ಭರತ್ ಹೆಬ್ಬಾಳ್ |
ಬ್ರೆಜಿಲ್ ಚುನಾವಣೆಯ ಫಲಿತಾಂಶದ ದಿನ ನವ ಬಲಪಂಥೀಯ ವಿಚಾರಗಳನ್ನು ಪ್ರಪಂಚಾದ್ಯಂತ ಪ್ರತಿಪಾದಿಸುವ ಅಮೆರಿಕಾದ ಪ್ರಚಾರಕ ಸ್ಟೀವ್ ಬ್ಯಾನನ್ ಬ್ರೆಜಿಲ್‌ನ ‘ವ್ಯಾಲರ್ ಎಕೊನೊಮಿಕಾ’ ಪತ್ರಿಕೆಯು ಸಂದರ್ಶನ ಮಾಡುತ್ತದೆ. ಸರ್ವಾಧಿಕಾರಿ ಜೈರ್ ಬೊಲ್ಸಾನರೋ ಗೆಲುವಿನ ಬಗ್ಗೆ ಕೇಳಿದಾಗ “ಜನರ ಮೇಲೆ ಮಾಡುವ ಪರಿಣಾಮಕಾರಿ ಮಾನಸಿಕ ಕಾರ್ಯಾಚರಣೆಯ ಒಂದು ಯಶಸ್ವಿ ನಿದರ್ಶನ ಬ್ರೆಜಿಲ್‌ನ ಚುನಾವಣೆ” ಎನ್ನುತ್ತಾನೆ (ವಿಜ್ಞಾನ ಮತ್ತು ಕಲೆ ಉಪಯೋಗಿಸಿಕೊಂಡು ಒಂದು ವ್ಯವಸ್ಥೆ ಮತ್ತು ಅದಲ್ಲಿರುವವರ ಮಾನಸಿಕ ಆಯಾಮವನ್ನು ನಿಯಂತ್ರಣದಲ್ಲಿಡುವುದನ್ನು ಸೈಕೊಲಾಜಿಕಲ್ ಆಪರೇಶನ್ಸ್ ಎನ್ನುತ್ತಾರೆ). ಈ ಸ್ಟೀವ್ ಬ್ಯಾನನ್ 2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ನ ಚುನಾವಣಾ ಪ್ರಚಾರ ಸಂಯೋಜಕ ಮತ್ತು ಗೆದ್ದ ನಂತರ ವೈಟ್ ಹೌಸ್‌ನ ಮುಖ್ಯ ಕಾರ್ಯತಂತ್ರಜ್ಞನಾಗಿ ಕೆಲಸ ಮಾಡಿದ ವ್ಯಕ್ತಿ. ಇವನಿಗೂ ಮತ್ತು ವಿಶ್ವಾದ್ಯಂತ ಅಧಿಕಾರಕ್ಕೇರುತ್ತಿರುವ ತೀವ್ರವಾದ ಬಲಪಂಥೀಯ ಪಕ್ಷ, ಗುಂಪು, ಸರ್ಕಾರಗಳಿಗೂ ನಿಕಟ ಸಂಬಂಧವಿದೆ. ಇವನು ಮತ್ತು ಇವನ ಸಂಪರ್ಕ ಜಾಲದ ಕಂಪನಿಗಳೇ ಜರ್ಮನಿ, ಫಿಲಿಪೈನ್‌ನ ರೊಡ್ರಿಗೊ ಡ್ಯುಟೆರ್ಟಿ, ಅರ್ಜೆಂಟೀನಾದ ಮಾಯರಿಸೀಯೋ ಮಕ್ಕ್ರಿ, ಭಾರತದ ನರೇಂದ್ರ ಮೋದಿ, ಸ್ಕಾಟಿಶ್ ರಾಷ್ಟ್ರೀಯ ಪಾರ್ಟಿ, ಅಮೆರಿಕಾದ ಡೊನಾಲ್ಡ್ ಟ್ರಂಪ್ ಮತ್ತು ಬೊಲ್ಸಾನರೋನ ಸಾಮಾಜಿಕ ಜಾಲತಾಣಗಳ ಪ್ರಚಾರದ ನೇರ ಅಥವಾ ಪರೋಕ್ಷ ನಿರ್ವಹಣೆ ವಹಿಸಿಕೊಂಡಿದ್ದವು. ಇವರೆಲ್ಲರೂ ತಮ್ಮ ತಮ್ಮ ಚುನಾವಣಾ ಕಾರ್ಯತಂತ್ರಕ್ಕೆ ಸಾಮಾಜಿಕ ಜಾಲತಾಣಗಳ ಕಂಪನಿಗಳಾದ ಫೇಸ್ಬುಕ್, ಟ್ವಿಟರ್, ವಾಟ್ಸಾಪ್‌ಗಳಲ್ಲಿ ಏನನ್ನು ಹೇಗೆ ಹರಡಬೇಕೆಂಬುದರ ಬಗ್ಗೆ ಈ ಕೆಲವು ಕಂಪೆನಗಳನ್ನು ಅವಲಂಬಿಸಿದ್ದರು ಮತ್ತು ಅವರ ಸಲಹೆಯ ಮೇರೆಗೆ ತಮ್ಮ ಚುನಾವಣಾ ತಂತ್ರವನ್ನು ಬದಲಿಸುತ್ತಿದ್ದರು.
ಬೊಲ್ಸನಾರೋ ಕೂಡ ಅಮೆರಿಕಾದ ಟ್ರಂಪ್ ಮತ್ತು ಭಾರತದ ಮೋದಿಯ ಹಾಗೆ ತನ್ನನ್ನು ತಾನೇ “ಜಡಗಟ್ಟಿರುವ ಭ್ರಷ್ಟಾಚಾರ ಮತ್ತು ವ್ಯವಸ್ಥೆಯನ್ನು ನಿರ್ಣಾಯಕ ರೀತಿಯಲ್ಲಿ ಬದಲಾಯಿಸುವ ಮತ್ತು ದೇಶವನ್ನು ತೀವ್ರಗತಿಯಲ್ಲಿ ಅಭಿವೃದ್ಧಿ ಪಡಿಸುವ ನೇತಾರ”ನೆಂದು ಬಿಂಬಿಸಿಕೊಂಡ. ಹೊಸ ಆರ್ಥಿಕ ನೀತಿಯು ಮೊದಲಿಗೆ ಅನುಷ್ಠಾನವಾಗಿದ್ದೇ ದಕ್ಷಿಣ ಅಮೆರಿಕಾದ ಚಿಲಿ ದೇಶದಲ್ಲಿ. ಪ್ರಜಾತಾಂತ್ರಿಕವಾಗಿ ಚುನಾಯಿತರಾಗಿ ದೇಶದ ಅಧ್ಯಕ್ಷ ಪಟ್ಟಕ್ಕೇರಿದ್ದ ಸಮಾಜವಾದಿ ಸ್ಯಾಲ್ವಡಾರ್ ಅಲ್ಲೆಂಡೆಯನ್ನು 1973ರ ಸೆಪ್ಟೆಂಬರ್ 11ರಂದು ಸಿಐಎ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕೊಲ್ಲಲಾಗುತ್ತದೆ. ಅವರ ಸ್ಥಾನಕ್ಕೆ ಆಗ್ಯಾಸ್ಟೋ ಪಿನಶೇ ಎಂಬ ಮಿಲಿಟರೀ ಸರ್ವಾಧಿಕಾರಿ ಬಂದು ಅಮೆರಿಕಾದ ಕುಖ್ಯಾತಿಯ ಮಿಲ್ಟನ್ ಫ್ರೀಡ್ಮನ್‌ನ ಶಿಕಾಗೋ ಬಾಯ್ಸ್ ಪಡೆಯ ಪಾಲೊ ಗುಡೆಸ್ ಮೂಲಕ ಕೆಲವು ನೀತಿಗಳನ್ನು ಜಾರಿಗೆ ತರುತ್ತಾರೆ. ಆಘಾತಕಾರಿ ಸಂಗತಿಯೆಂದರೆ ಇದೇ ಪಾಲೊ ಗುಡೆಸ್ ಬೊಲ್ಸಾನರೋನ ಆರ್ಥಿಕ ಸಲಹೆಗಾರರಾಗಿದ್ದಾರೆ.
ಪ್ರಜಾತಂತ್ರವನ್ನು ಪ್ರಜಾತಂತ್ರದಿಂದಲೇ ಹೇಗೆ ಕೆಡವಬಹುದು ಎಂಬುದಕ್ಕೆ ದಕ್ಷಿಣ ಅಮೆರಿಕಾದ ದೇಶಗಳೇ ಉದಾಹರಣೆ. ಇದರಲ್ಲಿ ಬ್ರೆಜಿಲ್ ಒಂದು ಕೆಟ್ಟ ಸಂಪ್ರದಾಯಕ್ಕೆ ಹುಟ್ಟು ಹಾಕಿದೆ. ತನ್ನ ಇತಿಹಾಸದುದ್ದಕ್ಕೂ ಬೊಲ್ಸಾನರೋ ಮಹಿಳಾ, ಕಪ್ಪು ವರ್ಣೀಯ, ಸಲಿಂಗಕಾಮ, ಸಾಮಾಜಿಕ ನ್ಯಾಯದ ವಿರೋಧಿ ಹೇಳಿಕೆಗಳನ್ನು ಕೊಡುತ್ತಲೇ ಬರುತ್ತಿದ್ದಾರೆ. ಉದಾಹರಣೆಗೆ ‘ಕಪ್ಪು ವರ್ಣೀಯರು ಪ್ರಾಣಿಗಳಿಗೆ ಸಮ, ಅವರು ಮೃಗಾಲಯದಲ್ಲಿ ಇರಬೇಕಾದವರು, ಇವರೆಲ್ಲ ಯಾವುದಕ್ಕೂ ಪ್ರಯೋಜನವಿಲ್ಲದ ಗುಲಾಮಿ ಸಂತತಿ, ನನ್ನ ಮಗ ಸಲಿಂಗಕಾಮಿ ಎಂದು ಕೇಳುವುದಕ್ಕಿಂತ ಯಾವುದಾದರೂ ಕಾರು ಅಪಘಾತದಲ್ಲಿ ಮೃತಪಟ್ಟ ಎಂದು ಕೇಳಲು ಬಯಸುತ್ತೇನೆ, ಬ್ರೆಜಿಲ್‌ನ ಮಹಿಳಾ ಸಂಸದೆ ಮರೀಯ ದೊ ರೊಸಾರಿಯೋವನ್ನು ನೀನು ಅತ್ಯಾಚಾರಕ್ಕೂ ಲಾಯಕ್ಕಿಲ್ಲದ ಕುರೂಪಿ’ ಇವೆಲ್ಲವೂ ಬಹಿರಂಗ ಹೇಳಿಕೆಗಳು! ಅಮೆಜಾನ್ ಕಾಡುಗಳನ್ನು ಕಡಿದು ಬೀಫ್ ಮತ್ತು ಅಮೆರಿಕ ಕುಲಾಂತರಿ ಸೋಯಬೀನ್, ಜೋಳದ ಕಾಳು, ಇನ್ನಿತರೆ ಕೃಷಿ ವಿಸ್ತರಿಸಬೇಕು; ಲೇಬರ್ ಪಾರ್ಟಿಯ ಸರ್ಕಾರ ಶುರು ಮಾಡಿದ್ದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ತೆಗೆದು ಹಾಕಬೇಕು, ಸರ್ವಾಧಿಕಾರ ದೇವರು ಕೊಟ್ಟ ವರ. ಎಂದು ಒಂದರ ನಂತರ ಇನ್ನೊಂದು ತಿಕ್ಕಲುತನದ ಹೇಳಿಕೆಗಳನ್ನು ಹರಿಬಿಟ್ಟಿದ್ದ.
ಮಾಧ್ಯಮಗಳು ಖಾಸಗೀಕರಣಗೊಂಡು ಜನ ಬದುಕಿನ ಸಮಸ್ಯೆಯ ಸುದ್ದಿ ಬಿಟ್ಟು ಫೇಕ್, ವಿಕೃತ ಹಾಗೂ ಪ್ರಚೋದನಕಾರಿ ವಿಚಾರಗಳ ಹಿಂದೆ ಬೀಳುತ್ತಾರೆಂಬುದಕ್ಕೆ ಮತ್ತು ಸಾಮಾಜಿಕ ಜಾಲತಾಣಗಳನ್ನು ಅದಕ್ಕೆ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದೆಂಬುದಕ್ಕೆ ಭಾರತ ಮತ್ತು ಬ್ರೆಜಿಲ್ ಚುನಾವಣೆಗಳೇ ಸಾಕ್ಷಿ. 21 ಕೋಟಿ ಜನಸಂಖ್ಯೆಯ ಬ್ರೆಜಿಲ್‌ನಲ್ಲಿ 12 ಕೋಟಿ ಜನರು ವಾಟ್ಸಾಪ್ ಉಪಯೋಗಿಸುತ್ತಾರೆ. ಭಾರತದಲ್ಲಿ ಈ ಸಂಖ್ಯೆ 70 ಕೋಟಿ ಮುಟ್ಟುತ್ತಿದೆ. ಭಾರತೀಯ ಜನತಾ ಪಕ್ಷ ಹೇಗೆ ರಾಜಕೀಯ ಅಪಪ್ರಚಾರ (ಅನ್ನಭಾಗ್ಯದ ವಿರುದ್ದವೂ ಮಾತಾಡಿ, ನಂತರ ಅದನ್ನು ತಂದಿದ್ದೂ ಮೋದಿಯೇ ಎಂದು ಕರ್ನಾಟಕ ಚುನಾವಣೆಯಲ್ಲಿ ಮಾಡಿದರೋ ಹಾಗೆ) ಮಾಡಿತ್ತೋ ಹಾಗೆಯೇ ಬ್ರೆಜಿಲ್‌ನಲ್ಲೂ ಕೂಡ ಈ ವಿಕೃತರ ಗೆಲುವಿಗೆ ವಾಟ್ಸಾಪ್‌ಸುದ್ದಿಗಳೇ ನಿರ್ಣಾಯಕ ಕಾರಣ ಎನ್ನುತ್ತಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಗಳು ಪ್ರಣಾಳಿಕೆ ಬಿಟ್ಟು ಎದುರಾಳಿ ಪಕ್ಷದ ತೇಜೋವಧೆಗೆ ಹೆಚ್ಚು ಒತ್ತು ನೀಡಿತ್ತು. ಕಾರ್ಮಿಕ ಪಕ್ಷದ ಹದ್ದದ್‌ರ ಕುರಿತಂತೆ ಮತ್ತು ಪ್ರಗತಿಪರ ಧೋರಣೆಗಳ ವಿರುದ್ದ ಇಲ್ಲಸಲ್ಲದ ಆರೋಪಗಳು, ತಿದ್ದಿದ ಚಿತ್ರ ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಒಂದು ತಿದ್ದಿದ ವಿಡಿಯೋವನ್ನು ೩೦ ಲಕ್ಷ ವೀಕ್ಷಣೆಯ ನಂತರ ಯೂಟ್ಯೂಬ್ನಿಂದ ತೆಗೆದುಹಾಕಲಾಗಿತ್ತು. ಈ ಅನಾಮಿಕ ಸುಳ್ಳು ಪ್ರಚಾರದ ಹಾದಿಯನ್ನು ಬಹುಬೇಗ ತಿದ್ದಿಕೊಳ್ಳದಿದ್ದಲ್ಲಿ ದೇಶಗಳ ಸಾರ್ವಭೌಮತ್ವ ಕುಸಿದು ಬೀಳುವ ಆತಂಕ ತಪ್ಪಿದ್ದಲ್ಲ. ವಿಪರ್ಯಾಸವೆಂದರೆ ಯಾರು ರಾಷ್ಟ್ರವಾದಿ ಮತ್ತು ಉಗ್ರ ದೇಶಭಕ್ತಿಯನ್ನು ಅಬ್ಬರದಿಂದ ಪ್ರದರ್ಶಿಸುತ್ತಿದ್ದಾರೋ ಅವರೇ ತಮ್ಮ ದೇಶಗಳ ಆರ್ಥಿಕ, ಸಾಮಾಜಿಕ ಸಾರ್ವಭೌಮತ್ವವನ್ನು ಕಡೆಗಣಿಸುತ್ತಿದ್ದಾರೆ.
ಈ ವಿಕೃತ ಗೆಲುವನ್ನು ಫ್ರೆಂಚ್-ಬ್ರೆಜಿಲ್ ಸಮಾಜಶಾಸ್ತ್ರಜ್ಞ ಮೈಕಲ್ ಲೌಯ್ ರೋಗಗ್ರಸ್ತ ರಾಜಕೀಯದ ದೊಡ್ಡ ಪ್ರಮಾಣದ ಗೆಲುವು ಎಂದು ಬಣ್ಣಿಸಿದ್ದಾರೆ. ಇದು ಬ್ರೆಜಿಲ್ ದೇಶವನ್ನು ಮತ್ತಷ್ಟು ಬಿಕ್ಕಟ್ಟಿನತ್ತ ಕೊಂಡೊಯ್ಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಇದು ಅಲ್ಪಾವಧಿಯಲ್ಲಿ ತನ್ನ ಸುತ್ತಮುತ್ತಲಿನ ಎಡಪಂಥೀಯ ಸರ್ಕಾರಗಳ ಪತನವನ್ನು ಮತ್ತು ಕಾರ್ಮಿಕ ಪಕ್ಷ ಮಾಡಿದ ಅಲ್ಪ ಸ್ವಲ್ಪ ಜನಕಲ್ಯಾಣ ಯೋಜನೆಗಳನ್ನು ಸಂಪೂರ್ಣವಾಗಿ ನಾಶ ಮಾಡಬಹುದು. ಆದರೆ ಇವರು ಶುರು ಮಾಡುವ ದೀರ್ಘಾವಧಿ ಕೆಡಕುಗಳು ಬಹಳಷ್ಟಿವೆ. ಈ ಬಲಪಂಥೀಯ ಗೆಲವುಗಳನ್ನು ಸಮಾಜದ ಎಲ್ಲ ಮಾನವಪ್ರೇಮಿ ಹೃದಯಗಳು ಮತ್ತು ಮುಖ್ಯವಾಗಿ ಮೆದುಳುಗಳು ವಿಮರ್ಶಿಸಿ ಪರ್ಯಾಯವನ್ನು ಹುಡುಕಿಕೊಳ್ಳಬೇಕಿದೆ. ಕ್ರಾಂತಿಕಾರಿ ಪಕ್ಷಗಳು ಸಂಸದೀಯ ಸುಧಾರಣಾವಾದಿ ಮಾರ್ಗ ಹುಡುಕಿಕೊಂಡಾಗ ಮತ್ತು ಜನರಲ್ಲಿ ಮೂಲಭೂತ ಬದಲಾವಣೆಯನ್ನು ತರುವಲ್ಲಿ ವಿಫಲರಾದಾಗ ಹೇಗೆ ತೀವ್ರ ಬಲಪಂಥೀಯ ರಾಜಕೀಯಕ್ಕೆ ಆಸ್ಪದ ಮಾಡಿಕೊಡುತ್ತದೆಂಬುದಕ್ಕೆ ಬ್ರೆಜಿಲ್ ರಾಜಕೀಯ ಒಂದು ಸ್ಪಷ್ಟ ಉದಾಹರಣೆ ಮತ್ತು ಬಹುಮುಖ್ಯ ಪಾಠ.


