Homeಅಂಕಣಗಳುಭಾರತದ ಫ್ಯಾಸಿಸ್ಟ್ ಪ್ರಜಾಪ್ರಭುತ್ವ

ಭಾರತದ ಫ್ಯಾಸಿಸ್ಟ್ ಪ್ರಜಾಪ್ರಭುತ್ವ

- Advertisement -
- Advertisement -

ಭಾರತ ಒಂದು ಪ್ರಜಾಪ್ರಭುತ್ವ ಆಗಿರುವ ಕುರಿತು ಸಿನಿಕರಲ್ಲಿದ್ದ ಅನುಮಾನಗಳನ್ನು ಅಂತಿಮವಾಗಿ ಪ್ರಸಕ್ತ ಆಡಳಿತವು ದೃಢೀಕರಿಸಿದೆ. ಭಾರತದ ಪ್ರಧಾನ ಸರ್ಕಾರಿ ವಕೀಲರಾದ ಮುಕುಲ್ ರೋಹಟಗಿ “ಪ್ರಜೆಗಳು ತಮಗೆ ತಮ್ಮ ದೇಹದ ಮೇಲೆ `ಸಂಪೂರ್ಣ’ ಹಕ್ಕು ಇದೆಯೆಂದು ಸಾಧಿಸಲು ಸಾಧ್ಯವಿಲ್ಲ’’ ಎಂದು ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವೊಂದರ ಮುಂದೆ ಹೇಳಿದ್ದಾರೆ. ಆತ್ಮಹತ್ಯೆ, ಮದ್ಯಪಾನ, ಗರ್ಭಪಾತಗಳಿಗೆ ಸಂಬಂಧಿಸಿದ ಕಾನೂನುಗಳೆ ಮೊದಲಾದ ನಿದರ್ಶನಗಳೊಂದಿಗೆ ಅವರು ಹರಿಬಿಟ್ಟ ಆಡಂಬರಯುತ ವಾಕ್ಪ್ರವಾಹದ ವೈಖರಿ ಹೇಗಿತ್ತೆಂದರೆ ಅದನ್ನು ಆಲಿಸಿದ ನ್ಯಾ| ಎ.ಕೆ.ಸಿಕ್ರಿ ಮತ್ತು ನ್ಯಾ| ಅಶೋಕ್ ಭೂಷಣ್‍ರಿಗೂ ಮುಜುಗರ ಎನಿಸಿದೆ. ಆದರೆ ಪ್ರಾಸಂಗಿಕವಾಗಿ ಸರ್ಕಾರಿ ವಕೀಲರ ಮಾತುಗಳು ಪ್ರಜಾಸತ್ತೆಯ ಮುಖವಾಡ ಧರಿಸಿರುವ ಕ್ರೂರ ಮೃಗದ ಕೋರೆಹಲ್ಲುಗಳ ದರ್ಶನವನ್ನು ಮಾಡಿಸಿದೆ. ವಾಸ್ತವದಲ್ಲಿ ರೋಹಟಗಿ ಹೇಳಿಕೆಯ ಅರ್ಥ ಏನೆಂದರೆ ಭಾರತದ ಪ್ರಭುತ್ವವು ಸಾರ್ವಭೌಮರೆನ್ನಲಾದ ಭಾರತೀಯರನ್ನು ತನಗಿಷ್ಟಬಂದಾಗ ಬಲಿ ತೆಗೆದುಕೊಳ್ಳಬಹುದು.

ಮುಸೊಲಿನಿ ತನ್ನ ಫ್ಯಾಸಿಸ್ಟ್ ಸಿದ್ಧಾಂತದಲ್ಲಿ ಸಾರಿದ್ದೂ ಇದನ್ನೆ. ಫ್ಯಾಸಿಸ್ಟ್ ಸಿದ್ಧಾಂತ ಪ್ರಭುತ್ವದ ಪ್ರಾಧಾನ್ಯವನ್ನು ಒತ್ತಿಹೇಳಿತು. ವ್ಯಕ್ತಿಯ ಹಿತಾಸಕ್ತಿಗಳು ಪ್ರಭುತ್ವದ ಹಿತಾಸಕ್ತಿಗಳ ಜತೆ ತಾಳೆಯಾದಾಗಲಷ್ಟೆ ಅದು ವ್ಯಕ್ತಿಯನ್ನು ಸ್ವೀಕರಿಸಿತು. ಭಾರತದಲ್ಲಿ ಪ್ರಭುತ್ವದಿಂದ ರದ್ದುಪಡಿಸಲಾಗದಂತಹ ನಿರ್ದಿಷ್ಟ ಹಕ್ಕುಗಳನ್ನು ಪ್ರಜೆಗಳಿಗೆ ನೀಡಿರುವ ಒಂದು ಉದಾರವಾದಿ ಪ್ರಜಾಸತ್ತೆ ಇದೆಯೆಂದು ಎಣಿಸಲಾಗಿತ್ತು. ಫ್ಯಾಸಿಸಂ ಈ ಉದಾರವಾದಿ ಕಲ್ಪನೆಯನ್ನು ತಿರಸ್ಕರಿಸಿ ಪ್ರಭುತ್ವದ ಹಕ್ಕುಗಳನ್ನು ಪುನಃ ದೃಢಪಡಿಸುತ್ತದೆ. “ಸ್ವಾತಂತ್ರ್ಯದ ಕಲ್ಪನೆ ಅಬಾಧಿತವಲ್ಲ ಏಕೆಂದರೆ ಜೀವನದಲ್ಲಿ ಯಾವುದೂ ಯಾವತ್ತೂ ನಿರ್ಬಂಧರಹಿತವಲ್ಲ. ಸ್ವಾತಂತ್ರ್ಯ ಒಂದು ಹಕ್ಕಲ್ಲ, ಕರ್ತವ್ಯ. ಅದು ದಾನವಾಗಿ ಸಿಕ್ಕಿರುವುದಲ್ಲ, ಗೆದ್ದುಕೊಂಡದ್ದು. ಅದು ಸಮಾನತೆಯಲ್ಲ, ಸೌಲಭ್ಯ” ಎಂದು ಫ್ಯಾಸಿಸಂ ಸಿದ್ಧಾಂತ ಹೇಳುತ್ತದೆ. ಇತ್ತೀಚಿನ ದಿನಗಳಲ್ಲಿ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್‍ರಂಥವರು ಇದೇ ಸುಪರಿಚಿತ ವಾಕ್ಯಗಳನ್ನು ಹರಿಬಿಡುತ್ತಿದ್ದಾರೆ. ಭಾರತದ ಪ್ರಭುತ್ವ ತನ್ನ ಪುನರಾವರ್ತಿತ ಹೇಳಿಕೆಗಳ ಮೂಲಕ ತಾನು ಫ್ಯಾಸಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡಿರುವುದನ್ನು ದೃಢಪಡಿಸಿದೆ.

ಇಲ್ಲಿಯತನಕ ನಮಗೆ ತಿಳಿಸಿರುವುದೇನೆಂದರೆ ನಮಗೆಲ್ಲ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳೆಂದು ಪ್ರತಿಷ್ಠಾಪಿಸಲಾಗಿರುವ ಕೆಲವು ನಿರ್ದಿಷ್ಟ ಹಕ್ಕುಗಳಿವೆ. ಸಂವಿಧಾನದ ವಿಧಿ 19 ಆರು ಹಕ್ಕುಗಳ ಕುರಿತು ಹೇಳುತ್ತದೆ: ವಾಕ್ಸಾ ್ವತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು; ಶಾಂತಿಯುತವಾಗಿ, ಆಯುಧಗಳಿಲ್ಲದೆ ಸಭೆ ಸೇರುವ ಹಕ್ಕು; ಸಂಘಟನೆ ಅಥವಾ ಕಾರ್ಮಿಕ ಸಂಘಗಳನ್ನು ಸ್ಥಾಪಿಸುವ ಹಕ್ಕು; ಭಾರತದ ಸರಹದ್ದಿನೊಳಗಿರುವ ಯಾವುದೇ ಭಾಗದಲ್ಲಿ ವಾಸ ಮಾಡುವ ಮತ್ತು ನೆಲೆ ನಿಲ್ಲುವ ಹಕ್ಕು; ಯಾವುದೆ ವೃತ್ತಿಯಲ್ಲಿ ತೊಡಗುವ ಅಥವಾ ಯಾವುದೆ ಕಸುಬು, ವ್ಯಾಪಾರ ಅಥವಾ ಉದ್ದಿಮೆ ನಡೆಸುವ ಹಕ್ಕು. ಸಂವಿಧಾನದಲ್ಲಿ ನಮೂದಿಸಲಾಗಿರುವ ನಿರ್ದಿಷ್ಟ ಸಂದರ್ಭಗಳಲ್ಲಿ ಶಾಸನಸಭೆಗಳು ಈ ಹಕ್ಕುಗಳನ್ನು ಮೊಟಕುಗೊಳಿಸಬಹುದು ಎಂಬರ್ಥದಲ್ಲಿ ಅವು ಅನಿರ್ಬಂಧಿತ ಅಲ್ಲವೆಂದು ನಮಗೆ ಗೊತ್ತಿತ್ತು. ಉದಾಹರಣೆಗೆ ರಾಷ್ಟ್ರೀಯ ಭದ್ರತೆ, ವಿದೇಶಿ ರಾಷ್ಟ್ರಗಳೊಂದಿಗೆ ಸ್ನೇಹಯುತ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ನ್ಯಾಯಾಂಗ ನಿಂದನೆ, ಮಾನನಷ್ಟ, ಅಪರಾಧಕ್ಕೆ ಪ್ರಚೋದನೆ ಮತ್ತು ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗಳ ಪ್ರಶ್ನೆಗಳಿದ್ದಾಗ ವಿಧಿ 19 (2)ರ ಮೂಲಕ ವಾಕ್ಸಾ ್ವತಂತ್ರ್ಯದ ಮೇಲೆ ನಿರ್ದಿಷ್ಟ ನಿರ್ಬಂಧಗಳನ್ನು ಹೇರುವ ಅಧಿಕಾರವನ್ನು ಶಾಸನಸಭೆಗಳಿಗೆ ನೀಡಲಾಗಿದೆ. ಸಾಕಷ್ಟು ಅಸ್ಪಷ್ಟತೆಯಿಂದ ಕೂಡಿದ ಈ ಅನೇಕ ನಿರ್ಬಂಧಗಳನ್ನು ಆಳ್ವಿಕರು ದುರುಪಯೋಗಪಡಿಸುವ ಸಂಭವವಿದೆಯಾದರೂ ಸಂವಿಧಾನ ಅವರಲ್ಲಿ ಕನಿಷ್ಠ ಮಟ್ಟದ ನೈತಿಕತೆಯನ್ನು ನಿರೀಕ್ಷಿಸುತ್ತದೆ. ಈ ನಿರ್ಬಂಧಗಳನ್ನು ಕ್ರಮಬದ್ಧವಾಗಿ ರಚಿಸಲಾದ ಕಾಯ್ದೆಯ ಮೂಲಕ ಮಾತ್ರ ಹೇರಬಹುದಾಗಿದೆ ಹೊರತು ಕಾರ್ಯಾಂಗದ ಮೂಲಕ ಅಲ್ಲ. ಆದರೆ ಇಂದು ಇದು ಎಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದೆ ಎಂದರೆ ನೇರವಾಗಿ ಬಾಯ್ಮುಚ್ಚಿಸುವ ವಿದ್ಯಮಾನಗಳು ನಡೆಯುತ್ತಿವೆ.

ನೀವು ಸರ್ಕಾರದ ಸ್ತುತಿಗೀತೆಗಳನ್ನು ಹಾಡಿದರೆ ಓಕೆ. ಅದು ಬಿಟ್ಟು ಬೇರೆ ಏನನ್ನೆ ಹೇಳಿದರೂ ಪ್ರಾಣಾಪಾಯ ಕಾದಿದೆ. ನಿಮ್ಮ ಮೇಲೆ ರಾಜದ್ರೋಹದಡಿ ಅಥವಾ ಅಸ್ತಿತ್ವದಲ್ಲಿರುವ ಹತ್ತುಹಲವು ಕಠೋರ ಕಾಯ್ದೆಗಳ ಪೈಕಿ ಯಾವುದಾದರೂ ಒಂದರಡಿ ಸುಲಭದಲ್ಲಿ ದೂರು ದಾಖಲಾಗಿ ಫಾಸಿಗೆ ಹಾಕಬಹುದು, ತಪ್ಪಿದಲ್ಲಿ ಜೀವಾವಧಿ ಶಿಕ್ಷೆಯಾಗಬಹುದು. ಅಫ್ಜಲ್ ಗುರುವನ್ನು ಅಥವಾ ಯಾಕುಬ್ ಮೆನನ್‍ನನ್ನು ಗಲ್ಲಿಗೇರಿಸಿದುದರ ವಿರುದ್ಧ ಮಾತನಾಡಿದರೆ ಅಥವಾ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯವರು, ನಂತರ ಜೆಎನ್‍ಯುನ ಎಡಪಂಥೀಯ ವಿದ್ಯಾರ್ಥಿಗಳು ಮಾಡಿದ ಹಾಗೆ ಎಬಿವಿಪಿಯ ಗೂಂಡಾಗಿರಿಯನ್ನು ಪ್ರತಿಭಟಿಸಿದರೆ ರೋಹಿತ್ ವೆಮುಲಾನಿಗೆ ಯಾವ ಅವಸ್ಥೆ ಆಗಿತ್ತೊ ಅದೇ ಸ್ಥಿತಿಯತ್ತ ನೀವೂ ತಳ್ಳಲ್ಪಡಬಹುದು ಅಥವಾ ಕನ್ಹಯ್ಯ ಕುಮಾರ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಒಮಾರ್ ಖಲೀದರ ಹಾಗೆ ಸೆರೆವಾಸ ಅನುಭವಿಸಬೇಕಾಗಿ ಬರಬಹುದು. ರೂಢಿಯ ಕಾಮಗಾರಿಗಳನ್ನು ಗುತ್ತಿಗೆಗೆ ನೀಡುವ ಕಾರ್ಮಿಕವಿರೋಧಿ ನೀತಿಯ ವಿರುದ್ಧ ಮಾತನಾಡಿದರೆ, ಕಂಪೆನಿಯ ಮ್ಯಾನೇಜ್‍ಮೆಂಟನ್ನು ಟೀಕಿಸಿದರೆ ವರ್ಷಗಳ ಕಾಲ ಜೈಲಲ್ಲಿದ್ದು ಈಗ ಜೀವಾವಧಿ ಶಿಕ್ಷೆಗೊಳಗಾದ ಮಾರುತಿ ಸುಜುಕಿ ಕಾರ್ಮಿಕರ ಗತಿಯೆ ನಿಮಗೂ ಬಂದೊದಗಬಹುದು. ಸರ್ಕಾರ ಬಲವಂತವಾಗಿ ಭೂಸ್ವಾಧೀನ ಮಾಡುತ್ತಿರುವುದರ ವಿರುದ್ಧ ಮಾತಾಡಿದರೆ `ಮಾವೊವಾದಿ’ ಹಣೆಪಟ್ಟಿ ನಿಮ್ಮದಾಗಬಹುದು ಅಥವಾ ನಿಮ್ಮನ್ನು ಸೀದಾ ಪರಲೋಕಕ್ಕೆ ರವಾನಿಸಬಹುದು. ಸಮಾಜದಲ್ಲಿ ‘ಅನ್ಯ’ರಾಗಿರುವ ಮುಸ್ಲಿಮರಂತೂ ಹೇಗೂ ದೇಶದ್ರೋಹಿಗಳು, ಭಯೋತ್ಪಾದಕರು. ಬಸ್ತರ್ ಅಥವಾ ನಿಯಾಮಗಿರಿಯ ಆದಿವಾಸಿಗಳು ಪ್ರಭುತ್ವ ಅರಣ್ಯಗಳನ್ನು ಕಾನೂನುಬಾಹಿರವಾಗಿ ಬಂಡವಾಳಶಾಹಿಗಳಿಗೆ ಹಸ್ತಾಂತರ ಮಾಡುವುದರ ವಿರುದ್ಧ ಮಾತಾಡಿದ ಮಾತ್ರಕ್ಕೆ ಪ್ರಭುತ್ವ ಅವರ ಮೇಲೆ ಕುತ್ಸಿತ ಯುದ್ಧ ನಡೆಸುತ್ತದೆ. ಭದ್ರತಾ ಪಡೆಗಳನ್ನು ಛೂಬಿಟ್ಟು ಅವರ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಸಿ ಊನರನ್ನಾಗಿಸುತ್ತದೆ, ಶಿಕ್ಷೆಯ ಭಯವಿಲ್ಲದೆ ಅವರ ಯುವಕರನ್ನು ಕೊಲ್ಲುತ್ತದೆ. ನೀವೇನಾದರೂ ಪ್ರಭುತ್ವವು ಮಾನವಹಕ್ಕು ಕಾರ್ಯಕರ್ತರ ಮೇಲೆ ನಡೆಸುವ ಅನ್ಯಾಯಗಳನ್ನು ವಿರೋಧಿಸಿ ಅವರ ಪರ ನಿಂತಿರಾದರೆ ಡಾ| ಬಿನಾಯಕ್ ಸೆನ್, ಸೋನಿ ಸೋರಿ ಅಥವಾ ಜಿ.ಎನ್. ಸಾಯಿಬಾಬಾರಿಗೆ ಆದ ಗತಿಯೆ ನಿಮಗೂ ಬರಬಹುದು. ಕಳೆದ ಡಿಸೆಂಬರ್‍ನಲ್ಲಿ ಬಸ್ತರ್‍ನಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಸತ್ಯಶೋಧನೆಗಾಗಿ ತೆರಳುತ್ತಿದ್ದ ತೆಲಂಗಾಣ ಪ್ರಜಾತಾಂತ್ರಿಕ ವೇದಿಕೆಯ ಏಳು ಸದಸ್ಯರ ತಂಡವೊಂದನ್ನು ದಾರಿಮಧ್ಯದಲ್ಲೆ ಬಂಧಿಸಲಾಯಿತು. ಜಾಮೀನು ನಿರಾಕರಿಸಲಾಗಿರುವುದರಿಂದ ಅವರಿನ್ನೂ ಸುಕ್ಮಾ ಜೈಲಿನಲ್ಲಿದ್ದಾರೆ. ಇಲ್ಲಿ ಪೊಲೀಸರು ಕಟ್ಟಿದ ಕತೆಯಷ್ಟೆ ಇದೆ ಹೊರತು ಪುರಾವೆಯ ಸಣ್ಣ ಚೂರಾದರೂ ಇಲ್ಲ. ಇವೆಲ್ಲವೂ ಭಿನ್ನ ಭಿನ್ನ ಘಟನೆಗಳಲ್ಲ, ಇಡೀ ದೇಶಕ್ಕೆ ವ್ಯಾಪಿಸಿರುವ ವಿದ್ಯಮಾನಗಳು.

ನಿಜವಾಗಿ ಇದೆಲ್ಲವೂ ನೀವು ಯಾರೊಡನೆ ಮಾತಾಡಬೇಕು, ಏನು ಮಾತಾಡಬೇಕು; ಏನು ತಿನ್ನಬೇಕು, ಎಲ್ಲಿ ತಿನ್ನಬೇಕು; ಯಾವಾಗ ನಿಲ್ಲಬೇಕು, ಯಾವಾಗ ಕೂರಬೇಕು; ಯಾರನ್ನು ಪ್ರೀತಿಸಬೇಕು, ಯಾರನ್ನು ದ್ವೇಷಿಸಬೇಕು ಎಂದು ಪ್ರಭುತ್ವವು ಜನರಿಗೆ ಹೇಳುವಂತಹ ಕುಲಗೆಟ್ಟ ಮಟ್ಟಕ್ಕೆ ಇಳಿದಿದೆ. ನಮ್ಮನ್ನೆಲ್ಲ ಪ್ರಭುತ್ವದ ಸೇವೆಯಲ್ಲಿರುವ ಯಂತ್ರಮಾನವರನ್ನಾಗಿ ಮಾಡಲಾಗಿದೆ. ಜನರಿಗಿಂತಲೂ ಕದನಶೀಲ ದೇಶಭಕ್ತಿಯ ರಾಷ್ಟ್ರೀಯತೆಯನ್ನೆ ಮುಖ್ಯವಾಗಿಸಿದ ಪ್ರಭುತ್ವ ತನ್ನ ಆಜ್ಞೆಗಳ ಅನುಷ್ಠಾನಕ್ಕೆ ಹಿಂದೂತ್ವವಾದಿ ಗ್ಯಾಂಗುಗಳನ್ನು ಛೂಬಿಟ್ಟಿದೆ. ಇದು ಮುಸೊಲಿನಿಯ ಕರಿಷರಟು ಪಡೆ ಮತ್ತು ಹಿಟ್ಲರನ ಕಂದುಷರಟು ಪಡೆಗಳನ್ನು ನೆನಪಿಸುತ್ತದೆ. ಹಿಂದೂತ್ವದ ಮೂಲಪುರುಷರಾದ ಸಾವರ್ಕರ್, ಮೂಂಜೆ, ಗೋಲ್ವಲ್ಕರರು ಮುಸೊಲಿನಿ, ಹಿಟ್ಲರ್‍ರತ್ತ ಆಕರ್ಷಿತರಾಗಿದ್ದರ ಕುರಿತು ರಾಶಿಗಟ್ಟಲೆ ವಿವರಗಳು ಲಭ್ಯವಿವೆ. ಇದರ ಹೊರತಾಗಿಯೂ ಅದರ ಸಂಘಟನಾ ಉಗಮಸ್ಥಾನವಾದ ಆರೆಸ್ಸೆಸ್‍ಗೂ ಇಟೆಲಿಯ ಎಂವಿಎಸ್‍ಎನ್‍ಗೂ ((ಒiಟiziಚಿ ಗಿoಟoಟಿಣಚಿಡಿiಚಿ ಠಿeಡಿ ಟಚಿ Siಛಿuಡಿezzಚಿ ಓಚಿzioಟಿಚಿಟe;ಒಗಿSಓ; “ಗಿoಟuಟಿಣಚಿಡಿಥಿ ಒiಟiಣiಚಿ ಜಿoಡಿ ಓಚಿಣioಟಿಚಿಟ Seಛಿuಡಿiಣಥಿ “; “ರಾಷ್ಟ್ರೀಯ ಭದ್ರತೆಗಾಗಿ ಸ್ವಇಚ್ಛೆಯ ಪ್ರಜಾಸೇನೆ”É) ಹತ್ತಿರದ ಹೋಲಿಕೆಗಳಿರುವುದು ಗಮನಾರ್ಹ. ಮೂಲತಃ ನ್ಯಾಷನಲ್ ಫ್ಯಾಸಿಸ್ಟ್ ಪಕ್ಷದ ಅರೆಸೇನಾ ಪಡೆಯಾಗಿದ್ದ ಈ ಎಂವಿಎಸ್‍ಎನ್ 1923ರ ನಂತರ ಇಟೆಲಿ ಸಾಮ್ರಾಜ್ಯದ ಸ್ವಇಚ್ಛೆಯ ಪ್ರಜಾಸೇನೆಯಾಗಿ ಪರಿಣಮಿಸಿತ್ತು. ಭಾರತದಲ್ಲಿರುವ ನಾವು ಕಳೆದ ಎರಡೂವರೆ ವರ್ಷಗಳಲ್ಲಿ ಫ್ಯಾಸಿಸ್ಟ್ ಆಡಳಿತ ಹೇಗಿರುತ್ತದೆ ಎಂಬುದರ ಮೂಲ ಕಾರ್ಯಮಾದರಿಯನ್ನು ಕಂಡಿರುವೆವು. ಅದು ಹೆಚ್ಚುಕಡಿಮೆ “ಒಂದು ಜನ, ಒಂದು ಸಾಮ್ರಾಜ್ಯ, ಒಬ್ಬ ನಾಯಕ” ಎನ್ನುವುದರ ಮಾದರಿಯಾಗಿದೆ.

ತಾನೊಂದು ಪ್ರಜಾಪ್ರಭುತ್ವ ಅಥವಾ ಇನ್ನೂ ಖಚಿತವಾಗಿ, ವಿಶ್ವದ ಅತಿ ದೊಡ್ಡ ಕಾರ್ಯನಿರತ ಪ್ರಜಾಪ್ರಭುತ್ವ ಎಂದು ಭಾರತ ಹಕ್ಕುಸಾಧಿಸುತ್ತಿರುವುದು ಕೇವಲ ನಿಯಮಿತವಾಗಿ ನಡೆಸಲಾಗುವ ಚುನಾವಣೆಗಳ ಆಧಾರದಲ್ಲಿ. ಸದರಿ ಚುನಾವಣೆಗಳು ಜನರ ಸಂಕಲ್ಪದ ಅಭಿವ್ಯಕ್ತಿಗಿಂತ ಹೆಚ್ಚಾಗಿ ಭಾರಿ ಧನಬಲ ಮತ್ತು ಜನಬಲದೊಂದಿಗೆ ನಡೆಸುವ ವಾಡಿಕೆಯ ಆಚರಣೆಗಳಾಗಿದ್ದರೂ ಅವು ಪ್ರಜಾತಂತ್ರದ ಭ್ರಮೆಯೊಂದನ್ನು ಮುಂದುವರಿಸುತ್ತಾ ಬಂದಿವೆ. ಭಾರಿ ಹೊಗಳಿಕೆಗೆ ಪಾತ್ರವಾದ ನಮ್ಮ ಸಂವಿಧಾನ ಕೊಟ್ಟಿರುವ ಆ ಇಡೀ ಚೌಕಟ್ಟು ವಾಸ್ತವವಾಗಿ ಸ್ಥಳೀಯ ಆಳುವ ವರ್ಗಗಳ ಜನವಿರೋಧಿ ಒಳಸಂಚುಗಳನ್ನು ಹೊರಗೆಡವುತ್ತದೆ. ಭ್ರಮೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ದಮನಿತರ ಉದ್ಧಾರಕನಾದ ಅಂಬೇಡ್ಕರರು ಚೌಕಟ್ಟಿನ ಪ್ರಧಾನ ಕರ್ತೃ ಎಂದು ಬಿಂಬಿಸಲಾಯಿತು. ಸಂವಿಧಾನ ಜಾರಿಗೆ ಬಂದ ಎರಡು ವರ್ಷಗಳಲ್ಲಿ ಆ ಕೋರೈಸುವ ಹೊಗಳಿಕೆಯ ಬೆಳಕಿನಿಂದ ಹೊರಬಂದ ಅಂಬೇಡ್ಕರರು ಅದನ್ನು ಅತ್ಯಂತ ಕಟು ಶಬ್ದಗಳಲ್ಲಿ ನಿರಾಕರಿಸಿದರಾದರೂ ಅದರಿಂದೇನೂ ಉಪಯೋಗವಾಗಿಲ್ಲ. ಸಂವಿಧಾನ ನೀಡಿರುವುದು ಕೇವಲ ರಾಜಕೀಯ ಪ್ರಜಾಸತ್ತೆ; ಪೂರಕವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು ಸೇರಿಸದಿದ್ದರೆ ರಾಜಕೀಯ ಪ್ರಜಾಸತ್ತೆ ಉಳಿಯದು ಎಂದು ಎಚ್ಚರಿಸಿದರಾದರೂ ಅದು ಕಾರ್ಯಕಾರಿಯಾಗಿಲ್ಲ. ಕಾನೂನುರೀತ್ಯಾ ಪ್ರಜಾಪ್ರಭುತ್ವವು ಕಾರ್ಯತಃ ಯಾವತ್ತಿಗೂ ಶ್ರೀಮಂತರ ಪ್ರಭುತ್ವವಾಗಿದೆ. ಅದು ವ್ಯವಸ್ಥಿತ, ಕೇಂದ್ರೀಕೃತ, ನಿರಂಕುಶ ಅಧಿಕಾರದ ಪ್ರಜಾಪ್ರಭುತ್ವವಾಗಿ ಮಾರ್ಪಾಡಾಗಲು ಸ್ವಲ್ಪ ಸಮಯ ಬೇಕಿತ್ತು ಅಷ್ಟೆ. ಫ್ಯಾಸಿಸಂ ಅಂದರೆ ಇದೇ – ವ್ಯವಸ್ಥಿತ, ಕೇಂದ್ರೀಕೃತ, ನಿರಂಕುಶ ಅಧಿಕಾರದ ಪ್ರಜಾಪ್ರಭುತ್ವ. ಬೇಸರದ ಸಂಗತಿ ಏನೆಂದರೆ ತಲೆಬರಹದಲ್ಲಿರುವ ವಿರೋಧಾಭಾಸ ಭಾರತದ ನೈಜಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...