Homeಅಂಕಣಗಳುಸಾವನ್ನು ಮೆಟ್ಟಿನಿಂತ ಸೋದರಿ

ಸಾವನ್ನು ಮೆಟ್ಟಿನಿಂತ ಸೋದರಿ

- Advertisement -
- Advertisement -

ಸೆಪ್ಟೆಂಬರ್ 5ರ ಆ ಕರಾಳ ರಾತ್ರಿಯ ಕಟುವಾಸ್ತವವನ್ನು ಜೀರ್ಣಿಸಿಕೊಳ್ಳಲು ಇಂದಿಗೂ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಗೌರಿ ಲಂಕೇಶ್ ಅವರು ಇಷ್ಟು ಬೇಗ ಇತಿಹಾಸ ಸೇರುತ್ತಾರೆಂದು ನಾವ್ಯಾರೂ ಊಹಿಸಿರಲಿಲ್ಲ. ಎಲ್ಲವೂ ಅನಿರೀಕ್ಷಿತವಾಗಿ, ಸಿನಿಮೀಯ ರೀತಿಯಲ್ಲಿ ನಡೆದುಹೋಗಿದೆ.

ಅನಿರೀಕ್ಷಿತ ತಿರುವುಗಳಲ್ಲಿ ಸಾಗಿದ ಪಯಣ
ಹಾಗೆ ನೋಡಿದರೆ ಗೌರಿ ಲಂಕೇಶ್ ಅವರ ಸಾವು ಮಾತ್ರವಲ್ಲ; ಅವರ ಇಡೀ ಜೀವನವೇ ಹಲವು ಅನಿರೀಕ್ಷಿತ ತಿರುವುಗಳಲ್ಲಿ ರೂಪುತಳೆದಿದ್ದು. 2000ನೇ ಇಸವಿಯಲ್ಲಿ ಲಂಕೇಶ್ ಅವರ ಹಠಾತ್ ಮರಣದಿಂದ ಉಂಟಾದ ನಿರ್ವಾತದಲ್ಲಿ ಗೌರಿ ಲಂಕೇಶ್ ಕನ್ನಡ ಪತ್ರಿಕಾರಂಗಕ್ಕೆ ಪ್ರವೇಶಿಸಿದರು. ಲಂಕೇಶ್ ಪತ್ರಿಕೆಯ ಸಂಪಾದಕರಾಗಿ ಸಾರಥ್ಯ ವಹಿಸಿಕೊಂಡರು. ಅಲ್ಲಿಯವರೆಗೆ ಲಂಕೇಶ್ ಕುಟುಂಬದ ಹತ್ತಿರದ ಒಡನಾಟವಿದ್ದವರಿಗೆ ಹೊರತುಪಡಿಸಿ ‘ಪತ್ರಿಕೆ’ಯ ಓದುಗ ವಲಯಕ್ಕಾಗಲಿ, ಕರ್ನಾಟಕದ ಸಾಮಾಜಿಕ ವಲಯಕ್ಕಾಗಲಿ ಲಂಕೇಶ್‍ರಿಗೆ ಗೌರಿ ಎಂಬ ಒಬ್ಬ ಮಗಳಿದ್ದಾಳೆ ಎಂಬುದಾಗಲಿ, ಆಕೆ ಪತ್ರಕರ್ತೆಯಾಗಿದ್ದಾಳೆ ಎಂಬುದಾಗಲಿ ಗೊತ್ತೇ ಇರಲಿಲ್ಲ. ಸುಮಾರು ಒಂದೂವರೆ ದಶಕಗಳ ಕಾಲ ಇಂಗ್ಲಿಷ್ ಪತ್ರಿಕಾ ರಂಗದಲ್ಲಿ ಕೆಲಸ ಮಾಡಿದ್ದ ಗೌರಿಯವರಿಗೆ ‘ಲಂಕೇಶ್ ಪತ್ರಿಕೆ’ಯ ಜೊತೆ ಹೇಳಿಕೊಳ್ಳುವಂತಹ ಸಂಬಂಧವೇನೂ ಇರಲಿಲ್ಲ. ಕನ್ನಡ ಪತ್ರಿಕಾ ರಂಗಕ್ಕೆ ಹೀಗೆ ಅನಿರೀಕ್ಷಿತ ಎಂಟ್ರಿ ಕೊಡಲು ಕಾರಣ ಗೌರಿಯವರಲ್ಲಿ ಅವರಪ್ಪನ ಬಗೆಗಿದ್ದ ಅಪಾರ ಅಭಿಮಾನ ಮತ್ತು ಪ್ರೀತಿ.

ಈ ಅಭಿಮಾನದ ಕಾರಣಕ್ಕಾಗಿ ಆಕೆ ತನ್ನ ತಂದೆ ಕಷ್ಟಪಟ್ಟು ರೂಪಿಸಿದ್ದ ‘ಪತ್ರಿಕೆ’ ಅಪ್ಪನ ಜೊತೆಗೆ ಕಣ್ಣುಮುಚ್ಚಲು ಬಿಡಬಾರದೆಂದು ತೀರ್ಮಾನಿಸಿ, ಪತ್ರಿಕೆಯ ಸಾರಥ್ಯ ವಹಿಸಿಕೊಂಡರು. ಲಂಕೇಶ್‍ರಂತಹ ದೈತ್ಯ ಪ್ರತಿಭೆ ರೂಪಿಸಿದ ‘ಪತ್ರಿಕೆ’ಯನ್ನು ಕನ್ನಡದ ಗಂಧಗಾಳಿ ಗೊತ್ತಿಲ್ಲದ ಗೌರಿ ಮುನ್ನಡೆಸಲು ಹೇಗೆ ಸಾಧ್ಯ ಎಂದು ಆ ಸಂದರ್ಭದಲ್ಲಿ ಮೂಗುಮುರಿದವರೇ ಹೆಚ್ಚು. ಅದು ಅತ್ಯಂತ ಸಹಜವಾಗಿಯೂ ಇತ್ತು. ಹೀಗಾಗಿ ಗೌರಿ ಸಾರಥ್ಯದ ಪತ್ರಿಕೆಯ ಜೊತೆ ಮುಂದುವರೆದ ಹಿರಿಯ ವರದಿಗಾರರು, ಲೇಖಕರು ಬೆರಳೆಣಿಕೆಯಷ್ಟು ಮಾತ್ರ.

ಆದರೆ ನಮ್ಮ ಎಣಿಕೆ ತಪ್ಪಾಗಿತ್ತು. ಗೌರಿ ನಾವ್ಯಾರೂ ಊಹಿಸಿರದಿದ್ದ ವೇಗದಲ್ಲಿ ಕನ್ನಡ ಭಾಷೆಯನ್ನೂ, ಕನ್ನಡ ಸಾಮಾಜಿಕ, ಸಾಂಸ್ಕøತಿಕ ಲೋಕದ ಹೊಸಹೊಸ ವಿಚಾರಗಳನ್ನು ಕಲಿಯುತ್ತಾ ಸಾಗಿದರು. ಲಂಕೇಶ್ ಪತ್ರಿಕೆಯ ಜಾಯಮಾನವನ್ನು ಬಹುಬೇಗ ರೂಡಿಸಿಕೊಂಡ ಇಂಗ್ಲಿಷ್‍ನ ಗೌರಿ ಕನ್ನಡದ ‘ಗೌರಿ ಲಂಕೇಶ್’ ಆಗಿ ಬೆಳೆಯುತ್ತಾ ಸಾಗಿದ್ದು ಈಗ ಇತಿಹಾಸ.

2005ರಲ್ಲಿ ಗೌರಿಯವರ ಜೀವನ ಇಂತಹುದೇ ಮತ್ತೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ನಕ್ಸಲೀಯರ ವಿಷಯದಲ್ಲಿ ಬರೆದ ಒಂದು ಲೇಖನಕ್ಕೆ ಸಂಬಂಧಿಸಿ ತನ್ನ ತಮ್ಮ ಇಂದ್ರಜಿತ್ ಜೊತೆ ಉಂಟಾದ ಸೈದ್ಧಾಂತಿಕ ಭಿನ್ನಾಭಿಪ್ರಾಯ ಆ ಚಾರಿತ್ರಿಕ ತಿರುವಿಗೆ ಕಾರಣವಾಗಿತ್ತು. ನಕ್ಸಲೀಯ ಸಮಸ್ಯೆ ಬಗ್ಗೆ ವರದಿ ಮಾಡುವಾಗ ಜನಪರ ಪತ್ರಿಕೆಯೊಂದು ಪೊಲೀಸ್ ದೃಷ್ಟಿಕೋನದಲ್ಲಿ ನೋಡಿ, ಪ್ರಭುತ್ವಗಳ ಪರಿಭಾಷೆಯಲ್ಲಿ ಮಾತನಾಡಬೇಕೋ? ಅಥವ ಆ ಸಮಸ್ಯೆಯನ್ನು ಸಾಮಾಜಿಕ ಕಾರ್ಯಕರ್ತರ ದೃಷ್ಟಿಕೋನದಿಂದ ಕಂಡು ಸಾಮಾಜಿಕ ಚಿಕಿತ್ಸಕ ಪರಿಭಾಷೆಯಲ್ಲಿ ಮಾತನಾಡಬೇಕೋ ಎಂಬುದು ಈ ವಿವಾದದ ಸಾರಂಶ. ಇದರಲ್ಲಿ ಯಾರ ನಿಲುವು ಏನಾಗಿತ್ತು ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಅಕ್ಕ – ತಮ್ಮನ ನಡುವಿನ ಈ ವಿವಾದ ತಾರಕಕ್ಕೇರಿತು. ಇಂದ್ರಜಿತ್ ಯಾವ ಹಂತಕ್ಕೆ ಮುಟ್ಟಿದ್ದನೆಂದರೆ ತನ್ನ ಒಡಹುಟ್ಟಿದ ಅಕ್ಕನಿಗೆ ಪಿಸ್ತೂಲು ತೋರಿಸಿ ಬೆದರಿಕೆ ಹಾಕಿದ. ಈ ಬಗ್ಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಯ್ತು. ಇಂದ್ರಜಿತ್ ತನ್ನ ಅಕ್ಕ ತನ್ನ ಕಚೇರಿಯಿಂದ ಕಂಪ್ಯೂಟರ್ ಮುಂತಾದ ವಸ್ತುಗಳನ್ನು ಕದ್ದಿದ್ದಾಳೆಂದು ಸುಳ್ಳು ದೂರೊಂದನ್ನು ಕೂಡ ಕೊಟ್ಟ. ಕರ್ನಾಟಕದಲ್ಲಿ ದಂತಕತೆಯಾಗಿದ್ದ, ಹಾಗೆಯೇ ಸಾಕಷ್ಟು ವಿರೋಧಿಗಳನ್ನು ಹೊಂದಿದ್ದ ಲಂಕೇಶ್‍ರ ಕುಟುಂಬದ ಈ ವಿವಾದ ಆಡಿಕೊಳ್ಳೋರ ಮುಂದೆ ಹೇಳಿಕೊಂಡು ಅತ್ತ ಹಾಗಿತ್ತು. ಇರಲಿ, ಆ ವಿವರಗಳು ನಮಗೆ ಇಲ್ಲಿ ಅನಗತ್ಯ.

ಈ ವಿವಾದದ ಅಂತಿಮ ಪರಿಣಾಮವಾಗಿ ಗೌರಿಯವರನ್ನು ಸಂಪಾದಕಿ ಹುದ್ದೆಯಿಂದ ವಜಾ ಮಾಡಲಾಯ್ತು. ವಜಾ ಮಾಡಿದವರು ಬೇರೆ ಯಾರೂ ಅಲ್ಲ, ಇದೇ ಸೋದರ ಮಹಾಶಯ ಇಂದ್ರಜಿತ್. ಹಿರಿಯಕ್ಕನನ್ನು ವಜಾ ಮಾಡುವುದು ತಮ್ಮನಿಗೆ ಹೇಗೆ ಸಾಧ್ಯವಾಯ್ತು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಲಂಕೇಶ್ ಮೇಷ್ಟರಿಗೆ ಅದೇನು ಪುತ್ರ ವ್ಯಾಮೋಹವೋ ಏನು ಕತೆಯೋ? ‘ಪತ್ರಿಕೆ’ಯ ಮಾಲಿಕತ್ವದ ವಾರಸುದಾರಿಕೆಯನ್ನು ತಮ್ಮ ಪುತ್ರನಿಗೆ ದಯಪಾಲಿಸಿಹೋಗಿದ್ದರು. ಆದರೆ ಮೇಷ್ಟ್ರ ಮಗಳು ಗೌರಿಗೆ ಈ ಆಸ್ತಿ-ಪಾಸ್ತಿಗಳ ಲೆಕ್ಕಾಚಾರ ಯಾವುದೂ ಬೇಕಿರಲಿಲ್ಲ. ಅವರ ಆಸಕ್ತಿಯಲ್ಲಿದ್ದುದೆಲ್ಲಾ ಇಷ್ಟೆ; ಅಪ್ಪನ ‘ಪತ್ರಿಕೆ’ಯನ್ನು ಅಪ್ಪನ ಹಾಗೆ ಯಾವುದೇ ರಾಜಿಗಳಿಲ್ಲದೆ, ಅಪ್ಪನ ಆಶಯಕ್ಕೆ ತಕ್ಕಹಾಗೆ ನಿರ್ಭೀತಿಯಿಂದ ಮುನ್ನಡೆಸಬೇಕು ಎಂಬ ಕಳಕಳಿ ಮಾತ್ರ.

ಮಾಧ್ಯಮ ಸಂಸ್ಥೆಗಳ ಮಾಲಿಕರು ಅವುಗಳ ಸಂಪಾದಕರ, ಸಂಪಾದಕೀಯ ತಂಡಗಳ ಉಸಿರಾಟಕ್ಕೂ ಫಿಲ್ಟರ್ ಜೋಡಿಸುತ್ತಿರುವ ಕಾಲವಿದು. ಈಗ ಹೇಳಿ ಕೇಳಿ ಮೋದಿ ಕಾಲ ಅಲ್ಲವೆ? ಆದರೆ ಈ ದುರಂತ ಸ್ಥಿತಿ ಲಂಕೇಶ್ ಪತ್ರಿಕೆ ಪಾಲಿಗೆ 2005ರಷ್ಟು ಹಿಂದೆಯೇ ಬಂದೊದಗಿದ್ದು ವಿಪರ್ಯಾಸ. ತನ್ನ ಅಪ್ಪನ ಪತ್ರಿಕೆಯಿಂದ ತನ್ನ ತಮ್ಮನಿಂದಲೇ ಆಚೆ ದಬ್ಬಿಸಿಕೊಳ್ಳುವ ಇಂಥ ಸನ್ನಿವೇಶವೊಂದು ಎದುರಾಗಬಹುದೆಂದು ಆಕೆ ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಅದು ಯಾವುದೇ ವ್ಯಕ್ತಿಯನ್ನು ಭಾವನಾತ್ಮಕವಾಗಿ ಹೊಡೆದುಕೆಡವಿಬಿಡಬಹುದಾದಂತಹ ಅತ್ಯಂತ ಯಾತನಾಮಯ ಸನ್ನಿವೇಶ. ಅಂತಹ ಸನ್ನಿವೇಶದಲ್ಲೂ ಗೌರಿಯವರಿಗೆ ಅಪ್ಪನ ಮೇಲಿನ ಪ್ರೀತಿ ಎಳ್ಳಷ್ಟೂ ಮುಕ್ಕಾಗಲಿಲ್ಲ. ಬದಲಿಗೆ ಅಪ್ಪನ ಬಗ್ಗೆಗಿನ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡರು. ಅಪ್ಪನಂತೆಯೇ ಎಥಿಕಲ್ ಜರ್ನಲಿಸಂನ ಹಾದಿಯಲ್ಲಿ ದೃಡವಾಗಿ ಹೆಜ್ಜೆ ಇಡಲು ತೀರ್ಮಾನಿಸಿದ್ದರು.
ಹೀಗೆ 2005ರಲ್ಲಿ ನಡೆದ ಇಂಥ ಅನಿರೀಕ್ಷಿತ ಮಾತ್ರವಲ್ಲದೆ, ಆಘಾತಕಾರಿ ತಿರುವಿನಲ್ಲಿ ‘ಗೌರಿ ಲಂಕೇಶ್’ ಎಂಬ ಹೊಸ ಪತ್ರಿಕೆ ಹುಟ್ಟಿ ಬಂತು. ಹೊಸ ಪತ್ರಿಕೆಯ ಹುಟ್ಟು ಒಂದು ಭಾವನಾತ್ಮಕ, ನೈತಿಕ ಹಾಗೂ ಸೈದ್ಧಾಂತಿಕ ಹೋರಾಟದ ಪ್ರತಿಫಲವಾಗಿತ್ತು ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಈ ಹೋರಾಟ ಪ್ರಭುತ್ವ ಮತ್ತು ಆಳುವ ಕೂಟಗಳ ಜೊತೆ ನಡೆಸಿದ ಹೋರಾಟ ಮಾತ್ರವಾಗಿರಲಿಲ್ಲ. ಅದು ತನ್ನ ಕುಟುಂಬದೊಳಗೆ ನಡೆದ ಹೋರಾಟ ಕೂಡ ಆಗಿತ್ತು. ಆ ವೇಳೆಗಾಗಲೇ ಕೋಮು ಸೌಹಾರ್ದ ವೇದಿಕೆ ಮುಂತಾದ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಗೌರಿಯವರ ಸಾಮಾಜಿಕ ದಿಗಂತವೂ ಸಾಕಷ್ಟು ವಿಸ್ತಾರಗೊಂಡಿತ್ತು. ಹೀಗಾಗಿ ಹಲವು ಸಮಾನ ಮನಸ್ಕ ಗೆಳೆಯ ಗೆಳತಿಯರೂ ಈ ಹೊಸ ನಡಿಗೆಯಲ್ಲಿ ಗೌರಿಯವರ ಜೊತೆಯಾದರು. ಹೀಗೆ ಇಂಗ್ಲಿಷ್‍ನ ಗೌರಿ ಪೂರ್ಣ ಪ್ರಮಾಣದಲ್ಲಿ ರೂಪಾಂತರಗೊಂಡು ಕನ್ನಡ ಪತ್ರಿಕಾ ರಂಗಕ್ಕೆ, ಕರ್ನಾಟಕದ ಸಾಮಾಜಿಕ ಕ್ಷೇತ್ರಕ್ಕೆ ‘ಗೌರಿ ಲಂಕೇಶ್’ ಆಗಿ ಮರು ಹುಟ್ಟುಪಡೆದರು.

ಕ್ಯಾಪ್ಟನ್ ಗೌರಿ
ನಂತರ ನಡೆದದ್ದೆಲ್ಲಾ ಈಗ ಇತಿಹಾಸ. ನಮ್ಮ ತಂಡದ ಹಿರಿಯ ಪತ್ರಕರ್ತ ಹಾಗೂ ಗೌರಿಯವರ ಸುದೀರ್ಘಕಾಲದ ಒಡನಾಡಿ ಪಾರ್ವತೀಶ್ ಸಂಬೋಧಿಸುತ್ತಿದ್ದಂತೆ ಅವರು ನಮಗೆಲ್ಲಾ ‘ಕ್ಯಾಪ್ಟನ್’ ಆಗಿದ್ದರು. ಅನೇಕ ಎಡರುತೊಡರುಗಳ ನಡುವೆ ಪತ್ರಿಕೆಯನ್ನು ಮುನ್ನಡೆಸಿದ ಅವರ ಛಲ, ಪರಿಶ್ರಮದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬಹುಶಃ ಛಲ ಮತ್ತು ಪರಿಶ್ರಮದಲ್ಲಿ ಅವರನ್ನು ಸರಿಗಟ್ಟುವ ಪತ್ರಕರ್ತರು ಇಂದಿನ ಪತ್ರಿಕಾ ರಂಗದಲ್ಲೇ ವಿರಳ ಎನ್ನಬಹುದು.

ಗೌರಿ ಲಂಕೇಶ್

ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತಾಡಿದ ಪಾರ್ವತೀಶರ ಅನುಭವದ ಮಾತುಗಳನ್ನು ಇಲ್ಲಿ ಉಲ್ಲೇಖಿಸುವುದು ಉಚಿತ. “ಮೇಲುನೋಟಕ್ಕೆ ಗಡಿಬಿಡಿಯ ವ್ಯಕ್ತಿಯಂತೆ, ಸದಾ ಧಾವಂತದಲ್ಲಿರುವ ವ್ಯಕ್ತಿಯಂತೆ ಅಥವ ಒಮ್ಮೊಮ್ಮೆ ಎಲೈಟ್ ಅನಿಸಿಬಿಡಬಹುದಿತ್ತೇನೋ? ಆದರೆ ಅವರು ಬಹಳ ಸರಳವಾದ ವ್ಯಕ್ತಿ. ನನ್ನ ಮತ್ತು ಅವರ ಒಡನಾಟ ಎರಡು ದಶಕಗಳಷ್ಟು ಸುದೀರ್ಘವಾದುದು. ಅವರಷ್ಟು ಬೇಗ ಅಳುತ್ತಿದ್ದ ವ್ಯಕ್ತಿಯನ್ನು ನಾನು ಕಂಡೇ ಇಲ್ಲ; ಯಾರದಾದರೂ ಕಷ್ಟಗಳನ್ನು ನೋವುಗಳನ್ನು ಕಂಡರೆ, ಕೇಳಿದರೆ ಅಷ್ಟು ಬೇಗ ಅವರು ಕಣ್ಣೀರಾಗಿ ಹೋಗುತ್ತಿದ್ದರು. ಅವರು ಭಾವುಕ ಜೀವಿ. ಭಾವುಕ ಜೀವಿಯಾಗಿದ್ದರೂ ಅವರ ಹತ್ತಿಪ್ಪತ್ತು ವರ್ಷಗಳ ಸಾಮಾಜಿಕ ಜೀವನ ಗಟ್ಟಿತನದ ಸಾಮಾಜಿಕ ಕಾರ್ಯಕರ್ತೆಯನ್ನಾಗಿ ಅವರನ್ನು ರೂಪಿಸಿತ್ತು. ಬದ್ಧತೆ ಮತ್ತು ಇಚ್ಚಾಶಕ್ತಿಯುಳ್ಳ ಆಕ್ಟಿವಿಸ್ಟ್ ಆಗಿ ಸದಾ ಸಕ್ರಿಯವಾಗಿರುತ್ತಿದ್ದರು….. ಸದಾ ಒಂದು ರೀತಿಯ ಅಡ್ವೆಂಚರಸ್ ಆಗಿರುತ್ತಿದ್ದರು. ಅದು ಅವರಿಗೆ ಚಿಕ್ಕಂದಿನಿಂದಲೇ ರೂಡಿಗತವಾಗಿದ್ದ ಗುಣವಾಗಿತ್ತು. ಈ ಪ್ರಗತಿಪರ ಸಂಘಟನೆಗಳ ಒಡನಾಟದಿಂದ ನಾನು ತುಂಬಾ ಕಲಿತಿದ್ದೀನಿ, ನಾನು ತುಂಬಾ ಬೆಳೆದಿದ್ದೀನಿ ಅನ್ಸುತ್ತೆ ಅಂತ ಮನಬಿಚ್ಚಿ ಹೇಳಿಕೊಳ್ಳುತ್ತಿದ್ದರು….”
“ಅವರು ಬಹಳ ಬೇಗ ಸ್ನೇಹಿತರನ್ನು ಸಂಪಾದಿಸಿಕೊಳ್ಳುತ್ತಿದ್ದರು, ಒಂದು ಭೇಟಿ, ಒಂದು ಹತ್ತು ನಿಮಿಷದ ಒಡನಾಟದಲ್ಲೇ ಬಹಳ ಆಪ್ತರು ಅನಿಸಿಬಿಡುತ್ತಿದ್ದರು. ನಮ್ಮ ಹಳ್ಳಿಯ ಮನೆಗಳಿಗೆ ಬಂದಿದ್ದಾರೆ. ಹಳ್ಳಿಯ ಜನರೊಟ್ಟಿಗೆ ಅತ್ಯಂತ ಸಹಜವಾಗಿ ಬೆರೆತಿದ್ದಾರೆ. ಅವರೊಳಗೆ ನಿಷ್ಕಲ್ಮಷತೆ, ನಂಬಿದ್ದನ್ನು ನಿರ್ಭಿಡೆಯಿಂದ ಹೇಳುವ, ಹೇಳಿದ್ದನ್ನು ಪಾಲಿಸುವ ಗುಣ ಇತ್ತು….ಹೋದಕಡೆಗಳಲ್ಲೆಲ್ಲಾ ಜನರು ಅವರಿಗೆ ಬಹಳಷ್ಟು ಪ್ರೀತಿ ಅಭಿಮಾನ ತೋರಿಸುತ್ತಿದ್ದರು, ತಮ್ಮ ಮನೆಗೆ ಕರೆಯುತ್ತಿದ್ದರು, ಉಪಚಾರ ಮಾಡುತ್ತಿದ್ದರು. ಜನರು ತೋರುತ್ತಿದ್ದ ಪ್ರೀತಿ ವಿಶ್ವಾಸ ಗೌರಿಯವರ ಸಾಮಾಜಿಕ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿತ್ತು ಅಂತ ನನಗನಿಸುತ್ತೆ.”

“ನಮ್ಮೆಲ್ಲರ ಜೊತೆ ಕೂಡಿಕೊಂಡು ನಾವೆಲ್ಲ ಏನು ತಿನ್ನುತ್ತಿದ್ದೆವೋ ಅದನ್ನೇ ಅವರೂ ತಿನ್ನುತ್ತಿದ್ದರು. ಅವರು ತಮ್ಮ ಜೀವನಮಟ್ಟದಿಂದ ಒಂದೆರಡು ಹೆಜ್ಜೆ ಕೆಳಗಿಳಿದು ಬಂದು ನಮ್ಮೆಲ್ಲರಂತೆಯೇ ಬದುಕುತ್ತಿದ್ದರು. ನಮ್ಮ ಲಂಕೇಶ್ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಯಾರೇ ಆಗಲಿ ಗೌರಿಯವರಿಂದ ಮಾಲಿಕತ್ವದ ದರ್ಪವನ್ನು ಅನುಭವಿಸಿದವರಲ್ಲ. ಬದಲಿಗೆ ಒಬ್ಬಳು ತಾಯಿಯ ಪ್ರೀತಿಯನ್ನು, ಅಕ್ಕನ ಅಕ್ಕರೆಯನ್ನು, ಒಡನಾಡಿಯ ಸ್ನೇಹಭಾವವನ್ನು ಫೀಲ್ ಮಾಡಿದ್ದೇವೆ.” ಇದು ಪಾರ್ವತೀಶ್ ಒಬ್ಬರ ಅನುಭವ ಮಾತ್ರವಲ್ಲ; ಅವರ ಒಡನಾಟದಲ್ಲಿದ್ದ ನಮ್ಮೆಲ್ಲರ ಅನುಭವ ಕೂಡ ಇದೇ ಆಗಿತ್ತು.
ಗೌರಿಯವರ ಸರಳತೆ ಬಗ್ಗೆ ಪಾರ್ವತೀಶ್ ಒಂದು ಪ್ರಸಂಗ ನೆನಪಿಸಿಕೊಂಡಿದ್ದು ಹೀಗೆ: “ನಮ್ಮ ಊರಿನ ಜಮೀನಿಗೆ ಹೋದಾಗ ಅಲ್ಲಿ ಒಂದು ಗುಡಿಸಲಿನಲ್ಲಿ ಇರುತ್ತಿದ್ದೆ. ನನ್ನ ಗೆಳೆಯರು ಅದನ್ನು ನೋಡಿ ‘ಇದೇನಿದು? ಈ ಗುಡಿಸಲಿಗೆ ಹಾವು ಚೇಳು ಎಲ್ಲಾ ಬರ್ತಾಇವೆ, ಚಿಕ್ಕದೊಂದು ಶೆಡ್ ಕಟ್ಟೋಣ’ ಅಂದರು. ಹೀಗೆ ಶುರುವಾದ ಕೆಲಸಕ್ಕೆ, ಸಿಟಿಯಲ್ಲಿರೋ ನಮ್ಮ ಕೆಲವು ಪತ್ರಕರ್ತ ಗೆಳೆಯರನ್ನು ಶೆಡ್ ಕಟ್ಟುವ ಕೂಲಿ ಕೆಲಸಕ್ಕೆ ಬನ್ನಿ ಅಂತ ಕರೆದಿದ್ದೆ. ಗೌರಿಯವರ ಜೊತೆ ಕೆಲವು ಗೆಳೆಯರು ಬಂದಿದ್ದರು, ಗೌರಿ ಎಲ್ಲರ ಜೊತೆ ಸೇರಿ ಅಲ್ಲಿ ಮಣ್ಣು ಹೊತ್ತರು, ಇಟ್ಟಿಗೆ ಹೊತ್ತರು, ಸುಣ್ಣ ಬಣ್ಣ ಮಾಡುವ ಕೆಲಸಕ್ಕೆ ಸಹಾಯ ಮಾಡಿದರು. ಇಡೀ ದಿನ ದುಡಿದರು. ಹಾಗೆಯೇ ಅಂದಿನ ಕೂಲಿ 60 ರೂಪಾಯಿಗಳನ್ನು ನನ್ನಿಂದ ವಸೂಲಿ ಮಾಡಿದರು.”
ಪಾರ್ವತೀಶ್ ನೆನಪಿಸಿಕೊಂಡಂತೆ ಗೌರಿಯವರ ಒಡನಾಟದ ಇಂತಹ ಅನೇಕ ಘಟನೆಗಳು ಅವರ ಸಾಂಗತ್ಯದಲ್ಲಿದ್ದ ನಮ್ಮ ಮನದಾಳದಲ್ಲಿ ಅಚ್ಚಳಿಯದೆ ನಿಂತಿವೆ.

ಕಂಡಿದ್ದು ಕಂಡಹಾಗೆ…
ಪ್ರತಿವಾರ ಬರೆಯುತ್ತಿದ್ದ ಅವರ ಸಂಪಾದಕೀಯ ಕಾಲಂ ‘ಕಂಡಹಾಗೆ’ನಲ್ಲಿ ತಾವು ಕಂಡಿದ್ದನ್ನು ದಾಖಲಿಸುತ್ತಿದ್ದರು. ಆದರೆ ಅವರ ಕಾಣ್ಕೆ ಏನಾಗಿತ್ತೆಂಬುದನ್ನು ಕೆದಕಿ ನೋಡಿ. ಅದರಲ್ಲಿ ಸಿದ್ದಾಂತಗಳ ಕರ್ಮಠತೆ ಇಲ್ಲ. ಪಾಂಡಿತ್ಯದ ಪ್ರದರ್ಶನವೂ ಇಲ್ಲ. ಆಡಂಬರದ ಅಲಂಕಾರಿಕ ವಾಕ್ಚಾತುರ್ಯವೂ ಅಲ್ಲಿಲ್ಲ. ಪ್ರತಿ ಸಂಚಿಕೆಯಲ್ಲೂ ನಾವು ಕಾಣಬಹುದಾದದ್ದು ಜೀವಪರವಾದ ತಾಯಿ ಹೃದಯದ ಮಿಡಿತವನ್ನು ಮಾತ್ರ. ಮಾನವೀಯತೆಯ ಮೇಲೆ ನಡೆಯುವ ಕ್ರೌರ್ಯಗಳು, ಅನ್ಯಾಯಗಳು ಸಹಜವಾಗಿಯೇ ಅವರ ಸೂಕ್ಷ್ಮ ಕಣ್ಣಿಗೆ ಹೆಚ್ಚಾಗಿ ಕಾಣುತ್ತಿದ್ದವು.
ಜಾತಿ ಧರ್ಮಗಳ ಗೋಡೆಯನ್ನು ದಾಟಿ ಪ್ರೀತಿ, ಪ್ರೇಮಗಳ ಪರವಾಗಿ ಬರೆದ ಬರಹಗಳಿಗೆ ಲೆಕ್ಕವಿಲ್ಲ. ಉದಾ: ಮಂಡ್ಯದ ಒಕ್ಕಲಿಗ ಯುವತಿ ಆಶಿತಾ ಮತ್ತು ಮುಸಲ್ಮಾನ ಯುವಕ ಶಕೀಲ್ ಅವರ ಪ್ರೇಮ ವಿವಾಹ ನಡೆಯಿತು. ಆ ನಂತರ ಕೆಲವು ಮತಾಂಧರು ಅದನ್ನು ವಿವಾದವಾಗಿಸಲು ವಿಫಲ ಪ್ರಯತ್ನ ನಡೆಸಿದ್ದರು. ಅದು ಆ ವಾರದ ‘ಕಂಡಹಾಗೆ’ ಕಾಲಂನ ವಿಚಾರವಾಗಿತ್ತು. ಕೇರಳದಲ್ಲಿ ಜಿಶಾ ಎಂಬ ಕಾನೂನು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆಗೈದಾಗ ತನ್ನ ಅಂಕಣದಲ್ಲಿ ಹೀಗೆ ಬರೆದಿದ್ದರು. ‘ನನ್ನ ಮಗಳು ಇಶಾಳ ಭವಿಷ್ಯವೇನಾಗಬಹುದೆಂಬುದನ್ನು ನೆನಪಿಸಿಕೊಂಡರೆ ನಡುಕ ಉಂಟಾಗುತ್ತದೆ. ನಮ್ಮ ಮಕ್ಕಳಿಗೆ ರಕ್ಷಣೆ ನೀಡಲು ಏನೆಲ್ಲ ಸಾಧ್ಯವಿದೆಯೋ ಆ ಎಲ್ಲವನ್ನೂ ಮಾಡಬೇಕು’. ತಾಯಿ ಹೃದಯದ ಸ್ಪಂದನೆ ಎಂದರೆ ಇದೇ ತಾನೇ?

ಮುಖ್ಯವಾಹಿನಿಯಲ್ಲಿ ಸಾಕಷ್ಟು ಸುದ್ದಿ ಮಾಡಿದ ಪ್ರಕರಣಗಳ ಬಗ್ಗೆ ಮಾತ್ರವಲ್ಲ, ಮಾಧ್ಯಮಗಳಲ್ಲಿ ಅಷ್ಟಾಗಿ ಸುದ್ದಿಯಾಗದ ಎಲ್ಲೋ ಮೂಲೆಯಲ್ಲಿ ಮರೆಯಾಗಿದ್ದ ಅದೆಷ್ಟೋ ದುರ್ಘಟನೆಗಳ ಬಗ್ಗೆ ಬರೆಯುತ್ತಿದ್ದ ರೀತಿ ಅವರ ಅಂತರಂಗದ ಆದ್ಯತೆಗಳನ್ನು ಎತ್ತಿ ತೋರಿಸುತ್ತದೆ. ತಮಿಳುನಾಡಿನಲ್ಲಿ ‘ಕೆಳಜಾತಿ’ ಹುಡುಗನನ್ನು ಮದುವೆಯಾದ ತಪ್ಪಿಗೆ ತನ್ನ ‘ಮೇಲ್ಜಾತಿ’ ತಂದೆ ತಾಯಿಗಳಿಂದಲೇ ಭೀಕರವಾಗಿ ಕೊಲೆಯಾದ ಕೌಶಲ್ಯ ಎಂಬ ನತದೃಷ್ಟ ಯುವತಿಯ ದೃಷ್ಟಾಂತವನ್ನು ನಮಗೆ ಹೆಕ್ಕಿಕೊಟ್ಟಿದ್ದಾರೆ. ಮಂಡ್ಯದಲ್ಲಿ ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ, ಹಾಡುಹಗಲೇ ತಂದೆಯಿಂದಲೇ ಕೊಲೆಯಾದ ಸುವರ್ಣ ಎಂಬ ಯುವತಿಯ ದುರಂತ ಕತೆಯನ್ನು ಹೇಳುವ ಮೂಲಕ ಅವರು ನಮ್ಮ ಮನಸ್ಸನ್ನೂ ಕಲಕಿದ್ದಾರೆ.

ಕಳೆದ ವರ್ಷದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಟೀನಾ ಎಂಬ ದಲಿತ ಯುವತಿ ಪ್ರಥಮ ಸ್ಥಾನ ಗಳಿಸಿದಾಗ ಎಷ್ಟೊಂದು ಸಂಭ್ರಮದಿಂದ ಆ ಬಗ್ಗೆ ಬರೆದಿದ್ದರು! ಜೆಎನ್‍ಯುನ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಇರಲಿ, ಜಾಧವ್‍ಪುರ ಯೂನಿವರ್ಸಿಟಿಯಲ್ಲಾದ ಅನ್ಯಾಯವಿರಲಿ, ಪುಣೆಯ ಎಫ್‍ಟಿಐಐ ನಲ್ಲಿ ಕೇಸರಿ ಕೂಟ ನಡೆಸಿದ ಸಂಚಿನ ವಿಚಾರವಿರಲಿ, ಹೀಗೆ ದೇಶದಾದ್ಯಂತ ವಿದ್ಯಾರ್ಥಿ ಯುವಜನರ ಹೋರಾಟಗಳ ಪರವಾಗಿ ಎಷ್ಟು ದೃಡವಾಗಿ ಆಕೆ ನಿಂತುಬಿಟ್ಟರು. ಬರೀ ಬರವಣಿಗೆಯ ಮೂಲಕ ಮಾತ್ರವಲ್ಲ, ಆ ಯುವ ಹೋರಾಟಗಾರರ ಜೊತೆ ಸಂಪರ್ಕ ಸಾಧಿಸಿ, ಅವರಿಗೆ ನೈತಿಕ ಸ್ಥೈರ್ಯ ತುಂಬಿದರು, ಅವರನ್ನು ತನ್ನ ಮಕ್ಕಳೆಂದು ಘೋಷಿಸಿದರು. ಅವಕಾಶ ಸಿಕ್ಕಾಗೆಲ್ಲ ಅವರನ್ನು ಕರೆದು ತಾಯಿಯಂತೆ ಉಪಚರಿಸಿದರು.

‘ಕಂಡಹಾಗೆ’ ಕಾಲಂ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ದಿನೇದಿನೇ ಅವರ ಬದುಕು ಮತ್ತು ಬರಹ ಹೆಚ್ಚೆಚ್ಚು ಹರಿತಗೊಳ್ಳುತ್ತಿದ್ದುದಕ್ಕೆ, ಅನುಭವದ ಮೂಸೆಯಲ್ಲಿ ಗುಬ್ಬಚ್ಚಿ ದೇಹದಲ್ಲಿದ್ದ ಆ ಮೇರು ವ್ಯಕ್ತಿತ್ವ ದಿನೇದಿನೇ ಮಾಗುತ್ತಿದ್ದುದಕ್ಕೆ ಸಾಕ್ಷಿಯಾಗಿದೆ. ಆದರೆ ಅವರ ವ್ಯಕ್ತಿತ್ವದ ತೂಕವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಕೆಲವರು ಅವರನ್ನು ಲಘುವಾಗಿ ಪರಿಗಣಿಸಿದ್ದುಂಟು. ಅದು ಹೇಗಿತ್ತೆಂದರೆ ತೂಕವನ್ನು ಅಳತೆ ಮಾಡಲು ಮೀಟರ್ ಟೇಪ್ ಹಿಡಿದು ನಿಂತಂತಾಗಿತ್ತು. ಒಮ್ಮೊಮ್ಮೆ ನಾನೂ ಕೂಡ ಆ ಮೀಟರ್ ಟೇಪ್ ಬಳಕೆ ಮಾಡಿದ್ದೆನೆ ಎಂಬ ಪ್ರಶ್ನೆ ನನ್ನಲ್ಲಿ ಮೂಡಿ ಹೃದಯ ಹಿಂಡಿದಂತಾಗುತ್ತದೆ.

ಬದುಕಿನ ಸಾರ್ಥಕತೆ
ಜಿ ಕೆಟಗರಿ ಸೈಟಿಗೆ, ಪ್ರಶಸ್ತಿ ಪುರಸ್ಕಾರಗಳಿಗೆ ಸಾಲುಗಟ್ಟಿ ಲಾಬಿ ಮಾಡುವ ‘ಪ್ರತಿಭಾವಂತರು’ ಯಥೇಚ್ಚವಾಗಿರುವ ಈ ಕಾಲಘಟ್ಟದಲ್ಲಿ ಗೌರಿಯವರ ಉದಾಹರಣೆ ವಿರಳದಲ್ಲೇ ವಿರಳ. ಅದರಲ್ಲೂ ಆಡಳಿತಾರೂಡ ಸರ್ಕಾರದ ಜೊತೆ ಹತ್ತಿರದ ಸಂಬಂಧ ಇದ್ದ ಪತ್ರಕರ್ತರು ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದು ಗುಟ್ಟಿನ ವಿಷಯವೇನಲ್ಲ. ಇತ್ತೀಚಿನ ದಿನಗಳಲ್ಲಿ ‘ನಿಮ್ಮ ಗೌರಿ ಮೇಡಂ ವಿಧಾನಸೌಧದ ಪಡಸಾಲೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಏನ್ ವಿಷಯ?’ ಅಂತ ಹಲವಾರು ಮಿತ್ರರು ಕುತೂಹಲದಿಂದ ಕೇಳಿದ್ದುಂಟು. ಅವರು ವಿಧಾನಸೌಧ ಸುತ್ತುತ್ತಿದ್ದುದು ವಾಸ್ತವವೂ ಆಗಿತ್ತು. ಆದರೆ ಅದ್ಯಾವುದೂ ತನ್ನ ಸ್ವಂತ ವಿಷಯಗಳಿಗೋಸ್ಕರ ಆಗಿರಲಿಲ್ಲ.
ನಕ್ಸಲೀಯರನ್ನು ಸಾಮಾಜಿಕ ಚಳವಳಿಯ ಮುಖ್ಯವಾಹಿನಿಗೆ ಕರೆತರಬೇಕೆಂಬ ವಿಷಯವನ್ನು ಅವರು ಅದೆಷ್ಟು ಮನಸ್ಸಿಗೆ ಹಚ್ಚಿಕೊಂಡಿದ್ದರೆಂದರೆ ಆ ಕೆಲಸ ಬಂದಾಗ ಉಳಿದ ಎಲ್ಲ ಕೆಲಸಗಳನ್ನು ಮುಲಾಜಿಲ್ಲದೆ ಬದಿಗೆ ಸರಿಸಿಬಿಡುತ್ತಿದ್ದರು. ದೊರೆಸ್ವಾಮಿ, ಸುಬ್ಬಯ್ಯರಂತಹ ಹಿರಿಯರ ಜೊತೆಗೂಡಿ ಆ ಕೆಲಸವನ್ನು ಒಂದು ವ್ರತದಂತೆ ಪಾಲಿಸಿದರು. ಅದೆಷ್ಟು ಬಾರಿ ಗೃಹ ಸಚಿವಾಲಯ, ಕಾನೂನು ಸಚಿವಾಲಯ, ಸಿಎಂ ಕಚೇರಿ ಸುತ್ತಿದರೋ ಅವರಿಗೇ ಗೊತ್ತು. ಅಂತೂ ಅವರ ನಿರಂತರ ಪರಿಶ್ರಮದಿಂದ 7 – 8 ಮಂದಿ ನಕ್ಸಲೀಯರು ಮುಖ್ಯವಾಹಿನಿಗೆ ಬರುವಂತಾಗಿತ್ತು. ಅಷ್ಟೆಲ್ಲಾ ಸಿಎಂ ಕಚೇರಿ ಸುತ್ತಿದರೂ ಹಿರಿಯ ಪತ್ರಕರ್ತ, ಸಿಎಂ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್‍ಮಟ್ಟು ಅವರು ಬರೆದಂತೆ ‘ಸಿ.ಎಂ ಸಿದ್ದರಾಮಯ್ಯರಿಂದ ಗೌರಿ ಸ್ವಂತಕ್ಕೆಂದು ಪಡೆದುಕೊಂಡಿದ್ದು ಒಂದು ಬುದ್ಧನ ಮೂರ್ತಿ ಮಾತ್ರ’.

ಒಂದೂವರೆ ದಶಕ ಕಾಲ ಇಂಗ್ಲಿಷ್ ಪತ್ರಿಕಾರಂಗದಲ್ಲಿ ಅದಕ್ಕಿಂತಲೂ ಹೆಚ್ಚು ಕಾಲ ‘ಲಂಕೇಶ್’ನಲ್ಲಿ – ಹೀಗೆ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ವಿರಾಮವಿಲ್ಲದೆ ದುಡಿದ ಗೌರಿ ಗಳಿಸಿದ್ದೇನು? ಅವರು ವಾಸಿಸುತ್ತಿದ್ದ ರಾಜರಾಜೇಶ್ವರಿ ನಗರದ ಮನೆ ಅಮ್ಮ ಗಳಿಸಿದ್ದು. ಲಂಕೇಶ್ ಪತ್ರಿಕೆ ನಡೆಯುತ್ತಿದ್ದ ಆಫೀಸಿನ ಜಾಗ ಅಪ್ಪನಿಂದ ಬಂದ ಪಾಲು. ಗೌರಿ ಲಂಕೇಶ್ ತೋಟ ಎಂದು ಹೆಸರಾಗಿರುವ ತೋಟ ಕೂಡ ಅಮ್ಮ ಕೊಂಡುಕೊಂಡು ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಕೊಟ್ಟಿದ್ದೇ ಹೊರತು ಅದರಲ್ಲಿ ಗೌರಿಯವರದ್ದು ಯಾವ ಪಾತ್ರವೂ ಇಲ್ಲ.
ಬೆಂಗಳೂರಿನಲ್ಲಿ ಮನೆ ನಿವೇಶನ ಬಹಳ ತುಟ್ಟಿ, ದೂರದ ಯಾವ ಮೂಲೆಯಲ್ಲಾದರೂ ಸ್ವಂತಕ್ಕೆ ಅಂತ ಕನಿಷ್ಟ 30*40 ಸೈಟನ್ನೂ ಗೌರಿ ಸಂಪಾದಿಸಿರಲಿಲ್ಲ ಅಂದರೆ ಬಹಳ ಜನ ನಂಬಲಿಕ್ಕಿಲ್ಲ. ಆದರೆ ಅದೇ ಸತ್ಯ. ಹಾಗಿದ್ದರೆ ಗೌರಿ ಲಂಕೇಶ್ ತನ್ನ ಜೀವನದಲ್ಲಿ ಏನನ್ನೂ ಗಳಿಸಿರಲಿಲ್ಲವೆ ಎಂದು ಯಾರಾದರೂ ಕೇಳಬಹುದು. ಅದಕ್ಕೆ ನಮ್ಮ ಉತ್ತರ: ಅವರು ಯಥೇಚ್ಚವಾದ ಆಸ್ತಿಯನ್ನು ಗಳಿಸಿದ್ದರು. ಬೆಲೆ ಕಟ್ಟಲಾಗದಷ್ಟು ಸಂಪತ್ತನ್ನು ಆಕೆ ಗಳಿಸಿದ್ದರು. ಆದರೆ ಆ ಅತ್ಯಮೂಲ್ಯ ಸಂಪತ್ತನ್ನು ಕರೆನ್ಸಿ ನೋಟುಗಳ ಮೂಲಕ ಲೆಕ್ಕ ಹಾಕಲಾಗುವುದಿಲ್ಲ. ಆ ಸಂಪತ್ತು ಆಕೆಯ ಪಾರ್ಥೀವ ಶರೀರದ ಸುತ್ತಲೂ ಜೇನುಹುಳುಗಳ ಹಾಗೆ ಮುತ್ತಿಕೊಂಡಿತ್ತು. ಆಕೆಯ ಅಕಾಲಿಕ ಸಾವಿಗೆ ಮರುಗಿ ಕಣ್ಣೀರು ಮಿಡಿದಿತ್ತು. ರಾಜ್ಯದ ಮೂಲೆಮೂಲೆಗಳಲ್ಲಿ, ಅಷ್ಟೇ ಏಕೆ? ಇಡೀ ದೇಶದಾದ್ಯಂತ ಗೌರಿಯ ಅಮಾನವೀಯ ಹತ್ಯೆಯನ್ನು ಖಂಡಿಸಿ, ಆಕ್ರೋಶದಿಂದ ಬೀದಿಗಿಳಿದಿತ್ತು. ಹೌದು ನಿಜ, ನಮ್ಮ ಸಮಾಜವನ್ನು ಮಾನವೀಯಗೊಳಿಸಬೇಕೆಂದು ತುಡಿಯುತ್ತಿರುವ ಲಕ್ಷಾಂತರ ಜೀವಪರ ಮನಸ್ಸು ಹಾಗೂ ಹೃದಯಗಳಲ್ಲಿ ಗೌರಿ ಲಂಕೇಶ್ ಪಾಲು ಗಳಿಸಿಕೊಂಡಿದ್ದರು. ಇಂಥಾ ಸಂಪತ್ತು ಗಳಿಸುವುದು ನಮ್ಮಲ್ಲಿ ಎಷ್ಟು ಜನರಿಗೆ ಸಾಧ್ಯ? ಇಂಥಾ ಸಂಪತ್ತಿನ ಮೌಲ್ಯಮಾಪನ ಮಾಡುವ ಮಾನದಂಡಗಳನ್ನು ಮನುಕುಲ ಅಭಿವೃದ್ಧಿಪಡಿಸಿದೆಯೆ?
ಇಂದು ಗೌರಿ ಲಂಕೇಶ್ ಅಮರ್ ರಹೇ ಎಂಬುದು ಬರೀ ಘೋಷಣೆಯಾಗಿ ಉಳಿದಿಲ್ಲ. ‘ನಾನೂ ಗೌರಿ, ನಾವೆಲ್ಲ ಗೌರಿ’ ಎಂದು ಸಾವಿರಾರು ಯುವಕ-ಯುವತಿಯರು ಹೃದಯಾಂತರಾಳದಿಂದ ಕೂಗಿ ಕೂಗಿ ಹೇಳುತ್ತಿದ್ದಾರೆ. ಗೌರಿಯ ಹತ್ಯೆ ಅವರಲ್ಲಿ ಹೋರಾಟದ ಕೆಚ್ಚನ್ನು ಮೂಡಿಸಿರುವುದು ಗೋಡೆಯ ಮೇಲಿನ ಬರಹದಂತೆ ನಿಚ್ಚಳವಾಗಿದೆ. ತಾನು ನಂಬಿಕೊಂಡ ಆದರ್ಶ ಮತ್ತು ಬದ್ಧತೆಗಳಿಗಾಗಿಯೇ ಬಲಿದಾನ ಮಾಡಿದ ಗೌರಿ ಲಂಕೇಶ್‍ರದು ಎಂಥಾ ಸಾರ್ಥಕ ಬದುಕು!!

ಶತೃಗಳು ಯಾರು?
ಅಂತರ್‍ರಾಷ್ಟ್ರೀಯ ಖ್ಯಾತಿಯ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಗೌರಿಯವರ ಬಗ್ಗೆ ಹೀಗೆ ಬರೆದಿತ್ತು: “If you judge the caliber of an editor by the quality of her enemies, Gauri Lankesh was one of India’s best”. (ಸಂಪಾದಕರ ಸಾಮರ್ಥ್ಯವನ್ನು ಅವರು ಎಂತೆಂಥಾ ಶತೃಗಳನ್ನು ಹೊಂದಿದ್ದಾರೆ ಎಂಬುದರ ಆಧಾರದ ಮೇಲೆ ನೀವು ನಿರ್ಧರಿಸುವುದಾದರೆ ಗೌರಿ ಲಂಕೇಶ್ ಭಾರತದ ಅತ್ಯುತ್ತಮ ಸಂಪಾದಕರಲ್ಲಿ ಒಬ್ಬರಾಗಿದ್ದಾರೆ.) ಇದು ನಿಜಕ್ಕೂ ಅರ್ಥಪೂರ್ಣವಾದ ಮಾತು. ಗೌರಿ ಲಂಕೇಶ್ ಹಿಂಸೆ, ರಕ್ತಪಾತಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದರು. ಹಿಂಸಾಚಾರ, ದೊಂಬಿಗಳನ್ನು ಹುಟ್ಟುಹಾಕಿ, ಸಮಾಜವನ್ನು ವಿಭಜಿಸುವ ಮೂಲಕವೇ ರಾಜಕೀಯ ಲಾಭಗಳಿಸಲು ದುಷ್ಟಕೂಟವೊಂದು ಷಡ್ಯಂತ್ರ ಮಾಡುತ್ತಿರುವುದನ್ನು ಅವರ ಸಹಜ ಮಾನವೀಯ ಕಳಕಳಿಯ ಸೂಕ್ಷ್ಮಮತಿ ಸುಲಭವಾಗಿ ಗ್ರಹಿಸಿತ್ತು. ದೇಶಾದ್ಯಂತ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ದನದ ಹೆಸರಿನಲ್ಲಿ ಈ ದುಷ್ಟ ಕೂಟ ನಡೆಸುತ್ತಿರುವ ರಕ್ತಪಾತ, ಕೊಲೆಗಳನ್ನು ಅತ್ಯಂತ ಕಟುಮಾತುಗಳಲ್ಲಿ ಅವರು ಖಂಡಿಸಿದರು. ಇಂಥಾ ದುಷ್ಟಕೂಟದ ವಿರುದ್ಧ ನಡೆಯುತ್ತಿರುವ ಎಲ್ಲ ಜೀವಪರ ಚಳವಳಿಗಳ ಜೊತೆ ತನ್ನನ್ನು ತಾನು ಗುರುತಿಸಿಕೊಂಡರು.
ಅಷ್ಟು ಮಾತ್ರವಲ್ಲದೆ, ವ್ಯವಸ್ಥೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಅಮಾಯಕರನ್ನು ತುಳಿಯುತ್ತಿರುವ ಭ್ರಷ್ಟರ ವಿರುದ್ಧ, ಜಾತಿವಾದಿಗಳ ವಿರುದ್ಧ, ಎಲ್ಲ ಬಗೆಯ ಸಮಾಜಘಾತುಕ ಶಕ್ತಿಗಳ ವಿರುದ್ಧ ಅವರು ಯಾವುದೇ ಪಕ್ಷದವರಾಗಿರಲಿ, ಅಂಥವರ ವಿರುದ್ಧ ಗಟ್ಟಿ ದನಿಯೆತ್ತಿದರು.

ಈ ಎಲ್ಲದರ ಪರಿಣಾಮವಾಗಿ ಅವರು ಡಜನ್‍ಗಟ್ಟಲೆ ಕೇಸುಗಳನ್ನು ಎದುರಿಸಬೇಕಾಯ್ತು. ಕೇಸುಗಳಿಗೆ ಹಾಜರಾಗಲು ಊರಿಂದ ಊರಿಗೆ ಅಲೆಯುವುದು ಅವರ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತ್ತು, ಹೈರಾಣಾಗಿಸಿತ್ತು. ಆದರೆ ಅವರ ಆತ್ಮಸ್ಥೈರ್ಯ ಸ್ವಲ್ಪವೂ ಕುಂದಲಿಲ್ಲ; ಅವರು ಅದೇ ಹುರುಪಿನಲ್ಲಿ ತಮ್ಮ ಕಾಯಕವನ್ನು ಮುಂದುವರೆಸಿದ್ದರು. ತಮ್ಮ ರಾಜಕೀಯ ಹಾದಿಗೆ ಅಡ್ಡವಾಗಿರುವ ಈ ದಿಟ್ಟ ಮಹಿಳೆಯನ್ನು ಮುಗಿಸಿಬಿಡಲು ಆ ದುಷ್ಟಕೂಟ ರೂಪಿಸಿದ ಸಂಚಿನ ಪ್ರಕಾರ ಸೆಪ್ಟೆಂಬರ್ 5ರ ರಾತ್ರಿಯ ಕರಾಳ ಘಟನೆ ನಡೆದುಹೋಯಿತು.
ಪತ್ರಕರ್ತರಾಗಿರುವ ನಾವೆಲ್ಲ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆಯೊಂದಿದೆ. ಒಟ್ಟಾರೆ ದೇಶದ ಪತ್ರಿಕೋದ್ಯಮದಲ್ಲಿ, ಅಂದರೆ ಎಲ್ಲಾ ಭಾಷೆಗಳನ್ನೂ ಒಳಗೊಂಡು ಎಷ್ಟು ಮಂದಿ ಮಹಿಳಾ ಸಂಪಾದಕರಿದ್ದಾರೆ? ಒಟ್ಟಾರೆ ಪತ್ರಕರ್ತ ಸಮೂಹದಲ್ಲಿ ಪಟ್ಟಭದ್ರರ ವಿರುದ್ಧ ರಾಜಿರಹಿತವಾಗಿ ನಿಂತವರು ಎಷ್ಟು ಮಂದಿ ಇದ್ದಾರೆ? ಗೌರಿ ಲಂಕೇಶ್ ಎಂಬ ಹೆಸರು ದೇಶದ ಲಕ್ಷಾಂತರ ಪತ್ರಕರ್ತ ಸಮೂಹದ ನಡುವೆ ಢಾಳಾಗಿ ಎದ್ದುಕಾಣುವುದು ಇದೇ ಕಾರಣಗಳಿಗಾಗಿ.

ಕಾಣದ ಕೈಗಳು
ಈ ಕೊಲೆ ಮಾಡಿದವರು ಒಂದುವೇಳೆ ಸಿಕ್ಕರೂ ಕೊಲೆ ಮಾಡಿಸಿದ ಸಂಚುಕೂಟ ಕಾನೂನಿನ ಬಲೆಗೆ ಸಿಕ್ಕಿಬೀಳುವುದು ಕಷ್ಟ ಸಾಧ್ಯ. ಯಾಕೆಂದರೆ ಈ ಸಂಚುಕೂಟಕ್ಕೆ ಸಾವಿರಾರು ವರ್ಷಗಳ ಪರಿಣತಿಯಿದೆ. ನಗುನಗುತ್ತಲೇ ವಿಷವುಣಿಸುವ ಕಲೆಯಲ್ಲಿ ಅವರು ವಿಶೇಷ ಪರಿಣತಿ ಸಾಧಿಸಿದ್ದಾರೆ. ನಿಮ್ಮ ಬೆರಳಿನಿಂದಲೇ ನಿಮ್ಮ ಕಣ್ಣು ಚುಚ್ಚುವ ಕಲೆ ಅವರಿಗೆ ಕರತಲಾಮಲಕ. ಅವರು ಚಾರ್ವಾಕರನ್ನು ಕೊಲ್ಲಿಸಿದರು, ಬೌದ್ಧ ಬಿಕ್ಕುಗಳನ್ನು ಬೇಟೆಯಾಡಿ ಈ ದೇಶದಿಂದಲೇ ಓಡಿಸಿದವರು. ನೂರಾರು ವಚನಕಾರರನ್ನು ಕಲ್ಯಾಣದ ಹಾದಿಬೀದಿಗಳಲ್ಲಿ ಕೊಚ್ಚಿ ಕೊಲ್ಲಿಸಿದವರು. ಮುಖವಾಡಗಳಾಚೆಗಿನ ಈ ಸಂಚುಕೋರರ ಮುಖಗಳನ್ನು ಯಾರಾದರೂ ಗುರುತಿಸಿದ್ದಾರೆಯೆ? ಈ ಸಂಚುಕೋರರ ಹೆಸರುಗಳನ್ನು ಇತಿಹಾಸ ದಾಖಲಿಸಿದೆಯೆ?
ನಂತರ ಅವರು ಗಾಂಧಿಯನ್ನು ಕೊಲ್ಲಿಸಿದರು. ಗೋಡ್ಸೆ ಎಂಬ ಕೊಲೆಗಾರ ನೇಣಿಗೇರಿದನಾದರೂ ಕೊಲೆ ಮಾಡಿಸಿದ ಈ ಸಂಚುಕೂಟ ಮಾತ್ರ ಅಭಾದಿತವಾಗಿ ಮುಂದುವರೆಯಿತು. ತಮ್ಮ ರಾಜಕೀಯ ದಾಳಕ್ಕೆ ಸಾವಿರಾರು ಅಮಾಯಕರನ್ನು ಬೀದಿ ಹೆಣಗಳನ್ನಾಗಿಸಿತು. ನಂತರ ಅವರು ದಾಬೋಲ್ಕರ್ ಹಾಗೂ ಪನ್ಸಾರೆಯರನ್ನು ಕೊಲ್ಲಿಸಿದರು. ಎರಡು ವರ್ಷಗಳ ಹಿಂದೆ ಕನ್ನಡದ ವಿಧ್ವಾಂಸ ಕಲ್ಬುರ್ಗಿಯನ್ನು ಕೊಲ್ಲಿಸಿದರು. ಆದರೆ ಏನಾಯ್ತು? ಸಂಚುಕೂಟ ಸಿಕ್ಕಿ ಬೀಳುವುದು ಹಾಗಿರಲಿ, ಕೊಲೆ ಮಾಡಿದ ಕೈಗಳ ಜಾಡೂ ಸಿಗಲಿಲ್ಲ.
ಈಗ ಗೌರಿಯವರ ಹತ್ಯೆಯಾಗಿದೆ. ಈ ಹತ್ಯೆಯ ಹಿಂದೆ ಯಾರಿದ್ದಾರೆ ಎಂಬುದನ್ನು ದೇಶದ ಬೀದಿಬೀದಿಗಳಲ್ಲಿ ಸಾವಿರಾರು ಮಂದಿ ಕೂಗಿ ಹೇಳುತ್ತಿದ್ದಾರೆ. ಆದರೆ ಸಾಕ್ಷ್ಯಾಧಾರಗಳು ಲಭ್ಯವಿಲ್ಲ, ಅಷ್ಟೇ. ಸುಪ್ರಿಂಕೋರ್ಟಿನ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರ ಮಾತು ಇಲ್ಲಿ ಉಲ್ಲೇಖನೀಯ. “ಗೌರಿ ತಮ್ಮ ಜೀವನದುದ್ದಕ್ಕೂಯಾರ ವಿರುದ್ಧ ಇದ್ದರು ಎಂಬುದು ನಮಗೆ ಗೊತ್ತು. ಗೌರಿಯವರಿಗೆ ಬೆದರಿಕೆ ಒಡ್ಡುತ್ತಿದ್ದವರು ಯಾರು ಅಂತ ನಮಗೆ ಗೊತ್ತು, ಅವರ ಸಾವನ್ನು ಈಗ ಯಾರು ಸಂಭ್ರಮಿಸುತ್ತಿದ್ದಾರೆ ಎಂಬುದೂ ಗೊತ್ತು. ಹೀಗೆ ಸಂಭ್ರಮಿಸುವ ಮಂದಿಯನ್ನು ಟ್ವಿಟರ್‍ನಲ್ಲಿ ಯಾರು ಫಾಲೋ ಮಾಡ್ತಿದಾರೆ ಅನ್ನೋದು ಕೂಡ ನಮಗೆ ಗೊತ್ತು”. ಅಷ್ಟೇ ಅಲ್ಲ, ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದ ಅದೇ 7.65 ಕಂಟ್ರಿಮೇಡ್ ಪಿಸ್ತೂಲಿನಿಂದಲೇ ಗೌರಿ ಲಂಕೇಶ್ ಹತ್ಯೆಯಾಗಿದೆ ಅಂತ ಫಾರೆನ್ಸಿಕ್ ಟೆಸ್ಟ್ ರಿಪೋರ್ಟ್‍ಗಳೂ ಕೂಡ ಸಾರಿ ಹೇಳುತ್ತಿವೆ. “ಚಡ್ಡಿಗಳ ಮಾರಣಹೋಮ ಅಂತ ಬರೆಯದೇ ಇದ್ದಿದ್ರೆ ಗೌರಿ ಹತ್ಯೆಯಾಗ್ತಿತ್ತಾ?” ಅಂತ ಬಿಜೆಪಿ ಶಾಸಕ ಜೀವರಾಜ್ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ಕನ್‍ಫೆಷನ್ ಸ್ಟೇಟ್‍ಮೆಂಟ್ ಅಂತ ಪರಿಗಣಿಸಲಾಗುವುದಿಲ್ಲ ನಿಜ; ಆದರೆ ಕನ್‍ಫರ್ಮಿಂಗ್ ಸ್ಟೇಟ್‍ಮೆಂಟ್ ಅಂತ ಪರಿಗಣಿಸಲು ಸಾಧ್ಯವೆ ಎಂಬುದನ್ನು ಕಾನೂನು ಪಂಡಿತರು ಹೇಳಬೇಕು.

ಸಾವಿರಾರು ಗೌರಿಯರು!!
ಸೆಪ್ಟೆಂಬರ್ 12ನೇ ತಾರೀಕು ಬೆಂಗಳೂರಿನಲ್ಲಿ ನಡೆದ ಪ್ರತಿರೋಧ ಸಮಾವೇಶದಲ್ಲಿ ನೆರೆದಿದ್ದ ಸಹಸ್ರಾರು ಜನರನ್ನುದ್ದೇಶಿಸಿ, ಗೌರಿಯ ತಾಯಿ ಇಂದಿರಾ ಲಂಕೇಶ್ ಅವರು ಒತ್ತರಿಸಿ ಬರುತ್ತಿದ್ದ ದುಃಖದ ನಡುವೆ ಆಡಿದ ಮಾತುಗಳನ್ನು ನೆನಪಿಸಿಕೊಳ್ಳೋಣ. “ಎಲ್ಲರಿಗೂ ನಮಸ್ಕಾರ, ಇಲ್ಲಿ ಸೇರಿರುವ ಅನೇಕಾನೇಕ ಗೌರಿಯರಿಗೂ ನಮಸ್ಕಾರ. ನನ್ನ ಮಗಳು ಪಿಯುಸಿ ಆದಮೇಲೆ ಇಂಜಿನಿಯರ್ ಆಗಲಿ ಅಂತ ನನಗೆ ಆಸೆ ಇತ್ತು. ಆದರೆ ಪತ್ರಿಕೋದ್ಯಮ ಆರಿಸಿಕೊಂಡಳು. ಅದಕ್ಕೆ ಪೂರ್ತಿ ನ್ಯಾಯ ಒದಗಿಸಿಕೊಟ್ಟಳು. ಅವಳಂತಹ ಎಷ್ಟೋ ಗೌರಿಯರನ್ನು ಹುಟ್ಟು ಹಾಕಿದಳು, ಧೈರ್ಯದಿಂದ ಹೋರಾಡಲಿಕ್ಕೆ ಪ್ರೇರೇಪಣೆ ಮಾಡಿದಳು. ನನಗೆ ಆ ಬಗ್ಗೆ ಹೆಮ್ಮೆ ಇದೆ, ನಿಮ್ಮೆಲ್ಲರ ಬಗ್ಗೆ ಹೆಮ್ಮೆ ಇದೆ. ಅವಳು ನಿಮ್ಮ ಗೌರಿ, ನೀವೆಲ್ಲರೂ ನನ್ನ ಗೌರಿಯರು”

ಕೊಲೆಯ ಸಂಚುಕೋರರು ಈ ದೇಶಕ್ಕೆ ಒಂದು ಸ್ಪಷ್ಟ ಸಂದೇಶ ಕೊಡಲು ಬಯಸಿದ್ದರು; ತಮ್ಮ ವಿರುದ್ಧ ನಿಲ್ಲುವ ಪ್ರಜ್ಞಾವಂತ ಜನತೆಯಲ್ಲಿ ಜೀವಬೆದರಿಕೆ ಉಂಟುಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ಈ ದೇಶದ ಜನತೆ, ಅದರಲ್ಲೂ ಕನ್ನಡನಾಡಿನ ಜನತೆ, ಅದರಲ್ಲೂ ಮುಖ್ಯವಾಗಿ ಸಾವಿರಾರು ಯುವಕ-ಯುವತಿಯರು “ನಾನೂ ಗೌರಿ! ನಾವೆಲ್ಲಾ ಗೌರಿ!!” ಎಂದು ಒಕ್ಕೊರಲಿನಿಂದ ಕೂಗಿ ಹೇಳಿ ಈ ಸಂಚುಕೂಟಕ್ಕೆ ಬೇರೆಯದೇ ಸಂದೇಶವನ್ನು ರವಾನಿಸಿದ್ದಾರೆ. ನೀವು ವ್ಯಕ್ತಿಗಳಿಗೆ ಗುಂಡಿಕ್ಕಬಹುದೇ ಹೊರತು ವಿಚಾರಗಳಿಗೆ ಗುಂಡಿಕ್ಕಲು ನಿಮ್ಮಿಂದ ಎಂದಿಗೂ ಸಾಧ್ಯವಿಲ್ಲ; ಒಬ್ಬಳು ಗೌರಿಯ ವಿಚಾರವನ್ನು ಸಾವಿರಾರು ಗೌರಿಯರಾಗಿ ನಾವು ಮುಂದುವರೆಸುತ್ತೇವೆ. ಗೌರಿ ಸದಾ ನಮ್ಮೊಳಗೆ ಜೀವಂತವಾಗಿದ್ದು ಹೋರಾಟದ ಕೆಚ್ಚನ್ನು ಹೆಚ್ಚಿಸುತ್ತಿರುತ್ತಾಳೆ.
ಈಜಿಪ್ಟ್ ಬಂಡಾಯದ ಸಂದರ್ಭದಲ್ಲಿ ಹುಟ್ಟಿಕೊಂಡ ಒಂದು ಮಾತು ಇಂದು ಸಾಮಾಜಿಕ ಮಾಧ್ಯಮದಲ್ಲಿ ಜನಜನಿತವಾಗಿದೆ. “The power of the people is stronger than the people in power”. ಅಂದರೆ ಅಧಿಕಾರದಲ್ಲಿರುವವರ ಬಲಕ್ಕಿಂತ ಜನಶಕ್ತಿಯ ಬಲ ಹೆಚ್ಚು ಬಲಿಷ್ಠವಾದುದು. ಅಂಥಾ ಜನಶಕ್ತಿಯ ಬಲವನ್ನು ನಿರೂಪಿಸಲು ನಾವೆಲ್ಲರೂ ಒಗ್ಗೂಡಿ ದನಿಯೆತ್ತುವ ಮೂಲಕ ನಮ್ಮ ಸಂಗಾತಿ ಗೌರಿಗೆ ಶ್ರದ್ದಾಂಜಲಿ ಸಲ್ಲಿಸೋಣ.

  • – ದೊಡ್ಡಿಪಾಳ್ಯ ನರಸಿಂಹಮೂರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...