Homeಅಂಕಣಗಳುಮಾತು ಮರೆತ ಭಾರತ; ಕಂಬಾಲಪಲ್ಲಿ ಫೈಲ್: ನ್ಯಾಯ ನೀಡದ ನ್ಯಾಯಾಲಯ

ಮಾತು ಮರೆತ ಭಾರತ; ಕಂಬಾಲಪಲ್ಲಿ ಫೈಲ್: ನ್ಯಾಯ ನೀಡದ ನ್ಯಾಯಾಲಯ

- Advertisement -
- Advertisement -

ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾಗಿ ದಲಿತರನ್ನು ಹತ್ಯೆ ಮಾಡಿದ್ದು ಕಂಬಾಲಪಲ್ಲಿಯಲ್ಲಿ. ಭಾರತದ ಇತಿಹಾಸದಲ್ಲಿ ಎಂದೆಂದಿಗೂ ಮರೆಯಲಾಗದ-ಮರೆಯಬಾರದ ದಲಿತ್ ಫೈಲ್.

ಕರ್ನಾಟಕದ ಅವಿಭಜಿತ ಕೋಲಾರ ಜಿಲ್ಲೆಯು ಆಂಧ್ರದ ರಾಯಲಸೀಮೆಯ ಎಲ್ಲಾ ಫ್ಯೂಡಲ್ ಲಕ್ಷಣಗಳನ್ನು ಒಳಗೊಂಡಿರುವ ಜಿಲ್ಲೆ. ಈ ಕಾರಣಕ್ಕಾಗಿಯೇ ದಲಿತ ಸಂಘರ್ಷ ಸಮಿತಿಯು ಅಲ್ಲಿ ಸಕ್ರಿಯವಾಗಿತ್ತು ಹಾಗೂ ಇಂದಿಗೂ ಉಸಿರಾಡುತ್ತಿದೆ. 70ರ ದಶಕದಲ್ಲಿ ಮುಳಬಾಗಿಲ ಬಳಿ ದಲಿತ ಯುವಕ ಮುನಿವೆಂಕಟಪ್ಪನನ್ನು ಮೇಲ್ಜಾತಿಯ ಕೆಲವು ರೆಡ್ಡಿ ಭೂಮಾಲೀಕರು ಕೊಲೆ ಮಾಡಿದ್ದ ಸಮಯದಿಂದ ಹಿಡಿದು 2020ರಲ್ಲಿ ಶ್ರೀನಿವಾಸಪುರದಲ್ಲಿ ದಲಿತ ಯುವತಿಯನ್ನು ಬಟಾಬಯಲೇ ಥಳಿಸಿದ ಘಟನೆಯವರೆಗೂ ಅಲ್ಲಿ ಮೇಲ್ಜಾತಿ ಮತ್ತು ದಲಿತರ ನಡುವೆ ಸಂಘರ್ಷವಿದ್ದೇ ಇದೆ. ದಲಿತ ಸಂಘರ್ಷ ಸಮಿತಿಯ ಸ್ಥಾಪನೆ ನಂತರ ಮೊಟ್ಟಮೊದಲ ಬಾರಿಗೆ ಮೇಲ್ಜಾತಿಗಳ ವಿರುದ್ಧ ದಲಿತರು ಕೇಸು ದಾಖಲಿಸಿದರು. ನ್ಯಾಯಾಲಯದಲ್ಲಿ ದಲಿತರಿಗೆ ಸೋಲುಂಟಾಯಿತಾದರೂ ಫ್ಯೂಡಲ್ ಮನಸ್ಥಿತಿಗೆ ಒಂದು ರೀತಿಯ ಭಯ ಹುಟ್ಟಿಸುವಲ್ಲಿ ದಸಂಸ ಯಶಸ್ವಿಯಾಯಿತು. ದಸಂಸ ಆರಂಭಿಸಿ ಯಶಸ್ಸು ಪಡೆದ ಭೂಹೋರಾಟಗಳು ಸಹ ಭೂಮಾಲೀಕರ ಕಣ್ಣನ್ನು ಕೆಂಪಗಾಗಿಸಿದವು. ಶೇಷಗಿರಿಯಪ್ಪನ ಕೊಲೆ-ಅನುಸೂಯಮ್ಮನ ಅತ್ಯಾಚಾರ ವಿರುದ್ಧದ ಹೋರಾಟ, ನಾಗಸಂದ್ರ ಭೂಹೋರಾಟ ದಲಿತ ಸಂಘರ್ಷ ಸಮಿತಿಯ ಪ್ರಾಬಲ್ಯವನ್ನು ಇಡೀ ನಾಡಿಗೆ ಸಾರಿದವು. ಹೀಗಿರುವಾಗ 1997ರಲ್ಲಿ ಬಿಲ್ಲಾಂಡ್ಲಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಅಲ್ಲಿಯ ಒಕ್ಕಲಿಗ ಯುವ ವೇದಿಕೆ ನಡುವೆ ನಡೆದ ಸಂಘರ್ಷ ಮನೆಮಾತಾಯಿತು. ಪೊಲೀಸರು ಸಹ ಬೆಚ್ಚಿಬಿದ್ದರು. ಇಲ್ಲಿ ಮೇಲ್ಜಾತಿ ಭೂಮಾಲೀಕರು ಪೊಲೀಸರನ್ನೇ ಕೊಂದು ಹಾಕಿದರೂ ಯಾರಿಗೂ ಶಿಕ್ಷೆಯಾಗಲಿಲ್ಲ. ’ಪೊಲೀಸರನ್ನೇ ಹೊಡೆದು ಗೆದ್ದೆವು’ ಎಂದು ಬೀಗಿದ ಮೇಲ್ಜಾತಿ ಜನರಲ್ಲಿ ಅಹಂಕಾರ ಮೂಡಿತು. ಕಾನೂನಿನ ಕೈಗಳಿಂದ ಬಚಾವಾಗುವ ಎಲ್ಲಾ ತಂತ್ರಗಳನ್ನು ಬಲ್ಲವರಾದರು. ಇದಕ್ಕೆ ತಕ್ಕಂತೆ ಸ್ಥಳೀಯ ಮಟ್ಟದಿಂದ ರಾಜ್ಯಮಟ್ಟದವರೆಗೆ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಎಲ್ಲಾ ಸಾಮರ್ಥ್ಯವನ್ನು ಒಕ್ಕಲಿಗರು ಆ ಸಮಯಕ್ಕೆ ಪಡೆದುಕೊಂಡಾಗಿತ್ತು. ಇಂತಹ ಪರಿಸ್ಥಿತಿಯಲ್ಲಿಯೇ ಬಲಿಯಾದದ್ದು ಕಂಬಾಲಪಲ್ಲಿಯ ದಲಿತರ ಕುಟುಂಬಗಳು.

ಕಂಬಾಲಪಲ್ಲಿಯ ವೆಂಕಟರಾಯಪ್ಪನ ಗಂಡು ಮಕ್ಕಳಾದ ವೆಂಕಟರಮಣಪ್ಪ, ಅಂಜಿನಪ್ಪ ಮತ್ತು ಶ್ರೀರಾಮಪ್ಪ ಮೂವರೂ ವಿದ್ಯಾವಂತರು. ಅಂಜಿನಪ್ಪ ಶಿಕ್ಷಕರು. ಶ್ರೀರಾಮಪ್ಪ ಪದವಿ ಓದುತ್ತಿದ್ದನು. ತಳಮಟ್ಟದಿಂದ ಕುಟುಂಬ ಮೇಲೇಳುತ್ತಿತ್ತು. ಸ್ವಾಭಿಮಾನ ತಂತಾನೆ ಶಿಕ್ಷಣದಿಂದ ಹರಳುಗಟ್ಟಿತ್ತು. ಹೀಗಿರುವಾಗ 1997ರಲ್ಲಿ ಒಕ್ಕಲಿಗ ಹಾಗೂ ದಲಿತರ ಕುರಿಗಳು ಕಳ್ಳತನವಾಗಿದ್ದವು. ಈ ಕಳ್ಳತನವನ್ನು ವೆಂಕಟರಮಣಪ್ಪ ಸೇರಿದಂತೆ ಮೂವರು ದಲಿತರ ಮೇಲೆ ಆರೋಪಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ನೆರವಿನಿಂದ ಕುರಿಗಳನ್ನು ಪತ್ತೆ ಹಚ್ಚುವಲ್ಲಿ ವೆಂಕಟರಮಣಪ್ಪ ಯಶಸ್ವಿಯಾದ. ನಿಜವಾಗಿ ಆ ಕುರಿಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದವರು ಮದ್ದಿರೆಡ್ಡಿ ಮತ್ತು ಇತರೆ ಒಕ್ಕಲಿಗರೇ ಆಗಿದ್ದರು. ಈ ಘಟನೆಯಿಂದ ಕಂಬಾಲಪಲ್ಲಿಯ ಒಕ್ಕಲಿಗರಿಗೆ ಅವಮಾನವುಂಟಾಗಿ ದಲಿತರ ಮೇಲೆ ಸೇಡು ಬೆಳೆಯಿತು. ಈ ಮಧ್ಯೆ ಒಂದು ದಿನ ವೆಂಕಟರಮಣಪ್ಪ ಕೊಲೆಯಾಗಿ ಹೋದರು. ಈ ಕೊಲೆ ಯಾರು ಮಾಡಿದ್ದರೆಂಬುದು ಎಲ್ಲರಿಗೂ ತಿಳಿದಿತ್ತಾದರೂ ನ್ಯಾಯ ಸಿಗಲಿಲ್ಲ. ಎಲ್ಲಾ ಆರೋಪಿಗಳೂ ಸಾಕ್ಷಿ ಇಲ್ಲದೆ ಖುಲಾಸೆಯಾಗಿ ಹೋದರು.

ಮಾರ್ಚ್ 10, 2000ರಂದು ವೆಂಕಟರೆಡ್ಡಿ ಮತ್ತು ದಲಿತ ಶಂಕರಪ್ಪನ ನಡುವೆ ಟಿವಿಎಸ್ ಮೋಟಾರು ಸೈಕಲ್ಲಿಗೆ ದಾರಿ ಬಿಡುವ ವಿಚಾರದಲ್ಲಿ ಜಗಳವಾಯಿತು. ಶಂಕರಪ್ಪನಿಗೆ ಒಕ್ಕಲಿಗರ ಗುಂಪೊಂದು ಥಳಿಸಿತು. ಪೊಲೀಸರಿಗೆ ಫೋನ್ ಮಾಡಲಾಗಿ ಮೀಸಲು ಪಡೆ ಕಂಬಾಲಪಲ್ಲಿಗೆ ಬಂದಿತ್ತು. ಮಾರ್ಚ್ 11, 2000ರಂದು ಇದರ ವಿರುದ್ಧ ದೂರು ಸಲ್ಲಿಸಲು ಚಿಂತಾಮಣಿಗೆ ಶ್ರೀರಾಮಪ್ಪನ ಸಮೇತ ಕೆಲವು ದಲಿತರು ತೆರಳಿದ್ದರು. ಹಾಗೆಯೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದು ಅಂದು ಸಂಜೆ ಕಂಬಾಲಪಲ್ಲಿಗೆ ಹಿಂದಿರುಗಿದಾಗ ದಲಿತರ ಬರುವಿಗಾಗಿಯೇ ಕಾಯುತ್ತಿದ್ದ ಒಕ್ಕಲಿಗರ ತಂಡವೊಂದು ಅವರ ಮೇಲೆ ಮುಗಿಬಿತ್ತು. ಈ ಗಲಾಟೆಯಲ್ಲಿ ಕೃಷ್ಣಾರೆಡ್ಡಿ ಎಂಬ ನೀರುಗಂಟಿ ನಿಧನರಾಗುತ್ತಾರೆ. ಈ ಕೊಲೆಯನ್ನು ದಲಿತರ ತಲೆಗೆ ಕಟ್ಟಲಾಯಿತು. ನಂತರ ಗುಂಪು ಕಟ್ಟಿಕೊಂಡು ದಲಿತರ ಕೇರಿಗೆ ಹೋದ ಒಕ್ಕಲಿಗರು ವೆಂಕಟರಾಯಪ್ಪನ ಮನೆಗೆ ಹೊರಗಡೆಯಿಂದ ಬೀಗ ಹಾಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮವಾಗಿ ಮನೆಯೊಳಗಿದ್ದ ಶ್ರೀರಾಮಪ್ಪ, ಅಂಜಿನಪ್ಪ, ರಾಮಕ್ಕ, ಸುಬ್ಬಕ್ಕ, ಪಾಪಮ್ಮ, ನರಸಿಂಹಯ್ಯ, ಚಿಕ್ಕಪಾಪಣ್ಣ ಎಂಬ ಏಳು ಜೀವಗಳು ಸುಟ್ಟು ಕರಕಲಾಗಿ ಹೋದವು. ರಾತ್ರೋರಾತ್ರಿ ಅಲ್ಲಿನ ದಲಿತರು ಜೀವ ಉಳಿಸಿಕೊಳ್ಳಲು ಚಲ್ಲಾಪಿಲ್ಲಿಯಾಗಿ ಎತ್ತೆತ್ತಲೋ ಓಡಿಹೋಗಿದ್ದರು. ಇವರ ಪೈಕಿ ತನ್ನ ಕುಟುಂಬದ ಐವರನ್ನು ಕಳೆದುಕೊಂಡ ವೆಂಕಟರಾಯಪ್ಪನೂ ಇದ್ದನು. ಆಶ್ಚರ್ಯಪಡುವ ವಿಚಾರವೆಂದರೆ ಅಲ್ಲಿರಬೇಕಿದ್ದ ಪೊಲೀಸ್ ಮೀಸಲು ಪಡೆಯನ್ನು ಆ ಸಂಜೆಯೇ ಪೊಲೀಸ್ ಅಧಿಕಾರಿಗಳು ವಾಪಾಸು ಕರೆಸಿಕೊಂಡಿದ್ದು. ಅಂದು ಪೊಲೀಸ್ ಮೀಸಲು ಪಡೆ ಅಲ್ಲಿದ್ದಿದ್ದರೆ ಯಾವುದೇ ಕಾರಣಕ್ಕೂ ಕಂಬಾಲಪಲ್ಲಿಯಲ್ಲಿ ದಲಿತರ ಮಾರಣಹೋಮ ನಡೆಯುತ್ತಿರಲಿಲ್ಲ.

ಈ ಭೀಕರ ನರಮೇಧದ ವಿರುದ್ಧ ಇಡೀ ದೇಶವೇ ಮರುಗಿತು. ಪ್ರಜ್ಞಾವಂತ ಒಕ್ಕಲಿಗರೂ ಸೇರಿದಂತೆ ಮನುಷ್ಯತ್ವವುಳ್ಳವರೆಲ್ಲ ಸ್ಪಂದಿಸಿದರು. ಆದರೆ ಸರ್ಕಾರ, ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಂಗ ತನ್ನ ಎಂದಿನ ಮೇಲ್ಜಾತಿ ಒಲವನ್ನು ಬಹಿರಂಗವಾಗಿಯೇ ತೋರ್ಪಡಿಸಿತು. ವಿಪರ್ಯಾಸವೆಂದರೆ ಈ ಘಟನೆ ನಡೆದಾಗ ಗೃಹ ಮಂತ್ರಿಯಾಗಿದ್ದವರು ಮಲ್ಲಿಕಾರ್ಜುನ ಖರ್ಗೆಯವರು. ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳೂ ಸಹ ದಲಿತರೇ! ಆದರೆ ಇವರ ಮೇಲೆ ಆದೇಶ ನೀಡುವವರು ಬಹುತೇಕ ಒಕ್ಕಲಿಗ ರಾಜಕಾರಣಿಗಳಾಗಿದ್ದರು. ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಚಿಂತಾಮಣಿ ಶಾಸಕ, ಜಿಲ್ಲೆಯಲ್ಲಿನ ಏಳು ಶಾಸಕರೂ ಸಹ ಒಕ್ಕಲಿಗರೇ ಆಗಿದ್ದರು. ಕಂಬಾಲಪಲ್ಲಿ ನರಮೇಧದ ನಂತರ ಒಂದೇ ವಾರದಲ್ಲಿ ಒಕ್ಕಲಿಗ ನಾಯಕರೆಲ್ಲ ಸೇರಿ ಚಿಂತಾಮಣಿಯನ್ನು ಬಂದ್ ಮಾಡಿದರು. ಅದಕ್ಕವರು ನೀಡಿದ ಕಾರಣ ದಲಿತರು ನೀರಗಂಟಿ ಕೃಷ್ಣಾರೆಡ್ಡಿಯನ್ನು ಕೊಲೆ ಮಾಡಿದ್ದರೆಂಬುದಾಗಿತ್ತು. ಏಳು ಜನ ದಲಿತರನ್ನು ಕೊಂದದ್ದಕ್ಕೆ ಅವರಲ್ಲಿ
ಕಿಂಚಿತ್ತೂ ಪಶ್ಚಿತ್ತಾಪ ಇರಲಿಲ್ಲ. ಕೇವಲ ಜಾತಿಗೋಸ್ಕರ ಅನ್ಯಾಯದ ಪರ ನಿಂತಿದ್ದರು.

ಪೊಲೀಸ್ ಕೇಸ್ ದಾಖಲಾಯಿತು. ಸೋನಿಯಾಗಾಂಧಿ, ರಾಮ್ ವಿಲಾಸ್ ಪಾಸ್ವಾನ್, ಶರದ್ ಯಾದವ್ ಮುಂತಾದ ರಾಷ್ಟ್ರೀಯ ನಾಯಕರೆಲ್ಲರೂ ಬಂದುಹೋದರು. ಆದರೆ ಅವರೆಲ್ಲರೂ ದಲಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾದರು. ಹೈಕೋರ್ಟ್ ವಕೀಲರಾದ ಬಿ.ಟಿ. ವೆಂಕಟೇಶ್‌ರವರು ಹೇಳುವುದನ್ನು ಕೇಳಿದರೆ ಎಂತಹವರಿಗೂ ಎದೆ ಜಲ್ಲೆನ್ನುತ್ತದೆ. ಈ ವ್ಯವಸ್ಥೆಯ ಮೇಲೆ ಅಸಹ್ಯ ಉಂಟಾಗುತ್ತದೆ. ಅವರು ಗುರುತಿಸುವಂತೆ ಕಂಬಾಲಪಲ್ಲಿಯ ಕೇಸಿನ ತನಿಖೆಯಾಗಲೀ, ವಿಚಾರಣೆಯಾಗಲೀ ಆ ಕೇಸನ್ನು ನ್ಯಾಯಾಂಗ ವ್ಯವಸ್ಥೆ ನಡೆಸಿಕೊಂಡಿರುವುದಾಗಲೀ ತೀರ ಬೇಜವಾಬ್ದಾರಿತನದ್ದು. ಒಂದಷ್ಟು ಉದಾಹರಣೆ ಹೇಳುವುದಾದರೆ, ಕಂಬಾಲಪಲ್ಲಿ ಪ್ರಕರಣದ ವಿಚಾರಣೆಯಲ್ಲಿ ಘಟನೆ ನಡೆದ ದಿನ ಹಾಜರಿದ್ದ ಪೊಲೀಸ್ ಪೇದೆಗಳನ್ನು ವಿಚಾರಣೆ ಮಾಡಿಲ್ಲ. ಆ ಕೇಸಿನ ತನಿಖಾಧಿಕಾರಿಯ ವಿಚಾರಣೆ ಮಾಡಿಲ್ಲ. ವೈದ್ಯಾಧಿಕಾರಿಗಳನ್ನು ವಿಚಾರಿಸಲಾಗಿಲ್ಲ. ಸಾಕ್ಷಿಗಳು ಪೊಲೀಸರ ಸಮಕ್ಷಮದಲ್ಲಿ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದರ ಕಾರಣವನ್ನು ಕೇಳಿಲ್ಲ. ಅದಲ್ಲದೆ ಕೋರ್ಟ್ ದಾಖಲೆಗಳಲ್ಲಿ ಎಲ್ಲಾ ಸಾಕ್ಷಿಗಳ ಹೇಳಿಕೆಯೂ ಒಂದೇ ಆಗಿದೆ. ಅದೆಷ್ಟರ ಮಟ್ಟಿಗೆಂದರೆ ಒಂದು ಅಕ್ಷರವೂ ವ್ಯತ್ಯಾಸವಾಗದಂತೆ ಹೇಳಿಕೆ ನೀಡಿದ್ದಾರೆ. ಅಂದರೆ ಟೈಪ್ ಮಾಡುವವರು ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ. ಈ ಪ್ರಕರಣದ ಮುಖ್ಯ ಸಾಕ್ಷಿ ವೆಂಕಟರಾಯಪ್ಪನ ಭಾಷೆ ತೆಲುಗು ಆಗಿದ್ದು ಆತನ ಸಹಾಯಕ್ಕೆ ನೇಮಿಸಲಾಗಿದ್ದ ಭಾಷಾಂತರಕಾರನ ನೇಮಕ ನಿಯಮಗಳ ಪ್ರಕಾರ ಆಗಿಲ್ಲ. ತಿಂಗಳ ನಂತರ ನಡೆದ ವಿಚಾರಣೆಯಲ್ಲಿ ವೆಂಕಟರಾಯಪ್ಪನಿಗೆ ಭಾಷಾಂತರಕಾರನನ್ನೇ ನೇಮಿಸಿಲ್ಲ. ಅಂದರೆ ತಿಂಗಳಲ್ಲಿ ಕನ್ನಡ ಕಲಿತುಬಿಟ್ಟಿದ್ದಾನೆ! ತನಿಖೆ ಮಾಡುವಾಗ ಯಾವುದೇ ಮಾರಕಾಸ್ತ್ರ, ವಸ್ತುಗಳ ಮಹಜರು ಮಾಡಿಲ್ಲ! ಆದರೆ ಕಂಬಾಲಪಲ್ಲಿಯ ದಲಿತರ ಮೇಲೆ ಆರೋಪಿಸಿ ಹೂಡಿರುವ ಕೃಷ್ಣಾರೆಡ್ಡಿಯ ಕೇಸಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ವಿಚಾರಿಸಲಾಗಿದೆ. ಹೀಗೆ ತನಿಖೆಯಲ್ಲಿ ಮತ್ತು ವಿಚಾರಣೆಯಲ್ಲಿ ಹಲವಾರು ಲೋಪದೋಷಗಳನ್ನು ಈ ಕೇಸ್ ಹೊಂದಿತ್ತು. ಮೇಲ್ನೋಟಕ್ಕೆ ಇವೆಲ್ಲವೂ ಬೇಕಂತಲೇ ಮಾಡಿದ್ದವಾಗಿದ್ದವು.

2006ರವರೆಗೆ ವಿಚಾರಣೆ ನಡೆಸಿದ ಕೋಲಾರ ಸೆಷನ್ ಕೋರ್ಟ್ ಸಾಕ್ಷಿಗಳ ಕೊರತೆಯಿಂದಾಗಿ ಎಲ್ಲಾ 46 ಆರೋಪಿಗಳನ್ನೂ ಖುಲಾಸೆಗೊಳಿಸಿತು. ವಿಚಾರಣೆಯ ವೇಳೆ ತಮ್ಮ ಸ್ವಂತ ಕುಟುಂಬದ ವ್ಯಕ್ತಿಗಳನ್ನು ಕಳೆದುಕೊಂಡಿದ್ದವರೇ ತದ್ವಿರುದ್ಧ ಹೇಳಿಕೆಯನ್ನು ನೀಡಿದರು. ಸಾಕ್ಷಿಗಳನ್ನು ಬೆದರಿಸಿ, ಅವರಿಗೆ ಹಣ ನೀಡಿ ಸುಳ್ಳು ಸಾಕ್ಷಿ ಹೇಳಿಸುವಲ್ಲಿ ಮೇಲ್ಜಾತಿ ಫ್ಯೂಡಲ್ ಮನಸ್ಸುಗಳು ಯಶಸ್ವಿಯಾದವು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೂ ಇದೇ ಬೇಕಿತ್ತು. 2012ರಲ್ಲಿ ಹೈಕೋರ್ಟ್‌ನಲ್ಲಿಯೂ ಆರೋಪಿಗಳೆಲ್ಲ ಸಾಕ್ಷಿಗಳ ಕೊರತೆಯಿಂದ ಖುಲಾಸೆಗೊಂಡರು. 2013ರಲ್ಲಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಕೆಲವೇ ದಿನಗಳಲ್ಲಿ ತೆಲಂಗಾಣದ ಸಮರ್ಥ ವಕೀಲರಾದ ಎಂ.ಎನ್.ರಾವ್ ಅವರನ್ನು ದಲಿತರ ಪರವಾಗಿ ವಾದಿಸಲು ನೇಮಿಸಿರುವುದಾಗಿ ಸುದ್ದಿಗಳು ಬಂದವು. ಇಲ್ಲಿಗೆ 9 ವರ್ಷಗಳಾಯಿತು. ಆದರೂ ಸುಪ್ರೀಂಕೋರ್ಟ್ ಕಂಬಾಲಪಲ್ಲಿಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿಲ್ಲ.

ಅಸ್ಪೃಶ್ಯರೆಂಬ ಕಾರಣಕ್ಕೆ ದಲಿತರ ಮೇಲೆ ಮೇಲ್ಜಾತಿಗಳು ನಡೆಸುವ ದೌರ್ಜನ್ಯವನ್ನು ಪ್ರಶ್ನಿಸಿ ನಿಂತರೆ ಸಾಕು ಅಲ್ಲೊಂದು ದಲಿತ್ ಫೈಲ್ ಓಪನ್ ಆಗುತ್ತದೆ. ಕಾಶ್ಮೀರಿ ಫೈಲ್ ಇಡೀ ಹಿಂದೂ ಫೈಲ್ ಆಗಿಬಿಡುತ್ತದೆಯಾದರೂ ಕಂಬಾಲಪಲ್ಲಿ ಫೈಲ್ ದಲಿತ್ ಫೈಲ್ ಆಗಿಯೇ ಉಳಿಯುತ್ತದೆ. ಬ್ರಾಹ್ಮಣರಿಗಾಗಿ ಎದೆಬಡಿದುಕೊಳ್ಳುವ ಆತ್ಮಗಳು ದಲಿತರಿಗಾಗಿ ತುಟಿಯನ್ನೂ ಬಿಚ್ಚದಾಗುತ್ತವೆ. ಹೀಗಿರುವಾಗ ಮಹಾಮರೆವಿಗೆ ಒಳಗಾಗಿರುವ ಹಲವು ದಲಿತ ನಾಯಕರೂ ಹಾಗೂ ಸಂಘಟಕರು ’ಹಿಂದೂ ನಾವೆಲ್ಲಾ ಒಂದೂ’ ಎಂದು ಘೋಷಣೆ ಕೂಗುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.


ಇದನ್ನೂ ಓದಿ: ಮಾತು ಮರೆತ ಭಾರತ; ಬಥಾನಿ ತೋಲ ಫೈಲ್: ತಿರುಗಿಬಿದ್ದರೆ ತಲೆದಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...