇಕು.
ಹುಡುಕಿದರೆ ಇಂತಹ ಹತ್ತಾರು ದಾರಿಗಳು ಸಿಗುತ್ತವೆ. ಅವನ್ನು ಮಾಡದೇ ನಾವು ನಮ್ಮ ವಿಲಾಸಕ್ಕಾಗಿ, ಮಿತಿಮೀರಿದ ದುರಾಸೆಗಾಗಿ ಎತ್ತಿನಹೊಳೆಯಿಂದಲೋ, ಲಿಂಗನಮಕ್ಕಿಯಿಂದಲೋ ನೀರು ಕದಿಯುವುದು ಸರ್ವಥಾ ಸರಿಯಲ್ಲ. ಲಿಂಗನಮಕ್ಕಿಯಿಂದ ನೀರು ಬೇಡ ಎಂದು ಮಲೆನಾಡಿಗರು ಹೋರಾಟ ಮಾಡುವ ಮುಂಚೆಯೇ ಬೆಂಗಳೂರಿಗರು ದನಿಯೆತ್ತಿ. ಸ್ವಲ್ಪವಾದರೂ ಆತ್ಮಸಾಕ್ಷಿ ಉಳಿಸಿಕೊಳ್ಳಬೇಕು.



ಒಂದು ಸಣ್ಣ ಮಳೆಗೆ ಇಲ್ಲಿನ ದಾರಿಗಳಲ್ಲಿ ನೀರು ತುಂಬಿ ಬಂಡಿಗಳ ಓಡಾಟಕ್ಕೆ ತೊಂದರೆಯಾಗಿ ಪಡುವ ಪಡಿಪಾಟಲು ಅಶ್ಟಿಶ್ಟಲ್ಲ. ನಗರದ ಯೋಜನಾರಹಿತ ಬೆಳವಣಗೆಯೇ ಇದಕ್ಕೆಲ್ಲಾ ಕಾರಣ.
ದಾರಿಬದಿಯ ಚರಂಡಿಗಳ ಬಾಯಿಗೆ ಅಡ್ಡಲಾಗಿ ಹಾಕಿರುವ ನೀರು,ಕಳಚೆ,ಕರೆಂಟು ಕೊಳವೆಗಳನ್ನು ನಿಯಮದಂತೆ ಬೆಡ್ ಲೆವೆಲ್ ಗಿಂತ ಕೆಳಗೆ ಹಾಕದರೆ ನೂರಾರು ಕೋಟಿ ಹಣ ಉಳಿಸಬಹುದು.