Homeನ್ಯಾಯ ಪಥರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರಚನೆ ಪ್ರಕ್ರಿಯೆ; ಶಿಕ್ಷಣದ ಮೇಲಿನ ರಾಜ್ಯಗಳ ಅಧಿಕಾರವನ್ನು ...

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರಚನೆ ಪ್ರಕ್ರಿಯೆ; ಶಿಕ್ಷಣದ ಮೇಲಿನ ರಾಜ್ಯಗಳ ಅಧಿಕಾರವನ್ನು ಕಸಿಯುವ ಪ್ರಹಸನ

- Advertisement -
- Advertisement -

ರಾಜಕೀಯದಿಂದ ದೂರ ಉಳಿಯಬೇಕಾದ ಪ್ರಮುಖ ವಿಷಯಗಳಲ್ಲಿ ಶಿಕ್ಷಣವೂ ಒಂದು ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಗಾಢವಾಗಿದ್ದ ಕಾರಣದೊಂದಿಗೆ ಇನ್ನಿತರ ಹತ್ತುಹಲವು ಗೊಂದಲಗಳು ಸೇರಿ, ಶಿಕ್ಷಣದ ವಿಚಾರದ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ರಾಜಕೀಯವಾಗಿ ಪರಿಹಾರವನ್ನು ಕಂಡುಕೊಳ್ಳುವುದು ಐತಿಹಾಸಿಕವಾಗಿ ಕಷ್ಟಸಾಧ್ಯವಾಗಿತ್ತು. ಆದರೆ, 2014ರಲ್ಲಿ ಯಾವಾಗ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವನ್ನು ಯಾವಾಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಯಿತೋ ಅಲ್ಲಿಂದ ಇಲ್ಲಿಯವರೆಗು ಶಿಕ್ಷಣದ ವಿಚಾರವು ಸುದ್ದಿಯಲ್ಲಿದೆ. ಬೇಸರದ ಸಂಗತಿಯೆಂದರೆ, ಶಿಕ್ಷಣದ ಬಗ್ಗೆ ವರದಿಯಾಗುತ್ತಿರುವ ಸುದ್ದಿಗಳೆಲ್ಲವೂ ಭಾರತದ ಸಾಂವಿಧಾನಿಕ ಆಶಯಗಳಲ್ಲಿ ನಂಬಿಕೆಯಿರಿಸಿರುವವರಲ್ಲಿ ನಿರಾಶೆ ಮತ್ತು ಆಕ್ರೋಶವನ್ನು ಹುಟ್ಟುಹಾಕುತ್ತಿರುವುದು. ಇನ್ನು, ರೋಹಿತ್ ಚಕ್ರತೀರ್ಥ ಎಂಬ ಅನರ್ಹ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪುಸ್ತಕ ಮರುಪರಿಷ್ಕರಣೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟ ಹೋರಾಟಗಳು ನಡೆಯುತ್ತಿರುವಾಗಲೇ ಎನ್‌ಇಪಿ ಪೊಸಿಷನ್ ಪೇಪರುಗಳ ಅವಾಂತರದ ಸುದ್ದಿಯು ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲಿಯೂ, ಭಾರತದ ಜ್ಞಾನ (Knowledge of India), ಲಿಂಗತ್ವ ಶಿಕ್ಷಣ (Gender Education), ವಿಜ್ಞಾನ ಶಿಕ್ಷಣ (Science Education), ಆರೋಗ್ಯ ಮತ್ತು ಯೋಗಕ್ಷೇಮ (Health and Well-being) ಮತ್ತು ಭಾಷಾ ಶಿಕ್ಷಣ(Language Education)ಪೊಸಿಷನ್ ಪೇಪರುಗಳ ಕೆಲವು ಶಿಫಾರಸ್ಸುಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ ಮತ್ತು ಈ ಆರೋಪಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಅಲ್ಲಗದಿದ್ದಾರೆ.

ಆದರೆ, ಅದರ ಆಳವನ್ನು ಹೊಕ್ಕಿನೋಡದಾಗ ಮಾತ್ರವೇ ಇದರ ಅಪಾಯವು ನಮಗೆ ಸ್ಪಷ್ಟವಾಗಿ ಗೋಚರವಾಗುವುದು.

ಇದನ್ನೂ ಓದಿ:NEP| ಮೊಟ್ಟೆ ನೀಡಿದರೆ ಮಕ್ಕಳಲ್ಲಿ ತಾರತಮ್ಯ ವೃದ್ಧಿ: ಎನ್‌‌ಸಿಇಆರ್‌ಟಿಗೆ ರಾಜ್ಯ ಸರ್ಕಾರದ ಸಮಿತಿ ಪ್ರಸ್ತಾವನೆ

ಏನಿದು ಮತ್ತೊಂದು ಅವಾಂತರ?

ವಿವಿಧ ಶೈಕ್ಷಣಿಕ ಹಂತಗಳಿಗೆ ಸಂಬಂಧಿಸಿದಂತೆ, ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (National Curriculum Framework for School Education), ಶಿಕ್ಷಕರ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು(National Curriculum Framework for Teacher Education), ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಚೌಕಟ್ಟು
(National Curricular and Pedagogical Framework for Early Childhood Care and Education)  ಮತ್ತು ವಯಸ್ಕರ ಶಿಕ್ಷಣ ಪಠ್ಯಕ್ರಮ (National Curriculum for Adult Education) ಎಂಬ ನಾಲ್ಕು ಹಂತಗಳಿಗೆ ಸಂಬಂಧಿಸಿದ ಪಠ್ಯಕ್ರಮ ಚೌಕಟ್ಟುಗಳನ್ನು ಹೊಸದಾಗಿ ರಚಿಸಲಾಗುವುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಉಲ್ಲೇಖಿಸಲಾಗಿತ್ತು. ಇವೆಲ್ಲವನ್ನು ಒಳಗೊಳ್ಳುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (National Curriculum Framework) ರಚಿಸುವ ಜವಾಬ್ದಾರಿಯನ್ನು 2021ರಲ್ಲಿ ರಚಿಸಲಾದ ಕೆ. ಕಸ್ತೂರಿರಂಗನ್ ನೇತೃತ್ವದ 13 ಸದಸ್ಯರ ಸ್ಟೀರಿಂಗ್ ಸಮಿತಿಗೆ ವಹಿಸಲಾಗಿತ್ತು. ಇದಕ್ಕಾಗಿ, ಎಲ್ಲಾ ರಾಜ್ಯಗಳು ಜಿಲ್ಲಾ ಮಟ್ಟದಲ್ಲಿ ಸಮಾಲೋಚನೆಗಳನ್ನೂ, ಮೊಬೈಲ್ ಆಧಾರಿತ ಸಮೀಕ್ಷೆಯನ್ನೂ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಸಂಬಂಧಿಸಿದಂತೆ ಗುರುತಿಸಲಾದ 25 ವಿಚಾರಗಳ ಬಗ್ಗೆ ಪೊಸಿಷನ್ ಪೇಪರ್‌ಗಳನ್ನು (ಈ ವಿಚಾರಗಳ ಬಗ್ಗೆ ಸರ್ಕಾರದ ನಿಲುವುಗಳನ್ನು ಸ್ಪಷ್ಟಪಡಿಸುವ ವರದಿಯೆಂದು ಅರಿಯಬಹುದು) ಸಿದ್ಧಪಡಿಸುವ ಮೂಲಕ ತಮ್ಮ ರಾಜ್ಯ ಪಠ್ಯಕ್ರಮ ಚೌಕಟ್ಟುಗಳ ಕರಡನ್ನು ರಚಿಸಬೇಕು; ಹೀಗೆ ಎಲ್ಲಾ ರಾಜ್ಯಗಳು ರಚಿಸಿದ ಪಠ್ಯಕ್ರಮ ಚೌಕಟ್ಟುಗಳ ಕರಡುಗಳನ್ನು ಆಧರಿಸಿ ಮುಂದೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರಚಿಸಲಾಗುತ್ತದೆ; ಅಷ್ಟೇ ಅಲ್ಲದೇ, ಪ್ರತಿ ರಾಜ್ಯವು 25 ವಿಚಾರಗಳ ಬಗ್ಗೆ ರಚಿಸುವ ಪೊಸಿಷನ್ ಪೇಪರ್‌ಗಳು ಆಯಾ ವಿಚಾರದ ಬಗೆಗೆ ರಚಿಸಲಾಗುವ ರಾಷ್ಟ್ರೀಯ ಮಟ್ಟದ ಪೊಸಿಷನ್ ಪೇಪರುಗಳಿಗೆ
ಆಧಾರವಾಗಲಿದೆ ಎಂಬುದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರಚನೆಯಾಗುವ ವಿಧಾನ ಎಂದು ಅದರ ಜಾಲತಾಣವೇ ಹೇಳುತ್ತಿದೆ.

ಆದರೆ, ಇಲ್ಲಿ ನೆನಪಿಡಬೇಕಾದ ಎರಡು ಮುಖ್ಯ ಸಮಸ್ಯೆಗಳಿವೆ.
ಒಂದು, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶಿಫಾರಸ್ಸುಗಳನ್ನು ಮನದಲ್ಲಿರಿಸಿಕೊಂಡೇ ಈ ಎಲ್ಲಾ ಪ್ರಕ್ರಿಯೆಯು ನಡೆಯಲಿದೆ. ಹೀಗೆ ಪಠ್ಯಕ್ರಮ ಚೌಕಟ್ಟನ್ನು ರಚಿಸುವುದು ಮೇಲುನೋಟಕ್ಕೆ ಒಳ್ಳೆಯ ಬೆಳವಣಿಗೆಯಾಗಿಯೇ ಕಂಡರೂ, ಇಡೀ ದೇಶದ ದಿಕ್ಕನ್ನೇ ನಿರ್ಣಯಿಸುವ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಬಿಲ್‌ಅನ್ನು ಸಂಸತ್ತಿನಲ್ಲಿ ಮಂಡಿಸಿ ಆರೋಗ್ಯಕರ ಚರ್ಚಿಗೆ ಒಳಪಡಿಸಿಯೇ ಇಲ್ಲ. ಬದಲಿಗೆ, ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟವು ಏಕಾಏಕಿ ಪಾಸು ಮಾಡಿ ಈ ದೇಶದ ಮೇಲೆ ಹೇರಿದೆ. ಅಂತೆಯೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಕೂಡ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲೂ ಇದನ್ನು ಮಂಡಿಸಲೇ ಇಲ್ಲ ಎಂಬುದನ್ನೂ ನಾವು ಮರೆಯುವಂತಿಲ್ಲ. ಅಂದರೆ, ಈ ದೇಶದ ಮತ್ತು ಈ ರಾಜ್ಯದ ಜನರು ಈವರೆಗೂ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನೇ ಸಮ್ಮತಿಸದಿರುವಾಗ ಅದನ್ನು ಜಾರಿಗೆ ತರಲಿಕ್ಕೆ ಹೊರಟಿರುವುದನ್ನು ಒಪ್ಪುವುದಾದಾರೂ ಹೇಗೆ

ಎರಡನೆಯದಾಗಿ, 1976ರಲ್ಲಿ ಸಂವಿಧಾನಕ್ಕೆ ತರಲಾದ 42ನೆಯ ತಿದ್ದುಪಡಿಯ ಮೂಲಕ ಶಿಕ್ಷಣವು ಸಮವರ್ತಿ ಪಟ್ಟಿಗೆ ಸೇರುತ್ತದೆ. ಅಂದರೆ, ಶಿಕ್ಷಣದ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಒಕ್ಕೂಟ ಸರ್ಕಾರಗಳೆರಡೂ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಹಾಗಾಗಿ, ಈ ಇಡೀ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರಚನೆ ಪ್ರಕ್ರಿಯೆಯಲ್ಲಿ ರಾಜ್ಯಗಳು ತಮಗೆ ಅಗತ್ಯತೆಗನುಗುಣವಾಗಿ ತಮ್ಮ ಪಠ್ಯಕ್ರಮವನ್ನು ರಚಿಸಿಕೊಳ್ಳುವ ಸ್ವಾಯತ್ತತೆಯಿದೆಯೇ ಎಂಬುದನ್ನು ಒಮ್ಮೆ ಪರೀಕ್ಷಿಸಬೇಕಾದಲ್ಲಿ, ನಾವು ಈ ಹಿಂದೆ 2005ರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರಚಿಸುವಾಗ ಅನುಸರಿಸಿದ ಪ್ರಕ್ರಿಯೆಯನ್ನು ಗಮನಿಸಬೇಕಾಗುತ್ತದೆ.

ಆಗ, 21 ವಿಚಾರಗಳ ಬಗ್ಗೆ ರಾಷ್ಟ್ರ ಮಟ್ಟದ ಸಮಿತಿಗಳನ್ನು ರಚಿಸಲಾಗಿತ್ತು ಮತ್ತು ಅದರ ವರದಿಗಳನ್ನು ಆಧರಿಸಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರಚಿಸಲಾಗಿತ್ತು. ಇದನ್ನು ಅನುಸರಿಸುವುದು ಅಥವಾ ಅದಕ್ಕೆ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರವಾಗಿತ್ತು ಮತ್ತು ಈ ರೀತಿಯಲ್ಲಿ 2007ರಲ್ಲಿ ಕರ್ನಾಟಕವು ತನ್ನ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚಿಸಿಕೊಂಡಿತ್ತು. ಆದರೆ ಈಗ ಏನಾಗಿದೆ ಎಂಬುದನ್ನು ಗಮನಿಸೋಣ.

ಮೊದಲಿಗೆ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಸ್ಟೀರಿಂಗ್ ಸಮಿತಿಯೇ 25 ವಿಚಾರಗಳನ್ನು ಆಯ್ದು, ಅದರ ಬಗ್ಗೆ ಪೊಸಿಷನ್ ಪೇಪರುಗಳನ್ನು ರಚಿಸಬೇಕೆಂದೂ, ಅದು ಹೇಗಿರಬೇಕೆಂದೂ ಕೂಡ ನಿರ್ದೇಶಿಸಿತು. ಅದಕ್ಕಾಗಿಯೇ 2022ರ ಏಪ್ರಿಲ್ ತಿಂಗಳಲ್ಲಿ Guidelines for the Development of the National Curriculum Framework ಎಂಬ 192 ಪುಟಗಳ ದಾಖಲೆಯೊಂದನ್ನು ಕೂಡ ಬಿಡುಗಡೆಗೊಳಿಸಿತು. ಅದರ ಪುಟ ೩೮ರಲ್ಲಿ ಹೀಗೆ ಉಲ್ಲೇಖಿಸಲಾಗಿದೆ:

The Guideline for each Position Paper has three subsections:
1) The vision of NEP 2020: Each Position Paper should be in coherence with this vision.

2) Anchors to NEP 2020: This subsection quotes specific paragraphs from NEP 2020 that are relevant to the Position Paper. Where further elaborations are necessary, specific paragraphs from the Draft NEP 2019 (prepared by the Kasturirangan Committee) are also included. The intent of this subsection is to maintain the fidelity of linkages and consistency between NEP 2020 and the content of the Position Papers.

3) Responses to questions and references: This section has specific questions that the Focus Group can respond to. The responses to these questions can keep in consideration the vision of NEP 2020 as quoted in the previous two sections. This section is further divided into three or four subsections – responses to questions that are more generic in nature, responses to questions that are stage-specific (whenever applicable), other inputs that the focus group would like to articulate, and a bibliography subsection giving references

It is important to ensure that all Position Papers are in sync with each other – this is a critical matter for achieving the integrated vision of NEP 2020. Focus Groups developing particular Position Papers should discuss and read other Position Papers as well to ensure this coherence and integration. All the Position Papers together should present a cohesive picture of school education as envisaged in NEP 2020.

ಅಂದರೆ, ರಾಜ್ಯಗಳು ತಯಾರಿಸುವ ಎಲ್ಲಾ ಪೊಸಿಷನ್ ಪೇಪರುಗಳು ಒಂದಕ್ಕೊಂದು ಪೂರಕವಾಗಿಯೂ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಧ್ಯೇಯವನ್ನು ಚಾಚೂತಪ್ಪದೆ ತಲುಪುವ ನಿಟ್ಟಿನಲ್ಲಿರಬೇಕು. ಎರಡನೆಯದಾಗಿ, ಆಯಾ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ನೀತಿ-2020ರಿಂದ ಕೆಲವು ಉಲ್ಲೇಖಗಳನ್ನು ನೀಡಲಾಗಿದೆ ಮತ್ತು ಮೂರನೆಯದಾಗಿ ಎಲ್ಲಾ ಪೊಸಿಷನ್ ಪೇಪರುಗಳು ಪ್ರತಿಕ್ರಿಯಿಸಬೇಕಾದ ಒಂದಷ್ಟು ಪ್ರಶ್ನೆಗಳನ್ನು/ವಿಚಾರಗಳನ್ನು ನೀಡಲಾಗಿದೆ.

ಇದನ್ನೂ ಓದಿ: NEP ಕುರಿತ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧ: ಬಸವರಾಜ ಬೊಮ್ಮಾಯಿ

ಒಟ್ಟಿನಲ್ಲಿ ಹೇಳುವುದಾದರೆ, ಈ ಇಡೀ ಪ್ರಕ್ರಿಯೆಯು ರಾಜ್ಯಗಳಿಂದ ತಮಗೆ ಬೇಕಾದ ರೀತಿಯಲ್ಲಿ, ಅಂದರೆ ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಪೂರಕವಾಗಿರುವ ರೀತಿಯಲ್ಲೇ ರಾಜ್ಯಗಳಿಂದ ಅಭಿಪ್ರಾಯ ಪಡೆಯುವ ಒಂದು ಪ್ರಹಸನವಾಗಿದೆ.

ಇಲ್ಲಿ ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ವಿರೋಧಿಸುವ ಅಥವಾ ಅದಕ್ಕೆ ಮಾರ್ಪಾಡುಗಳನ್ನು ತಂದುಕೊಳ್ಳುವ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಮೀರಿ ತನ್ನದೇ ಆದ ಪಠ್ಯಕ್ರಮಗಳನ್ನು ರಚಿಸಿಕೊಳ್ಳುವ ಸಾಧ್ಯತೆಯನ್ನೇ ಬಗ್ಗುಬಡಿಯಲಾಗಿದೆ. ಇದನ್ನು ಮೀರಿಯೂ ಯಾವುದೇ ರಾಜ್ಯದ ಪೊಸಿಷನ್ ಪೇಪರುಗಳು ರಚನೆಯಾದರೆ, ಅದನ್ನು ಸದೆಬಡಿಯಲು ರಾಷ್ಟ್ರ ಮಟ್ಟದ ವಿವಿಧ ವಿಚಾರಗಳ ಬಗೆಗಿನ ಸಮಿತಿಗಳಲ್ಲಿ ಕನಿಷ್ಠ 24 ಆರ್.ಎಸ್.ಎಸ್ ಸ್ವಯಂಸೇವಕರನ್ನು ಈಗಾಗಲೇ ನೇಮಿಸಲಾಗಿದೆ. ಒಟ್ಟಿನಲ್ಲಿ ರಾಜ್ಯಗಳು ಈವರೆಗೆ ಶಿಕ್ಷಣದ ವಿಚಾರವಾಗಿ ಹೊಂದಿದ್ದ ಅಷ್ಟಿಷ್ಟೂ ಅಧಿಕಾರವನ್ನೂ ಈ ಇಡೀ ಪ್ರಕ್ರಿಯೆ ನೆಲಸಮ ಮಾಡಿದೆ.

ಗುಜರಾತ್‌: NEP ಮೂಲಕ 1ನೇ ತರಗತಿಯಿಂದಲೇ ಸಂಸ್ಕೃತ ಕಡ್ಡಾಯಕ್ಕೆ ಪ್ರಯತ್ನಿಸುತ್ತಿರುವ ಆರೆಸ್ಸೆಸ್‌‌ | Naanu Gauri

ಬಿಜೆಪಿಯೇ ಅಧಿಕಾರದಲ್ಲಿರುವ ಕರ್ನಾಟಕ ರಾಜ್ಯದ ಎಲ್ಲಾ 25 ಪೊಸಿಷನ್ ಪೇಪರುಗಳ ಪಾಡು ಹೇಳತೀರದಾಗಿದೆ. ಯಾವುದೇ ರೀತ್ಯ ಆಶ್ಚರ್ಯಕ್ಕೆ ಅವಕಾಶವೇ ಮಾಡಿಕೊಡದೆ ಈ ಎಲ್ಲಾ ಪೇಪರುಗಳು ಕೇವಲ ಬ್ರಾಹ್ಮಣ್ಯವನ್ನೂ, ಪಿತೃಪ್ರಧಾನತೆಯನ್ನೂ ಮತ್ತು ಕೋಮುವಾದವನ್ನೇ ಪ್ರತಿಪಾದಿಸಿದೆ. ಈ ಎಲ್ಲಾ 25 ಪೊಸಿಷನ್ ಪೇಪರುಗಳಲ್ಲಿ ಒಂದೇ ಒಂದು ಪುಟವೂ ಕೂಡ ಈ ಸಮಸ್ಯೆಗಳಿಗೆ ಹೊರತಾಗಿಲ್ಲವೆಂದರೆ ತಪ್ಪಾಗಲಾರದು.

ಎಲ್ಲೋ ಒಂದೆರಡು ತಪ್ಪಾಗಿದ್ದಲ್ಲಿ ಅದನ್ನು ವಿಮರ್ಶಿಸಿ, ಸಂಬಂಧಪಟ್ಟವರ ಗಮನಕ್ಕೆ ತಂದು ಅದನ್ನು ತಿದ್ದಲಿಕ್ಕೆ ಬೇಡಿಕೆಯಿಡಬಹುದು. ಆ ನಿಟ್ಟಿನಲ್ಲಿ ಈಗಾಗಲೇ ಕೆಲವು ಪ್ರಯತ್ನಗಳೂ ಚಾಲ್ತಿಯಲ್ಲಿವೆ. ಆದರೆ, ಕೇವಲ ಈ ರೀತ್ಯ ಪ್ರಯತ್ನಗಳೇ ನಡೆದರೆ, ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರವು ನೆಪಮಾತ್ರಕ್ಕಾಗಿ ಒಂದೆರಡು ಬದಲಾವಣೆಗಳನ್ನು ಒಪ್ಪಿ ಇಡೀ ಸಮಸ್ಯೆಯನ್ನು ಮುಚ್ಚಿಹಾಕಿದಂತೆಯೇ ಇಲ್ಲೂ ನುಣುಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದಕ್ಕಾಗಿಯೇ ಒಕ್ಕೂಟ ತತ್ವವನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಈ ಇಡೀ ಪ್ರಕ್ರಿಯೆಯನ್ನು ನಾವಿಂದು ತಿರಸ್ಕರಿಸಬೇಕು ಮಾತ್ರವಲ್ಲದೇ ಇಡೀ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಹಿಂಪಡೆಯುವಂತೆ ಆಗ್ರಹಿಸಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...