Homeಅಂಕಣಗಳುಮಾತು ಮರೆತ ಭಾರತ; ಬಥಾನಿ ತೋಲ ಫೈಲ್: ತಿರುಗಿಬಿದ್ದರೆ ತಲೆದಂಡ

ಮಾತು ಮರೆತ ಭಾರತ; ಬಥಾನಿ ತೋಲ ಫೈಲ್: ತಿರುಗಿಬಿದ್ದರೆ ತಲೆದಂಡ

- Advertisement -
- Advertisement -

ಭಾರತದ ಜಾತೀಯ ಫ್ಯೂಡಲಿಸಂ ಹೇಗಿರುತ್ತದೆ ಎಂಬ ಉದಾಹರಣೆಗೆ ಬಿಹಾರ ರಾಜ್ಯಕ್ಕಿಂತಲೂ ಕರಾಳ ಉದಾಹರಣೆ ಮತ್ತೊಂದು ಇರಲಾರದು. ಜಾತೀಯ ಫ್ಯೂಡಲಿಸಂ ಮಧ್ಯಕಾಲೀನ ಇಡೀ ಭಾರತದ ವಿದ್ಯಮಾನವಾದರೂ ಕಣ್ಣಿಗೆ ರಾಚುವಂತೆ ಇಂದಿಗೂ ಅದರ ಲಕ್ಷಣಗಳನ್ನು ಮೈದೆಳೆದು ನಿಂತಿರುವ ರಾಜ್ಯ ಬಿಹಾರ. ಸ್ವತಂತ್ರ ಭಾರತದಲ್ಲಿ ಅತ್ಯಂತ ಭೀಕರವಾದ ದಲಿತರ ಹತ್ಯಾಕಾಂಡಗಳು ನಡೆದಿರುವುದೂ ಸಹ ಈ ಕಾರಣಕ್ಕಾಗಿಯೇ. ಬ್ರಿಟಿಷರಿಂದ ಭಾರತಕ್ಕೆ ದೊರೆತ ಸ್ವಾತಂತ್ರ್ಯ ನೇರವಾಗಿ ದ್ವಿಜ ಭೂಮಾಲೀಕರ ಕೈಗೆ ಹೋಯಿತು. ಭೂಸುಧಾರಣೆಯಿಂದಾಗಿ ಮೇಲ್-ಶೂದ್ರ ಜಾತಿಗಳೂ ಸಹ ಭೂಮಾಲೀಕರ ಸ್ಥಾನಕ್ಕೇರಿದವು. ಅಲ್ಲಿಯವರೆಗೆ ದ್ವಿಜ-ಭೂಮಾಲೀಕರ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದ ಶೂದ್ರ-ದಲಿತರ ಜಾಗದಲ್ಲಿ ಭೂಸುಧಾರಣೆಯ ಬಳಿಕ ದಲಿತ ಕೂಲಿಗಳು ಏಕಾಂಗಿಯಾಗಿ ಸಿಕ್ಕಿಬಿದ್ದರು. ಈ ಕಾರಣದಿಂದಾಗಿ ದ್ವಿಜ ಹಾಗೂ ಮೇಲ್-ಶೂದ್ರ ಭೂಮಾಲೀಕರು ದಲಿತರನ್ನು ಹಾಗೂ ಕೆಳಶೂದ್ರ ಜಾತಿಗಳನ್ನು ಶೋಷಿಸಲು ಮುಂದುವರೆಸಿದರು. ಸ್ವತಂತ್ರ ಬಂದು ಸಂವಿಧಾನ ರಚನೆಯಾದ ಬಳಿಕವೂ ಬಿಹಾರದಲ್ಲಿ ಸರ್ಕಾರಗಳ ಬದಲು ಭೂಮಾಲೀಕರ ಸರ್ವಾಧಿಕಾರವೇ ಮುಂದುವರೆಯಿತು. ಈಗಲೂ ಆ ಪರಿಸ್ಥಿತಿಯಲ್ಲಿ ಅಂತಹ ಬದಲಾವಣೆ ಆಗಿಲ್ಲ.

ಈ ಮೇಲಿನ ಪರಿಣಾಮದಿಂದಾಗಿ ಬಿಹಾರ ಸರ್ಕಾರದ ಜಾಗದಲ್ಲಿ ಭೂಮಿಹಾರ್ ಜಾತಿಯವರ ರಣವೀರ ಸೇನೆ, ರಜಪೂತರ ಕುನ್ವಾರ್ ಸೇನೆ, ಬ್ರಹ್ಮಶ್ರೀ ಸೇನೆ, ಪಿಂಡಾವ ಗ್ಯಾಂಗ್, ಸನ್‌ಲೈಟ್ ಸೇನೆಗಳು ಭೂಮಾಲೀಕರ ಪರವಾಗಿ ಹುಟ್ಟಿಕೊಂಡು ದಲಿತ-ಶೂದ್ರ ಕೂಲಿಗಳನ್ನು ಶೋಷಿಸಿ ಬದುಕಿ ಬೆಳೆಯಲು ಆರಂಭಿಸಿದರು. ಸರ್ಕಾರದ ಮೇಲೆ ಸರ್ಕಾರಗಳು ಬಂದರೂ ಈ ಶೋಷಣೆಯನ್ನು ನಿಲ್ಲಿಸಲಾಗಲಿಲ್ಲ. ಏಕೆಂದರೆ ಆಯಾ ಸರ್ಕಾರಗಳಲ್ಲಿ ಈ ಭೂಮಾಲೀಕ ಜಾತಿಯವರೇ ತುಂಬಿಕೊಂಡಿದ್ದರು. ಆದ್ದರಿಂದಲೇ ಈ ಮೇಲಿನ ಭೂಮಾಲೀಕ ಸೇನೆಗಳನ್ನು ಮಣಿಸಲು ನಕ್ಸಲ್‌ಬರಿ ಹೋರಾಟ ರೂಪು ತಾಳಿತು. ಈ ದ್ವಿಜ ಭೂಮಾಲೀಕ ಸೇನೆಗಳನ್ನು ಎದುರಿಸಲು ಸಶಸ್ತ್ರ ಹೋರಾಟಗಳಿಗೆ ದಲಿತರೂ ಇಳಿದರು. ಭೂಮಾಲೀಕರು ಹಾಗೂ ದಲಿತ-ಶೂದ್ರ ಕೂಲಿಗಳ ನಡುವೆ ಮಾರಾಮಾರಿಗಳಾದವು. ಈ ಕಾರಣದಿಂದಾಗಿಯೇ ತದನಂತರ ಬಿಹಾರದಲ್ಲಿ ಭೂಮಿಯನ್ನು ದಲಿತರಿಗೆ ಹಂಚಲಾಯಿತು.

ಬಿಹಾರದ ಬೋಜಪುರ ಜಿಲ್ಲೆಯಲ್ಲಿ ಕೇವಲ 100 ಮೀಟರ್ ಅಂತರದಲ್ಲಿ ಎರಡು ಹಳ್ಳಿಗಳಿವೆ. ಒಂದು, ಭೂಮಿಹಾರ್ ಮತ್ತು ರಜಪೂತ ಭೂಮಾಲೀಕರು ನೆಲಸಿರುವ ಬಕ್ರಿ ಕಾರೋನ್ ಮತ್ತೊಂದು ದಲಿತರು ಹಾಗೂ ಮುಸ್ಲಿಮ್ ಕೃಷಿಕೂಲಿಗಳು ನೆಲೆಸಿರುವ ಬಥಾನಿ ತೋಲ. ಈ ಎರಡೂ ಹಳ್ಳಿಗಳ ನಡುವೆ ಇಂದಿಗೂ ವೈಷಮ್ಯ ಕುದಿಯುತ್ತಲೇ ಇದೆ. ಇಂದಿಗೂ ದಲಿತರು ಭೂಮಿಹಾರ್ ಭೂಮಾಲೀಕರ ಎದುರು ಚಪ್ಪಲಿ ಹಾಕುವಂತಿಲ್ಲ. ದಲಿತರು ಅಷ್ಟು ಭಯಭೀತರಾಗಿದ್ದಾರೆ. ಇದಕ್ಕೆ ಮೂಲಕಾರಣ ಜುಲೈ 11, 1996ರಂದು ನಡೆದ ಆ ನರಮೇಧ.

ಅಂದು ಬಕ್ರಿ ಕಾರೋನ್‌ನಿಂದ ಹೊರಟ ಭೂಮಾಲೀಕರ ರಣವೀರ ಸೇನೆ ಬಥಾನಿ ತೋಲ ಪ್ರವೇಶಿಸಿ ಸಿಕ್ಕಸಿಕ್ಕವರನ್ನು ಕೊಚ್ಚಿ ಕೊಂದಿತು. ಬಂದೂಕಿನಿಂದ ಸುಟ್ಟು ಸಾಯಿಸಿತು. ಈ ಮಾರಣಹೋಮ ಅದೆಷ್ಟು ಭೀಕರವಾಗಿತ್ತೆಂದರೆ, 18 ವರ್ಷದ ದಲಿತ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು! 25 ವರ್ಷದ ದಲಿತ ಮಹಿಳೆಯ ಮೊಲೆಗಳನ್ನು ಕತ್ತರಿಸಿ ಆಕೆಯನ್ನು ಕೊಲ್ಲಲಾಗಿತ್ತು! 9 ತಿಂಗಳ ದಲಿತ ಹೆಣ್ಣುಗೂಸನ್ನು ಮೇಲೆ ಗಾಳಿಯಲ್ಲಿ ಎಸೆದು ಕೆಳಗೆ ಬೀಳುವಾಗ ಕತ್ತಿಯಲ್ಲಿ ಕತ್ತರಿಸಿ ಎರಡು ಭಾಗ ಮಾಡಲಾಗಿತ್ತು! ದಲಿತ ಗರ್ಭಿಣಿ ಹೆಂಗಸಿನ ಗರ್ಭ ಬಗೆದು ಭ್ರೂಣ ಹೊರತೆಗೆದು ಕತ್ತರಿಸಿ ಬಿಸಾಕಲಾಗಿತ್ತು! ಈ ಘಟನೆ ನಡೆದಾಗ ಅಲ್ಲಿಯೇ ಒಂದು ಪೊಲೀಸ್ ತುಕಡಿ ಇತ್ತು. ಊರಿನ ಹೊರಭಾಗದಲ್ಲಿ ಎರಡು ಪೊಲೀಸ್ ತುಕಡಿಗಳಿದ್ದವು. ಆದರೆ ಈ ತುಕಡಿಗಳಾವುದಕ್ಕೂ ದಲಿತರನ್ನು ರಕ್ಷಿಸಲಾಗಲಿಲ್ಲ. ಈ ನರಮೇಧದಲ್ಲಿ ಹತರಾದದ್ದು 8 ಮಕ್ಕಳು, 12 ಮಹಿಳೆಯರು ಹಾಗೂ ಒಬ್ಬ ಗಂಡಸು ಸೇರಿದಂತೆ 21 ಕೃಷಿ ಕೂಲಿಗಳು.

ರಣವೀರ ಸೇನೆಯ ನಾಯಕ ಬ್ರಹ್ಮೇಶ್ವರ ಸಿಂಗ್ ಮುಖಯಾ ಈ ಬಗ್ಗೆ ಕೇಳಿದರೆ ಸ್ವಲ್ಪವೂ ವಿಷಾದವಿಲ್ಲದೆ ಮೀಸೆ ತಿರುವಿದನಂತೆ! ಆ ಗರ್ಭಿಣಿಯನ್ನು ಅಷ್ಟು ಕ್ರೂರವಾಗಿ ಏಕೆ ಕೊಂದಿರಿ ಎಂಬ ಪ್ರಶ್ನೆಗೆ ’ಆ ಗರ್ಭಿಣಿಯರು ನಕ್ಸಲೈಟರನ್ನು ಹಡೆಯುತ್ತಾರೆ. ಅದಕ್ಕೆ ಕೊಂದೆವು’ ಎಂದು ನಕ್ಕಿದನಂತೆ. ಆ ಮಕ್ಕಳನ್ನು ಏಕೆ ಕೊಂದಿರಿ ಎಂದದ್ದಕ್ಕೆ ’ಅವರು ಬೆಳೆದು ದೊಡ್ಡವರಾಗಿ ನಕ್ಸಲೈಟರಾಗುತ್ತಾರೆ’ ಎಂದನಂತೆ. ಇಂತಹವನ ಮುಖ್ಯಸ್ಥಿಕೆಯಲ್ಲಿ ರಣವೀರ ಸೇನೆ 227 ದಲಿತ ಕೃಷಿ ಕೂಲಿಗಳನ್ನು ಬಲಿ ತೆಗೆದುಕೊಂಡಿದೆ.

ಬತಾನಿ ತೋಲದಲ್ಲಿ ದಲಿತ ಕೃಷಿಕೂಲಿಗಳನ್ನು ಕೊಲ್ಲಲು ಇದ್ದ ಕಾರಣವಿಷ್ಟೆ. ಆ ದಲಿತ ಕೂಲಿಗಳ ಮೇಲೆ ಈ ಭೂಮಾಲೀಕರು ದೌರ್ಜನ್ಯವೆಸಗಿದರೆ, ಕಡಿಮೆ ಕೂಲಿ ಕೊಟ್ಟರೆ ನಕ್ಸಲೈಟರಿಗೆ ಹೇಳಿ ಭೂಮಾಲಿಕರಿಗೆ ಬೆದರಿಕೆ ಹಾಕಿಸುತ್ತಾರೆ ಎಂಬುದು. ಇದು ನಿಜವೂ ಸಹ. ಏಕೆಂದರೆ ಬಿಹಾರದಲ್ಲಿ ಸರ್ಕಾರವೆಲ್ಲಿತ್ತು! ಸರ್ಕಾರ ಕೈಕಟ್ಟಿ ಕುಳಿತಾಗ ಬಡಜನತೆ ರಾಬಿನ್‌ಹುಡ್‌ಗಾಗಿ ಕಾಯುತ್ತಾರೆ. ಆ ರಾಬಿನ್‌ಹುಡ್‌ಅನ್ನು ದಲಿತ ಕೃಷಿಕೂಲಿಗಳು ನಕ್ಸಲೈಟರಲ್ಲಿ ಕಂಡುಕೊಂಡಿದ್ದರು. ಹಲವು ಬಾರಿ ಸ್ವತಃ ರಾಬಿನ್‌ಹುಡ್‌ಗಳಾಗಿದ್ದರು. ನಕ್ಸಲೈಟರನ್ನು ನಂಬಿದ್ದಕ್ಕೆ ಹಲವು ದಲಿತ ಕುಟುಂಬಗಳಿಗೆ ಭೂಮಿಯೂ ದಕ್ಕಿದೆ. ಸಶಸ್ತ್ರ ಹೋರಾಟಗಾರರನ್ನು ನಂಬಲು ದಲಿತರೇನು ದಡ್ಡರಲ್ಲ. ಅದಕ್ಕೆ ಮುಖ್ಯ ಕಾರಣ ಶೋಷಕರನ್ನು ದಮನಿಸಬೇಕಾದ ಸರ್ಕಾರಗಳು ಅವರೊಂದಿಗೇ ಕೈ ಮಿಲಾಯಿಸಿದಾಗ ಇಂತಹ ಅಸಹಾಯಕ ನಡೆಗಳು ತೆರೆದುಕೊಳ್ಳುತ್ತವೆ.

ಬಥಾನಿ ತೋಲ ಹತ್ಯಾಕಾಂಡದ ಆರೋಪಿಗಳನ್ನು ಅಪರಾಧಿಗಳೆಂದು ಸೆಷೆನ್ ಕೋರ್ಟ್ ತೀರ್ಪಿತ್ತಿತಾದರೂ ಹೈಕೋರ್ಟ್ ಸಾಕ್ಷಿಗಳ ಮಾತುಗಳನ್ನೇ ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಅಪರಾಧಿಗಳನ್ನು ಖುಲಾಸೆಗೊಳಿಸಿತು. 2002ರಲ್ಲಿ ಭೂಮಿಹಾರ್ ಸಂಘಟನೆಯನ್ನು ನಿಷೇಧಿಸಿದ ಬಿಹಾರ್ ಸರ್ಕಾರ ಬ್ರಹ್ಮೇಶ್ವರ ಸಿಂಗ್ ವಿರುದ್ಧ ಇದ್ದ 17 ಕೇಸುಗಳಲ್ಲಿ ಅವನನ್ನು 9 ವರ್ಷ ಜೈಲಿಗೆ ನೂಕಿತು. ತದನಂತರ ಜಾಮೀನು ಪಡೆದು ಹೊರಬಂದ ಅವನನ್ನು ಮುಸುಕುಧಾರಿಗಳು ಬೀದಿಯಲ್ಲಿ ಕೊಂದುಹಾಕಿದರು. 2012ರಲ್ಲಿ ನಡೆದ ಈ ಘಟನೆಗೆ ಲಾಲೂಪ್ರಸಾದ್ ಯಾದವ್, ಕಾಂಗ್ರೆಸ್ ಪಾರ್ಟಿ, ರಾಮ್ ವಿಲಾಸ್ ಪಾಸ್ವಾನ್ ಎಲ್ಲರೂ ಕಣ್ಣೀರಾಗಿದ್ದರು. ಈತನ ಅಂತ್ಯ ಸಂಸ್ಕಾರಕ್ಕೆ ಬಿ.ಜೆ.ಪಿ ಶಾಸಕ ಸಿ.ಪಿ.ಠಾಕೂರ್ ಹಾಗೂ ಬಿಹಾರದ ಮಂತ್ರಿಗಳು ಹಾಜರಿದ್ದರು.

ಇಂದಿಗೂ ಬಥಾನಿ ತೋಲ ಕೇಸು ಸುಪ್ರೀಂ ಕೋರ್ಟಿನಲ್ಲಿ ಧೂಳು ತಿನ್ನುತ್ತಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...